Ar-Ra`d (The thunder)
13. ಅರ್ರಅದ್(ಗುಡುಗು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
13:1
المر ۚ تِلْكَ آيَاتُ الْكِتَابِ ۗ وَالَّذِي أُنْزِلَ إِلَيْكَ مِنْ رَبِّكَ الْحَقُّ وَلَٰكِنَّ أَكْثَرَ النَّاسِ لَا يُؤْمِنُونَ ۞
ಅಲಿಫ್, ಲಾಮ್ ಮ್ಮೀಮ್, ರಾ - ಇವು ದಿವ್ಯ ಗ್ರಂಥದ ವಚನಗಳು. ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿ ಕೊಡಲಾಗಿರುವ ಸಂದೇಶವು ಸಾಕ್ಷಾತ್ ಸತ್ಯವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ನಂಬುವುದಿಲ್ಲ.
13:2
اللَّهُ الَّذِي رَفَعَ السَّمَاوَاتِ بِغَيْرِ عَمَدٍ تَرَوْنَهَا ۖ ثُمَّ اسْتَوَىٰ عَلَى الْعَرْشِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُسَمًّى ۚ يُدَبِّرُ الْأَمْرَ يُفَصِّلُ الْآيَاتِ لَعَلَّكُمْ بِلِقَاءِ رَبِّكُمْ تُوقِنُونَ ۞
ಅಲ್ಲಾಹನೇ, ನಿಮಗೆ ಕಾಣುವ ಆಧಾರಸ್ತಂಭಗಳಿಲ್ಲದೆ ಆಕಾಶಗಳನ್ನು ಎತ್ತರಗೊಳಿಸಿದವನು. ಆ ಬಳಿಕ ವಿಶ್ವಪೀಠದಲ್ಲಿ ಸ್ಥಿರನಾದವನು ಮತ್ತು ಸೂರ್ಯನನ್ನೂ ಚಂದ್ರನನ್ನೂ ಅಧೀನಗೊಳಿಸಿದವನು. ಒಂದು ನಿರ್ದಿಷ್ಟ ಅವಧಿಯವರೆಗೆ ಎಲ್ಲವೂ ಚಲಿಸುತ್ತಿರುತ್ತದೆ. ಅವನೇ, ಎಲ್ಲ ಯೋಜನೆಗಳನ್ನು ರೂಪಿಸುವವನು (ಮತ್ತು) ನಿಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನೀವು ದೃಢವಾಗಿ ನಂಬುವಂತೆ ಸತ್ಯ ವಚನಗಳನ್ನು ವಿವರಿಸುವವನು.
13:3
وَهُوَ الَّذِي مَدَّ الْأَرْضَ وَجَعَلَ فِيهَا رَوَاسِيَ وَأَنْهَارًا ۖ وَمِنْ كُلِّ الثَّمَرَاتِ جَعَلَ فِيهَا زَوْجَيْنِ اثْنَيْنِ ۖ يُغْشِي اللَّيْلَ النَّهَارَ ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ ۞
ಮತ್ತು ಅವನೇ, ಭೂಮಿಯನ್ನು ಹಾಸಿದವನು ಹಾಗೂ ಅದರಲ್ಲಿ ಗುಡ್ಡಗಳನ್ನು ಹಾಗೂ ನದಿಗಳನ್ನು ನಿರ್ಮಿಸಿದವನು. ಮತ್ತು (ಅವನೇ) ಎಲ್ಲ ಬಗೆಯ ಫಲಗಳನ್ನು ಹಾಗೂ ಅವುಗಳ ಎರಡೆರಡು ಜೋಡಿಗಳನ್ನು ಸೃಷ್ಟಿಸಿದವನು ಮತ್ತು ಹಗಲ ಮೇಲೆ ರಾತ್ರಿಯನ್ನು ಆವರಿಸಿದವನು. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪಾಠಗಳಿವೆ.
13:4
وَفِي الْأَرْضِ قِطَعٌ مُتَجَاوِرَاتٌ وَجَنَّاتٌ مِنْ أَعْنَابٍ وَزَرْعٌ وَنَخِيلٌ صِنْوَانٌ وَغَيْرُ صِنْوَانٍ يُسْقَىٰ بِمَاءٍ وَاحِدٍ وَنُفَضِّلُ بَعْضَهَا عَلَىٰ بَعْضٍ فِي الْأُكُلِ ۚ إِنَّ فِي ذَٰلِكَ لَآيَاتٍ لِقَوْمٍ يَعْقِلُونَ ۞
ಭೂಮಿಯಲ್ಲಿ ಪರಸ್ಪರ ನಿಕಟವಾಗಿರುವ ಹಲವು (ವಿಭಿನ್ನ) ಭಾಗಗಳಿವೆ. ದ್ರಾಕ್ಷಾ ತೋಟಗಳು ಹಾಗೂ ಹೊಲಗಳಿವೆ. ಕವಲೊಡೆದ ಮತ್ತು ಕವಲೊಡೆಯದ ಖರ್ಜೂರದ ಗಿಡಗಳಿವೆ. ಅವುಗಳಿಗೆಲ್ಲಾ ನೀರು ಒಂದೇ ಮೂಲದಿಂದ ಒದಗುತ್ತದೆ. ಆದರೆ ರುಚಿಯ ದೃಷ್ಟಿಯಿಂದ ನಾವು ಕೆಲವು ಫಲಗಳಿಗೆ ಮತ್ತೆ ಕೆಲವು ಫಲಗಳಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು ನೀಡಿರುತ್ತೇವೆ. ಆಲೋಚಿಸುವವರಿಗೆ ಖಂಡಿತ ಇದರಲ್ಲಿ ಪಾಠಗಳಿವೆ.
13:5
۞ وَإِنْ تَعْجَبْ فَعَجَبٌ قَوْلُهُمْ أَإِذَا كُنَّا تُرَابًا أَإِنَّا لَفِي خَلْقٍ جَدِيدٍ ۗ أُولَٰئِكَ الَّذِينَ كَفَرُوا بِرَبِّهِمْ ۖ وَأُولَٰئِكَ الْأَغْلَالُ فِي أَعْنَاقِهِمْ ۖ وَأُولَٰئِكَ أَصْحَابُ النَّارِ ۖ هُمْ فِيهَا خَالِدُونَ ۞
ನಿಮಗೆ ಅಚ್ಚರಿ ಪಡಬೇಕಿದ್ದರೆ, ‘‘ನಾವು ಮಣ್ಣಾದ ಬಳಿಕ ನಮ್ಮನ್ನು ಮತ್ತೆ ಹೊಸದಾಗಿ ಸೃಷ್ಟಿಸಲಾಗುವುದೇ?’’ ಎಂಬ ಅವರ ಮಾತು ಅಚ್ಚರಿಗೆ ಯೋಗ್ಯವಾಗಿದೆ. ಅವರೇ, ತಮ್ಮ ಒಡೆಯನನ್ನು ಧಿಕ್ಕರಿಸಿದವರು. ಅವರೇ, ತಮ್ಮ ಕೊರಳುಗಳಲ್ಲಿ ನೊಗಗಳಿರುವವರು ಮತ್ತು ಅವರೇ ನರಕದವರು. ಅವರು ಸದಾಕಾಲ ಅದರಲ್ಲೇ ಇರುವರು.
