Yusuf (Joseph)
12. ಯೂಸುಫ್(ಯೂಸುಫ್)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
12:1
الر ۚ تِلْكَ آيَاتُ الْكِتَابِ الْمُبِينِ ۞
ಅಲಿಫ್ ಲಾಮ್ ರಾ. ಇವು ಸ್ಪಷ್ಟವಾಗಿರುವ ಗ್ರಂಥದ ವಚನಗಳು.
12:2
إِنَّا أَنْزَلْنَاهُ قُرْآنًا عَرَبِيًّا لَعَلَّكُمْ تَعْقِلُونَ ۞
ನೀವು ಅರ್ಥಯಿಸಬೇಕೆಂದು ನಾವು ಇದನ್ನು ಅರಬೀ ಭಾಷೆಯ ಕುರ್‌ಆನ್ ಆಗಿ ಇಳಿಸಿರುವೆವು.
12:3
نَحْنُ نَقُصُّ عَلَيْكَ أَحْسَنَ الْقَصَصِ بِمَا أَوْحَيْنَا إِلَيْكَ هَٰذَا الْقُرْآنَ وَإِنْ كُنْتَ مِنْ قَبْلِهِ لَمِنَ الْغَافِلِينَ ۞
(ದೂತರೇ,) ನಾವೇ ನಿಮಗೆ ದಿವ್ಯವಾಣಿಯ ಮೂಲಕ ಈ ಕುರ್‌ಆನ್‌ಅನ್ನು ಕಳಿಸಿದ್ದು, ನಾವೇ ಈ ಮೂಲಕ ನಿಮಗೆ ಅತ್ಯುತ್ತಮ ವೃತ್ತಾಂತವನ್ನು ಕೇಳಿಸುತ್ತಿರುವೆವು. ಈ ಹಿಂದೆ ನೀವು (ಈ ಕುರಿತು) ಅಜ್ಞರಾಗಿದ್ದಿರಿ.
12:4
إِذْ قَالَ يُوسُفُ لِأَبِيهِ يَا أَبَتِ إِنِّي رَأَيْتُ أَحَدَ عَشَرَ كَوْكَبًا وَالشَّمْسَ وَالْقَمَرَ رَأَيْتُهُمْ لِي سَاجِدِينَ ۞
ಯೂಸುಫ್, ತಮ್ಮ ತಂದೆಯೊಡನೆ , ‘‘ನನ್ನ ತಂದೆಯೇ, ನಾನು (ಕನಸಿನಲ್ಲಿ) ಹನ್ನೊಂದು ನಕ್ಷತ್ರಗಳನ್ನು, ಸೂರ್ಯನನ್ನು ಮತ್ತು ಚಂದ್ರನನ್ನು ನೋಡಿದೆ ಮತ್ತು ಅವುಗಳು ನನಗೆ ಸಾಷ್ಟಾಂಗವೆರಗುವುದನ್ನು ನಾನು ನೋಡಿದೆ’’ ಎಂದು ಹೇಳಿದರು.
12:5
قَالَ يَا بُنَيَّ لَا تَقْصُصْ رُؤْيَاكَ عَلَىٰ إِخْوَتِكَ فَيَكِيدُوا لَكَ كَيْدًا ۖ إِنَّ الشَّيْطَانَ لِلْإِنْسَانِ عَدُوٌّ مُبِينٌ ۞
ಅವರು (ತಂದೆ) ಹೇಳಿದರು; ನನ್ನ ಪುತ್ರನೇ, ನಿನ್ನ ಕನಸಿನ ವಿಚಾರವನ್ನು ನಿನ್ನ ಸಹೋದರರಿಗೆ ತಿಳಿಸಬೇಡ. ಅವರು ನಿನ್ನ ವಿರುದ್ಧ ಏನಾದರೂ ಸಂಚು ಹೂಡುವರು. ಖಂಡಿತವಾಗಿಯೂ ಶೈತಾನನು ಮಾನವನ ಪಾಲಿಗೆ ಸ್ಪಷ್ಟ ಶತ್ರುವಾಗಿದ್ದಾನೆ.
12:6
وَكَذَٰلِكَ يَجْتَبِيكَ رَبُّكَ وَيُعَلِّمُكَ مِنْ تَأْوِيلِ الْأَحَادِيثِ وَيُتِمُّ نِعْمَتَهُ عَلَيْكَ وَعَلَىٰ آلِ يَعْقُوبَ كَمَا أَتَمَّهَا عَلَىٰ أَبَوَيْكَ مِنْ قَبْلُ إِبْرَاهِيمَ وَإِسْحَاقَ ۚ إِنَّ رَبَّكَ عَلِيمٌ حَكِيمٌ ۞
ಈ ರೀತಿ ನಿನ್ನ ಒಡೆಯನು ನಿನ್ನನ್ನು ಆರಿಸಿಕೊಳ್ಳುವನು ಹಾಗೂ ನಿನಗೆ ಘಟನೆಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ಕಲಿಸುವನು ಮತ್ತು ಅವನು ಈ ಹಿಂದೆ ನಿನ್ನ ಪೂರ್ವಜರಾದ ಇಬ್ರಾಹೀಮ್ ಮತ್ತು ಇಸ್‌ಹಾಕ್‌ರ ಪಾಲಿಗೆ ಪೂರ್ತಿಗೊಳಿಸಿದಂತೆ ನಿನ್ನ ಪಾಲಿಗೆ ಹಾಗೂ ಯಅಕೂಬ್‌ರ ಸಂತತಿಯ ಪಾಲಿಗೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸುವನು. ನಿನ್ನ ಒಡೆಯನು ಖಂಡಿತ ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
12:7
۞ لَقَدْ كَانَ فِي يُوسُفَ وَإِخْوَتِهِ آيَاتٌ لِلسَّائِلِينَ ۞
ವಿಚಾರಿಸುವವರ ಪಾಲಿಗೆ, ಯೂಸುಫ್ ಮತ್ತು ಅವರ ಸಹೋದರರಲ್ಲಿ ಅನೇಕ ಪಾಠಗಳಿವೆ.
12:8
إِذْ قَالُوا لَيُوسُفُ وَأَخُوهُ أَحَبُّ إِلَىٰ أَبِينَا مِنَّا وَنَحْنُ عُصْبَةٌ إِنَّ أَبَانَا لَفِي ضَلَالٍ مُبِينٍ ۞
ಅವರು (ಸಹೋದರರು) ಹೇಳಿದರು; ಯೂಸುಫ್ ಮತ್ತು ಅವನ ಸಹೋದರನು ನಮ್ಮ ತಂದೆಗೆ ನಮಗಿಂತ ಹೆಚ್ಚು ಪ್ರಿಯರಾಗಿ ಬಿಟ್ಟಿದ್ದಾರೆ - ನಾವು ಒಂದು ಬಲಿಷ್ಠ ತಂಡವಾಗಿದ್ದೇವೆ. ನಮ್ಮ ತಂದೆ ಸ್ಪಷ್ಟವಾಗಿ ದಾರಿಗೆಟ್ಟಿದ್ದಾರೆ.
12:9
اقْتُلُوا يُوسُفَ أَوِ اطْرَحُوهُ أَرْضًا يَخْلُ لَكُمْ وَجْهُ أَبِيكُمْ وَتَكُونُوا مِنْ بَعْدِهِ قَوْمًا صَالِحِينَ ۞
ನಿಮ್ಮ ತಂದೆಯ ಗಮನವೆಲ್ಲಾ ನಿಮ್ಮೆಡೆಗೆ ಮೀಸಲಾಗಿಬಿಡಲು, ನೀವು ಯೂಸುಫ್‌ನನ್ನು ಕೊಂದು ಬಿಡಿರಿ ಅಥವಾ ಅವನನ್ನು ಯಾವುದಾದರೂ ನಾಡಿನಲ್ಲಿ ಎಸೆದು ಬನ್ನಿರಿ. ಆ ಬಳಿಕ ನೀವು ಸಜ್ಜನರಾಗಿರಬಹುದು.
12:10
قَالَ قَائِلٌ مِنْهُمْ لَا تَقْتُلُوا يُوسُفَ وَأَلْقُوهُ فِي غَيَابَتِ الْجُبِّ يَلْتَقِطْهُ بَعْضُ السَّيَّارَةِ إِنْ كُنْتُمْ فَاعِلِينَ ۞
ಅವರಲ್ಲೊಬ್ಬನು ಹೇಳಿದನು; ಯೂಸುಫ್‌ನನ್ನು ಕೊಲ್ಲಬೇಡಿ. ನಿಮಗೇನಾದರೂ ಮಾಡಲೇ ಬೇಕಿದ್ದರೆ, ಅವನನ್ನು ಯಾವುದಾದರೂ ನೀರಿಲ್ಲದ ಬಾವಿಯೊಳಕ್ಕೆ ಎಸೆದು ಬನ್ನಿರಿ. ಯಾರಾದರೂ ಪ್ರಯಾಣಿಕರು ಅವನನ್ನು ಎತ್ತಿಕೊಳ್ಳಬಹುದು.
12:11
قَالُوا يَا أَبَانَا مَا لَكَ لَا تَأْمَنَّا عَلَىٰ يُوسُفَ وَإِنَّا لَهُ لَنَاصِحُونَ ۞
ಅವರು ಹೇಳಿದರು; ನಮ್ಮ ತಂದೆಯೇ, ಯೂಸುಫ್‌ನ ವಿಷಯದಲ್ಲಿ ನೀವೇಕೆ ನಮ್ಮ ಮೇಲೆ ಭರವಸೆ ಇಡುವುದಿಲ್ಲ? ನಾವಂತು ಆತನ ಹಿತೈಷಿಗಳೇ ಆಗಿದ್ದೇವೆ.
12:12
أَرْسِلْهُ مَعَنَا غَدًا يَرْتَعْ وَيَلْعَبْ وَإِنَّا لَهُ لَحَافِظُونَ ۞
ನಾಳೆ ಅವನನ್ನು ನಮ್ಮ ಜೊತೆ ಕಳಿಸಿರಿ. ಏನಾದರೂ ತಿನ್ನಲಿ ಹಾಗೂ ಆಟೋಟ ನಡೆಸಲಿ. ನಾವು ಖಂಡಿತ ಅವನ ರಕ್ಷಕರಾಗಿರುವೆವು.
12:13
قَالَ إِنِّي لَيَحْزُنُنِي أَنْ تَذْهَبُوا بِهِ وَأَخَافُ أَنْ يَأْكُلَهُ الذِّئْبُ وَأَنْتُمْ عَنْهُ غَافِلُونَ ۞
ಅವರು (ತಂದೆ) ಹೇಳಿದರು; ನೀವು ಆತನನ್ನು ಕರೆದೊಯ್ಯುವ ಕುರಿತು ನನಗೆ ತುಂಬಾ ಬೇಸರವಿದೆ. ಏಕೆಂದರೆ, ನೀವು ಅವನ ಕುರಿತು ಅಜಾಗೃತರಾಗಿದ್ದಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನನಗೆ ಭಯವಾಗುತ್ತಿದೆ.
12:14
قَالُوا لَئِنْ أَكَلَهُ الذِّئْبُ وَنَحْنُ عُصْبَةٌ إِنَّا إِذًا لَخَاسِرُونَ ۞
ಅವರು (ಮಕ್ಕಳು) ಹೇಳಿದರು; ನಾವು ಒಂದು ಬಲಿಷ್ಠ ತಂಡವಾಗಿರುವಾಗ ಅವನನ್ನು ತೋಳವು ತಿಂದು ಬಿಡುವುದಾದರೆ, ನಾವು ಖಂಡಿತ ಎಲ್ಲವನ್ನೂ ಕಳೆದು ಕೊಂಡವರೆನಿಸುವೆವು.
12:15
فَلَمَّا ذَهَبُوا بِهِ وَأَجْمَعُوا أَنْ يَجْعَلُوهُ فِي غَيَابَتِ الْجُبِّ ۚ وَأَوْحَيْنَا إِلَيْهِ لَتُنَبِّئَنَّهُمْ بِأَمْرِهِمْ هَٰذَا وَهُمْ لَا يَشْعُرُونَ ۞
ಕೊನೆಗೆ ಅವರು ಆತನೊಂದಿಗೆ ಹೊರಟಾಗ, ಆತನನ್ನು ನೀರಿಲ್ಲದ ಬಾವಿಗೆ ಎಸೆಯಬೇಕೆಂದು ಅವರ ನಡುವೆ ಒಮ್ಮತವಾಗಿತ್ತು. ಆಗ ನಾವು ಅವರಿಗೆ (ಯೂಸುಫ್‌ರಿಗೆ) ಒಂದು ಸಂದೇಶವನ್ನು ಕಳಿಸಿದೆವು; ‘‘(ಒಂದು ದಿನ) ಅವರ ಈ ಕೃತ್ಯದ ಕುರಿತು ನೀವು ಅವರಿಗೆ ವಿವರಿಸುವಿರಿ - ಆಗ ಅವರಿಗೆ ಯಾವ ಅರಿವೂ ಇರದು.’’
12:16
وَجَاءُوا أَبَاهُمْ عِشَاءً يَبْكُونَ ۞
ಕತ್ತಲು ಕವಿದಾಗ ಅವರು (ಸಹೋದರರು) ಅಳುತ್ತಾ ತಮ್ಮ ತಂದೆಯ ಬಳಿಗೆ ಬಂದರು.
12:17
قَالُوا يَا أَبَانَا إِنَّا ذَهَبْنَا نَسْتَبِقُ وَتَرَكْنَا يُوسُفَ عِنْدَ مَتَاعِنَا فَأَكَلَهُ الذِّئْبُ ۖ وَمَا أَنْتَ بِمُؤْمِنٍ لَنَا وَلَوْ كُنَّا صَادِقِينَ ۞
ಅವರು ಹೇಳಿದರು; ಓ ನಮ್ಮ ತಂದೆಯೇ, ನಾವು ಓಟದ ಸ್ಪರ್ಧೆಯಲ್ಲಿದ್ದಾಗ, ಯೂಸುಫ್‌ನನ್ನು ನಮ್ಮ ಸೊತ್ತಿನ ಬಳಿ ಬಿಟ್ಟಿದ್ದೆವು. ಅಷ್ಟರಲ್ಲೇ ತೋಳವು ಆತನನ್ನು ತಿಂದು ಬಿಟ್ಟಿತು. ನಾವು ಎಷ್ಟೇ ಸತ್ಯವಂತರಾಗಿದ್ದರೂ ನೀವು ಮಾತ್ರ ನಮ್ಮನ್ನು ನಂಬುವವರಲ್ಲ.
