Ash-Shu`ara' (The poets)
26. ಅಶ್ಶುಅರಾಅ್(ಕವಿಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
26:1
طسم ۞
ತ್ವಾ ಸೀನ್ ಮ್ಮೀಮ್.
26:2
تِلْكَ آيَاتُ الْكِتَابِ الْمُبِينِ ۞
ಇವು ಸುಷ್ಪಷ್ಟ ಗ್ರಂಥದ ವಚನಗಳು.
26:3
لَعَلَّكَ بَاخِعٌ نَفْسَكَ أَلَّا يَكُونُوا مُؤْمِنِينَ ۞
ಅವರು ನಂಬುತ್ತಿಲ್ಲ ಎಂಬ ಚಿಂತೆಯಲ್ಲಿ ನೀವು ನಿಮ್ಮನ್ನೇ ನಾಶ ಪಡಿಸುವಂತಿದೆ.
26:4
إِنْ نَشَأْ نُنَزِّلْ عَلَيْهِمْ مِنَ السَّمَاءِ آيَةً فَظَلَّتْ أَعْنَاقُهُمْ لَهَا خَاضِعِينَ ۞
ನಾವು ಬಯಸಿದರೆ, ಅವರಿಗಾಗಿ ಆಕಾಶದಿಂದ ಒಂದು ಪುರಾವೆಯನ್ನು ಇಳಿಸಿ ಅದರ ಮುಂದೆ ಅವರ ಕೊರಳುಗಳು ಬಾಗುವಂತೆ ಮಾಡಬಹುದು.
26:5
وَمَا يَأْتِيهِمْ مِنْ ذِكْرٍ مِنَ الرَّحْمَٰنِ مُحْدَثٍ إِلَّا كَانُوا عَنْهُ مُعْرِضِينَ ۞
ಅವರು, ಆ ಪರಮ ದಯಾಳುವಿನ ಕಡೆಯಿಂದ ತಮ್ಮ ಬಳಿಗೆ ಬಂದ ಪ್ರತಿಯೊಂದು ಉಪದೇಶವನ್ನೂ ಸಂಪೂರ್ಣ ಕಡೆಗಣಿಸುತ್ತಾರೆ.
26:6
فَقَدْ كَذَّبُوا فَسَيَأْتِيهِمْ أَنْبَاءُ مَا كَانُوا بِهِ يَسْتَهْزِئُونَ ۞
ಹೀಗೆ ಅವರು (ಸತ್ಯವನ್ನು) ಸುಳ್ಳೆಂದು ತಿರಸ್ಕರಿಸಿ ಬಿಟ್ಟಿದ್ದಾರೆ. ಅವರು ಗೇಲಿ ಮಾಡುತ್ತಿದ್ದ ವಾಸ್ತವವು (ಶಿಕ್ಷೆಯು) ಬಹು ಬೇಗನೇ ಅವರ ಬಳಿಗೆ ಬಂದು ಬಿಡುವುದು.
26:7
أَوَلَمْ يَرَوْا إِلَى الْأَرْضِ كَمْ أَنْبَتْنَا فِيهَا مِنْ كُلِّ زَوْجٍ كَرِيمٍ ۞
ಅವರೇನು, ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರೊಳಗೆ ಎಷ್ಟೊಂದು ಬಗೆಯ ಶ್ರೇಷ್ಠ ಸಸ್ಯವರ್ಗಗಳನ್ನು ಬೆಳೆಸಿರುವೆವು!
26:8
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಇದರಲ್ಲಿ ಖಂಡಿತ ಪುರಾವೆ ಇದೆ. ಆದರೆ ಅವರಲ್ಲಿ ಹೆಚ್ಚಿನವರು ನಂಬುವವರಲ್ಲ.
26:9
وَإِنَّ رَبَّكَ لَهُوَ الْعَزِيزُ الرَّحِيمُ ۞
ನಿಮ್ಮ ಒಡೆಯನು ಖಂಡಿತ ಪ್ರಬಲನೂ ಕರುಣಾಳುವೂ ಆಗಿದ್ದಾನೆ.
26:10
وَإِذْ نَادَىٰ رَبُّكَ مُوسَىٰ أَنِ ائْتِ الْقَوْمَ الظَّالِمِينَ ۞
ನಿಮ್ಮ ಒಡೆಯನು ಮೂಸಾರನ್ನು ಕರೆದು ಹೇಳಿದನು; ಅಕ್ರಮಿ ಜನಾಂಗದ ಬಳಿಗೆ ಹೋಗಿರಿ.