13:6
وَيَسْتَعْجِلُونَكَ بِالسَّيِّئَةِ قَبْلَ الْحَسَنَةِ وَقَدْ خَلَتْ مِنْ قَبْلِهِمُ الْمَثُلَاتُ ۗ وَإِنَّ رَبَّكَ لَذُو مَغْفِرَةٍ لِلنَّاسِ عَلَىٰ ظُلْمِهِمْ ۖ وَإِنَّ رَبَّكَ لَشَدِيدُ الْعِقَابِ ۞
(ದೂತರೇ,) ಅವರು ನಿಮ್ಮ ಬಳಿ, ಒಳಿತಿಗಿಂತ ಮುನ್ನ ಕೆಡುಕಿಗಾಗಿ ಆತುರ ಪಡುತ್ತಾರೆ. ಹಲವು ಪಾಠದಾಯಕ ಉದಾಹರಣೆಗಳು ಅವರಿಗಿಂತ ಹಿಂದೆ ಗತಿಸಿವೆ. ಖಂಡಿತವಾಗಿಯೂ ನಿಮ್ಮ ಒಡೆಯನು ಮಾನವರ ಅಕ್ರಮದ ಹೊರತಾಗಿಯೂ ಅವರನ್ನು ಕ್ಷಮಿಸುವವನಾಗಿದ್ದಾನೆ. ಹಾಗೆಯೇ, ಖಂಡಿತವಾಗಿಯೂ ನಿಮ್ಮ ಒಡೆಯನು ತೀವ್ರವಾಗಿ ದಂಡಿಸುವವನಾಗಿದ್ದಾನೆ.
13:7
وَيَقُولُ الَّذِينَ كَفَرُوا لَوْلَا أُنْزِلَ عَلَيْهِ آيَةٌ مِنْ رَبِّهِ ۗ إِنَّمَا أَنْتَ مُنْذِرٌ ۖ وَلِكُلِّ قَوْمٍ هَادٍ ۞
‘‘ಅವನ ಒಡೆಯನ ಕಡೆಯಿಂದ ಅವನ ಬಳಿಗೆ ಯಾವುದೇ ಪುರಾವೆ ಇಳಿದು ಬಂದಿಲ್ಲವೇಕೆ?’’ ಎಂದು ಧಿಕ್ಕಾರಿಗಳು ಕೇಳುತ್ತಾರೆ. ನಿಜವಾಗಿ, ನೀವು ಎಚ್ಚರಿಸುವವರಾಗಿರುವಿರಿ ಮತ್ತು ಪ್ರತಿಯೊಂದು ಜನಾಂಗಕ್ಕೂ ಮಾರ್ಗದರ್ಶಿ ಗಳಿರುತ್ತಾರೆ.
13:8
اللَّهُ يَعْلَمُ مَا تَحْمِلُ كُلُّ أُنْثَىٰ وَمَا تَغِيضُ الْأَرْحَامُ وَمَا تَزْدَادُ ۖ وَكُلُّ شَيْءٍ عِنْدَهُ بِمِقْدَارٍ ۞
ಪ್ರತಿಯೊಬ್ಬ ಹೆಣ್ಣು ತನ್ನ ಹೊಟ್ಟೆಯಲ್ಲಿ ಏನನ್ನು ಹೊತ್ತಿರುವಳು ಮತ್ತು ಗರ್ಭಗಳಲ್ಲಿ ಅರಳುತ್ತಿರುವುದೇನು ಹಾಗೂ ಮುದುಡುತ್ತಿರುವುದೇನು ಎಂಬುದನ್ನು ಅಲ್ಲಾಹನು ಬಲ್ಲನು. ಅವನ ಬಳಿ ಪ್ರತಿಯೊಂದಕ್ಕೂ ಒಂದು ಪ್ರಮಾಣವು ನಿಶ್ಚಿತವಾಗಿದೆ.
13:9
عَالِمُ الْغَيْبِ وَالشَّهَادَةِ الْكَبِيرُ الْمُتَعَالِ ۞
ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಅವನು ಬಲ್ಲನು. ಅವನು ಎಲ್ಲರಿಗಿಂತಲೂ ದೊಡ್ಡವನು ಮತ್ತು ಸದಾ ಉನ್ನತನು.
13:10
سَوَاءٌ مِنْكُمْ مَنْ أَسَرَّ الْقَوْلَ وَمَنْ جَهَرَ بِهِ وَمَنْ هُوَ مُسْتَخْفٍ بِاللَّيْلِ وَسَارِبٌ بِالنَّهَارِ ۞
ನಿಮ್ಮಲ್ಲಿ ಗುಟ್ಟಾಗಿ ಮಾತನಾಡುವವನಿರಲಿ, ಜೋರಾಗಿ ಮಾತನಾಡುವವನಿರಲಿ, ಇರುಳಲ್ಲಿ ಅಡಗಿಕೊಂಡವನಿರಲಿ, ಹಗಲಲ್ಲಿ ನಡೆದಾಡುತ್ತಿರುವವನಿರಲಿ - (ಅಲ್ಲಾಹನ ಮಟ್ಟಿಗೆ) ಅವರೆಲ್ಲರೂ ಸಮಾನರು.
13:11
لَهُ مُعَقِّبَاتٌ مِنْ بَيْنِ يَدَيْهِ وَمِنْ خَلْفِهِ يَحْفَظُونَهُ مِنْ أَمْرِ اللَّهِ ۗ إِنَّ اللَّهَ لَا يُغَيِّرُ مَا بِقَوْمٍ حَتَّىٰ يُغَيِّرُوا مَا بِأَنْفُسِهِمْ ۗ وَإِذَا أَرَادَ اللَّهُ بِقَوْمٍ سُوءًا فَلَا مَرَدَّ لَهُ ۚ وَمَا لَهُمْ مِنْ دُونِهِ مِنْ وَالٍ ۞
ಅಲ್ಲಾಹನ ಅಪ್ಪಣೆಯಂತೆ, ಸರದಿ ಪ್ರಕಾರ ಬಂದು ಅವನನ್ನು (ಮಾನವನನ್ನು) ರಕ್ಷಿಸುವ, ಕಾವಲುಗಾರರು ಅವನ ಮುಂದೆಯೂ ಹಿಂದೆಯೂ ಸದಾ ಇರುತ್ತಾರೆ. ಒಂದು ಸಮುದಾಯವು ಸ್ವತಃ ತನ್ನ ಸ್ಥಿತಿಯನ್ನು ಬದಲಿಸುವ ತನಕ, ಅಲ್ಲಾಹನು ಅದರ ಸ್ಥಿತಿಯನ್ನು ಖಂಡಿತ ಬದಲಿಸುವುದಿಲ್ಲ. ಇನ್ನು ಅಲ್ಲಾಹನು ಒಂದು ಸಮುದಾಯಕ್ಕೆ ಕೇಡನ್ನು ಬಗೆದರೆ, ಅದನ್ನು ನಿವಾರಿಸಬಲ್ಲವರು ಯಾರೂ ಇಲ್ಲ ಮತ್ತು ಅವರಿಗೆ ಅವನ ಹೊರತು ಬೇರಾರೂ ಸಹಾಯಕರಿಲ್ಲ.
