Ta Ha (Taa-haa)
20. ತ್ವಾಹಾ(ತ್ವಾಹಾ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
20:1
طه ۞
ತ್ವಾ ಹಾ.
20:2
مَا أَنْزَلْنَا عَلَيْكَ الْقُرْآنَ لِتَشْقَىٰ ۞
(ದೂತರೇ,) ನಾವು ಈ ಕುರ್‌ಆನನ್ನು ನಿಮಗೆ ಇಳಿಸಿ ಕೊಟ್ಟಿರುವುದು ನಿಮ್ಮನ್ನು ಕಷ್ಟದಲ್ಲಿ ಸಿಲುಕಿಸಲಿಕ್ಕಲ್ಲ.
20:3
إِلَّا تَذْكِرَةً لِمَنْ يَخْشَىٰ ۞
ಇದು ಭಕ್ತಿಯುಳ್ಳವರಿಗಾಗಿ ಇರುವ ಉಪದೇಶವಾಗಿದೆ.
20:4
تَنْزِيلًا مِمَّنْ خَلَقَ الْأَرْضَ وَالسَّمَاوَاتِ الْعُلَى ۞
ಭೂಮಿಯನ್ನು ಹಾಗೂ ಎತ್ತರದ ಆಕಾಶಗಳನ್ನು ಸೃಷ್ಟಿಸಿದವನೇ ಇದನ್ನು ಇಳಿಸಿಕೊಟ್ಟಿರುವನು.
20:5
الرَّحْمَٰنُ عَلَى الْعَرْشِ اسْتَوَىٰ ۞
ಅವನು ಪರಮ ದಯಾಳು - ವಿಶ್ವಸಿಂಹಾಸನದಲ್ಲಿ ನೆಲೆಸಿರುವನು.
20:6
لَهُ مَا فِي السَّمَاوَاتِ وَمَا فِي الْأَرْضِ وَمَا بَيْنَهُمَا وَمَا تَحْتَ الثَّرَىٰ ۞
ಆಕಾಶಗಳಲ್ಲಿರುವ, ಭೂಮಿಯಲ್ಲಿರುವ, ಅವುಗಳ ನಡುವೆ ಇರುವ ಮತ್ತು ಭೂಮಿಯ ತಳದಲ್ಲಿರುವ ಎಲ್ಲವೂ ಅವನಿಗೇ ಸೇರಿದೆ.
20:7
وَإِنْ تَجْهَرْ بِالْقَوْلِ فَإِنَّهُ يَعْلَمُ السِّرَّ وَأَخْفَى ۞
ನೀವು ಅದೆಷ್ಟು ಧ್ವನಿ ಏರಿಸಿದರೂ, ಅವನಂತು ಅತ್ಯಂತ ಗುಟ್ಟಿನ ಹಾಗೂ ಗುಪ್ತವಾಗಿಡಲಾದ ವಿಷಯಗಳನ್ನೂ ಖಂಡಿತ ಬಲ್ಲವನಾಗಿದ್ದಾನೆ.
20:8
اللَّهُ لَا إِلَٰهَ إِلَّا هُوَ ۖ لَهُ الْأَسْمَاءُ الْحُسْنَىٰ ۞
ಅಲ್ಲಾಹ್- ಅವನ ಹೊರತು ಬೇರೆ ದೇವರಿಲ್ಲ. ಅವನಿಗೆ ಅತ್ಯುತ್ತಮ ಹೆಸರುಗಳಿವೆ.
20:9
وَهَلْ أَتَاكَ حَدِيثُ مُوسَىٰ ۞
ಇನ್ನು ನಿಮಗೆ ಮೂಸಾರ ಸುದ್ದಿ ತಲುಪಿದೆಯೇ?
20:10
إِذْ رَأَىٰ نَارًا فَقَالَ لِأَهْلِهِ امْكُثُوا إِنِّي آنَسْتُ نَارًا لَعَلِّي آتِيكُمْ مِنْهَا بِقَبَسٍ أَوْ أَجِدُ عَلَى النَّارِ هُدًى ۞
ಅವರು (ದೂರದಲ್ಲಿ) ಬೆಂಕಿಯನ್ನು ಕಂಡಾಗ, ತಮ್ಮ ಮನೆಯವರೊಡನೆ ಹೇಳಿದರು; ನೀವು ಇಲ್ಲೇ ಇರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ಅಲ್ಲಿಂದ ನಿಮಗಾಗಿ ಕೆಂಡವನ್ನು ತರಲು ನನಗೆ ಸಾಧ್ಯವಾದೀತು ಅಥವಾ ಬೆಂಕಿಯ ಬಳಿ ನನಗೆ (ಮುಂದಿನ ದಾರಿಯ ಕುರಿತು) ಮಾರ್ಗದರ್ಶನ ಸಿಕ್ಕೀತು.
20:11
فَلَمَّا أَتَاهَا نُودِيَ يَا مُوسَىٰ ۞
ಅವರು ಅದರ ಬಳಿಗೆ ತಲುಪಿದಾಗ ನಾವು ಕರೆದೆವು; ಓ ಮೂಸಾ!
20:12
إِنِّي أَنَا رَبُّكَ فَاخْلَعْ نَعْلَيْكَ ۖ إِنَّكَ بِالْوَادِ الْمُقَدَّسِ طُوًى ۞
ನಾನೇ ನಿಮ್ಮ ಒಡೆಯ. ನೀವು ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ನೀವು ಪವಿತ್ರವಾದ ‘ತುವಾ’ ಕಣಿವೆಯಲ್ಲಿದ್ದೀರಿ.
20:13
وَأَنَا اخْتَرْتُكَ فَاسْتَمِعْ لِمَا يُوحَىٰ ۞
ನಾನು ನಿಮ್ಮನ್ನು ಆರಿಸಿಕೊಂಡಿರುವೆನು. ಇದೀಗ ನಿಮಗೆ ನೀಡಲಾಗುವ ದಿವ್ಯವಾಣಿಯನ್ನು ಕೇಳಿರಿ.
20:14
إِنَّنِي أَنَا اللَّهُ لَا إِلَٰهَ إِلَّا أَنَا فَاعْبُدْنِي وَأَقِمِ الصَّلَاةَ لِذِكْرِي ۞
ಖಂಡಿತವಾಗಿಯೂ ನಾನೇ ಅಲ್ಲಾಹ್. ನನ್ನ ಹೊರತು ಬೇರೆ ದೇವರಿಲ್ಲ. ನನ್ನನ್ನೇ ಪೂಜಿಸಿರಿ ಮತ್ತು ನನ್ನ ನೆನಪನ್ನು ಉಳಿಸಿಕೊಳ್ಳಲು ನಮಾಝ್ ಅನ್ನು ಪಾಲಿಸಿರಿ.
20:15
إِنَّ السَّاعَةَ آتِيَةٌ أَكَادُ أُخْفِيهَا لِتُجْزَىٰ كُلُّ نَفْسٍ بِمَا تَسْعَىٰ ۞
ಆ ಅಂತಿಮ ಕ್ಷಣವು ಖಂಡಿತ ಬರಲಿದೆ. ಪ್ರತಿಯೊಬ್ಬನಿಗೂ ಅವನ ಶ್ರಮದ ಫಲ ನೀಡಲಿಕ್ಕಾಗಿ, ನಾನು ಅದನ್ನು (ಅದರ ಖಚಿತ ಸಮಯವನ್ನು) ಗುಟ್ಟಾಗಿಡ ಬಯಸುತ್ತೇನೆ.
20:16
فَلَا يَصُدَّنَّكَ عَنْهَا مَنْ لَا يُؤْمِنُ بِهَا وَاتَّبَعَ هَوَاهُ فَتَرْدَىٰ ۞
ಅದರಲ್ಲಿ ನಂಬಿಕೆ ಇಲ್ಲದವನು ಮತ್ತು ತನ್ನ ಇಚ್ಛೆಯನ್ನು ಅನುಸರಿಸುವವನು ನಿಮ್ಮನ್ನು ಅದರಿಂದ (ಲೋಕಾಂತ್ಯದ ಮೇಲಿನ ನಂಬಿಕೆಯಿಂದ) ತಡೆಯದಿರಲಿ. ಅನ್ಯಥಾ ನೀವು ನಾಶವಾಗುವಿರಿ.
20:17
وَمَا تِلْكَ بِيَمِينِكَ يَا مُوسَىٰ ۞
ಓ ಮೂಸಾ, ಆ ನಿಮ್ಮ ಬಲಗೈಯಲ್ಲಿ ಏನಿದೆ?
20:18
قَالَ هِيَ عَصَايَ أَتَوَكَّأُ عَلَيْهَا وَأَهُشُّ بِهَا عَلَىٰ غَنَمِي وَلِيَ فِيهَا مَآرِبُ أُخْرَىٰ ۞
ಅವರು ಹೇಳಿದರು; ಇದು ನನ್ನ ಊರುಗೋಲು. ನಾನು ಇದನ್ನು ಆಧರಿಸಿ ನಿಲ್ಲುತ್ತೇನೆ ಮತ್ತು ನಾನು ಇದರಿಂದ ನನ್ನ ಆಡುಗಳಿಗಾಗಿ ಎಲೆಗಳನ್ನು ಉದುರಿಸುತ್ತೇನೆ. ನನಗೆ ಇದರಿಂದ ಇತರ ಹಲವು ಪ್ರಯೋಜನಗಳೂ ಇವೆ.
20:19
قَالَ أَلْقِهَا يَا مُوسَىٰ ۞
ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನೀವು ಅದನ್ನು ಕೆಳಗಿಡಿರಿ.
20:20
فَأَلْقَاهَا فَإِذَا هِيَ حَيَّةٌ تَسْعَىٰ ۞
ಅವರು ಅದನ್ನು ಕೆಳಗಿಟ್ಟರು. ಕೂಡಲೇ ಅದು ಓಡಾಡುವ ಸರ್ಪವಾಗಿ ಬಿಟ್ಟಿತ್ತು.
20:21
قَالَ خُذْهَا وَلَا تَخَفْ ۖ سَنُعِيدُهَا سِيرَتَهَا الْأُولَىٰ ۞
ಅವನು ಹೇಳಿದನು; ನೀವು ಅದನ್ನು ಹಿಡಿಯಿರಿ ಮತ್ತು ನೀವು ಅಂಜಬೇಡಿ. ನಾವು ಬಹು ಬೇಗನೇ ಅದನ್ನು ಮೊದಲಿನ ಸ್ಥಿತಿಗೆ ಮರಳಿಸುವೆವು.
20:22
وَاضْمُمْ يَدَكَ إِلَىٰ جَنَاحِكَ تَخْرُجْ بَيْضَاءَ مِنْ غَيْرِ سُوءٍ آيَةً أُخْرَىٰ ۞
ನೀವೀಗ ನಿಮ್ಮ ಕೈಯನ್ನು ನಿಮ್ಮ ತೋಳಿನಡಿಯಲ್ಲಿಡಿರಿ. ಅದು ಯಾವ ಕಷ್ಟವೂ ಇಲ್ಲದೆ ಉಜ್ವಲ ರೂಪದಲ್ಲಿ ಹೊರ ಬರುವುದು. ಇದು ಇನ್ನೊಂದು ಪುರಾವೆ.
20:23
لِنُرِيَكَ مِنْ آيَاتِنَا الْكُبْرَى ۞
ಇದೇಕೆಂದರೆ, ಮುಂದೆ ನಾವು ನಿಮಗೆ ನಮ್ಮ ದೊಡ್ಡ ಪುರಾವೆಗಳನ್ನು ತೋರಿಸಲಿರುವೆವು.
