Qaf (The letter qaaf)
50. ಕ್ವಾಫ್(ಕ್ವಾಫ್)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
50:1
ق ۚ وَالْقُرْآنِ الْمَجِيدِ ۞
ಕ್ವಾಫ್. ಗೌರವಾನ್ವಿತ ಕುರ್‌ಆನಿನ ಆಣೆ.
50:2
بَلْ عَجِبُوا أَنْ جَاءَهُمْ مُنْذِرٌ مِنْهُمْ فَقَالَ الْكَافِرُونَ هَٰذَا شَيْءٌ عَجِيبٌ ۞
ಅವರಲ್ಲೇ ಒಬ್ಬನು ಎಚ್ಚರಿಸುವವನಾಗಿ ಅವರ ಬಳಿಗೆ ಬಂದ ಕುರಿತು ಅವರು ಅಚ್ಚರಿ ಪಡುತ್ತಿದ್ದಾರೆ. ಆದ್ದರಿಂದಲೇ ಧಿಕ್ಕಾರಿಗಳು ಹೇಳುತ್ತಾರೆ; ‘‘ಇದು ತೀರಾ ವಿಚಿತ್ರವಾಗಿದೆ.’’
50:3
أَإِذَا مِتْنَا وَكُنَّا تُرَابًا ۖ ذَٰلِكَ رَجْعٌ بَعِيدٌ ۞
‘‘ನಾವು ಸತ್ತು ಮಣ್ಣಾದ ಬಳಿಕ (ಮತ್ತೆ ಜೀವ ಪಡೆಯುವುದೇ)? ಆ ಪುನರಾಗಮನ ತೀರಾ ದೂರದ ಸಾಧ್ಯತೆಯಾಗಿದೆ (ಅಸಾಧ್ಯವಾಗಿದೆ).’’
50:4
قَدْ عَلِمْنَا مَا تَنْقُصُ الْأَرْضُ مِنْهُمْ ۖ وَعِنْدَنَا كِتَابٌ حَفِيظٌ ۞
ಭೂಮಿಯು ಅವರಿಂದ (ಅವರ ಮೃತ ಶರೀರದಿಂದ) ಏನನ್ನು ಕಿತ್ತುಕೊಂಡಿದೆ ಎಂಬುದನ್ನು ನಾವು ಚೆನ್ನಾಗಿ ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನೂ ಸುರಕ್ಷಿತವಾಗಿ ದಾಖಲಿಸಿಡುವ ಗ್ರಂಥವಿದೆ.
50:5
بَلْ كَذَّبُوا بِالْحَقِّ لَمَّا جَاءَهُمْ فَهُمْ فِي أَمْرٍ مَرِيجٍ ۞
ನಿಜವಾಗಿ, ಸತ್ಯವು ತಮ್ಮ ಬಳಿಗೆ ಬಂದಾಗ ಅವರು ಅದನ್ನು ತಿರಸ್ಕರಿಸಿರುವರು ಮತ್ತು ಅವರು ಗೊಂದಲದಲ್ಲಿದ್ದಾರೆ.
50:6
أَفَلَمْ يَنْظُرُوا إِلَى السَّمَاءِ فَوْقَهُمْ كَيْفَ بَنَيْنَاهَا وَزَيَّنَّاهَا وَمَا لَهَا مِنْ فُرُوجٍ ۞
ಅವರೇನು, ತಮ್ಮ ಮೇಲಿರುವ ಆಕಾಶದೆಡೆಗೆ, ನಾವು ಅದನ್ನು ಹೇಗೆ ರಚಿಸಿದ್ದೇವೆ ಮತ್ತು ಹೇಗೆ ಅದನ್ನು ಅಲಂಕರಿಸಿದ್ದೇವೆಂದು ನೋಡುವುದಿಲ್ಲವೇ? ಅದರಲ್ಲಿ ಯಾವ ಕುಂದು ಕೊರತೆಯೂ ಇಲ್ಲ.