12:18
وَجَاءُوا عَلَىٰ قَمِيصِهِ بِدَمٍ كَذِبٍ ۚ قَالَ بَلْ سَوَّلَتْ لَكُمْ أَنْفُسُكُمْ أَمْرًا ۖ فَصَبْرٌ جَمِيلٌ ۖ وَاللَّهُ الْمُسْتَعَانُ عَلَىٰ مَا تَصِفُونَ ۞
ಮತ್ತು ಅವರು (ಸಹೋದರರು) ರಕ್ತದ ನಕಲಿ ಕಲೆಗಳಿದ್ದ, ಅವರ (ಯೂಸುಫ್‌ರ) ಅಂಗಿಯನ್ನು ತಂದರು. ಆಗ ಅವರು (ತಂದೆ) ಹೇಳಿದರು; ನಿಜವಾಗಿ ನಿಮ್ಮ ಚಿತ್ತಗಳು ನಿಮಗಾಗಿ ಒಂದು ವಿಷಯವನ್ನು (ಕಟ್ಟು ಕಥೆಯನ್ನು) ರಚಿಸಿಕೊಟ್ಟಿವೆ. (ಆದ್ದರಿಂದ) ಸಹನೆಯೇ ಉತ್ತಮ. ನೀವು ಏನನ್ನು ಹೇಳುತ್ತಿರುವಿರೋ ಆ ವಿಷಯದಲ್ಲಿ (ನನಗೆ) ಅಲ್ಲಾಹನು ನೆರವಾಗಲಿ.
12:19
وَجَاءَتْ سَيَّارَةٌ فَأَرْسَلُوا وَارِدَهُمْ فَأَدْلَىٰ دَلْوَهُ ۖ قَالَ يَا بُشْرَىٰ هَٰذَا غُلَامٌ ۚ وَأَسَرُّوهُ بِضَاعَةً ۚ وَاللَّهُ عَلِيمٌ بِمَا يَعْمَلُونَ ۞
ಅತ್ತ, ಪ್ರಯಾಣಿಕರ ಒಂದು ತಂಡವು ಬಂದು, ತಮಗಾಗಿ ನೀರು ತುಂಬುವಾತನನ್ನು (ಯೂಸುಫ್‌ರನ್ನು ಎಸೆಯಲಾಗಿದ್ದ ಬಾವಿಯ ಬಳಿಗೆ) ಕಳಿಸಿದರು. ಅವನು ತನ್ನ ಕೊಡವನ್ನು ಇಳಿಸಿದನು (ಮತ್ತು) ‘‘ಇದೋ ಇಲ್ಲಿದೆ ಶುಭವಾರ್ತೆ. ಇಲ್ಲೊಬ್ಬ ಬಾಲಕನಿದ್ದಾನೆ’’ ಎಂದು ಘೋಷಿಸಿದನು. ತರುವಾಯ ಅವರು ಅವರನ್ನು (ಯೂಸುಫ್‌ರನ್ನು) ವ್ಯಾಪಾರದ ಸರಕೆಂದು ಪರಿಗಣಿಸಿ ಅಡಗಿಸಿಟ್ಟರು. ಅವರು ಮಾಡುತ್ತಿದ್ದ ಎಲ್ಲವನ್ನೂ ಅಲ್ಲಾಹನು ಅರಿತಿದ್ದನು.
12:20
وَشَرَوْهُ بِثَمَنٍ بَخْسٍ دَرَاهِمَ مَعْدُودَةٍ وَكَانُوا فِيهِ مِنَ الزَّاهِدِينَ ۞
ಅವರು ಕೆಲವೇ ದಿರ್‌ಹಮ್‌ಗಳ ಹೀನ ಬೆಲೆಗೆ ಅವರನ್ನು ಮಾರಿಬಿಟ್ಟರು. ಈ ವಿಷಯದಲ್ಲಿ ಅವರು ನಿರಾಸಕ್ತರಾಗಿದ್ದರು.
12:21
وَقَالَ الَّذِي اشْتَرَاهُ مِنْ مِصْرَ لِامْرَأَتِهِ أَكْرِمِي مَثْوَاهُ عَسَىٰ أَنْ يَنْفَعَنَا أَوْ نَتَّخِذَهُ وَلَدًا ۚ وَكَذَٰلِكَ مَكَّنَّا لِيُوسُفَ فِي الْأَرْضِ وَلِنُعَلِّمَهُ مِنْ تَأْوِيلِ الْأَحَادِيثِ ۚ وَاللَّهُ غَالِبٌ عَلَىٰ أَمْرِهِ وَلَٰكِنَّ أَكْثَرَ النَّاسِ لَا يَعْلَمُونَ ۞
ಅವರನ್ನು ಖರೀದಿಸಿದ್ದ ಈಜಿಪ್ತ್‌ನ ವ್ಯಕ್ತಿ ತನ್ನ ಪತ್ನಿಯೊಡನೆ ‘‘ಅವನಿಗೆ ಗೌರವದ ಸತ್ಕಾರ ನೀಡು. ನಮಗೆ ಅವನು ಲಾಭವನ್ನು ತರಬಹುದು ಅಥವಾ ನಾವು ಅವನನ್ನೇ ಪುತ್ರನಾಗಿಸಿಕೊಳ್ಳಬಹುದು’’ ಎಂದನು. ಈ ರೀತಿ ನಾವು ಯೂಸುಫ್‌ರಿಗೆ ಘಟನೆಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ಕಲಿಸಲಿಕ್ಕಾಗಿ ಅವರಿಗೆ ಭೂಮಿಯಲ್ಲೊಂದು ನೆಲೆಯನ್ನು ಒದಗಿಸಿದೆವು. ಅಲ್ಲಾಹನು ತನ್ನ ಎಲ್ಲ ವ್ಯವಹಾರಗಳ ಮೇಲೂ ಪೂರ್ಣ ಪ್ರಾಬಲ್ಯ ಹೊಂದಿರುತ್ತಾನೆ. ಆದರೆ ಮಾನವರಲ್ಲಿ ಹೆಚ್ಚಿನವರು ಬಲ್ಲವರಲ್ಲ.
12:22
وَلَمَّا بَلَغَ أَشُدَّهُ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ ۞
ಅವರು (ಯೂಸುಫ್) ತಮ್ಮ (ಪ್ರಬುದ್ಧ) ವಯಸ್ಸನ್ನು ತಲುಪಿದಾಗ, ನಾವು ಅವರಿಗೆ ಜಾಣ್ಮೆಯನ್ನು ಮತ್ತು ಜ್ಞಾನವನ್ನು ನೀಡಿದೆವು. ಇದೇ ರೀತಿ ನಾವು ಸಜ್ಜನರನ್ನು ಪುರಸ್ಕರಿಸುತ್ತೇವೆ.
12:23
وَرَاوَدَتْهُ الَّتِي هُوَ فِي بَيْتِهَا عَنْ نَفْسِهِ وَغَلَّقَتِ الْأَبْوَابَ وَقَالَتْ هَيْتَ لَكَ ۚ قَالَ مَعَاذَ اللَّهِ ۖ إِنَّهُ رَبِّي أَحْسَنَ مَثْوَايَ ۖ إِنَّهُ لَا يُفْلِحُ الظَّالِمُونَ ۞
ಅವರು ಯಾರ ಮನೆಯಲ್ಲಿದ್ದರೋ ಆಕೆಯು ಅವರನ್ನು ತನ್ನೆಡೆಗೆ ಸೆಳೆಯ ಬಯಸಿದಳು ಮತ್ತು ಬಾಗಿಲುಗಳನ್ನೆಲ್ಲಾ ಮುಚ್ಚಿ ಅವರೊಡನೆ ‘‘ಬಂದು ಬಿಡು’’ ಎಂದಳು. ಅವರು ಹೇಳಿದರು; ಅಲ್ಲಾಹನು ರಕ್ಷಿಸಲಿ. ಆ ನನ್ನ ಒಡೆಯನು ಖಂಡಿತವಾಗಿಯೂ ನನಗೆ ಗೌರವದ ನಿವಾಸವನ್ನು ಒದಗಿಸಿದ್ದಾನೆ. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ.
12:24
وَلَقَدْ هَمَّتْ بِهِ ۖ وَهَمَّ بِهَا لَوْلَا أَنْ رَأَىٰ بُرْهَانَ رَبِّهِ ۚ كَذَٰلِكَ لِنَصْرِفَ عَنْهُ السُّوءَ وَالْفَحْشَاءَ ۚ إِنَّهُ مِنْ عِبَادِنَا الْمُخْلَصِينَ ۞
ಆಕೆಯಂತು ಅವರನ್ನು ಬಯಸಿದ್ದಳು. ಅತ್ತ ಅವರು ತಮ್ಮ ಒಡೆಯನ ಒಂದು ಎಚ್ಚರಿಕೆಯನ್ನು ಕಾಣದಿರುತ್ತಿದ್ದರೆ ಅವರೂ ಆಕೆಯನ್ನು ಬಯಸುತ್ತಿದ್ದರು. ಈ ರೀತಿ ನಾವು ಅವರಿಂದ (ಯೂಸುಫ್‌ರಿಂದ) ಒಂದು ಪಾಪ ಹಾಗೂ ಅಶ್ಲೀಲ ಕೃತ್ಯವನ್ನು ನಿವಾರಿಸಿ ಬಿಟ್ಟೆವು. ನಿಜಕ್ಕೂ ಅವರು ನಮ್ಮ ಆಯ್ದ ದಾಸರಲ್ಲೊಬ್ಬರಾಗಿದ್ದರು.
12:25
وَاسْتَبَقَا الْبَابَ وَقَدَّتْ قَمِيصَهُ مِنْ دُبُرٍ وَأَلْفَيَا سَيِّدَهَا لَدَى الْبَابِ ۚ قَالَتْ مَا جَزَاءُ مَنْ أَرَادَ بِأَهْلِكَ سُوءًا إِلَّا أَنْ يُسْجَنَ أَوْ عَذَابٌ أَلِيمٌ ۞
ಅವರಿಬ್ಬರೂ ಬಾಗಿಲಿನೆಡೆಗೆ ಧಾವಿಸಿದರು - ಆಕೆ ಅವರ (ಯೂಸುಫ್‌ರ) ಅಂಗಿಯನ್ನು ಹಿಂದಿನಿಂದ (ಎಳೆದು) ಹರಿದಳು ಮತ್ತು ಅವರಿಬ್ಬರಿಗೂ ಬಾಗಿಲ ಬಳಿ ಆಕೆಯ ಗಂಡನು ಎದುರಾದನು. ಆಕೆ ಹೇಳಿದಳು; ನಿನ್ನ ಪತ್ನಿಗೆ ಕೆಡುಕನ್ನು ಮಾಡಬಯಸಿದವನಿಗೆ, ಸೆರೆವಾಸ ಅಥವಾ ಭಾರೀ ಕಠಿಣ ಶಿಕ್ಷೆಯಲ್ಲದೆ ಬೇರೆ ಯಾವ ಪ್ರತಿಫಲವನ್ನು ತಾನೇ ನೀಡಬಹುದು?
12:26
قَالَ هِيَ رَاوَدَتْنِي عَنْ نَفْسِي ۚ وَشَهِدَ شَاهِدٌ مِنْ أَهْلِهَا إِنْ كَانَ قَمِيصُهُ قُدَّ مِنْ قُبُلٍ فَصَدَقَتْ وَهُوَ مِنَ الْكَاذِبِينَ ۞
ಅವರು (ಯೂಸುಫ್) ಹೇಳಿದರು; ಆಕೆ ನನ್ನನ್ನು ಪುಸಲಾಯಿಸ ಬಯಸಿದ್ದಳು. ಮತ್ತು ಆಕೆಯ ಪರಿವಾರದ ಸಾಕ್ಷಿಯೊಬ್ಬನು ಹೀಗೆ ಸಾಕ್ಷಿ ನುಡಿದನು; ಒಂದು ವೇಳೆ ಆತನ ಅಂಗಿಯು ಮುಂಭಾಗದಲ್ಲಿ ಹರಿದಿದ್ದರೆ ಆಕೆ ಸತ್ಯ ಹೇಳುತ್ತಿದ್ದಾಳೆ ಹಾಗೂ ಅವನು ಸುಳ್ಳುಗಾರನಾಗಿದ್ದಾನೆ.
12:27
وَإِنْ كَانَ قَمِيصُهُ قُدَّ مِنْ دُبُرٍ فَكَذَبَتْ وَهُوَ مِنَ الصَّادِقِينَ ۞
ಇನ್ನು ಆತನ ಅಂಗಿಯು ಹಿಂಭಾಗದಲ್ಲಿ ಹರಿದಿದ್ದರೆ ಆಕೆ ಸುಳ್ಳು ಹೇಳುತ್ತಿದ್ದಾಳೆ ಮತ್ತು ಅವನು ಸತ್ಯವಂತನಾಗಿದ್ದಾನೆ.
12:28
فَلَمَّا رَأَىٰ قَمِيصَهُ قُدَّ مِنْ دُبُرٍ قَالَ إِنَّهُ مِنْ كَيْدِكُنَّ ۖ إِنَّ كَيْدَكُنَّ عَظِيمٌ ۞
ಅವರ (ಯೂಸುಫ್‌ರ) ಅಂಗಿಯು ಹಿಂಭಾಗದಲ್ಲಿ ಹರಿದಿರುವುದನ್ನು ಕಂಡಾಗ ಅವನು (ಆಕೆಯ ಪತಿ) ಹೇಳಿದನು; ‘‘ಖಂಡಿತವಾಗಿಯೂ ಇದು ನಿಮ್ಮ (ಮಹಿಳೆಯರ) ಸಂಚಾಗಿದೆ. ನಿಜಕ್ಕೂ ನಿಮ್ಮ (ಮಹಿಳೆಯರ) ಸಂಚು ತುಂಬಾ ಘೋರವಾಗಿರುತ್ತದೆ.’’
12:29
يُوسُفُ أَعْرِضْ عَنْ هَٰذَا ۚ وَاسْتَغْفِرِي لِذَنْبِكِ ۖ إِنَّكِ كُنْتِ مِنَ الْخَاطِئِينَ ۞
‘‘ಯೂಸುಫ್! ನೀವು ಈ ವಿಷಯವನ್ನು ಬಿಟ್ಟು ಬಿಡಿರಿ. ಮತ್ತು ನೀನು (ಪತ್ನಿ) ನಿನ್ನ ಪಾಪಕ್ಕಾಗಿ ಕ್ಷಮೆಯನ್ನು ಬೇಡು. ನೀನು ಖಂಡಿತ ತಪ್ಪಿತಸ್ಥಳು.’’
