Al-Anfal (The spoils of war)
8. ಅಲ್ ಅನ್‌ಫಾಲ್ (ಸಮರ ಸಂಪತ್)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
8:1
يَسْأَلُونَكَ عَنِ الْأَنْفَالِ ۖ قُلِ الْأَنْفَالُ لِلَّهِ وَالرَّسُولِ ۖ فَاتَّقُوا اللَّهَ وَأَصْلِحُوا ذَاتَ بَيْنِكُمْ ۖ وَأَطِيعُوا اللَّهَ وَرَسُولَهُ إِنْ كُنْتُمْ مُؤْمِنِينَ ۞
(ದೂತರೇ,) ಅವರು ನಿಮ್ಮೊಡನೆ, ಯುದ್ಧದಲ್ಲಿ ಸಿಕ್ಕಿದ ಸಂಪತ್ತಿನ ಕುರಿತು ಕೇಳುತ್ತಾರೆ. ಹೇಳಿರಿ; ಯುದ್ಧ ಸಂಪತ್ತು ಅಲ್ಲಾಹನಿಗೆ ಮತ್ತು ಅವನ ದೂತನಿಗೆ ಸೇರಿದೆ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನಿಗೆ ಅಂಜಿರಿ ಹಾಗೂ ಪರಸ್ಪರ ಸಂಬಂಧಗಳನ್ನು ಸುಧಾರಿಸಿಕೊಳ್ಳಿರಿ ಮತ್ತು ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ.
8:2
إِنَّمَا الْمُؤْمِنُونَ الَّذِينَ إِذَا ذُكِرَ اللَّهُ وَجِلَتْ قُلُوبُهُمْ وَإِذَا تُلِيَتْ عَلَيْهِمْ آيَاتُهُ زَادَتْهُمْ إِيمَانًا وَعَلَىٰ رَبِّهِمْ يَتَوَكَّلُونَ ۞
ಖಂಡಿತವಾಗಿಯೂ ಅಲ್ಲಾಹನ ಹೆಸರೆತ್ತಿದಾಗ ವಿಶ್ವಾಸಿಗಳ ಹೃದಯಗಳಲ್ಲಿ ಭಕ್ತಿ ಉಕ್ಕುತ್ತದೆ ಹಾಗೂ ಅವರ ಮುಂದೆ ಅವನ ವಚನಗಳನ್ನು ಓದಲಾದಾಗ ಅವರ ವಿಶ್ವಾಸವು ಬಲಿಷ್ಠವಾಗುತ್ತದೆ ಮತ್ತು ಅವರು ತಮ್ಮ ಒಡೆಯನಲ್ಲಿ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ.
8:3
الَّذِينَ يُقِيمُونَ الصَّلَاةَ وَمِمَّا رَزَقْنَاهُمْ يُنْفِقُونَ ۞
ಅವರು ನಮಾಝನ್ನು ಪಾಲಿಸುತ್ತಾರೆ ಮತ್ತು ಅವರಿಗೆ ನಾವು ನೀಡಿರುವ ಸಂಪತ್ತಿನಿಂದ (ಸತ್ಕಾರ್ಯಕ್ಕೆ) ಖರ್ಚು ಮಾಡುತ್ತಾರೆ.
8:4
أُولَٰئِكَ هُمُ الْمُؤْمِنُونَ حَقًّا ۚ لَهُمْ دَرَجَاتٌ عِنْدَ رَبِّهِمْ وَمَغْفِرَةٌ وَرِزْقٌ كَرِيمٌ ۞
ಅವರೇ ನೈಜ ವಿಶ್ವಾಸಿಗಳು. ಅವರಿಗಾಗಿ ಅವರ ಒಡೆಯನ ಬಳಿ ಉನ್ನತ ಸ್ಥಾನಗಳಿವೆ, ಕ್ಷಮೆ ಇದೆ ಮತ್ತು ಧಾರಾಳ ಸಂಪತ್ತಿದೆ.
8:5
كَمَا أَخْرَجَكَ رَبُّكَ مِنْ بَيْتِكَ بِالْحَقِّ وَإِنَّ فَرِيقًا مِنَ الْمُؤْمِنِينَ لَكَارِهُونَ ۞
(ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರ ತಂದಿದ್ದಾಗ ವಿಶ್ವಾಸಿಗಳ ಒಂದು ಪಂಗಡವು ಆ ಕುರಿತು ಅತೃಪ್ತವಾಗಿತ್ತು.
8:6
يُجَادِلُونَكَ فِي الْحَقِّ بَعْدَمَا تَبَيَّنَ كَأَنَّمَا يُسَاقُونَ إِلَى الْمَوْتِ وَهُمْ يَنْظُرُونَ ۞
ಸತ್ಯವು ಬಹಳ ಸ್ಪಷ್ಟವಾಗಿ ಪ್ರಕಟವಾದ ಬಳಿಕವೂ ಅವರು ಆ ಕುರಿತು ನಿಮ್ಮೊಡನೆ ವಾದಕ್ಕಿಳಿಯುತ್ತಿದ್ದರು - ಅವರು ಕಣ್ಣಾರೆ ಕಾಣುತ್ತಿರುವಂತಹ ಮರಣದೆಡೆಗೆ ಅವರನ್ನು ಅಟ್ಟಲಾಗುತ್ತಿದೆಯೇ ಎಂಬಂತೆ.
8:7
وَإِذْ يَعِدُكُمُ اللَّهُ إِحْدَى الطَّائِفَتَيْنِ أَنَّهَا لَكُمْ وَتَوَدُّونَ أَنَّ غَيْرَ ذَاتِ الشَّوْكَةِ تَكُونُ لَكُمْ وَيُرِيدُ اللَّهُ أَنْ يُحِقَّ الْحَقَّ بِكَلِمَاتِهِ وَيَقْطَعَ دَابِرَ الْكَافِرِينَ ۞
ಎರಡು ಗುಂಪುಗಳ ಪೈಕಿ ಒಂದು ನಿಮ್ಮ ವಶವಾಗುವುದೆಂದು ಅಲ್ಲಾಹನು ನಿಮಗೆ ವಾಗ್ದಾನ ಮಾಡಿದಾಗ, ಆಯುಧವಿಲ್ಲದ ಗುಂಪು ನಿಮ್ಮದಾಗಬೇಕೆಂದು ನೀವು (ದೂತರ ಕೆಲವು ಸಮಕಾಲೀನರು) ಅಪೇಕ್ಷಿಸಿದ್ದಿರಿ. ಆದರೆ ಅಲ್ಲಾಹನು ಮಾತ್ರ ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವೆಂದು ಸಾಬೀತುಪಡಿಸಲು ಹಾಗೂ ಧಿಕ್ಕಾರಿಗಳ ಮೂಲವನ್ನೇ ಮುರಿಯಲು ತೀರ್ಮಾನಿಸಿದ್ದನು.
8:8
لِيُحِقَّ الْحَقَّ وَيُبْطِلَ الْبَاطِلَ وَلَوْ كَرِهَ الْمُجْرِمُونَ ۞
ಸತ್ಯವನ್ನು ಸತ್ಯವೆಂದು ಹಾಗೂ ಮಿಥ್ಯವನ್ನು ಮಿಥ್ಯವೆಂದು ಸಾಬೀತು ಪಡಿಸಲಿಕ್ಕಾಗಿ - ಅದು ಅಪರಾಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.
8:9
إِذْ تَسْتَغِيثُونَ رَبَّكُمْ فَاسْتَجَابَ لَكُمْ أَنِّي مُمِدُّكُمْ بِأَلْفٍ مِنَ الْمَلَائِكَةِ مُرْدِفِينَ ۞
(ನೆನಪಿಸಿಕೊಳ್ಳಿರಿ;) ನೀವು ನಿಮ್ಮ ಒಡೆಯನೊಡನೆ ನೆರವನ್ನು ಬೇಡಿದಾಗ, ಬೆನ್ನು ಬೆನ್ನಿಗೇ ಬರುವ ಸಾವಿರ ಮಲಕ್‌ಗಳ ಮೂಲಕ ನಿಮಗೆ ನೆರವಾಗುವೆನೆಂದು ಅವನು ನಿಮಗೆ ಉತ್ತರಿಸಿದನು.
8:10
وَمَا جَعَلَهُ اللَّهُ إِلَّا بُشْرَىٰ وَلِتَطْمَئِنَّ بِهِ قُلُوبُكُمْ ۚ وَمَا النَّصْرُ إِلَّا مِنْ عِنْدِ اللَّهِ ۚ إِنَّ اللَّهَ عَزِيزٌ حَكِيمٌ ۞
ಅದು, ನಿಮ್ಮ ಮನಸ್ಸುಗಳು ಸಂತೃಪ್ತವಾಗಲೆಂದು ಅಲ್ಲಾಹನು ಕಳುಹಿಸಿದ್ದ ಶುಭವಾರ್ತೆಯಾಗಿತ್ತು. ನಿಜವಾಗಿ, ನೆರವು ಅಲ್ಲಾಹನ ಹೊರತು ಬೇರೆ ಯಾರಿಂದಲೂ ಸಿಗುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.
8:11
إِذْ يُغَشِّيكُمُ النُّعَاسَ أَمَنَةً مِنْهُ وَيُنَزِّلُ عَلَيْكُمْ مِنَ السَّمَاءِ مَاءً لِيُطَهِّرَكُمْ بِهِ وَيُذْهِبَ عَنْكُمْ رِجْزَ الشَّيْطَانِ وَلِيَرْبِطَ عَلَىٰ قُلُوبِكُمْ وَيُثَبِّتَ بِهِ الْأَقْدَامَ ۞
ಅವನು (ಯುದ್ಧದ ನಡುವೆ) ನಿಮಗೆ ಮಂಪರು ಬರಿಸಿದಾಗ, ಅದು ಅವನ ಕಡೆಯಿಂದ ಕಳಿಸಲಾದ ನೆಮ್ಮದಿಯಾಗಿತ್ತು. ಇನ್ನು ನಿಮ್ಮನ್ನು ಶುಚೀಕರಿಸಲಿಕ್ಕಾಗಿ, ನಿಮ್ಮಿಂದ ಶೈತಾನನ ಮಾಲಿನ್ಯವನ್ನು ನಿವಾರಿಸಲಿಕ್ಕಾಗಿ, ನಿಮ್ಮ ಮನಸ್ಸುಗಳನ್ನು ಸ್ಥಿರಗೊಳಿಸಲಿಕ್ಕಾಗಿ ಹಾಗೂ ನಿಮ್ಮ ಹೆಜ್ಜೆಗಳನ್ನು ಭದ್ರಗೊಳಿಸುವುದಕ್ಕಾಗಿ ಅವನು ನಿಮ್ಮ ಮೇಲೆ ಆಕಾಶದಿಂದ ನೀರನ್ನು ಸುರಿಸಿದನು.