50:7
وَالْأَرْضَ مَدَدْنَاهَا وَأَلْقَيْنَا فِيهَا رَوَاسِيَ وَأَنْبَتْنَا فِيهَا مِنْ كُلِّ زَوْجٍ بَهِيجٍ ۞
ಭೂಮಿಯನ್ನು ನಾವು ಹರಡಿ ಬಿಟ್ಟಿರುವೆವು ಮತ್ತು ನಾವು ಅದರಲ್ಲಿ ಪರ್ವತಗಳನ್ನು ನೆಟ್ಟಿರುವೆವು. ಹಾಗೂ ಅದರಲ್ಲಿ ಎಲ್ಲ ಬಗೆಯ ಸುಂದರ ವಸ್ತುಗಳನ್ನು ಬೆಳೆಸಿರುವೆವು.
50:8
تَبْصِرَةً وَذِكْرَىٰ لِكُلِّ عَبْدٍ مُنِيبٍ ۞
ಇವು (ಅಲ್ಲಾಹನೆಡೆಗೆ) ಒಲಿಯುವ ಪ್ರತಿಯೊಬ್ಬ ದಾಸನ ಕಣ್ಣು ತೆರೆಸುವ ಮತ್ತು ಅವನಿಗೆ ಪಾಠವಾಗುವ ಸಾಧನಗಳಾಗಿವೆ.
50:9
وَنَزَّلْنَا مِنَ السَّمَاءِ مَاءً مُبَارَكًا فَأَنْبَتْنَا بِهِ جَنَّاتٍ وَحَبَّ الْحَصِيدِ ۞
ಅದೇ ರೀತಿ, ನಾವು ಆಕಾಶದಿಂದ ಸಮೃದ್ಧ ನೀರನ್ನು ಇಳಿಸಿರುವೆವು ಹಾಗೂ ಆ ಮೂಲಕ ತೋಟಗಳನ್ನು ಮತ್ತು ಹೊಲಗಳ ಧಾನ್ಯಗಳನ್ನು ಬೆಳೆಸಿರುವೆವು.
50:10
وَالنَّخْلَ بَاسِقَاتٍ لَهَا طَلْعٌ نَضِيدٌ ۞
ಮತ್ತು (ಅದರಿಂದಲೇ), ಸಂಪನ್ನ ಗೊಂಚಲುಗಳಿರುವ, ಎತ್ತರದ ಖರ್ಜೂರದ ಗಿಡಗಳನ್ನು ಬೆಳೆಸಿರುವೆವು.
50:11
رِزْقًا لِلْعِبَادِ ۖ وَأَحْيَيْنَا بِهِ بَلْدَةً مَيْتًا ۚ كَذَٰلِكَ الْخُرُوجُ ۞
ಇವೆಲ್ಲಾ (ನಮ್ಮ) ದಾಸರಿಗಾಗಿರುವ ಆಹಾರಗಳು. ಮತ್ತು ನಾವು, ನಿರ್ಜೀವವಾಗಿರುವ ನಾಡುಗಳಿಗೆ ಆ (ನೀರಿನ) ಮೂಲಕ, ಮರು ಜೀವ ನೀಡುವೆವು. ಹೀಗೆಯೇ ನಡೆಯಲಿದೆ ಸತ್ತವರನ್ನು (ಮತ್ತೆ ಜೀವಂತಗೊಳಿಸಿ) ಹೊರತೆಗೆಯುವ ಕ್ರಿಯೆ.
50:12
كَذَّبَتْ قَبْلَهُمْ قَوْمُ نُوحٍ وَأَصْحَابُ الرَّسِّ وَثَمُودُ ۞
ಅವರಿಗಿಂತ ಹಿಂದೆ ನೂಹರ ಜನಾಂಗದವರು, ರಸ್ಸ್‌ನ ನಿವಾಸಿಗಳು ಮತ್ತು ಸಮೂದ್ ಜನಾಂಗದವರು ತಿರಸ್ಕರಿಸಿದ್ದರು.