12:30
۞ وَقَالَ نِسْوَةٌ فِي الْمَدِينَةِ امْرَأَتُ الْعَزِيزِ تُرَاوِدُ فَتَاهَا عَنْ نَفْسِهِ ۖ قَدْ شَغَفَهَا حُبًّا ۖ إِنَّا لَنَرَاهَا فِي ضَلَالٍ مُبِينٍ ۞
ನಗರದಲ್ಲಿನ ಮಹಿಳೆಯರು ಹೇಳಿದರು; ಸರದಾರನ ಪತ್ನಿಯು ತನ್ನ ತರುಣ ದಾಸನನ್ನು ಪುಸಲಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಅವನ ಮೇಲಿನ ಪ್ರೀತಿಯಲ್ಲಿ ಅವಳು ಮಾರು ಹೋಗಿದ್ದಾಳೆ. ಆಕೆ ಸ್ಪಷ್ಟವಾಗಿ ದಾರಿಗೆಟ್ಟಿರುವುದನ್ನು ನಾವು ಕಾಣುತ್ತಿದ್ದೇವೆ.
12:31
فَلَمَّا سَمِعَتْ بِمَكْرِهِنَّ أَرْسَلَتْ إِلَيْهِنَّ وَأَعْتَدَتْ لَهُنَّ مُتَّكَأً وَآتَتْ كُلَّ وَاحِدَةٍ مِنْهُنَّ سِكِّينًا وَقَالَتِ اخْرُجْ عَلَيْهِنَّ ۖ فَلَمَّا رَأَيْنَهُ أَكْبَرْنَهُ وَقَطَّعْنَ أَيْدِيَهُنَّ وَقُلْنَ حَاشَ لِلَّهِ مَا هَٰذَا بَشَرًا إِنْ هَٰذَا إِلَّا مَلَكٌ كَرِيمٌ ۞
ಆಕೆಯು ಆ ಮಹಿಳೆಯರ ಈ ಪಿಸು ಮಾತುಗಳನ್ನು ಕೇಳಿದಾಗ ಅವರ ಬಳಿಗೆ ಆಮಂತ್ರಣ ಕಳುಹಿಸಿದಳು ಮತ್ತು ಅವರಿಗಾಗಿ, ಒರಗಿ ಕೂರುವ ಒಂದು ಸಭೆಯನ್ನು ಸಿದ್ಧಗೊಳಿಸಿದಳು. ಆಕೆ, ಅವರಲ್ಲಿ ಪ್ರತಿಯೊಬ್ಬರಿಗೂ (ಹಣ್ಣು ಮುರಿಯುವ) ಕತ್ತಿಯನ್ನು ಕೊಟ್ಟಳು ಮತ್ತು ಅವರೊಡನೆ (ಯೂಸುಫ್‌ರೊಡನೆ), ಆ ಮಹಿಳೆಯರ ಮುಂದೆ ಹಾದು ಹೋಗಲು ಹೇಳಿದಳು. ಆ ಮಹಿಳೆಯರು, ಅವರನ್ನು ಕಂಡಾಗ ದಂಗಾಗಿ ಬಿಟ್ಟರು ಹಾಗೂ (ಹಣ್ಣುಗಳ ಬದಲು) ತಮ್ಮ ಕೈಗಳನ್ನೇ ಮುರಿದುಕೊಂಡರು. ಅವರು ಹೇಳಿದರು; ಅಲ್ಲಾಹನು ಕಾಪಾಡಲಿ. ಅವನು (ಯೂಸುಫ್) ಮನುಷ್ಯನಂತು ಅಲ್ಲ. ಅವನು ಒಬ್ಬ ಗೌರವಾನ್ವಿತ ಮಲಕ್ ಆಗಿರಬೇಕು.
12:32
قَالَتْ فَذَٰلِكُنَّ الَّذِي لُمْتُنَّنِي فِيهِ ۖ وَلَقَدْ رَاوَدْتُهُ عَنْ نَفْسِهِ فَاسْتَعْصَمَ ۖ وَلَئِنْ لَمْ يَفْعَلْ مَا آمُرُهُ لَيُسْجَنَنَّ وَلَيَكُونًا مِنَ الصَّاغِرِينَ ۞
ಆಕೆ ಹೇಳಿದಳು; ನೀವು ನನ್ನನ್ನು ಮೂದಲಿಸುತ್ತಾ ಇದ್ದುದು ಆತನ ಕುರಿತೇ ಆಗಿತ್ತು. ನಾನು ಆತನನ್ನು ಪುಸಲಾಯಿಸಲು ಪ್ರಯತ್ನಿಸಿದಾಗ ಅವನು ತನ್ನನ್ನು ರಕ್ಷಿಸಿಕೊಂಡನು. ಇದೀಗ ಅವನು, ನನ್ನ ಆದೇಶದಂತೆ ನಡೆಯದಿದ್ದರೆ, ಅವನನ್ನು ಸೆರಮನೆಗೆ ಸೇರಿಸಲಾಗುವುದು ಮತ್ತು ಅವನು ತೀರಾ ಅಪಮಾನಿತನಾಗುವನು.
12:33
قَالَ رَبِّ السِّجْنُ أَحَبُّ إِلَيَّ مِمَّا يَدْعُونَنِي إِلَيْهِ ۖ وَإِلَّا تَصْرِفْ عَنِّي كَيْدَهُنَّ أَصْبُ إِلَيْهِنَّ وَأَكُنْ مِنَ الْجَاهِلِينَ ۞
ಅವರು (ಯೂಸುಫ್) ಹೇಳಿದರು; ನನ್ನೊಡೆಯಾ, ಅವರು ಯಾವುದರೆಡೆಗೆ ನನ್ನನ್ನು ಕರೆಯುತ್ತಿರುವರೋ ಅದಕ್ಕಿಂತ ಸೆರೆಮನೆಯೇ ನನಗೆ ಹೆಚ್ಚು ಪ್ರಿಯವಾಗಿದೆ. ಆ ಮಹಿಳೆಯರ ಜಾಲಗಳನ್ನು ನೀನು ನನ್ನಿಂದ ನಿವಾರಿಸದಿದ್ದರೆ, ನಾನು ಅವರೆಡೆಗೆ ಒಲಿದು ಬಿಡಬಹುದು ಮತ್ತು ನಾನು ಮೂಢರ ಸಾಲಿಗೆ ಸೇರಬಹುದು.
12:34
فَاسْتَجَابَ لَهُ رَبُّهُ فَصَرَفَ عَنْهُ كَيْدَهُنَّ ۚ إِنَّهُ هُوَ السَّمِيعُ الْعَلِيمُ ۞
ಅವರ ಒಡೆಯನು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು ಮತ್ತು ಆ ಮಹಿಳೆಯರ ಜಾಲಗಳನ್ನು ಅವರಿಂದ ನಿವಾರಿಸಿಬಿಟ್ಟನು. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.
12:35
ثُمَّ بَدَا لَهُمْ مِنْ بَعْدِ مَا رَأَوُا الْآيَاتِ لَيَسْجُنُنَّهُ حَتَّىٰ حِينٍ ۞
ಹೀಗೆ ದಿವ್ಯ ಸೂಚನೆಗಳನ್ನೆಲ್ಲಾ ಕಂಡ ಬಳಿಕವೂ ಅವರಿಗೆ (ರಾಜನ ಪರಿವಾರದವರಿಗೆ) ಅವರನ್ನು (ಯೂಸುಫ್‌ರನ್ನು) ಒಂದು ಅವಧಿಯ ತನಕ ಸೆರೆಮನೆಯಲ್ಲಿಡಬೇಕು ಎಂದು ತೋಚಿತು.
12:36
وَدَخَلَ مَعَهُ السِّجْنَ فَتَيَانِ ۖ قَالَ أَحَدُهُمَا إِنِّي أَرَانِي أَعْصِرُ خَمْرًا ۖ وَقَالَ الْآخَرُ إِنِّي أَرَانِي أَحْمِلُ فَوْقَ رَأْسِي خُبْزًا تَأْكُلُ الطَّيْرُ مِنْهُ ۖ نَبِّئْنَا بِتَأْوِيلِهِ ۖ إِنَّا نَرَاكَ مِنَ الْمُحْسِنِينَ ۞
ಅವರ ಜೊತೆ ಬೇರಿಬ್ಬರು ಯುವಕರೂ ಸೆರೆಮನೆಯನ್ನು ಪ್ರವೇಶಿಸಿದರು. ಅವರಲ್ಲೊಬ್ಬನು ಹೇಳಿದನು; ನಾನು (ಕನಸಿನಲ್ಲಿ) ಸಾರಾಯಿ ಹಿಂಡುತ್ತಿರುವುದನ್ನು ನೋಡಿದೆ. ಇನ್ನೊಬ್ಬನು ಹೇಳಿದನು; ನಾನು (ಕನಸಿನಲ್ಲಿ) ನನ್ನ ತಲೆಯ ಮೇಲೆ ರೊಟ್ಟಿಯನ್ನು ಹೊತ್ತಿರುವುದಾಗಿ ನೋಡಿದೆ. ಅದರಿಂದ ಪಕ್ಷಿಗಳು ತಿನ್ನುತ್ತಿದ್ದವು. ನಮಗೆ ಇದರ ವ್ಯಾಖ್ಯಾನವನ್ನು ತಿಳಿಸಿರಿ. ನಿಮ್ಮನ್ನು ನಾವು ಒಬ್ಬ ಸಜ್ಜನನಾಗಿ ಕಾಣುತ್ತಿದ್ದೇವೆ.
12:37
قَالَ لَا يَأْتِيكُمَا طَعَامٌ تُرْزَقَانِهِ إِلَّا نَبَّأْتُكُمَا بِتَأْوِيلِهِ قَبْلَ أَنْ يَأْتِيَكُمَا ۚ ذَٰلِكُمَا مِمَّا عَلَّمَنِي رَبِّي ۚ إِنِّي تَرَكْتُ مِلَّةَ قَوْمٍ لَا يُؤْمِنُونَ بِاللَّهِ وَهُمْ بِالْآخِرَةِ هُمْ كَافِرُونَ ۞
ಅವರು (ಯೂಸುಫ್) ಹೇಳಿದರು; ನಿಮಗೆ (ನಿತ್ಯ) ನೀಡಲಾಗುವ ಆಹಾರವು ನಿಮ್ಮ ಬಳಿಗೆ ಬರುವ ಮುನ್ನವೇ ನಾನು ನಿಮಗೆ ಅದರ ಅರ್ಥವನ್ನು ತಿಳಿಸುತ್ತೇನೆ. ಅದು ನನ್ನ ಒಡೆಯನು ನನಗೆ ಕಲಿಸಿಕೊಟ್ಟಿರುವ ವಿದ್ಯೆಯಾಗಿದೆ. ಅಲ್ಲಾಹನಲ್ಲಿ ನಂಬಿಕೆ ಇಡದವರ ಹಾಗೂ ಪರಲೋಕವನ್ನು ಧಿಕ್ಕರಿಸುವವರ ಧರ್ಮವನ್ನು ನಾನು ಖಂಡಿತ ತೊರೆದಿದ್ದೇನೆ.
12:38
وَاتَّبَعْتُ مِلَّةَ آبَائِي إِبْرَاهِيمَ وَإِسْحَاقَ وَيَعْقُوبَ ۚ مَا كَانَ لَنَا أَنْ نُشْرِكَ بِاللَّهِ مِنْ شَيْءٍ ۚ ذَٰلِكَ مِنْ فَضْلِ اللَّهِ عَلَيْنَا وَعَلَى النَّاسِ وَلَٰكِنَّ أَكْثَرَ النَّاسِ لَا يَشْكُرُونَ ۞
ನಾನು ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್ ಮತ್ತು ಯಅಕೂಬ್‌ರ ಧರ್ಮವನ್ನು ಅನುಸರಿಸಿದ್ದೇನೆ. ನಾವು ಯಾವುದನ್ನೂ ಅಲ್ಲಾಹನ ಜೊತೆ ಪಾಲುಗೊಳಿಸುವುದು ಸರಿಯಲ್ಲ. ಇದು (ಈ ಅರಿವು) ನಮ್ಮ ಮೇಲೆ ಹಾಗೂ ಎಲ್ಲ ಮಾನವರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.
12:39
يَا صَاحِبَيِ السِّجْنِ أَأَرْبَابٌ مُتَفَرِّقُونَ خَيْرٌ أَمِ اللَّهُ الْوَاحِدُ الْقَهَّارُ ۞
ಸೆರೆಮನೆಯ ನನ್ನ ಸಂಗಡಿಗರೇ, ಹಲವು ವಿಭಿನ್ನ ದೇವರುಗಳು ಉತ್ತಮರೋ ಅಥವಾ ಅನನ್ಯನೂ ಅತ್ಯಂತ ಪ್ರಬಲನೂ ಆಗಿರುವ ಅಲ್ಲಾಹನು ಉತ್ತಮನೋ?
12:40
مَا تَعْبُدُونَ مِنْ دُونِهِ إِلَّا أَسْمَاءً سَمَّيْتُمُوهَا أَنْتُمْ وَآبَاؤُكُمْ مَا أَنْزَلَ اللَّهُ بِهَا مِنْ سُلْطَانٍ ۚ إِنِ الْحُكْمُ إِلَّا لِلَّهِ ۚ أَمَرَ أَلَّا تَعْبُدُوا إِلَّا إِيَّاهُ ۚ ذَٰلِكَ الدِّينُ الْقَيِّمُ وَلَٰكِنَّ أَكْثَرَ النَّاسِ لَا يَعْلَمُونَ ۞
ಅವನ ಹೊರತು ನೀವು ಯಾರನ್ನು ಪೂಜಿಸುತ್ತಿರುವಿರೋ ಅವರೆಲ್ಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡ ಕೇವಲ ಕೆಲವು ಹೆಸರುಗಳು ಮಾತ್ರ. ಅವುಗಳ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಅಧಿಕಾರವು ಅಲ್ಲಾಹನಿಗೆ ಮಾತ್ರ ಸೇರಿದೆ. ತನ್ನ ಹೊರತು ಬೇರೆ ಯಾರನ್ನೂ ಪೂಜಿಸಬಾರದು ಎಂದು ಅವನು ಆದೇಶಿಸಿದ್ದಾನೆ. ಇದುವೇ ಸ್ಥಿರವಾದ ಧರ್ಮ - ಆದರೆ ಮಾನವರಲ್ಲಿ ಹೆಚ್ಚಿನವರು ಇದನ್ನು ಅರಿತಿಲ್ಲ.