20:24
اذْهَبْ إِلَىٰ فِرْعَوْنَ إِنَّهُ طَغَىٰ ۞
ನೀವು ಫಿರ್‌ಔನ್‌ನ ಬಳಿಗೆ ಹೋಗಿರಿ. ಅವನು ಭಾರೀ ವಿದ್ರೋಹಿಯಾಗಿ ಬಿಟ್ಟಿದ್ದಾನೆ.
20:25
قَالَ رَبِّ اشْرَحْ لِي صَدْرِي ۞
ಅವರು (ಮೂಸಾ) ಪ್ರಾರ್ಥಿಸಿದರು; ನನ್ನೊಡೆಯಾ ನನಗಾಗಿ ನನ್ನ ಮನಸ್ಸನ್ನು ವಿಶಾಲಗೊಳಿಸಿಬಿಡು.
20:26
وَيَسِّرْ لِي أَمْرِي ۞
ನನ್ನ ಕೆಲಸವನ್ನು ನನ್ನ ಪಾಲಿಗೆ ಸುಲಭಗೊಳಿಸು.
20:27
وَاحْلُلْ عُقْدَةً مِنْ لِسَانِي ۞
ನನ್ನ ನಾಲಿಗೆಯಲ್ಲಿನ ಗಂಟನ್ನು ಬಿಚ್ಚು.
20:28
يَفْقَهُوا قَوْلِي ۞
ಅವರೆಲ್ಲಾ ನನ್ನ ಮಾತನ್ನು ಅರ್ಥಯಿಸುವಂತಾಗಲಿ.
20:29
وَاجْعَلْ لِي وَزِيرًا مِنْ أَهْلِي ۞
ನನ್ನ ಒಬ್ಬ ಬಂಧುವನ್ನೇ ನನ್ನ ಸಹಾಯಕನಾಗಿಸು.
20:30
هَارُونَ أَخِي ۞
(ಅದಕ್ಕಾಗಿ) ನನ್ನ ಸಹೋದರ ಹಾರೂನರಿದ್ದಾರೆ.
20:31
اشْدُدْ بِهِ أَزْرِي ۞
ಅವರ ಮೂಲಕ ನನ್ನ ಬಲವನ್ನು ಹೆಚ್ಚಿಸು.
20:32
وَأَشْرِكْهُ فِي أَمْرِي ۞
ನನ್ನ ಕೆಲಸಗಳಲ್ಲಿ ಅವರನ್ನು ನನ್ನ ಪಾಲುದಾರನಾಗಿಸು.
20:33
كَيْ نُسَبِّحَكَ كَثِيرًا ۞
ನಾವು ಪದೇ ಪದೇ ನಿನ್ನ ಗುಣಗಾನ ಮಾಡುವಂತಾಗಲಿ.
20:34
وَنَذْكُرَكَ كَثِيرًا ۞
ಮತ್ತು ಪದೇ ಪದೇ ನಿನ್ನನ್ನು ನೆನಪಿಸುವಂತಾಗಲಿ.
20:35
إِنَّكَ كُنْتَ بِنَا بَصِيرًا ۞
ನೀನು ಸದಾ ನಮ್ಮನ್ನು ನೋಡುತ್ತಿರುವೆ.
20:36
قَالَ قَدْ أُوتِيتَ سُؤْلَكَ يَا مُوسَىٰ ۞
ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನೀವು ಕೇಳಿದ್ದನ್ನೆಲ್ಲಾ ಇದೋ ನಿಮಗೆ ನೀಡಲಾಯಿತು.
20:37
وَلَقَدْ مَنَنَّا عَلَيْكَ مَرَّةً أُخْرَىٰ ۞
ನಿಜವಾಗಿ ನಾವು ಇದೀಗ ಇನ್ನೊಂದು ಬಾರಿ ನಿಮಗೆ ಉಪಕರಿಸುತ್ತಿದ್ದೇವೆ.
20:38
إِذْ أَوْحَيْنَا إِلَىٰ أُمِّكَ مَا يُوحَىٰ ۞
(ಹಿಂದೆ) ನಾವು ನಿಮ್ಮ ತಾಯಿಗೆ ಹೀಗೆಂದು ದಿವ್ಯವಾಣಿಯನ್ನು ಕಳಿಸಿದ್ದೆವು;
20:39
أَنِ اقْذِفِيهِ فِي التَّابُوتِ فَاقْذِفِيهِ فِي الْيَمِّ فَلْيُلْقِهِ الْيَمُّ بِالسَّاحِلِ يَأْخُذْهُ عَدُوٌّ لِي وَعَدُوٌّ لَهُ ۚ وَأَلْقَيْتُ عَلَيْكَ مَحَبَّةً مِنِّي وَلِتُصْنَعَ عَلَىٰ عَيْنِي ۞
ನೀನು ಅದನ್ನು (ಮಗುವನ್ನು) ಪೆಟ್ಟಿಗೆಯಲ್ಲಿಡು ಮತ್ತು ಪೆಟ್ಟಿಗೆಯನ್ನು ನದಿಯಲ್ಲಿ ಹಾಕಿ ಬಿಡು. ನದಿಯು ಅದನ್ನು ದಡಕ್ಕೆ ತಲುಪಿಸುವುದು. ಆ ಬಳಿಕ ನನ್ನ ಶತ್ರು ಹಾಗೂ ಅದರ (ಆ ಮಗುವಿನ) ಶತ್ರು ಅದನ್ನು ಎತ್ತಿಕೊಳ್ಳುವನು. ಮತ್ತು (ಕಂಡವರೆಲ್ಲಾ ಪ್ರೀತಿಸುವಂತೆ) ನಾವು ನಮ್ಮ ಕಡೆಯಿಂದ ನಿಮ್ಮ ಮೇಲೆ ವಾತ್ಸಲ್ಯವನ್ನು ಆವರಿಸಿ ಬಿಟ್ಟಿದ್ದೆವು. ಮತ್ತು ನನ್ನ ಕಣ್ಣ ಮುಂದೆಯೇ ನಿಮ್ಮ ಪೋಷಣೆ ನಡೆಯುವಂತಾಯಿತು.
20:40
إِذْ تَمْشِي أُخْتُكَ فَتَقُولُ هَلْ أَدُلُّكُمْ عَلَىٰ مَنْ يَكْفُلُهُ ۖ فَرَجَعْنَاكَ إِلَىٰ أُمِّكَ كَيْ تَقَرَّ عَيْنُهَا وَلَا تَحْزَنَ ۚ وَقَتَلْتَ نَفْسًا فَنَجَّيْنَاكَ مِنَ الْغَمِّ وَفَتَنَّاكَ فُتُونًا ۚ فَلَبِثْتَ سِنِينَ فِي أَهْلِ مَدْيَنَ ثُمَّ جِئْتَ عَلَىٰ قَدَرٍ يَا مُوسَىٰ ۞
ನಿಮ್ಮ ಸಹೋದರಿಯು ನಡೆದು ಹೋಗುತ್ತಿದ್ದಳು ಮತ್ತು ಆಕೆ ‘‘ಈತನನ್ನು ಪೋಷಿಸಬಲ್ಲವರನ್ನು ನಾನು ನಿಮಗೆ ತೋರಿಸಲೇ?’’ ಎಂದು ಕೇಳಿದಳು. ಹೀಗೆ ನಾವು ಮತ್ತೆ ನಿಮ್ಮನ್ನು ನಿಮ್ಮ ತಾಯಿಯೆಡೆಗೆ ಮರಳಿಸಿದೆವು - ಆಕೆಯ ಕಣ್ಣು ತಂಪಾಗಲೆಂದು ಹಾಗೂ ಆಕೆ ದುಃಖಿಸದಿರಲೆಂದು. ಮುಂದೆ ನೀವು ಒಬ್ಬನ ಹತ್ಯೆ ನಡೆಸಿದಿರಿ. ಆಗ ನಾವು ನಿಮ್ಮನ್ನು ಸಂಕಟದಿಂದ ಪಾರುಗೊಳಿಸಿದೆವು ಮತ್ತು ನಿಮ್ಮನ್ನು ನಾವು ಹಲವು ಪರೀಕ್ಷೆಗಳಿಗೆ ಒಳಪಡಿಸಿದೆವು. ಆ ಬಳಿಕ ನೀವು ಹಲವು ವರ್ಷ ಮದ್‌ಯನ್‌ನವರ ಜೊತೆ ಇದ್ದಿರಿ. ಇದೀಗ ಓ ಮೂಸಾ, ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ.
20:41
وَاصْطَنَعْتُكَ لِنَفْسِي ۞
ನಾನು ನಿಮ್ಮನ್ನು ನನಗಾಗಿಯೇ ಆರಿಸಿಕೊಂಡಿರುವೆನು.
20:42
اذْهَبْ أَنْتَ وَأَخُوكَ بِآيَاتِي وَلَا تَنِيَا فِي ذِكْرِي ۞
ನೀವು ಮತ್ತು ನಿಮ್ಮ ಸಹೋದರ (ಹಾರೂನ್) ನನ್ನ ಪುರಾವೆಗಳೊಂದಿಗೆ ಹೋಗಿರಿ ಮತ್ತು ನನ್ನನ್ನು ಸ್ಮರಿಸುವ ವಿಷಯದಲ್ಲಿ ಆಲಸ್ಯ ತೋರಬೇಡಿ.
20:43
اذْهَبَا إِلَىٰ فِرْعَوْنَ إِنَّهُ طَغَىٰ ۞
ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿರಿ. ಅವನು ಖಂಡಿತ ಬಂಡಾಯವೆದ್ದಿರುವನು.
20:44
فَقُولَا لَهُ قَوْلًا لَيِّنًا لَعَلَّهُ يَتَذَكَّرُ أَوْ يَخْشَىٰ ۞
ನೀವಿಬ್ಬರೂ ಅವನೊಡನೆ ಸೌಮ್ಯವಾದ ಮಾತನ್ನೇ ಆಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ದೇವ ಭಯ ಉಳ್ಳವನಾಗಲೂಬಹುದು (ಎಂದು ನಿರೀಕ್ಷಿಸುತ್ತಾ).
20:45
قَالَا رَبَّنَا إِنَّنَا نَخَافُ أَنْ يَفْرُطَ عَلَيْنَا أَوْ أَنْ يَطْغَىٰ ۞
ಅವರಿಬ್ಬರೂ ಹೇಳಿದರು; ನಮ್ಮೊಡೆಯಾ, ಅವನು ನಮ್ಮ ಮೇಲೆ ದೌರ್ಜನ್ಯವೆಸಗುವ ಅಥವಾ ಮತ್ತಷ್ಟು ವಿದ್ರೋಹಿಯಾಗುವ ಭಯ ನಮಗಿದೆ.
20:46
قَالَ لَا تَخَافَا ۖ إِنَّنِي مَعَكُمَا أَسْمَعُ وَأَرَىٰ ۞
ಅವನು (ಅಲ್ಲಾಹನು) ಹೇಳಿದನು; ನೀವಿಬ್ಬರೂ ಅಂಜಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ಎಲ್ಲವನ್ನೂ ಕೇಳುತ್ತಿರುತ್ತೇನೆ ಮತ್ತು ನೋಡುತ್ತಿರುತ್ತೇನೆ.