13:12
هُوَ الَّذِي يُرِيكُمُ الْبَرْقَ خَوْفًا وَطَمَعًا وَيُنْشِئُ السَّحَابَ الثِّقَالَ ۞
ನಿಮಗೆ ಭಯದ ಮತ್ತು ನಿರೀಕ್ಷೆಯ ಮಿಂಚನ್ನು ತೋರಿಸುವವನು ಮತ್ತು ಭಾರವಾದ ಮೋಡವನ್ನು ಚಲಿಸುವವನು ಅವನೇ.
13:13
وَيُسَبِّحُ الرَّعْدُ بِحَمْدِهِ وَالْمَلَائِكَةُ مِنْ خِيفَتِهِ وَيُرْسِلُ الصَّوَاعِقَ فَيُصِيبُ بِهَا مَنْ يَشَاءُ وَهُمْ يُجَادِلُونَ فِي اللَّهِ وَهُوَ شَدِيدُ الْمِحَالِ ۞
ಗುಡುಗು ಅವನ (ಅಲ್ಲಾಹನ) ಪಾವಿತ್ರ್ಯವನ್ನು ಜಪಿಸುತ್ತಾ ಅವನ ಗುಣಗಾನ ಮಾಡುತ್ತದೆ. ಮಲಕ್‌ಗಳೂ ಭಕ್ತಿಯೊಂದಿಗೆ (ಇದನ್ನೇ ಮಾಡುತ್ತಿರುತ್ತಾರೆ). ಅವನೇ, ಅಬ್ಬರಿಸುವ ಸಿಡಿಲನ್ನು ಕಳಿಸುತ್ತಾನೆ ಮತ್ತು ತಾನಿಚ್ಛಿಸಿದವರ ಮೇಲೆ ಅದನ್ನು ಬೀಳಿಸುತ್ತಾನೆ. ಅವರು (ಧಿಕ್ಕಾರಿಗಳು) ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ. ಅವನು ಬಹಳ ಕಠೋರವಾಗಿ ಹಿಡಿಯುವವನಾಗಿದ್ದಾನೆ.
13:14
لَهُ دَعْوَةُ الْحَقِّ ۖ وَالَّذِينَ يَدْعُونَ مِنْ دُونِهِ لَا يَسْتَجِيبُونَ لَهُمْ بِشَيْءٍ إِلَّا كَبَاسِطِ كَفَّيْهِ إِلَى الْمَاءِ لِيَبْلُغَ فَاهُ وَمَا هُوَ بِبَالِغِهِ ۚ وَمَا دُعَاءُ الْكَافِرِينَ إِلَّا فِي ضَلَالٍ ۞
ಅವನನ್ನು (ಅಲ್ಲಾಹನನ್ನು) ಪ್ರಾರ್ಥಿಸುವುದು ಮಾತ್ರ ಸರಿ. ಅವರು ಅವನ ಹೊರತು ಬೇರೆ ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರು ಯಾರೂ ಅವರಿಗೆ ಯಾವ ಉತ್ತರವನ್ನೂ ನೀಡುವುದಿಲ್ಲ. (ಅವರ ಅವಸ್ಥೆಯು) ನೀರು ತನ್ನ ಬಾಯಿಗೆ ತಲುಪಬೇಕೆಂದು ನೀರಿನೆಡೆಗೆ ಕೈಚಾಚಿ ನಿಂತವನಂತಿದೆ. ನೀರು ಎಂದೂ ಅವನ ಬಳಿಗೆ ತಲುಪುವುದಿಲ್ಲ. ಧಿಕ್ಕಾರಿಗಳ ಎಲ್ಲ ಪ್ರಾರ್ಥನೆಗಳು ದಿಕ್ಕೆಟ್ಟು ಹೋಗುತ್ತವೆ.
13:15
وَلِلَّهِ يَسْجُدُ مَنْ فِي السَّمَاوَاتِ وَالْأَرْضِ طَوْعًا وَكَرْهًا وَظِلَالُهُمْ بِالْغُدُوِّ وَالْآصَالِ ۩ ۞
ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಮತ್ತು ಅವುಗಳ ನೆರಳುಗಳೂ ತಮ್ಮಿಚ್ಛೆಯಿಂದ ಅಥವಾ ಅನಿವಾರ್ಯವಾಗಿ ಮುಂಜಾನೆ ಹಾಗೂ ಸಂಜೆ ಅಲ್ಲಾಹನಿಗೆ ಸಾಷ್ಟಾಂಗ ವಂದಿಸುತ್ತಿವೆ.
13:16
قُلْ مَنْ رَبُّ السَّمَاوَاتِ وَالْأَرْضِ قُلِ اللَّهُ ۚ قُلْ أَفَاتَّخَذْتُمْ مِنْ دُونِهِ أَوْلِيَاءَ لَا يَمْلِكُونَ لِأَنْفُسِهِمْ نَفْعًا وَلَا ضَرًّا ۚ قُلْ هَلْ يَسْتَوِي الْأَعْمَىٰ وَالْبَصِيرُ أَمْ هَلْ تَسْتَوِي الظُّلُمَاتُ وَالنُّورُ ۗ أَمْ جَعَلُوا لِلَّهِ شُرَكَاءَ خَلَقُوا كَخَلْقِهِ فَتَشَابَهَ الْخَلْقُ عَلَيْهِمْ ۚ قُلِ اللَّهُ خَالِقُ كُلِّ شَيْءٍ وَهُوَ الْوَاحِدُ الْقَهَّارُ ۞
(ದೂತರೇ,)‘‘ಆಕಾಶಗಳ ಹಾಗೂ ಭೂಮಿಯ ಒಡೆಯನು ಯಾರು? ಎಂದು ಕೇಳಿರಿ. ‘‘ಅಲ್ಲಾಹನು’’ ಎಂದು ಹೇಳಿರಿ. ‘‘ನೀವೇನು ಅವನನ್ನು ಬಿಟ್ಟು, ಸ್ವತಃ ತಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ನಿಮ್ಮ ಪೋಷಕರಾಗಿಸಿಕೊಂಡಿರುವಿರಾ?’’ ಎಂದು ಕೇಳಿರಿ. ‘‘ಕಾಣುವವನು ಮತ್ತು ಕುರುಡನು ಸಮಾನರೇ? ಅಥವಾ ಕತ್ತಲುಗಳು ಮತ್ತು ಬೆಳಕು ಸಮನಾಗಬಲ್ಲವೇ? ಸೃಷ್ಟಿ ಕಾರ್ಯದ ಕುರಿತು (ಯಾವುದನ್ನು ಯಾರು ಸೃಷ್ಟಿಸಿದ್ದೆಂದು) ಅವರಿಗೆ ಗೊಂದಲವಾಗುವುದಕ್ಕೆ, ಅವರು ಅಲ್ಲಾಹನ ಪಾಲುದಾರೆಂದು ನಂಬಿಕೊಂಡಿರುವವರು, ಅವನು ಸೃಷ್ಟಿಸಿದಂತೆ (ಏನನ್ನಾದರೂ) ಸೃಷ್ಟಿಸಿದ್ದಾರೆಯೇ? ಹೇಳಿರಿ; ಅಲ್ಲಾಹನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನು ಅನನ್ಯನೂ ಅತ್ಯಂತ ಪ್ರಬಲನೂ ಆಗಿದ್ದಾನೆ.