12:41
يَا صَاحِبَيِ السِّجْنِ أَمَّا أَحَدُكُمَا فَيَسْقِي رَبَّهُ خَمْرًا ۖ وَأَمَّا الْآخَرُ فَيُصْلَبُ فَتَأْكُلُ الطَّيْرُ مِنْ رَأْسِهِ ۚ قُضِيَ الْأَمْرُ الَّذِي فِيهِ تَسْتَفْتِيَانِ ۞
ಸೆರೆಮನೆಯ ನನ್ನ ಸಂಗಡಿಗರೇ, ನಿಮ್ಮಲ್ಲಿ ಒಬ್ಬನು ತನ್ನ ಒಡೆಯನಿಗೆ ಮದ್ಯ ಕುಡಿಸುವನು. ಇನ್ನೊಬ್ಬನನ್ನು ಶಿಲುಬೆಗೆ ಏರಿಸಲಾಗುವುದು ಮತ್ತು ಹಕ್ಕಿಗಳು ಅವನ ತಲೆಯಿಂದ ತಿನ್ನುವವು. ಈ ರೀತಿ, ನೀವಿಬ್ಬರೂ ನನ್ನೊಡನೆ ವಿಚಾರಿಸಿದ್ದ ವಿಷಯದ ತೀರ್ಮಾನವಾಯಿತು.
12:42
وَقَالَ لِلَّذِي ظَنَّ أَنَّهُ نَاجٍ مِنْهُمَا اذْكُرْنِي عِنْدَ رَبِّكَ فَأَنْسَاهُ الشَّيْطَانُ ذِكْرَ رَبِّهِ فَلَبِثَ فِي السِّجْنِ بِضْعَ سِنِينَ ۞
ಅವರು (ಯೂಸುಫರು) ಅವರಿಬ್ಬರ ಪೈಕಿ ಯಾರು ಬಿಡುಗಡೆ ಪಡೆಯುವನೆಂದು ನಂಬಿದ್ದರೋ ಅವನೊಡನೆ, ನಿನ್ನ ಒಡೆಯನೊಡನೆ ನನ್ನ ವಿಷಯವನ್ನು ಪ್ರಸ್ತಾಪಿಸು ಎಂದರು. ಆದರೆ ಅವನು ತನ್ನ ಒಡೆಯನ ಬಳಿ ಇದನ್ನು ಪ್ರಸ್ತಾಪಿಸದಂತೆ ಶೈತಾನನು ಅವನಿಗೆ ಮರೆವು ಮೂಡಿಸಿದನು. ಹೀಗೆ ಅವರು (ಯೂಸುಫ್) ಕೆಲವು ವರ್ಷ ಸೆರೆಮನೆಯಲ್ಲಿದ್ದರು.
12:43
وَقَالَ الْمَلِكُ إِنِّي أَرَىٰ سَبْعَ بَقَرَاتٍ سِمَانٍ يَأْكُلُهُنَّ سَبْعٌ عِجَافٌ وَسَبْعَ سُنْبُلَاتٍ خُضْرٍ وَأُخَرَ يَابِسَاتٍ ۖ يَا أَيُّهَا الْمَلَأُ أَفْتُونِي فِي رُؤْيَايَ إِنْ كُنْتُمْ لِلرُّؤْيَا تَعْبُرُونَ ۞
(ಒಮ್ಮೆ) ರಾಜನು ಹೇಳಿದನು; ನಾನು (ಕನಸಿನಲ್ಲಿ) ತೆಳುವಾದ ಏಳು ದನಗಳು ದಷ್ಟಪುಷ್ಟವಾದ ಏಳು ದನಗಳನ್ನು ತಿನ್ನುವುದನ್ನು ನೋಡಿದೆ ಮತ್ತು ಹಸಿರಾಗಿದ್ದ ಏಳು ತೆನೆಗಳನ್ನೂ ಒಣಗಿದ್ದ ಇತರ ತೆನೆಗಳನ್ನೂ ನೋಡಿದೆ. ನನ್ನ ಆಸ್ಥಾನ ಪ್ರಮುಖರೇ, ನೀವು ಸ್ವಪ್ನಗಳ ಅರ್ಥ ಬಲ್ಲವರಾಗಿದ್ದರೆ, ಇದರ ಅರ್ಥವನ್ನು ನನಗೆ ತಿಳಿಸಿರಿ.
12:44
قَالُوا أَضْغَاثُ أَحْلَامٍ ۖ وَمَا نَحْنُ بِتَأْوِيلِ الْأَحْلَامِ بِعَالِمِينَ ۞
ಅವರು ಹೇಳಿದರು; ಇವು ಗೊಂದಲದ ಕನಸುಗಳು. ನಾವು ಗೊಂದಲದ ಕನಸುಗಳ ವ್ಯಾಖ್ಯಾನವನ್ನು ವಿವರಿಸಬಲ್ಲ ತಜ್ಞರೇನಲ್ಲ.
12:45
وَقَالَ الَّذِي نَجَا مِنْهُمَا وَادَّكَرَ بَعْدَ أُمَّةٍ أَنَا أُنَبِّئُكُمْ بِتَأْوِيلِهِ فَأَرْسِلُونِ ۞
ಆಗ (ಈ ಹಿಂದೆ ಸೆರೆಮನೆಯಲ್ಲಿದ್ದು) ಬಿಡುಗಡೆ ಪಡೆದು ಬಂದಿದ್ದವನಿಗೆ, ಬಹುಕಾಲದ ಬಳಿಕ ನೆನಪಾಯಿತು. ಅವನು ಹೇಳಿದನು; ಇದರ ಅರ್ಥವನ್ನು ನಾನು ನಿಮಗೆ ತಿಳಿಸುವೆನು. ನನ್ನನ್ನು ಕಳುಹಿಸಿರಿ.
12:46
يُوسُفُ أَيُّهَا الصِّدِّيقُ أَفْتِنَا فِي سَبْعِ بَقَرَاتٍ سِمَانٍ يَأْكُلُهُنَّ سَبْعٌ عِجَافٌ وَسَبْعِ سُنْبُلَاتٍ خُضْرٍ وَأُخَرَ يَابِسَاتٍ لَعَلِّي أَرْجِعُ إِلَى النَّاسِ لَعَلَّهُمْ يَعْلَمُونَ ۞
(ಅವನು ಯೂಸುಫ್‌ರ ಬಳಿಗೆ ಬಂದು ಹೇಳಿದನು;) ನನ್ನ ಸತ್ಯವಂತ ಮಿತ್ರರಾದ ಯೂಸುಫರೇ, ತೆಳುವಾದ ಏಳು ದನಗಳು ಏಳು ದಷ್ಟಪುಷ್ಟ ದನಗಳನ್ನು ತಿನ್ನುವ ಹಾಗೂ ಹಸಿರಾದ ಏಳು ತೆನೆಗಳು ಮತ್ತು ಒಣಗಿದ್ದ ಇತರ ತೆನೆಗಳ ಅರ್ಥವನ್ನು ನಮಗೆ ತಿಳಿಸಿರಿ - ನಾನು ಆಸ್ಥಾನಿಗರ ಬಳಿಗೆ ಮರಳಿ ಅವರು ತಿಳಿಯುವಂತಾಗಬಹುದು.
12:47
قَالَ تَزْرَعُونَ سَبْعَ سِنِينَ دَأَبًا فَمَا حَصَدْتُمْ فَذَرُوهُ فِي سُنْبُلِهِ إِلَّا قَلِيلًا مِمَّا تَأْكُلُونَ ۞
ಅವರು (ಯೂಸುಫ್) ಹೇಳಿದರು; ನೀವು ಸತತ ಏಳು ವರ್ಷ ವ್ಯವಸಾಯ ಮಾಡಿರಿ. ಆ ಬಳಿಕ ನೀವು ಬೆಳೆ ಕೊಯ್ಯುವಾಗ, ನಿಮಗೆ ತಿನ್ನಲು ಬೇಕಾಗುವ ಒಂದಿಷ್ಟರ ಹೊರತು, ಉಳಿದ ಫಲವನ್ನು ತೆನೆಯಲ್ಲೇ ಬಿಟ್ಟು ಬಿಡಿರಿ.
12:48
ثُمَّ يَأْتِي مِنْ بَعْدِ ذَٰلِكَ سَبْعٌ شِدَادٌ يَأْكُلْنَ مَا قَدَّمْتُمْ لَهُنَّ إِلَّا قَلِيلًا مِمَّا تُحْصِنُونَ ۞
ಮುಂದೆ, ಏಳು ಕಠಿಣ ವರ್ಷಗಳು ಬರಲಿವೆ. ನೀವು ಸುರಕ್ಷಿತವಾಗಿಟ್ಟ ಒಂದಿಷ್ಟರ ಹೊರತು, ನೀವು ಆ ಅವಧಿಗಾಗಿ ಉಳಿಸಿಟ್ಟಿದ್ದನ್ನೆಲ್ಲಾ ಅವು ತಿಂದು ಬಿಡುವವು.
12:49
ثُمَّ يَأْتِي مِنْ بَعْدِ ذَٰلِكَ عَامٌ فِيهِ يُغَاثُ النَّاسُ وَفِيهِ يَعْصِرُونَ ۞
ಆ ಬಳಿಕ ಮತ್ತೆ ಒಂದು ವರ್ಷ ಬರುವುದು. ಅದರಲ್ಲಿ ಜನರ ಮೇಲೆ ಧಾರಾಳ ಮಳೆ ಸುರಿಸಲಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು.
12:50
وَقَالَ الْمَلِكُ ائْتُونِي بِهِ ۖ فَلَمَّا جَاءَهُ الرَّسُولُ قَالَ ارْجِعْ إِلَىٰ رَبِّكَ فَاسْأَلْهُ مَا بَالُ النِّسْوَةِ اللَّاتِي قَطَّعْنَ أَيْدِيَهُنَّ ۚ إِنَّ رَبِّي بِكَيْدِهِنَّ عَلِيمٌ ۞
(ಈ ವ್ಯಾಖ್ಯಾನ ಕೇಳಿದ) ರಾಜನು, ಅವನನ್ನು ನನ್ನ ಬಳಿಗೆ ತನ್ನಿರಿ ಎಂದನು. (ರಾಜನ) ದೂತನು ಅವರ (ಯೂಸುಫ್‌ರ) ಬಳಿಗೆ ಬಂದಾಗ ಅವರು ಹೇಳಿದರು; ನಿನ್ನ ಒಡೆಯನ ಬಳಿಗೆ ಮರಳಿಹೋಗು ಮತ್ತು ತಮ್ಮ ಕೈಗಳನ್ನು ಕತ್ತರಿಸಿಕೊಂಡ ಮಹಿಳೆಯರ ಸಮಾಚಾರವೇನು? ಎಂದು ಅವನೊಡನೆ ಕೇಳು. ಖಂಡಿತವಾಗಿಯೂ ನನ್ನ ಒಡೆಯನು ಅವರ ಸಂಚುಗಳ ಕುರಿತು ಬಲ್ಲನು.
12:51
قَالَ مَا خَطْبُكُنَّ إِذْ رَاوَدْتُنَّ يُوسُفَ عَنْ نَفْسِهِ ۚ قُلْنَ حَاشَ لِلَّهِ مَا عَلِمْنَا عَلَيْهِ مِنْ سُوءٍ ۚ قَالَتِ امْرَأَتُ الْعَزِيزِ الْآنَ حَصْحَصَ الْحَقُّ أَنَا رَاوَدْتُهُ عَنْ نَفْسِهِ وَإِنَّهُ لَمِنَ الصَّادِقِينَ ۞
ಅವನು (ದೊರೆಯು, ಮಹಿಳೆಯರೊಡನೆ), ನೀವು ಯೂಸುಫ್‌ರನ್ನು ಪುಸಲಾಯಿಸಲು ಪ್ರಯತ್ನಿಸಿದಾಗ ನಿಮ್ಮ ಸ್ಥಿತಿ ಹೇಗಿತ್ತು? ಎಂದು ಕೇಳಿದನು. ಆ ಮಹಿಳೆಯರು, ‘‘ಅಲ್ಲಾಹನು ಕಾಪಾಡಲಿ. ನಾವಂತು ಅವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ’’ ಎಂದರು. ಆಗ ಸರದಾರನ ಪತ್ನಿ ಹೇಳಿದಳು; ‘‘ಈಗ ಸತ್ಯವು ಬಹಿರಂಗವಾಗಿಬಿಟ್ಟಿದೆ. ನಿಜವಾಗಿ ನಾನೇ ಅವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಅವನು ಖಂಡಿತ ಸತ್ಯವಂತನೇ ಆಗಿದ್ದಾನೆ.’’
12:52
ذَٰلِكَ لِيَعْلَمَ أَنِّي لَمْ أَخُنْهُ بِالْغَيْبِ وَأَنَّ اللَّهَ لَا يَهْدِي كَيْدَ الْخَائِنِينَ ۞
(ಯೂಸುಫ್ ಹೇಳಿದರು;) ‘‘ನಾನು ಆತನ (ಸರದಾರನ) ಅನುಪಸ್ಥಿತಿಯಲ್ಲೂ ಆತನನ್ನು ವಂಚಿಸಿಲ್ಲ ಮತ್ತು ಖಂಡಿತವಾಗಿಯೂ ಅಲ್ಲಾಹನು ವಂಚಕರ ಸಂಚುಗಳನ್ನು ಮುನ್ನಡೆಯಲು ಬಿಡುವುದಿಲ್ಲ ಎಂಬುದು ಆತನಿಗೆ ತಿಳಿಯಲು (ಇದೆಲ್ಲಾ ಸಂಭವಿಸಿದೆ).’’
12:53
۞ وَمَا أُبَرِّئُ نَفْسِي ۚ إِنَّ النَّفْسَ لَأَمَّارَةٌ بِالسُّوءِ إِلَّا مَا رَحِمَ رَبِّي ۚ إِنَّ رَبِّي غَفُورٌ رَحِيمٌ ۞
(ಯೂಸುಫ್ ಹೇಳಿದರು;) ನನ್ನ ಚಿತ್ತವು ಪಾವನವೆಂದು ನಾನೇನೂ ಹೇಳಿಕೊಳ್ಳುವುದಿಲ್ಲ. ಚಿತ್ತವು ಖಂಡಿತವಾಗಿಯೂ ಕೆಡುಕಿನ ಪ್ರೇರಣೆ ನೀಡುತ್ತದೆ - ನನ್ನ ಒಡೆಯನ ಕರುಣೆಗೆ ಪಾತ್ರರಾದವರ ಹೊರತು. ನನ್ನ ಒಡೆಯನು ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
12:54
وَقَالَ الْمَلِكُ ائْتُونِي بِهِ أَسْتَخْلِصْهُ لِنَفْسِي ۖ فَلَمَّا كَلَّمَهُ قَالَ إِنَّكَ الْيَوْمَ لَدَيْنَا مَكِينٌ أَمِينٌ ۞
ರಾಜನು ಹೇಳಿದನು; ಅವನನ್ನು ನನ್ನ ಬಳಿಗೆ ತನ್ನಿರಿ. ನಾನು ಆತನನ್ನು ನನಗಾಗಿಯೇ ಮೀಸಲಿಡುತ್ತೇನೆ. ಆತನು ಅವರೊಡನೆ ಮಾತನಾಡಿದ ಬಳಿಕ ಹೇಳಿದನು; ಖಂಡಿತವಾಗಿಯೂ ಇಂದು ನೀನು ನಮ್ಮ ಬಳಿ ಅತ್ಯಂತ ಗೌರವಾನ್ವಿತ ಹಾಗೂ ವಿಶ್ವಾಸಾರ್ಹ ವ್ಯಕ್ತಿಯಾಗಿರುವೆ.
