Al-Mumtahanah (She that is to be examined)
60. ಅಲ್ ಮುಮ್ತಹಿನಃ(ಪರೀಕ್ಷಿತ ಮಹಿಳೆ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
60:1
يَا أَيُّهَا الَّذِينَ آمَنُوا لَا تَتَّخِذُوا عَدُوِّي وَعَدُوَّكُمْ أَوْلِيَاءَ تُلْقُونَ إِلَيْهِمْ بِالْمَوَدَّةِ وَقَدْ كَفَرُوا بِمَا جَاءَكُمْ مِنَ الْحَقِّ يُخْرِجُونَ الرَّسُولَ وَإِيَّاكُمْ ۙ أَنْ تُؤْمِنُوا بِاللَّهِ رَبِّكُمْ إِنْ كُنْتُمْ خَرَجْتُمْ جِهَادًا فِي سَبِيلِي وَابْتِغَاءَ مَرْضَاتِي ۚ تُسِرُّونَ إِلَيْهِمْ بِالْمَوَدَّةِ وَأَنَا أَعْلَمُ بِمَا أَخْفَيْتُمْ وَمَا أَعْلَنْتُمْ ۚ وَمَنْ يَفْعَلْهُ مِنْكُمْ فَقَدْ ضَلَّ سَوَاءَ السَّبِيلِ ۞
ವಿಶ್ವಾಸಿಗಳೇ, ನನ್ನ ಶತ್ರು ಮತ್ತು ನಿಮ್ಮ ಶತ್ರುವನ್ನು ನೀವು ನಿಮ್ಮ ಆಪ್ತರಾಗಿಸಿ ಕೊಳ್ಳಬೇಡಿ. ನೀವು ಅವರೆಡೆಗೆ ಸ್ನೇಹದ ಸಂದೇಶಗಳನ್ನು ಕಳುಹಿಸುತ್ತಿರುವಿರಿ. ಆದರೆ ಅವರು, ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಧಿಕ್ಕರಿಸುತ್ತಿದ್ದಾರೆ. ನೀವು ನಿಮ್ಮೊಡೆಯನಾದ ಅಲ್ಲಾಹನನ್ನು ನಂಬಿರುವಿರಿ ಎಂಬ ಕಾರಣಕ್ಕಾಗಿ ಅವರು ದೇವ ದೂತರನ್ನು ಮತ್ತು ನಿಮ್ಮನ್ನು (ನಿಮ್ಮ ನಾಡಿನಿಂದ) ಹೊರ ಹಾಕುತ್ತಾರೆ. ನೀವು ನನ್ನ (ಅಲ್ಲಾಹನ) ಮಾರ್ಗದಲ್ಲಿ ಹೋರಾಡಲು ಹೊರಟವರಾಗಿದ್ದರೆ ಮತ್ತು ನನ್ನ ಮೆಚ್ಚುಗೆಯನ್ನು ಬಯಸುವವರಾಗಿದ್ದರೆ (ಶತ್ರುಗಳ ಸ್ನೇಹಕ್ಕಾಗಿ ಕಾತರಿಸಬೇಡಿ). ನೀವು ಗುಪ್ತವಾಗಿ ಅವರಿಗೆ ಸ್ನೇಹದ ಸಂದೇಶಗಳನ್ನು ಕಳುಹಿಸುತ್ತಿರುವಿರಿ. ನೀವು ಗುಪ್ತವಾಗಿಡುವ ಮತ್ತು ಬಹಿರಂಗ ಪಡಿಸುವ ಎಲ್ಲವನ್ನೂ ನಾನು ಬಲ್ಲೆನು. ನಿಮ್ಮ ಪೈಕಿ ಆ ಕೃತ್ಯವನ್ನು ಮಾಡಿದವರು ನೇರ ಮಾರ್ಗದಿಂದ ದೂರ ಸರಿದಿರುವರು.
