Fatir (The originator)
35. ಫಾತಿರ್(ನಿರ್ಮಾಪಕ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
35:1
الْحَمْدُ لِلَّهِ فَاطِرِ السَّمَاوَاتِ وَالْأَرْضِ جَاعِلِ الْمَلَائِكَةِ رُسُلًا أُولِي أَجْنِحَةٍ مَثْنَىٰ وَثُلَاثَ وَرُبَاعَ ۚ يَزِيدُ فِي الْخَلْقِ مَا يَشَاءُ ۚ إِنَّ اللَّهَ عَلَىٰ كُلِّ شَيْءٍ قَدِيرٌ ۞
ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ. ಆಕಾಶಗಳನ್ನು ಹಾಗೂ ಭೂಮಿಯನ್ನು ನಿರ್ಮಿಸಿದವನು (ಮತ್ತು) ತಲಾ ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳಿರುವ ಮಲಕ್‌ಗಳನ್ನು ದೂತರಾಗಿ ಕಳಿಸಿದವನು ಅವನೇ . ಅವನು ತನ್ನ ಸೃಷ್ಟಿಯಲ್ಲಿ ತಾನಿಚ್ಛಿಸಿದ್ದನ್ನು ಹೆಚ್ಚಿಸುತ್ತಾನೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.
35:2
مَا يَفْتَحِ اللَّهُ لِلنَّاسِ مِنْ رَحْمَةٍ فَلَا مُمْسِكَ لَهَا ۖ وَمَا يُمْسِكْ فَلَا مُرْسِلَ لَهُ مِنْ بَعْدِهِ ۚ وَهُوَ الْعَزِيزُ الْحَكِيمُ ۞
ಅಲ್ಲಾಹನು ಮಾನವರ ಪಾಲಿಗೆ ತೆರೆದುಕೊಟ್ಟ ಅನುಗ್ರಹವನ್ನು ತಡೆಯಬಲ್ಲವರು ಯಾರೂ ಇಲ್ಲ. ಇನ್ನು, ಅವನು ಏನನ್ನಾದರೂ ತಡೆದಿಟ್ಟರೆ, ಅದನ್ನು ಕೊಡಿಸಬಲ್ಲವರು ಯಾರೂ ಇಲ್ಲ. ಮತ್ತು ಅವನು, ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.
35:3
يَا أَيُّهَا النَّاسُ اذْكُرُوا نِعْمَتَ اللَّهِ عَلَيْكُمْ ۚ هَلْ مِنْ خَالِقٍ غَيْرُ اللَّهِ يَرْزُقُكُمْ مِنَ السَّمَاءِ وَالْأَرْضِ ۚ لَا إِلَٰهَ إِلَّا هُوَ ۖ فَأَنَّىٰ تُؤْفَكُونَ ۞
ಮಾನವರೇ, ಅಲ್ಲಾಹನು ನಿಮಗೆ ನೀಡಿರುವ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ನಿಮಗೇನು, ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತನಿದ್ದಾನೆಯೇ? ಅವನು ನಿಮಗೆ ಆಕಾಶಗಳಿಂದಲೂ ಭೂಮಿಯಿಂದಲೂ ಆಹಾರವನ್ನು ಒದಗಿಸುತ್ತಾನೆ. ಅವನ ಹೊರತು ಪೂಜಾರ್ಹರು ಬೇರಿಲ್ಲ. ಹೀಗಿರುತ್ತಾ, ನೀವು ಅದೆಲ್ಲಿ ಅಲೆಯುತ್ತಿರುವಿರಿ?
35:4
وَإِنْ يُكَذِّبُوكَ فَقَدْ كُذِّبَتْ رُسُلٌ مِنْ قَبْلِكَ ۚ وَإِلَى اللَّهِ تُرْجَعُ الْأُمُورُ ۞
(ದೂತರೇ,) ಅವರು ನಿಮ್ಮನ್ನು ತಿರಸ್ಕರಿಸುತ್ತಿದ್ದರೆ (ನಿಮಗೆ ತಿಳಿದಿರಲಿ), ನಿಮಗಿಂತ ಹಿಂದಿನ ದೂತರುಗಳನ್ನೂ ತಿರಸ್ಕರಿಸಲಾಗಿತ್ತು. ಕೊನೆಗೆ, ಎಲ್ಲ ವಿಷಯಗಳೂ (ತೀರ್ಪಿಗಾಗಿ) ಅಲ್ಲಾಹನ ಬಳಿಗೇ ಮರಳಲಿವೆ.
35:5
يَا أَيُّهَا النَّاسُ إِنَّ وَعْدَ اللَّهِ حَقٌّ ۖ فَلَا تَغُرَّنَّكُمُ الْحَيَاةُ الدُّنْيَا ۖ وَلَا يَغُرَّنَّكُمْ بِاللَّهِ الْغَرُورُ ۞
ಮಾನವರೇ, ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯವಾಗಿದೆ. ಇನ್ನು, ಇಹಲೋಕದ ಬದುಕು ನಿಮ್ಮನ್ನು ಮೋಸಗೊಳಿಸದಿರಲಿ. ಹಾಗೆಯೇ, ವಂಚಿಸುವವನು ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ವಂಚಿಸದಿರಲಿ.
35:6
إِنَّ الشَّيْطَانَ لَكُمْ عَدُوٌّ فَاتَّخِذُوهُ عَدُوًّا ۚ إِنَّمَا يَدْعُو حِزْبَهُ لِيَكُونُوا مِنْ أَصْحَابِ السَّعِيرِ ۞
ಶೈತಾನನು ಖಂಡಿತ ನಿಮ್ಮ ಶತ್ರುವಾಗಿದ್ದಾನೆ. ಆದ್ದರಿಂದ ನೀವು ಅವನನ್ನು ಶತ್ರುವೆಂದೇ ಪರಿಗಣಿಸಿರಿ. ತನ್ನ ಪಂಗಡದವರೆಲ್ಲಾ ನರಕವಾಸಿಗಳಾಗಿ ಬಿಡಲೆಂದು ಅವನು ಅವರನ್ನು (ಅದರೆಡೆಗೆ) ಕರೆಯುತ್ತಲೇ ಇರುತ್ತಾನೆ.