26:11
قَوْمَ فِرْعَوْنَ ۚ أَلَا يَتَّقُونَ ۞
ಫಿರ್‌ಔನನ ಜನಾಂಗದ ಬಳಿಗೆ. ಅವರೇನು ಅಂಜುವುದಿಲ್ಲವೇ?
26:12
قَالَ رَبِّ إِنِّي أَخَافُ أَنْ يُكَذِّبُونِ ۞
ಅವರು (ಮೂಸಾ) ಹೇಳಿದರು; ನನ್ನೊಡೆಯಾ, ಅವರು ನನ್ನನ್ನು ತಿರಸ್ಕರಿಸುವರೆಂಬ ಭಯ ನನಗಿದೆ.
26:13
وَيَضِيقُ صَدْرِي وَلَا يَنْطَلِقُ لِسَانِي فَأَرْسِلْ إِلَىٰ هَارُونَ ۞
ನನ್ನ ಮನಸ್ಸು ಕುಗ್ಗುತ್ತಿದೆ. ನನ್ನ ನಾಲಿಗೆ ಚಲಿಸುತ್ತಿಲ್ಲ. ನೀನು (ಈ ಹೊಣೆಯನ್ನು) ಹಾರೂನರೆಡೆಗೆ ಕಳಿಸು.
26:14
وَلَهُمْ عَلَيَّ ذَنْبٌ فَأَخَافُ أَنْ يَقْتُلُونِ ۞
ಅವರ ಬಳಿ ನನ್ನ ವಿರುದ್ಧ ಒಂದು ಆರೋಪವಿದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂಬ ಆತಂಕ ನನಗಿದೆ.
26:15
قَالَ كَلَّا ۖ فَاذْهَبَا بِآيَاتِنَا ۖ إِنَّا مَعَكُمْ مُسْتَمِعُونَ ۞
ಅವನು (ಅಲ್ಲಾಹನು) ಹೇಳಿದನು; ಖಂಡಿತ ಹಾಗಾಗದು. ಇದೀಗ ನೀವಿಬ್ಬರೂ ನಮ್ಮ ಪುರಾವೆಗಳೊಂದಿಗೆ ಹೋಗಿರಿ. ನಾವು ಎಲ್ಲವನ್ನೂ ಕೇಳುವವರಾಗಿ ನಿಮ್ಮ ಜೊತೆಗೇ ಇರುವೆವು.
26:16
فَأْتِيَا فِرْعَوْنَ فَقُولَا إِنَّا رَسُولُ رَبِّ الْعَالَمِينَ ۞
ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿ ಹೇಳಿರಿ; ನಾವು ಎಲ್ಲ ಜಗತ್ತುಗಳ ಒಡೆಯನ ದೂತರು.
26:17
أَنْ أَرْسِلْ مَعَنَا بَنِي إِسْرَائِيلَ ۞
ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿ ಬಿಡು.
26:18
قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ ۞
ಅವನು (ಫಿರ್‌ಔನ್) ಹೇಳಿದನು; ನಾವು ನಿನ್ನ ಬಾಲ್ಯದಲ್ಲಿ ನಿನ್ನನ್ನು ನಮ್ಮ ನಡುವೆ ಪೋಷಿಸಿರಲಿಲ್ಲವೇ ಮತ್ತು ನಿನ್ನ ಬದುಕಿನ ಹಲವು ವರ್ಷಗಳನ್ನು ನೀನು ನಮ್ಮ ಜೊತೆಗೆ ಕಳೆದಿರಲಿಲ್ಲವೇ?
26:19
وَفَعَلْتَ فَعْلَتَكَ الَّتِي فَعَلْتَ وَأَنْتَ مِنَ الْكَافِرِينَ ۞
ಆದರೂ ನೀನು ಆ ನಿನ್ನ ಕೃತ್ಯವನ್ನು ಮಾಡಿಬಿಟ್ಟೆ. ನೀನು ಖಂಡಿತ ಕೃತಘ್ನನು.
26:20
قَالَ فَعَلْتُهَا إِذًا وَأَنَا مِنَ الضَّالِّينَ ۞
ಅವರು (ಮೂಸಾ) ಹೇಳಿದರು; ನಾನು ಅಜ್ಞಾನದ ಸ್ಥಿತಿಯಲ್ಲಿ ಆ ಕೃತ್ಯವನ್ನು ಎಸಗಿದ್ದೆ.