20:47
فَأْتِيَاهُ فَقُولَا إِنَّا رَسُولَا رَبِّكَ فَأَرْسِلْ مَعَنَا بَنِي إِسْرَائِيلَ وَلَا تُعَذِّبْهُمْ ۖ قَدْ جِئْنَاكَ بِآيَةٍ مِنْ رَبِّكَ ۖ وَالسَّلَامُ عَلَىٰ مَنِ اتَّبَعَ الْهُدَىٰ ۞
ನೀವೀಗ ಅವನ ಬಳಿಗೆ ಹೋಗಿರಿ ಮತ್ತು ಹೇಳಿರಿ; ನಾವು ಖಂಡಿತ ನಿನ್ನ ಒಡೆಯನ ದೂತರು. ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿಕೊಡು. ನೀನು ಅವರನ್ನು ಹಿಂಸಿಸಬೇಡ. ನಾವು ನಿನ್ನ ಒಡೆಯನ ಕಡೆಯಿಂದ, ಪುರಾವೆಯೊಂದಿಗೆ ನಿನ್ನ ಬಳಿಗೆ ಬಂದಿರುವೆವು. ಸನ್ಮಾರ್ಗವನ್ನು ಅನುಸರಿಸುವವರಿಗೆ ಶಾಂತಿ ಸಿಗಲಿ.
20:48
إِنَّا قَدْ أُوحِيَ إِلَيْنَا أَنَّ الْعَذَابَ عَلَىٰ مَنْ كَذَّبَ وَتَوَلَّىٰ ۞
ನಮಗೆ ದಿವ್ಯಸಂದೇಶವನ್ನು ನೀಡಲಾಗಿದೆ - (ಇದನ್ನು) ಸುಳ್ಳೆಂದವನು ಹಾಗೂ ಕಡೆಗಣಿಸಿದವನು ಶಿಕ್ಷೆಗೆ ಪಾತ್ರನಾಗುವನು.
20:49
قَالَ فَمَنْ رَبُّكُمَا يَا مُوسَىٰ ۞
ಅವನು (ಫಿರ್‌ಔನ್) ಕೇಳಿದನು; ಓ ಮೂಸಾ, ನಿಮ್ಮಿಬ್ಬರ ದೇವರು ಯಾರು?
20:50
قَالَ رَبُّنَا الَّذِي أَعْطَىٰ كُلَّ شَيْءٍ خَلْقَهُ ثُمَّ هَدَىٰ ۞
ಅವರು (ಮೂಸಾ) ಹೇಳಿದರು; ಪ್ರತಿಯೊಂದು ವಸ್ತುವಿಗೆ ರೂಪ ಕೊಟ್ಟವನು ಮತ್ತು ಮಾರ್ಗದರ್ಶನ ನೀಡಿದವನೇ ನನ್ನ ದೇವರು.
20:51
قَالَ فَمَا بَالُ الْقُرُونِ الْأُولَىٰ ۞
ಅವನು ಹೇಳಿದನು; ಹಾಗಾದರೆ ಹಿಂದಿನ ಕಾಲಗಳ ಜನರ ಸ್ಥಿತಿಯೇನು?
20:52
قَالَ عِلْمُهَا عِنْدَ رَبِّي فِي كِتَابٍ ۖ لَا يَضِلُّ رَبِّي وَلَا يَنْسَى ۞
ಅವರು ಹೇಳಿದರು; ಅವರ ಕುರಿತಾದ ಮಾಹಿತಿಯು ನನ್ನ ದೇವರ ಬಳಿ ಒಂದು ಗ್ರಂಥದಲ್ಲಿದೆ. ನನ್ನ ದೇವರು ಎಂದೂ ತಪ್ಪುವುದಿಲ್ಲ ಮತ್ತು ಎಂದೂ ಮರೆಯುವುದಿಲ್ಲ.
20:53
الَّذِي جَعَلَ لَكُمُ الْأَرْضَ مَهْدًا وَسَلَكَ لَكُمْ فِيهَا سُبُلًا وَأَنْزَلَ مِنَ السَّمَاءِ مَاءً فَأَخْرَجْنَا بِهِ أَزْوَاجًا مِنْ نَبَاتٍ شَتَّىٰ ۞
ಅವನೇ ನಿಮ್ಮ ಪಾಲಿಗೆ ಭೂಮಿಯನ್ನು ತೊಟ್ಟಿಲಾಗಿಸಿದವನು ಮತ್ತು ಅದರಲ್ಲಿ ನಿಮಗಾಗಿ ದಾರಿಗಳನ್ನು ತೆರೆದವನು ಮತ್ತು ಆಕಾಶದಿಂದ ನೀರನ್ನು ಸುರಿಸಿದವನು. ನಾವು ಅದರಿಂದ ವಿವಿಧ ಜಾತಿಯ ಸಸ್ಯಗಳ ಜೊತೆಗಳನ್ನು ಬೆಳೆಸಿದೆವು.
20:54
كُلُوا وَارْعَوْا أَنْعَامَكُمْ ۗ إِنَّ فِي ذَٰلِكَ لَآيَاتٍ لِأُولِي النُّهَىٰ ۞
ನೀವೂ ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ಖಂಡಿತವಾಗಿಯೂ ಬುದ್ಧಿ ಉಳ್ಳವರಿಗೆ ಇದರಲ್ಲಿ ಪುರಾವೆಗಳಿವೆ.
20:55
۞ مِنْهَا خَلَقْنَاكُمْ وَفِيهَا نُعِيدُكُمْ وَمِنْهَا نُخْرِجُكُمْ تَارَةً أُخْرَىٰ ۞
ನಾವು ಅದರಿಂದಲೇ (ಮಣ್ಣಿನಿಂದಲೇ) ನಿಮ್ಮನ್ನು ಸೃಷ್ಟಿಸಿರುವೆವು. ಅದರೊಳಕ್ಕೇ ನಾವು ನಿಮ್ಮನ್ನು ಮರಳಿಸುವೆವು ಮತ್ತು ಇನ್ನೊಮ್ಮೆ ಅದರೊಳಗಿಂದಲೇ ನಿಮ್ಮನ್ನು ನಾವು ಹೊರತರುವೆವು.
20:56
وَلَقَدْ أَرَيْنَاهُ آيَاتِنَا كُلَّهَا فَكَذَّبَ وَأَبَىٰ ۞
ನಾವು ಆತನಿಗೆ (ಫಿರ್‌ಔನನಿಗೆ) ನಮ್ಮ ಎಲ್ಲ ಪುರಾವೆಗಳನ್ನು ತೋರಿಸಿದೆವು. ಆದರೆ ಅವನು ಅವೆಲ್ಲವನ್ನೂ ಸುಳ್ಳೆಂದು ತಿರಸ್ಕರಿಸಿದನು ಮತ್ತು ನಿರಾಕರಿಸಿದನು.
20:57
قَالَ أَجِئْتَنَا لِتُخْرِجَنَا مِنْ أَرْضِنَا بِسِحْرِكَ يَا مُوسَىٰ ۞
ಅವನು ಹೇಳಿದನು; ಓ ಮೂಸಾ, ನೀನೇನು, ನಿನ್ನ ಜಾದೂಗಾರಿಕೆಯ ಮೂಲಕ ನಮ್ಮನ್ನು ನಮ್ಮ ನಾಡಿನಿಂದ ಹೊರಹಾಕಲಿಕ್ಕಾಗಿ ನಮ್ಮ ಬಳಿಗೆ ಬಂದಿರುವೆಯಾ?
20:58
فَلَنَأْتِيَنَّكَ بِسِحْرٍ مِثْلِهِ فَاجْعَلْ بَيْنَنَا وَبَيْنَكَ مَوْعِدًا لَا نُخْلِفُهُ نَحْنُ وَلَا أَنْتَ مَكَانًا سُوًى ۞
ಹಾಗಾದರೆ ನಿನ್ನೆದುರಿಗೆ ನಾವು ಇಂತಹದೇ ಜಾದೂಗಾರಿಕೆಯನ್ನು ತರುವೆವು. ಅದಕ್ಕಾಗಿ ನಮ್ಮ ಹಾಗೂ ನಿನ್ನ ನಡುವೆ ಒಂದು ದಿನವನ್ನು ನಿಗದಿ ಪಡಿಸು. ನಾವಾಗಲಿ ನೀನಾಗಲಿ ಅದನ್ನು ಉಲ್ಲಂಘಿಸಬಾರದು. ಇದು ಒಂದು ತೆರೆದ ಬಯಲಲ್ಲಿ ನಡೆಯಲಿ.
20:59
قَالَ مَوْعِدُكُمْ يَوْمُ الزِّينَةِ وَأَنْ يُحْشَرَ النَّاسُ ضُحًى ۞
ಅವರು (ಮೂಸಾ) ಹೇಳಿದರು; ಉತ್ಸವದ ದಿನವೇ ನಿಮ್ಮ ನಿಶ್ಚಿತ ದಿನವಾಗಲಿ. ಅಂದು ಮುಂಜಾನೆ ಜನರನ್ನು ಸೇರಿಸುವ ಕೆಲಸ ನಡೆಯಲಿ.
20:60
فَتَوَلَّىٰ فِرْعَوْنُ فَجَمَعَ كَيْدَهُ ثُمَّ أَتَىٰ ۞
ಹಾಗೆ ಹೊರಟು ಹೋದ ಫಿರ್‌ಔನನು ತನ್ನೆಲ್ಲಾ ದಾಳಗಳನ್ನು ಸಂಗ್ರಹಿಸಿ ಮತ್ತೆ ಬಂದನು.
20:61
قَالَ لَهُمْ مُوسَىٰ وَيْلَكُمْ لَا تَفْتَرُوا عَلَى اللَّهِ كَذِبًا فَيُسْحِتَكُمْ بِعَذَابٍ ۖ وَقَدْ خَابَ مَنِ افْتَرَىٰ ۞
ಅವನೊಡನೆ (ಫಿರ್‌ಔನ್ ಮತ್ತವನ ಜಾದೂಗಾರರೊಡನೆ) ಮೂಸಾ ಹೇಳಿದರು; ನಿಮಗೆ ನಾಶವಿದೆ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸಬೇಡಿ. ಅವನು ನಿಮ್ಮನ್ನು ಶಿಕ್ಷಿಸಿ ನಾಶಗೊಳಿಸುವನು. ಸುಳ್ಳನ್ನು ಸೃಷ್ಟಿಸಿದವನು ಸೋಲುಣ್ಣುವನು.
20:62
فَتَنَازَعُوا أَمْرَهُمْ بَيْنَهُمْ وَأَسَرُّوا النَّجْوَىٰ ۞
ಅವರು (ಜಾದೂಗಾರರು) ತಾವೇನು ಮಾಡಬೇಕೆಂಬ ಕುರಿತು ಪರಸ್ಪರ ಜಗಳಾಡಿದರು ಮತ್ತು ಗುಟ್ಟಾಗಿ ಸಮಾಲೋಚಿಸಿದರು.
20:63
قَالُوا إِنْ هَٰذَانِ لَسَاحِرَانِ يُرِيدَانِ أَنْ يُخْرِجَاكُمْ مِنْ أَرْضِكُمْ بِسِحْرِهِمَا وَيَذْهَبَا بِطَرِيقَتِكُمُ الْمُثْلَىٰ ۞
ಅವರು (ಜನರೊಡನೆ) ಹೇಳಿದರು; ಇವರಿಬ್ಬರು ಜಾದೂಗಾರರು ತಮ್ಮ ಜಾದುವಿನ ಮೂಲಕ ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಬಯಸುತ್ತಾರೆ ಮತ್ತು ನಿಮ್ಮ ಶ್ರೇಷ್ಠ ಪಂಥವನ್ನು ನಾಶ ಪಡಿಸಬಯಸುತ್ತಾರೆ.