35:7
الَّذِينَ كَفَرُوا لَهُمْ عَذَابٌ شَدِيدٌ ۖ وَالَّذِينَ آمَنُوا وَعَمِلُوا الصَّالِحَاتِ لَهُمْ مَغْفِرَةٌ وَأَجْرٌ كَبِيرٌ ۞
ಧಿಕ್ಕರಿಸಿದವರಿಗೆ ಕಠಿಣ ಶಿಕ್ಷೆ ಕಾದಿದೆ. ಇನ್ನು, ವಿಶ್ವಾಸಿಗಳಾಗಿದ್ದು, ಸತ್ಕರ್ಮಗಳನ್ನು ಮಾಡಿದವರಿಗೆ ಕ್ಷಮೆ ಹಾಗೂ ದೊಡ್ಡ ಪ್ರತಿಫಲವಿದೆ.
35:8
أَفَمَنْ زُيِّنَ لَهُ سُوءُ عَمَلِهِ فَرَآهُ حَسَنًا ۖ فَإِنَّ اللَّهَ يُضِلُّ مَنْ يَشَاءُ وَيَهْدِي مَنْ يَشَاءُ ۖ فَلَا تَذْهَبْ نَفْسُكَ عَلَيْهِمْ حَسَرَاتٍ ۚ إِنَّ اللَّهَ عَلِيمٌ بِمَا يَصْنَعُونَ ۞
ಯಾರಿಗೆ ತನ್ನ ದುಷ್ಟ ಕೆಲಸಗಳನ್ನು ಚಂದಗಾಣಿಸಿ ಬಿಡಲಾಗಿದೆಯೋ ಅವನು ಅವುಗಳನ್ನು ಸತ್ಕಾರ್ಯಗಳಾಗಿಯೇ ಕಾಣುತ್ತಾನೆ. ಖಂಡಿತವಾಗಿಯೂ ಅಲ್ಲಾಹನೇ ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಚಿಸಿದವರಿಗೆ ಸರಿದಾರಿಯನ್ನು ತೋರಿಸುತ್ತಾನೆ. ನೀವು ಅವರ (ಧಿಕ್ಕಾರಿಗಳ) ಕುರಿತು ನೊಂದುಕೊಳ್ಳಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು.
35:9
وَاللَّهُ الَّذِي أَرْسَلَ الرِّيَاحَ فَتُثِيرُ سَحَابًا فَسُقْنَاهُ إِلَىٰ بَلَدٍ مَيِّتٍ فَأَحْيَيْنَا بِهِ الْأَرْضَ بَعْدَ مَوْتِهَا ۚ كَذَٰلِكَ النُّشُورُ ۞
ಅಲ್ಲಾಹನೇ ಮಾರುತಗಳನ್ನು ಕಳಿಸುತ್ತಾನೆ. ಅವು ಮೋಡಗಳನ್ನು ಹೊತ್ತು ಸಾಗುತ್ತವೆ. ಆ ಬಳಿಕ ನಾವು ಅದನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಹಾಗೂ ಭೂಮಿಯನ್ನು ಅದರ ಮರಣಾನಂತರ ಮತ್ತೆ ಜೀವಂತಗೊಳಿಸುತ್ತೇವೆ ಹೀಗೆಯೇ ಇರುವುದು (ಮಾನವನ) ಪುನರುಜ್ಜೀವನ.
35:10
مَنْ كَانَ يُرِيدُ الْعِزَّةَ فَلِلَّهِ الْعِزَّةُ جَمِيعًا ۚ إِلَيْهِ يَصْعَدُ الْكَلِمُ الطَّيِّبُ وَالْعَمَلُ الصَّالِحُ يَرْفَعُهُ ۚ وَالَّذِينَ يَمْكُرُونَ السَّيِّئَاتِ لَهُمْ عَذَابٌ شَدِيدٌ ۖ وَمَكْرُ أُولَٰئِكَ هُوَ يَبُورُ ۞
ಗೌರವ ಬಯಸುವವನು (ತಿಳಿದಿರಲಿ), ಗೌರವವೆಲ್ಲವೂ ಅಲ್ಲಾಹನಿಗೇ ಸೇರಿದೆ. ಶುದ್ಧ ವಚನವು ಅವನೆಡೆಗೆ ಏರಿ ಹೋಗುತ್ತದೆ ಮತ್ತು ಸತ್ಕಾರ್ಯವು ಅದನ್ನು ಮೇಲೇರಿಸುತ್ತದೆ. ದುಷ್ಟ ಕೃತ್ಯಗಳಿಗಾಗಿ ಸಂಚು ಹೂಡುತ್ತಿರುವವರಿಗೆ ತೀವ್ರವಾದ ಶಿಕ್ಷೆ ಕಾದಿದೆ ಮತ್ತು ಅವರ ಸಂಚುಗಳೆಲ್ಲಾ ನಾಶವಾಗಲಿವೆ.
35:11
وَاللَّهُ خَلَقَكُمْ مِنْ تُرَابٍ ثُمَّ مِنْ نُطْفَةٍ ثُمَّ جَعَلَكُمْ أَزْوَاجًا ۚ وَمَا تَحْمِلُ مِنْ أُنْثَىٰ وَلَا تَضَعُ إِلَّا بِعِلْمِهِ ۚ وَمَا يُعَمَّرُ مِنْ مُعَمَّرٍ وَلَا يُنْقَصُ مِنْ عُمُرِهِ إِلَّا فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ ۞
ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಮತ್ತು ಆ ಬಳಿಕ ವೀರ್ಯದಿಂದ ಸೃಷ್ಟಿಸಿದನು ಮತ್ತು ನಿಮ್ಮನ್ನು (ಗಂಡು-ಹೆಣ್ಣೆಂಬ) ಜೊತೆಗಳಾಗಿ ಮಾಡಿದನು. ಅವನ ಅರಿವಿನಲ್ಲಿಲ್ಲದೆ ಯಾವ ಹೆಣ್ಣೂ ಗರ್ಭ ಧರಿಸುವುದಿಲ್ಲ, ಹೆರುವುದೂ ಇಲ್ಲ. ಒಬ್ಬ ವ್ಯಕ್ತಿಯ ವಯಸ್ಸಿನಲ್ಲಿ ಆಗುವ ಹೆಚ್ಚಳವಿರಲಿ, ಅವನ ವಯಸ್ಸಿನಲ್ಲಾಗುವ ಕಡಿತವಿರಲಿ, ಎಲ್ಲವೂ ಒಂದು ಗ್ರಂಥದಲ್ಲಿ ದಾಖಲಾಗಿದೆ. ಇದೆಲ್ಲವೂ ಅಲ್ಲಾಹನ ಪಾಲಿಗೆ ಖಂಡಿತ ಸುಲಭವಾಗಿದೆ.
