Al-Jinn (The jinn)
72. ಅಲ್ ಜಿನ್ನ್(ಅಲ್ ಜಿನ್ನ್)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
72:1
قُلْ أُوحِيَ إِلَيَّ أَنَّهُ اسْتَمَعَ نَفَرٌ مِنَ الْجِنِّ فَقَالُوا إِنَّا سَمِعْنَا قُرْآنًا عَجَبًا ۞
(ದೂತರೇ,) ಹೇಳಿರಿ; ನನ್ನ ಬಳಿಗೆ ದಿವ್ಯ ಸಂದೇಶವು ಬಂದಿದೆ. (ಅದರ ಪ್ರಕಾರ,) ಜಿನ್ನ್‌ಗಳ ಒಂದು ತಂಡವು ಇದನ್ನು (ಈ ಕುರ್‌ಆನನ್ನು) ಕೇಳಿ, ಹೀಗೆಂದಿತು; ‘‘ನಾವು ಒಂದು ವಿಶಿಷ್ಟ ಕುರ್‌ಆನನ್ನು ಕೇಳಿರುವೆವು.’’
72:2
يَهْدِي إِلَى الرُّشْدِ فَآمَنَّا بِهِ ۖ وَلَنْ نُشْرِكَ بِرَبِّنَا أَحَدًا ۞
‘‘ಅದು ಸನ್ಮಾರ್ಗವನ್ನು ತೋರಿಸುತ್ತದೆ. ನಾವು ಅದರಲ್ಲಿ ನಂಬಿಕೆ ಇಟ್ಟಿರುವೆವು. ನಾವಿನ್ನು ನಮ್ಮ ಒಡೆಯನ ಜೊತೆ ಯಾರನ್ನೂ ಪಾಲುದಾರರಾಗಿಸಲಾರೆವು.’’
72:3
وَأَنَّهُ تَعَالَىٰ جَدُّ رَبِّنَا مَا اتَّخَذَ صَاحِبَةً وَلَا وَلَدًا ۞
‘‘ನಮ್ಮ ಒಡೆಯನ ಸ್ಥಾನ ತುಂಬಾ ಉನ್ನತವಾದುದು. ಅವನು ಯಾರನ್ನೂ ತನ್ನ ಪತ್ನಿ ಅಥವಾ ಪುತ್ರನಾಗಿಸಿ ಕೊಂಡಿಲ್ಲ.’’
72:4
وَأَنَّهُ كَانَ يَقُولُ سَفِيهُنَا عَلَى اللَّهِ شَطَطًا ۞
‘‘ನಮ್ಮಲ್ಲಿನ ಕೆಲವು ಮೂರ್ಖರು ಅಲ್ಲಾಹನ ಕುರಿತು ಸುಳ್ಳುಗಳನ್ನು ಸೃಷ್ಟಿಸಿ ಹೇಳುತ್ತಾರೆ.’’
72:5
وَأَنَّا ظَنَنَّا أَنْ لَنْ تَقُولَ الْإِنْسُ وَالْجِنُّ عَلَى اللَّهِ كَذِبًا ۞
‘‘ಜಿನ್ನ್‌ಗಳು ಮತ್ತು ಮಾನವರು ಅಲ್ಲಾಹನ ಕುರಿತು ಸುಳ್ಳು ಹೇಳುವುದಿಲ್ಲ ಎಂದು ನಾವು ನಂಬಿದ್ದೆವು.
72:6
وَأَنَّهُ كَانَ رِجَالٌ مِنَ الْإِنْسِ يَعُوذُونَ بِرِجَالٍ مِنَ الْجِنِّ فَزَادُوهُمْ رَهَقًا ۞
‘‘ಕೆಲವು ಮಾನವರು ಜಿನ್ನ್‌ಗಳ ಆಶ್ರಯ ಪಡೆದುದರಿಂದ ಅವರ (ಜಿನ್ನ್‌ಗಳ) ಬಂಡಾಯವು ಮತ್ತಷ್ಟು ಹೆಚ್ಚಿತು.’’
72:7
وَأَنَّهُمْ ظَنُّوا كَمَا ظَنَنْتُمْ أَنْ لَنْ يَبْعَثَ اللَّهُ أَحَدًا ۞
‘‘ಅಲ್ಲಾಹನು ಯಾರನ್ನೂ ಮತ್ತೆ ಜೀವಂತಗೊಳಿಸಲಾರನೆಂದು ನೀವು ನಂಬಿರುವಂತೆ ಅವರೂ (ಆ ಜಿನ್ನ್‌ಗಳೂ) ನಂಬಿದ್ದರು.’’