20:64
فَأَجْمِعُوا كَيْدَكُمْ ثُمَّ ائْتُوا صَفًّا ۚ وَقَدْ أَفْلَحَ الْيَوْمَ مَنِ اسْتَعْلَىٰ ۞
ನೀವೀಗ ನಿಮ್ಮೆಲ್ಲ ಉಪಾಯಗಳನ್ನು ಒಟ್ಟು ಸೇರಿಸಿ ಸಾಲಾಗಿ ಬನ್ನಿರಿ. ಇಂದು ಮೇಲುಗೈ ಸಾಧಿಸುವವನೇ ವಿಜಯಿಯಾಗುವನು.
20:65
قَالُوا يَا مُوسَىٰ إِمَّا أَنْ تُلْقِيَ وَإِمَّا أَنْ نَكُونَ أَوَّلَ مَنْ أَلْقَىٰ ۞
ಅವರು (ಜಾದೂಗಾರರು) ಹೇಳಿದರು; ಓ ಮೂಸಾ, ನೀವು (ದಂಡವನ್ನು) ಎಸೆಯುವಿರಾ? ಅಥವಾ ಮೊದಲು ನಾವು ಎಸೆಯಬೇಕೇ?
20:66
قَالَ بَلْ أَلْقُوا ۖ فَإِذَا حِبَالُهُمْ وَعِصِيُّهُمْ يُخَيَّلُ إِلَيْهِ مِنْ سِحْرِهِمْ أَنَّهَا تَسْعَىٰ ۞
ಅವರು (ಮೂಸಾ), ‘‘ಮೊದಲು ನೀವೇ ಎಸೆಯಿರಿ’’ ಎಂದರು. ಅಷ್ಟರಲ್ಲೇ ಅವರಿಗೆ (ಮೂಸಾರಿಗೆ), ಅವರ (ಜಾದೂಗಾರರ) ಜಾದುವಿನಿಂದಾಗಿ ಅವರ ಹಗ್ಗಗಳು ಹಾಗೂ ದಂಡಗಳೆಲ್ಲಾ ಚಲಿಸುತ್ತಿರುವಂತೆ ತೋರಿದವು.
20:67
فَأَوْجَسَ فِي نَفْسِهِ خِيفَةً مُوسَىٰ ۞
ಮೂಸಾ ತಮ್ಮ ಮನದೊಳಗೇ ಅಂಜಿದರು.
20:68
قُلْنَا لَا تَخَفْ إِنَّكَ أَنْتَ الْأَعْلَىٰ ۞
ನಾವು ಹೇಳಿದೆವು; ನೀವು ಅಂಜಬೇಡಿ. ಖಂಡಿತ ನೀವೇ ವಿಜಯಿಯಾಗುವಿರಿ.
20:69
وَأَلْقِ مَا فِي يَمِينِكَ تَلْقَفْ مَا صَنَعُوا ۖ إِنَّمَا صَنَعُوا كَيْدُ سَاحِرٍ ۖ وَلَا يُفْلِحُ السَّاحِرُ حَيْثُ أَتَىٰ ۞
ನೀವೀಗ ನಿಮ್ಮ ಬಲಗೈಯಲ್ಲಿರುವುದನ್ನು ಎಸೆದು ಬಿಡಿರಿ. ಅವರು ರಚಿಸಿ ತಂದಿರುವ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ರಚಿಸಿ ತಂದಿರುವುದೆಲ್ಲವೂ ಖಂಡಿತವಾಗಿಯೂ ಕೇವಲ ಜಾದೂಗಾರರ ಮೋಸವಾಗಿದೆ. ಜಾದೂಗಾರನು ಎಲ್ಲಿಗೆ ಹೋದರೂ ವಿಜಯಿಯಾಗಲಾರನು.
20:70
فَأُلْقِيَ السَّحَرَةُ سُجَّدًا قَالُوا آمَنَّا بِرَبِّ هَارُونَ وَمُوسَىٰ ۞
ಕೊನೆಗೆ ಜಾದೂಗಾರರು ಸಾಷ್ಟಾಂಗವೆರಗಿಬಿಟ್ಟರು. ಅವರು ಹೇಳಿದರು; ನಾವು ಹಾರೂನ್ ಮತ್ತು ಮೂಸಾರ ದೇವರನ್ನು ನಂಬಿದೆವು.
20:71
قَالَ آمَنْتُمْ لَهُ قَبْلَ أَنْ آذَنَ لَكُمْ ۖ إِنَّهُ لَكَبِيرُكُمُ الَّذِي عَلَّمَكُمُ السِّحْرَ ۖ فَلَأُقَطِّعَنَّ أَيْدِيَكُمْ وَأَرْجُلَكُمْ مِنْ خِلَافٍ وَلَأُصَلِّبَنَّكُمْ فِي جُذُوعِ النَّخْلِ وَلَتَعْلَمُنَّ أَيُّنَا أَشَدُّ عَذَابًا وَأَبْقَىٰ ۞
ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಲ್ಲಾ! ಖಂಡಿತವಾಗಿಯೂ ಅವನೇ (ಮೂಸಾ) ನಿಮಗೆ ಜಾದೂಗಾರಿಕೆ ಕಲಿಸಿದ ನಿಮ್ಮ ಹಿರಿಯನು. ನಾನೀಗ ನಿಮ್ಮ ಕೈಗಳನ್ನು ಮತ್ತು ನಿಮ್ಮ ಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುತ್ತೇನೆ ಮತ್ತು ಖರ್ಜೂರದ ಕಂಬಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ನಮ್ಮ ಪೈಕಿ, ಹೆಚ್ಚು ತೀವ್ರವಾಗಿರುವ ಮತ್ತು ಬಹುಕಾಲ ಉಳಿಯುವ ಶಿಕ್ಷೆಯನ್ನು ನೀಡಬಲ್ಲವರು ಯಾರು ಎಂಬುದು ಆಗ ನಿಮಗೆ ತಿಳಿಯುವುದು.
20:72
قَالُوا لَنْ نُؤْثِرَكَ عَلَىٰ مَا جَاءَنَا مِنَ الْبَيِّنَاتِ وَالَّذِي فَطَرَنَا ۖ فَاقْضِ مَا أَنْتَ قَاضٍ ۖ إِنَّمَا تَقْضِي هَٰذِهِ الْحَيَاةَ الدُّنْيَا ۞
ಅವರು (ಜಾದೂಗಾರರು) ಹೇಳಿದರು; ನಮ್ಮ ಮುಂದೆ ಬಂದಿರುವ ಸ್ಪಷ್ಟ ಪುರಾವೆಗಳೆದುರು ಹಾಗೂ ನಮ್ಮನ್ನು ಸೃಷ್ಟಿಸಿದವನೆದುರು ನಾವು ಖಂಡಿತ ನಿನಗೆ ಪ್ರಾಶಸ್ತ್ಯ ನೀಡಲಾರೆವು. ನೀನೇನು ತೀರ್ಮಾನಿಸುವೆಯೋ ಅದನ್ನು ತೀರ್ಮಾನಿಸಿಬಿಡು. ನಿನಗೆ ಹೆಚ್ಚೆಂದರೆ ಈ ಲೋಕದ ಬದುಕಿನ ಕುರಿತು ಮಾತ್ರ ತೀರ್ಮಾನಿಸಲು ಸಾಧ್ಯ.
20:73
إِنَّا آمَنَّا بِرَبِّنَا لِيَغْفِرَ لَنَا خَطَايَانَا وَمَا أَكْرَهْتَنَا عَلَيْهِ مِنَ السِّحْرِ ۗ وَاللَّهُ خَيْرٌ وَأَبْقَىٰ ۞
ನಾವಂತು ನಮ್ಮ ಒಡೆಯನಲ್ಲಿ ನಂಬಿಕೆ ಇಟ್ಟಿರುವೆವು - ನಮ್ಮ ತಪ್ಪುಗಳನ್ನು ಮತ್ತು ಜಾದುವಿನ ಹೆಸರಲ್ಲಿ ನೀನು ಬಲವಂತವಾಗಿ ನಮ್ಮಿಂದ ಮಾಡಿಸಿದ ಎಲ್ಲ ಕೃತ್ಯಗಳನ್ನು ಅವನು ಕ್ಷಮಿಸಬೇಕೆಂದು (ನಾವು ಈ ನಿರ್ಧಾರ ಮಾಡಿರುವೆವು). ಅಲ್ಲಾಹನು ಸರ್ವಶ್ರೇಷ್ಠನಾಗಿದ್ದಾನೆ ಮತ್ತು ಸದಾಕಾಲ ಇರುವವನಾಗಿದ್ದಾನೆ.
20:74
إِنَّهُ مَنْ يَأْتِ رَبَّهُ مُجْرِمًا فَإِنَّ لَهُ جَهَنَّمَ لَا يَمُوتُ فِيهَا وَلَا يَحْيَىٰ ۞
ತನ್ನ ಒಡೆಯನ ಬಳಿ ಅಪರಾಧಿಯಾಗಿ ಹಾಜರಾದವನಿಗೆ ಖಂಡಿತ ನರಕವೇ ಗತಿ. ಅಲ್ಲಿ ಅವನು ಸಾಯಲಾರನು ಮತ್ತು ಬದುಕಿಯೂ ಇರಲಾರನು.
20:75
وَمَنْ يَأْتِهِ مُؤْمِنًا قَدْ عَمِلَ الصَّالِحَاتِ فَأُولَٰئِكَ لَهُمُ الدَّرَجَاتُ الْعُلَىٰ ۞
ಇನ್ನು, ವಿಶ್ವಾಸಿಯಾಗಿ ಅವನ ಮುಂದೆ ಹಾಜರಾದವನು - ಅವನು ಸತ್ಕರ್ಮಗಳನ್ನೂ ಮಾಡಿದ್ದರೆ, ಅವರಿಗೆ ಉನ್ನತವಾದ ಸ್ಥಾನಗಳಿವೆ.
20:76
جَنَّاتُ عَدْنٍ تَجْرِي مِنْ تَحْتِهَا الْأَنْهَارُ خَالِدِينَ فِيهَا ۚ وَذَٰلِكَ جَزَاءُ مَنْ تَزَكَّىٰ ۞
ಶಾಶ್ವತವಾದ ತೋಟಗಳಿವೆ. ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತಿರುವವು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ತನ್ನನ್ನು ಸಂಸ್ಕರಿಸಿಕೊಂಡವನಿಗೆ ಇರುವ ಪ್ರತಿಫಲ.
20:77
وَلَقَدْ أَوْحَيْنَا إِلَىٰ مُوسَىٰ أَنْ أَسْرِ بِعِبَادِي فَاضْرِبْ لَهُمْ طَرِيقًا فِي الْبَحْرِ يَبَسًا لَا تَخَافُ دَرَكًا وَلَا تَخْشَىٰ ۞
ಮುಂದೆ, ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನೀವು ರಾತ್ರಿ ಹೊತ್ತು ನನ್ನ ದಾಸರೊಂದಿಗೆ ಹೊರಡಿರಿ ಮತ್ತು ಅವರಿಗಾಗಿ ಸಮುದ್ರದಲ್ಲಿ ಒಣದಾರಿಗಳನ್ನು ನಿರ್ಮಿಸಿರಿ. ನಿಮಗೆ, ಬಂಧಿತನಾಗುವ ಭಯವೂ ಇರದು (ಮುಳುಗಿ ಬಿಡುವ) ಆಶಂಕೆಯೂ ಇರದು.