35:12
وَمَا يَسْتَوِي الْبَحْرَانِ هَٰذَا عَذْبٌ فُرَاتٌ سَائِغٌ شَرَابُهُ وَهَٰذَا مِلْحٌ أُجَاجٌ ۖ وَمِنْ كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا ۖ وَتَرَى الْفُلْكَ فِيهِ مَوَاخِرَ لِتَبْتَغُوا مِنْ فَضْلِهِ وَلَعَلَّكُمْ تَشْكُرُونَ ۞
ಎರಡು ಕಡಲುಗಳು (ಎರಡು ಬಗೆಯ ಜಲ ಮೂಲಗಳು) ಒಂದೇ ತೆರನಾಗಿಲ್ಲ. ಒಂದು ಸಿಹಿಯಾಗಿದ್ದು ದಾಹ ತಣಿಸುವಂತಿದೆ ಮತ್ತು ಕುಡಿಯಲು ಹಿತಕರವಾಗಿದೆ. ಇನ್ನೊಂದು ಖಾರವಾಗಿ ಕಹಿಯಾಗಿದೆ. ಆದರೆ ನೀವು ಅವೆರಡರಿಂದಲೂ (ವಿವಿಧ ಮೀನುಗಳ) ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವ (ಮುತ್ತಿನ) ಆಭರಣಗಳನ್ನು ಅವುಗಳಿಂದ ಹೊರತೆಗೆಯುತ್ತೀರಿ. ಮತ್ತು ನೀವು ಅವನ (ಅಲ್ಲಾಹನ) ಅನುಗ್ರಹಗಳನ್ನು ಅರಸುತ್ತಾ ಕೃತಜ್ಞತೆ ಸಲ್ಲಿಸುತ್ತಿರಲಿಕ್ಕಾಗಿ, ಅದರಲ್ಲಿ ಹಡಗುಗಳು (ನೀರನ್ನು) ಸೀಳುತ್ತಾ ಸಾಗುವುದನ್ನು ನೀವು ಕಾಣುತ್ತೀರಿ.
35:13
يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي لِأَجَلٍ مُسَمًّى ۚ ذَٰلِكُمُ اللَّهُ رَبُّكُمْ لَهُ الْمُلْكُ ۚ وَالَّذِينَ تَدْعُونَ مِنْ دُونِهِ مَا يَمْلِكُونَ مِنْ قِطْمِيرٍ ۞
ಅವನೇ ಹಗಲಿನೊಳಗೆ ರಾತ್ರಿಯನ್ನು ಪೋಣಿಸುವವನು ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವವನು ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದವನು. ಎಲ್ಲವೂ ಒಂದು ನಿರ್ದಿಷ್ಟ ಅವಧಿಯ ತನಕ ಚಲಿಸುತ್ತಿರುತ್ತದೆ. ಆ ಅಲ್ಲಾಹನೇ ನಿಮ್ಮ ಒಡೆಯನು. ವಿಶ್ವ ಸಾಮ್ರಾಜ್ಯವು ಅವನಿಗೇ ಸೇರಿದೆ. ಅತ್ತ, ಅವನ ಹೊರತು ನೀವು ಪ್ರಾರ್ಥಿಸುವ ಬೇರೆ ಯಾರೂ ಒಂದು ಖರ್ಜೂರದ ಬೀಜದ ತೊನ್ನಿಗೂ ಮಾಲಕರಲ್ಲ.
35:14
إِنْ تَدْعُوهُمْ لَا يَسْمَعُوا دُعَاءَكُمْ وَلَوْ سَمِعُوا مَا اسْتَجَابُوا لَكُمْ ۖ وَيَوْمَ الْقِيَامَةِ يَكْفُرُونَ بِشِرْكِكُمْ ۚ وَلَا يُنَبِّئُكَ مِثْلُ خَبِيرٍ ۞
ನೀವು ಅವರಿಗೆ ಮೊರೆ ಇಟ್ಟರೆ ನಿಮ್ಮ ಮೊರೆ ಅವರಿಗೆ ಕೇಳಿಸುವುದಿಲ್ಲ. ಒಂದು ವೇಳೆ ಅವರು ಅದನ್ನು ಕೇಳಿಸಿಕೊಂಡರೂ ನಿಮಗೆ ಉತ್ತರ ನೀಡಲು ಅವರಿಗೆ ಸಾಧ್ಯವಿಲ್ಲ. ಮುಂದೆ, ಪುನರುತ್ಥಾನದ ದಿನ ಅವರು, ನೀವು ಅವರನ್ನು (ದೇವತ್ವದಲ್ಲಿ) ಪಾಲುದಾರರಾಗಿಸಿದ್ದ ವಿಷಯವನ್ನೇ ನಿರಾಕರಿಸಿಬಿಡುವರು. ಆ ಬಲ್ಲವನು (ಅಲ್ಲಾಹನು) ಎಚ್ಚರಿಸುವಂತೆ ನಿಮ್ಮನ್ನು ಎಚ್ಚರಿಸುವವನು ಬೇರಾರೂ ಇಲ್ಲ.
35:15
۞ يَا أَيُّهَا النَّاسُ أَنْتُمُ الْفُقَرَاءُ إِلَى اللَّهِ ۖ وَاللَّهُ هُوَ الْغَنِيُّ الْحَمِيدُ ۞
ಮಾನವರೇ, ನೀವು ಅಲ್ಲಾಹನ ನೆರವನ್ನು ಅವಲಂಬಿಸಿರುವಿರಿ. ಆದರೆ ಅಲ್ಲಾಹನು ಎಲ್ಲ ಅವಲಂಬನೆಗಳಿಂದ ಮುಕ್ತನಾಗಿದ್ದಾನೆ ಮತ್ತು ಹೊಗಳಿಕೆಗೆ ಅರ್ಹನಾಗಿದ್ದಾನೆ.