60:2
إِنْ يَثْقَفُوكُمْ يَكُونُوا لَكُمْ أَعْدَاءً وَيَبْسُطُوا إِلَيْكُمْ أَيْدِيَهُمْ وَأَلْسِنَتَهُمْ بِالسُّوءِ وَوَدُّوا لَوْ تَكْفُرُونَ ۞
ಒಂದು ವೇಳೆ ನೀವು ಅವರ ನಿಯಂತ್ರಣಕ್ಕೆ ಸಿಕ್ಕಿದರೆ ಅವರು ನಿಮ್ಮ ಶತ್ರುಗಳಾಗಿ ಬಿಡುವರು ಮತ್ತು ನಿಮ್ಮನ್ನು ಹಿಂಸಿಸಲು ತಮ್ಮ ಕೈಗಳನ್ನೂ ನಾಲಗೆಗಳನ್ನೂ ಚಾಚುವರು. ಅವರು ನಿಮ್ಮನ್ನು ಧಿಕ್ಕಾರದೆಡೆಗೆ ಮರಳಿಸ ಬಯಸುತ್ತಾರೆ.
60:3
لَنْ تَنْفَعَكُمْ أَرْحَامُكُمْ وَلَا أَوْلَادُكُمْ ۚ يَوْمَ الْقِيَامَةِ يَفْصِلُ بَيْنَكُمْ ۚ وَاللَّهُ بِمَا تَعْمَلُونَ بَصِيرٌ ۞
ಪುನರುತ್ಥಾನ ದಿನ, ನಿಮ್ಮ ಬಂಧುಗಳಿಂದಾಗಲೀ ನಿಮ್ಮ ಮಕ್ಕಳಿಂದಾಗಲೀ ನಿಮಗೆ ಯಾವ ಲಾಭವೂ ಆಗದು. (ಅಂದು) ಅವನು (ಅಲ್ಲಾಹನು) ನಿಮ್ಮ ಮಧ್ಯೆ ತೀರ್ಪು ನೀಡಿ ಬಿಡುವನು ಮತ್ತು ಅಲ್ಲಾಹನು, ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ.
60:4
قَدْ كَانَتْ لَكُمْ أُسْوَةٌ حَسَنَةٌ فِي إِبْرَاهِيمَ وَالَّذِينَ مَعَهُ إِذْ قَالُوا لِقَوْمِهِمْ إِنَّا بُرَآءُ مِنْكُمْ وَمِمَّا تَعْبُدُونَ مِنْ دُونِ اللَّهِ كَفَرْنَا بِكُمْ وَبَدَا بَيْنَنَا وَبَيْنَكُمُ الْعَدَاوَةُ وَالْبَغْضَاءُ أَبَدًا حَتَّىٰ تُؤْمِنُوا بِاللَّهِ وَحْدَهُ إِلَّا قَوْلَ إِبْرَاهِيمَ لِأَبِيهِ لَأَسْتَغْفِرَنَّ لَكَ وَمَا أَمْلِكُ لَكَ مِنَ اللَّهِ مِنْ شَيْءٍ ۖ رَبَّنَا عَلَيْكَ تَوَكَّلْنَا وَإِلَيْكَ أَنَبْنَا وَإِلَيْكَ الْمَصِيرُ ۞