12:55
قَالَ اجْعَلْنِي عَلَىٰ خَزَائِنِ الْأَرْضِ ۖ إِنِّي حَفِيظٌ عَلِيمٌ ۞
ಅವರು (ಯೂಸುಫ್) ಹೇಳಿದರು; ನನ್ನನ್ನು ನಾಡಿನ ಬೊಕ್ಕಸಗಳ ಅಧಿಕಾರಿಯಾಗಿ ಮಾಡು. ನಾನು ಖಂಡಿತ ರಕ್ಷಕನೂ ಬಲ್ಲವನೂ ಆಗಿರುವೆನು.
12:56
وَكَذَٰلِكَ مَكَّنَّا لِيُوسُفَ فِي الْأَرْضِ يَتَبَوَّأُ مِنْهَا حَيْثُ يَشَاءُ ۚ نُصِيبُ بِرَحْمَتِنَا مَنْ نَشَاءُ ۖ وَلَا نُضِيعُ أَجْرَ الْمُحْسِنِينَ ۞
ಈ ರೀತಿ ನಾವು ಯೂಸುಫ್‌ರಿಗೆ ಆ ನಾಡಿನಲ್ಲಿ ಅಧಿಕಾರವನ್ನು ನೀಡಿದೆವು. ಅದರಲ್ಲಿ ಅವರು ತಾವಿಚ್ಛಿಸಿದಲ್ಲಿ ಇರುತ್ತಿದ್ದರು. ನಾವು ನಮ್ಮ ಅನುಗ್ರಹವನ್ನು ನಾವಿಚ್ಛಿಸಿದವರಿಗೆ ತಲುಪಿಸುತ್ತೇವೆ ಮತ್ತು ನಾವು ಸತ್ಕರ್ಮವೆಸಗಿದವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
12:57
وَلَأَجْرُ الْآخِرَةِ خَيْرٌ لِلَّذِينَ آمَنُوا وَكَانُوا يَتَّقُونَ ۞
ವಿಶ್ವಾಸಿಗಳು ಮತ್ತು ಸತ್ಯನಿಷ್ಠರ ಪಾಲಿಗೆ ಪರಲೋಕದ ಪ್ರತಿಫಲವೇ ಉತ್ತಮವಾಗಿರುತ್ತದೆ.
12:58
وَجَاءَ إِخْوَةُ يُوسُفَ فَدَخَلُوا عَلَيْهِ فَعَرَفَهُمْ وَهُمْ لَهُ مُنْكِرُونَ ۞
ಯೂಸುಫ್‌ರ ಸಹೋದರರು ಬಂದರು ಮತ್ತು ಅವರು ಇರುವಲ್ಲಿಗೆ ಪ್ರವೇಶಿಸಿದರು. ಅವರು (ಯೂಸುಫರು), ಅವರನ್ನು ಗುರುತಿಸಿದರು. ಆದರೆ ಅವರು (ಸಹೋದರರು) ಮಾತ್ರ ಅವರನ್ನು ಗುರುತಿಸಲಿಲ್ಲ.
12:59
وَلَمَّا جَهَّزَهُمْ بِجَهَازِهِمْ قَالَ ائْتُونِي بِأَخٍ لَكُمْ مِنْ أَبِيكُمْ ۚ أَلَا تَرَوْنَ أَنِّي أُوفِي الْكَيْلَ وَأَنَا خَيْرُ الْمُنْزِلِينَ ۞
ಕೊನೆಗೆ ಅವರು (ಯೂಸುಫರು) ಅವರಿಗೆ (ಸಹೋದರರಿಗೆ) ಅವರ ಸರಕನ್ನು ಸಿದ್ಧಗೊಳಿಸಿಕೊಟ್ಟಾಗ ಹೇಳಿದರು; ನಿಮ್ಮ ತಂದೆಯಿಂದ ನಿಮಗಿರುವ (ಇನ್ನೊಬ್ಬ) ಸಹೋದರನನ್ನು ನನ್ನ ಬಳಿಗೆ ತನ್ನಿರಿ. ನಾನು ತೂಗುಪಾತ್ರೆಯನ್ನು ತುಂಬಿಕೊಡುತ್ತೇನೆ ಮತ್ತು ಅತ್ಯುತ್ತಮ ಸತ್ಕಾರ ನೀಡುವವನಾಗಿದ್ದೇನೆಂಬುದನ್ನು ನೀವು ನೋಡುತ್ತಿಲ್ಲವೇ?
12:60
فَإِنْ لَمْ تَأْتُونِي بِهِ فَلَا كَيْلَ لَكُمْ عِنْدِي وَلَا تَقْرَبُونِ ۞
ನೀವು ಆತನನ್ನು ನನ್ನ ಬಳಿಗೆ ತರದಿದ್ದರೆ ನಿಮಗೆ ನನ್ನ ಬಳಿ ಯಾವ ಪಾಲೂ ಸಿಗದು ಮತ್ತು ನೀವು ನನ್ನ ಹತ್ತಿರವೂ ಬರಬಾರದು.
12:61
قَالُوا سَنُرَاوِدُ عَنْهُ أَبَاهُ وَإِنَّا لَفَاعِلُونَ ۞
ಅವರು ಹೇಳಿದರು; ನಾವು ಅವನ ಕುರಿತು ಅವನ ತಂದೆಯನ್ನು ಒಲಿಸಲು ಪ್ರಯತ್ನಿಸುವೆವು ಮತ್ತು (ಅಷ್ಟನ್ನು) ನಾವು ಖಂಡಿತ ಮಾಡುವೆವು.
12:62
وَقَالَ لِفِتْيَانِهِ اجْعَلُوا بِضَاعَتَهُمْ فِي رِحَالِهِمْ لَعَلَّهُمْ يَعْرِفُونَهَا إِذَا انْقَلَبُوا إِلَىٰ أَهْلِهِمْ لَعَلَّهُمْ يَرْجِعُونَ ۞
ಅವರು (ಯೂಸುಫ್) ತಮ್ಮ ಯುವಕರೊಡನೆ ಹೇಳಿದರು; ಅವರ ಮೊತ್ತವನ್ನು ನೀವು (ಗುಟ್ಟಾಗಿ) ಅವರ ಸರಕಿನಲ್ಲೇ ಇಟ್ಟು ಬಿಡಿರಿ. ಅವರು ತಮ್ಮವರ ಬಳಿಗೆ ಮರಳಿದಾಗ ಅದನ್ನು ಗುರುತಿಸಲಿ - ಹಾಗೆ ಅವರು ಮರಳಿ ಬರಲೂಬಹುದು.
12:63
فَلَمَّا رَجَعُوا إِلَىٰ أَبِيهِمْ قَالُوا يَا أَبَانَا مُنِعَ مِنَّا الْكَيْلُ فَأَرْسِلْ مَعَنَا أَخَانَا نَكْتَلْ وَإِنَّا لَهُ لَحَافِظُونَ ۞
ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ನಮ್ಮ ತಂದೆಯೇ, ನಮ್ಮಿಂದ ಪಾಲನ್ನು ತಡೆದಿಡಲಾಗಿದೆ. ನೀವು ನಮ್ಮ ಸಹೋದರನನ್ನು ನಮ್ಮ ಜೊತೆ ಕಳಿಸಿರಿ. ನಾವು ಪಾಲನ್ನು ಪೂರ್ಣವಾಗಿ ತರುವೆವು ಮತ್ತು ಖಂಡಿತ ಅವನ ರಕ್ಷಕರಾಗಿರುವೆವು.
12:64
قَالَ هَلْ آمَنُكُمْ عَلَيْهِ إِلَّا كَمَا أَمِنْتُكُمْ عَلَىٰ أَخِيهِ مِنْ قَبْلُ ۖ فَاللَّهُ خَيْرٌ حَافِظًا ۖ وَهُوَ أَرْحَمُ الرَّاحِمِينَ ۞
ಅವರು (ತಂದೆ) ಹೇಳಿದರು; ಈ ಹಿಂದೆ ಅವನ ಸಹೋದರನ (ಯೂಸುಫ್‌ರ) ವಿಷಯದಲ್ಲಿ ನಾನು ನಿಮ್ಮನ್ನು ನಂಬಿದ್ದಂತೆ ಅವನ ವಿಷಯದಲ್ಲೂ ನಂಬಬೇಕೇ? ಅಲ್ಲಾಹನೇ ಅತ್ಯುತ್ತಮ ರಕ್ಷಕನಾಗಿದ್ದಾನೆ ಮತ್ತು ಅವನೇ ಅತ್ಯಧಿಕ ಕರುಣೆ ತೋರುವವನಾಗಿದ್ದಾನೆ.
12:65
وَلَمَّا فَتَحُوا مَتَاعَهُمْ وَجَدُوا بِضَاعَتَهُمْ رُدَّتْ إِلَيْهِمْ ۖ قَالُوا يَا أَبَانَا مَا نَبْغِي ۖ هَٰذِهِ بِضَاعَتُنَا رُدَّتْ إِلَيْنَا ۖ وَنَمِيرُ أَهْلَنَا وَنَحْفَظُ أَخَانَا وَنَزْدَادُ كَيْلَ بَعِيرٍ ۖ ذَٰلِكَ كَيْلٌ يَسِيرٌ ۞
ಅವರು ತಮ್ಮ ಸರಕನ್ನು ತೆರೆದಾಗ ಅದರಲ್ಲಿ ತಮ್ಮ ಮೊತ್ತವನ್ನು ತಮಗೆ ಹಿಂದಿರುಗಿಸಲಾಗಿರುವುದನ್ನು ಕಂಡರು. ಅವರು ಹೇಳಿದರು; ನಮ್ಮ ತಂದೆಯೇ, ನಾವು ಇನ್ನೇನನ್ನು ತಾನೇ ಅಪೇಕ್ಷಿಸಬಲ್ಲೆವು? ನಮಗೆ ಮರಳಿಸಲಾಗಿರುವ ನಮ್ಮ ಮೊತ್ತವು ಇದೋ, ಇಲ್ಲಿದೆ. ನಾವು ನಮ್ಮ ಮನೆಯವರಿಗಾಗಿ ಧಾನ್ಯವನ್ನು ತರುವೆವು. ನಮ್ಮ ಸಹೋದರರನ್ನು ರಕ್ಷಿಸುವೆವು ಮತ್ತು ಒಂದು ಒಂಟೆಯ ಹೊರೆಯಷ್ಟು ಹೆಚ್ಚಿನದನ್ನು ತರುವೆವು. ಅದು ಸುಲಭವಾಗಿ ಸಿಗುವ ಹೊರೆಯಾಗಿರುವುದು.
12:66
قَالَ لَنْ أُرْسِلَهُ مَعَكُمْ حَتَّىٰ تُؤْتُونِ مَوْثِقًا مِنَ اللَّهِ لَتَأْتُنَّنِي بِهِ إِلَّا أَنْ يُحَاطَ بِكُمْ ۖ فَلَمَّا آتَوْهُ مَوْثِقَهُمْ قَالَ اللَّهُ عَلَىٰ مَا نَقُولُ وَكِيلٌ ۞
ಅವರು (ತಂದೆ), ‘‘ನಿಮಗೆ ಸಂಪೂರ್ಣ ಮುತ್ತಿಗೆ ಬೀಳದಿದ್ದರೆ, ನೀವು ಅವನನ್ನು ನನ್ನ ಬಳಿಗೆ (ಮರಳಿ) ಕರೆದು ತರುವಿರೆಂದು ನೀವು ಅಲ್ಲಾಹನ ಹೆಸರಲ್ಲಿ ನನಗೆ ಪಕ್ವವಾದ ವಚನ ಕೊಡುವ ತನಕ ನಾನು ಆತನನ್ನು ನಿಮ್ಮ ಜೊತೆ ಕಳಿಸಲಾರೆ’’ ಎಂದರು. ಕೊನೆಗೆ ಅವರು, ಅವರಿಗೆ ಪಕ್ವ ವಚನವನ್ನು ಕೊಟ್ಟಾಗ ಅವರು (ತಂದೆ) ‘‘ನಾವು ಆಡಿರುವ ಮಾತುಗಳಿಗೆಲ್ಲಾ ಅಲ್ಲಾಹನೇ ಮೇಲ್ವಿಚಾರಕನಾಗಿದ್ದಾನೆ’’ ಎಂದರು.
12:67
وَقَالَ يَا بَنِيَّ لَا تَدْخُلُوا مِنْ بَابٍ وَاحِدٍ وَادْخُلُوا مِنْ أَبْوَابٍ مُتَفَرِّقَةٍ ۖ وَمَا أُغْنِي عَنْكُمْ مِنَ اللَّهِ مِنْ شَيْءٍ ۖ إِنِ الْحُكْمُ إِلَّا لِلَّهِ ۖ عَلَيْهِ تَوَكَّلْتُ ۖ وَعَلَيْهِ فَلْيَتَوَكَّلِ الْمُتَوَكِّلُونَ ۞
ಮತ್ತು ಅವರು ಹೇಳಿದರು; ‘‘ನನ್ನ ಪುತ್ರರೇ, ನೀವೆಲ್ಲಾ ಒಂದೇ ಬಾಗಿಲಿಂದ ಪ್ರವೇಶಿಸಬೇಡಿ. ಪ್ರತ್ಯೇಕ ಬಾಗಿಲುಗಳಿಂದ ಪ್ರವೇಶಿಸಿರಿ. ಯಾವುದೇ ವಿಷಯದಲ್ಲಿ ನಿಮ್ಮನ್ನು ಅಲ್ಲಾಹನಿಂದ ರಕ್ಷಿಸಲು ಮಾತ್ರ ನನಗೆ ಸಾಧ್ಯವಿಲ್ಲ. ಅಧಿಕಾರವೆಲ್ಲವೂ ಅಲ್ಲಾಹನಿಗೇ ಸೇರಿದೆ. ನಾನು ಅವನಲ್ಲೇ ಭರವಸೆ ಇಟ್ಟಿದ್ದೇನೆ ಮತ್ತು ಭರವಸೆ ಇಡುವವರೆಲ್ಲರೂ ಅವನಲ್ಲೇ ಭರವಸೆ ಇಡಬೇಕು.’’