50:13
وَعَادٌ وَفِرْعَوْنُ وَإِخْوَانُ لُوطٍ ۞
ಹಾಗೆಯೇ, ಆದ್ ಜನಾಂಗದವರು, ಫಿರ್‌ಔನ್ ಹಾಗೂ ಲೂತ್‌ರ ಬಂಧುಗಳು,
50:14
وَأَصْحَابُ الْأَيْكَةِ وَقَوْمُ تُبَّعٍ ۚ كُلٌّ كَذَّبَ الرُّسُلَ فَحَقَّ وَعِيدِ ۞
ಐಕಃದವರು ಹಾಗೂ ತುಬ್ಬಅ್ ಜನಾಂಗದವರು - ಅವರೆಲ್ಲರೂ ದೇವದೂತರನ್ನು ತಿರಸ್ಕರಿಸಿದ್ದರು. ಅವರಿಗೆ ನೀಡಲಾಗಿದ್ದ (ಶಿಕ್ಷೆಯ) ಮುನ್ನೆಚ್ಚರಿಕೆಯು ಅನುಷ್ಠಾನವಾಗಿಬಿಟ್ಟಿತ್ತು.
50:15
أَفَعَيِينَا بِالْخَلْقِ الْأَوَّلِ ۚ بَلْ هُمْ فِي لَبْسٍ مِنْ خَلْقٍ جَدِيدٍ ۞
ನಾವೇನು ಪ್ರಥಮ ಬಾರಿಯ ಸೃಷ್ಟಿ ಕ್ರಿಯೆಯಿಂದ ದಣಿದು ಹೋಗಿದ್ದೇವೆಯೇ? ನಿಜವಾಗಿ, (ಮತ್ತೆ) ಹೊಸದಾಗಿ ಸೃಷ್ಟಿಯಾಗುವ ಕುರಿತು ಅವರು ಸಂಶಯದಲ್ಲಿದ್ದಾರೆ.
50:16
وَلَقَدْ خَلَقْنَا الْإِنْسَانَ وَنَعْلَمُ مَا تُوَسْوِسُ بِهِ نَفْسُهُ ۖ وَنَحْنُ أَقْرَبُ إِلَيْهِ مِنْ حَبْلِ الْوَرِيدِ ۞
ನಾವೇ ಮನುಷ್ಯನನ್ನು ಸೃಷ್ಟಿಸಿರುವೆವು ಮತ್ತು ಅವನ ಮನಸ್ಸಿನೊಳಗಿನ ಗೊಂದಲಗಳನ್ನೂ ನಾವು ಚೆನ್ನಾಗಿ ಬಲ್ಲೆವು. ನಿಜವಾಗಿ ನಾವು ಅವನ ಜೀವನಾಡಿಗಿಂತಲೂ ಅವನಿಗೆ ಹತ್ತಿರವಾಗಿರುವೆವು.
50:17
إِذْ يَتَلَقَّى الْمُتَلَقِّيَانِ عَنِ الْيَمِينِ وَعَنِ الشِّمَالِ قَعِيدٌ ۞
ಅವನ ಬಲಭಾಗದಲ್ಲೂ ಎಡ ಭಾಗದಲ್ಲೂ ಕುಳಿತಿರುವ ಇಬ್ಬರು ಬರಹಗಾರರು (ಅವನ ಎಲ್ಲ ಕರ್ಮಗಳನ್ನು) ಬರೆದಿಡುತ್ತಾರೆ.
50:18
مَا يَلْفِظُ مِنْ قَوْلٍ إِلَّا لَدَيْهِ رَقِيبٌ عَتِيدٌ ۞
ಅವನು ಆಡುವ ಯಾವ ಮಾತನ್ನೂ, ಸದಾ ಜಾಗೃತನಾಗಿರುವ ಕಾವಲುಗಾರನೊಬ್ಬನು ದಾಖಲಿಸದೆ ಇರುವುದಿಲ್ಲ.