26:21
فَفَرَرْتُ مِنْكُمْ لَمَّا خِفْتُكُمْ فَوَهَبَ لِي رَبِّي حُكْمًا وَجَعَلَنِي مِنَ الْمُرْسَلِينَ ۞
ಆ ಬಳಿಕ ನಾನು ನಿಮಗೆ ಅಂಜಿ ನಿಮ್ಮ ಬಳಿಯಿಂದ ಓಡಿ ಹೋದೆ. ಆ ಬಳಿಕ ನನ್ನ ಒಡೆಯನು ನನಗೆ ಹೊಣೆಗಾರಿಕೆಯನ್ನು ನೀಡಿದನು ಮತ್ತು ನನ್ನನ್ನು ದೂತನಾಗಿ ನೇಮಿಸಿದನು.
26:22
وَتِلْكَ نِعْمَةٌ تَمُنُّهَا عَلَيَّ أَنْ عَبَّدْتَ بَنِي إِسْرَائِيلَ ۞
ಇನ್ನು, ನೀನು ನನ್ನ ಮೇಲೆ ಋಣ ಹೊರಿಸುವ ಆ ಉಪಕಾರಗಳು. ನಿಜವಾಗಿ, ನೀನು ಇಸ್ರಾಈಲರ ಸಂತತಿಯನ್ನು ದಾಸ್ಯಕ್ಕೆ ಒಳಪಡಿಸಿರುವೆ.
26:23
قَالَ فِرْعَوْنُ وَمَا رَبُّ الْعَالَمِينَ ۞
ಫಿರ್‌ಔನನು ಕೇಳಿದನು; ಎಲ್ಲ ಲೋಕಗಳ ಒಡೆಯ ಅಂದರೆ ಏನದು?
26:24
قَالَ رَبُّ السَّمَاوَاتِ وَالْأَرْضِ وَمَا بَيْنَهُمَا ۖ إِنْ كُنْتُمْ مُوقِنِينَ ۞
ಅವರು (ಮೂಸಾ) ಹೇಳಿದರು; ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ನಂಬುವವರಾಗಿದ್ದರೆ (ಚೆನ್ನಾಗಿತ್ತು).
26:25
قَالَ لِمَنْ حَوْلَهُ أَلَا تَسْتَمِعُونَ ۞
ಅವನು (ಫಿರ್‌ಔನ್) ತನ್ನ ಅಕ್ಕಪಕ್ಕದವರೊಡನೆ ಕೇಳಿದನು; ನೀವು ಕೇಳುತ್ತಿಲ್ಲವೇ?
26:26
قَالَ رَبُّكُمْ وَرَبُّ آبَائِكُمُ الْأَوَّلِينَ ۞
ಅವರು (ಮೂಸಾ) ಹೇಳಿದರು; ಅವನು ನಿಮ್ಮ ಒಡೆಯನೂ ಹೌದು, ನಿಮ್ಮ ಹಿಂದಿನ ನಿಮ್ಮ ತಾತ ಮುತ್ತಾತಂದಿರ ಒಡೆಯನೂ ಹೌದು.
26:27
قَالَ إِنَّ رَسُولَكُمُ الَّذِي أُرْسِلَ إِلَيْكُمْ لَمَجْنُونٌ ۞
ಅವನು (ಫಿರ್‌ಔನ್) ಹೇಳಿದನು; ನಿಮ್ಮ ಕಡೆಗೆ ಕಳಿಸಲಾಗಿರುವ ಈ ನಿಮ್ಮ ದೇವದೂತನು ಹುಚ್ಚನೇ ಸರಿ.
26:28
قَالَ رَبُّ الْمَشْرِقِ وَالْمَغْرِبِ وَمَا بَيْنَهُمَا ۖ إِنْ كُنْتُمْ تَعْقِلُونَ ۞
ಅವರು (ಮೂಸಾ) ಹೇಳಿದರು; ಅವನು ಪೂರ್ವದ ಹಾಗೂ ಪಶ್ಚಿಮದ ಹಾಗೂ ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ಬುದ್ಧಿ ಉಳ್ಳವರಾಗಿದ್ದರೆ (ಚೆನ್ನಾಗಿತ್ತು).
