Al-Hadid (The iron)
57. ಅಲ್ ಹದೀದ್(ಉಕ್ಕು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
57:1
سَبَّحَ لِلَّهِ مَا فِي السَّمَاوَاتِ وَالْأَرْضِ ۖ وَهُوَ الْعَزِيزُ الْحَكِيمُ ۞
ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರ್ಯವನ್ನು ಜಪಿಸುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುವನು.
57:2
لَهُ مُلْكُ السَّمَاوَاتِ وَالْأَرْضِ ۖ يُحْيِي وَيُمِيتُ ۖ وَهُوَ عَلَىٰ كُلِّ شَيْءٍ قَدِيرٌ ۞
ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅವನಿಗೇ ಸೇರಿದೆ. ಅವನೇ ಜೀವಂತಗೊಳಿಸುವವನು ಹಾಗೂ ಸಾಯಿಸುವವನು ಮತ್ತು ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
57:3
هُوَ الْأَوَّلُ وَالْآخِرُ وَالظَّاهِرُ وَالْبَاطِنُ ۖ وَهُوَ بِكُلِّ شَيْءٍ عَلِيمٌ ۞
ಅವನೇ ಆದಿ, ಅವನೇ ಅಂತ್ಯ. ಅವನು ವ್ಯಕ್ತನೂ ಹೌದು, ಗುಪ್ತನೂ ಹೌದು ಮತ್ತು ಅವನು ಎಲ್ಲವನ್ನೂ ಬಲ್ಲವನಾಗಿದ್ದಾನೆ.
57:4
هُوَ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۚ يَعْلَمُ مَا يَلِجُ فِي الْأَرْضِ وَمَا يَخْرُجُ مِنْهَا وَمَا يَنْزِلُ مِنَ السَّمَاءِ وَمَا يَعْرُجُ فِيهَا ۖ وَهُوَ مَعَكُمْ أَيْنَ مَا كُنْتُمْ ۚ وَاللَّهُ بِمَا تَعْمَلُونَ بَصِيرٌ ۞
ಅವನೇ, ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ತರುವಾಯ ವಿಶ್ವ ಸಿಂಹಾಸನದಲ್ಲಿ ನೆಲೆಸಿದವನು. ಭೂಮಿಯೊಳಗೆ ಏನೆಲ್ಲಾ ಪ್ರವೇಶಿಸುತ್ತದೆ ಮತ್ತು ಏನೆಲ್ಲ ಅದರಿಂದ ಹೊರ ಹೊಮ್ಮುತ್ತದೆಂಬುದನ್ನು ಹಾಗೂ ಆಕಾಶದಿಂದ ಏನೆಲ್ಲ ಇಳಿದು ಬರುತ್ತದೆ ಮತ್ತು ಏನೆಲ್ಲಾ ಅದರೊಳಕ್ಕೆ ಏರಿ ಹೋಗುತ್ತದೆ ಎಂಬುದನ್ನು ಅವನೇ ಬಲ್ಲನು. ಮತ್ತು ನೀವು ಇರುವಲ್ಲೆಲ್ಲಾ ಅವನು ನಿಮ್ಮ ಜೊತೆಗಿದ್ದಾನೆ. ಮತ್ತು ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ನೋಡುತ್ತಿರುತ್ತಾನೆ.
57:5
لَهُ مُلْكُ السَّمَاوَاتِ وَالْأَرْضِ ۚ وَإِلَى اللَّهِ تُرْجَعُ الْأُمُورُ ۞
ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅವನಿಗೇ ಸೇರಿದೆ. ಕೊನೆಗೆ ಎಲ್ಲ ವಿಷಯಗಳೂ ಅಲ್ಲಾಹನೆಡೆಗೇ ಮರಳಲಿವೆ.
57:6
يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ ۚ وَهُوَ عَلِيمٌ بِذَاتِ الصُّدُورِ ۞
ಅವನು ಇರುಳನ್ನು ಹಗಲೊಳಗೆ ಪೋಣಿಸುತ್ತಾನೆ ಮತ್ತು ಹಗಲನ್ನು ಇರುಳಿನೊಳಗೆ ಪೋಣಿಸುತ್ತಾನೆ. ಅವನು ಮನಸ್ಸಿನೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ.
57:7
آمِنُوا بِاللَّهِ وَرَسُولِهِ وَأَنْفِقُوا مِمَّا جَعَلَكُمْ مُسْتَخْلَفِينَ فِيهِ ۖ فَالَّذِينَ آمَنُوا مِنْكُمْ وَأَنْفَقُوا لَهُمْ أَجْرٌ كَبِيرٌ ۞
ನೀವು ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಡಿರಿ ಮತ್ತು ಅವನು ನಿಮ್ಮನ್ನು ಯಾವುದರ ಉತ್ತರಾಧಿಕಾರಿಗಳಾಗಿಸಿರುವನೋ ಅದರಿಂದ ಖರ್ಚು ಮಾಡಿರಿ. ನಿಮ್ಮ ಪೈಕಿ ವಿಶ್ವಾಸವಿಟ್ಟು (ಸತ್ಕಾರ್ಯಕ್ಕೆ) ಖರ್ಚು ಮಾಡುವವರಿಗೆ ಮಹಾ ಪ್ರತಿಫಲವಿದೆ.