20:78
فَأَتْبَعَهُمْ فِرْعَوْنُ بِجُنُودِهِ فَغَشِيَهُمْ مِنَ الْيَمِّ مَا غَشِيَهُمْ ۞
ಫಿರ್‌ಔನನು ತನ್ನ ಪಡೆಗಳೊಂದಿಗೆ ಅವರನ್ನು ಹಿಂಬಾಲಿಸಿ ಬಂದನು. ಕೊನೆಗೆ ಸಮುದ್ರವು ಅವರನ್ನು ಸಂಪೂರ್ಣವಾಗಿ ಮುತ್ತಿಕೊಂಡಿತು.
20:79
وَأَضَلَّ فِرْعَوْنُ قَوْمَهُ وَمَا هَدَىٰ ۞
ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿದ್ದನು - ಅವನು ಅವರನ್ನು ಸರಿದಾರಿಯಲ್ಲಿ ನಡೆಸಲಿಲ್ಲ.
20:80
يَا بَنِي إِسْرَائِيلَ قَدْ أَنْجَيْنَاكُمْ مِنْ عَدُوِّكُمْ وَوَاعَدْنَاكُمْ جَانِبَ الطُّورِ الْأَيْمَنَ وَنَزَّلْنَا عَلَيْكُمُ الْمَنَّ وَالسَّلْوَىٰ ۞
ಇಸ್ರಾಈಲರ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಹಾಗೂ ತೂರ್ ಪರ್ವತದ ಬಲ ಭಾಗದಲ್ಲಿ ನಾವು ನಿಮಗೆ ಮಾತು ಕೊಟ್ಟೆವು ಮತ್ತು ನಿಮಗಾಗಿ ಮನ್ನ್ ಹಾಗೂ ಸಲ್ವಾ (ಎಂಬ ವಿಶೇಷ ಆಹಾರ)ಗಳನ್ನು ಇಳಿಸಿಕೊಟ್ಟೆವು.
20:81
كُلُوا مِنْ طَيِّبَاتِ مَا رَزَقْنَاكُمْ وَلَا تَطْغَوْا فِيهِ فَيَحِلَّ عَلَيْكُمْ غَضَبِي ۖ وَمَنْ يَحْلِلْ عَلَيْهِ غَضَبِي فَقَدْ هَوَىٰ ۞
ನಾವು ನಿಮಗೆ ಕೊಟ್ಟಿರುವುದರಲ್ಲಿ ನಿರ್ಮಲವಾಗಿರುವುದನ್ನು ತಿನ್ನಿರಿ ಮತ್ತು ಈ ವಿಷಯದಲ್ಲಿ ವಿದ್ರೋಹವೆಸಗಬೇಡಿ. ಅನ್ಯಥಾ ನನ್ನ ಕೋಪವು ನಿಮ್ಮ ಮೇಲೆರಗುವುದು. ನನ್ನ ಕೋಪವು ಯಾರ ಮೇಲೆರಗಿತೋ ಅವನು ನಾಶವಾದನು.
20:82
وَإِنِّي لَغَفَّارٌ لِمَنْ تَابَ وَآمَنَ وَعَمِلَ صَالِحًا ثُمَّ اهْتَدَىٰ ۞
ಪಶ್ಚಾತ್ತಾಪ ಪಡುವವರು, ವಿಶ್ವಾಸಿಗಳಾಗಿರುವವರು, ಸತ್ಕರ್ಮ ಮಾಡುವವರು ಮತ್ತು ಸರಿದಾರಿಯಲ್ಲಿರುವವರ ಪಾಲಿಗೆ ನಾನು ಖಂಡಿತ ತುಂಬಾ ಕ್ಷಮಾಶೀಲನಾಗಿದ್ದೇನೆ.
20:83
۞ وَمَا أَعْجَلَكَ عَنْ قَوْمِكَ يَا مُوسَىٰ ۞
(ಮುಂದೆ ಅಲ್ಲಾಹನು ಕೇಳಿದನು;) ಓ ಮೂಸಾ, ನೀವು ನಿಮ್ಮ ಜನಾಂಗದವರಿಗಿಂತ ಮೊದಲು ಬರಲು ಕಾರಣವೇನು?
20:84
قَالَ هُمْ أُولَاءِ عَلَىٰ أَثَرِي وَعَجِلْتُ إِلَيْكَ رَبِّ لِتَرْضَىٰ ۞
ಅವರು ಹೇಳಿದರು; ಅವರು ನನ್ನ ಹಿಂದೆಯೇ ಬರುತ್ತಿದ್ದಾರೆ. ನನ್ನೊಡೆಯಾ, ನಾನು ನಿನ್ನನ್ನು ವೆುಚ್ಚಿಸಬೇಕೆಂದು ಆತುರವಾಗಿ ಬಂದೆ.
20:85
قَالَ فَإِنَّا قَدْ فَتَنَّا قَوْمَكَ مِنْ بَعْدِكَ وَأَضَلَّهُمُ السَّامِرِيُّ ۞
ಅವನು (ಅಲ್ಲಾಹನು) ಹೇಳಿದನು; ನೀವು ಹೊರಟ ಬಳಿಕ ನಾವು ನಿಮ್ಮ ಜನಾಂಗವನ್ನು ಪರೀಕ್ಷಿಸಿದೆವು ಮತ್ತು ಅವರನ್ನು ಸಾಮಿರೀ ದಾರಿ ತಪ್ಪಿಸಿದನು.
20:86
فَرَجَعَ مُوسَىٰ إِلَىٰ قَوْمِهِ غَضْبَانَ أَسِفًا ۚ قَالَ يَا قَوْمِ أَلَمْ يَعِدْكُمْ رَبُّكُمْ وَعْدًا حَسَنًا ۚ أَفَطَالَ عَلَيْكُمُ الْعَهْدُ أَمْ أَرَدْتُمْ أَنْ يَحِلَّ عَلَيْكُمْ غَضَبٌ مِنْ رَبِّكُمْ فَأَخْلَفْتُمْ مَوْعِدِي ۞
ಮೂಸಾ ತುಂಬಾ ಕೋಪಗೊಂಡು ದುಃಖದೊಂದಿಗೆ ತಮ್ಮ ಜನಾಂಗದ ಬಳಿಗೆ ಮರಳಿದರು. ಅವರು ಹೇಳಿದರು; ನನ್ನ ಜನಾಂಗದವರೇ, ನಿಮ್ಮ ಒಡೆಯನು ನಿಮಗೆ ಬಹಳ ಶ್ರೇಷ್ಠ ವಾಗ್ದಾನವನ್ನು ನೀಡಿರಲಿಲ್ಲವೇ? ವಾಗ್ದಾನದ ಕಾಲಾವಧಿಯು ನಿಮಗೆ ತುಂಬಾ ದೀರ್ಘವೆನಿಸಿಬಿಟ್ಟಿತೇ? ಅಥವಾ ನೀವು ನಿಮ್ಮ ಒಡೆಯನ ಕೋಪವನ್ನು ಆಮಂತ್ರಿಸಲು ಬಯಸಿ ಅದಕ್ಕಾಗಿ ನನ್ನ ಜೊತೆಗಿನ ಕರಾರನ್ನು ಮುರಿದಿರಾ?
20:87
قَالُوا مَا أَخْلَفْنَا مَوْعِدَكَ بِمَلْكِنَا وَلَٰكِنَّا حُمِّلْنَا أَوْزَارًا مِنْ زِينَةِ الْقَوْمِ فَقَذَفْنَاهَا فَكَذَٰلِكَ أَلْقَى السَّامِرِيُّ ۞
ಅವರು ಹೇಳಿದರು; ನಾವು ನಿಮ್ಮ ಜೊತೆಗಿನ ಕರಾರನ್ನು ಮುರಿದುದು ನಮ್ಮಿಷ್ಟದಿಂದಲ್ಲ. ಒಂದು ಜನಾಂಗದವರ ಆಭರಣಗಳನ್ನು ನಮ್ಮ ಮೇಲೆ ಹೇರಲಾಗಿತ್ತು. ನಾವು ಅದನ್ನು ಎಸೆದು ಬಿಟ್ಟೆವು. ಹಾಗೆಂದೇ ಸಾಮಿರೀ ನಮಗೆ ಸೂಚಿಸಿದ್ದನು.
20:88
فَأَخْرَجَ لَهُمْ عِجْلًا جَسَدًا لَهُ خُوَارٌ فَقَالُوا هَٰذَا إِلَٰهُكُمْ وَإِلَٰهُ مُوسَىٰ فَنَسِيَ ۞
ಅವನು (ಸಾಮಿರೀ) ಅವರಿಗಾಗಿ ಒಂದು ಕರುವಿನ ಆಕೃತಿಯನ್ನು ರಚಿಸಿದನು. ಅದರಿಂದ ಒಂದು ಕೂಗು ಹೊರಡುತ್ತಿತ್ತು. ಆಗ ಅವರು ‘‘ಇದುವೇ ನಿಮ್ಮ ದೇವರು ಹಾಗೂ ಮೂಸಾರ ದೇವರು. ಆದರೆ ಅವರು (ಮೂಸಾ) ಮರೆತಿದ್ದಾರೆ’’ ಎಂದು ಬಿಟ್ಟರು.
20:89
أَفَلَا يَرَوْنَ أَلَّا يَرْجِعُ إِلَيْهِمْ قَوْلًا وَلَا يَمْلِكُ لَهُمْ ضَرًّا وَلَا نَفْعًا ۞
ಅದು (ಕರುವಿನ ಆಕೃತಿ) ಅವರ ಯಾವ ಮಾತಿಗೂ ಉತ್ತರಿಸುವುದಿಲ್ಲ ಮತ್ತು ಅವರಿಗೆ ಯಾವುದೇ ನಷ್ಟ ಅಥವಾ ಲಾಭವನ್ನುಂಟು ಮಾಡುವ ಸಾಮರ್ಥ್ಯ ಅದಕ್ಕಿಲ್ಲ - ಎಂಬುದನ್ನು ಅವರು ಕಾಣುತ್ತಿಲ್ಲವೇ ?
20:90
وَلَقَدْ قَالَ لَهُمْ هَارُونُ مِنْ قَبْلُ يَا قَوْمِ إِنَّمَا فُتِنْتُمْ بِهِ ۖ وَإِنَّ رَبَّكُمُ الرَّحْمَٰنُ فَاتَّبِعُونِي وَأَطِيعُوا أَمْرِي ۞
ಈ ಮೊದಲು ಹಾರೂನರು ಅವರೊಡನೆ ಹೇಳಿದರು; ನನ್ನ ಜನಾಂಗದವರೇ, ನಿಮ್ಮನ್ನು ಈ (ಕರುವಿನ ಆಕೃತಿಯ) ಮೂಲಕ ಪರೀಕ್ಷಿಸಲಾಗುತ್ತಿದೆ. ಖಂಡಿತವಾಗಿಯೂ ಆ ಪರಮ ದಯಾಳುವೇ ನಿಮ್ಮ ಒಡೆಯನು. ನೀವು ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ.