26:29
قَالَ لَئِنِ اتَّخَذْتَ إِلَٰهًا غَيْرِي لَأَجْعَلَنَّكَ مِنَ الْمَسْجُونِينَ ۞
ಅವನು (ಫಿರ್‌ಔನ್) ಹೇಳಿದನು; ನೀನು ನನ್ನ ಹೊರತು ಬೇರೆ ಯಾರನ್ನಾದರೂ ದೇವರಾಗಿಸಿಕೊಂಡರೆ ನಾನು ಖಂಡಿತ ನಿನ್ನನ್ನು ಕೈದಿಗಳ ಸಾಲಿಗೆ ಸೇರಿಸುವೆನು.
26:30
قَالَ أَوَلَوْ جِئْتُكَ بِشَيْءٍ مُبِينٍ ۞
ಅವರು (ಮೂಸಾ) ಹೇಳಿದರು; ನಾನು ನಿನ್ನ ಬಳಿಗೆ ಒಂದು ಸ್ಪಷ್ಟ ಪುರಾವೆಯನ್ನು ತಂದರೂ (ಹಾಗೆ ಮಾಡುವೆಯಾ)?
26:31
قَالَ فَأْتِ بِهِ إِنْ كُنْتَ مِنَ الصَّادِقِينَ ۞
ಅವನು (ಫಿರ್‌ಔನ್) ಹೇಳಿದನು; ನೀನು ಸತ್ಯವಂತನಾಗಿದ್ದರೆ ಅದನ್ನು ತಂದು ಬಿಡು.
26:32
فَأَلْقَىٰ عَصَاهُ فَإِذَا هِيَ ثُعْبَانٌ مُبِينٌ ۞
ಆಗ ಅವರು (ಮೂಸಾ) ತಮ್ಮ ಊರುಗೋಲನ್ನು ಕೆಳಕ್ಕೆ ಎಸೆದು ಬಿಟ್ಟರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಿನ ರೂಪ ತಾಳಿತು.
26:33
وَنَزَعَ يَدَهُ فَإِذَا هِيَ بَيْضَاءُ لِلنَّاظِرِينَ ۞
ಮತ್ತು ಅವರು ತಮ್ಮ ಕೈಯನ್ನು ಹೊರ ತೆಗೆದಾಗ, ನೆೋಡುವವರ ಮುಂದೆ ಅದು ಉಜ್ವಲವಾಗಿ ಹೊಳೆಯುತ್ತಿತ್ತು.
26:34
قَالَ لِلْمَلَإِ حَوْلَهُ إِنَّ هَٰذَا لَسَاحِرٌ عَلِيمٌ ۞
ಅವನು (ಫಿರ್‌ಔನ್) ತನ್ನ ಅಕ್ಕ ಪಕ್ಕ ಇದ್ದ ಸರದಾರರೊಡನೆ ಹೇಳಿದನು; ಅವನು ಖಂಡಿತ ಒಬ್ಬ ತಜ್ಞ ಮಾಂತ್ರಿಕನು.
26:35
يُرِيدُ أَنْ يُخْرِجَكُمْ مِنْ أَرْضِكُمْ بِسِحْرِهِ فَمَاذَا تَأْمُرُونَ ۞
ಅವನು ತನ್ನ ಜಾದುವಿನ ಮೂಲಕ ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ನೀವೇನು ಸೂಚಿಸುತ್ತೀರಿ?
26:36
قَالُوا أَرْجِهْ وَأَخَاهُ وَابْعَثْ فِي الْمَدَائِنِ حَاشِرِينَ ۞
ಅವರು (ಆಸ್ಥಾನಿಗರು ) ಹೇಳಿದರು; ಅವನಿಗೆ ಹಾಗೂ ಅವನ ಸಹೋದರನಿಗೆ ಕಾಲಾವಕಾಶ ಕೊಡಿರಿ ಮತ್ತು ಜನರನ್ನು ಒಟ್ಟು ಸೇರಿಸುವವರನ್ನು ವಿವಿಧ ನಗರಗಳಿಗೆ ರವಾನಿಸಿರಿ.
26:37
يَأْتُوكَ بِكُلِّ سَحَّارٍ عَلِيمٍ ۞
ಅವರು, ಎಲ್ಲ ಪರಿಣತ ಜಾದೂಗಾರರನ್ನು ನಿಮ್ಮ ಬಳಿಗೆ ತರಲಿ.