72:8
وَأَنَّا لَمَسْنَا السَّمَاءَ فَوَجَدْنَاهَا مُلِئَتْ حَرَسًا شَدِيدًا وَشُهُبًا ۞
‘‘ನಾವು ಆಕಾಶವನ್ನು ಸಮೀಕ್ಷಿಸಿ ನೋಡಿದೆವು. ಅದನ್ನು ಬಲಿಷ್ಠ ಕಾವಲುಗಾರರು ರಕ್ಷಿಸುತ್ತಿರುವುದನ್ನು ಹಾಗೂ ಅದು ಬೆಂಕಿಯಿಂದ ತುಂಬಿರುವುದನ್ನು ಕಂಡೆವು.’’
72:9
وَأَنَّا كُنَّا نَقْعُدُ مِنْهَا مَقَاعِدَ لِلسَّمْعِ ۖ فَمَنْ يَسْتَمِعِ الْآنَ يَجِدْ لَهُ شِهَابًا رَصَدًا ۞
‘‘ಹಿಂದೆ ನಾವು ಸುದ್ದಿ ಕೇಳಲಿಕ್ಕಾಗಿ ಅಲ್ಲಿ ಹಲವೆಡೆ ಕೂರುತ್ತಿದ್ದೆವು. ಆದರೆ ಈಗ, ಹಾಗೆ ಕೇಳ ಹೊರಟವನು, ತನ್ನ ಮೇಲೆ ಬೆಂಕಿಯ ದಾಳಿಯನ್ನು ಎದುರಿಸಬೇಕಾಗುತ್ತದೆ.
72:10
وَأَنَّا لَا نَدْرِي أَشَرٌّ أُرِيدَ بِمَنْ فِي الْأَرْضِ أَمْ أَرَادَ بِهِمْ رَبُّهُمْ رَشَدًا ۞
‘‘ಭೂವಾಸಿಗಳ ಒಡೆಯನು ಅವರಿಗೆ ಏನಾದರೂ ಅಹಿತವನ್ನು ಮಾಡಬಯಸುತ್ತಾನೋ ಅಥವಾ ಹಿತವನ್ನು ಮಾಡಬಯಸುತ್ತಾನೋ ಎಂಬುದು ನಮಗೆ ತಿಳಿಯದು.’’
72:11
وَأَنَّا مِنَّا الصَّالِحُونَ وَمِنَّا دُونَ ذَٰلِكَ ۖ كُنَّا طَرَائِقَ قِدَدًا ۞
‘‘ನಮ್ಮಲ್ಲಿ ಕೆಲವರು ಸಜ್ಜನರಿದ್ದಾರೆ ಮತ್ತು ಇತರ ಬಗೆಯವರೂ ಇದ್ದಾರೆ. ನಮ್ಮಲ್ಲಿ ವಿಭಿನ್ನ ಪಂಥಗಳಿವೆ.’’
72:12
وَأَنَّا ظَنَنَّا أَنْ لَنْ نُعْجِزَ اللَّهَ فِي الْأَرْضِ وَلَنْ نُعْجِزَهُ هَرَبًا ۞
‘‘ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲು ನಮ್ಮಿಂದ ಸಾಧ್ಯವಿಲ್ಲ ಮತ್ತು ಅವನಿಂದ ತಪ್ಪಿಸಿಕೊಳ್ಳುವ ಮೂಲಕ ಅವನನ್ನು ಮಣಿಸಲಿಕ್ಕೂ ನಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ನಾವು ಮನಗಂಡಿದ್ದೇವೆ.
72:13
وَأَنَّا لَمَّا سَمِعْنَا الْهُدَىٰ آمَنَّا بِهِ ۖ فَمَنْ يُؤْمِنْ بِرَبِّهِ فَلَا يَخَافُ بَخْسًا وَلَا رَهَقًا ۞
‘‘ಮಾರ್ಗದರ್ಶಿ ಸಂದೇಶವನ್ನು (ಕುರ್‌ಆನನ್ನು) ಕೇಳಿದೊಡನೆ ನಾವು ಅದನ್ನು ನಂಬಿದೆವು. ತನ್ನ ಒಡೆಯನನ್ನು ನಂಬಿದವನಿಗೆ ಯಾವುದೇ ನಷ್ಟದ ಅಥವಾ ಅಕ್ರಮದ ಭಯ ಇರುವುದಿಲ್ಲ.’’
72:14
وَأَنَّا مِنَّا الْمُسْلِمُونَ وَمِنَّا الْقَاسِطُونَ ۖ فَمَنْ أَسْلَمَ فَأُولَٰئِكَ تَحَرَّوْا رَشَدًا ۞
‘‘ನಮ್ಮಲ್ಲಿ ಕೆಲವರು ಶರಣಾದವರಿದ್ದಾರೆ (ಮುಸ್ಲಿಮರಿದ್ದಾರೆ) ಮತ್ತು ಕೆಲವರು ದಾರಿಗೆಟ್ಟವರಿದ್ದಾರೆ. ಶರಣಾದವರು ಸನ್ಮಾರ್ಗವನ್ನು ಪಡೆದರು.’’