13:17
أَنْزَلَ مِنَ السَّمَاءِ مَاءً فَسَالَتْ أَوْدِيَةٌ بِقَدَرِهَا فَاحْتَمَلَ السَّيْلُ زَبَدًا رَابِيًا ۚ وَمِمَّا يُوقِدُونَ عَلَيْهِ فِي النَّارِ ابْتِغَاءَ حِلْيَةٍ أَوْ مَتَاعٍ زَبَدٌ مِثْلُهُ ۚ كَذَٰلِكَ يَضْرِبُ اللَّهُ الْحَقَّ وَالْبَاطِلَ ۚ فَأَمَّا الزَّبَدُ فَيَذْهَبُ جُفَاءً ۖ وَأَمَّا مَا يَنْفَعُ النَّاسَ فَيَمْكُثُ فِي الْأَرْضِ ۚ كَذَٰلِكَ يَضْرِبُ اللَّهُ الْأَمْثَالَ ۞
ಅವನು ಆಕಾಶದಿಂದ ನೀರನ್ನು ಸುರಿಸಿದನು. ಅದರಿಂದ ನದಿ ನಾಲೆಗಳು ತಮ್ಮ ಪ್ರಮಾಣಕ್ಕನುಸಾರ ತುಂಬಿ ಹರಿಯತೊಡಗಿದವು. ಈ ವೇಳೆ (ಮೇಲ್ಮಟ್ಟದಲ್ಲಿದ್ದ) ಉಬ್ಬಿದ ನೊರೆಯನ್ನು ಪ್ರವಾಹವು ಒಯ್ದು ಬಿಟ್ಟಿತು. ಜನರು ಆಭರಣಗಳನ್ನು ಅಥವಾ ಇತರ ಸಾಧನಗಳನ್ನು ತಯಾರಿಸಲೆಂದು ಬೆಂಕಿಯಲ್ಲಿ ಕುದಿಸುವ ವಸ್ತುಗಳಲ್ಲೂ ಇಂತಹದೇ ನೊರೆ ಹೊಮ್ಮುತ್ತದೆ. ಇದೇರೀತಿ ಅಲ್ಲಾಹನು ಸತ್ಯ - ಮಿಥ್ಯಗಳನ್ನು ಉದಾಹರಣೆಯೊಂದಿಗೆ ಸ್ಪಷ್ಟಪಡಿಸುತ್ತಾನೆ. ನೊರೆಯು ಆರಿ ತೊಲಗಿ ಹೋಗುತ್ತದೆ. ಆದರೆ ಮಾನವರಿಗೆ ಉಪಯುಕ್ತವಾದುದು ಭೂಮಿಯಲ್ಲಿ ಸ್ಥಿರಗೊಳ್ಳುತ್ತದೆ. ಹೀಗೆ ಅಲ್ಲಾಹನು ಉದಾಹರಣೆಗಳನ್ನು ನೀಡುತ್ತಾನೆ.
13:18
لِلَّذِينَ اسْتَجَابُوا لِرَبِّهِمُ الْحُسْنَىٰ ۚ وَالَّذِينَ لَمْ يَسْتَجِيبُوا لَهُ لَوْ أَنَّ لَهُمْ مَا فِي الْأَرْضِ جَمِيعًا وَمِثْلَهُ مَعَهُ لَافْتَدَوْا بِهِ ۚ أُولَٰئِكَ لَهُمْ سُوءُ الْحِسَابِ وَمَأْوَاهُمْ جَهَنَّمُ ۖ وَبِئْسَ الْمِهَادُ ۞
ತಮ್ಮ ಒಡೆಯನ ಆದೇಶ ಪಾಲಿಸಿದವರಿಗೆ ಹಿತವಿದೆ. ಅತ್ತ, ಅವನ ಆದೇಶಗಳನ್ನು ಉಲ್ಲಂಘಿಸಿದವರ ಬಳಿ, ಭೂಮಿಯಲ್ಲಿರುವುದೆಲ್ಲವೂ ಇದ್ದು, ಹೆಚ್ಚುವರಿಯಾಗಿ ಮತ್ತೆ ಅಷ್ಟೇ ಇದ್ದು, ಅದನ್ನೆಲ್ಲಾ ಅವರು ಪರಿಹಾರವಾಗಿ ನೀಡಿದರೂ, ಅವರ ವಿಚಾರಣೆಯ ಫಲಿತಾಂಶವು ತುಂಬಾ ಕೆಟ್ಟದಾಗಿರುವುದು. ನರಕವೇ ಅವರ ನೆಲೆಯಾಗಿರುವುದು ಮತ್ತು ಅದು ತುಂಬಾ ಕೆಟ್ಟ ವಾಸಸ್ಥಾನವಾಗಿದೆ.
13:19
۞ أَفَمَنْ يَعْلَمُ أَنَّمَا أُنْزِلَ إِلَيْكَ مِنْ رَبِّكَ الْحَقُّ كَمَنْ هُوَ أَعْمَىٰ ۚ إِنَّمَا يَتَذَكَّرُ أُولُو الْأَلْبَابِ ۞
(ದೂತರೇ,) ನಿಮ್ಮ ಒಡೆಯನ ಕಡೆಯಿಂದ ನಿಮ್ಮ ಬಳಿಗೆ ಸತ್ಯ ಸಂದೇಶವನ್ನು ಇಳಿಸಿಕೊಡಲಾಗಿದೆ ಎಂಬುದನ್ನು ಬಲ್ಲ ವ್ಯಕ್ತಿಯು ಕುರುಡನಂತಾಗಲು ಸಾಧ್ಯವೇ? ನಿಜಕ್ಕೂ ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.
13:20
الَّذِينَ يُوفُونَ بِعَهْدِ اللَّهِ وَلَا يَنْقُضُونَ الْمِيثَاقَ ۞
ಅವರು ಅಲ್ಲಾಹನ ಜೊತೆಗಿನ ಕರಾರನ್ನು ಪಾಲಿಸುತ್ತಾರೆ ಹಾಗೂ ಅವರು ಒಪ್ಪಂದವನ್ನು ಮುರಿಯುವುದಿಲ್ಲ.*
13:21
وَالَّذِينَ يَصِلُونَ مَا أَمَرَ اللَّهُ بِهِ أَنْ يُوصَلَ وَيَخْشَوْنَ رَبَّهُمْ وَيَخَافُونَ سُوءَ الْحِسَابِ ۞
ಅಲ್ಲಾಹನು ರಕ್ಷಿಸಬೇಕೆಂದು ಆದೇಶಿಸಿರುವ ಬಾಂಧವ್ಯಗಳನ್ನು ಅವರು ರಕ್ಷಿಸುತ್ತಾರೆ. ಅವರು ತಮ್ಮ ಒಡೆಯನ ಭಯ ಭಕ್ತಿ ಉಳ್ಳವರಾಗಿರುತ್ತಾರೆ ಮತ್ತು ಭಯಾನಕ ವಿಚಾರಣೆಯ ಕುರಿತು ಭೀತರಾಗಿರುತ್ತಾರೆ.