50:19
وَجَاءَتْ سَكْرَةُ الْمَوْتِ بِالْحَقِّ ۖ ذَٰلِكَ مَا كُنْتَ مِنْهُ تَحِيدُ ۞
ಕೊನೆಗೆ, ನಿಜಕ್ಕೂ ಮರಣದ ಅಮಲು ಬಂದುಬಿಟ್ಟಾಗ (ಅವನೊಡನೆ), ‘‘ನೀನು ಅಂಜುತ್ತಿದ್ದುದು ಇದನ್ನೇ’’ ಎನ್ನಲಾಗುವುದು.
50:20
وَنُفِخَ فِي الصُّورِ ۚ ذَٰلِكَ يَوْمُ الْوَعِيدِ ۞
ಮತ್ತು ಕಹಳೆಯನ್ನು ಊದಲಾಗುವುದು. ಅದುವೇ, ಮುನ್ನೆಚ್ಚರಿಕೆ ನೀಡಲಾಗಿದ್ದ ದಿನ.
50:21
وَجَاءَتْ كُلُّ نَفْسٍ مَعَهَا سَائِقٌ وَشَهِيدٌ ۞
ಅಂದು ಪ್ರತಿಯೊಬ್ಬನೂ (ಅಲ್ಲಾಹನ ಮುಂದೆ) ಹಾಜರಾಗುವನು. ಅವನ ಜೊತೆ (ಅವನನ್ನು) ನಡೆಸುವ ಒಬ್ಬನಿರುವನು ಮತ್ತು ಒಬ್ಬ ಸಾಕ್ಷಿಯೂ ಇರುವನು.
50:22
لَقَدْ كُنْتَ فِي غَفْلَةٍ مِنْ هَٰذَا فَكَشَفْنَا عَنْكَ غِطَاءَكَ فَبَصَرُكَ الْيَوْمَ حَدِيدٌ ۞
(ಅವನೊಡನೆ ಹೇಳಲಾಗುವುದು;) ‘‘ನೀನು ಈ (ದಿನದ) ಕುರಿತು ನಿಶ್ಚಿಂತನಾಗಿದ್ದೆ. ಇದೀಗ ನಾವು ನಿನ್ನ ತೆರೆಯನ್ನು ನಿನ್ನಿಂದ ಸರಿಸಿ ಬಿಟ್ಟಿರುವೆವು. ಇದೋ, ಇಂದು ನಿನ್ನ ದೃಷ್ಟಿ ಬಹಳ ತೀಕ್ಷ್ಣವಾಗಿದೆ.’’
50:23
وَقَالَ قَرِينُهُ هَٰذَا مَا لَدَيَّ عَتِيدٌ ۞
ಅವನ ಜೊತೆಗಿರುವವನು ಹೇಳುವನು; ‘‘ಇದು ನನ್ನ ಬಳಿ ಸಿದ್ಧವಾಗಿರುವ, (ಅವನ ಕರ್ಮಗಳ) ದಾಖಲೆ.’’
50:24
أَلْقِيَا فِي جَهَنَّمَ كُلَّ كَفَّارٍ عَنِيدٍ ۞
(ಅಪ್ಪಣೆಯಾಗುವುದು;) ‘‘ನೀವಿಬ್ಬರು, ಪ್ರತಿಯೊಬ್ಬ ಕೃತಘ್ನ, ವಿದ್ರೋಹಿಯನ್ನು ನರಕದೊಳಕ್ಕೆ ಎಸೆದು ಬಿಡಿರಿ.’’
50:25
مَنَّاعٍ لِلْخَيْرِ مُعْتَدٍ مُرِيبٍ ۞
‘‘ಸತ್ಕಾರ್ಯಕ್ಕೆ ತಡೆಯೊಡ್ಡುತ್ತಿದ್ದ, ಅತಿರೇಕವೆಸಗುತ್ತಿದ್ದ (ಹಾಗೂ) ಸಂಶಯ ಬಿತ್ತುತ್ತಿದ್ದಾತನನ್ನು (ನರಕದೊಳಕ್ಕೆ ಎಸೆಯಿರಿ).’’