8:12
إِذْ يُوحِي رَبُّكَ إِلَى الْمَلَائِكَةِ أَنِّي مَعَكُمْ فَثَبِّتُوا الَّذِينَ آمَنُوا ۚ سَأُلْقِي فِي قُلُوبِ الَّذِينَ كَفَرُوا الرُّعْبَ فَاضْرِبُوا فَوْقَ الْأَعْنَاقِ وَاضْرِبُوا مِنْهُمْ كُلَّ بَنَانٍ ۞
ಮುಂದೆ, ನಿಮ್ಮ ಒಡೆಯನು ಮಲಕ್‌ಗಳಿಗೆ - ‘‘ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ವಿಶ್ವಾಸಿಗಳನ್ನು ನೀವು ಸ್ಥಿರವಾಗಿಡಿರಿ. ನಾನು ಧಿಕ್ಕಾರಿಗಳ ಮನದಲ್ಲಿ ಆತಂಕವನ್ನು ಬಿತ್ತಲಿದ್ದೇನೆ, ನೀವು ಅವರ ಕೊರಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಬೆರಳ ತುದಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳುಹಿಸಿದನು.
8:13
ذَٰلِكَ بِأَنَّهُمْ شَاقُّوا اللَّهَ وَرَسُولَهُ ۚ وَمَنْ يُشَاقِقِ اللَّهَ وَرَسُولَهُ فَإِنَّ اللَّهَ شَدِيدُ الْعِقَابِ ۞
ಇದೇಕೆಂದರೆ, ಅವರು (ಧಿಕ್ಕಾರಿಗಳು) ಅಲ್ಲಾಹ್ ಮತ್ತವನ ದೂತರ ವಿರೋಧಿಗಳಾಗಿದ್ದರು. ಅಲ್ಲಾಹ್ ಮತ್ತು ಅವನ ದೂತರ ವಿರೋಧಿಗಳಿಗೆ ಅಲ್ಲಾಹನು ಖಂಡಿತ ಕಠಿಣ ಶಿಕ್ಷೆ ವಿಧಿಸುತ್ತಾನೆ.
8:14
ذَٰلِكُمْ فَذُوقُوهُ وَأَنَّ لِلْكَافِرِينَ عَذَابَ النَّارِ ۞
ನೀವು ಇದನ್ನು ಸವಿಯಿರಿ. ಧಿಕ್ಕಾರಿಗಳಿಗೆ ನರಕಾಗ್ನಿಯ ಶಿಕ್ಷೆಯೇ ಗತಿ (ಎಂದು ಅವರೊಡನೆ ಹೇಳಲಾಗುವುದು).
8:15
يَا أَيُّهَا الَّذِينَ آمَنُوا إِذَا لَقِيتُمُ الَّذِينَ كَفَرُوا زَحْفًا فَلَا تُوَلُّوهُمُ الْأَدْبَارَ ۞
ವಿಶ್ವಾಸಿಗಳೇ, ಯುದ್ಧರಂಗದಲ್ಲಿ ನಿಮಗೆ ಧಿಕ್ಕಾರಿಗಳು ಎದುರಾದಾಗ ಅವರಿಗೆ ಬೆನ್ನು ತೋರಿಸಬೇಡಿ.
8:16
وَمَنْ يُوَلِّهِمْ يَوْمَئِذٍ دُبُرَهُ إِلَّا مُتَحَرِّفًا لِقِتَالٍ أَوْ مُتَحَيِّزًا إِلَىٰ فِئَةٍ فَقَدْ بَاءَ بِغَضَبٍ مِنَ اللَّهِ وَمَأْوَاهُ جَهَنَّمُ ۖ وَبِئْسَ الْمَصِيرُ ۞
ಯುದ್ಧ ತಂತ್ರಕ್ಕಾಗಿ ಅಥವಾ ತನ್ನ ಪಡೆಯನ್ನು ಸೇರಿಕೊಳ್ಳುವುದಕ್ಕಾಗಿಯಲ್ಲದೆ (ಬೇರಾವುದೇ ಕಾರಣಕ್ಕಾಗಿ) ಅಂದು ಬೆನ್ನು ತೋರಿದವನು ಅಲ್ಲಾಹನ ಕೋಪವನ್ನು ಸೆಳೆದುಕೊಂಡನು ಮತ್ತು ನರಕವೇ ಅವನ ನೆಲೆಯಾಗಿರುವುದು - ಅದು ತುಂಬಾ ಕೆಟ್ಟ ನೆಲೆ.
8:17
فَلَمْ تَقْتُلُوهُمْ وَلَٰكِنَّ اللَّهَ قَتَلَهُمْ ۚ وَمَا رَمَيْتَ إِذْ رَمَيْتَ وَلَٰكِنَّ اللَّهَ رَمَىٰ ۚ وَلِيُبْلِيَ الْمُؤْمِنِينَ مِنْهُ بَلَاءً حَسَنًا ۚ إِنَّ اللَّهَ سَمِيعٌ عَلِيمٌ ۞
(ದೂತರೇ,) ಅವರನ್ನು (ಯುದ್ಧದಲ್ಲಿ ಶತ್ರುಗಳನ್ನು) ಕೊಂದದ್ದು ನೀವಲ್ಲ. ನಿಜವಾಗಿ ಅಲ್ಲಾಹನೇ ಅವರನ್ನು ಕೊಂದಿರುವನು. ನೀವು ಅದನ್ನು (ಹಿಡಿಮಣ್ಣನ್ನು) ಎಸೆದಾಗ, ನಿಜವಾಗಿ ಅದನ್ನು ಎಸೆದವರು ನೀವಲ್ಲ - ಅಲ್ಲಾಹನೇ ಅದನ್ನು ಎಸೆದಿದ್ದನು. ಅವನು ತನ್ನ ಕಡೆಯಿಂದ, ವಿಶ್ವಾಸಿಗಳನ್ನು ಶ್ರೇಷ್ಠ ಪರೀಕ್ಷೆಗೆ ಒಳಪಡಿಸ ಬಯಸಿದ್ದನು. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.
8:18
ذَٰلِكُمْ وَأَنَّ اللَّهَ مُوهِنُ كَيْدِ الْكَافِرِينَ ۞
ಇದಲ್ಲದೆ, ಅಲ್ಲಾಹನು ಧಿಕ್ಕಾರಿಗಳ ಸಂಚುಗಳನ್ನು ಖಂಡಿತ ವಿಫಲಗೊಳಿಸುವನು.
8:19
إِنْ تَسْتَفْتِحُوا فَقَدْ جَاءَكُمُ الْفَتْحُ ۖ وَإِنْ تَنْتَهُوا فَهُوَ خَيْرٌ لَكُمْ ۖ وَإِنْ تَعُودُوا نَعُدْ وَلَنْ تُغْنِيَ عَنْكُمْ فِئَتُكُمْ شَيْئًا وَلَوْ كَثُرَتْ وَأَنَّ اللَّهَ مَعَ الْمُؤْمِنِينَ ۞
ನೀವು ಬಯಸುವುದು ತೀರ್ಪನ್ನಾದರೆ, ಇದೋ ಬಂದು ಬಿಟ್ಟಿತು ನಿಮ್ಮ ಬಳಿಗೆ (ಸತ್ಯದ) ವಿಜಯ. (ಧಿಕ್ಕಾರಿಗಳೇ,) ನೀವಿನ್ನು ದೂರ ನಿಂತರೆ ಅದು ನಿಮ್ಮ ಪಾಲಿಗೇ ಉತ್ತಮ. ಒಂದು ವೇಳೆ ನೀವು (ಹಳೆಯ ನೀತಿಯನ್ನೇ) ಪುನರಾವರ್ತಿಸಿದರೆ, ನಾವೂ ಪುನರಾವರ್ತಿಸುವೆವು. (ಆಗ) ನಿಮ್ಮ ಪಡೆಯು ಎಷ್ಟು ದೊಡ್ಡದಿದ್ದರೂ, ನಿಮಗೇನೂ ಪ್ರಯೋಜನವಾಗದು. ಅಲ್ಲಾಹನಂತು ಖಂಡಿತ ವಿಶ್ವಾಸಿಗಳ ಜೊತೆಗಿದ್ದಾನೆ.
8:20
يَا أَيُّهَا الَّذِينَ آمَنُوا أَطِيعُوا اللَّهَ وَرَسُولَهُ وَلَا تَوَلَّوْا عَنْهُ وَأَنْتُمْ تَسْمَعُونَ ۞
ವಿಶ್ವಾಸಿಗಳೇ, ಅಲ್ಲಾಹನ ಮತ್ತು ಅವನ ದೂತರ ಆಜ್ಞಾಪಾಲನೆ ಮಾಡಿರಿ. (ಅವರ ಆದೇಶಗಳನ್ನು) ಕೇಳುತ್ತಾ ನೀವು ಅವುಗಳನ್ನು ಕಡೆಗಣಿಸಬೇಡಿ.
8:21
وَلَا تَكُونُوا كَالَّذِينَ قَالُوا سَمِعْنَا وَهُمْ لَا يَسْمَعُونَ ۞
‘‘ನಾವು ಕೇಳಿದೆವು’’ ಎನ್ನುತ್ತಾ ನಿಜವಾಗಿ ಕೇಳದಿರುವ ಜನರಂತೆ ನೀವಾಗಬೇಡಿ.