13:22
وَالَّذِينَ صَبَرُوا ابْتِغَاءَ وَجْهِ رَبِّهِمْ وَأَقَامُوا الصَّلَاةَ وَأَنْفَقُوا مِمَّا رَزَقْنَاهُمْ سِرًّا وَعَلَانِيَةً وَيَدْرَءُونَ بِالْحَسَنَةِ السَّيِّئَةَ أُولَٰئِكَ لَهُمْ عُقْبَى الدَّارِ ۞
ಇನ್ನು, ತಮ್ಮ ಒಡೆಯನ ಮೆಚ್ಚುಗೆಗಾಗಿ ಸಹನಶೀಲರಾಗಿರುವವರು, ನಮಾಝ್ ಅನ್ನು ಪಾಲಿಸುವವರು, ತಮಗೆ ನಾವು ನೀಡಿರುವ ಸಂಪತ್ತಿನಿಂದ ಗುಟ್ಟಾಗಿಯೂ ಬಹಿರಂಗವಾಗಿಯೂ ಖರ್ಚುಮಾಡುವವರು ಮತ್ತು ಒಳಿತಿನ ಮೂಲಕ ಕೆಡುಕನ್ನು ನಿವಾರಿಸುವವರು - ಅವರಿಗಾಗಿಯೇ ಇದೆ, ಪರಲೋಕದ ಮನೆ.
13:23
جَنَّاتُ عَدْنٍ يَدْخُلُونَهَا وَمَنْ صَلَحَ مِنْ آبَائِهِمْ وَأَزْوَاجِهِمْ وَذُرِّيَّاتِهِمْ ۖ وَالْمَلَائِكَةُ يَدْخُلُونَ عَلَيْهِمْ مِنْ كُلِّ بَابٍ ۞
ಅವರು ಶಾಶ್ವತ ತೋಟಗಳನ್ನು ಪ್ರವೇಶಿಸುವರು. ಹಾಗೆಯೇ ಅವರ ತಂದೆ - ತಾತಂದಿರು, ಪತ್ನಿಯರು ಮತ್ತು ಸಂತತಿಗಳ ಪೈಕಿ ಸಜ್ಜನರಾಗಿದ್ದವರು ಮತ್ತು ಮಲಕ್‌ಗಳು ಎಲ್ಲ ಬಾಗಿಲುಗಳಿಂದ ಅವರ ಬಳಿಗೆ ಬರುವರು.
13:24
سَلَامٌ عَلَيْكُمْ بِمَا صَبَرْتُمْ ۚ فَنِعْمَ عُقْبَى الدَّارِ ۞
‘‘ನೀವು ತೋರಿದ ಸಹನೆಗಾಗಿ ನಿಮಗೆ ಶಾಂತಿ ಸಿಗಲಿ’’ ಎನ್ನುತ್ತಾ (ಅವರು ಬರುವರು). ಪರಲೋಕದ ಆ ಮನೆಯು ಬಹಳ ಶ್ರೇಷ್ಠವಾಗಿರುವುದು.
13:25
وَالَّذِينَ يَنْقُضُونَ عَهْدَ اللَّهِ مِنْ بَعْدِ مِيثَاقِهِ وَيَقْطَعُونَ مَا أَمَرَ اللَّهُ بِهِ أَنْ يُوصَلَ وَيُفْسِدُونَ فِي الْأَرْضِ ۙ أُولَٰئِكَ لَهُمُ اللَّعْنَةُ وَلَهُمْ سُوءُ الدَّارِ ۞
ಇನ್ನು, ಅಲ್ಲಾಹನ ಜೊತೆಗೆ ಮಾಡಿದ ಕರಾರನ್ನು ಪಕ್ವಗೊಳಿಸಿದ ಬಳಿಕ ಉಲ್ಲಂಘಿಸುವವರು ಹಾಗೂ ಅಲ್ಲಾಹನು ರಕ್ಷಿಸಬೇಕೆಂದು ಆದೇಶಿಸಿರುವ ಬಾಂಧವ್ಯಗಳನ್ನು ಮುರಿಯುವವರು ಮತ್ತು ಭೂಮಿಯಲ್ಲಿ ಅಶಾಂತಿ ಹರಡುವವರು - ಅವರೇ ಶಾಪಕ್ಕೆ ತುತ್ತಾಗುವವರು. ಅವರಿಗೆ ತೀರಾ ಕೆಟ್ಟ ನೆಲೆ ಸಿಗುವುದು.
13:26
اللَّهُ يَبْسُطُ الرِّزْقَ لِمَنْ يَشَاءُ وَيَقْدِرُ ۚ وَفَرِحُوا بِالْحَيَاةِ الدُّنْيَا وَمَا الْحَيَاةُ الدُّنْيَا فِي الْآخِرَةِ إِلَّا مَتَاعٌ ۞
ಅಲ್ಲಾಹನು ತಾನಿಚ್ಛಿಸಿದವರ ಪಾಲಿಗೆ ಆದಾಯವನ್ನು ವಿಸ್ತರಿಸುತ್ತಾನೆ ಮತ್ತು ಸಂಕುಚಿತಗೊಳಿಸುತ್ತಾನೆ. ಅವರು ಈ ಲೋಕದ ಬದುಕಿನಲ್ಲೇ ಸಂತುಷ್ಟರಾಗಿದ್ದಾರೆ. ನಿಜವಾಗಿ, ಪರಲೋಕದೆದುರು ಈ ಲೋಕವು ತೀರಾ ಕ್ಷುಲ್ಲಕ ಸೊತ್ತಾಗಿದೆ.
13:27
وَيَقُولُ الَّذِينَ كَفَرُوا لَوْلَا أُنْزِلَ عَلَيْهِ آيَةٌ مِنْ رَبِّهِ ۗ قُلْ إِنَّ اللَّهَ يُضِلُّ مَنْ يَشَاءُ وَيَهْدِي إِلَيْهِ مَنْ أَنَابَ ۞
‘‘ಅವನ ಒಡೆಯನ ಕಡೆಯಿಂದ ಅವನಿಗೆ ಯಾವುದೇ ಪುರಾವೆಯು ಇಳಿದು ಬಂದಿಲ್ಲವೇಕೆ?’’ ಎಂದು ಧಿಕ್ಕಾರಿಗಳು ಕೇಳುತ್ತಾರೆ. ಹೇಳಿರಿ; ಖಂಡಿತವಾಗಿಯೂ ಅಲ್ಲಾಹನು, ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ಅವನು ತನ್ನ ಕುರಿತು ಒಲವು ಉಳ್ಳವರಿಗೆ ತನ್ನೆಡೆಗಿರುವ ದಾರಿಯನ್ನು ತೋರುತ್ತಾನೆ.