50:26
الَّذِي جَعَلَ مَعَ اللَّهِ إِلَٰهًا آخَرَ فَأَلْقِيَاهُ فِي الْعَذَابِ الشَّدِيدِ ۞
‘‘ಅವನು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿಕೊಂಡಿದ್ದನು. ಇದೀಗ ಅವನನ್ನು ಕಠಿಣ ಶಿಕ್ಷೆಯೊಳಕ್ಕೆ (ನರಕಕ್ಕೆ) ಎಸೆದುಬಿಡಿರಿ.’’
50:27
۞ قَالَ قَرِينُهُ رَبَّنَا مَا أَطْغَيْتُهُ وَلَٰكِنْ كَانَ فِي ضَلَالٍ بَعِيدٍ ۞
ಅವನ ಸಂಗಾತಿಯಾಗಿದ್ದವನು ಹೇಳುವನು; ‘‘ನಮ್ಮೊಡೆಯಾ, ಅವನನ್ನು ವಿದ್ರೋಹಿಯಾಗಿಸಿದವನು ನಾನಲ್ಲ. ಸ್ವತಃ ಅವನೇ ತಪ್ಪು ದಾರಿಯಲ್ಲಿ ಬಹುದೂರ ಹೊರಟು ಹೋಗಿದ್ದನು.’’
50:28
قَالَ لَا تَخْتَصِمُوا لَدَيَّ وَقَدْ قَدَّمْتُ إِلَيْكُمْ بِالْوَعِيدِ ۞
(ಅಲ್ಲಾಹನು) ಹೇಳುವನು; ನೀವು ನನ್ನ ಮುಂದೆ ಜಗಳಾಡಬೇಡಿ, ನಿಮಗೆ ನಾನು ಮುನ್ನೆಚ್ಚರಿಕೆಯನ್ನು ಹಿಂದೆಯೇ ಕಳಿಸಿಕೊಟ್ಟಿದ್ದೆ.
50:29
مَا يُبَدَّلُ الْقَوْلُ لَدَيَّ وَمَا أَنَا بِظَلَّامٍ لِلْعَبِيدِ ۞
ನನ್ನ ಬಳಿ ಮಾತು ಬದಲಾಗುವುದಿಲ್ಲ. ಮತ್ತು ನಾನು ದಾಸರ ಮೇಲೆ ಅಕ್ರಮವೆಸಗುವವನಲ್ಲ.
50:30
يَوْمَ نَقُولُ لِجَهَنَّمَ هَلِ امْتَلَأْتِ وَتَقُولُ هَلْ مِنْ مَزِيدٍ ۞
ಅಂದು ನಾವು ನರಕದೊಡನೆ, ‘‘ನೀನು ತುಂಬಿದೆಯಾ?’’ ಎಂದು ಕೇಳುವೆವು. ಅದು ‘‘ಇನ್ನಷ್ಟು ಇದೆಯೇ?’’ ಎನ್ನುವುದು.
50:31
وَأُزْلِفَتِ الْجَنَّةُ لِلْمُتَّقِينَ غَيْرَ بَعِيدٍ ۞
ಮತ್ತು ನಾವು ಸ್ವರ್ಗವನ್ನು ಧರ್ಮನಿಷ್ಠರಿಗೆ ನಿಕಟಗೊಳಿಸುವೆವು. ಅದೆಂದೂ (ಅವರಿಂದ) ದೂರವಾಗದು.