8:22
۞ إِنَّ شَرَّ الدَّوَابِّ عِنْدَ اللَّهِ الصُّمُّ الْبُكْمُ الَّذِينَ لَا يَعْقِلُونَ ۞
(ಈರೀತಿ) ಕಿವುಡರೂ ಮೂಗರೂ ಆಗಿರುವವರು ಮತ್ತು ಆಲೋಚಿಸದವರೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ಜೀವಿಗಳಾಗಿದ್ದಾರೆ.
8:23
وَلَوْ عَلِمَ اللَّهُ فِيهِمْ خَيْرًا لَأَسْمَعَهُمْ ۖ وَلَوْ أَسْمَعَهُمْ لَتَوَلَّوْا وَهُمْ مُعْرِضُونَ ۞
ಅವರಲ್ಲಿ ಒಳಿತೇನಾದರೂ ಉಂಟೆಂದು ಅಲ್ಲಾಹನಿಗೆ ತಿಳಿದಿದ್ದರೆ, ಅವನು ಖಂಡಿತ ಅವರಿಗೆ ಕೇಳಿಸುತ್ತಿದ್ದನು. ಇನ್ನು ಒಂದು ವೇಳೆ ಅವನು ಅವರಿಗೆ ಕೇಳಿಸಿದರೂ ಅವರಂತು (ಸತ್ಯವನ್ನು) ಕಡೆಗಣಿಸುವವರೇ ಆಗಿದ್ದಾರೆ.
8:24
يَا أَيُّهَا الَّذِينَ آمَنُوا اسْتَجِيبُوا لِلَّهِ وَلِلرَّسُولِ إِذَا دَعَاكُمْ لِمَا يُحْيِيكُمْ ۖ وَاعْلَمُوا أَنَّ اللَّهَ يَحُولُ بَيْنَ الْمَرْءِ وَقَلْبِهِ وَأَنَّهُ إِلَيْهِ تُحْشَرُونَ ۞
ವಿಶ್ವಾಸಿಗಳೇ, ಅಲ್ಲಾಹ್ ಮತ್ತವನ ದೂತರು, ನಿಮಗೆ ಬದುಕನ್ನು ಒದಗಿಸಲು ನಿಮ್ಮನ್ನು ಕರೆದಾಗ ಅವರ ಕರೆಯನ್ನು ಸ್ವೀಕರಿಸಿರಿ. - ಅಲ್ಲಾಹನು ಮಾನವ ಮತ್ತವನ ಮನಸ್ಸಿನ ನಡುವೆ ಇರುತ್ತಾನೆ ಮತ್ತು ಕೊನೆಗೆ ನಿಮ್ಮನ್ನೆಲ್ಲಾ ಅವನ ಬಳಿಯೇ ಸೇರಿಸಲಾಗುವುದು ಎಂಬುದು ನಿಮಗೆ ತಿಳಿದಿರಲಿ .
8:25
وَاتَّقُوا فِتْنَةً لَا تُصِيبَنَّ الَّذِينَ ظَلَمُوا مِنْكُمْ خَاصَّةً ۖ وَاعْلَمُوا أَنَّ اللَّهَ شَدِيدُ الْعِقَابِ ۞
ಆ ಪರೀಕ್ಷೆಯ ಕುರಿತು ಎಚ್ಚರ ವಹಿಸಿರಿ - ಅದರ ಬಾಧೆಯು ಕೇವಲ ನಿಮ್ಮಲ್ಲಿನ ಅಕ್ರಮಿಗಳಿಗೆ ಮಾತ್ರ ಸೀಮಿತವಾಗಿ ಉಳಿಯದು. ತಿಳಿದಿರಲಿ, ಅಲ್ಲಾಹನು ಬಹಳ ಉಗ್ರವಾಗಿ ಶಿಕ್ಷಿಸುವವನಾಗಿದ್ದಾನೆ.
8:26
وَاذْكُرُوا إِذْ أَنْتُمْ قَلِيلٌ مُسْتَضْعَفُونَ فِي الْأَرْضِ تَخَافُونَ أَنْ يَتَخَطَّفَكُمُ النَّاسُ فَآوَاكُمْ وَأَيَّدَكُمْ بِنَصْرِهِ وَرَزَقَكُمْ مِنَ الطَّيِّبَاتِ لَعَلَّكُمْ تَشْكُرُونَ ۞
ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದು, ಭೂಮಿಯಲ್ಲಿ ಮರ್ದಿತರಾಗಿದ್ದಾಗ ಹಾಗೂ ಜನರು ನಿಮ್ಮನ್ನು ನಿರ್ನಾಮಗೊಳಿಸುವರೆಂದು ಅಂಜುತ್ತಿದ್ದಾಗ, ನೀವು ಕೃತಜ್ಞರಾಗಿರಬೇಕೆಂದು, ಅವನು (ಅಲ್ಲಾಹನು) ನಿಮಗೊಂದು ನೆಲೆಯನ್ನೊದಗಿಸಿದನು ಹಾಗೂ ತನ್ನ ನೆರವಿನ ಮೂಲಕ ನಿಮಗೆ ಶಕ್ತಿಯನ್ನು ನೀಡಿದನು ಮತ್ತು ನಿಮಗೆ ಶುದ್ಧ ಆಹಾರವನ್ನು ಪೂರೈಸಿದನು.
8:27
يَا أَيُّهَا الَّذِينَ آمَنُوا لَا تَخُونُوا اللَّهَ وَالرَّسُولَ وَتَخُونُوا أَمَانَاتِكُمْ وَأَنْتُمْ تَعْلَمُونَ ۞
ವಿಶ್ವಾಸಿಗಳೇ, ಅಲ್ಲಾಹನಿಗೆ ಮತ್ತು ಅವನ ದೂತರಿಗೆ ವಿಶ್ವಾಸ ದ್ರೋಹವೆಸಗಬೇಡಿ. ಹಾಗೆಯೇ ನೀವು, ತಿಳಿದೂ ತಿಳಿದೂ ನಿಮ್ಮಲ್ಲಿ ನಂಬಿಕೆ ಇಡಲಾದ ವಿಷಯಗಳಲ್ಲಿ ವಂಚಿಸಬೇಡಿ.
8:28
وَاعْلَمُوا أَنَّمَا أَمْوَالُكُمْ وَأَوْلَادُكُمْ فِتْنَةٌ وَأَنَّ اللَّهَ عِنْدَهُ أَجْرٌ عَظِيمٌ ۞
ನಿಮಗೆ ತಿಳಿದಿರಲಿ, ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ನಿಜವಾಗಿ ಪರೀಕ್ಷೆಗಳಾಗಿವೆ. ಮಹಾ ಪ್ರತಿಫಲವು ಅಲ್ಲಾಹನ ಬಳಿಯಲ್ಲೇ ಇದೆ.
8:29
يَا أَيُّهَا الَّذِينَ آمَنُوا إِنْ تَتَّقُوا اللَّهَ يَجْعَلْ لَكُمْ فُرْقَانًا وَيُكَفِّرْ عَنْكُمْ سَيِّئَاتِكُمْ وَيَغْفِرْ لَكُمْ ۗ وَاللَّهُ ذُو الْفَضْلِ الْعَظِيمِ ۞
ವಿಶ್ವಾಸಿಗಳೇ, ನೀವು ಅಲ್ಲಾಹನ ಭಯವುಳ್ಳವರಾಗಿದ್ದರೆ, ಅವನು ನಿಮಗೆ (ಒಳಿತು-ಕೆಡುಕನ್ನು ಪ್ರತ್ಯೇಕಿಸಿ ತಿಳಿಸುವ) ಒರೆಗಲ್ಲನ್ನು ನೀಡುವನು ಹಾಗೂ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸಿ ನಿಮ್ಮನ್ನು ಕ್ಷಮಿಸಿಬಿಡುವನು. ಅಲ್ಲಾಹನಂತು ಅಪಾರ ಅನುಗ್ರಹಿಯಾಗಿದ್ದಾನೆ.
8:30
وَإِذْ يَمْكُرُ بِكَ الَّذِينَ كَفَرُوا لِيُثْبِتُوكَ أَوْ يَقْتُلُوكَ أَوْ يُخْرِجُوكَ ۚ وَيَمْكُرُونَ وَيَمْكُرُ اللَّهُ ۖ وَاللَّهُ خَيْرُ الْمَاكِرِينَ ۞
ಧಿಕ್ಕಾರಿಗಳು ನಿಮ್ಮನ್ನು ಬಂಧಿಸಲು ಅಥವಾ ನಿಮ್ಮನ್ನು ಕೊಲ್ಲಲು ಅಥವಾ ನಿಮ್ಮನ್ನು (ಮಕ್ಕಃದಿಂದ) ಹೊರಹಾಕಲು ಗುಪ್ತ ಸಂಚುಗಳನ್ನು ಹೂಡುತ್ತಿದ್ದಾಗ - ಅವರೂ ಸಂಚುಹೂಡುತ್ತಿದ್ದರು ಮತ್ತು ಅಲ್ಲಾಹನೂ ಸಂಚು ಹೂಡುತ್ತಿದ್ದನು. ಅಲ್ಲಾಹನೇ ಅತ್ಯುತ್ತಮ ಸಂಚು ಹೂಡುವವನಾಗಿದ್ದಾನೆ !
8:31
وَإِذَا تُتْلَىٰ عَلَيْهِمْ آيَاتُنَا قَالُوا قَدْ سَمِعْنَا لَوْ نَشَاءُ لَقُلْنَا مِثْلَ هَٰذَا ۙ إِنْ هَٰذَا إِلَّا أَسَاطِيرُ الْأَوَّلِينَ ۞
ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವರು - ನಾವು ಕೇಳಿದೆವು, ನಾವು ಬಯಸಿದರೆ ಇಂತಹದನ್ನು ನಾವೂ ಹೇಳಬಲ್ಲೆವು. ಇವೆಲ್ಲಾ ಗತಕಾಲದ ಕತೆಗಳು ಮಾತ್ರ ಎನ್ನುತ್ತಾರೆ.