35:16
إِنْ يَشَأْ يُذْهِبْكُمْ وَيَأْتِ بِخَلْقٍ جَدِيدٍ ۞
ಅವನು ಬಯಸಿದರೆ, ನಿಮ್ಮನ್ನು ತೊಲಗಿಸಿ ಹೊಸತೊಂದು ಸೃಷ್ಟಿಯನ್ನು ತರಬಲ್ಲನು.
35:17
وَمَا ذَٰلِكَ عَلَى اللَّهِ بِعَزِيزٍ ۞
ಅಲ್ಲಾಹನ ಮಟ್ಟಿಗೆ ಅದು ಕಷ್ಟವೇನಲ್ಲ.
35:18
وَلَا تَزِرُ وَازِرَةٌ وِزْرَ أُخْرَىٰ ۚ وَإِنْ تَدْعُ مُثْقَلَةٌ إِلَىٰ حِمْلِهَا لَا يُحْمَلْ مِنْهُ شَيْءٌ وَلَوْ كَانَ ذَا قُرْبَىٰ ۗ إِنَّمَا تُنْذِرُ الَّذِينَ يَخْشَوْنَ رَبَّهُمْ بِالْغَيْبِ وَأَقَامُوا الصَّلَاةَ ۚ وَمَنْ تَزَكَّىٰ فَإِنَّمَا يَتَزَكَّىٰ لِنَفْسِهِ ۚ وَإِلَى اللَّهِ الْمَصِيرُ ۞
(ಪುನರುತ್ಥಾನ ದಿನ) ಯಾವ ಹೊರೆ ಹೊರುವಾತನೂ ಇನ್ನೊಬ್ಬರ ಹೊರೆಯನ್ನು ಹೊರಲಾರನು. (ಪಾಪಗಳ) ಹೊರೆ ಹೊತ್ತವನು, ತನ್ನ ಹೊರೆಯೆಡೆಗೆ (ಅದನ್ನು ಹಂಚಿಕೊಳ್ಳಲು) ಯಾರನ್ನಾದರೂ ಕರೆದರೆ, ಯಾರೂ ಅದರ ಸಣ್ಣ ಭಾಗವನ್ನೂ ಹೊರಲಾರರು - ಅವನು ಅವರ ಹತ್ತಿರದ ಬಂಧುವಾಗಿದ್ದರೂ ಸರಿಯೇ! ತಮ್ಮ ಒಡೆಯನನ್ನು ಕಾಣದೆಯೇ ಅವನಿಗೆ ಅಂಜುತ್ತಿರುವವರನ್ನು ಹಾಗೂ ನಮಾಝನ್ನು ಪಾಲಿಸುತ್ತಿರುವವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಶುದ್ಧನಾಗಿರುವವನು ಸ್ವತಃ ತನ್ನ ಹಿತಕ್ಕಾಗಿ ಶುದ್ಧನಾಗುತ್ತಾನೆ. ಅಂತಿಮವಾಗಿ (ಎಲ್ಲರೂ) ಅಲ್ಲಾಹನೆಡೆಗೇ ಮರಳ ಬೇಕಾಗಿದೆ.
35:19
وَمَا يَسْتَوِي الْأَعْمَىٰ وَالْبَصِيرُ ۞
ಕುರುಡನು ಮತ್ತು ಕಾಣುವವನು ಸಮಾನರಲ್ಲ.
35:20
وَلَا الظُّلُمَاتُ وَلَا النُّورُ ۞
ಕತ್ತಲುಗಳು ಮತ್ತು ಬೆಳಕು ಸಮಾನವಲ್ಲ.
35:21
وَلَا الظِّلُّ وَلَا الْحَرُورُ ۞
ನೆರಳು ಮತ್ತು ಸುಡು ಬಿಸಿಲು ಒಂದಲ್ಲ.
35:22
وَمَا يَسْتَوِي الْأَحْيَاءُ وَلَا الْأَمْوَاتُ ۚ إِنَّ اللَّهَ يُسْمِعُ مَنْ يَشَاءُ ۖ وَمَا أَنْتَ بِمُسْمِعٍ مَنْ فِي الْقُبُورِ ۞
ಜೀವಂತರು ಹಾಗೂ ಸತ್ತವರು ಸಮಾನರಲ್ಲ. ಅಲ್ಲಾಹನು ತಾನಿಚ್ಛಿಸಿದವರಿಗೆ ಖಂಡಿತ ಕೇಳಿಸಬಲ್ಲನು. ಆದರೆ ಗೋರಿಗಳಲ್ಲಿರುವವರಿಗೆ ಕೇಳಿಸಲು ನಿಮಗೆ ಸಾಧ್ಯವಾಗದು.
35:23
إِنْ أَنْتَ إِلَّا نَذِيرٌ ۞
ನೀವು ಎಚ್ಚರಿಸುವವರು ಮಾತ್ರ.
35:24
إِنَّا أَرْسَلْنَاكَ بِالْحَقِّ بَشِيرًا وَنَذِيرًا ۚ وَإِنْ مِنْ أُمَّةٍ إِلَّا خَلَا فِيهَا نَذِيرٌ ۞
(ದೂತರೇ,) ನಾವು ಖಂಡಿತ ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ, ಸತ್ಯದೊಂದಿಗೆ ಕಳಿಸಿರುವೆವು. ನಿಜವಾಗಿ, ಎಚ್ಚರಿಸುವವನೊಬ್ಬನು ಬಂದಿಲ್ಲದ ಯಾವ ಸಮುದಾಯವೂ ಇಲ್ಲ.