57:8
وَمَا لَكُمْ لَا تُؤْمِنُونَ بِاللَّهِ ۙ وَالرَّسُولُ يَدْعُوكُمْ لِتُؤْمِنُوا بِرَبِّكُمْ وَقَدْ أَخَذَ مِيثَاقَكُمْ إِنْ كُنْتُمْ مُؤْمِنِينَ ۞
ನಿಮಗೇನಾಗಿದೆ? ನೀವೇಕೆ ಅಲ್ಲಾಹನಲ್ಲಿ ನಂಬಿಕೆ ಇಡುತ್ತಿಲ್ಲ? ದೇವ ದೂತರು ನಿಮ್ಮನ್ನು ನಿಮ್ಮ ಒಡೆಯನಲ್ಲಿ ನಂಬಿಕೆ ಇಡಬೇಕೆಂದು ಆಮಂತ್ರಿಸುತ್ತಿದ್ದಾರೆ. ಅವನಂತೂ (ಅಲ್ಲಾಹನಂತು) ಈ ಕುರಿತು ನಿಮ್ಮಿಂದ ಪ್ರಮಾಣವನ್ನು ಪಡೆದಿರುವನು. ನೀವು ನಂಬುವವರಾಗಿದ್ದರೆ (ಇದು ನಿಮಗೆ ತಿಳಿದಿರಬೇಕಿತ್ತು).
57:9
هُوَ الَّذِي يُنَزِّلُ عَلَىٰ عَبْدِهِ آيَاتٍ بَيِّنَاتٍ لِيُخْرِجَكُمْ مِنَ الظُّلُمَاتِ إِلَى النُّورِ ۚ وَإِنَّ اللَّهَ بِكُمْ لَرَءُوفٌ رَحِيمٌ ۞
ಅವನೇ, ನಿಮ್ಮನ್ನು ಕತ್ತಲುಗಳಿಂದ ಹೊರ ತೆಗೆದು ಬೆಳಕಿನೆಡೆಗೆ ನಡೆಸುವುದಕ್ಕಾಗಿ ತನ್ನ ದಾಸನಿಗೆ ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿ ಕೊಡುವವನು. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಪಾಲಿಗೆ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿದ್ದಾನೆ.
57:10
وَمَا لَكُمْ أَلَّا تُنْفِقُوا فِي سَبِيلِ اللَّهِ وَلِلَّهِ مِيرَاثُ السَّمَاوَاتِ وَالْأَرْضِ ۚ لَا يَسْتَوِي مِنْكُمْ مَنْ أَنْفَقَ مِنْ قَبْلِ الْفَتْحِ وَقَاتَلَ ۚ أُولَٰئِكَ أَعْظَمُ دَرَجَةً مِنَ الَّذِينَ أَنْفَقُوا مِنْ بَعْدُ وَقَاتَلُوا ۚ وَكُلًّا وَعَدَ اللَّهُ الْحُسْنَىٰ ۚ وَاللَّهُ بِمَا تَعْمَلُونَ خَبِيرٌ ۞
ನಿಮಗೇನಾಗಿದೆ? ನೀವೇಕೆ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲ? ಆಕಾಶಗಳ ಮತ್ತು ಭೂಮಿಯ ಅಂತಿಮ ಉತ್ತರಾಧಿಕಾರವು ಅಲ್ಲಾಹನಿಗೇ ಸೇರಿದೆ. ನಿಮ್ಮ ಪೈಕಿ, ವಿಜಯಕ್ಕೆ ಮುನ್ನ ಖರ್ಚು ಮಾಡಿದವರು ಮತ್ತು ಯುದ್ಧದಲ್ಲಿ ಪಾಲ್ಗೊಂಡವರು (ಇತರರಿಗೆ) ಸಮಾನರಲ್ಲ. ಅವರು, ಅದರ (ವಿಜಯದ) ನಂತರ ಖರ್ಚು ಮಾಡಿದವರಿಗಿಂತ ಮತ್ತು (ವಿಜಯದ ನಂತರ) ಯುದ್ಧ ಮಾಡಿದವರಿಗಿಂತ ಸ್ಥಾನದಲ್ಲಿ ಉನ್ನತರು. ಅದರೆ ಅವರೆಲ್ಲರಿಗೂ ಅಲ್ಲಾಹನು ಶ್ರೇಷ್ಠವಾದುದನ್ನೇ ವಾಗ್ದಾನ ಮಾಡಿರುತ್ತಾನೆ. ಮತ್ತು ಅಲ್ಲಾಹನು ನೀವು ಮಾಡುವ ಎಲ್ಲ ಕೃತ್ಯಗಳ ಕುರಿತು ಅರಿವು ಉಳ್ಳವನಾಗಿದ್ದಾನೆ.