8:32
وَإِذْ قَالُوا اللَّهُمَّ إِنْ كَانَ هَٰذَا هُوَ الْحَقَّ مِنْ عِنْدِكَ فَأَمْطِرْ عَلَيْنَا حِجَارَةً مِنَ السَّمَاءِ أَوِ ائْتِنَا بِعَذَابٍ أَلِيمٍ ۞
ಮತ್ತು ಅವರು, ಓ ಅಲ್ಲಾಹ್, ನಿಜಕ್ಕೂ ಇದೆಲ್ಲಾ ನಿನ್ನ ಕಡೆಯಿಂದಿರುವ ಸತ್ಯವೆಂದಾದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸಿಬಿಡು ಅಥವಾ ನಮಗೊಂದು ಯಾತನಾಮಯ ಶಿಕ್ಷೆಯನ್ನು ತಂದುಕೊಡು - ಎನ್ನುತ್ತಾರೆ.
8:33
وَمَا كَانَ اللَّهُ لِيُعَذِّبَهُمْ وَأَنْتَ فِيهِمْ ۚ وَمَا كَانَ اللَّهُ مُعَذِّبَهُمْ وَهُمْ يَسْتَغْفِرُونَ ۞
(ದೂತರೇ,) ನೀವು ಅವರ ನಡುವೆ ಇರುವಾಗ ಅಲ್ಲಾಹನು ಅವರನ್ನು ಶಿಕ್ಷಿಸಲಾರನು - ಮತ್ತು ಅವರು ಕ್ಷಮೆಯಾಚಿಸುತ್ತಿರುವಾಗ ಅಲ್ಲಾಹನು ಅವರನ್ನು ಶಿಕ್ಷಿಸಲಾರನು.
8:34
وَمَا لَهُمْ أَلَّا يُعَذِّبَهُمُ اللَّهُ وَهُمْ يَصُدُّونَ عَنِ الْمَسْجِدِ الْحَرَامِ وَمَا كَانُوا أَوْلِيَاءَهُ ۚ إِنْ أَوْلِيَاؤُهُ إِلَّا الْمُتَّقُونَ وَلَٰكِنَّ أَكْثَرَهُمْ لَا يَعْلَمُونَ ۞
ಅವರನ್ನು ಅಲ್ಲಾಹನು ಶಿಕ್ಷಿಸಬಾರದು ಎಂದೇನೂ ಇಲ್ಲ. ಅವರು ‘ಮಸ್ಜಿದುಲ್ ಹರಾಮ್’ನ ಅಧಿಕಾರಿಗಳೇನೂ ಅಲ್ಲ. ಆದರೂ ಅವರು ಜನರನ್ನು ಅದರಿಂದ ತಡೆಯುತ್ತಾರೆ. ನಿಜವಾಗಿ, ಧರ್ಮನಿಷ್ಠರು ಮಾತ್ರ ಅದರ ಅಧಿಕಾರಿಗಳಾಗಬಲ್ಲರು - ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ.
8:35
وَمَا كَانَ صَلَاتُهُمْ عِنْدَ الْبَيْتِ إِلَّا مُكَاءً وَتَصْدِيَةً ۚ فَذُوقُوا الْعَذَابَ بِمَا كُنْتُمْ تَكْفُرُونَ ۞
ದೇವಭವನ (ಕಅ್'ಬಃ)ದ ಬಳಿ ಅವರ ಆರಾಧನೆಯು ಕೇವಲ ಶಿಳ್ಳು ಮತ್ತು ಚಪ್ಪಾಳೆಗೆ ಸೀಮಿತವಾಗಿತ್ತು. ನೀವು ಸತ್ಯಧಿಕ್ಕಾರಿಗಳಾಗಿದ್ದುದಕ್ಕೆ ಶಿಕ್ಷೆಯನ್ನು ಇದೀಗ ಅನುಭವಿಸಿರಿ.
8:36
إِنَّ الَّذِينَ كَفَرُوا يُنْفِقُونَ أَمْوَالَهُمْ لِيَصُدُّوا عَنْ سَبِيلِ اللَّهِ ۚ فَسَيُنْفِقُونَهَا ثُمَّ تَكُونُ عَلَيْهِمْ حَسْرَةً ثُمَّ يُغْلَبُونَ ۗ وَالَّذِينَ كَفَرُوا إِلَىٰ جَهَنَّمَ يُحْشَرُونَ ۞
ಧಿಕ್ಕಾರಿಗಳು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯಲಿಕ್ಕಾಗಿ ತಮ್ಮ ಸಂಪತ್ತನ್ನು ಖಂಡಿತ ಖರ್ಚು ಮಾಡುತ್ತಿದ್ದಾರೆ. ಮುಂದೆಯೂ ಮಾಡುವರು - ಕೊನೆಗೆ ಇದೆಲ್ಲಾ ಅವರ ಪಾಲಿಗೆ ಖೇದದ ವಿಷಯವಾಗುವುದು ಹಾಗೂ ಅವರು ಸಂಪೂರ್ಣ ಸೋಲಿಸಲ್ಪಡುವರು ಮತ್ತು ಧಿಕ್ಕಾರಿಗಳನ್ನೆಲ್ಲಾ ನರಕದಲ್ಲಿ ಒಟ್ಟುಸೇರಿಸಲಾಗುವುದು-
8:37
لِيَمِيزَ اللَّهُ الْخَبِيثَ مِنَ الطَّيِّبِ وَيَجْعَلَ الْخَبِيثَ بَعْضَهُ عَلَىٰ بَعْضٍ فَيَرْكُمَهُ جَمِيعًا فَيَجْعَلَهُ فِي جَهَنَّمَ ۚ أُولَٰئِكَ هُمُ الْخَاسِرُونَ ۞
-ಅಲ್ಲಾಹನು ಅಶುದ್ಧವನ್ನು ಶುದ್ಧದಿಂದ ಪ್ರತ್ಯೇಕಿಸುವಂತಾಗಲಿಕ್ಕಾಗಿ ಮತ್ತು ಅಶುದ್ಧರನ್ನು ಒಬ್ಬರ ಮೇಲೊಬ್ಬರಂತೆ ಎಸೆದು ಅವರನ್ನೆಲ್ಲಾ ಒಂದು ರಾಶಿಯಾಗಿಸಿ ನರಕಕ್ಕೆ ಕಳಿಸಲಿಕ್ಕಾಗಿ. ಅವರೇ ನಿಜಕ್ಕೂ ನಷ್ಟ ಅನುಭವಿಸುವವರು.
8:38
قُلْ لِلَّذِينَ كَفَرُوا إِنْ يَنْتَهُوا يُغْفَرْ لَهُمْ مَا قَدْ سَلَفَ وَإِنْ يَعُودُوا فَقَدْ مَضَتْ سُنَّتُ الْأَوَّلِينَ ۞
ಧಿಕ್ಕಾರಿಗಳೊಡನೆ, ಅವರು (ದುರ್ಮಾರ್ಗದಿಂದ) ಹಿಂಜರಿದರೆ, ಹಿಂದೆ ನಡೆದುದೆಲ್ಲವನ್ನೂ ಅವರ ಪಾಲಿಗೆ ಕ್ಷಮಿಸಲಾಗುವುದೆಂದು ಹೇಳಿರಿ. ಇನ್ನು, ಅವರು (ಹಿಂದಿನ ತಪ್ಪನ್ನೇ) ಪುನರಾವರ್ತಿಸಿದರೆ, ಗತಕಾಲದವರಿಗೆ ಒದಗಿದ ಗತಿಯು (ಅವರ ಮುಂದಿದೆ).
8:39
وَقَاتِلُوهُمْ حَتَّىٰ لَا تَكُونَ فِتْنَةٌ وَيَكُونَ الدِّينُ كُلُّهُ لِلَّهِ ۚ فَإِنِ انْتَهَوْا فَإِنَّ اللَّهَ بِمَا يَعْمَلُونَ بَصِيرٌ ۞
ಮರ್ದನವು ಇಲ್ಲವಾಗುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಹೋರಾಡಿರಿ. ಇನ್ನು ಅವರು (ಮರ್ದನದಿಂದ) ದೂರ ಉಳಿದರೆ, ಅಲ್ಲಾಹನಂತು ಅವರು ಮಾಡುತ್ತಿರುವುದನ್ನೆಲ್ಲಾ ನೋಡುತ್ತಿದ್ದಾನೆ.
8:40
وَإِنْ تَوَلَّوْا فَاعْلَمُوا أَنَّ اللَّهَ مَوْلَاكُمْ ۚ نِعْمَ الْمَوْلَىٰ وَنِعْمَ النَّصِيرُ ۞
ಒಂದು ವೇಳೆ ಅವರು ಮುಖ ತಿರುಗಿಸಿಕೊಂಡರೆ, ನಿಮಗೆ ತಿಳಿದಿರಲಿ - ಅಲ್ಲಾಹನೇ ನಿಮ್ಮ ಪೋಷಕನು. ಅವನು ಅತ್ಯುತ್ತಮ ಪೋಷಕನು ಮತ್ತು ಅತ್ಯುತ್ತಮ ಸಹಾಯಕನು.