35:25
وَإِنْ يُكَذِّبُوكَ فَقَدْ كَذَّبَ الَّذِينَ مِنْ قَبْلِهِمْ جَاءَتْهُمْ رُسُلُهُمْ بِالْبَيِّنَاتِ وَبِالزُّبُرِ وَبِالْكِتَابِ الْمُنِيرِ ۞
(ದೂತರೇ) ಅವರು ನಿಮ್ಮನ್ನು ತಿರಸ್ಕರಿಸುತ್ತಾರೆಂದಾದರೆ, (ನಿಮಗೆ ತಿಳಿದಿರಲಿ), ಅವರ ಹಿಂದಿನವರೂ ತಿರಸ್ಕರಿಸಿದ್ದಾರೆ. ಅವರ (ಕಾಲದ) ದೂತರು, ಸ್ಪಷ್ಟ ಪುರಾವೆಗಳೊಂದಿಗೆ, ದಾಖಲೆಗಳೊಂದಿಗೆ ಹಾಗೂ ಉಜ್ವಲ ಗ್ರಂಥದೊಂದಿಗೆ ಅವರ ಬಳಿಗೆ ಬಂದಿದ್ದರು.
35:26
ثُمَّ أَخَذْتُ الَّذِينَ كَفَرُوا ۖ فَكَيْفَ كَانَ نَكِيرِ ۞
ಕೊನೆಗೆ ನಾನು ಧಿಕ್ಕಾರಿಗಳನ್ನು ದಂಡಿಸಿದೆನು. (ನೋಡಿರಿ) ನನ್ನ ಶಿಕ್ಷೆ ಹೇಗಿತ್ತೆಂದು.
35:27
أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَأَخْرَجْنَا بِهِ ثَمَرَاتٍ مُخْتَلِفًا أَلْوَانُهَا ۚ وَمِنَ الْجِبَالِ جُدَدٌ بِيضٌ وَحُمْرٌ مُخْتَلِفٌ أَلْوَانُهَا وَغَرَابِيبُ سُودٌ ۞
ನೀವು ನೋಡಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸುತ್ತಾನೆ. ಅದರ ಮೂಲಕ ನಾವು ವಿವಿಧ ಬಣ್ಣದ ಫಲಗಳನ್ನು ಬೆಳೆಸುತ್ತೇವೆ. ಅತ್ತ ಪರ್ವತಗಳಲ್ಲಿ ವಿವಿಧ ಘಟ್ಟಗಳಿವೆ. ಅವು ಬಿಳಿ, ಕೆಂಪು ಹಾಗೂ ವಿವಿಧ ಬಣ್ಣಗಳಲ್ಲಿರುತ್ತವೆ. ಕೆಲವು ಗಾಢವಾದ ಕಪ್ಪು ಬಣ್ಣದ್ದಾಗಿರುತ್ತವೆ.
35:28
وَمِنَ النَّاسِ وَالدَّوَابِّ وَالْأَنْعَامِ مُخْتَلِفٌ أَلْوَانُهُ كَذَٰلِكَ ۗ إِنَّمَا يَخْشَى اللَّهَ مِنْ عِبَادِهِ الْعُلَمَاءُ ۗ إِنَّ اللَّهَ عَزِيزٌ غَفُورٌ ۞
ಜನರಲ್ಲಿ, ವಿವಿಧ ಜಂತುಗಳಲ್ಲಿ ಮತ್ತು ಜಾನುವಾರುಗಳಲ್ಲಿ ಅನೇಕರ ಬಣ್ಣಗಳು ಭಿನ್ನವಾಗಿರುತ್ತವೆ. ದಾಸರ ಪೈಕಿ ಜ್ಞಾನವುಳ್ಳವರು ಮಾತ್ರ ಅಲ್ಲಾಹನಿಗೆ ಅಂಜುತ್ತಾರೆ. ಅಲ್ಲಾಹನು ಖಂಡಿತ, ಪ್ರಚಂಡನೂ ಕ್ಷಮಿಸುವವನೂ ಆಗಿದ್ದಾನೆ.
35:29
إِنَّ الَّذِينَ يَتْلُونَ كِتَابَ اللَّهِ وَأَقَامُوا الصَّلَاةَ وَأَنْفَقُوا مِمَّا رَزَقْنَاهُمْ سِرًّا وَعَلَانِيَةً يَرْجُونَ تِجَارَةً لَنْ تَبُورَ ۞
ಅಲ್ಲಾಹನ ಗ್ರಂಥವನ್ನು ಓದುವವರು, ನಮಾಝನ್ನು ಪಾಲಿಸುವವರು ಮತ್ತು ನಾವು ಅವರಿಗೆ ಏನನ್ನು ನೀಡಿರುವೆವೋ ಅದರಿಂದ ಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ಖರ್ಚು ಮಾಡುವವರು ಖಂಡಿತ, ನಷ್ಟವಿಲ್ಲದ ವ್ಯವಹಾರವೊಂದರ ನಿರೀಕ್ಷೆಯಲ್ಲಿದ್ದಾರೆ.
35:30
لِيُوَفِّيَهُمْ أُجُورَهُمْ وَيَزِيدَهُمْ مِنْ فَضْلِهِ ۚ إِنَّهُ غَفُورٌ شَكُورٌ ۞
ಅವನು (ಅಲ್ಲಾಹನು) ತಮಗೆ ತಮ್ಮ ಪ್ರತಿಫಲವನ್ನು ನೀಡುವನೆಂದು ಹಾಗೂ ಅವನು ತನ್ನ ಅನುಗ್ರಹದಿಂದ ಇನ್ನಷ್ಟು ಹೆಚ್ಚಿಸಿ ನೀಡುವನೆಂದು (ಅವರು ನಿರೀಕ್ಷಿಸುತ್ತಿದ್ದಾರೆ). ಅವನು ಖಂಡಿತ ಕ್ಷಮಿಸುವವನು ಮತ್ತು ಪುರಸ್ಕರಿಸುವವನಾಗಿದ್ದಾನೆ.