ಇಬ್ರಾಹೀಮ್ ಹಾಗೂ ಅವರ ಜೊತೆಗಿದ್ದವರಲ್ಲಿ ನಿಮಗೆ ಶ್ರೇಷ್ಠ ಆದರ್ಶವಿದೆ. ‘‘ನಾವು ನಿಮ್ಮಿಂದ ಹಾಗೂ ಅಲ್ಲಾಹನ ಹೊರತು ನೀವು ಪೂಜಿಸುವ ಎಲ್ಲವುಗಳಿಂದ ಸಂಬಂಧ ಕಡಿದು ಕೊಂಡಿರುವೆವು. ಏಕ ಮಾತ್ರನಾದ ಅಲ್ಲಾಹನನ್ನು ನೀವು ನಂಬುವ ತನಕವೂ ನಾವು ನಿಮ್ಮನ್ನು ಧಿಕ್ಕರಿಸುವೆವು ಮತ್ತು ನಮ್ಮ ಹಾಗೂ ನಿಮ್ಮ ನಡುವೆ ಶಾಶ್ವತವಾಗಿ ದ್ವೇಷ ಮತ್ತು ವೈಷಮ್ಯವಿರುವುದು’’ ಎಂದು ಅವರು ತಮ್ಮ ಜನಾಂಗದವರೊಡನೆ ಹೇಳಿದ್ದರು. ಆದರೆ ಇಬ್ರಾಹೀಮರು ತಮ್ಮ ತಂದೆಯೊಡನೆ ಹೇಳಿದ್ದ ಒಂದು ಮಾತು ಇದಕ್ಕೆ ಹೊರತಾಗಿದೆ (ಅದು ನಿಮಗೆ ಆದರ್ಶವಲ್ಲ). ಅವರು ಹೇಳಿದ್ದರು; ‘‘ನಾನು ನಿಮ್ಮ ಕ್ಷಮೆಗಾಗಿ ಖಂಡಿತ ಪ್ರಾರ್ಥಿಸುವೆನು. ಆದರೆ ಅಲ್ಲಾಹನೆದುರು ಮಾತ್ರ ನಿಮಗಾಗಿ ಏನು ಮಾಡಲಿಕ್ಕೂ ನಾನು ಶಕ್ತನಲ್ಲ. ನಮ್ಮೊಡೆಯಾ, ನಾವು ನಿನ್ನಲ್ಲೇ ಭರವಸೆ ಇಟ್ಟಿರುವೆವು. ನಿನ್ನ ಕಡೆಗೇ ಒಲಿಯುತ್ತಿರುವೆವು ಮತ್ತು ನಿನ್ನೆಡೆಗೇ (ನಾವು) ಮರಳಬೇಕಾಗಿದೆ’’
60:5
رَبَّنَا لَا تَجْعَلْنَا فِتْنَةً لِلَّذِينَ كَفَرُوا وَاغْفِرْ لَنَا رَبَّنَا ۖ إِنَّكَ أَنْتَ الْعَزِيزُ الْحَكِيمُ ۞
‘‘ನಮ್ಮೊಡೆಯಾ, ನಮ್ಮನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಬೇಡ (ನಮ್ಮನ್ನು ಅವರ ಹಿಂಸೆಗೆ ತುತ್ತಾಗಿಸಬೇಡ), ಮತ್ತು ನಮ್ಮೊಡೆಯಾ, ನಮ್ಮನ್ನು ಕ್ಷಮಿಸು. ನೀನು ಖಂಡಿತ ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿರುವೆ.’’
60:6
لَقَدْ كَانَ لَكُمْ فِيهِمْ أُسْوَةٌ حَسَنَةٌ لِمَنْ كَانَ يَرْجُو اللَّهَ وَالْيَوْمَ الْآخِرَ ۚ وَمَنْ يَتَوَلَّ فَإِنَّ اللَّهَ هُوَ الْغَنِيُّ الْحَمِيدُ ۞
ನಿಮಗೆ ಹಾಗೂ ಅಲ್ಲಾಹನ ಕುರಿತೂ ಪರಲೋಕದ ಕುರಿತೂ ಶುಭ ನಿರೀಕ್ಷೆ ಉಳ್ಳವರಿಗೆ ಅವರಲ್ಲಿ ಶ್ರೇಷ್ಠ ಆದರ್ಶವಿದೆ. ಇನ್ನು, ಅದನ್ನು ಕಡೆಗಣಿಸುವವನು (ತಿಳಿದಿರಲಿ); ಅಲ್ಲಾಹನು ಖಂಡಿತ ಅಪಾರ ಸಂಪನ್ನನೂ ಪ್ರಶಂಸಾರ್ಹನೂ ಆಗಿರುವನು.