57:11
مَنْ ذَا الَّذِي يُقْرِضُ اللَّهَ قَرْضًا حَسَنًا فَيُضَاعِفَهُ لَهُ وَلَهُ أَجْرٌ كَرِيمٌ ۞
ಯಾರಿದ್ದಾನೆ, ಅಲ್ಲಾಹನಿಗೆ ಶ್ರೇಷ್ಠ ಸಾಲವನ್ನು ನೀಡುವವನು? ಕೊನೆಗೆ ಅವನು (ಅಲ್ಲಾಹನು) ಅದನ್ನು ಬಹಳಷ್ಟು ಹೆಚ್ಚಿಸಿ ಆತನಿಗೆ ಮರಳಿಸುವನು ಮತ್ತು ಆತನಿಗೆ ಉದಾರ ಪ್ರತಿಫಲವೂ ಸಿಗಲಿದೆ.
57:12
يَوْمَ تَرَى الْمُؤْمِنِينَ وَالْمُؤْمِنَاتِ يَسْعَىٰ نُورُهُمْ بَيْنَ أَيْدِيهِمْ وَبِأَيْمَانِهِمْ بُشْرَاكُمُ الْيَوْمَ جَنَّاتٌ تَجْرِي مِنْ تَحْتِهَا الْأَنْهَارُ خَالِدِينَ فِيهَا ۚ ذَٰلِكَ هُوَ الْفَوْزُ الْعَظِيمُ ۞
ಒಂದು ದಿನ ನೀವು ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರನ್ನು ಕಾಣುವಿರಿ; ಅವರ (ವಿಶ್ವಾಸದ) ಬೆಳಕು ಅವರ ಮುಂದೆಯೂ ಅವರ ಬಲ ಭಾಗದಲ್ಲೂ ಧಾವಿಸುತ್ತಿರುವುದು. ‘‘ಇಂದು ನಿಮಗೆ, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳ ಶುಭ ವಾರ್ತೆ ಇದೆ’’ (ಎಂದು ಅವರೊಡನೆ ಹೇಳಲಾಗುವುದು). ಅವುಗಳಲ್ಲಿ ಅವರು ಸದಾಕಾಲ ಇರುವರು. ಇದುವೇ ಮಹಾ ವಿಜಯವಾಗಿದೆ.
57:13
يَوْمَ يَقُولُ الْمُنَافِقُونَ وَالْمُنَافِقَاتُ لِلَّذِينَ آمَنُوا انْظُرُونَا نَقْتَبِسْ مِنْ نُورِكُمْ قِيلَ ارْجِعُوا وَرَاءَكُمْ فَالْتَمِسُوا نُورًا فَضُرِبَ بَيْنَهُمْ بِسُورٍ لَهُ بَابٌ بَاطِنُهُ فِيهِ الرَّحْمَةُ وَظَاهِرُهُ مِنْ قِبَلِهِ الْعَذَابُ ۞
ಆ ದಿನ ಕಪಟಿ ಪುರುಷರು ಮತ್ತು ಕಪಟಿ ಸ್ತ್ರೀಯರು ವಿಶ್ವಾಸಿಗಳೊಡನೆ, ‘‘ಸ್ವಲ್ಪ ನಮ್ಮ ಕಡೆಗೆ ನೋಡಿರಿ, ನಿಮ್ಮ ಬೆಳಕಿನಿಂದ ಸ್ವಲ್ಪ ಭಾಗ ನಮಗೂ ಸಿಗಲಿ’’ ಎಂದು ಹೇಳುವರು. ಆಗ ಅವರೊಡನೆ, ‘‘ನೀವು ನಿಮ್ಮ ಹಿಂಭಾಗಕ್ಕೆ ಮರಳಿರಿ - ಮತ್ತು (ಅಲ್ಲಿ) ಬೆಳಕನ್ನು ಹುಡುಕಿರಿ’’ ಎನ್ನಲಾಗುವುದು. ಆ ಬಳಿಕ ಅವರ (ಕಪಟಿಗಳ ಮತ್ತು ಧರ್ಮ ವಿಶ್ವಾಸಿಗಳ) ನಡುವೆ ಒಂದು ಗೋಡೆಯನ್ನು ನಿರ್ಮಿಸಲಾಗುವುದು. ಅದಕ್ಕೊಂದು ಬಾಗಿಲು ಇರುವುದು. ಅದರ ಒಳಭಾಗದಲ್ಲಿ ಅನುಗ್ರಹವು ತುಂಬಿರುವುದು ಮತ್ತು ಹೊರ ಭಾಗದಲ್ಲಿ ಶಿಕ್ಷೆ ಇರುವುದು.