13:28
الَّذِينَ آمَنُوا وَتَطْمَئِنُّ قُلُوبُهُمْ بِذِكْرِ اللَّهِ ۗ أَلَا بِذِكْرِ اللَّهِ تَطْمَئِنُّ الْقُلُوبُ ۞
ಅವರು ಸತ್ಯದಲ್ಲಿ ನಂಬಿಕೆ ಉಳ್ಳವರಾಗಿರುತ್ತಾರೆ ಮತ್ತು ಅವರ ಮನಸ್ಸುಗಳು ಅಲ್ಲಾಹನ ನೆನಪಿನಲ್ಲಿ ಸಂತೃಪ್ತಿಯನ್ನು ಪಡೆದಿರುತ್ತವೆ. ನಿಮಗೆ ತಿಳಿದಿರಲಿ - ಮನಸ್ಸಿನ ಸಂತೃಪ್ತಿಯು ಅಲ್ಲಾಹನನ್ನು ನೆನಪಿಸುವುದರಲ್ಲೇ ಇದೆ.
13:29
الَّذِينَ آمَنُوا وَعَمِلُوا الصَّالِحَاتِ طُوبَىٰ لَهُمْ وَحُسْنُ مَآبٍ ۞
ಸತ್ಯದಲ್ಲಿ ನಂಬಿಕೆ ಉಳ್ಳವರು ಮತ್ತು ಸತ್ಕರ್ಮ ಮಾಡುವವರಿಗೆ ಶುಭವಾರ್ತೆ ಇದೆ ಮತ್ತು ಅವರಿಗೆ ಶ್ರೇಷ್ಠ ನೆಲೆ ಸಿಗಲಿವೆ.
13:30
كَذَٰلِكَ أَرْسَلْنَاكَ فِي أُمَّةٍ قَدْ خَلَتْ مِنْ قَبْلِهَا أُمَمٌ لِتَتْلُوَ عَلَيْهِمُ الَّذِي أَوْحَيْنَا إِلَيْكَ وَهُمْ يَكْفُرُونَ بِالرَّحْمَٰنِ ۚ قُلْ هُوَ رَبِّي لَا إِلَٰهَ إِلَّا هُوَ عَلَيْهِ تَوَكَّلْتُ وَإِلَيْهِ مَتَابِ ۞
(ದೂತರೇ,) ಈ ರೀತಿ, ನಾವು ದಿವ್ಯವಾಣಿಯ ಮೂಲಕ ನಿಮ್ಮೆಡೆಗೆ ಕಳುಹಿಸಿದ್ದನ್ನು ನೀವು ಅವರಿಗೆ ಓದಿ ಕೇಳಿಸಬೇಕೆಂದು ನಾವು ನಿಮ್ಮನ್ನು ಒಂದು ಸಮುದಾಯದೆಡೆಗೆ ಕಳಿಸಿರುವೆವು. ಅವರಿಗಿಂತ ಹಿಂದೆ ಹಲವು ಸಮುದಾಯಗಳು ಗತಿಸಿವೆ. ಅವರಂತು ಆ ಪರಮ ದಯಾಳುವನ್ನೇ ಧಿಕ್ಕರಿಸುತ್ತಿದ್ದಾರೆ. ಹೇಳಿರಿ; ಅವನೇ ನನ್ನ ಒಡೆಯನು. ಅವನಲ್ಲದೆ ಬೇರೆ ದೇವರಿಲ್ಲ. ನಾನು ಅವನಲ್ಲೇ ಭರವಸೆ ಇಟ್ಟಿರುವೆನು. ಕೊನೆಗೆ ಅವನೆಡೆಗೇ (ಎಲ್ಲರೂ) ಮರಳಬೇಕಾಗಿದೆ.
13:31
وَلَوْ أَنَّ قُرْآنًا سُيِّرَتْ بِهِ الْجِبَالُ أَوْ قُطِّعَتْ بِهِ الْأَرْضُ أَوْ كُلِّمَ بِهِ الْمَوْتَىٰ ۗ بَلْ لِلَّهِ الْأَمْرُ جَمِيعًا ۗ أَفَلَمْ يَيْأَسِ الَّذِينَ آمَنُوا أَنْ لَوْ يَشَاءُ اللَّهُ لَهَدَى النَّاسَ جَمِيعًا ۗ وَلَا يَزَالُ الَّذِينَ كَفَرُوا تُصِيبُهُمْ بِمَا صَنَعُوا قَارِعَةٌ أَوْ تَحُلُّ قَرِيبًا مِنْ دَارِهِمْ حَتَّىٰ يَأْتِيَ وَعْدُ اللَّهِ ۚ إِنَّ اللَّهَ لَا يُخْلِفُ الْمِيعَادَ ۞
ಒಂದು ವೇಳೆ ಈ ಕುರ್‌ಆನ್‌ನಿಂದಾಗಿ ಪರ್ವತಗಳು ಚಲಿಸಲಾರಂಭಿಸಿದ್ದರೆ, ಭೂಮಿಯು ಛಿದ್ರವಾಗಿದ್ದರೆ, ಅಥವಾ ಶವಗಳು ಮಾತನಾಡತೊಡಗಿದ್ದರೆ - ಆಗಲೂ ಅವರು ನಂಬುತ್ತಿರಲಿಲ್ಲ. ನಿಜವಾಗಿ ಅಧಿಕಾರವೆಲ್ಲವೂ ಅಲ್ಲಾಹನಿಗೇ ಸೇರಿದೆ. ಅಲ್ಲಾಹನು ಬಯಸಿದ್ದರೆ, ಎಲ್ಲ ಮಾನವರನ್ನೂ ಸನ್ಮಾರ್ಗದಲ್ಲಿ ನಡೆಸಿ ಬಿಡುತ್ತಿದ್ದನು ಎಂಬ ಮಾಹಿತಿಯಿಂದ ವಿಶ್ವಾಸಿಗಳಿಗೆ ನೆಮ್ಮದಿ ಸಿಗಲಿಲ್ಲವೇ? ಧಿಕ್ಕಾರಿಗಳ ಕರ್ಮಗಳ ಫಲವಾಗಿ, ಅಲ್ಲಾಹನ ಮಾತು ಈಡೇರುವ ತನಕ, ಅವರ ಮೇಲೆ ಅಥವಾ ಅವರ ನಿವಾಸಗಳ ಅಕ್ಕ ಪಕ್ಕದಲ್ಲಿ ತೀವ್ರ ವಿಪತ್ತುಗಳು ಎರಗುತ್ತಲೇ ಇರುವವು . ಖಂಡಿತವಾಗಿಯೂ ಅಲ್ಲಾಹನು ತಾನು ಕೊಟ್ಟ ಮಾತನ್ನು ಮೀರುವುದಿಲ್ಲ.