8:41
۞ وَاعْلَمُوا أَنَّمَا غَنِمْتُمْ مِنْ شَيْءٍ فَأَنَّ لِلَّهِ خُمُسَهُ وَلِلرَّسُولِ وَلِذِي الْقُرْبَىٰ وَالْيَتَامَىٰ وَالْمَسَاكِينِ وَابْنِ السَّبِيلِ إِنْ كُنْتُمْ آمَنْتُمْ بِاللَّهِ وَمَا أَنْزَلْنَا عَلَىٰ عَبْدِنَا يَوْمَ الْفُرْقَانِ يَوْمَ الْتَقَى الْجَمْعَانِ ۗ وَاللَّهُ عَلَىٰ كُلِّ شَيْءٍ قَدِيرٌ ۞
ನಿಮಗೆ ತಿಳಿದಿರಲಿ, ನಿಮ್ಮ ಯುದ್ಧ ಸಂಪತ್ತಿನಲ್ಲಿ ಐದನೇ ಒಂದು ಭಾಗವು ಅಲ್ಲಾಹನಿಗೆ, (ಅವನ) ದೂತರಿಗೆ, (ನಿಮ್ಮ) ಬಂಧುಗಳಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಸೇರಿದೆ . ನೀವು ಅಲ್ಲಾಹನಲ್ಲಿ ನಂಬಿಕೆ ಉಳ್ಳವರಾಗಿದ್ದರೆ ಮತ್ತು (ಸತ್ಯ-ಮಿಥ್ಯಗಳ) ಪ್ರತ್ಯೇಕತೆಯ ದಿನ ಹಾಗೂ ಎರಡು ಪಡೆಗಳು ಎದುರುಗೊಂಡ (ಬದ್ರ್ ಯುದ್ಧದ) ದಿನ ನಾವು ನಮ್ಮ ದಾಸನಿಗೆ ನೀಡಿದ್ದರಲ್ಲಿ (ದಿವ್ಯ ಸಹಾಯದಲ್ಲಿ) ನಂಬಿಕೆ ಉಳ್ಳವರಾಗಿದ್ದರೆ (ಈ ನಿಯಮವನ್ನು ಪಾಲಿಸಿರಿ). ಅಲ್ಲಾಹನು ಎಲ್ಲವನ್ನೂ ಮಾಡಬಲ್ಲನು.
8:42
إِذْ أَنْتُمْ بِالْعُدْوَةِ الدُّنْيَا وَهُمْ بِالْعُدْوَةِ الْقُصْوَىٰ وَالرَّكْبُ أَسْفَلَ مِنْكُمْ ۚ وَلَوْ تَوَاعَدْتُمْ لَاخْتَلَفْتُمْ فِي الْمِيعَادِ ۙ وَلَٰكِنْ لِيَقْضِيَ اللَّهُ أَمْرًا كَانَ مَفْعُولًا لِيَهْلِكَ مَنْ هَلَكَ عَنْ بَيِّنَةٍ وَيَحْيَىٰ مَنْ حَيَّ عَنْ بَيِّنَةٍ ۗ وَإِنَّ اللَّهَ لَسَمِيعٌ عَلِيمٌ ۞
(ವಿಶ್ವಾಸಿಗಳೇ,) ಅಂದು ನೀವು (ಬದ್ರ್ ಮೈದಾನದ) ಒಂದು ಕೊನೆಯಲ್ಲಿದ್ದರೆ, ಅವರು (ಶತ್ರು ಪಡೆ) ಇನ್ನೊಂದು ಕೊನೆಯಲ್ಲಿದ್ದರು ಮತ್ತು ವ್ಯಾಪಾರ ತಂಡವು ನಿಮಗಿಂತ ತಗ್ಗು ಪ್ರದೇಶದಲ್ಲಿತ್ತು. ಒಂದು ವೇಳೆ ನೀವು (ಮುಖಾಮುಖಿಗೆ) ಕಾಲ ನಿಶ್ಚಯಿಸಲು ಹೊರಟಿದ್ದರೆ ನಿಶ್ಚಿತ ಕಾಲದ ಕುರಿತು ಭಿನ್ನತೆ ತಾಳುತ್ತಿದ್ದಿರಿ. ಆದರೆ ನಾಶವಾಗುವವನು ಸ್ಪಷ್ಟ ಪುರಾವೆಯೊಂದಿಗೆ ನಾಶವಾಗಬೇಕು ಮತ್ತು ಬದುಕಿ ಉಳಿಯುವವನು ಸ್ಪಷ್ಟ ಪುರಾವೆಯೊಂದಿಗೆ ಬದುಕಿ ಉಳಿಯಬೇಕೆಂಬ ತನ್ನ ನಿರ್ಧಾರವನ್ನು ಅಲ್ಲಾಹನು ಸಾಧಿಸಿ ತೋರಿಸ ಬಯಸಿದ್ದನು. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲವನ್ನೂ ಕೇಳುವವನು ಮತ್ತು ಅರಿಯುವವನಾಗಿದ್ದಾನೆ.
8:43
إِذْ يُرِيكَهُمُ اللَّهُ فِي مَنَامِكَ قَلِيلًا ۖ وَلَوْ أَرَاكَهُمْ كَثِيرًا لَفَشِلْتُمْ وَلَتَنَازَعْتُمْ فِي الْأَمْرِ وَلَٰكِنَّ اللَّهَ سَلَّمَ ۗ إِنَّهُ عَلِيمٌ بِذَاتِ الصُّدُورِ ۞
(ದೂತರೇ,) ಅಲ್ಲಾಹನು ನಿಮಗೆ ನಿಮ್ಮ ಕನಸಿನಲ್ಲಿ ಅವರನ್ನು (ಶತ್ರು ಪಡೆಯನ್ನು) ಕಡಿಮೆಯಾಗಿ ಕಾಣಿಸಿದ್ದನು - ಒಂದು ವೇಳೆ ಅವನು ನಿಮಗೆ, ಅವರನ್ನು ಬಹಳವಾಗಿ ಕಾಣಿಸಿದ್ದರೆ ನೀವೆಲ್ಲಾ ಹಿಂಜರಿಯುತ್ತಿದ್ದಿರಿ ಮತ್ತು ಆ (ಯುದ್ಧದ) ವಿಷಯದಲ್ಲಿ ಭಿನ್ನಮತ ತಾಳುತ್ತಿದ್ದಿರಿ. ಆದರೆ ಅಲ್ಲಾಹನು ರಕ್ಷಿಸಿದನು. ಖಂಡಿತವಾಗಿಯೂ ಅವನು ಮನದೊಳಗಿನ ವಿಷಯಗಳನ್ನೂ ಅರಿತಿರುತ್ತಾನೆ.
8:44
وَإِذْ يُرِيكُمُوهُمْ إِذِ الْتَقَيْتُمْ فِي أَعْيُنِكُمْ قَلِيلًا وَيُقَلِّلُكُمْ فِي أَعْيُنِهِمْ لِيَقْضِيَ اللَّهُ أَمْرًا كَانَ مَفْعُولًا ۗ وَإِلَى اللَّهِ تُرْجَعُ الْأُمُورُ ۞
ಮುಂದೆ, ನೀವು ಪರಸ್ಪರ ಎದುರಾದಾಗಲೂ, ಅವನು ನಿಮ್ಮ ಕಣ್ಣುಗಳಿಗೆ ಅವರನ್ನು ಕಡಿಮೆಯಾಗಿ ಕಾಣಿಸಿದನು ಮತ್ತು ಅವರ ಕಣ್ಣುಗಳಿಗೆ ನಿಮ್ಮನ್ನು ಕಡಿಮೆಯಾಗಿ ಕಾಣಿಸಿದನು. ಏಕೆಂದರೆ ಅಲ್ಲಾಹನ ತೀರ್ಮಾನವು ಅನುಷ್ಠಾನವಾಗಲೇಬೇಕು. ಕೊನೆಗೆ ಎಲ್ಲ ವಿಷಯಗಳೂ ಅಲ್ಲಾಹನೆಡೆಗೇ ಮರಳುತ್ತವೆ.
8:45
يَا أَيُّهَا الَّذِينَ آمَنُوا إِذَا لَقِيتُمْ فِئَةً فَاثْبُتُوا وَاذْكُرُوا اللَّهَ كَثِيرًا لَعَلَّكُمْ تُفْلِحُونَ ۞
ವಿಶ್ವಾಸಿಗಳೇ, ನೀವು ಯಾವುದೇ ಪಡೆಯನ್ನು ಎದುರಿಸಿದಾಗ, ಸ್ಥಿರವಾಗಿರಿ ಮತ್ತು ನೀವು ವಿಜಯಿಗಳಾಗಲು, ಪದೇ ಪದೇ ಅಲ್ಲಾಹನನ್ನು ಸ್ಮರಿಸಿರಿ.
8:46
وَأَطِيعُوا اللَّهَ وَرَسُولَهُ وَلَا تَنَازَعُوا فَتَفْشَلُوا وَتَذْهَبَ رِيحُكُمْ ۖ وَاصْبِرُوا ۚ إِنَّ اللَّهَ مَعَ الصَّابِرِينَ ۞
ಹಾಗೆಯೇ, ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು ಪರಸ್ಪರ ಜಗಳಗಳಲ್ಲಿ ನಿರತರಾಗಬೇಡಿ. ಅನ್ಯಥಾ, ನಿಮ್ಮ ಧೈರ್ಯ ಕುಂದುವುದು ಮತ್ತು ನಿಮ್ಮ ಶಕ್ತಿಯು ನಷ್ಟವಾಗುವುದು. ನೀವು ಸಹನಶೀಲರಾಗಿರಿ. ಖಂಡಿತವಾಗಿಯೂ ಅಲ್ಲಾಹನು ಸಹನ ಶೀಲರ ಜೊತೆಗಿರುತ್ತಾನೆ.
8:47
وَلَا تَكُونُوا كَالَّذِينَ خَرَجُوا مِنْ دِيَارِهِمْ بَطَرًا وَرِئَاءَ النَّاسِ وَيَصُدُّونَ عَنْ سَبِيلِ اللَّهِ ۚ وَاللَّهُ بِمَا يَعْمَلُونَ مُحِيطٌ ۞
ನೀವು, ಜನರಿಗೆ ತೋರಿಸುವುದಕ್ಕಾಗಿ ಆಡಂಬರದಿಂದ ತಮ್ಮ ಮನೆಯಿಂದ ಹೊರಟವರು ಹಾಗೂ ಅಲ್ಲಾಹನ ಮಾರ್ಗದಿಂದ ತಡೆಯುವವರಂತಾಗಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಆವರಿಸಿಕೊಂಡಿದ್ದಾನೆ.