50:32
هَٰذَا مَا تُوعَدُونَ لِكُلِّ أَوَّابٍ حَفِيظٍ ۞
ಇದನ್ನೇ ವಾಗ್ದಾನ ಮಾಡಲಾಗಿತ್ತು; ನಿಮಗೆ ಹಾಗೂ (ಅಲ್ಲಾಹನತ್ತ) ಒಲವು ತೋರುತ್ತಲಿರುವ ಮತ್ತು ಸದಾ ಜಾಗೃತನಾಗಿರುವ ಪ್ರತಿಯೊಬ್ಬನಿಗೆ.
50:33
مَنْ خَشِيَ الرَّحْمَٰنَ بِالْغَيْبِ وَجَاءَ بِقَلْبٍ مُنِيبٍ ۞
(ಹಾಗೆಯೇ) ಕಣ್ಣಾರೆ ಕಾಣದೆಯೇ, ಆ ಅಪಾರ ದಯಾಮಯನ ಭಕ್ತನಾಗಿರುವವನಿಗೆ ಮತ್ತು ಪದೇ ಪದೇ (ಅಲ್ಲಾಹನತ್ತ) ಒಲಿಯುವ ಮನಸ್ಸಿನೊಂದಿಗೆ ಬಂದಿರುವವನಿಗೆ.
50:34
ادْخُلُوهَا بِسَلَامٍ ۖ ذَٰلِكَ يَوْمُ الْخُلُودِ ۞
(ಅವರೊಡನೆ ಹೇಳಲಾಗುವುದು;) ಶಾಂತಿಯೊಂದಿಗೆ ಇದನ್ನು ಪ್ರವೇಶಿಸಿರಿ. ಇದುವೇ, ಶಾಶ್ವತ ದಿನ.
50:35
لَهُمْ مَا يَشَاءُونَ فِيهَا وَلَدَيْنَا مَزِيدٌ ۞
ಅಲ್ಲಿ ಅವರಿಗೆ ಅವರು ಬಯಸಿದ್ದೆಲ್ಲವೂ ಸಿಗಲಿದೆ, ಮಾತ್ರವಲ್ಲ, ನಮ್ಮ ಬಳಿ ಮತ್ತಷ್ಟಿದೆ.
50:36
وَكَمْ أَهْلَكْنَا قَبْلَهُمْ مِنْ قَرْنٍ هُمْ أَشَدُّ مِنْهُمْ بَطْشًا فَنَقَّبُوا فِي الْبِلَادِ هَلْ مِنْ مَحِيصٍ ۞
ಅವರಿಗಿಂತ (ಮಕ್ಕಃದವರಿಗಿಂತ) ಹಿಂದೆ ನಾವು ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿರುವೆವು. ಅವರು ಇವರಿಗಿಂತ ತುಂಬಾ ಬಲಿಷ್ಠರಾಗಿದ್ದರು. ಆದರೆ, ಕೊನೆಗೆ ‘‘ಪಲಾಯನಕ್ಕೆ ದಾರಿಯುಂಟೇ?’’ ಎನ್ನುತ್ತಾ ಅವರು ನಾಡು ನಾಡು ಅಲೆಯ ತೊಡಗಿದರು.
50:37
إِنَّ فِي ذَٰلِكَ لَذِكْرَىٰ لِمَنْ كَانَ لَهُ قَلْبٌ أَوْ أَلْقَى السَّمْعَ وَهُوَ شَهِيدٌ ۞
ಇದರಲ್ಲಿ ಖಂಡಿತ ಪಾಠವಿದೆ, ಮನಸ್ಸುಳ್ಳವರಿಗೆ ಅಥವಾ ಕಿವಿಗೊಟ್ಟು ಕೇಳುವವರು ಮತ್ತು ನೋಡುವವರಿಗೆ.
50:38
وَلَقَدْ خَلَقْنَا السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ وَمَا مَسَّنَا مِنْ لُغُوبٍ ۞
ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಆರು ದಿನಗಳಲ್ಲಿ ಸೃಷ್ಟಿಸಿರುವೆವು ಮತ್ತು ನಮ್ಮನ್ನು ಯಾವ ದಣಿವೂ ಬಾಧಿಸಲಿಲ್ಲ.