20:91
قَالُوا لَنْ نَبْرَحَ عَلَيْهِ عَاكِفِينَ حَتَّىٰ يَرْجِعَ إِلَيْنَا مُوسَىٰ ۞
ಅವರು (ಜನಾಂಗದವರು) ಹೇಳಿದರು; ಮೂಸಾರು ನಮ್ಮ ಬಳಿಗೆ ಮರಳಿ ಬರುವವರೆಗೂ ನಾವು ಇದನ್ನು ಅಗಲಿ ದೂರ ನಿಲ್ಲಲಾರೆವು.
20:92
قَالَ يَا هَارُونُ مَا مَنَعَكَ إِذْ رَأَيْتَهُمْ ضَلُّوا ۞
ಅವರು (ಮೂಸಾ) ಹೇಳಿದರು; ಓ ಹಾರೂನರೇ, ಅವರು ದಾರಿಗೆಟ್ಟಾಗ (ಅವರನ್ನು ಸರಿಪಡಿಸದಂತೆ) ನಿಮ್ಮನ್ನೇನು ತಡೆದಿತ್ತು?
20:93
أَلَّا تَتَّبِعَنِ ۖ أَفَعَصَيْتَ أَمْرِي ۞
ನೀವೇಕೆ ನನ್ನನ್ನು ಅನುಸರಿಸಲಿಲ್ಲ? ನೀವು ನನ್ನ ಆದೇಶವನ್ನು ಉಲ್ಲಂಘಿಸಿ ಬಿಟ್ಟಿರಾ?
20:94
قَالَ يَا ابْنَ أُمَّ لَا تَأْخُذْ بِلِحْيَتِي وَلَا بِرَأْسِي ۖ إِنِّي خَشِيتُ أَنْ تَقُولَ فَرَّقْتَ بَيْنَ بَنِي إِسْرَائِيلَ وَلَمْ تَرْقُبْ قَوْلِي ۞
ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರರೇ, ನೀವು ನನ್ನ ಗಡ್ಡವನ್ನು ಮತ್ತು ನನ್ನ ತಲೆಯನ್ನು ಹಿಡಿಯಬೇಡಿ. ನಿಜವಾಗಿ,‘‘ನೀನು ನನ್ನ ಹಾಗೂ ಇಸ್ರಾಈಲರ ಸಂತತಿಯ ನಡುವೆ ಭಿನ್ನತೆ ಮೂಡಿಸಿದೆ ಮತ್ತು ನನ್ನ ಆದೇಶಕ್ಕಾಗಿ ನೀನು ಕಾಯಲಿಲ್ಲ’’ ಎಂದು ನೀವು ಹೇಳುವಿರೆಂಬ ಭಯ ನನಗಿತ್ತು.
20:95
قَالَ فَمَا خَطْبُكَ يَا سَامِرِيُّ ۞
ಅವರು (ಮೂಸಾ) ಹೇಳಿದರು; ಸಾಮಿರೀ, ನಿನ್ನ ಸಂಗತಿ ಏನು?
20:96
قَالَ بَصُرْتُ بِمَا لَمْ يَبْصُرُوا بِهِ فَقَبَضْتُ قَبْضَةً مِنْ أَثَرِ الرَّسُولِ فَنَبَذْتُهَا وَكَذَٰلِكَ سَوَّلَتْ لِي نَفْسِي ۞
ಅವನು ಹೇಳಿದನು; ಅವರು ಕಾಣದ್ದನ್ನು ನಾನು ಕಂಡಿದ್ದೇನೆ. ದೇವದೂತರ ಹೆಜ್ಜೆ ಗುರುತು ಇದ್ದಲ್ಲಿಂದ ನಾನು ಒಂದು ಹಿಡಿ ಮಣ್ಣು ಹೆಕ್ಕಿ ಅದರ (ಕರುವಿನ ಆಕೃತಿಯ) ಮೇಲೆ ಹಾಕಿ ಬಿಟ್ಟಿದ್ದೆ. ನನ್ನ ಚಿತ್ತವು ನನಗೆ ಹಾಗೆಯೇ ಮಾಡಲು ಸೂಚಿಸಿತು.
20:97
قَالَ فَاذْهَبْ فَإِنَّ لَكَ فِي الْحَيَاةِ أَنْ تَقُولَ لَا مِسَاسَ ۖ وَإِنَّ لَكَ مَوْعِدًا لَنْ تُخْلَفَهُ ۖ وَانْظُرْ إِلَىٰ إِلَٰهِكَ الَّذِي ظَلْتَ عَلَيْهِ عَاكِفًا ۖ لَنُحَرِّقَنَّهُ ثُمَّ لَنَنْسِفَنَّهُ فِي الْيَمِّ نَسْفًا ۞
ಅವರು (ಮೂಸಾ) ಹೇಳಿದರು; ನೀನು ತೊಲಗಿಬಿಡು. ಈ ಲೋಕದ ಬದುಕಿನಲ್ಲಿ ನಿನಗಿರುವ ಶಿಕ್ಷೆಯೇನೆಂದರೆ ‘‘ನನ್ನನ್ನು ಮುಟ್ಟಬೇಡಿ’’ ಎಂದು ನೀನು, ಹೇಳುತ್ತಿರಬೇಕು. ನಿನಗಾಗಿ ಒಂದು ಸಮಯ ನಿಗದಿಯಾಗಿದೆ. ಅದನ್ನು ಬದಲಿಸಲು ನಿನ್ನಿಂದಾಗದು. ನೀನು ಅಷ್ಟೊಂದು ನಿಷ್ಠೆಯಿಂದ ನಂಬಿಕೊಂಡಿದ್ದ ಆ ನಿನ್ನ ದೇವರನ್ನೊಮ್ಮೆ ನೋಡು. ನಾವೀಗ ಅದನ್ನು ಸುಟ್ಟು ಬಿಡುವೆವು ಮತ್ತು ಅದರ ಬೂದಿಯನ್ನು ನದಿಯಲ್ಲಿ ಹರಿಸಿಬಿಡುವೆವು.
20:98
إِنَّمَا إِلَٰهُكُمُ اللَّهُ الَّذِي لَا إِلَٰهَ إِلَّا هُوَ ۚ وَسِعَ كُلَّ شَيْءٍ عِلْمًا ۞
ಖಂಡಿತ, ಅಲ್ಲಾಹನೇ ನಿಮ್ಮ ದೇವರು. ಅವನ ಹೊರತು ಬೇರೆ ದೇವರಿಲ್ಲ. ಅವನ ಜ್ಞಾನವು ಎಲ್ಲವನ್ನೂ ಆವರಿಸಿದೆ.
20:99
كَذَٰلِكَ نَقُصُّ عَلَيْكَ مِنْ أَنْبَاءِ مَا قَدْ سَبَقَ ۚ وَقَدْ آتَيْنَاكَ مِنْ لَدُنَّا ذِكْرًا ۞
(ದೂತರೇ,) ಈ ರೀತಿ ನಾವು ನಿಮಗೆ ಗತಕಾಲದ ಸಂಗತಿಗಳನ್ನು ತಿಳಿಸುತ್ತೇವೆ. ಖಂಡಿತವಾಗಿಯೂ ನಾವು ನಿಮಗೆ ನಮ್ಮ ಕಡೆಯಿಂದ ಉಪದೇಶವನ್ನು ನೀಡಿರುತ್ತೇವೆ.
20:100
مَنْ أَعْرَضَ عَنْهُ فَإِنَّهُ يَحْمِلُ يَوْمَ الْقِيَامَةِ وِزْرًا ۞
ಅದನ್ನು ಕಡೆಗಣಿಸಿದವನು ಪುನರುತ್ಥಾನ ದಿನ ಭಾರೀ ಹೊರೆಯನ್ನು ಹೊರುವನು.
20:101
خَالِدِينَ فِيهِ ۖ وَسَاءَ لَهُمْ يَوْمَ الْقِيَامَةِ حِمْلًا ۞
ಅವರು ಸದಾ ಅದೇ ಸ್ಥಿತಿಯಲ್ಲಿರುವರು. ಪುನರುತ್ಥಾನ ದಿನ ಆ ಹೊರೆಯು ಅವರ ಪಾಲಿಗೆ ತೀರಾ ಕೆಟ್ಟದಾಗಿರುವುದು.
20:102
يَوْمَ يُنْفَخُ فِي الصُّورِ ۚ وَنَحْشُرُ الْمُجْرِمِينَ يَوْمَئِذٍ زُرْقًا ۞
ಕಹಳೆ ಊದುವ ಆ ದಿನ ನಾವು ಅಪರಾಧಿಗಳನ್ನು ಒಂದೆಡೆ ಸೇರಿಸುವೆವು. ಆಗ ಅವರ ಕಣ್ಣುಗಳು (ನಿಸ್ತೇಜವಾಗಿ) ನೀಲವಾಗಿರುವವು.
20:103
يَتَخَافَتُونَ بَيْنَهُمْ إِنْ لَبِثْتُمْ إِلَّا عَشْرًا ۞
ಅವರು ಗುಟ್ಟಾಗಿ, ‘‘ನೀವು (ಇಹಲೋಕದಲ್ಲಿ) ಹತ್ತುದಿನ ಮಾತ್ರ ಇದ್ದಿರಿ’’ ಎಂದು ಪರಸ್ಪರ ಹೇಳಿಕೊಳ್ಳುವರು.
20:104
نَحْنُ أَعْلَمُ بِمَا يَقُولُونَ إِذْ يَقُولُ أَمْثَلُهُمْ طَرِيقَةً إِنْ لَبِثْتُمْ إِلَّا يَوْمًا ۞
ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ಅವರಲ್ಲಿನ ಅತ್ಯಂತ ಜಾಣನು, ‘‘ನೀವು ಬದುಕಿದ್ದುದು ಕೇವಲ ಒಂದು ದಿನ ಮಾತ್ರ’’ ಎನ್ನುವನು.
20:105
وَيَسْأَلُونَكَ عَنِ الْجِبَالِ فَقُلْ يَنْسِفُهَا رَبِّي نَسْفًا ۞
(ದೂತರೇ,) ಅವರು ನಿಮ್ಮೊಡನೆ ಪರ್ವತಗಳ ಕುರಿತು ಕೇಳುತ್ತಾರೆ. ನೀವು ಹೇಳಿರಿ; ನನ್ನ ಒಡೆಯನು ಅವುಗಳನ್ನು ಛಿದ್ರಗೊಳಿಸಿ ಹಾರಿಸಿಬಿಡುವನು.
20:106
فَيَذَرُهَا قَاعًا صَفْصَفًا ۞
ಆ ಬಳಿಕ ಅವನು ಇದನ್ನು (ಈ ನೆಲವನ್ನು) ಸಮತಟ್ಟಾಗಿಸಿ ಬಿಡುವನು.
20:107
لَا تَرَىٰ فِيهَا عِوَجًا وَلَا أَمْتًا ۞
ನೀವು ಇದರಲ್ಲಿ ಯಾವುದೇ ಏರು - ತಗ್ಗುಗಳನ್ನು ಕಾಣಲಾರಿರಿ.