26:38
فَجُمِعَ السَّحَرَةُ لِمِيقَاتِ يَوْمٍ مَعْلُومٍ ۞
ಹೀಗೆ, ಒಂದು ನಿಶ್ಚಿತ ದಿನ, ನಿರ್ದಿಷ್ಟ ಸಮಯದಲ್ಲಿ ಜಾದೂಗಾರರೆಲ್ಲಾ ಒಟ್ಟು ಸೇರಿದರು.
26:39
وَقِيلَ لِلنَّاسِ هَلْ أَنْتُمْ مُجْتَمِعُونَ ۞
ಜನರೊಡನೆ ಹೇಳಲಾಯಿತು; ನೀವು ಒಟ್ಟು ಸೇರಿರುವಿರಾ?
26:40
لَعَلَّنَا نَتَّبِعُ السَّحَرَةَ إِنْ كَانُوا هُمُ الْغَالِبِينَ ۞
ಜಾದೂಗಾರರು ವಿಜಯಿಗಳಾದರೆ ನಾವೆಲ್ಲಾ ಅವರನ್ನೇ ಅನುಸರಿಸೋಣ.
26:41
فَلَمَّا جَاءَ السَّحَرَةُ قَالُوا لِفِرْعَوْنَ أَئِنَّ لَنَا لَأَجْرًا إِنْ كُنَّا نَحْنُ الْغَالِبِينَ ۞
ಜಾದೂಗಾರರೆಲ್ಲಾ ಬಂದು ಸೇರಿದಾಗ ಅವರು ಫಿರ್‌ಔನನೊಡನೆ ಕೇಳಿದರು; ನಾವು ಗೆದ್ದರೆ ನಮಗೆ ಬಹುಮಾನವೇನಾದರೂ ಸಿಕ್ಕೀತೇ?
26:42
قَالَ نَعَمْ وَإِنَّكُمْ إِذًا لَمِنَ الْمُقَرَّبِينَ ۞
ಅವನು (ಫಿರ್‌ಔನ್) ಹೇಳಿದನು; ಹೌದು, ಆಗ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ.
26:43
قَالَ لَهُمْ مُوسَىٰ أَلْقُوا مَا أَنْتُمْ مُلْقُونَ ۞
ಅವರೊಡನೆ (ಜಾದೂಗಾರರೊಡನೆ) ಮೂಸಾ, ‘‘ನೀವು ಎಸೆಯ ಬಯಸುವುದನ್ನು ಎಸೆದು ಬಿಡಿರಿ’’ ಎಂದರು.
26:44
فَأَلْقَوْا حِبَالَهُمْ وَعِصِيَّهُمْ وَقَالُوا بِعِزَّةِ فِرْعَوْنَ إِنَّا لَنَحْنُ الْغَالِبُونَ ۞
ಅವರು, ತಮ್ಮ ಹಗ್ಗಗಳನ್ನೂ ದಂಡಗಳನ್ನೂ ಎಸೆದರು ಮತ್ತು ‘‘ಫಿರ್‌ಔನನ ಗೌರವದಾಣೆ! ನಾವು ಖಂಡಿತ ಗೆಲ್ಲುವೆವು’’ ಎಂದರು.
26:45
فَأَلْقَىٰ مُوسَىٰ عَصَاهُ فَإِذَا هِيَ تَلْقَفُ مَا يَأْفِكُونَ ۞
ಕೊನೆಗೆ ಮೂಸಾ ತಮ್ಮ ಊರುಗೋಲನ್ನು ಎಸೆದರು. ಅದು ಅವರ (ಜಾದೂಗಾರರ) ಎಲ್ಲ ಕೃತಕ ಸೃಷ್ಟಿಗಳನ್ನು ನುಂಗತೊಡಗಿತು.
26:46
فَأُلْقِيَ السَّحَرَةُ سَاجِدِينَ ۞
ಅಷ್ಟರಲ್ಲೇ ಜಾದೂಗಾರರೆಲ್ಲಾ ಸಾಷ್ಟಾಂಗವೆರಗಿಬಿಟ್ಟರು.
26:47
قَالُوا آمَنَّا بِرَبِّ الْعَالَمِينَ ۞
ಅವರು ಹೇಳಿದರು; ನಾವು ನಂಬಿದೆವು, ಸರ್ವಲೋಕಗಳ ಒಡೆಯನನ್ನು,
26:48
رَبِّ مُوسَىٰ وَهَارُونَ ۞
ಮೂಸಾ ಮತ್ತು ಹಾರೂನರ ಒಡೆಯನನ್ನು.