72:15
وَأَمَّا الْقَاسِطُونَ فَكَانُوا لِجَهَنَّمَ حَطَبًا ۞
‘‘ಇನ್ನು ಪಾಪಿಗಳು, ಅವರಂತು ನರಕದ ಇಂಧನವಾಗಿಬಿಟ್ಟರು.’’
72:16
وَأَنْ لَوِ اسْتَقَامُوا عَلَى الطَّرِيقَةِ لَأَسْقَيْنَاهُمْ مَاءً غَدَقًا ۞
(ದೂತರೇ,) ಒಂದು ವೇಳೆ ಅವರು (ಮಕ್ಕಃದ ಬರ ಪೀಡಿತರು) ನೇರ ಮಾರ್ಗದಲ್ಲೇ ಇದ್ದಿದ್ದರೆ ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಒದಗಿಸುತ್ತಿದ್ದೆವು -
72:17
لِنَفْتِنَهُمْ فِيهِ ۚ وَمَنْ يُعْرِضْ عَنْ ذِكْرِ رَبِّهِ يَسْلُكْهُ عَذَابًا صَعَدًا ۞
- ಆ ಮೂಲಕ ಅವರನ್ನು ಪರೀಕ್ಷಿಸಲಿಕ್ಕಾಗಿ. ತನ್ನ ಒಡೆಯನ ಸ್ಮರಣೆಯನ್ನು ಕಡೆಗಣಿಸುವಾತನನ್ನು ಅವನು (ಅಲ್ಲಾಹನು) ಕಠಿಣ ಶಿಕ್ಷೆಗೆ ಒಳಪಡಿಸುವನು.
72:18
وَأَنَّ الْمَسَاجِدَ لِلَّهِ فَلَا تَدْعُوا مَعَ اللَّهِ أَحَدًا ۞
ಮಸ್ಜಿದ್ (ಮಸೀದಿ)ಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಅವುಗಳಲ್ಲಿ ಅಲ್ಲಾಹನ ಜೊತೆ ಬೇರೆ ಯಾರನ್ನೂ ಪ್ರಾರ್ಥಿಸಬೇಡಿ.
72:19
وَأَنَّهُ لَمَّا قَامَ عَبْدُ اللَّهِ يَدْعُوهُ كَادُوا يَكُونُونَ عَلَيْهِ لِبَدًا ۞
ಅಲ್ಲಾಹನ ದಾಸನು (ದೂತರು, ಕಅ್'ಬದಲ್ಲಿ) ಅವನನ್ನು ಪ್ರಾರ್ಥಿಸಲಿಕ್ಕೆಂದು ನಿಂತಾಗ ಅವರು (ಮಕ್ಕಃದ ವಿಗ್ರಹಾರಾಧಕರು) ಆತನ ಮೇಲೆ ಮುಗಿದು ಬೀಳಲು ಹೊರಡುತ್ತಾರೆ.
72:20
قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا ۞
ಹೇಳಿರಿ; ನಾನಂತು ನನ್ನ ಒಡೆಯನನ್ನು ಮಾತ್ರ ಪ್ರಾರ್ಥಿಸುತ್ತೇನೆ ಮತ್ತು ನಾನು ಅವನ ಜೊತೆ ಯಾರನ್ನೂ ಪಾಲುಗೊಳಿಸುವುದಿಲ್ಲ.
72:21
قُلْ إِنِّي لَا أَمْلِكُ لَكُمْ ضَرًّا وَلَا رَشَدًا ۞
ಹೇಳಿರಿ; ನಿಮಗೆ ಯಾವುದೇ ನಷ್ಟ ಅಥವಾ ಲಾಭವನ್ನುಂಟು ಮಾಡುವ ಅಧಿಕಾರ ನನಗೆ ಖಂಡಿತ ಇಲ್ಲ.
72:22
قُلْ إِنِّي لَنْ يُجِيرَنِي مِنَ اللَّهِ أَحَدٌ وَلَنْ أَجِدَ مِنْ دُونِهِ مُلْتَحَدًا ۞
ಹೇಳಿರಿ; ಅಲ್ಲಾಹನಿಗೆದುರಾಗಿ ನನಗೆ ಆಶ್ರಯ ನೀಡಬಲ್ಲವರು ಯಾರೂ ಇಲ್ಲ, ಮತ್ತು ನಾನು ಅವನ ಹೊರತು ಬೇರೆಲ್ಲೂ ಆಶ್ರಯವನ್ನು ಕಾಣುವುದಿಲ್ಲ.