20:108
يَوْمَئِذٍ يَتَّبِعُونَ الدَّاعِيَ لَا عِوَجَ لَهُ ۖ وَخَشَعَتِ الْأَصْوَاتُ لِلرَّحْمَٰنِ فَلَا تَسْمَعُ إِلَّا هَمْسًا ۞
ಅಂದು ಅವರೆಲ್ಲರೂ ಒಬ್ಬ ಕರೆಯುವಾತನ ಹಿಂದೆ ನಡೆಯುವರು ಮತ್ತು ಆತನ ಮಟ್ಟಿಗೆ ಯಾವ ಅಡೆತಡೆಯೂ ಇರದು. ಆ ಪರಮ ದಯಾಳುವಿನ ಮುಂದೆ ಎಲ್ಲ ಧ್ವನಿಗಳೂ ಅಡಗಿಬಿಡುವವು. ಅಂದು, ಹೆಜ್ಜೆಗಳ ಕ್ಷೀಣ ಸಪ್ಪಳದ ಹೊರತು ನೀವು ಬೇರೇನನ್ನೂ ಕೇಳಲಾರಿರಿ.
20:109
يَوْمَئِذٍ لَا تَنْفَعُ الشَّفَاعَةُ إِلَّا مَنْ أَذِنَ لَهُ الرَّحْمَٰنُ وَرَضِيَ لَهُ قَوْلًا ۞
ಅಂದು ಆ ಪರಮ ದಯಾಮಯನು ಯಾರಿಗೆ ಅನುಮತಿ ನೀಡುವನೋ ಹಾಗೂ ಯಾರ ಮಾತನ್ನು ಮೆಚ್ಚುವನೋ ಅವರ ಹೊರತು ಬೇರೆ ಯಾರದೇ ಶಿಫಾರಸ್ಸಿನಿಂದ ಯಾರಿಗೂ ಪ್ರಯೋಜನವಾಗದು.
20:110
يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يُحِيطُونَ بِهِ عِلْمًا ۞
ಅವರ ಮುಂದಿರುವುದನ್ನೂ, ಹಿಂದಿರುವುದನ್ನೂ. ಅವರಿಗೆ ತಮ್ಮ ಜ್ಞಾನದಿಂದ ಗ್ರಹಿಸಲು ಸಾಧ್ಯವಿಲ್ಲದ್ದನ್ನೂ ಅವನು ಬಲ್ಲನು.
20:111
۞ وَعَنَتِ الْوُجُوهُ لِلْحَيِّ الْقَيُّومِ ۖ وَقَدْ خَابَ مَنْ حَمَلَ ظُلْمًا ۞
ಅಂದು ಎಲ್ಲ ಮುಖಗಳೂ, ಸದಾ ಜೀವಂತನಾಗಿರುವ ಹಾಗೂ ಸದಾ ಸುಸ್ಥಿರನಾಗಿರುವಾತನ (ಅಲ್ಲಾಹನ) ಮುಂದೆ ಬಾಗಿರುವವು. ಅನ್ಯಾಯದ ಹೊರೆ ಹೊತ್ತವನು ಅಂದು ಸೋತು ಹೋಗುವನು.
20:112
وَمَنْ يَعْمَلْ مِنَ الصَّالِحَاتِ وَهُوَ مُؤْمِنٌ فَلَا يَخَافُ ظُلْمًا وَلَا هَضْمًا ۞
ವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವನಿಗೆ ಅಂದು ಯಾವುದೇ ಅನ್ಯಾಯದ ಅಥವಾ ನಷ್ಟದ ಭಯ ಇರಲಾರದು.
20:113
وَكَذَٰلِكَ أَنْزَلْنَاهُ قُرْآنًا عَرَبِيًّا وَصَرَّفْنَا فِيهِ مِنَ الْوَعِيدِ لَعَلَّهُمْ يَتَّقُونَ أَوْ يُحْدِثُ لَهُمْ ذِكْرًا ۞
ಈ ರೀತಿ ನಾವು ಅವರಿಗೆ (ದೂತರಿಗೆ) ಅರಬೀ ಭಾಷೆಯ ಕುರ್‌ಆನನ್ನು ಇಳಿಸಿಕೊಟ್ಟಿರುವೆವು ಮತ್ತು ಜನರು ಸತ್ಯನಿಷ್ಠರಾಗಬೇಕು ಅಥವಾ ಆ ಮೂಲಕ ಅವರು ಪಾಠಕಲಿಯಬೇಕೆಂದು ಅದರಲ್ಲಿ ನಾವು ವಿವಿಧ ಬಗೆಯಲ್ಲಿ ಎಚ್ಚರಿಕೆ ನೀಡಿರುವೆವು.
20:114
فَتَعَالَى اللَّهُ الْمَلِكُ الْحَقُّ ۗ وَلَا تَعْجَلْ بِالْقُرْآنِ مِنْ قَبْلِ أَنْ يُقْضَىٰ إِلَيْكَ وَحْيُهُ ۖ وَقُلْ رَبِّ زِدْنِي عِلْمًا ۞
(ದೂತರೇ,) ಅಲ್ಲಾಹನೇ ಮಹೋನ್ನತನು. ಅವನೇ ನೈಜ ದೊರೆ. ನೀವು ನಿಮ್ಮೆಡೆಗೆ ಕಳಿಸಲಾಗುವ ದಿವ್ಯವಾಣಿಯು ಪೂರ್ತಿಯಾಗುವ ಮುನ್ನ ಕುರ್‌ಆನ್‌ನ ವಿಷಯದಲ್ಲಿ ಆತುರ ಪಡಬೇಡಿ. ಮತ್ತು, ನನ್ನೊಡೆಯಾ, ನನಗೆ ಇನ್ನಷ್ಟು ಜ್ಞಾನವನ್ನು ನೀಡು ಎಂದು ಪ್ರಾರ್ಥಿಸಿರಿ.
20:115
وَلَقَدْ عَهِدْنَا إِلَىٰ آدَمَ مِنْ قَبْلُ فَنَسِيَ وَلَمْ نَجِدْ لَهُ عَزْمًا ۞
ಈ ಹಿಂದೆ ನಾವು ಆದಮರ ಜೊತೆ ಒಂದು ಕರಾರನ್ನು ಮಾಡಿದ್ದೆವು. ಆದರೆ ಅವರು ಅದನ್ನು ಮರೆತು ಬಿಟ್ಟರು. ನಾವು ಅವರಲ್ಲಿ ಸ್ಥಿರತೆಯನ್ನು ಕಾಣಲಿಲ್ಲ.
20:116
وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ أَبَىٰ ۞
ನಾವು ಮಲಕ್‌ಗಳೊಡನೆ, ನೀವು ಆದಮರಿಗೆ ಸಾಷ್ಟಾಂಗವೆರಗಿರಿ ಎಂದಾಗ ಅವರೆಲ್ಲಾ ಸಾಷ್ಟಾಂಗ ವೆರಗಿದರು. ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು.
20:117
فَقُلْنَا يَا آدَمُ إِنَّ هَٰذَا عَدُوٌّ لَكَ وَلِزَوْجِكَ فَلَا يُخْرِجَنَّكُمَا مِنَ الْجَنَّةِ فَتَشْقَىٰ ۞
ನಾವು ಹೇಳಿದೆವು; ಆದಮರೇ, ಖಂಡಿತವಾಗಿಯೂ ಅವನು ನಿಮ್ಮ ಹಾಗೂ ನಿಮ್ಮ ಪತ್ನಿಯ ಶತ್ರುವಾಗಿದ್ದಾನೆ. ಅವನು ನಿಮ್ಮಿಬ್ಬರನ್ನೂ ಸ್ವರ್ಗದಿಂದ ಹೊರ ಹಾಕುವಂತಾಗಬಾರದು. ಹಾಗಾಗಿ ಬಿಟ್ಟರೆ ನೀವು ಭಾರೀ ಸಂಕಟಕ್ಕೆ ಸಿಲುಕುವಿರಿ.
20:118
إِنَّ لَكَ أَلَّا تَجُوعَ فِيهَا وَلَا تَعْرَىٰ ۞
ಇಲ್ಲಿ (ಸ್ವರ್ಗದಲ್ಲಿ) ನಿಮಗೆ ಖಂಡಿತ ಹಸಿವೂ ಬಾಧಿಸದು, ನಗ್ನತೆಯೂ ಇರದು.
20:119
وَأَنَّكَ لَا تَظْمَأُ فِيهَا وَلَا تَضْحَىٰ ۞
ಇಲ್ಲಿ ಖಂಡಿತ ನಿಮಗೆ ದಾಹವೂ ಆಗದು, ಬಿಸಿಲಿನ ತಾಪವೂ ತಾಗದು.
20:120
فَوَسْوَسَ إِلَيْهِ الشَّيْطَانُ قَالَ يَا آدَمُ هَلْ أَدُلُّكَ عَلَىٰ شَجَرَةِ الْخُلْدِ وَمُلْكٍ لَا يَبْلَىٰ ۞
ಆದರೆ ಶೈತಾನನು ಅವರನ್ನು ಗೊಂದಲಕ್ಕೆ ಸಿಲುಕಿಸಿದನು. ಅವನು ಹೇಳಿದನು; ಆದಮರೇ, ನಾನು ನಿಮಗೆ ಶಾಶ್ವತ ಬದುಕನ್ನು ಹಾಗೂ ಎಂದೂ ಪತನವಾಗದ ಸಾಮ್ರಾಜ್ಯವನ್ನು ನೀಡಬಲ್ಲ ಮರವನ್ನು ತೋರಿಸಲೇ?
20:121
فَأَكَلَا مِنْهَا فَبَدَتْ لَهُمَا سَوْآتُهُمَا وَطَفِقَا يَخْصِفَانِ عَلَيْهِمَا مِنْ وَرَقِ الْجَنَّةِ ۚ وَعَصَىٰ آدَمُ رَبَّهُ فَغَوَىٰ ۞
ಕೊನೆಗೆ ಅವರಿಬ್ಬರೂ ಅದರಿಂದ (ಆ ಮರದಿಂದ) ತಿಂದರು. ಕೂಡಲೇ ಅವರ ಗುಪ್ತಾಂಗಗಳು ಅವರ ಮುಂದೆ ಪ್ರಕಟವಾದುವು ಮತ್ತು ಅವರು ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳತೊಡಗಿದರು. ಹೀಗೆ ಆದಮರು ತಮ್ಮ ಒಡೆಯನ ಆಜ್ಞೆಯನ್ನು ಮೀರಿ ನಡೆದಾಗ, ದಾರಿ ತಪ್ಪಿದರು.
20:122
ثُمَّ اجْتَبَاهُ رَبُّهُ فَتَابَ عَلَيْهِ وَهَدَىٰ ۞
ಮುಂದೆ ಅವರ ಒಡೆಯನು ಅವರನ್ನು ಆರಿಸಿಕೊಂಡು, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ನೀಡಿದನು.
20:123
قَالَ اهْبِطَا مِنْهَا جَمِيعًا ۖ بَعْضُكُمْ لِبَعْضٍ عَدُوٌّ ۖ فَإِمَّا يَأْتِيَنَّكُمْ مِنِّي هُدًى فَمَنِ اتَّبَعَ هُدَايَ فَلَا يَضِلُّ وَلَا يَشْقَىٰ ۞
ಅವನು (ಅಲ್ಲಾಹ್) ಹೇಳಿದನು; ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಮತ್ತೆ ಕೆಲವರ ಶತ್ರುಗಳಾಗುವರು. ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ, ನನ್ನ ಮಾರ್ಗದರ್ಶನವನ್ನು ಅನುಸರಿಸುವವನು ಎಂದಿಗೂ ದಾರಿಗೆಡಲಾರನು ಮತ್ತು ಅವನೆಂದೂ ಭಾಗ್ಯಹೀನನಾಗಲಾರನು.