8:48
وَإِذْ زَيَّنَ لَهُمُ الشَّيْطَانُ أَعْمَالَهُمْ وَقَالَ لَا غَالِبَ لَكُمُ الْيَوْمَ مِنَ النَّاسِ وَإِنِّي جَارٌ لَكُمْ ۖ فَلَمَّا تَرَاءَتِ الْفِئَتَانِ نَكَصَ عَلَىٰ عَقِبَيْهِ وَقَالَ إِنِّي بَرِيءٌ مِنْكُمْ إِنِّي أَرَىٰ مَا لَا تَرَوْنَ إِنِّي أَخَافُ اللَّهَ ۚ وَاللَّهُ شَدِيدُ الْعِقَابِ ۞
ಶೈತಾನನು ಅವರ ಕರ್ಮಗಳನ್ನು ಅವರಿಗೆ ಚಂದಗಾಣಿಸಿರುವನು ಮತ್ತು ‘‘ಇಂದು ಮಾನವರ ಪೈಕಿ ಯಾರೂ ನಿಮ್ಮನ್ನು ಸೋಲಿಸಲಾರರು ಹಾಗೂ ಖಂಡಿತವಾಗಿಯೂ ನಾನು ನಿಮ್ಮ ಜೊತೆಗಿರುವೆನು’’ ಎಂದು ಹೇಳಿರುವನು. ಮುಂದೆ, ಎರಡು ಪಡೆಗಳು ಎದುರುಗೊಂಡಾಗ ಅವನು ತಿರುಗಿನಿಂತನು ಮತ್ತು ‘‘ನಾನು ನಿಮ್ಮಿಂದ ಸಂಪೂರ್ಣ ಮುಕ್ತನು. ನೀವು ಕಾಣದ್ದನ್ನು ನಾನು ಕಾಣುತ್ತಿದ್ದೇನೆ. ನಾನಂತು ಖಂಡಿತ ಅಲ್ಲಾಹನಿಗೆ ಅಂಜುತ್ತೇನೆ. ಅಲ್ಲಾಹನು ತುಂಬಾ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ’’ ಎಂದನು.
8:49
إِذْ يَقُولُ الْمُنَافِقُونَ وَالَّذِينَ فِي قُلُوبِهِمْ مَرَضٌ غَرَّ هَٰؤُلَاءِ دِينُهُمْ ۗ وَمَنْ يَتَوَكَّلْ عَلَى اللَّهِ فَإِنَّ اللَّهَ عَزِيزٌ حَكِيمٌ ۞
ಕಪಟಿಗಳು ಹಾಗೂ ಮನಗಳಲ್ಲಿ ರೋಗ ಉಳ್ಳವರು (ಧರ್ಮ ನಿಷ್ಠರ ಕುರಿತು) ‘‘ಅವರನ್ನು ಅವರ ಧರ್ಮವು ಮರುಳು ಗೊಳಿಸಿಬಿಟ್ಟಿದೆ’’ ಎನ್ನುತ್ತಾರೆ. ಅಲ್ಲಾಹನಲ್ಲಿ ಭರವಸೆ ಇಟ್ಟವನು ತಿಳಿದಿರಲಿ - ಖಂಡಿತವಾಗಿಯೂ ಅಲ್ಲಾಹನು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿರುತ್ತಾನೆ.
8:50
وَلَوْ تَرَىٰ إِذْ يَتَوَفَّى الَّذِينَ كَفَرُوا ۙ الْمَلَائِكَةُ يَضْرِبُونَ وُجُوهَهُمْ وَأَدْبَارَهُمْ وَذُوقُوا عَذَابَ الْحَرِيقِ ۞
‘ಮಲಕ್’ಗಳು ಧಿಕ್ಕಾರಿಗಳ ಪ್ರಾಣತೆಗೆಯುವುದನ್ನು ನೀವು ನೋಡಿದ್ದರೆ (ಚೆನ್ನಾಗಿರುತ್ತಿತ್ತು.) ಅವರು (ಮಲಕ್‌ಗಳು) ‘‘ಸವಿಯಿರಿ, ಭುಗಿಲೇಳುವ ನರಕಾಗ್ನಿಯ ಹಿಂಸೆಯನ್ನು’’ ಎನ್ನುತ್ತಾ ಅವರ ಮುಖಗಳಿಗೂ ಬೆನ್ನುಗಳಿಗೂ ಹೊಡೆಯುತ್ತಿರುತ್ತಾರೆ.
8:51
ذَٰلِكَ بِمَا قَدَّمَتْ أَيْدِيكُمْ وَأَنَّ اللَّهَ لَيْسَ بِظَلَّامٍ لِلْعَبِيدِ ۞
‘‘ನಿಮ್ಮ ಕೈಗಳು ಸಂಪಾದಿಸಿ ಕಳಿಸಿರುವುದು ಇದನ್ನೇ. ಅಲ್ಲಾಹನಂತು ಖಂಡಿತ ತನ್ನ ದಾಸರ ಮೇಲೆ ಅನ್ಯಾಯ ಎಸಗುವವನಲ್ಲ’’ (ಎಂದು ಅವರೊಡನೆ ಹೇಳಲಾಗುವುದು).
8:52
كَدَأْبِ آلِ فِرْعَوْنَ ۙ وَالَّذِينَ مِنْ قَبْلِهِمْ ۚ كَفَرُوا بِآيَاتِ اللَّهِ فَأَخَذَهُمُ اللَّهُ بِذُنُوبِهِمْ ۗ إِنَّ اللَّهَ قَوِيٌّ شَدِيدُ الْعِقَابِ ۞
ಅವರ ಸ್ಥಿತಿಯು ಫಿರ್‌ಔನನ ಜನರು ಹಾಗೂ ಅವರ ಹಿಂದಿನವರಂತಿದೆ. ಅವರು ಅಲ್ಲಾಹನ ಸೂಚನೆಗಳನ್ನು ಧಿಕ್ಕರಿಸಿದ್ದರು ಮತ್ತು ಅವರ ಪಾಪಗಳ ಕಾರಣ ಅಲ್ಲಾಹನು ಅವರನ್ನು ಹಿಡಿದನು. ಖಂಡಿತವಾಗಿಯೂ ಅಲ್ಲಾಹನು ಬಹಳ ಶಕ್ತಿಶಾಲಿಯಾಗಿದ್ದಾನೆ ಹಾಗೂ ಬಹಳ ಕಠಿಣವಾಗಿ ಹಿಡಿಯುವವನಾಗಿದ್ದಾನೆ.
8:53
ذَٰلِكَ بِأَنَّ اللَّهَ لَمْ يَكُ مُغَيِّرًا نِعْمَةً أَنْعَمَهَا عَلَىٰ قَوْمٍ حَتَّىٰ يُغَيِّرُوا مَا بِأَنْفُسِهِمْ ۙ وَأَنَّ اللَّهَ سَمِيعٌ عَلِيمٌ ۞
ಇದೇಕೆಂದರೆ, ಒಂದು ಜನಾಂಗವು ತಾನೇ ತನ್ನ ಅಂತರಂಗವನ್ನು ಬದಲಿಸುವ ತನಕ ಅಲ್ಲಾಹನು ಆ ಜನಾಂಗಕ್ಕೆ ತಾನು ನೀಡಿರುವ ಅನುಗ್ರಹವನ್ನು ಬದಲಿಸುವುದಿಲ್ಲ. ಅಲ್ಲಾಹನು ಎಲ್ಲವನ್ನೂ ಕೇಳುವವನೂ ಅರಿತಿರುವವನೂ ಆಗಿದ್ದಾನೆ.
8:54
كَدَأْبِ آلِ فِرْعَوْنَ ۙ وَالَّذِينَ مِنْ قَبْلِهِمْ ۚ كَذَّبُوا بِآيَاتِ رَبِّهِمْ فَأَهْلَكْنَاهُمْ بِذُنُوبِهِمْ وَأَغْرَقْنَا آلَ فِرْعَوْنَ ۚ وَكُلٌّ كَانُوا ظَالِمِينَ ۞
ಅವರ ಸ್ಥಿತಿಯು ಫಿರ್‌ಔನನ ಜನರು ಹಾಗೂ ಅವರ ಹಿಂದಿನವರಂತಿದೆ. ಅವರು ತಮ್ಮ ಒಡೆಯನ ಸೂಚನೆಗಳನ್ನು ಧಿಕ್ಕರಿಸಿದರು. ಕೊನೆಗೆ ಅವರ ಪಾಪಗಳ ಕಾರಣ ನಾವು ಅವರನ್ನು ನಾಶಗೊಳಿಸಿದೆವು ಮತ್ತು ಫಿರ್‌ಔನನ ಜನರನ್ನು ಮುಳುಗಿಸಿ ಬಿಟ್ಟೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು.
8:55
إِنَّ شَرَّ الدَّوَابِّ عِنْدَ اللَّهِ الَّذِينَ كَفَرُوا فَهُمْ لَا يُؤْمِنُونَ ۞
ಖಂಡಿತವಾಗಿಯೂ, ಧಿಕ್ಕಾರಿಗಳೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನೀಚ ಜೀವಿಗಳಾಗಿದ್ದಾರೆ. ಅವರು (ಸತ್ಯವನ್ನು) ನಂಬುವುದಿಲ್ಲ.
8:56
الَّذِينَ عَاهَدْتَ مِنْهُمْ ثُمَّ يَنْقُضُونَ عَهْدَهُمْ فِي كُلِّ مَرَّةٍ وَهُمْ لَا يَتَّقُونَ ۞
ನೀವು ಅವರಿಂದ ಕರಾರನ್ನು ಪಡೆದಿರುವಿರಿ. ಆದರೆ ಪ್ರತಿಬಾರಿಯೂ ಅವರು ತಮ್ಮ ಕರಾರನ್ನು ಮುರಿದು ಹಾಕುತ್ತಾರೆ. ಅವರು (ಅಲ್ಲಾಹನಿಗೆ) ಅಂಜುವುದಿಲ್ಲ.