26:49
قَالَ آمَنْتُمْ لَهُ قَبْلَ أَنْ آذَنَ لَكُمْ ۖ إِنَّهُ لَكَبِيرُكُمُ الَّذِي عَلَّمَكُمُ السِّحْرَ فَلَسَوْفَ تَعْلَمُونَ ۚ لَأُقَطِّعَنَّ أَيْدِيَكُمْ وَأَرْجُلَكُمْ مِنْ خِلَافٍ وَلَأُصَلِّبَنَّكُمْ أَجْمَعِينَ ۞
ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ಅವನನ್ನು ನಂಬಿ ಬಿಟ್ಟಿರಿ. ಅವನೇ (ಮೂಸಾ) ನಿಮಗೆ ಜಾದೂ ಕಲಿಸಿದ ನಿಮ್ಮ ಮಹಾ ನಾಯಕನಾಗಿರಬೇಕು. ನಿಮಗೆ ಬಹುಬೇಗನೇ ತಿಳಿಯಲಿದೆ. ನಾನು ಖಂಡಿತ ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆಗೇರಿಸಿ ಬಿಡುವೆನು.
26:50
قَالُوا لَا ضَيْرَ ۖ إِنَّا إِلَىٰ رَبِّنَا مُنْقَلِبُونَ ۞
ಅವರು ಹೇಳಿದರು; ಪರವಾಗಿಲ್ಲ. ನಾವಂತು ನಮ್ಮ ಒಡೆಯನ ಕಡೆಗೆ ಮರಳಿ ಹೋಗುವವರು.
26:51
إِنَّا نَطْمَعُ أَنْ يَغْفِرَ لَنَا رَبُّنَا خَطَايَانَا أَنْ كُنَّا أَوَّلَ الْمُؤْمِنِينَ ۞
ನಾವು, (ಸತ್ಯವನ್ನು) ನಂಬಿದವರಲ್ಲಿ ಮೊದಲಿಗರಾದ್ದರಿಂದ ನಮ್ಮೊಡೆಯನು ನಮ್ಮ ತಪ್ಪುಗಳನ್ನೆಲ್ಲಾ ಖಂಡಿತ ಕ್ಷಮಿಸಿ ಬಿಡುವನೆಂದು ನಿರೀಕ್ಷಿಸುತ್ತೇವೆ.
26:52
۞ وَأَوْحَيْنَا إِلَىٰ مُوسَىٰ أَنْ أَسْرِ بِعِبَادِي إِنَّكُمْ مُتَّبَعُونَ ۞
ಮತ್ತು (ಮುಂದೆ) ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನನ್ನ ದಾಸರೊಂದಿಗೆ ಹೊರಟು ಬಿಡಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು.
26:53
فَأَرْسَلَ فِرْعَوْنُ فِي الْمَدَائِنِ حَاشِرِينَ ۞
ಫಿರ್‌ಔನನು (ಈ ಸಂದೇಶದೊಂದಿಗೆ) ಎಲ್ಲ ನಗರಗಳಿಗೆ ಸುದ್ದಿಗಾರರನ್ನು ರವಾನಿಸಿದನು;
26:54
إِنَّ هَٰؤُلَاءِ لَشِرْذِمَةٌ قَلِيلُونَ ۞
‘‘ಅವರು (ಇಸ್ರಾಈಲರ ಸಂತತಿ) ಕೇವಲ ಒಂದು ಸಣ್ಣ ಪಂಗಡ ಮಾತ್ರವಾಗಿದ್ದಾರೆ.
26:55
وَإِنَّهُمْ لَنَا لَغَائِظُونَ ۞
ಅವರು ನಮ್ಮನ್ನು ಬಹಳಷ್ಟು ಕೆರಳಿಸಿದ್ದಾರೆ.
26:56
وَإِنَّا لَجَمِيعٌ حَاذِرُونَ ۞
ನಾವು ಒಂದು ಜಾಗೃತ ಪಡೆಯಾಗಿದ್ದೇವೆ.’’
26:57
فَأَخْرَجْنَاهُمْ مِنْ جَنَّاتٍ وَعُيُونٍ ۞
ಕೊನೆಗೆ ನಾವು ಅವರನ್ನು ಹೊರಗಟ್ಟಿಬಿಟ್ಟೆವು, ತೋಟಗಳಿಂದ ಹಾಗೂ ಝರಿಗಳಿಂದ.