12:68
وَلَمَّا دَخَلُوا مِنْ حَيْثُ أَمَرَهُمْ أَبُوهُمْ مَا كَانَ يُغْنِي عَنْهُمْ مِنَ اللَّهِ مِنْ شَيْءٍ إِلَّا حَاجَةً فِي نَفْسِ يَعْقُوبَ قَضَاهَا ۚ وَإِنَّهُ لَذُو عِلْمٍ لِمَا عَلَّمْنَاهُ وَلَٰكِنَّ أَكْثَرَ النَّاسِ لَا يَعْلَمُونَ ۞
ಅವರು ತಮ್ಮ ತಂದೆಯು ಆದೇಶಿಸಿದ ರೀತಿಯಲ್ಲೇ ಪ್ರವೇಶಿಸಿದರು. ಆದರೆ ಯಾವುದೇ ವಿಷಯದಲ್ಲಿ ಅವರನ್ನು ಅಲ್ಲಾಹನಿಂದ ರಕ್ಷಿಸಲು ಅವರಿಗೆ (ತಂದೆಗೆ) ಸಾಧ್ಯವಿರಲಿಲ್ಲ. ಯಅಕೂಬರು ತಮ್ಮ ಮನದಲ್ಲಿ ಹುಟ್ಟಿದ್ದ ಒಂದು ಅಪೇಕ್ಷೆಯನ್ನಷ್ಟೇ ಪೂರ್ತಿಗೊಳಿಸಿದ್ದರು. ಖಂಡಿವಾಗಿಯೂ ಅವರು ನಾವು ನೀಡಿದ ಜ್ಞಾನದಿಂದ ಜ್ಞಾನಿಯಾಗಿದ್ದರು. ಆದರೆ ಮಾನವರಲ್ಲಿ ಹೆಚ್ಚಿನವರು ಅರಿತಿರುವುದಿಲ್ಲ.
12:69
وَلَمَّا دَخَلُوا عَلَىٰ يُوسُفَ آوَىٰ إِلَيْهِ أَخَاهُ ۖ قَالَ إِنِّي أَنَا أَخُوكَ فَلَا تَبْتَئِسْ بِمَا كَانُوا يَعْمَلُونَ ۞
ಅವರು ಯೂಸುಫ್‌ರ ಬಳಿಗೆ ಪ್ರವೇಶಿಸಿದಾಗ, ಅವರು ತನ್ನ ಸಹೋದರನನ್ನು ತನ್ನೆಡೆಗೆ ಕರೆದುಕೊಂಡು ‘‘ಖಂಡಿತವಾಗಿಯೂ ನಾನೇ ನಿನ್ನ ಸಹೋದರ, ಅವರು ಮಾಡುತ್ತಿದ್ದ ಕೃತ್ಯಗಳ ಬಗ್ಗೆ ನೀನು ದುಃಖಿತನಾಗಬೇಡ’’ ಎಂದರು.
12:70
فَلَمَّا جَهَّزَهُمْ بِجَهَازِهِمْ جَعَلَ السِّقَايَةَ فِي رَحْلِ أَخِيهِ ثُمَّ أَذَّنَ مُؤَذِّنٌ أَيَّتُهَا الْعِيرُ إِنَّكُمْ لَسَارِقُونَ ۞
ತರುವಾಯ ಅವರು, ಅವರ (ಸಹೋದರರ) ಸರಕನ್ನು ಸಿದ್ಧಗೊಳಿಸಿದಾಗ ತಮ್ಮ ಸಹೋದರನ ಸರಕಿನಲ್ಲಿ ಒಂದು ಪಾನಪಾತ್ರೆಯನ್ನು ಇಟ್ಟುಬಿಟ್ಟರು. ಆ ಬಳಿಕ ಘೋಷಿಸುವ ಒಬ್ಬಾತನು, ಯಾತ್ರಾ ತಂಡದವರೇ, ನೀವು ಖಂಡಿತ ಕಳ್ಳರು ಎಂದು ಘೋಷಿಸಿದನು.
12:71
قَالُوا وَأَقْبَلُوا عَلَيْهِمْ مَاذَا تَفْقِدُونَ ۞
ಅವರು (ಸಹೋದರರು), ಅವರೆಡೆಗೆ ತಿರುಗಿ, ನೀವು ಏನನ್ನು ಕಳೆದುಕೊಂಡಿರುವಿರಿ? ಎಂದು ಕೇಳಿದರು.
12:72
قَالُوا نَفْقِدُ صُوَاعَ الْمَلِكِ وَلِمَنْ جَاءَ بِهِ حِمْلُ بَعِيرٍ وَأَنَا بِهِ زَعِيمٌ ۞
ಅವರು (ಯೂಸುಫ್), ‘‘ನಮ್ಮ ದೊರೆಯ ಪಾನಪಾತ್ರೆಯು ನಮ್ಮಿಂದ ಕಳೆದು ಹೋಗಿದೆ. ಅದನ್ನು ತಂದುಕೊಡುವಾತನಿಗೆ ಒಂದು ಒಂಟೆ ಹೊರುವಷ್ಟು ಉಡುಗೊರೆ ಸಿಗಲಿದೆ. ಅದಕ್ಕೆ ನಾನು ಹೊಣೆಗಾರನಾಗಿದ್ದೇನೆ’’ ಎಂದರು.
12:73
قَالُوا تَاللَّهِ لَقَدْ عَلِمْتُمْ مَا جِئْنَا لِنُفْسِدَ فِي الْأَرْضِ وَمَا كُنَّا سَارِقِينَ ۞
ಅವರು (ಸಹೋದರರು), ‘‘ಅಲ್ಲಾಹನಾಣೆ, ನಾವು ನಾಡಿನಲ್ಲಿ ಗೊಂದಲ ನಿರ್ಮಿಸುವುದಕ್ಕೆ ಬಂದವರಲ್ಲ ಮತ್ತು ನಾವು ಕಳ್ಳರಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ’’ ಎಂದರು.
12:74
قَالُوا فَمَا جَزَاؤُهُ إِنْ كُنْتُمْ كَاذِبِينَ ۞
ಅವರು (ಅಧಿಕಾರಿಗಳು) ಕೇಳಿದರು; ನೀವು ಸುಳ್ಳು ಹೇಳುತ್ತಿದ್ದರೆ, ಅದಕ್ಕೇನು ಶಿಕ್ಷೆ?
12:75
قَالُوا جَزَاؤُهُ مَنْ وُجِدَ فِي رَحْلِهِ فَهُوَ جَزَاؤُهُ ۚ كَذَٰلِكَ نَجْزِي الظَّالِمِينَ ۞
ಅವರು (ಸಹೋದರರು) ಹೇಳಿದರು; ಅದಕ್ಕೆ ಶಿಕ್ಷೆ ಇಷ್ಟೇ. ಯಾರ ಸರಕಿನಲ್ಲಿ ಅದು ಸಿಕ್ಕಿತೋ ಅವನೇ ಅದಕ್ಕೆ ಪರಿಹಾರವಾಗಲಿ. ನಾವು ಅಕ್ರಮಿಗಳನ್ನು ಇದೇ ರೀತಿ ಶಿಕ್ಷಿಸುತ್ತೇವೆ.
12:76
فَبَدَأَ بِأَوْعِيَتِهِمْ قَبْلَ وِعَاءِ أَخِيهِ ثُمَّ اسْتَخْرَجَهَا مِنْ وِعَاءِ أَخِيهِ ۚ كَذَٰلِكَ كِدْنَا لِيُوسُفَ ۖ مَا كَانَ لِيَأْخُذَ أَخَاهُ فِي دِينِ الْمَلِكِ إِلَّا أَنْ يَشَاءَ اللَّهُ ۚ نَرْفَعُ دَرَجَاتٍ مَنْ نَشَاءُ ۗ وَفَوْقَ كُلِّ ذِي عِلْمٍ عَلِيمٌ ۞
ಅವರು (ಯೂಸುಫರು) ತಮ್ಮ ಸಹೋದರನ ಸರಕಿಗೆ ಮುನ್ನ ಅವರ ಸರಕುಗಳ ಶೋಧ ಆರಂಭಿಸಿದರು. ಕೊನೆಗೆ ಅವರು ತಮ್ಮ ಸಹೋದರನ ಸರಕಿನಿಂದ ಅದನ್ನು (ಪಾನಪಾತ್ರೆಯನ್ನು) ಹೊರತೆಗೆದರು. ಈ ರೀತಿ ನಾವು ಯೂಸುಫ್‌ರಿಗೆ ಉಪಾಯ ಕಲಿಸಿದ್ದೆವು. ರಾಜನ ಧರ್ಮದ ಪ್ರಕಾರವಂತು ಅವರು ಆತನನ್ನು (ಸಹೋದರನನ್ನು) ಹಿಡಿಯಲು ಸಾಧ್ಯವಿರಲಿಲ್ಲ - ಅಲ್ಲಾಹನೇ ಇಚ್ಛಿಸಿದ್ದರ ಹೊರತು. ನಾವು, ನಾವಿಚ್ಛಿಸಿದವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಎಲ್ಲ ಜ್ಞಾನಿಗಳ ಮೇಲೊಬ್ಬ ಜ್ಞಾನಿ ಇರುತ್ತಾನೆ.
12:77
۞ قَالُوا إِنْ يَسْرِقْ فَقَدْ سَرَقَ أَخٌ لَهُ مِنْ قَبْلُ ۚ فَأَسَرَّهَا يُوسُفُ فِي نَفْسِهِ وَلَمْ يُبْدِهَا لَهُمْ ۚ قَالَ أَنْتُمْ شَرٌّ مَكَانًا ۖ وَاللَّهُ أَعْلَمُ بِمَا تَصِفُونَ ۞
ಅವರು ಹೇಳಿದರು; ಈಗ ಇವನು ಕದ್ದಿದ್ದರೆ, ಈ ಹಿಂದೆ ಇವನ ಸಹೋದರನೂ ಕದ್ದಿದ್ದನು. ಯೂಸುಫರು ತಮ್ಮ ಮನದಲ್ಲಿದ್ದ ಮಾತನ್ನು ಗುಟ್ಟಾಗಿಟ್ಟರು ಮತ್ತು ಅದನ್ನು ಅವರ ಮುಂದೆ ಪ್ರಕಟಿಸಲಿಲ್ಲ. ಅವರು (ಯೂಸುಫರು) ‘‘ನಿಮ್ಮ ಸ್ಥಿತಿಯು ತೀರಾ ಹೀನವಾಗಿದೆ. ನೀವು ಹೇಳುತ್ತಿರುವುದನ್ನು ಅಲ್ಲಾಹನು ಚೆನ್ನಾಗಿಬಲ್ಲನು’’ ಎಂದಷ್ಟೇ ಹೇಳಿದರು.
12:78
قَالُوا يَا أَيُّهَا الْعَزِيزُ إِنَّ لَهُ أَبًا شَيْخًا كَبِيرًا فَخُذْ أَحَدَنَا مَكَانَهُ ۖ إِنَّا نَرَاكَ مِنَ الْمُحْسِنِينَ ۞
ಅವರು (ಮಲ ಸಹೋದರರು), ‘‘ಸರದಾರನೇ, ಅವನಿಗೆ (ಸೆರೆ ಸಿಕ್ಕಿದ ಸಹೋದರನಿಗೆ) ತುಂಬಾ ವಯಸ್ಸಾದ ತಂದೆ ಇದ್ದಾರೆ. ನೀನು ಈತನ ಬದಲಿಗೆ ನಮ್ಮಲ್ಲಿ ಒಬ್ಬನನ್ನು ಇಟ್ಟುಕೋ. ನಿನ್ನನ್ನು ನಾವು ತುಂಬಾ ಉದಾರಿಯಾಗಿ ಕಾಣುತ್ತಿದ್ದೇವೆ’’ ಎಂದರು.
12:79
قَالَ مَعَاذَ اللَّهِ أَنْ نَأْخُذَ إِلَّا مَنْ وَجَدْنَا مَتَاعَنَا عِنْدَهُ إِنَّا إِذًا لَظَالِمُونَ ۞
ಅವರು (ಯೂಸುಫರು) ಹೇಳಿದರು; ‘‘ಅಲ್ಲಾಹನು ಕಾಪಾಡಲಿ. ಯಾರ ಬಳಿ ನಮಗೆ ನಮ್ಮ ಸೊತ್ತು ಸಿಕ್ಕಿದೆಯೋ ಅವನ ಹೊರತು ಬೇರೊಬ್ಬನನ್ನು ನಾವು ಹಿಡಿದಿಟ್ಟರೆ ನಾವು ಅಕ್ರಮಿಗಳಾಗುವೆವು.’’
12:80
فَلَمَّا اسْتَيْأَسُوا مِنْهُ خَلَصُوا نَجِيًّا ۖ قَالَ كَبِيرُهُمْ أَلَمْ تَعْلَمُوا أَنَّ أَبَاكُمْ قَدْ أَخَذَ عَلَيْكُمْ مَوْثِقًا مِنَ اللَّهِ وَمِنْ قَبْلُ مَا فَرَّطْتُمْ فِي يُوسُفَ ۖ فَلَنْ أَبْرَحَ الْأَرْضَ حَتَّىٰ يَأْذَنَ لِي أَبِي أَوْ يَحْكُمَ اللَّهُ لِي ۖ وَهُوَ خَيْرُ الْحَاكِمِينَ ۞
ಕೊನೆಗೆ ಅವರು ಆತನಿಂದ ನಿರಾಶರಾದಾಗ ಸಮಾಲೋಚಿಸಲೆಂದು ಸೇರಿ ಕುಳಿತರು. ಅವರಲ್ಲಿನ ಹಿರಿಯನು ಹೇಳಿದನು; ನಿಮ್ಮ ತಂದೆ ಅಲ್ಲಾಹನ ಹೆಸರಲ್ಲಿ ನಿಮ್ಮಿಂದ ಪಕ್ವವಾದ ವಚನವನ್ನು ಪಡೆದಿದ್ದರೆಂದು ಹಾಗೂ ಈ ಹಿಂದೆ ಯೂಸುಫನ ವಿಷಯದಲ್ಲಿ ನೀವು ಅದೆಂತಹ ತಪ್ಪು ಮಾಡಿದ್ದಿರೆಂದು ನಿಮಗೆ ತಿಳಿಯದೆ? ನಾನಂತು ನನ್ನ ತಂದೆ ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹನೇ ನನಗೆ ಒಂದು ಆದೇಶವನ್ನು ನೀಡುವ ತನಕ ಈ ನೆಲವನ್ನು ಬಿಟ್ಟು ಮಿಸುಕಾಡಲಾರೆ. ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.