72:23
إِلَّا بَلَاغًا مِنَ اللَّهِ وَرِسَالَاتِهِ ۚ وَمَنْ يَعْصِ اللَّهَ وَرَسُولَهُ فَإِنَّ لَهُ نَارَ جَهَنَّمَ خَالِدِينَ فِيهَا أَبَدًا ۞
ಅಲ್ಲಾಹನ ಕಡೆಯಿಂದ (ಸಿಕ್ಕಿದ್ದನ್ನು) ಮತ್ತು ಅವನ ಸಂದೇಶಗಳನ್ನು ತಲುಪಿಸುವುದು (ಇಷ್ಟೇ ನನ್ನ ಕೆಲಸ). ಅಲ್ಲಾಹ್ ಮತ್ತವನ ದೂತರ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ ಖಂಡಿತ ನರಕಾಗ್ನಿಯೇ ಗತಿ. ಅವರು ಅದರಲ್ಲಿ ಸದಾ ಕಾಲ ಇರುವರು.
72:24
حَتَّىٰ إِذَا رَأَوْا مَا يُوعَدُونَ فَسَيَعْلَمُونَ مَنْ أَضْعَفُ نَاصِرًا وَأَقَلُّ عَدَدًا ۞
ಅವರು, ತಮಗೆ ವಾಗ್ದಾನ ಮಾಡಲಾಗಿರುವ ಘಟನೆಯನ್ನು ಕಂಡಾಗ, ಯಾರ ಸಹಾಯಕನು ಅತ್ಯಂತ ದುರ್ಬಲನೆಂಬುದು, ಹಾಗೂ ಯಾರ ಸಹಾಯಕರ ಸಂಖ್ಯೆ ತೀರಾ ನಗಣ್ಯ ಎಂಬುದು ಅವರಿಗೆ ಮನವರಿಕೆಯಾಗಲಿದೆ.
72:25
قُلْ إِنْ أَدْرِي أَقَرِيبٌ مَا تُوعَدُونَ أَمْ يَجْعَلُ لَهُ رَبِّي أَمَدًا ۞
ಹೇಳಿರಿ; ನಿಮಗೆ ವಾಗ್ದಾನ ಮಾಡಲಾಗುತ್ತಿರುವ ದಿನವು ತೀರಾ ಸಮೀಪವಿದೆಯೋ ಅಥವಾ ನನ್ನೊಡೆಯನು ಅದರ ಅವಧಿಯನ್ನು ವಿಸ್ತರಿಸಿರುವನೋ ಎಂಬುದು ನನಗೆ ತಿಳಿಯದು.
72:26
عَالِمُ الْغَيْبِ فَلَا يُظْهِرُ عَلَىٰ غَيْبِهِ أَحَدًا ۞
ಅವನೇ ಎಲ್ಲಾ ಗುಪ್ತ ವಿಷಯಗಳನ್ನು ಬಲ್ಲವನು. ಅವನು ಆ ತನ್ನ ಗುಪ್ತ ವಿಷಯಗಳನ್ನು ಯಾರೊಬ್ಬರಿಗೂ ತಿಳಿಸುವುದಿಲ್ಲ.
72:27
إِلَّا مَنِ ارْتَضَىٰ مِنْ رَسُولٍ فَإِنَّهُ يَسْلُكُ مِنْ بَيْنِ يَدَيْهِ وَمِنْ خَلْفِهِ رَصَدًا ۞
ದೂತರ ಪೈಕಿ ಅವನ ಮೆಚ್ಚುಗೆಗೆ ಪಾತ್ರರಾದವರ ಹೊರತು. (ಅವರಿಗೆ ಅವನು ಗುಪ್ತ ವಿಷಯಗಳನ್ನು ತಿಳಿಸುತ್ತಾನೆ.) ಮತ್ತು ಅವರ ಮುಂದೆಯೂ ಹಿಂದೆಯೂ ಕಾವಲುಗಾರರನ್ನು ನೇಮಿಸುತ್ತಾನೆ -
72:28
لِيَعْلَمَ أَنْ قَدْ أَبْلَغُوا رِسَالَاتِ رَبِّهِمْ وَأَحَاطَ بِمَا لَدَيْهِمْ وَأَحْصَىٰ كُلَّ شَيْءٍ عَدَدًا ۞
- ಅವರು ತಮ್ಮ ಒಡೆಯನ ಸಂದೇಶವನ್ನು ತಲುಪಿಸಿರುವರೆಂಬುದನ್ನು ಅರಿಯಲಿಕ್ಕಾಗಿ. ಮತ್ತು ಅವನು, ಅವರ ಬಳಿ ಇರುವ ಎಲ್ಲವನ್ನೂ ಆವರಿಸಿಕೊಂಡಿರುತ್ತಾನೆ. ಮತ್ತು ಅವನು ಪ್ರತಿಯೊಂದು ವಸ್ತುವನ್ನೂ ಎಣಿಸಿಟ್ಟಿರುತ್ತಾನೆ.