35:31
وَالَّذِي أَوْحَيْنَا إِلَيْكَ مِنَ الْكِتَابِ هُوَ الْحَقُّ مُصَدِّقًا لِمَا بَيْنَ يَدَيْهِ ۗ إِنَّ اللَّهَ بِعِبَادِهِ لَخَبِيرٌ بَصِيرٌ ۞
(ದೂತರೇ,) ನಾವು ನಿಮಗೆ ಇಳಿಸಿಕೊಟ್ಟಿರುವ ಗ್ರಂಥವೇ ಸತ್ಯವಾಗಿದೆ. ಅದು, ತನ್ನ ಮುಂದಿರುವುದನ್ನು (ಗತಕಾಲದ ಗ್ರಂಥಗಳನ್ನು) ಸಮರ್ಥಿಸುತ್ತದೆ. ಅಲ್ಲಾಹನು ಖಂಡಿತವಾಗಿಯೂ ತನ್ನ ದಾಸರ ಕುರಿತು ಅರಿವುಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ.
35:32
ثُمَّ أَوْرَثْنَا الْكِتَابَ الَّذِينَ اصْطَفَيْنَا مِنْ عِبَادِنَا ۖ فَمِنْهُمْ ظَالِمٌ لِنَفْسِهِ وَمِنْهُمْ مُقْتَصِدٌ وَمِنْهُمْ سَابِقٌ بِالْخَيْرَاتِ بِإِذْنِ اللَّهِ ۚ ذَٰلِكَ هُوَ الْفَضْلُ الْكَبِيرُ ۞
ಮುಂದೆ, ನಮ್ಮ ದಾಸರ ಪೈಕಿ ನಾವು ಆರಿಸಿದವರನ್ನು ನಾವು ಗ್ರಂಥದ ಉತ್ತರಾಧಿಕಾರಿಗಳಾಗಿಸಿದೆವು. ಇದೀಗ ಅವರಲ್ಲಿ ಕೆಲವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುವವರಾಗಿದ್ದಾರೆ. ಅವರಲ್ಲಿ ಮಧ್ಯಮ ನಿಲುವಿನವರೂ ಇದ್ದಾರೆ ಮತ್ತು ಅವರಲ್ಲಿ ಅಲ್ಲಾಹನ ಆದೇಶದಂತೆ ಸತ್ಕಾರ್ಯಗಳಲ್ಲಿ ಸ್ಪರ್ಧಿಸಿ ಮುನ್ನಡೆಯುವವರೂ ಇದ್ದಾರೆ. ಇದು (ಉತ್ತರಾಧಿಕಾರವು) ಮಹಾ ಔದಾರ್ಯವಾಗಿದೆ.
35:33
جَنَّاتُ عَدْنٍ يَدْخُلُونَهَا يُحَلَّوْنَ فِيهَا مِنْ أَسَاوِرَ مِنْ ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ ۞
ಅವರು ಶಾಶ್ವತವಾದ ತೋಟಗಳನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರ ಮತ್ತು ಮುತ್ತಿನ ಕಂಕಣಗಳನ್ನು ತೊಡಿಸಲಾಗುವುದು ಹಾಗೂ ಅಲ್ಲಿ ಅವರ ಉಡುಗೆಯು ರೇಶ್ಮೆಯದ್ದಾಗಿರುವುದು.
35:34
وَقَالُوا الْحَمْدُ لِلَّهِ الَّذِي أَذْهَبَ عَنَّا الْحَزَنَ ۖ إِنَّ رَبَّنَا لَغَفُورٌ شَكُورٌ ۞
ಅವರು ಹೇಳುವರು; ನಮ್ಮ ಸಂಕಟವನ್ನು ನಿವಾರಿಸಿದ ಅಲ್ಲಾಹನಿಗೆ ಪ್ರಶಂಸೆಗಳು ಸಲ್ಲಲಿ, ಖಂಡಿತವಾಗಿಯೂ ನಮ್ಮೊಡೆಯನು ಕ್ಷಮಿಸುವವನು ಹಾಗೂ ಪುರಸ್ಕರಿಸುವವನಾಗಿದ್ದಾನೆ.
35:35
الَّذِي أَحَلَّنَا دَارَ الْمُقَامَةِ مِنْ فَضْلِهِ لَا يَمَسُّنَا فِيهَا نَصَبٌ وَلَا يَمَسُّنَا فِيهَا لُغُوبٌ ۞
ಅವನೇ, ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತವಾದ ನಿವಾಸಗಳಲ್ಲಿ ನೆಲೆಸಿದವನು. ಇಲ್ಲಿ ಯಾವ ಸಂಕಟವೂ ನಮ್ಮನ್ನು ಬಾಧಿಸಲಾರದು ಮತ್ತು ಇಲ್ಲಿ ಯಾವ ದಣಿವೂ ನಮಗೆ ತಟ್ಟದು.
35:36
وَالَّذِينَ كَفَرُوا لَهُمْ نَارُ جَهَنَّمَ لَا يُقْضَىٰ عَلَيْهِمْ فَيَمُوتُوا وَلَا يُخَفَّفُ عَنْهُمْ مِنْ عَذَابِهَا ۚ كَذَٰلِكَ نَجْزِي كُلَّ كَفُورٍ ۞
ಅತ್ತ, ಧಿಕ್ಕಾರಿಗಳಿಗೆ ನರಕದ ಬೆಂಕಿ ಸಿಗಲಿದೆ. ಅಲ್ಲಿ ಅವರಿಗೆ ಸಾವನ್ನೂ ವಿಧಿಸಲಾಗದು ಮತ್ತು ಅವರ ಶಿಕ್ಷೆಯಲ್ಲಿ ಕಿಂಚಿತ್ ಕಡಿತವನ್ನೂ ಮಾಡಲಾಗದು. ಹೀಗಿರುವುದು, ಪ್ರತಿಯೊಬ್ಬ ಕೃತಘ್ನನಿಗೆ ನಾವು ನೀಡುವ ಪ್ರತಿಫಲ.