13:32
وَلَقَدِ اسْتُهْزِئَ بِرُسُلٍ مِنْ قَبْلِكَ فَأَمْلَيْتُ لِلَّذِينَ كَفَرُوا ثُمَّ أَخَذْتُهُمْ ۖ فَكَيْفَ كَانَ عِقَابِ ۞
(ದೂತರೇ,) ನಿಮಗಿಂತ ಹಿಂದಿನ ದೂತರನ್ನೂ ಗೇಲಿ ಮಾಡಲಾಗಿದೆ. ನಾನು ಧಿಕ್ಕಾರಿಗಳಿಗೆ ಅವಕಾಶ ನೀಡಿದೆನು. ಆ ಬಳಿಕ ಅವರನ್ನು (ಶಿಕ್ಷಿಸಲಿಕ್ಕಾಗಿ) ಹಿಡಿದುಕೊಂಡೆನು. ಹೇಗಿತ್ತು ನನ್ನ ದಂಡನೆ?
13:33
أَفَمَنْ هُوَ قَائِمٌ عَلَىٰ كُلِّ نَفْسٍ بِمَا كَسَبَتْ ۗ وَجَعَلُوا لِلَّهِ شُرَكَاءَ قُلْ سَمُّوهُمْ ۚ أَمْ تُنَبِّئُونَهُ بِمَا لَا يَعْلَمُ فِي الْأَرْضِ أَمْ بِظَاهِرٍ مِنَ الْقَوْلِ ۗ بَلْ زُيِّنَ لِلَّذِينَ كَفَرُوا مَكْرُهُمْ وَصُدُّوا عَنِ السَّبِيلِ ۗ وَمَنْ يُضْلِلِ اللَّهُ فَمَا لَهُ مِنْ هَادٍ ۞
(ಅವನು) ಪ್ರತಿಯೊಬ್ಬ ಜೀವಿಯು ಏನೆಲ್ಲಾ ಮಾಡುತ್ತಿರುವನೆಂದು ಸದಾ ಮೇಲ್ವಿಚಾರಣೆ ನಡೆಸುತ್ತಿರುವವನು. ಇಷ್ಟಿದ್ದೂ ಅವರು ಅಲ್ಲಾಹನಿಗೆ ಪಾಲುದಾರರನ್ನು ಆರೋಪಿಸುತ್ತಿದ್ದಾರೆ. ಹೇಳಿರಿ; ನೀವು ಅವರ ಹೆಸರುಗಳನ್ನಾದರೂ ತಿಳಿಸಿರಿ. ನೀವೇನು, ಭೂಮಿಯಲ್ಲಿ ಅವನಿಗೆ (ಅಲ್ಲಾಹನಿಗೆ) ತಿಳಿದೇ ಇಲ್ಲದ ವಿಷಯವೊಂದನ್ನು ಅವನಿಗೆ ತಿಳಿಸುತ್ತಿರುವಿರಾ! ಅಥವಾ ನೀವು ಕೇವಲ ಮಾತಿನ ಮಟ್ಟಿಗೆ (ಹಾಗೆ) ಹೇಳುತ್ತಿರುವಿರಾ? ನಿಜವಾಗಿ ಧಿಕ್ಕಾರಿಗಳ ಪಾಲಿಗೆ ಅವರ ವಂಚನೆಯನ್ನು ಚಂದಗಾಣಿಸಿ ಕೊಡಲಾಗಿದೆ ಮತ್ತು ಅವರನ್ನು ಸರಿದಾರಿಯಿಂದ ತಡೆದಿಡಲಾಗಿದೆ. ಯಾರನ್ನು ಅಲ್ಲಾಹನು ದಾರಿಗೆಡಿಸಿದನೋ ಅವರಿಗೆ ದಾರಿ ತೋರಬಲ್ಲವರು ಯಾರೂ ಇಲ್ಲ.
13:34
لَهُمْ عَذَابٌ فِي الْحَيَاةِ الدُّنْيَا ۖ وَلَعَذَابُ الْآخِرَةِ أَشَقُّ ۖ وَمَا لَهُمْ مِنَ اللَّهِ مِنْ وَاقٍ ۞
ಅವರಿಗೆ ಈಲೋಕದ ಬದುಕಿನಲ್ಲೂ ಶಿಕ್ಷೆ ಇದೆ. ಇನ್ನು ಪರಲೋಕದ ಶಿಕ್ಷೆಯಂತೂ ತುಂಬಾ ಕಠಿಣವಾಗಿರುವುದು ಮತ್ತು ಅವರನ್ನು ಅಲ್ಲಾಹನಿಂದ ರಕ್ಷಿಸ ಬಲ್ಲವರು ಯಾರೂ ಇಲ್ಲ.
13:35
۞ مَثَلُ الْجَنَّةِ الَّتِي وُعِدَ الْمُتَّقُونَ ۖ تَجْرِي مِنْ تَحْتِهَا الْأَنْهَارُ ۖ أُكُلُهَا دَائِمٌ وَظِلُّهَا ۚ تِلْكَ عُقْبَى الَّذِينَ اتَّقَوْا ۖ وَعُقْبَى الْكَافِرِينَ النَّارُ ۞
ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸ್ವರೂಪ (ಹೀಗಿರುವುದು); ಅದರ ತಳದಲ್ಲಿ ನದಿಗಳು ಹರಿಯುತ್ತಿರುವವು. ಅದರ ಫಲಗಳು ಮತ್ತು ಅದರ ನೆರಳು ಶಾಶ್ವತವಾಗಿರುವುದು. ಹೀಗಿರುವುದು, ಧರ್ಮನಿಷ್ಠರ ಅಂತಿಮ ಗತಿ. ಇನ್ನು, (ನರಕದ) ಬೆಂಕಿಯೇ ಧಿಕ್ಕಾರಿಗಳ ಅಂತಿಮ ಗತಿಯಾಗಿರುವುದು.
13:36
وَالَّذِينَ آتَيْنَاهُمُ الْكِتَابَ يَفْرَحُونَ بِمَا أُنْزِلَ إِلَيْكَ ۖ وَمِنَ الْأَحْزَابِ مَنْ يُنْكِرُ بَعْضَهُ ۚ قُلْ إِنَّمَا أُمِرْتُ أَنْ أَعْبُدَ اللَّهَ وَلَا أُشْرِكَ بِهِ ۚ إِلَيْهِ أَدْعُو وَإِلَيْهِ مَآبِ ۞
ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು, ನಿಮಗೆ ಇಳಿಸಿಕೊಡಲಾಗಿರುವ ಸಂದೇಶದ ಕುರಿತು ಸಂತೋಷ ಪಡುತ್ತಾರೆ. ಇದರ ಕೆಲವು ಭಾಗಗಳನ್ನು ತಿರಸ್ಕರಿಸುವ ಕೆಲವು ಪಂಗಡಗಳೂ ಇವೆ. ಹೇಳಿರಿ; ನನಗಂತು, ನಾನು ಅಲ್ಲಾಹನನ್ನೇ ಪೂಜಿಸಬೇಕು ಮತ್ತು ಅವನ ಜೊತೆ ಯಾರನ್ನೂ ಪಾಲುಗೊಳಿಸಬಾರದು ಎಂದು ಆದೇಶಿಸಲಾಗಿದೆ. ನಾನು ಅವನ ಕಡೆಗೇ ಆಮಂತ್ರಿಸುತ್ತೇನೆ ಮತ್ತು ನಾನು ಅವನಲ್ಲಿಗೇ ಮರಳಲಿದ್ದೇನೆ.