60:7
۞ عَسَى اللَّهُ أَنْ يَجْعَلَ بَيْنَكُمْ وَبَيْنَ الَّذِينَ عَادَيْتُمْ مِنْهُمْ مَوَدَّةً ۚ وَاللَّهُ قَدِيرٌ ۚ وَاللَّهُ غَفُورٌ رَحِيمٌ ۞
ಅಲ್ಲಾಹನು, ನಿಮ್ಮ ಹಾಗೂ ನಿಮ್ಮ ಶತ್ರುಗಳ ನಡುವೆ ಸ್ನೇಹವನ್ನು ಬೆಳೆಸಬಹುದು. ಅಲ್ಲಾಹನು ಶಕ್ತನಾಗಿದ್ದಾನೆ ಮತ್ತು ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
60:8
لَا يَنْهَاكُمُ اللَّهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُمْ مِنْ دِيَارِكُمْ أَنْ تَبَرُّوهُمْ وَتُقْسِطُوا إِلَيْهِمْ ۚ إِنَّ اللَّهَ يُحِبُّ الْمُقْسِطِينَ ۞
ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.
60:9
إِنَّمَا يَنْهَاكُمُ اللَّهُ عَنِ الَّذِينَ قَاتَلُوكُمْ فِي الدِّينِ وَأَخْرَجُوكُمْ مِنْ دِيَارِكُمْ وَظَاهَرُوا عَلَىٰ إِخْرَاجِكُمْ أَنْ تَوَلَّوْهُمْ ۚ وَمَنْ يَتَوَلَّهُمْ فَأُولَٰئِكَ هُمُ الظَّالِمُونَ ۞
ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಸಾರಿದವರು, ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿದವರು ಮತ್ತು ನಿಮ್ಮನ್ನು ಹೊರ ಹಾಕುವುದಕ್ಕೆ ಇತರರಿಗೆ ನೆರವಾದವರು - ಅವರನ್ನು ಮಾತ್ರ ನೀವು ನಿಮ್ಮ ಆಪ್ತರಾಗಿಸಿ ಕೊಳ್ಳದಂತೆ ಅಲ್ಲಾಹನು ನಿಮ್ಮನ್ನು ತಡೆದಿರುವನು. ಅಂಥವರನ್ನು ತಮ್ಮ ಆಪ್ತರಾಗಿಸಿ ಕೊಂಡವರೇ ಅಕ್ರಮಿಗಳು.
60:10
يَا أَيُّهَا الَّذِينَ آمَنُوا إِذَا جَاءَكُمُ الْمُؤْمِنَاتُ مُهَاجِرَاتٍ فَامْتَحِنُوهُنَّ ۖ اللَّهُ أَعْلَمُ بِإِيمَانِهِنَّ ۖ فَإِنْ عَلِمْتُمُوهُنَّ مُؤْمِنَاتٍ فَلَا تَرْجِعُوهُنَّ إِلَى الْكُفَّارِ ۖ لَا هُنَّ حِلٌّ لَهُمْ وَلَا هُمْ يَحِلُّونَ لَهُنَّ ۖ وَآتُوهُمْ مَا أَنْفَقُوا ۚ وَلَا جُنَاحَ عَلَيْكُمْ أَنْ تَنْكِحُوهُنَّ إِذَا آتَيْتُمُوهُنَّ أُجُورَهُنَّ ۚ وَلَا تُمْسِكُوا بِعِصَمِ الْكَوَافِرِ وَاسْأَلُوا مَا أَنْفَقْتُمْ وَلْيَسْأَلُوا مَا أَنْفَقُوا ۚ ذَٰلِكُمْ حُكْمُ اللَّهِ ۖ يَحْكُمُ بَيْنَكُمْ ۚ وَاللَّهُ عَلِيمٌ حَكِيمٌ ۞
ವಿಶ್ವಾಸಿಗಳೇ; ವಲಸಿಗರಾದ ವಿಶ್ವಾಸಿ ಸ್ತ್ರೀಯರು ನಿಮ್ಮ ಬಳಿಗೆ ಬಂದಾಗ ಅವರನ್ನು ಪರೀಕ್ಷಿಸಿರಿ. ಅವರ ವಿಶ್ವಾಸದ ಕುರಿತು ಅಲ್ಲಾಹನು ಹೆಚ್ಚು ಬಲ್ಲನು. ಅವರು ವಿಶ್ವಾಸಿನಿಯರೆಂದು ನಿಮಗೆ ತಿಳಿದಿದ್ದರೆ ಅವರನ್ನು ಧಿಕ್ಕಾರಿಗಳ ಬಳಿಗೆ ಮರಳಿಸಬೇಡಿ. ಅವರು (ಆ ಸ್ತ್ರೀಯರು) ಅವರ ಪಾಲಿಗೆ ಸಮ್ಮತರಲ್ಲ. ಮತ್ತು ಅವರು (ಧಿಕ್ಕಾರಿಗಳು) ಇವರ ಪಾಲಿಗೂ ಸಮ್ಮತರಲ್ಲ. ಅವರು (ಇವರಿಗಾಗಿ) ಖರ್ಚು ಮಾಡಿದ್ದನ್ನು (ಮಹ್ರ್ ಇತ್ಯಾದಿಯನ್ನು) ಅವರಿಗೆ ಮರಳಿಸಿರಿ. ನೀವು ಅವರ ವಿವಾಹ ಶುಲ್ಕ (ಮಹರ್) ವನ್ನು ಪಾವತಿಸಿ ಅವರನ್ನು ವಿವಾಹವಾಗುವುದರಲ್ಲಿ ಪಾಪವೇನಿಲ್ಲ. ಮತ್ತು ನೀವು ಧಿಕ್ಕಾರಿ ಮಹಿಳೆಯರನ್ನು (ಪತ್ನಿಯರಾಗಿ) ಉಳಿಸಿಕೊಳ್ಳಬೇಡಿ. ಅವರಿಗಾಗಿ ನೀವು ಖರ್ಚು ಮಾಡಿದ್ದನ್ನು ನೀವು ಅವರಿಂದ (ಧಿಕ್ಕಾರಿಗಳಿಂದ) ಪಡೆಯಿರಿ. ಅವರು (ಧಿಕ್ಕಾರಿಗಳು) ತಾವು ಖರ್ಚು ಮಾಡಿದ್ದನ್ನು ನಿಮ್ಮಿಂದ ಪಡೆಯಲಿ. ಇದು ಅಲ್ಲಾಹನ ಆದೇಶ. ಅವನು ನಿಮ್ಮ ನಡುವೆ ತೀರ್ಪನ್ನು ನೀಡುತ್ತಾನೆ. ಅಲ್ಲಾಹನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.
60:11
وَإِنْ فَاتَكُمْ شَيْءٌ مِنْ أَزْوَاجِكُمْ إِلَى الْكُفَّارِ فَعَاقَبْتُمْ فَآتُوا الَّذِينَ ذَهَبَتْ أَزْوَاجُهُمْ مِثْلَ مَا أَنْفَقُوا ۚ وَاتَّقُوا اللَّهَ الَّذِي أَنْتُمْ بِهِ مُؤْمِنُونَ ۞
ನಿಮ್ಮ ಪತ್ನಿಯರಲ್ಲಿ ಯಾರಾದರೂ ಧಿಕ್ಕಾರಿಗಳೆಡೆಗೆ ಹೊರಟು ಹೋಗಿದ್ದರೆ, ಮುಂದೆ ನಿಮಗೆ ಪ್ರಾಬಲ್ಯ ಪ್ರಾಪ್ತವಾದಾಗ, ಯಾರ ಪತ್ನಿಯರು ಹೊರಟು ಹೋಗಿದ್ದರೋ ಅವರಿಗೆ, ಅವರು ಖರ್ಚು ಮಾಡಿದ್ದಷ್ಟನ್ನು ಪಾವತಿಸಿರಿ. ನೀವು ನಂಬಿರುವ ಅಲ್ಲಾಹನಿಗೆ ಅಂಜಿರಿ.