26:58
وَكُنُوزٍ وَمَقَامٍ كَرِيمٍ ۞
ಬೊಕ್ಕಸಗಳಿಂದ ಹಾಗೂ ಪ್ರತಿಷ್ಠಿತ ಭವನಗಳಿಂದ.
26:59
كَذَٰلِكَ وَأَوْرَثْنَاهَا بَنِي إِسْرَائِيلَ ۞
ಈ ರೀತಿ, ನಾವು ಇಸ್ರಾಈಲರ ಸಂತತಿಯನ್ನು ಅವರ ಉತ್ತರಾಧಿಕಾರಿಗಳಾಗಿಸಿದೆವು.
26:60
فَأَتْبَعُوهُمْ مُشْرِقِينَ ۞
ಸೂರ್ಯೋದಯದ ಹೊತ್ತಿಗೆ ಅವರು (ಫಿರ್‌ಔನನ ಪಡೆಗಳು) ಅವರನ್ನು (ಮೂಸಾರನ್ನು) ಹಿಂಬಾಲಿಸಿದರು.
26:61
فَلَمَّا تَرَاءَى الْجَمْعَانِ قَالَ أَصْحَابُ مُوسَىٰ إِنَّا لَمُدْرَكُونَ ۞
ಎರಡೂ ತಂಡಗಳು ಪರಸ್ಪರರನ್ನು ಕಂಡಾಗ ಮೂಸಾರ ಜೊತೆಗಾರರು ಹೇಳಿದರು; ನಾವು ಸಿಕ್ಕಿ ಬಿದ್ದೆವು.
26:62
قَالَ كَلَّا ۖ إِنَّ مَعِيَ رَبِّي سَيَهْدِينِ ۞
ಅವರು (ಮೂಸಾ) ಹೇಳಿದರು; ಖಂಡಿತ ಇಲ್ಲ. ನನ್ನ ಜೊತೆ ನನ್ನ ಒಡೆಯನಿದ್ದಾನೆ. ಅವನು ಖಂಡಿತ ನನಗೆ ದಾರಿ ತೋರುತ್ತಾನೆ.
26:63
فَأَوْحَيْنَا إِلَىٰ مُوسَىٰ أَنِ اضْرِبْ بِعَصَاكَ الْبَحْرَ ۖ فَانْفَلَقَ فَكَانَ كُلُّ فِرْقٍ كَالطَّوْدِ الْعَظِيمِ ۞
ನಾವು ಮೂಸಾರಿಗೆ, ‘‘ನಿಮ್ಮ ಊರುಗೋಲಿನಿಂದ ಕಡಲಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳಿಸಿದೆವು. (ಅವರು ಹೊಡೆದಾಗ,) ಅದು (ಸಮುದ್ರವು) ಇಬ್ಭಾಗವಾಗಿ ಬಿಟ್ಟಿತು ಮತ್ತು ಪ್ರತಿಯೊಂದು ಭಾಗವೂ ಒಂದು ಬೃಹತ್ ಪರ್ವತದಂತಿತ್ತು.
26:64
وَأَزْلَفْنَا ثَمَّ الْآخَرِينَ ۞
ಮತ್ತು ನಾವು ಇನ್ನೊಂದು ಗುಂಪನ್ನು (ಫಿರ್‌ಔನನ ಪಡೆಯನ್ನು) ಅದರ ಬಳಿಗೆ ತಂದೆವು.
26:65
وَأَنْجَيْنَا مُوسَىٰ وَمَنْ مَعَهُ أَجْمَعِينَ ۞
ಕೊನೆಗೆ ನಾವು ಮೂಸಾರನ್ನು ಹಾಗೂ ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು.
26:66
ثُمَّ أَغْرَقْنَا الْآخَرِينَ ۞
ಮತ್ತು ಇನ್ನೊಂದು ಗುಂಪನ್ನು ನಾವು ಮುಳುಗಿಸಿ ಬಿಟ್ಟೆವು.
26:67
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.
26:68
وَإِنَّ رَبَّكَ لَهُوَ الْعَزِيزُ الرَّحِيمُ ۞
ಮತ್ತು (ದೂತರೇ,) ನಿಮ್ಮ ಒಡೆಯನು ಖಂಡಿತ, ಪ್ರಬಲನು ಹಾಗೂ ಕರುಣಾಳುವಾಗಿದ್ದಾನೆ.