12:81
ارْجِعُوا إِلَىٰ أَبِيكُمْ فَقُولُوا يَا أَبَانَا إِنَّ ابْنَكَ سَرَقَ وَمَا شَهِدْنَا إِلَّا بِمَا عَلِمْنَا وَمَا كُنَّا لِلْغَيْبِ حَافِظِينَ ۞
ನೀವು ನಿಮ್ಮ ತಂದೆಯ ಬಳಿಗೆ ಮರಳಿರಿ ಮತ್ತು ಹೀಗೆಂದು ಹೇಳಿರಿ; ನಮ್ಮ ತಂದೆಯೇ, ನಿಮ್ಮ ಪುತ್ರನು ನಿಜಕ್ಕೂ ಕಳ್ಳತನ ಮಾಡಿದ್ದನು. ನಾವಂತು ನಮಗೆ ತಿಳಿದಷ್ಟು ಮಾತ್ರ ಸಾಕ್ಷ್ಯ ಹೇಳಿದ್ದೆವು. ಇನ್ನು, ಗುಪ್ತ ವಿಚಾರಗಳ ಮೇಲ್ವಿಚಾರಕರು ನಾವಾಗಿರಲಿಲ್ಲ.
12:82
وَاسْأَلِ الْقَرْيَةَ الَّتِي كُنَّا فِيهَا وَالْعِيرَ الَّتِي أَقْبَلْنَا فِيهَا ۖ وَإِنَّا لَصَادِقُونَ ۞
ನಾವು ಇದ್ದ ಊರಲ್ಲಿ ಹಾಗೂ ನಾವು ಯಾವ ಯಾತ್ರಾ ತಂಡದ ಜೊತೆ ಬಂದಿದ್ದೆವೋ, ಅವರಲ್ಲಿ ಕೇಳಿ ನೋಡಿರಿ. ನಾವು ಖಂಡಿತ ಸತ್ಯವಂತರಾಗಿದ್ದೇವೆ.
12:83
قَالَ بَلْ سَوَّلَتْ لَكُمْ أَنْفُسُكُمْ أَمْرًا ۖ فَصَبْرٌ جَمِيلٌ ۖ عَسَى اللَّهُ أَنْ يَأْتِيَنِي بِهِمْ جَمِيعًا ۚ إِنَّهُ هُوَ الْعَلِيمُ الْحَكِيمُ ۞
ಅವರು (ತಂದೆ) ಹೇಳಿದರು; ನಿಜವಾಗಿ ನಿಮ್ಮ ಚಿತ್ತಗಳು ನಿಮಗೆ ಏನನ್ನೋ ರಚಿಸಿಕೊಟ್ಟಿವೆ. (ಆದ್ದರಿಂದ) ಸಹನೆಯೇ ಉತ್ತಮ. ಅಲ್ಲಾಹನು ಅವರೆಲ್ಲರನ್ನೂ ನನ್ನ ಬಳಿಗೆ ತರಬಹುದು. ಅವನು ಖಂಡಿತ ಎಲ್ಲವನ್ನೂ ಬಲ್ಲವನು ಹಾಗೂ ಜಾಣನಾಗಿದ್ದಾನೆ.
12:84
وَتَوَلَّىٰ عَنْهُمْ وَقَالَ يَا أَسَفَىٰ عَلَىٰ يُوسُفَ وَابْيَضَّتْ عَيْنَاهُ مِنَ الْحُزْنِ فَهُوَ كَظِيمٌ ۞
ಆ ಬಳಿಕ ಅವರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಅಯ್ಯೋ ಯೂಸುಫ್ ಎಂದರು. ದುಃಖದಿಂದ ಅವರ ಕಣ್ಣುಗಳು ಬಿಳಿಯಾಗಿಬಿಟ್ಟವು ಮತ್ತು ಅವರು ಎಲ್ಲವನ್ನೂ ಸಹಿಸಿಕೊಂಡಿದ್ದರು.
12:85
قَالُوا تَاللَّهِ تَفْتَأُ تَذْكُرُ يُوسُفَ حَتَّىٰ تَكُونَ حَرَضًا أَوْ تَكُونَ مِنَ الْهَالِكِينَ ۞
ಅವರು (ಸಹೋದರರು) ಹೇಳಿದರು; ಅಲ್ಲಾಹನಾಣೆ, ನೀವಂತು ಸಂಪೂರ್ಣ ರೋಗಪೀಡಿತರಾಗುವ ತನಕ ಅಥವಾ ಸಾಯುವ ತನಕವೂ ಸದಾ ಯೂಸುಫನನ್ನೇ ಸ್ಮರಿಸುತ್ತಾ ಇರುವಿರಿ.
12:86
قَالَ إِنَّمَا أَشْكُو بَثِّي وَحُزْنِي إِلَى اللَّهِ وَأَعْلَمُ مِنَ اللَّهِ مَا لَا تَعْلَمُونَ ۞
ಅವರು (ತಂದೆ) ಹೇಳಿದರು; ನಾನು ನನ್ನ ಸಂಕಟ ಹಾಗೂ ನನ್ನ ದುಃಖವನ್ನಷ್ಟೇ ಅಲ್ಲಾಹನಲ್ಲಿ ಹೇಳಿಕೊಳ್ಳುತ್ತಿದ್ದೇನೆ. ನಿಜವಾಗಿ ನಿಮಗೆ ತಿಳಿದಿಲ್ಲದ ವಿಷಯಗಳು ಅಲ್ಲಾಹನ ಮೂಲಕ ನನಗೆ ತಿಳಿದಿವೆ.
12:87
يَا بَنِيَّ اذْهَبُوا فَتَحَسَّسُوا مِنْ يُوسُفَ وَأَخِيهِ وَلَا تَيْأَسُوا مِنْ رَوْحِ اللَّهِ ۖ إِنَّهُ لَا يَيْأَسُ مِنْ رَوْحِ اللَّهِ إِلَّا الْقَوْمُ الْكَافِرُونَ ۞
ನನ್ನ ಪುತ್ರರೇ, ನೀವು ಹೋಗಿರಿ ಹಾಗೂ ಯೂಸುಫ್ ಮತ್ತು ಅವನ ಸಹೋದರನನ್ನು ಪತ್ತೆ ಹಚ್ಚಿರಿ. ಅಲ್ಲಾಹನ ಅನುಗ್ರಹದ ಕುರಿತು ನೀವೆಂದೂ ನಿರಾಶರಾಗಬೇಡಿ. ಖಂಡಿತವಾಗಿಯೂ ಧಿಕ್ಕಾರಿಗಳ ಹೊರತು ಬೇರಾರೂ ಅಲ್ಲಾಹನ ಅನುಗ್ರಹದ ಕುರಿತು ಖಂಡಿತ ನಿರಾಶರಾಗುವುದಿಲ್ಲ.
12:88
فَلَمَّا دَخَلُوا عَلَيْهِ قَالُوا يَا أَيُّهَا الْعَزِيزُ مَسَّنَا وَأَهْلَنَا الضُّرُّ وَجِئْنَا بِبِضَاعَةٍ مُزْجَاةٍ فَأَوْفِ لَنَا الْكَيْلَ وَتَصَدَّقْ عَلَيْنَا ۖ إِنَّ اللَّهَ يَجْزِي الْمُتَصَدِّقِينَ ۞
ಕೊನೆಗೆ ಆತನ (ಸರದಾರನ) ಬಳಿಗೆ ಹೋಗಿ ಅವರು (ಸಹೋದರರು) ಹೇಳಿದರು; ಸರದಾರರೇ, ನಮಗೆ ಹಾಗೂ ನಮ್ಮ ಪರಿವಾರಕ್ಕೆ ಸಂಕಟ ತಟ್ಟಿದೆ. ನಾವು ನಿಕೃಷ್ಟ ಬಂಡವಾಳದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇವೆ. ನೀವು ನಮಗೆ ಪೂರ್ಣ ಪಾಲನ್ನು ಕೊಡಿರಿ ಮತ್ತು ನಮಗೆ ದಾನವನ್ನು ನೀಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನಿಗಳಿಗೆ ಪ್ರತಿಫಲವನ್ನು ನೀಡುವನು.
12:89
قَالَ هَلْ عَلِمْتُمْ مَا فَعَلْتُمْ بِيُوسُفَ وَأَخِيهِ إِذْ أَنْتُمْ جَاهِلُونَ ۞
ಅವರು (ಯೂಸುಫ್) ಹೇಳಿದರು; ನೀವು ಮೂಢರಾಗಿದ್ದಾಗ, ಯೂಸುಫ್ ಮತ್ತು ಆತನ ಸಹೋದರನಿಗೆ ನೀವು ಏನು ಮಾಡಿದ್ದಿರಿ ಎಂಬುದು ನಿಮಗೆ ಗೊತ್ತೇ?
12:90
قَالُوا أَإِنَّكَ لَأَنْتَ يُوسُفُ ۖ قَالَ أَنَا يُوسُفُ وَهَٰذَا أَخِي ۖ قَدْ مَنَّ اللَّهُ عَلَيْنَا ۖ إِنَّهُ مَنْ يَتَّقِ وَيَصْبِرْ فَإِنَّ اللَّهَ لَا يُضِيعُ أَجْرَ الْمُحْسِنِينَ ۞
ಅವರು ಹೇಳಿದರು; ನಿಜಕ್ಕೂ ನೀನೇ ಯೂಸುಫನೇ? ಅವರು (ಯೂಸುಫ್) ಹೇಳಿದರು; ನಾನೇ ಯೂಸುಫ್ ಮತ್ತು ಇವನು ನನ್ನ ಸಹೋದರ. ಅಲ್ಲಾಹನು ನಮ್ಮ ಮೇಲೆ ಔದಾರ್ಯ ತೋರಿದ್ದಾನೆ. ಧರ್ಮನಿಷ್ಠರು ಮತ್ತು ಸಹನಶೀಲರಿಗೆ (ತಿಳಿದಿದೆ); ಅಲ್ಲಾಹನು ಸತ್ಕರ್ಮಿಗಳ ಪ್ರತಿಫಲವನ್ನು ಖಂಡಿತ ವ್ಯರ್ಥಗೊಳಿಸುವುದಿಲ್ಲ.
12:91
قَالُوا تَاللَّهِ لَقَدْ آثَرَكَ اللَّهُ عَلَيْنَا وَإِنْ كُنَّا لَخَاطِئِينَ ۞
ಅವರು (ಸಹೋದರರು) ಹೇಳಿದರು; ಅಲ್ಲಾಹನಾಣೆ! ಅಲ್ಲಾಹನು ನಮ್ಮೆದುರು ನಿನಗೆ ಮೇಲ್ಮೆಯನ್ನು ನೀಡಿದ್ದಾನೆ. ನಾವು ನಿಜಕ್ಕೂ ತಪ್ಪಿತಸ್ಥರಾಗಿದ್ದೆವು.
12:92
قَالَ لَا تَثْرِيبَ عَلَيْكُمُ الْيَوْمَ ۖ يَغْفِرُ اللَّهُ لَكُمْ ۖ وَهُوَ أَرْحَمُ الرَّاحِمِينَ ۞
ಅವರು (ಯೂಸುಫ್) ಹೇಳಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪವೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಎಲ್ಲರಿಗಿಂತ ಹೆಚ್ಚು ಕರುಣೆ ತೋರುವವನಾಗಿದ್ದಾನೆ.
12:93
اذْهَبُوا بِقَمِيصِي هَٰذَا فَأَلْقُوهُ عَلَىٰ وَجْهِ أَبِي يَأْتِ بَصِيرًا وَأْتُونِي بِأَهْلِكُمْ أَجْمَعِينَ ۞
ನೀವು ಈ ನನ್ನ ಅಂಗಿಯನ್ನು ಕೊಂಡುಹೋಗಿ ನನ್ನ ತಂದೆಯ ಮುಖದ ಮೇಲೆ ಹಾಕಿರಿ. ಅವರ ದೃಷ್ಟಿಯು ಮರಳುವುದು ಮತ್ತು ನೀವು ನಿಮ್ಮ ಕುಟುಂಬದ ಎಲ್ಲರ ಜೊತೆ ನನ್ನ ಬಳಿಗೆ ಬನ್ನಿರಿ.
12:94
وَلَمَّا فَصَلَتِ الْعِيرُ قَالَ أَبُوهُمْ إِنِّي لَأَجِدُ رِيحَ يُوسُفَ ۖ لَوْلَا أَنْ تُفَنِّدُونِ ۞
ಯಾತ್ರಾ ತಂಡವು ಹೊರಟುಬಿಟ್ಟಾಗ, ಅವರ ತಂದೆ ಹೇಳಿದರು; ನನಗೆ ಯೂಸುಫ್‌ರ ಸುವಾಸನೆ ಬರುತ್ತಿದೆ. ನೀವು ನನ್ನನ್ನು ಭ್ರಮೆಯಲ್ಲಿರುವವನೆಂದು ಭಾವಿಸಬೇಡಿ.
12:95
قَالُوا تَاللَّهِ إِنَّكَ لَفِي ضَلَالِكَ الْقَدِيمِ ۞
ಅವರು (ಅಲ್ಲಿದ್ದವರು) ಹೇಳಿದರು; ಅಲ್ಲಾಹನಾಣೆ, ನೀವು ಖಂಡಿತ ಅದೇ ನಿಮ್ಮ ಹಳೆಯ ಭ್ರಮೆಯಲ್ಲಿದ್ದೀರಿ.
12:96
فَلَمَّا أَنْ جَاءَ الْبَشِيرُ أَلْقَاهُ عَلَىٰ وَجْهِهِ فَارْتَدَّ بَصِيرًا ۖ قَالَ أَلَمْ أَقُلْ لَكُمْ إِنِّي أَعْلَمُ مِنَ اللَّهِ مَا لَا تَعْلَمُونَ ۞
ಆ ಬಳಿಕ, ಶುಭವಾರ್ತೆ ತರುವವನೊಬ್ಬನು ಬಂದು ಅದನ್ನು (ಯೂಸುಫರ ಅಂಗಿಯನ್ನು) ಅವರ (ಯಅಕೂಬರ) ಮುಖದ ಮೇಲೆ ಹಾಕಿದಾಗ ಅವರು (ಯಅಕೂಬರು) ಮತ್ತೆ ನೋಡಬಲ್ಲವರಾದರು. ಅವರು ಹೇಳಿದರು; ‘‘ನಿಮಗೆ ತಿಳಿದಿಲ್ಲದ ವಿಷಯಗಳು ಅಲ್ಲಾಹನ ಮೂಲಕ ನನಗೆ ತಿಳಿದಿರುತ್ತವೆಂದು ನಾನು ನಿಮ್ಮೊಡನೆ ಹೇಳಿರಲಿಲ್ಲವೇ?’’