13:37
وَكَذَٰلِكَ أَنْزَلْنَاهُ حُكْمًا عَرَبِيًّا ۚ وَلَئِنِ اتَّبَعْتَ أَهْوَاءَهُمْ بَعْدَمَا جَاءَكَ مِنَ الْعِلْمِ مَا لَكَ مِنَ اللَّهِ مِنْ وَلِيٍّ وَلَا وَاقٍ ۞
ಇದೇ ರೀತಿ ನಾವು ಇದನ್ನು (ಕುರ್‌ಆನ್‌ಅನ್ನು) ಅರಬೀ ಭಾಷೆಯಲ್ಲಿರುವ ಆದೇಶದ ರೂಪದಲ್ಲಿ ಇಳಿಸಿರುವೆವು. ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ನೀವು ಅವರ ಅಪೇಕ್ಷೆಗಳನ್ನು ಅನುಸರಿಸಿದರೆ ನಿಮಗೆ ಅಲ್ಲಾಹನೆದುರು ಸಹಾಯಕರಾಗಿ ಮತ್ತು ರಕ್ಷಕರಾಗಿ ಯಾರೂ ಸಿಗಲಾರರು.
13:38
وَلَقَدْ أَرْسَلْنَا رُسُلًا مِنْ قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَنْ يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ ۞
ನಿಮಗಿಂತ ಹಿಂದೆಯೂ ನಾವು ದೂತರನ್ನು ಕಳಿಸಿದ್ದೆವು ಮತ್ತು ಅವರಿಗೆ ಮಡದಿಯರನ್ನೂ ಮಕ್ಕಳನ್ನೂ ನೀಡಿದ್ದೆವು. ಅಲ್ಲಾಹನ ಅನುಮತಿ ಇಲ್ಲದೆ ಯಾವುದೇ ಪುರಾವೆಯನ್ನು ತರಲು ಯಾವ ದೂತನಿಗೂ ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಕಾಲವು ನಿಶ್ಚಿತವಾಗಿದೆ.
13:39
يَمْحُو اللَّهُ مَا يَشَاءُ وَيُثْبِتُ ۖ وَعِنْدَهُ أُمُّ الْكِتَابِ ۞
ಅಲ್ಲಾಹನು ತಾನಿಚ್ಛಿಸಿದ್ದನ್ನು ಅಳಿಸಿ ಬಿಡುತ್ತಾನೆ ಮತ್ತು (ತಾನಿಚ್ಛಿಸಿದ್ದನ್ನು) ಉಳಿಸುತ್ತಾನೆ. ಗ್ರಂಥಗಳ ಮಾತೆಯು (ಮೂಲ ಗ್ರಂಥವು) ಅವನ ಬಳಿ ಇದೆ.
13:40
وَإِنْ مَا نُرِيَنَّكَ بَعْضَ الَّذِي نَعِدُهُمْ أَوْ نَتَوَفَّيَنَّكَ فَإِنَّمَا عَلَيْكَ الْبَلَاغُ وَعَلَيْنَا الْحِسَابُ ۞
(ದೂತರೇ,) ನಾವು ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿರುವ ಶಿಕ್ಷೆಯ ಒಂದಂಶವನ್ನು (ನಿಮ್ಮ ಜೀವನಾವಧಿಯಲ್ಲೇ) ನಿಮಗೆ ತೋರಿಸಬಹುದು ಅಥವಾ ನಿಮ್ಮನ್ನು ನಾವು ಮೃತರಾಗಿಸಬಹುದು . ಏನಿದ್ದರೂ ನಿಮ್ಮ ಮೇಲಿರುವುದು (ಸತ್ಯವನ್ನು) ತಲುಪಿಸುವ ಹೊಣೆ ಮಾತ್ರ. ವಿಚಾರಣೆಯ ಹೊಣೆಯು ನಮ್ಮ ಮೇಲಿದೆ.
13:41
أَوَلَمْ يَرَوْا أَنَّا نَأْتِي الْأَرْضَ نَنْقُصُهَا مِنْ أَطْرَافِهَا ۚ وَاللَّهُ يَحْكُمُ لَا مُعَقِّبَ لِحُكْمِهِ ۚ وَهُوَ سَرِيعُ الْحِسَابِ ۞
ನಾವು (ಅವರ ಪಾಲಿಗೆ) ಭೂಮಿಯನ್ನು ಅದರ ಎಲ್ಲ ಮೂಲೆಗಳಿಂದಲೂ ಮುದುಡಿಸುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಅಲ್ಲಾಹನು ಆದೇಶಿಸುತ್ತಾನೆ. ಅವನ ಆದೇಶವನ್ನು ಹಿಂದಿಕ್ಕಬಲ್ಲವರು ಯಾರೂ ಇಲ್ಲ. ಅವನು ಬಹಳ ವೇಗವಾಗಿ ವಿಚಾರಣೆ ಮುಗಿಸುತ್ತಾನೆ.
13:42
وَقَدْ مَكَرَ الَّذِينَ مِنْ قَبْلِهِمْ فَلِلَّهِ الْمَكْرُ جَمِيعًا ۖ يَعْلَمُ مَا تَكْسِبُ كُلُّ نَفْسٍ ۗ وَسَيَعْلَمُ الْكُفَّارُ لِمَنْ عُقْبَى الدَّارِ ۞
ಅವರಿಗಿಂತ ಹಿಂದಿನವರೂ ಯೋಜನೆಗಳನ್ನು ರೂಪಿಸಿದ್ದಾರೆ. ಅಂತಿಮವಾಗಿ ಎಲ್ಲ ಯೋಜನೆಗಳೂ ಅಲ್ಲಾಹನಿಗೇ ಸೇರಿವೆ. ಪ್ರತಿಯೊಬ್ಬರೂ ಏನನ್ನು ಸಂಪಾದಿಸುತ್ತಿದ್ದಾರೆ ಎಂಬುದು ಅವನಿಗೆ ತಿಳಿದಿದೆ. ಪರಲೋಕದ ಸದ್ಗತಿಯು ಯಾರಿಗೆ ಸಿಗುವುದು ಎಂಬುದನ್ನು ಧಿಕ್ಕಾರಿಗಳು ಬೇಗನೇ ತಿಳಿಯುವರು.
13:43
وَيَقُولُ الَّذِينَ كَفَرُوا لَسْتَ مُرْسَلًا ۚ قُلْ كَفَىٰ بِاللَّهِ شَهِيدًا بَيْنِي وَبَيْنَكُمْ وَمَنْ عِنْدَهُ عِلْمُ الْكِتَابِ ۞
(ದೂತರೇ,) ನೀವು ದೂತರಲ್ಲ ಎಂದು ಧಿಕ್ಕಾರಿಗಳು ಹೇಳುತ್ತಾರೆ. ಹೇಳಿರಿ; ನನ್ನ ಹಾಗೂ ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನು ಸಾಕು ಮತ್ತು ಗ್ರಂಥದ ಜ್ಞಾನ ಉಳ್ಳವನು ಸಾಕು.