20:124
وَمَنْ أَعْرَضَ عَنْ ذِكْرِي فَإِنَّ لَهُ مَعِيشَةً ضَنْكًا وَنَحْشُرُهُ يَوْمَ الْقِيَامَةِ أَعْمَىٰ ۞
ಇನ್ನು, ನನ್ನನ್ನು ಸ್ಮರಿಸುವ ವಿಷಯದಲ್ಲಿ ಅಸಡ್ಡೆ ತೋರಿದವನ ಪಾಲಿಗೆ ಖಂಡಿತವಾಗಿಯೂ ಬದುಕಿನ ಸಾಧನಗಳು ತೀರಾ ಸಂಕುಚಿತವಾಗಿಬಿಡುವವು ಮತ್ತು ಪುನರುತ್ಥಾನ ದಿನ ನಾವು ಅವನನ್ನು ಕುರುಡನಾಗಿ ಎಬ್ಬಿಸುವೆವು.
20:125
قَالَ رَبِّ لِمَ حَشَرْتَنِي أَعْمَىٰ وَقَدْ كُنْتُ بَصِيرًا ۞
ಅವನು, ‘‘ನನ್ನೊಡೆಯಾ! ನೀನು ನನ್ನನ್ನು ಕುರುಡನಾಗಿ ಎಬ್ಬಿಸಿರುವುದೇಕೆ? ಈ ಹಿಂದೆ ನಾನು (ಇಹಲೋಕದಲ್ಲಿ) ನೋಡಬಲ್ಲವನಾಗಿದ್ದೆನಲ್ಲಾ?’’ ಎನ್ನುವನು.
20:126
قَالَ كَذَٰلِكَ أَتَتْكَ آيَاتُنَا فَنَسِيتَهَا ۖ وَكَذَٰلِكَ الْيَوْمَ تُنْسَىٰ ۞
ಅವನು (ಅಲ್ಲಾಹನು) ಹೇಳುವನು; ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದುವು. ನೀನು ಅವುಗಳನ್ನು ಮರೆತು ಬಿಟ್ಟಿದ್ದೆ. ಆದ್ದರಿಂದ ಇಂದು ನಿನ್ನನ್ನು ಮರೆಯಲಾಗಿದೆ.
20:127
وَكَذَٰلِكَ نَجْزِي مَنْ أَسْرَفَ وَلَمْ يُؤْمِنْ بِآيَاتِ رَبِّهِ ۚ وَلَعَذَابُ الْآخِرَةِ أَشَدُّ وَأَبْقَىٰ ۞
ಮಿತಿ ಮೀರಿ ನಡೆದವನಿಗೆ ಹಾಗೂ ತನ್ನ ಒಡೆಯನ ವಚನಗಳನ್ನು ನಂಬದವನಿಗೆ ನಾವು ಇಂತಹದೇ ಪ್ರತಿಫಲವನ್ನು ನೀಡುತ್ತೇವೆ. ಪರಲೋಕದ ಶಿಕ್ಷೆಯು ತುಂಬಾ ತೀವ್ರವಾಗಿರುತ್ತದೆ ಮತ್ತು ಬಹುಕಾಲ ಉಳಿಯುತ್ತದೆ.
20:128
أَفَلَمْ يَهْدِ لَهُمْ كَمْ أَهْلَكْنَا قَبْلَهُمْ مِنَ الْقُرُونِ يَمْشُونَ فِي مَسَاكِنِهِمْ ۗ إِنَّ فِي ذَٰلِكَ لَآيَاتٍ لِأُولِي النُّهَىٰ ۞
ಅವರಿಗಿಂತ ಮುಂಚೆ ನಾವು ಅನೇಕ ಜನಾಂಗಗಳನ್ನು ನಾಶಪಡಿಸಿದ್ದೇವೆಂಬುದು ಅವರಿಗೆ ಮಾರ್ಗದರ್ಶಿಯಲ್ಲವೇ? ಅವರು, ಅವರ (ಈ ರೀತಿ ನಾಶವಾದವರ, ಪಾಳುಬಿದ್ದ) ನಿವಾಸಗಳಿರುವಲ್ಲಿ ನಡೆದಾಡುತ್ತಿರುತ್ತಾರೆ. ನಿಜವಾಗಿ ಬುದ್ಧಿ ಉಳ್ಳವರಿಗೆ ಇದರಲ್ಲಿ ಹಲವು ಪಾಠಗಳಿವೆ.
20:129
وَلَوْلَا كَلِمَةٌ سَبَقَتْ مِنْ رَبِّكَ لَكَانَ لِزَامًا وَأَجَلٌ مُسَمًّى ۞
ನಿಮ್ಮ ಒಡೆಯನ ಕಡೆಯಿಂದ ಒಂದು ವಿಷಯವು ಮೊದಲೇ ನಿಗದಿಯಾಗದೆ ಇದ್ದಿದ್ದರೆ ಮತ್ತು ಒಂದು ಅವಧಿ ನಿಶ್ಚಿತವಾಗದೆ ಇದ್ದಿದ್ದರೆ, (ಶಿಕ್ಷೆಯು) ಈಗಾಗಲೇ ಬಂದಿರುತ್ತಿತ್ತು.
20:130
فَاصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ الشَّمْسِ وَقَبْلَ غُرُوبِهَا ۖ وَمِنْ آنَاءِ اللَّيْلِ فَسَبِّحْ وَأَطْرَافَ النَّهَارِ لَعَلَّكَ تَرْضَىٰ ۞
(ದೂತರೇ,) ನೀವೀಗ ಅವರ ಎಲ್ಲ ಮಾತುಗಳನ್ನು ಸಹಿಸಿ ಕೊಳ್ಳಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತಮಾನಕ್ಕೆ ಮುಂಚೆಯೂ ರಾತ್ರಿಯ ಕೆಲವು ಕ್ಷಣಗಳಲ್ಲೂ ನಿಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರ್ಯವನ್ನು ಜಪಿಸಿರಿ ಮತ್ತು ಹಗಲಿನ ಗಡಿಭಾಗದಲ್ಲಿ (ಅಲ್ಲಾಹನ) ಪಾವಿತ್ರ್ಯವನ್ನು ಜಪಿಸಿರಿ - ನೀವು ಸಂತೃಪ್ತರಾಗಬಹುದು.
20:131
وَلَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِنْهُمْ زَهْرَةَ الْحَيَاةِ الدُّنْيَا لِنَفْتِنَهُمْ فِيهِ ۚ وَرِزْقُ رَبِّكَ خَيْرٌ وَأَبْقَىٰ ۞
ಅವರಲ್ಲಿನ ಕೆಲವು ಗುಂಪುಗಳಿಗೆ, ಕೇವಲ ಇಹಲೋಕದ ಬದುಕಿನ ಶೋಭೆಯಾಗಿ ನಾವು ನೀಡಿರುವ ಬಳಕೆಯ ವಸ್ತುಗಳೆಡೆಗೆ ನೀವು ದೃಷ್ಟಿ ಹಾಯಿಸಬೇಡಿ. ನಾವು ಆ ಮೂಲಕ ಅವರನ್ನು ಪರೀಕ್ಷಿಸುತ್ತಿದ್ದೇವೆ. ನಿಜವಾಗಿ ನಿಮ್ಮ ಒಡೆಯನ ಕೊಡುಗೆಯೇ ಹೆಚ್ಚು ಶ್ರೇಷ್ಠವಾಗಿದೆ ಹಾಗೂ ಹೆಚ್ಚು ಕಾಲ ಉಳಿಯುತ್ತದೆ.
20:132
وَأْمُرْ أَهْلَكَ بِالصَّلَاةِ وَاصْطَبِرْ عَلَيْهَا ۖ لَا نَسْأَلُكَ رِزْقًا ۖ نَحْنُ نَرْزُقُكَ ۗ وَالْعَاقِبَةُ لِلتَّقْوَىٰ ۞
ನೀವು ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ಸ್ವತಃ ನೀವು ಅದನ್ನು ಪಾಲಿಸಿರಿ. ನಾವು ನಿಮ್ಮೊಡನೆ ಆಹಾರವನ್ನೇನೂ ಬೇಡುವುದಿಲ್ಲ. ನಿಜವಾಗಿ ನಾವೇ ನಿಮಗೆ ಆಹಾರ ನೀಡುತ್ತೇವೆ. ಅಂತಿಮ ಸಾಫಲ್ಯವು ಧರ್ಮನಿಷ್ಠೆಗೇ ಸಲ್ಲುವುದು.
20:133
وَقَالُوا لَوْلَا يَأْتِينَا بِآيَةٍ مِنْ رَبِّهِ ۚ أَوَلَمْ تَأْتِهِمْ بَيِّنَةُ مَا فِي الصُّحُفِ الْأُولَىٰ ۞
‘‘ಆತನು ತನ್ನ ಒಡೆಯನ ಕಡೆಯಿಂದ ನಮ್ಮ ಬಳಿಗೆ ಯಾವುದೇ ಪುರಾವೆಯನ್ನೇಕೆ ತಂದಿಲ್ಲ?’’ ಎಂದು ಅವರು ಕೇಳುತ್ತಾರೆ. ಗತಕಾಲದ ಹೊತ್ತಗೆ(ಗ್ರಂಥ)ಗಳಲ್ಲಿರುವ ಸ್ಪಷ್ಟ ಪುರಾವೆಗಳು ಅವರ ಬಳಿಗೆ ಬಂದಿಲ್ಲವೇ?
20:134
وَلَوْ أَنَّا أَهْلَكْنَاهُمْ بِعَذَابٍ مِنْ قَبْلِهِ لَقَالُوا رَبَّنَا لَوْلَا أَرْسَلْتَ إِلَيْنَا رَسُولًا فَنَتَّبِعَ آيَاتِكَ مِنْ قَبْلِ أَنْ نَذِلَّ وَنَخْزَىٰ ۞
ಒಂದು ವೇಳೆ ನಾವು ಇದಕ್ಕೆ (ಕುರ್‌ಆನ್‌ನ ಆಗಮನಕ್ಕೆ) ಮುಂಚೆಯೇ ಅವರನ್ನು ಒಂದು ಶಿಕ್ಷೆಯ ಮೂಲಕ ನಾಶಮಾಡಿ ಬಿಟ್ಟಿದ್ದರೆ ಅವರು ‘‘ನಮ್ಮೊಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು, ಅಪಮಾನಿತರಾಗುವ ಹಾಗೂ ನಿಂದ್ಯರಾಗುವ ಮುನ್ನ ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು’’ ಎನ್ನುತ್ತಿದ್ದರು.
20:135
قُلْ كُلٌّ مُتَرَبِّصٌ فَتَرَبَّصُوا ۖ فَسَتَعْلَمُونَ مَنْ أَصْحَابُ الصِّرَاطِ السَّوِيِّ وَمَنِ اهْتَدَىٰ ۞
ನೀವು ಹೇಳಿರಿ; ಎಲ್ಲರೂ ಕಾಯುತ್ತಿದ್ದಾರೆ, ನೀವೂ ಕಾಯಿರಿ. ನೇರಮಾರ್ಗದವರು ಯಾರು ಹಾಗೂ ಮಾರ್ಗದರ್ಶನ ಪಡೆದವರು ಯಾರು ಎಂಬುದು ನಿಮಗೆ ಬಹುಬೇಗನೇ ತಿಳಿಯಲಿದೆ.