35:37
وَهُمْ يَصْطَرِخُونَ فِيهَا رَبَّنَا أَخْرِجْنَا نَعْمَلْ صَالِحًا غَيْرَ الَّذِي كُنَّا نَعْمَلُ ۚ أَوَلَمْ نُعَمِّرْكُمْ مَا يَتَذَكَّرُ فِيهِ مَنْ تَذَكَّرَ وَجَاءَكُمُ النَّذِيرُ ۖ فَذُوقُوا فَمَا لِلظَّالِمِينَ مِنْ نَصِيرٍ ۞
ಅವರು ಅದರೊಳಗೆ ಚೀತ್ಕರಿಸುವರು; ನಮ್ಮೊಡೆಯಾ! ನಮ್ಮನ್ನು (ಇಲ್ಲಿಂದ) ಹೊರತೆಗೆ. ನಾವು ಈ ಹಿಂದೆ ಮಾಡಿದ್ದ ಕರ್ಮಗಳಿಗಿಂತ ಭಿನ್ನವಾದ, ಸತ್ಕರ್ಮಗಳನ್ನು ಮಾಡುವೆವು. (ಅವರೊಡನೆ ಹೇಳಲಾಗುವುದು); ನಾವು ನಿಮಗೊಂದು ಆಯುಷ್ಯವನ್ನು ನೀಡಿರಲಿಲ್ಲವೇ? (ಅದರಲ್ಲಿ) ಉಪದೇಶ ಸ್ವೀಕರಿಸುವವನು ಉಪದೇಶ ಸ್ವೀಕರಿಸಬಹುದಿತ್ತು. ಮತ್ತು ಎಚ್ಚರಿಸುವವರೂ ನಿಮ್ಮ ಬಳಿಗೆ ಬಂದಿದ್ದರು. ಇದೀಗ ಸವಿಯಿರಿ, ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ.
35:38
إِنَّ اللَّهَ عَالِمُ غَيْبِ السَّمَاوَاتِ وَالْأَرْضِ ۚ إِنَّهُ عَلِيمٌ بِذَاتِ الصُّدُورِ ۞
ಅಲ್ಲಾಹನು, ಆಕಾಶಗಳ ಹಾಗೂ ಭೂಮಿಯ ಎಲ್ಲ ಗುಪ್ತ ವಿಷಯಗಳನ್ನೂ ಖಂಡಿತ ಬಲ್ಲನು. ಅವನಂತು ಮನಸ್ಸಿನೊಳಗಿನ ವಿಚಾರಗಳನ್ನೂ ಖಚಿತವಾಗಿ ಬಲ್ಲನು.
35:39
هُوَ الَّذِي جَعَلَكُمْ خَلَائِفَ فِي الْأَرْضِ ۚ فَمَنْ كَفَرَ فَعَلَيْهِ كُفْرُهُ ۖ وَلَا يَزِيدُ الْكَافِرِينَ كُفْرُهُمْ عِنْدَ رَبِّهِمْ إِلَّا مَقْتًا ۖ وَلَا يَزِيدُ الْكَافِرِينَ كُفْرُهُمْ إِلَّا خَسَارًا ۞
ಅವನೇ, ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ನೇಮಿಸಿದವನು. ಧಿಕ್ಕರಿಸಿದವನು ತನ್ನ ಧಿಕ್ಕಾರದ ಫಲವನ್ನು ತಾನೇ ಅನುಭವಿಸುವನು. ‘ಇನ್ನು, ಧಿಕ್ಕಾರಿಗಳ ಧಿಕ್ಕಾರವು’ ಅವರ ಒಡೆಯನ ಬಳಿ, ಅವನ ಕ್ರೋಧವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ. ಹಾಗೆಯೇ, ಧಿಕ್ಕಾರಿಗಳ ಧಿಕ್ಕಾರವು ನಷ್ಟವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ.
35:40
قُلْ أَرَأَيْتُمْ شُرَكَاءَكُمُ الَّذِينَ تَدْعُونَ مِنْ دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ أَمْ آتَيْنَاهُمْ كِتَابًا فَهُمْ عَلَىٰ بَيِّنَتٍ مِنْهُ ۚ بَلْ إِنْ يَعِدُ الظَّالِمُونَ بَعْضُهُمْ بَعْضًا إِلَّا غُرُورًا ۞
ಹೇಳಿರಿ; ಅಲ್ಲಾಹನನ್ನು ಬಿಟ್ಟು ನೀವು ಪ್ರಾರ್ಥಿಸುವ ಆ ನಿಮ್ಮ ಪಾಲುದಾರರನ್ನು ನೀವು ನೋಡಿದಿರಾ? ಅವರು ಭೂಮಿಯಲ್ಲಿನ ಏನನ್ನು ಸೃಷ್ಟಿಸಿದ್ದಾರೆ ಎಂಬುದನ್ನು ನನಗೆ ತೋರಿಸಿರಿ. ಅಥವಾ ಆಕಾಶಗಳಲ್ಲಿ ಅವರಿಗೇನಾದರೂ ಪಾಲಿದೆಯೇ? ಅವರು ಅಧಿಕೃತ ದಾರಿಯಲ್ಲಿದ್ದಾರೆನ್ನುವುದಕ್ಕೆ ಪುರಾವೆಯಾಗಿ ನಾವೇನು ಅವರಿಗೆ ಗ್ರಂಥವನ್ನು ನೀಡಿದ್ದೇವೆಯೇ? ನಿಜವಾಗಿ ಅಕ್ರಮಿಗಳು ಪರಸ್ಪರರಿಗೆ ನೀಡುವ ಆಶ್ವಾಸನೆಗಳೆಲ್ಲಾ ಕೇವಲ ಮೋಸಗಳಾಗಿರುತ್ತವೆ.
35:41
۞ إِنَّ اللَّهَ يُمْسِكُ السَّمَاوَاتِ وَالْأَرْضَ أَنْ تَزُولَا ۚ وَلَئِنْ زَالَتَا إِنْ أَمْسَكَهُمَا مِنْ أَحَدٍ مِنْ بَعْدِهِ ۚ إِنَّهُ كَانَ حَلِيمًا غَفُورًا ۞
ಖಂಡಿತ ಅಲ್ಲಾಹನೇ ಆಕಾಶಗಳನ್ನು ಹಾಗೂ ಭೂಮಿಯನ್ನು, ಅವು ಸರಿದು ಹೋಗದಂತೆ ನಿಯಂತ್ರಿಸಿಟ್ಟಿರುವನು. ಒಂದು ವೇಳೆ ಅವು ಸರಿದು ಬಿಟ್ಟರೆ ಆ ಬಳಿಕ ಅವುಗಳನ್ನು ನಿಯಂತ್ರಿಸಬಲ್ಲವರು ಯಾರೂ ಇಲ್ಲ. ಅವನು ಖಂಡಿತ ಅತ್ಯಂತ ಸಂಯಮಿ ಹಾಗೂ ಕ್ಷಮಾಶೀಲನಾಗಿದ್ದಾನೆ.
35:42
وَأَقْسَمُوا بِاللَّهِ جَهْدَ أَيْمَانِهِمْ لَئِنْ جَاءَهُمْ نَذِيرٌ لَيَكُونُنَّ أَهْدَىٰ مِنْ إِحْدَى الْأُمَمِ ۖ فَلَمَّا جَاءَهُمْ نَذِيرٌ مَا زَادَهُمْ إِلَّا نُفُورًا ۞
ಎಚ್ಚರಿಸುವ ದೂತರು ನಮ್ಮ ಬಳಿಗೆ ಬಂದರೆ, ನಾವು ಇತರೆಲ್ಲ ಸಮುದಾಯಗಳಿಗಿಂತ ಹೆಚ್ಚು ಸನ್ಮಾರ್ಗಿಗಳಾಗುವೆವು ಎಂದು ಅವರು ಅಲ್ಲಾಹನ ಹೆಸರಲ್ಲಿ ಭಾರೀ ಆಣೆಗಳನ್ನು ಹಾಕಿ ಹೇಳುತ್ತಿದ್ದರು. ಕೊನೆಗೆ, ಎಚ್ಚರಿಸುವ ದೂತರು ಅವರ ಬಳಿಗೆ ಬಂದಾಗ, ತೀವ್ರವಾಗಿ ಬಿಟ್ಟದ್ದು ಅವರ ಜಿಗುಪ್ಸೆ ಮಾತ್ರ.
35:43
اسْتِكْبَارًا فِي الْأَرْضِ وَمَكْرَ السَّيِّئِ ۚ وَلَا يَحِيقُ الْمَكْرُ السَّيِّئُ إِلَّا بِأَهْلِهِ ۚ فَهَلْ يَنْظُرُونَ إِلَّا سُنَّتَ الْأَوَّلِينَ ۚ فَلَنْ تَجِدَ لِسُنَّتِ اللَّهِ تَبْدِيلًا ۖ وَلَنْ تَجِدَ لِسُنَّتِ اللَّهِ تَحْوِيلًا ۞
(ಅವರು) ಭೂಮಿಯಲ್ಲಿ ಮೆರೆದ ಅಹಂಕಾರ ಹಾಗೂ (ಅವರ) ದುಷ್ಟಸಂಚುಗಳೇ ಅದಕ್ಕೆ ಕಾರಣವಾಗಿದ್ದವು. ದುಷ್ಟ ಸಂಚುಗಳು, ಅವುಗಳನ್ನು ರಚಿಸುವವರ ಪಾಲಿಗೇ ಘಾತಕವಾಗಿರುತ್ತವೆ. ಅವರು, ಕಾಯುತ್ತಿರುವುದು ಗತ ಕಾಲದವರಿಗೆ ಅನ್ವಯಿಸಲಾದ ಸಂಹಿತೆಗಾಗಿಯೇ ತಾನೇ? ಅಲ್ಲಾಹನ ಸಂಹಿತೆಯಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ. ಮತ್ತು ನೀವು ಅಲ್ಲಾಹನ ನಿಯಮದಲ್ಲಿ ಯಾವುದೇ ಪರಿವರ್ತನೆಯನ್ನು ಕಾಣಲಾರಿರಿ.
35:44
أَوَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ وَكَانُوا أَشَدَّ مِنْهُمْ قُوَّةً ۚ وَمَا كَانَ اللَّهُ لِيُعْجِزَهُ مِنْ شَيْءٍ فِي السَّمَاوَاتِ وَلَا فِي الْأَرْضِ ۚ إِنَّهُ كَانَ عَلِيمًا قَدِيرًا ۞
ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದು ಅವರಿಗೆ ಕಾಣುವಂತಾಗಲು ಅವರೇನು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಅವರಂತು ಇವರಿಗಿಂತ ತುಂಬಾ ಶಕ್ತಿಶಾಲಿಗಳಾಗಿದ್ದರು. ಆದರೆ ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಮಣಿಸಬಲ್ಲ ಯಾವ ವಸ್ತುವೂ ಇಲ್ಲ. ಖಂಡಿತವಾಗಿಯೂ ಅವನು ಎಲ್ಲವನ್ನೂ ಬಲ್ಲ ಸರ್ವಶಕ್ತನಾಗಿದ್ದಾನೆ.
35:45
وَلَوْ يُؤَاخِذُ اللَّهُ النَّاسَ بِمَا كَسَبُوا مَا تَرَكَ عَلَىٰ ظَهْرِهَا مِنْ دَابَّةٍ وَلَٰكِنْ يُؤَخِّرُهُمْ إِلَىٰ أَجَلٍ مُسَمًّى ۖ فَإِذَا جَاءَ أَجَلُهُمْ فَإِنَّ اللَّهَ كَانَ بِعِبَادِهِ بَصِيرًا ۞
ಒಂದು ವೇಳೆ ಅಲ್ಲಾಹನು ಮನುಷ್ಯರನ್ನು ಅವರ ಕೃತ್ಯಗಳಿಗಾಗಿ (ತಕ್ಷಣವೇ) ಶಿಕ್ಷಿಸುವುದಾಗಿದ್ದರೆ, ಅವನು ಇದರ (ಭೂಮಿಯ) ಮೇಲೆ ಒಬ್ಬ ಜೀವಿಯನ್ನೂ ಉಳಿಸುತ್ತಿರಲಿಲ್ಲ. ನಿಜವಾಗಿ ಅವನು ಅವರಿಗೆ ಒಂದು ನಿಗದಿತ ಸಮಯದ ತನಕ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಆ ನಿಗದಿತ ಸಮಯವು ಬಂದು ಬಿಟ್ಟಾಗ (ಶಿಕ್ಷೆ ಆರಂಭವಾಗುತ್ತದೆ). ಅಲ್ಲಾಹನು ಖಂಡಿತ ತನ್ನ ದಾಸರನ್ನು ನೋಡುತ್ತಿರುತ್ತಾನೆ.