12:97
قَالُوا يَا أَبَانَا اسْتَغْفِرْ لَنَا ذُنُوبَنَا إِنَّا كُنَّا خَاطِئِينَ ۞
ಅವರು ಹೇಳಿದರು; ನಮ್ಮ ತಂದೆಯೇ, ನಮ್ಮ ಪಾಪಗಳ ಕ್ಷಮೆಗಾಗಿ ಪ್ರಾರ್ಥಿಸಿರಿ. ನಾವು ಖಂಡಿತ ತಪ್ಪಿತಸ್ಥರಾಗಿದ್ದೆವು.
12:98
قَالَ سَوْفَ أَسْتَغْفِرُ لَكُمْ رَبِّي ۖ إِنَّهُ هُوَ الْغَفُورُ الرَّحِيمُ ۞
ಅವರು (ತಂದೆ) ಹೇಳಿದರು; ನಾನು ಬಹುಬೇಗನೇ ನಿಮ್ಮ ಕ್ಷಮೆಗಾಗಿ ನನ್ನ ಒಡೆಯನನ್ನು ಪ್ರಾರ್ಥಿಸುತ್ತೇನೆ. ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
12:99
فَلَمَّا دَخَلُوا عَلَىٰ يُوسُفَ آوَىٰ إِلَيْهِ أَبَوَيْهِ وَقَالَ ادْخُلُوا مِصْرَ إِنْ شَاءَ اللَّهُ آمِنِينَ ۞
ಅವರು ಯೂಸುಫರ ಬಳಿಗೆ ಹೋದಾಗ, ಅವರು (ಯೂಸುಫರು) ತಮ್ಮ ತಂದೆ ತಾಯಿಗೆ ತಮ್ಮ ಬಳಿ ಸ್ಥಳ ಕೊಟ್ಟರು ಮತ್ತು ಅಲ್ಲಾಹನು ಇಚ್ಛಿಸಿದರೆ ನೀವು ಮನಃಶಾಂತಿಯೊಂದಿಗೆ ಈಜಿಪ್ತ್ ಅನ್ನು ಪ್ರವೇಶಿಸಿರಿ, ಎಂದರು.
12:100
وَرَفَعَ أَبَوَيْهِ عَلَى الْعَرْشِ وَخَرُّوا لَهُ سُجَّدًا ۖ وَقَالَ يَا أَبَتِ هَٰذَا تَأْوِيلُ رُؤْيَايَ مِنْ قَبْلُ قَدْ جَعَلَهَا رَبِّي حَقًّا ۖ وَقَدْ أَحْسَنَ بِي إِذْ أَخْرَجَنِي مِنَ السِّجْنِ وَجَاءَ بِكُمْ مِنَ الْبَدْوِ مِنْ بَعْدِ أَنْ نَزَغَ الشَّيْطَانُ بَيْنِي وَبَيْنَ إِخْوَتِي ۚ إِنَّ رَبِّي لَطِيفٌ لِمَا يَشَاءُ ۚ إِنَّهُ هُوَ الْعَلِيمُ الْحَكِيمُ ۞
ಅವರು ತಮ್ಮ ತಂದೆ ತಾಯಿಯನ್ನು ರಾಜಪೀಠದಲ್ಲಿ ಎತ್ತರದಲ್ಲಿ ಕೂರಿಸಿದರು ಮತ್ತು ಅವರು,ಅವರ (ಯೂಸುಫ್‌ರ) ಮುಂದೆ ಸಾಷ್ಟ್ಟಾಂಗವೆರಗಿದರು, ಅವರು (ಯೂಸುಫ್) ಹೇಳಿದರು; ನನ್ನ ತಂದೆಯೇ, ಇದುವೇ ಈ ಹಿಂದಿನ ನನ್ನ ಕನಸಿನ ತಾತ್ಪರ್ಯ. ನನ್ನ ಒಡೆಯನು ಅದನ್ನು ಸತ್ಯವಾಗಿಸಿರುವನು. ಅವನು ನನ್ನನ್ನು ಸೆರೆಮನೆಯಿಂದ ಹೊರತೆಗೆದಾಗ ಮತ್ತು ಶೈತಾನನು ನನ್ನ ಹಾಗೂ ನನ್ನ ಸಹೋದರರ ನಡುವೆ ಜಗಳ ಬೆಳೆಸಿದ ಬಳಿಕ ನಿಮ್ಮನ್ನು ಗ್ರಾಮದಿಂದ (ಇಲ್ಲಿಗೆ) ತಂದಾಗ (ಆ ಮೂಲಕ) ಅವನು ನನ್ನ ಮೇಲೆ ಔದಾರ್ಯ ತೋರಿದ್ದನು. ನನ್ನ ಒಡೆಯನು ಖಂಡಿತ ತಾನಿಚ್ಛಿಸಿದವರ ಪಾಲಿಗೆ ಸೌಮ್ಯನಾಗಿರುತ್ತಾನೆ. ಅವನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.
12:101
۞ رَبِّ قَدْ آتَيْتَنِي مِنَ الْمُلْكِ وَعَلَّمْتَنِي مِنْ تَأْوِيلِ الْأَحَادِيثِ ۚ فَاطِرَ السَّمَاوَاتِ وَالْأَرْضِ أَنْتَ وَلِيِّي فِي الدُّنْيَا وَالْآخِرَةِ ۖ تَوَفَّنِي مُسْلِمًا وَأَلْحِقْنِي بِالصَّالِحِينَ ۞
ನನ್ನೊಡೆಯಾ, ನೀನು ನನಗೆ ಒಂದು ಸಾಮ್ರಾಜ್ಯವನ್ನು ನೀಡಿರುವೆ ಮತ್ತು ವಿಷಯ (ಸ್ವಪ್ನ) ಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ನನಗೆ ಕಲಿಸಿರುವೆ. (ನೀನೇ) ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿದವನು. ಈ ಲೋಕದಲ್ಲೂ ಪರಲೋಕದಲ್ಲೂ ನೀನೇ ನನ್ನ ಪೋಷಕನು. ನಿನಗೆ ಶರಣಾಗಿರುವ ಸ್ಥಿತಿಯಲ್ಲಿ (ಮುಸ್ಲಿಮನಾಗಿ) ನನ್ನನ್ನು ಸಾಯಿಸು ಮತ್ತು ಸಜ್ಜನರ ಸಾಲಿಗೆ ನನ್ನನ್ನು ಸೇರಿಸು.
12:102
ذَٰلِكَ مِنْ أَنْبَاءِ الْغَيْبِ نُوحِيهِ إِلَيْكَ ۖ وَمَا كُنْتَ لَدَيْهِمْ إِذْ أَجْمَعُوا أَمْرَهُمْ وَهُمْ يَمْكُرُونَ ۞
(ದೂತರೇ,) ಇವು ನಿಮ್ಮೆಡೆಗೆ ದಿವ್ಯವಾಣಿಯನ್ನು ಕಳಿಸಿ ನಾವು ನಿಮಗೆ ತಿಳಿಸುತ್ತಿರುವ ಗುಪ್ತ ವಿಷಯಗಳು. ಅವರು ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದಾಗ ಹಾಗೂ ಅವರು ಸಂಚುಗಳನ್ನು ಹೂಡುತ್ತಿದ್ದಾಗ ನೀವೇನೂ ಅವರ ಬಳಿ ಇರಲಿಲ್ಲ.
12:103
وَمَا أَكْثَرُ النَّاسِ وَلَوْ حَرَصْتَ بِمُؤْمِنِينَ ۞
ಹೆಚ್ಚಿನ ಮಾನವರು, ನೀವು ಎಷ್ಟೇ ಅಪೇಕ್ಷಿಸಿದರೂ ವಿಶ್ವಾಸಿಗಳಾಗುವುದಿಲ್ಲ.
12:104
وَمَا تَسْأَلُهُمْ عَلَيْهِ مِنْ أَجْرٍ ۚ إِنْ هُوَ إِلَّا ذِكْرٌ لِلْعَالَمِينَ ۞
ಇದಕ್ಕಾಗಿ ನೀವು ಅವರೊಡನೆ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಇದು, ಲೋಕದವರಿಗೆಲ್ಲಾ ಇರುವ ಉಪದೇಶವಾಗಿದೆ.
12:105
وَكَأَيِّنْ مِنْ آيَةٍ فِي السَّمَاوَاتِ وَالْأَرْضِ يَمُرُّونَ عَلَيْهَا وَهُمْ عَنْهَا مُعْرِضُونَ ۞
ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಅವರು ಅದೆಷ್ಟೋ ಪುರಾವೆಗಳನ್ನು ಕಾಣುತ್ತಾರೆ. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಡುತ್ತಾರೆ.
12:106
وَمَا يُؤْمِنُ أَكْثَرُهُمْ بِاللَّهِ إِلَّا وَهُمْ مُشْرِكُونَ ۞
ಅವರಲ್ಲಿ ಹೆಚ್ಚಿನವರು, ಪಾಲುದಾರರನ್ನು ನೇಮಿಸದೆ ಅಲ್ಲಾಹನನ್ನು ನಂಬುವುದಿಲ್ಲ.
12:107
أَفَأَمِنُوا أَنْ تَأْتِيَهُمْ غَاشِيَةٌ مِنْ عَذَابِ اللَّهِ أَوْ تَأْتِيَهُمُ السَّاعَةُ بَغْتَةً وَهُمْ لَا يَشْعُرُونَ ۞
ಅವರೇನು, ಅಲ್ಲಾಹನ ಸರ್ವವ್ಯಾಪಿ ಶಿಕ್ಷೆಯೊಂದು ತಮ್ಮ ಮೇಲೆ ಬಂದೆರಗುವ ಕುರಿತು , ಅಥವಾ ಅವರಿಗೆ ಅರಿವೇ ಇಲ್ಲದಿರುವಾಗ ಹಠಾತ್ತನೆ ಅಂತಿಮ ಘಳಿಗೆಯು ಬಂದು ಬಿಡುವ ಕುರಿತು ನಿಶ್ಚಿಂತರಾಗಿರುವರೇ ?
12:108
قُلْ هَٰذِهِ سَبِيلِي أَدْعُو إِلَى اللَّهِ ۚ عَلَىٰ بَصِيرَةٍ أَنَا وَمَنِ اتَّبَعَنِي ۖ وَسُبْحَانَ اللَّهِ وَمَا أَنَا مِنَ الْمُشْرِكِينَ ۞
ಹೇಳಿರಿ; ಇದುವೇ ನನ್ನ ಮಾರ್ಗ. ನಾನು ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ. ನಾನು ಹಾಗೂ ನನ್ನ ಅನುಯಾಯಿಗಳು ಸ್ಪಷ್ಟವಾದ ಸಾಕ್ಷಾಧಾರಗಳಿರುವ ದಾರಿಯಲ್ಲಿದ್ದೇವೆ. ಅಲ್ಲಾಹನು ಸಂಪೂರ್ಣ ನಿರ್ಮಲನು. ನಾನು (ಅಲ್ಲಾಹನಿಗೆ) ಪಾಲುದಾರರನ್ನು ಆರೋಪಿಸುವವನಲ್ಲ.
12:109
وَمَا أَرْسَلْنَا مِنْ قَبْلِكَ إِلَّا رِجَالًا نُوحِي إِلَيْهِمْ مِنْ أَهْلِ الْقُرَىٰ ۗ أَفَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ ۗ وَلَدَارُ الْآخِرَةِ خَيْرٌ لِلَّذِينَ اتَّقَوْا ۗ أَفَلَا تَعْقِلُونَ ۞
ನಿಮಗಿಂತ ಹಿಂದೆಯೂ ನಾವು ನಾಡಿನವರ ಪೈಕಿ ಪುರುಷರ ಕಡೆಗೇ ದಿವ್ಯ ಸಂದೇಶವನ್ನು ರವಾನಿಸಿದ್ದು ಅವರನ್ನೇ (ದೂತರಾಗಿ) ಕಳಿಸಿದ್ದೇವೆ. ಅವರೇನು ಭೂಮಿಯಲ್ಲಿ ಸಂಚರಿಸಿ, ಅವರಿಗಿಂತ ಹಿಂದಿನ ಜನರ ಗತಿ ಏನಾಯಿತೆಂಬುದನ್ನು ನೋಡುವುದಿಲ್ಲವೇ? ಧರ್ಮನಿಷ್ಠರ ಪಾಲಿಗೆ ಪರಲೋಕದ ನೆಲೆಯೇ ಉತ್ತಮವಾಗಿದೆ. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ?
12:110
حَتَّىٰ إِذَا اسْتَيْأَسَ الرُّسُلُ وَظَنُّوا أَنَّهُمْ قَدْ كُذِبُوا جَاءَهُمْ نَصْرُنَا فَنُجِّيَ مَنْ نَشَاءُ ۖ وَلَا يُرَدُّ بَأْسُنَا عَنِ الْقَوْمِ الْمُجْرِمِينَ ۞
ಕೊನೆಗೆ ದೂತರುಗಳು ನಿರಾಶರಾಗಿ, ತಮ್ಮೊಡನೆ ಸುಳ್ಳುಹೇಳಲಾಗಿತ್ತೇ ಎಂದು ಸಂಶಯಿಸಲಾರಂಭಿಸುವಾಗಲೇ ನಮ್ಮ ನೆರವು ಬಂದು ಬಿಟ್ಟಿತು ಮತ್ತು ನಾವಿಚ್ಛಿಸಿದವರನ್ನು ನಾವು ರಕ್ಷಿಸಿದೆವು. ಅಪರಾಧಿಗಳ ಮೇಲಿಂದ ನಮ್ಮ ಶಿಕ್ಷೆಯನ್ನು ನಿವಾರಿಸಲಾಗುವುದಿಲ್ಲ.
12:111
لَقَدْ كَانَ فِي قَصَصِهِمْ عِبْرَةٌ لِأُولِي الْأَلْبَابِ ۗ مَا كَانَ حَدِيثًا يُفْتَرَىٰ وَلَٰكِنْ تَصْدِيقَ الَّذِي بَيْنَ يَدَيْهِ وَتَفْصِيلَ كُلِّ شَيْءٍ وَهُدًى وَرَحْمَةً لِقَوْمٍ يُؤْمِنُونَ ۞
ಬುದ್ಧಿ ಉಳ್ಳವರಿಗೆ ಅವರ ಕಥೆಗಳಲ್ಲಿ ಖಂಡಿತ ಪಾಠವಿದೆ. ಇದು ಸ್ವರಚಿತ ಹೇಳಿಕೆಯೇನಲ್ಲ. ನಿಜವಾಗಿ ಇದು ಈಗಾಗಲೇ ಇರುವುದರ (ಗತಕಾಲದ ಗ್ರಂಥಗಳಲ್ಲಿರುವ ಸತ್ಯದ) ಸಮರ್ಥನೆಯಾಗಿದೆ, ಎಲ್ಲ ವಿಷಯಗಳ ವಿವರವಾಗಿದೆ ಮತ್ತು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.