57:14
يُنَادُونَهُمْ أَلَمْ نَكُنْ مَعَكُمْ ۖ قَالُوا بَلَىٰ وَلَٰكِنَّكُمْ فَتَنْتُمْ أَنْفُسَكُمْ وَتَرَبَّصْتُمْ وَارْتَبْتُمْ وَغَرَّتْكُمُ الْأَمَانِيُّ حَتَّىٰ جَاءَ أَمْرُ اللَّهِ وَغَرَّكُمْ بِاللَّهِ الْغَرُورُ ۞
ಅವರು (ಕಪಟಿಗಳು) ಅವರನ್ನು (ವಿಶ್ವಾಸಿಗಳನ್ನು) ಕೂಗಿ ಕರೆದು, ‘‘ನಾವೇನು ನಿಮ್ಮ ಜೊತೆಗಿರಲಿಲ್ಲವೇ?’’ ಎಂದು ಕೇಳುವರು. ಆಗ ಅವರು ಹೇಳುವರು; ‘‘ಖಂಡಿತ ಇದ್ದಿರಿ. ಅದರೆ ನೀವು ಸ್ವತಃ ನಿಮ್ಮನ್ನೇ ಪರೀಕ್ಷೆಗೆ ಒಡ್ಡಿಕೊಂಡಿರಿ - ಮತ್ತು ನೀವು ಕಾಯುತ್ತಲೇ ಇದ್ದಿರಿ ಹಾಗೂ ನೀವು ಸಂಶಯ ಪೀಡಿತರಾಗಿದ್ದಿರಿ. ಕೊನೆಗೆ, ಅಲ್ಲಾಹನ ಆದೇಶವು ಬಂದು ಬಿಡುವವರೆಗೂ ನಿಮ್ಮ ಹುಸಿ ನಿರೀಕ್ಷೆಗಳು ನಿಮ್ಮನ್ನು ವಂಚಿಸಿದುವು ಮತ್ತು ವಂಚಿಸುವವನು (ಶೈತಾನನು) ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ವಂಚಿಸಿ ಬಿಟ್ಟನು.’’
57:15
فَالْيَوْمَ لَا يُؤْخَذُ مِنْكُمْ فِدْيَةٌ وَلَا مِنَ الَّذِينَ كَفَرُوا ۚ مَأْوَاكُمُ النَّارُ ۖ هِيَ مَوْلَاكُمْ ۖ وَبِئْسَ الْمَصِيرُ ۞
ಇಂದು ನಿಮ್ಮಿಂದಾಗಲಿ ಧಿಕ್ಕಾರಿಗಳಿಂದಾಗಲೀ ಯಾವ ಪರಿಹಾರವನ್ನೂ ಸ್ವೀಕರಿಸಲಾಗದು. ನರಕವೇ ನಿಮ್ಮ ನೆಲೆಯಾಗಿದೆ. ಅದುವೇ ನಿಮ್ಮ ಆಪ್ತನಾಗಿರುವುದು. ಮತ್ತು ಅದು (ನರಕವು) ಬಹಳ ಕೆಟ್ಟ ವಾಸಸ್ಥಾನವಾಗಿದೆ.
57:16
۞ أَلَمْ يَأْنِ لِلَّذِينَ آمَنُوا أَنْ تَخْشَعَ قُلُوبُهُمْ لِذِكْرِ اللَّهِ وَمَا نَزَلَ مِنَ الْحَقِّ وَلَا يَكُونُوا كَالَّذِينَ أُوتُوا الْكِتَابَ مِنْ قَبْلُ فَطَالَ عَلَيْهِمُ الْأَمَدُ فَقَسَتْ قُلُوبُهُمْ ۖ وَكَثِيرٌ مِنْهُمْ فَاسِقُونَ ۞
ವಿಶ್ವಾಸಿಗಳು ಅಲ್ಲಾಹನನ್ನು ನೆನಪಿಸುವುದಕ್ಕೆ ಮತ್ತು ಅವನು ಇಳಿಸಿ ಕೊಟ್ಟಿರುವ ಸತ್ಯಕ್ಕನುಸಾರವಾಗಿ ತಮ್ಮ ಮನಸ್ಸುಗಳಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಇನ್ನೂ ಸಮಯ ಬಂದಿಲ್ಲವೇ? ಅವರು ತಮಗಿಂತ ಹಿಂದೆ ಗ್ರಂಥ ನೀಡಲಾಗಿದ್ದವರಂತೆ ಆಗದಿರಲಿ. ಅವರಿಗೆ ಸಾಕಷ್ಟು ಧೀರ್ಘ ಕಾಲಾವಧಿ ನೀಡಲಾಗಿತ್ತು. ಆದರೆ ಅವರ ಮನಸ್ಸುಗಳು ಕಠಿಣವಾಗಿ ಬಿಟ್ಟವು. ಮತ್ತು ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದರು.