8:57
فَإِمَّا تَثْقَفَنَّهُمْ فِي الْحَرْبِ فَشَرِّدْ بِهِمْ مَنْ خَلْفَهُمْ لَعَلَّهُمْ يَذَّكَّرُونَ ۞
ಅವರು ಯುದ್ಧದಲ್ಲಿ ನಿಮ್ಮ ವಶಕ್ಕೆ ಸಿಕ್ಕಿದರೆ, ಅವರ ಮೂಲಕ, ಅವರ ಹಿಂದಿರುವ ಇತರರಿಗೆ ಪಾಠವಾಗುವಂತೆ ಅವರ ಜೊತೆ ವ್ಯವಹರಿಸಿರಿ - ಅವರು ಪಾಠಕಲಿಯಬಹುದು.
8:58
وَإِمَّا تَخَافَنَّ مِنْ قَوْمٍ خِيَانَةً فَانْبِذْ إِلَيْهِمْ عَلَىٰ سَوَاءٍ ۚ إِنَّ اللَّهَ لَا يُحِبُّ الْخَائِنِينَ ۞
ಯಾವುದಾದರೂ ಜನಾಂಗದಿಂದ ನಿಮಗೆ ಮೋಸದ ಭಯವಿದ್ದರೆ, ಸಮಾನ ಪ್ರತಿಕ್ರಮವಾಗಿ (ಅವರ ಸಂಧಾನವನ್ನು) ಅವರೆಡೆಗೆ ಎಸೆದು ಬಿಡಿರಿ. ಖಂಡಿತವಾಗಿಯೂ ಅಲ್ಲಾಹನು ವಂಚಕರನ್ನು ಮೆಚ್ಚುವುದಿಲ್ಲ.
8:59
وَلَا يَحْسَبَنَّ الَّذِينَ كَفَرُوا سَبَقُوا ۚ إِنَّهُمْ لَا يُعْجِزُونَ ۞
ತಾವು ಗೆದ್ದುಬಿಟ್ಟೆವೆಂದು ಧಿಕ್ಕಾರಿಗಳು ಭಾವಿಸದಿರಲಿ. ಖಂಡಿತವಾಗಿಯೂ (ಸತ್ಯ ಧರ್ಮವನ್ನು) ಅವರೆಂದೂ ಸೋಲಿಸಲಾರರು.
8:60
وَأَعِدُّوا لَهُمْ مَا اسْتَطَعْتُمْ مِنْ قُوَّةٍ وَمِنْ رِبَاطِ الْخَيْلِ تُرْهِبُونَ بِهِ عَدُوَّ اللَّهِ وَعَدُوَّكُمْ وَآخَرِينَ مِنْ دُونِهِمْ لَا تَعْلَمُونَهُمُ اللَّهُ يَعْلَمُهُمْ ۚ وَمَا تُنْفِقُوا مِنْ شَيْءٍ فِي سَبِيلِ اللَّهِ يُوَفَّ إِلَيْكُمْ وَأَنْتُمْ لَا تُظْلَمُونَ ۞
ನೀವು ಅವರನ್ನು ಎದುರಿಸಲು, ನಿಮಗೆ ಸಾಧ್ಯವಿರುವಷ್ಟು ಶಕ್ತಿಯೊಂದಿಗೆ ಹಾಗೂ ಪಳಗಿದ ಕುದುರೆಗಳೊಂದಿಗೆ ಸದಾ ಸನ್ನದ್ಧರಾಗಿರಿ. ಈ ಮೂಲಕ ನೀವು ಅಲ್ಲಾಹನ ಶತ್ರುಗಳನ್ನು, ನಿಮ್ಮ ಶತ್ರುಗಳನ್ನು ಮತ್ತು ಅವರಲ್ಲದೆ - ನಿಮಗೆ ತಿಳಿದಿಲ್ಲದ ಹಾಗೂ ಅಲ್ಲಾಹನಿಗೆ ತಿಳಿದಿರುವ ಇತರರನ್ನು (ಇತರ ಶತ್ರುಗಳನ್ನು) - ಹೆದರಿಸಬಹುದು.* ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು ಮತ್ತು ನಿಮಗೆ ಕಿಂಚಿತ್ತೂ ಅನ್ಯಾಯವಾಗದು.
8:61
۞ وَإِنْ جَنَحُوا لِلسَّلْمِ فَاجْنَحْ لَهَا وَتَوَكَّلْ عَلَى اللَّهِ ۚ إِنَّهُ هُوَ السَّمِيعُ الْعَلِيمُ ۞
(ದೂತರೇ,) ಒಂದು ವೇಳೆ ಅವರು (ಶತ್ರುಗಳು) ಶಾಂತಿಯ ಒಲವು ತೋರಿದರೆ, ನೀವು ಅದಕ್ಕೆ ಒಲವು ತೋರಿರಿ ಮತ್ತು ಅಲ್ಲಾಹನ ಮೇಲೆ ಭರವಸೆ ಇಡಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.
8:62
وَإِنْ يُرِيدُوا أَنْ يَخْدَعُوكَ فَإِنَّ حَسْبَكَ اللَّهُ ۚ هُوَ الَّذِي أَيَّدَكَ بِنَصْرِهِ وَبِالْمُؤْمِنِينَ ۞
ಇನ್ನು ಅವರು ನಿಮ್ಮನ್ನು ವಂಚಿಸುವ ಸಂಕಲ್ಪ ಮಾಡಿದ್ದರೂ ನಿಮಗೆ (ನಿಮ್ಮ ನೆರವಿಗೆ) ಖಂಡಿತವಾಗಿಯೂ ಅಲ್ಲಾಹನೇ ಸಾಕು. ನಿಮಗೆ, ತನ್ನ ನೆರವಿನ ಮೂಲಕ ಹಾಗೂ ವಿಶ್ವಾಸಿಗಳ ಮೂಲಕ ಸದಾ ಬಲ ಒದಗಿಸುತ್ತಾ ಬಂದಿರುವವನು ಅವನೇ.
8:63
وَأَلَّفَ بَيْنَ قُلُوبِهِمْ ۚ لَوْ أَنْفَقْتَ مَا فِي الْأَرْضِ جَمِيعًا مَا أَلَّفْتَ بَيْنَ قُلُوبِهِمْ وَلَٰكِنَّ اللَّهَ أَلَّفَ بَيْنَهُمْ ۚ إِنَّهُ عَزِيزٌ حَكِيمٌ ۞
ಮತ್ತು ಅವರ (ವಿಶ್ವಾಸಿಗಳ) ಮನಸ್ಸುಗಳಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಿದವನೂ ಅವನೇ. ನೀವು ಭೂಮಿಯಲ್ಲಿನ ಸಂಪೂರ್ಣ ಸಂಪತ್ತನ್ನು ವ್ಯಯಿಸಿದ್ದರೂ ಅವರ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ನಿಜಕ್ಕೂ ಅಲ್ಲಾಹನೇ ಅವರ ನಡುವೆ ಪ್ರೀತಿಯನ್ನು ಬೆಳೆಸಿದನು. ಖಂಡಿತವಾಗಿಯೂ ಅವನು ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿರುವನು.
8:64
يَا أَيُّهَا النَّبِيُّ حَسْبُكَ اللَّهُ وَمَنِ اتَّبَعَكَ مِنَ الْمُؤْمِنِينَ ۞
ದೂತರೇ, ನಿಮಗೆ ಮತ್ತು ನಿಮ್ಮ ಅನುಯಾಯಿಗಳಾಗಿರುವ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು.
8:65
يَا أَيُّهَا النَّبِيُّ حَرِّضِ الْمُؤْمِنِينَ عَلَى الْقِتَالِ ۚ إِنْ يَكُنْ مِنْكُمْ عِشْرُونَ صَابِرُونَ يَغْلِبُوا مِائَتَيْنِ ۚ وَإِنْ يَكُنْ مِنْكُمْ مِائَةٌ يَغْلِبُوا أَلْفًا مِنَ الَّذِينَ كَفَرُوا بِأَنَّهُمْ قَوْمٌ لَا يَفْقَهُونَ ۞
ದೂತರೇ, ವಿಶ್ವಾಸಿಗಳನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ನೂರು ಜನರಿದ್ದರೆ, ಅವರು ಸಾವಿರ ಧಿಕ್ಕಾರಿಗಳನ್ನು ಸೋಲಿಸುವರು - ಏಕೆಂದರೆ ಅವರು (ಧಿಕ್ಕಾರಿಗಳು) ತಿಳುವಳಿಕೆ ಇಲ್ಲದವರಾಗಿದ್ದಾರೆ.
8:66
الْآنَ خَفَّفَ اللَّهُ عَنْكُمْ وَعَلِمَ أَنَّ فِيكُمْ ضَعْفًا ۚ فَإِنْ يَكُنْ مِنْكُمْ مِائَةٌ صَابِرَةٌ يَغْلِبُوا مِائَتَيْنِ ۚ وَإِنْ يَكُنْ مِنْكُمْ أَلْفٌ يَغْلِبُوا أَلْفَيْنِ بِإِذْنِ اللَّهِ ۗ وَاللَّهُ مَعَ الصَّابِرِينَ ۞
ಇದೀಗ ಅಲ್ಲಾಹನು ನಿಮ್ಮ ಹೊಣೆಯನ್ನು ಹಗುರಗೊಳಿಸುತ್ತಾನೆ - ನಿಮ್ಮಲ್ಲಿ ದೌರ್ಬಲ್ಯವಿರುವುದನ್ನು ಅವನು ಬಲ್ಲನು. ನಿಮ್ಮಲ್ಲಿ ನೂರು ಜನ ಸಹನಶೀಲರಿದ್ದರೆ, ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ಸಾವಿರ ಜನರಿದ್ದರೆ ಅವರು ಅಲ್ಲಾಹನ ಸಮ್ಮತಿಯಿಂದ ಎರಡು ಸಾವಿರ ಮಂದಿಯನ್ನು ಸೋಲಿಸುವರು. ಅಲ್ಲಾಹನು ಸಹನ ಶೀಲರ ಜೊತೆಗಿದ್ದಾನೆ.