60:12
يَا أَيُّهَا النَّبِيُّ إِذَا جَاءَكَ الْمُؤْمِنَاتُ يُبَايِعْنَكَ عَلَىٰ أَنْ لَا يُشْرِكْنَ بِاللَّهِ شَيْئًا وَلَا يَسْرِقْنَ وَلَا يَزْنِينَ وَلَا يَقْتُلْنَ أَوْلَادَهُنَّ وَلَا يَأْتِينَ بِبُهْتَانٍ يَفْتَرِينَهُ بَيْنَ أَيْدِيهِنَّ وَأَرْجُلِهِنَّ وَلَا يَعْصِينَكَ فِي مَعْرُوفٍ ۙ فَبَايِعْهُنَّ وَاسْتَغْفِرْ لَهُنَّ اللَّهَ ۖ إِنَّ اللَّهَ غَفُورٌ رَحِيمٌ ۞
ಪ್ರವಾದಿವರ್ಯರೇ, ವಿಶ್ವಾಸಿ ಮಹಿಳೆಯರು ತಮ್ಮ ಬಳಿಗೆ ಬಂದು, ತಾವು ಅಲ್ಲಾಹನ ಜೊತೆ ಏನನ್ನೂ ಪಾಲುಗೊಳಿಸುವುದಿಲ್ಲ, ಕಳ್ಳತನ ಮಾಡುವುದಿಲ್ಲ, ವ್ಯಭಿಚಾರವೆಸಗುವುದಿಲ್ಲ, ತಮ್ಮ ಸಂತತಿಯ ಹತ್ಯೆ ಮಾಡುವುದಿಲ್ಲ, ಉದ್ದೇಶಪೂರ್ವಕ ಯಾವುದೇ ಸುಳ್ಳಾರೋಪವನ್ನು ಸ್ವತಃ ರಚಿಸಿ ತರುವುದಿಲ್ಲ (ತಮ್ಮದಲ್ಲದ ಮಗುವನ್ನು ತಮ್ಮದೆಂದು ಪತಿಯನ್ನು ನಂಬಿಸಿ ವಂಚಿಸುವುದಿಲ್ಲ) ಮತ್ತು ಸತ್ಕಾರ್ಯದಲ್ಲಿ ನಿಮ್ಮ ಆದೇಶವನ್ನು ಉಲ್ಲಂಘಿಸುವುದಿಲ್ಲ - ಎಂದು ಪ್ರಮಾಣ ಮಾಡ ಬಯಸಿದರೆ ಅವರ ಪ್ರಮಾಣವನ್ನು ಸ್ವೀಕರಿಸಿರಿ. ಮತ್ತು ಅಲ್ಲಾಹನ ಬಳಿ ಅವರ ಕ್ಷಮೆಗಾಗಿ ಪ್ರಾರ್ಥಿಸಿರಿ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ.
60:13
يَا أَيُّهَا الَّذِينَ آمَنُوا لَا تَتَوَلَّوْا قَوْمًا غَضِبَ اللَّهُ عَلَيْهِمْ قَدْ يَئِسُوا مِنَ الْآخِرَةِ كَمَا يَئِسَ الْكُفَّارُ مِنْ أَصْحَابِ الْقُبُورِ ۞
ವಿಶ್ವಾಸಿಗಳೇ, ಅಲ್ಲಾಹನ ಕೋಪಕ್ಕೆ ತುತ್ತಾಗುವವರನ್ನು ನಿಮ್ಮ ಆಪ್ತರಾಗಿಸಿಕೊಳ್ಳಬೇಡಿ. ಧಿಕ್ಕಾರಿಗಳು, ಗೋರಿಗಳಲ್ಲಿರುವವರ (ಮರು ಜೀವನದ) ಕುರಿತು ನಿರಾಶರಾಗಿರುವಂತೆಯೇ, ಅವರು (ಅಲ್ಲಾಹನ ಕೋಪಕ್ಕೆ ಪಾತ್ರರಾದವರು) ಪರಲೋಕದ ಕುರಿತು ನಿರಾಶರಾಗಿರುವರು.