57:17
اعْلَمُوا أَنَّ اللَّهَ يُحْيِي الْأَرْضَ بَعْدَ مَوْتِهَا ۚ قَدْ بَيَّنَّا لَكُمُ الْآيَاتِ لَعَلَّكُمْ تَعْقِلُونَ ۞
ನಿಮಗೆ ತಿಳಿದಿರಲಿ, ಅಲ್ಲಾಹನೇ ಭೂಮಿಯು ಸತ್ತ ಬಳಿಕ ಅದನ್ನು ಮತ್ತೆ ಜೀವಂತ ಗೊಳಿಸುತ್ತಾನೆ. ನೀವು ಅರ್ಥ ಮಾಡಿಕೊಳ್ಳಬೇಕೆಂದು (ಈ ರೀತಿ) ನಾವು ನಮ್ಮ ವಚನಗಳನ್ನು ನಿಮಗೆ ವಿವರಿಸಿರುವೆವು.
57:18
إِنَّ الْمُصَّدِّقِينَ وَالْمُصَّدِّقَاتِ وَأَقْرَضُوا اللَّهَ قَرْضًا حَسَنًا يُضَاعَفُ لَهُمْ وَلَهُمْ أَجْرٌ كَرِيمٌ ۞
ದಾನಶೀಲ ಪುರುಷರು ಹಾಗೂ ದಾನಶೀಲ ಸ್ತ್ರೀಯರು ಮತ್ತು ಅಲ್ಲಾಹನಿಗೆ ಶ್ರೇಷ್ಠ ಸಾಲ ನೀಡಿದವರಿಗಾಗಿ, ಅವನು ಅದನ್ನು (ಅವರ ಸಂಪತ್ತನ್ನು) ಬಹಳಷ್ಟು ಹೆಚ್ಚಿಸುವನು ಮತ್ತು ಅವರಿಗೆ ಉದಾರ ಪ್ರತಿಫಲವನ್ನು ನೀಡುವನು.
57:19
وَالَّذِينَ آمَنُوا بِاللَّهِ وَرُسُلِهِ أُولَٰئِكَ هُمُ الصِّدِّيقُونَ ۖ وَالشُّهَدَاءُ عِنْدَ رَبِّهِمْ لَهُمْ أَجْرُهُمْ وَنُورُهُمْ ۖ وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ الْجَحِيمِ ۞
ಅಲ್ಲಾಹನಲ್ಲಿ ಮತ್ತು ಅವನ ದೂತರಲ್ಲಿ ನಂಬಿಕೆ ಇಟ್ಟವರು - ಅವರೇ ತಮ್ಮ ಒಡೆಯನ ದೃಷ್ಟಿಯಲ್ಲಿ ಪರಮ ಸತ್ಯವಂತರು ಮತ್ತು (ಸತ್ಯದ) ಸಾಕ್ಷಿಗಳಾಗಿರುತ್ತಾರೆ. ಅವರಿಗೆ ಅವರ ಪ್ರತಿಫಲ ಹಾಗೂ ದಿವ್ಯ ಬೆಳಕು ಸಿಗಲಿದೆ. ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರು ಮತ್ತು ತಿರಸ್ಕರಿಸಿದವರು - ಅವರೇ ನರಕವಾಸಿಗಳು.
57:20
اعْلَمُوا أَنَّمَا الْحَيَاةُ الدُّنْيَا لَعِبٌ وَلَهْوٌ وَزِينَةٌ وَتَفَاخُرٌ بَيْنَكُمْ وَتَكَاثُرٌ فِي الْأَمْوَالِ وَالْأَوْلَادِ ۖ كَمَثَلِ غَيْثٍ أَعْجَبَ الْكُفَّارَ نَبَاتُهُ ثُمَّ يَهِيجُ فَتَرَاهُ مُصْفَرًّا ثُمَّ يَكُونُ حُطَامًا ۖ وَفِي الْآخِرَةِ عَذَابٌ شَدِيدٌ وَمَغْفِرَةٌ مِنَ اللَّهِ وَرِضْوَانٌ ۚ وَمَا الْحَيَاةُ الدُّنْيَا إِلَّا مَتَاعُ الْغُرُورِ ۞
ನಿಮಗೆ ತಿಳಿದಿರಲಿ, ಇಹಲೋಕದ ಬದುಕೆಂಬುದು ಕೇವಲ ಆಟ, ವಿನೋದ, ಅಲಂಕಾರ, ನಿಮ್ಮ ನಡುವಣ ಪರಸ್ಪರ ಜಂಭ ಮತ್ತು ಸಂತಾನ ಹಾಗೂ ಸಂಪತ್ತಿನ ಸ್ಪರ್ಧೆ ಮಾತ್ರವಾಗಿದೆ - ಮಳೆ ಸುರಿದಾಗ ರೈತನಿಗೆ ತನ್ನ ಬೆಳೆ ಚಂದಗಾಣುವಂತೆ. ಆ ಬಳಿಕ ಅದು ಒಣಗಲಾರಂಭಿಸುತ್ತದೆ ಮತ್ತು ನೀವು ನೋಡುತ್ತಿದ್ದಂತೆಯೇ ಅದು (ಬೆಳೆ) ಹಳದಿಯಾಗುತ್ತದೆ ಮತ್ತು ಕೊನೆಗೆ ಚೂರು ಚೂರಾಗಿ ಬಿಡುತ್ತದೆ. ಅತ್ತ, ಪರಲೋಕದಲ್ಲಿ (ಒಂದೆಡೆ) ಕಠಿಣ ಶಿಕ್ಷೆಯೂ ಇದೆ ಮತ್ತು (ಇನ್ನೊಂದೆಡೆ) ಅಲ್ಲಾಹನ ಕಡೆಯಿಂದ ಕ್ಷಮೆ ಹಾಗೂ ಪ್ರಸನ್ನತೆಯೂ ಇದೆ. ಇಹಲೋಕದ ಬದುಕು ಕೇವಲ ವಂಚಕ ಸಾಧನವಾಗಿದೆ.