8:67
مَا كَانَ لِنَبِيٍّ أَنْ يَكُونَ لَهُ أَسْرَىٰ حَتَّىٰ يُثْخِنَ فِي الْأَرْضِ ۚ تُرِيدُونَ عَرَضَ الدُّنْيَا وَاللَّهُ يُرِيدُ الْآخِرَةَ ۗ وَاللَّهُ عَزِيزٌ حَكِيمٌ ۞
ಭೂಮಿಯಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸುವ ತನಕ, ತನ್ನ ಬಳಿಯಲ್ಲಿ ಕೈದಿಗಳನ್ನು ಇಟ್ಟುಕೊಳ್ಳುವುದು ಒಬ್ಬ ಪ್ರವಾದಿಗೆ ಭೂಷಣವಲ್ಲ. ನೀವು (ಜನರು) ಇಹಲೋಕದ ಲಾಭವನ್ನು ಬಯಸುತ್ತೀರಿ. ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹನು ಬಹಳ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
8:68
لَوْلَا كِتَابٌ مِنَ اللَّهِ سَبَقَ لَمَسَّكُمْ فِيمَا أَخَذْتُمْ عَذَابٌ عَظِيمٌ ۞
ಅಲ್ಲಾಹನ ಕಡೆಯಿಂದ ಮೊದಲೇ ಲಿಖಿತ ತೀರ್ಮಾನವೊಂದು ಇಲ್ಲದಿರುತ್ತಿದ್ದರೆ, (ಕೈದಿಗಳೇ!) ನೀವು ಅನುಸರಿಸಿದ್ದ ನೀತಿಗಾಗಿ ಒಂದು ಭಾರೀ ಶಿಕ್ಷೆಯು ನಿಮ್ಮನ್ನು ಆವರಿಸುತ್ತಿತ್ತು.
8:69
فَكُلُوا مِمَّا غَنِمْتُمْ حَلَالًا طَيِّبًا ۚ وَاتَّقُوا اللَّهَ ۚ إِنَّ اللَّهَ غَفُورٌ رَحِيمٌ ۞
ಇದೀಗ ಯುದ್ಧ ಸಂಪಾದನೆಯಾಗಿ ನಿಮಗೆ ದೊರೆತಿರುವುದಲ್ಲಿ ಸಮ್ಮತ ಹಾಗೂ ಶುದ್ಧವಾಗಿರುವುದನ್ನು ತಿನ್ನಿರಿ. ಜೊತೆಗೆ ಅಲ್ಲಾಹನಿಗೆ ಅಂಜುತ್ತಲಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
8:70
يَا أَيُّهَا النَّبِيُّ قُلْ لِمَنْ فِي أَيْدِيكُمْ مِنَ الْأَسْرَىٰ إِنْ يَعْلَمِ اللَّهُ فِي قُلُوبِكُمْ خَيْرًا يُؤْتِكُمْ خَيْرًا مِمَّا أُخِذَ مِنْكُمْ وَيَغْفِرْ لَكُمْ ۗ وَاللَّهُ غَفُورٌ رَحِيمٌ ۞
ದೂತರೇ, ನಿಮ್ಮ ಕೈಯಲ್ಲಿ ಕೈದಿಗಳಾಗಿರುವವರೊಡನೆ, ಹೇಳಿರಿ; ‘‘ನಿಮ್ಮ ಮನಸ್ಸುಗಳಲ್ಲಿ ಒಳಿತೇನಾದರೂ ಇರುವುದನ್ನು ಅಲ್ಲಾಹನು ಗುರುತಿಸಿದರೆ, ನಿಮ್ಮಿಂದ ಏನನ್ನು ಪಡೆಯಲಾಗಿದೆಯೋ ಅದಕ್ಕಿಂತ ಉತ್ತಮವಾದುದನ್ನು ಅವನು ನಿಮಗೆ ನೀಡುವನು ಮತ್ತು ಅವನು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
8:71
وَإِنْ يُرِيدُوا خِيَانَتَكَ فَقَدْ خَانُوا اللَّهَ مِنْ قَبْلُ فَأَمْكَنَ مِنْهُمْ ۗ وَاللَّهُ عَلِيمٌ حَكِيمٌ ۞
ಇನ್ನು ಅವರು ನಿಮ್ಮನ್ನು ವಂಚಿಸುವ ಸಂಕಲ್ಪ ಮಾಡಿದ್ದರೆ, (ನಿಮಗೆ ತಿಳಿದಿರಲಿ;) ಈ ಹಿಂದೆ ಅವರು ಅಲ್ಲಾಹನನ್ನು ವಂಚಿಸಿರುವರು. ಕೊನೆಗೆ, ಅವನು ಅವರನ್ನು ನಿಮ್ಮ ವಶಕ್ಕೆ ಕೊಟ್ಟನು. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
8:72
إِنَّ الَّذِينَ آمَنُوا وَهَاجَرُوا وَجَاهَدُوا بِأَمْوَالِهِمْ وَأَنْفُسِهِمْ فِي سَبِيلِ اللَّهِ وَالَّذِينَ آوَوْا وَنَصَرُوا أُولَٰئِكَ بَعْضُهُمْ أَوْلِيَاءُ بَعْضٍ ۚ وَالَّذِينَ آمَنُوا وَلَمْ يُهَاجِرُوا مَا لَكُمْ مِنْ وَلَايَتِهِمْ مِنْ شَيْءٍ حَتَّىٰ يُهَاجِرُوا ۚ وَإِنِ اسْتَنْصَرُوكُمْ فِي الدِّينِ فَعَلَيْكُمُ النَّصْرُ إِلَّا عَلَىٰ قَوْمٍ بَيْنَكُمْ وَبَيْنَهُمْ مِيثَاقٌ ۗ وَاللَّهُ بِمَا تَعْمَلُونَ بَصِيرٌ ۞
ಖಂಡಿತವಾಗಿಯೂ, ವಿಶ್ವಾಸಿಗಳು, ವಲಸಿಗರು ಮತ್ತು ತಮ್ಮ ಸಂಪತ್ತುಗಳೊಂದಿಗೆ ಹಾಗೂ ತಮ್ಮ ಜೀವಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು, ಆಶ್ರಯ ಒದಗಿಸಿದವರು ಮತ್ತು ನೆರವಾದವರು - ಅವರೇ ಪರಸ್ಪರ ಆಪ್ತಮಿತ್ರರು. ಇನ್ನು, ವಿಶ್ವಾಸಿಗಳಾಗಿದ್ದರೂ ವಲಸೆ ಹೋಗದವರು - ವಲಸೆ ಹೋಗುವ ತನಕ ಅವರ ಜೊತೆ ನಿಮಗೆ ಯಾವ ನಂಟೂ ಇಲ್ಲ. ಇನ್ನು ಅವರು ಧರ್ಮದ ವಿಷಯದಲ್ಲಿ ನಿಮ್ಮ ನೆರವು ಬಯಸಿದರೆ, ನೆರವು ನೀಡುವುದು ನಿಮ್ಮ ಕರ್ತವ್ಯವಾಗಿದೆ - ಆದರೆ, ಯಾವ ಜನಾಂಗದ ಹಾಗೂ ನಿಮ್ಮ ನಡುವೆ ಕರಾರು ಇದೆಯೋ ಅವರ ವಿರುದ್ಧವಲ್ಲ. ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದಾನೆ.
8:73
وَالَّذِينَ كَفَرُوا بَعْضُهُمْ أَوْلِيَاءُ بَعْضٍ ۚ إِلَّا تَفْعَلُوهُ تَكُنْ فِتْنَةٌ فِي الْأَرْضِ وَفَسَادٌ كَبِيرٌ ۞
ಧಿಕ್ಕಾರಿಗಳು ಪರಸ್ಪರರ ಪೋಷಕರಾಗಿರುತ್ತಾರೆ. ನೀವು ಹಾಗೆ ಮಾಡದಿದ್ದರೆ ಭೂಮಿಯಲ್ಲಿ ವ್ಯಾಪಕ ಗೊಂದಲ ಹಾಗೂ ಭಾರೀ ಅಶಾಂತಿ ಉಂಟಾಗುವುದು.
8:74
وَالَّذِينَ آمَنُوا وَهَاجَرُوا وَجَاهَدُوا فِي سَبِيلِ اللَّهِ وَالَّذِينَ آوَوْا وَنَصَرُوا أُولَٰئِكَ هُمُ الْمُؤْمِنُونَ حَقًّا ۚ لَهُمْ مَغْفِرَةٌ وَرِزْقٌ كَرِيمٌ ۞
ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರು ಹಾಗೂ ಹೋರಾಡಿದವರು ಮತ್ತು ಆಶ್ರಯ ನೀಡಿದವರು ಹಾಗೂ ನೆರವಾದವರು - ಅವರೇ ನೈಜ ವಿಶ್ವಾಸಿಗಳು. ಅವರಿಗೆ ಕ್ಷಮೆ ಇದೆ ಹಾಗೂ ಗೌರವಾನ್ವಿತ ಆಹಾರ ಸಿಗಲಿದೆ.
8:75
وَالَّذِينَ آمَنُوا مِنْ بَعْدُ وَهَاجَرُوا وَجَاهَدُوا مَعَكُمْ فَأُولَٰئِكَ مِنْكُمْ ۚ وَأُولُو الْأَرْحَامِ بَعْضُهُمْ أَوْلَىٰ بِبَعْضٍ فِي كِتَابِ اللَّهِ ۗ إِنَّ اللَّهَ بِكُلِّ شَيْءٍ عَلِيمٌ ۞
ಆ ಬಳಿಕ ವಿಶ್ವಾಸಿಗಳಾದವರು, ವಲಸೆ ಹೋದವರು ಮತ್ತು ನಿಮ್ಮ ಜೊತೆ ಸೇರಿ ಹೋರಾಡಿದವರು - ಅವರೇ ನಿಮ್ಮವರು. ಆದರೆ ಅಲ್ಲಾಹನ ಗ್ರಂಥದ ಪ್ರಕಾರ, ರಕ್ತ ಸಂಬಂಧಿಗಳು ಪರಸ್ಪರ ಹೆಚ್ಚಿನ ಹಕ್ಕುದಾರರಾಗಿರುತ್ತಾರೆ. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲ ವಿಷಯಗಳನ್ನೂ ಬಲ್ಲವನಾಗಿದ್ದಾನೆ.