50:39
فَاصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ الشَّمْسِ وَقَبْلَ الْغُرُوبِ ۞
ಅವರಾಡುವ ಮಾತುಗಳ ಕುರಿತು ನೀವು ಸಹನಶೀಲರಾಗಿರಿ. ಮತ್ತು ಸೂರ್ಯೋದಯಕ್ಕೆ ಮುನ್ನವೂ ಸೂರ್ಯಾಸ್ತಮಾನಕ್ಕೆ ಮುನ್ನವೂ ನಿಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರ್ಯವನ್ನು ಜಪಿಸಿರಿ.
50:40
وَمِنَ اللَّيْلِ فَسَبِّحْهُ وَأَدْبَارَ السُّجُودِ ۞
ಮತ್ತು ರಾತ್ರಿಯ ವೇಳೆಯಲ್ಲೂ ಸಾಷ್ಟಾಂಗವೆರಗಿದ ಬಳಿಕವೂ ಅವನ ಪಾವಿತ್ರ್ಯವನ್ನು ಜಪಿಸಿರಿ.
50:41
وَاسْتَمِعْ يَوْمَ يُنَادِ الْمُنَادِ مِنْ مَكَانٍ قَرِيبٍ ۞
ಕೇಳಿರಿ, ಕೂಗುವವನು ಹತ್ತಿರದಿಂದಲೇ ಕೂಗುವ ಒಂದು ದಿನ (ಬರಲಿದೆ).
50:42
يَوْمَ يَسْمَعُونَ الصَّيْحَةَ بِالْحَقِّ ۚ ذَٰلِكَ يَوْمُ الْخُرُوجِ ۞
ಅಂದು ಅವರು ನಿಜಕ್ಕೂ ಒಂದು ಆರ್ಭಟವನ್ನು ಕೇಳುವರು. ಅದುವೇ, (ಗೋರಿಗಳಿಂದ) ಹೊರಡುವ ದಿನವಾಗಿರುವುದು.
50:43
إِنَّا نَحْنُ نُحْيِي وَنُمِيتُ وَإِلَيْنَا الْمَصِيرُ ۞
ಖಂಡಿತ ನಾವೇ ಜೀವನವನ್ನು ನೀಡುತ್ತೇವೆ ಮತ್ತು ನಾವೇ ಸಾಯಿಸುತ್ತೇವೆ ಮತ್ತು ನಮ್ಮೆಡೆಗೇ (ಎಲ್ಲರೂ) ಮರಳಬೇಕಾಗಿದೆ.
50:44
يَوْمَ تَشَقَّقُ الْأَرْضُ عَنْهُمْ سِرَاعًا ۚ ذَٰلِكَ حَشْرٌ عَلَيْنَا يَسِيرٌ ۞
ಅವರ ಮೇಲಿಂದ ಭೂಮಿಯು ಬಿರಿದು ಬಿಡುವ ದಿನ ಅವರು (ಅದರೊಳಗಿಂದ) ಧಾವಿಸುವರು. ಈ ಜಮಾವಣೆಯು ನಮ್ಮ ಮಟ್ಟಿಗೆ ಸುಲಭವಾಗಿದೆ.
50:45
نَحْنُ أَعْلَمُ بِمَا يَقُولُونَ ۖ وَمَا أَنْتَ عَلَيْهِمْ بِجَبَّارٍ ۖ فَذَكِّرْ بِالْقُرْآنِ مَنْ يَخَافُ وَعِيدِ ۞
ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ನೀವು ಅವರನ್ನು ಬಲವಂತ ಪಡಿಸುವವರಲ್ಲ. ನನ್ನ ಮುನ್ನೆಚ್ಚರಿಕೆಯನ್ನು ಅಂಜುವವರಿಗೆ ನೀವು ಕುರ್‌ಆನಿನ ಮೂಲಕ ಉಪದೇಶಿಸಿರಿ.