57:21
سَابِقُوا إِلَىٰ مَغْفِرَةٍ مِنْ رَبِّكُمْ وَجَنَّةٍ عَرْضُهَا كَعَرْضِ السَّمَاءِ وَالْأَرْضِ أُعِدَّتْ لِلَّذِينَ آمَنُوا بِاللَّهِ وَرُسُلِهِ ۚ ذَٰلِكَ فَضْلُ اللَّهِ يُؤْتِيهِ مَنْ يَشَاءُ ۚ وَاللَّهُ ذُو الْفَضْلِ الْعَظِيمِ ۞
ಧಾವಿಸಿರಿ, ನಿಮ್ಮ ಒಡೆಯನ ಕ್ಷಮೆಯೆಡೆಗೆ ಮತ್ತು ತನ್ನ ವೈಶಾಲ್ಯದಲ್ಲಿ ಆಕಾಶ ಹಾಗೂ ಭೂಮಿಯಂತಿರುವ ಸ್ವರ್ಗದೆಡೆಗೆ. ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟವರಿಗಾಗಿ ಅದನ್ನು ಸಿದ್ಧಪಡಿಸಲಾಗಿದೆ. ಅದು ಅಲ್ಲಾಹನ ಅನುಗ್ರಹ. ಅದನ್ನು ಅವನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಮಹಾ ಅನುಗ್ರಹಿಯಾಗಿದ್ದಾನೆ.
57:22
مَا أَصَابَ مِنْ مُصِيبَةٍ فِي الْأَرْضِ وَلَا فِي أَنْفُسِكُمْ إِلَّا فِي كِتَابٍ مِنْ قَبْلِ أَنْ نَبْرَأَهَا ۚ إِنَّ ذَٰلِكَ عَلَى اللَّهِ يَسِيرٌ ۞
ಭೂಮಿಯಲ್ಲಾಗಲೀ ಸ್ವತಃ ನಿಮ್ಮ ಜೀವದಲ್ಲಾಗಲೀ ಸಂಭವಿಸುವ ಪ್ರತಿಯೊಂದು ಸಂಕಟವೂ, ಅದು ಸಂಭವಿಸುವುದಕ್ಕೆ ಬಹಳ ಮುಂಚಿತವಾಗಿಯೇ ಒಂದು ಗ್ರಂಥದಲ್ಲಿ ಬರೆದಿರುತ್ತದೆ. ಅಲ್ಲಾಹನ ಪಾಲಿಗೆ ಇದು ಸುಲಭದ ಕೆಲಸವಾಗಿದೆ.
57:23
لِكَيْلَا تَأْسَوْا عَلَىٰ مَا فَاتَكُمْ وَلَا تَفْرَحُوا بِمَا آتَاكُمْ ۗ وَاللَّهُ لَا يُحِبُّ كُلَّ مُخْتَالٍ فَخُورٍ ۞
ನಿಮ್ಮಿಂದ ಕಳೆದು ಹೋದ ಯಾವುದರ ಕುರಿತೂ ನೀವು ಕೊರಗಬಾರದೆಂದು ಮತ್ತು ನಿಮಗೆ ನೀಡಲಾಗಿರುವ ಯಾವುದರ ಕುರಿತೂ ನೀವು ದುರಭಿಮಾನ ಪಡಬಾರದೆಂದು (ಇದನ್ನು ನಿಮಗೆ ತಿಳಿಸಲಾಗಿದೆ). ದೊಡ್ಡಸ್ತಿಕೆ ಮೆರೆಯುವ ಯಾವುದೇ ದುರಭಿಮಾನಿಯನ್ನು ಅಲ್ಲಾಹನು ಮೆಚ್ಚುವುದಿಲ್ಲ.
57:24
الَّذِينَ يَبْخَلُونَ وَيَأْمُرُونَ النَّاسَ بِالْبُخْلِ ۗ وَمَنْ يَتَوَلَّ فَإِنَّ اللَّهَ هُوَ الْغَنِيُّ الْحَمِيدُ ۞
ಅವರು ಸ್ವತಃ ಜಿಪುಣರೂ ಜನರಿಗೆ ಜಿಪುಣತೆಯನ್ನು ಬೋಧಿಸುವವರೂ ಆಗಿರುತ್ತಾರೆ. ಇನ್ನು ಯಾರಾದರೂ (ಈ ಉಪದೇಶವನ್ನು) ಕಡೆಗಣಿಸುವುದಾದರೆ (ಅವನು ತಿಳಿದಿರಲಿ), ಅಲ್ಲಾಹನಂತೂ ಎಲ್ಲ ಅಗತ್ಯಗಳಿಂದ ಮುಕ್ತನೂ ಪ್ರಶಂಸಾರ್ಹನೂ ಆಗಿದ್ದಾನೆ.
57:25
لَقَدْ أَرْسَلْنَا رُسُلَنَا بِالْبَيِّنَاتِ وَأَنْزَلْنَا مَعَهُمُ الْكِتَابَ وَالْمِيزَانَ لِيَقُومَ النَّاسُ بِالْقِسْطِ ۖ وَأَنْزَلْنَا الْحَدِيدَ فِيهِ بَأْسٌ شَدِيدٌ وَمَنَافِعُ لِلنَّاسِ وَلِيَعْلَمَ اللَّهُ مَنْ يَنْصُرُهُ وَرُسُلَهُ بِالْغَيْبِ ۚ إِنَّ اللَّهَ قَوِيٌّ عَزِيزٌ ۞
ನಾವು ನಮ್ಮ ದೂತರನ್ನು ಸ್ಪಷ್ಟ ಪುರಾವೆಗಳೊಂದಿಗೆ ಕಳುಹಿಸಿರುವೆವು ಮತ್ತು ಜನರು ನ್ಯಾಯ ಪಾಲಿಸಬೇಕೆಂದು ನಾವು ಅವರ (ದೂತರ) ಜೊತೆಗೆ ಗ್ರಂಥವನ್ನು ಹಾಗೂ ತಕ್ಕಡಿಯನ್ನು (ನ್ಯಾಯದ ನಿಯಮಗಳನ್ನು) ಇಳಿಸಿರುವೆವು. ಹಾಗೆಯೇ ನಾವು ಉಕ್ಕನ್ನು ಇಳಿಸಿರುವೆವು. ಅದರಲ್ಲಿ ಭಾರೀ ಶಕ್ತಿ ಇದೆ ಮತ್ತು ಜನರಿಗೆ ಹಲವು ಪ್ರಯೋಜನಗಳಿವೆ. ಮತ್ತು ಯಾರು ಕಣ್ಣಾರೆ ಕಾಣದೆ ತನಗೆ ಮತ್ತು ತನ್ನ ದೂತರಿಗೆ ನೆರವಾಗುವರೆಂಬುದನ್ನು ಅಲ್ಲಾಹನು ಅರಿಯಬಯಸುತ್ತಾನೆ. ಅಲ್ಲಾಹನಂತೂ ಭಾರೀ ಶಕ್ತಿ ಶಾಲಿಯೂ ಪ್ರಬಲನೂ ಆಗಿದ್ದಾನೆ.
57:26
وَلَقَدْ أَرْسَلْنَا نُوحًا وَإِبْرَاهِيمَ وَجَعَلْنَا فِي ذُرِّيَّتِهِمَا النُّبُوَّةَ وَالْكِتَابَ ۖ فَمِنْهُمْ مُهْتَدٍ ۖ وَكَثِيرٌ مِنْهُمْ فَاسِقُونَ ۞
(ಈ ಹಿಂದೆ) ನಾವು ನೂಹರನ್ನು ಹಾಗೂ ಇಬ್ರಾಹೀಮರನ್ನು ಕಳುಹಿಸಿದ್ದೆವು. ಮತ್ತು ನಾವು ಅವರ ಸಂತತಿಯಲ್ಲಿ ಪ್ರವಾದಿಗಳ ಹಾಗೂ ಗ್ರಂಥದ ಸರಣಿಯನ್ನು ಮುಂದುವರಿಸಿದೆವು. ಅವರಲ್ಲಿ ಕೆಲವರು ಸರಿದಾರಿಯನ್ನು ಪಡೆದರು ಮತ್ತು ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದರು.
57:27
ثُمَّ قَفَّيْنَا عَلَىٰ آثَارِهِمْ بِرُسُلِنَا وَقَفَّيْنَا بِعِيسَى ابْنِ مَرْيَمَ وَآتَيْنَاهُ الْإِنْجِيلَ وَجَعَلْنَا فِي قُلُوبِ الَّذِينَ اتَّبَعُوهُ رَأْفَةً وَرَحْمَةً وَرَهْبَانِيَّةً ابْتَدَعُوهَا مَا كَتَبْنَاهَا عَلَيْهِمْ إِلَّا ابْتِغَاءَ رِضْوَانِ اللَّهِ فَمَا رَعَوْهَا حَقَّ رِعَايَتِهَا ۖ فَآتَيْنَا الَّذِينَ آمَنُوا مِنْهُمْ أَجْرَهُمْ ۖ وَكَثِيرٌ مِنْهُمْ فَاسِقُونَ ۞
ತರುವಾಯ ನಾವು ಅವರ ಬೆನ್ನಿಗೇ ಸತತವಾಗಿ ನಮ್ಮ (ಇತರ) ದೂತರನ್ನು ರವಾನಿಸಿದೆವು ಮತ್ತು ಅವರ ಬೆನ್ನಿಗೆ ಮರ್ಯಮರ ಪುತ್ರ ಈಸಾರನ್ನು ಕಳುಹಿಸಿದೆವು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅವರ ಅನುಯಾಯಿಗಳ ಮನದಲ್ಲಿ ನಾವು ಸೌಮ್ಯತೆ ಮತ್ತು ಅನುಕಂಪವನ್ನು ಬೆಳೆಸಿದೆವು. ಆದರೆ ಸನ್ಯಾಸವನ್ನು ಅವರೇ ಆರಂಭಿಸಿದರು - ನಾವು ಅದನ್ನು ಅವರ ಮೇಲೆ ಕಡ್ಡಾಯಗೊಳಿಸಿರಲಿಲ್ಲ, ಅಲ್ಲಾಹನ ಮೆಚ್ಚುಗೆಗಾಗಿ (ಅವರು ಅದನ್ನು ಆರಂಭಿಸಿದ್ದರು) ಆದರೆ ಅವರು ಅದನ್ನು ನಿಭಾಯಿಸಬೇಕಾದ ರೀತಿಯಲ್ಲಿ ನಿಭಾಯಿಸಲಿಲ್ಲ. ಅವರ ಪೈಕಿ ವಿಶ್ವಾಸಿಗಳಿಗೆ ನಾವು ಅವರ ಪ್ರತಿಫಲವನ್ನು ನೀಡಿರುವೆವು. ಅವರಲ್ಲಿ ಹೆಚ್ಚಿನವರು ಅವಿಧೇಯರಾದರು.
57:28
يَا أَيُّهَا الَّذِينَ آمَنُوا اتَّقُوا اللَّهَ وَآمِنُوا بِرَسُولِهِ يُؤْتِكُمْ كِفْلَيْنِ مِنْ رَحْمَتِهِ وَيَجْعَلْ لَكُمْ نُورًا تَمْشُونَ بِهِ وَيَغْفِرْ لَكُمْ ۚ وَاللَّهُ غَفُورٌ رَحِيمٌ ۞
ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ. ಮತ್ತು ಅವನ ದೂತರಲ್ಲಿ ನಂಬಿಕೆ ಇಡಿರಿ. ಅವನು ತನ್ನ ಅನುಗ್ರಹದಿಂದ ನಿಮಗೆ ದುಪ್ಪಟ್ಟು ಪ್ರತಿಫಲವನ್ನು ನೀಡುವನು ಮತ್ತು ನಿಮಗೆ ಬೆಳಕನ್ನು ಒದಗಿಸುವನು. ನೀವು ಅದರಲ್ಲಿ (ಆ ಬೆಳಕಿನಲ್ಲಿ) ನಡೆಯುವಿರಿ. ಮತ್ತು ಅವನು ನಿಮಗೆ ಕ್ಷಮೆಯನ್ನು ನೀಡುವನು. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
57:29
لِئَلَّا يَعْلَمَ أَهْلُ الْكِتَابِ أَلَّا يَقْدِرُونَ عَلَىٰ شَيْءٍ مِنْ فَضْلِ اللَّهِ ۙ وَأَنَّ الْفَضْلَ بِيَدِ اللَّهِ يُؤْتِيهِ مَنْ يَشَاءُ ۚ وَاللَّهُ ذُو الْفَضْلِ الْعَظِيمِ ۞
ಅಲ್ಲಾಹನ ಅನುಗ್ರಹದ ಮೇಲೆ ತಮಗೆ ಕಿಂಚಿತ್ತೂ ನಿಯಂತ್ರಣವಿಲ್ಲವೆಂಬುದು ಗ್ರಂಥದವರಿಗೆ ಮನವರಿಕೆಯಾಗಲೆಂದು (ಇದನ್ನು ವಿವರಿಸಲಾಗಿದೆ) ಮತ್ತು ಅನುಗ್ರಹವು ಅಲ್ಲಾಹನ ಕೈಯಲ್ಲೇ ಇದೆ. ಅವನು ತಾನಿಚ್ಛಿಸಿದವರಿಗೆ ಅದನ್ನು ದಯಪಾಲಿಸುತ್ತಾನೆ. ಅಲ್ಲಾಹನು ಮಹಾ ಅನುಗ್ರಹಶಾಲಿಯಾಗಿದ್ದಾನೆ.