26:69
وَاتْلُ عَلَيْهِمْ نَبَأَ إِبْرَاهِيمَ ۞
ನೀವು ಅವರಿಗೆ ಇಬ್ರಾಹೀಮರ ವೃತ್ತಾಂತವನ್ನು ಓದಿ ಕೇಳಿಸಿರಿ;
26:70
إِذْ قَالَ لِأَبِيهِ وَقَوْمِهِ مَا تَعْبُدُونَ ۞
ಅವರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ, ‘‘ನೀವು ಇದೇನನ್ನು ಪೂಜಿಸುತ್ತಿರುವಿರಿ?’’ ಎಂದು ಕೇಳಿದರು.
26:71
قَالُوا نَعْبُدُ أَصْنَامًا فَنَظَلُّ لَهَا عَاكِفِينَ ۞
ಅವರು ಹೇಳಿದರು; ನಾವು ಮೂರ್ತಿಗಳನ್ನು ಪೂಜಿಸುತ್ತೇವೆ ಮತ್ತು ನಾವು ಸದಾ ಅವರಿಗೇ ನಿಷ್ಠರಾಗಿರುತ್ತೇವೆ.
26:72
قَالَ هَلْ يَسْمَعُونَكُمْ إِذْ تَدْعُونَ ۞
ಅವರು (ಇಬ್ರಾಹೀಮ್) ಕೇಳಿದರು; ನೀವು ಪ್ರಾರ್ಥಿಸುವಾಗ ಅವುಗಳು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತವೆಯೇ?
26:73
أَوْ يَنْفَعُونَكُمْ أَوْ يَضُرُّونَ ۞
ಅಥವಾ ಅವು ನಿಮಗೇನಾದರೂ ಲಾಭವನ್ನುಂಟು ಮಾಡುತ್ತವೆಯೇ? ಅಥವಾ ಅವು ನಿಮಗೇನಾದರೂ ನಷ್ಟ ಉಂಟು ಮಾಡಬಲ್ಲವೇ?
26:74
قَالُوا بَلْ وَجَدْنَا آبَاءَنَا كَذَٰلِكَ يَفْعَلُونَ ۞
ಅವರು (ಜನರು) ಹೇಳಿದರು; ನಿಜವಾಗಿ ನಮ್ಮ ತಾತ ಮುತ್ತಾತಂದಿರು ಹೀಗೆಯೇ ಮಾಡುತ್ತಿದ್ದುದನ್ನು ನಾವು ಕಂಡಿರುತ್ತೇವೆ.
26:75
قَالَ أَفَرَأَيْتُمْ مَا كُنْتُمْ تَعْبُدُونَ ۞
ಅವರು (ಇಬ್ರಾಹೀಮ್) ಹೇಳಿದರು; ನೀವು ಪೂಜಿಸುತ್ತಿರುವುದು ಏನನ್ನು ಎಂಬುದನ್ನು ನೀವು ನೋಡಿದಿರಾ?
26:76
أَنْتُمْ وَآبَاؤُكُمُ الْأَقْدَمُونَ ۞
ಹಾಗೆಯೇ, ನೀವು ಮತ್ತು ಗತಿಸಿ ಹೋದ ನಿಮ್ಮ ತಾತ ಮುತ್ತಾತಂದಿರು ಪೂಜಿಸುತ್ತಿದ್ದುದು (ಏನೆಂಬುದನ್ನು ನೋಡಿರುವಿರಾ)?
26:77
فَإِنَّهُمْ عَدُوٌّ لِي إِلَّا رَبَّ الْعَالَمِينَ ۞
ಅವರೆಲ್ಲರೂ ಖಂಡಿತ ನನ್ನ ಶತ್ರುಗಳು. ಸರ್ವ ಲೋಕಗಳ ಒಡೆಯನ ಹೊರತು.
26:78
الَّذِي خَلَقَنِي فَهُوَ يَهْدِينِ ۞
ಅವನೇ ನನ್ನನ್ನು ಸೃಷ್ಟಿಸಿದವನು ಮತ್ತು ನನಗೆ ಸರಿದಾರಿ ತೋರುವವನು.
26:79
وَالَّذِي هُوَ يُطْعِمُنِي وَيَسْقِينِ ۞
ಅವನೇ ನನಗೆ ತಿನಿಸುವವನು ಹಾಗೂ ಕುಡಿಸುವವನು.
26:80
وَإِذَا مَرِضْتُ فَهُوَ يَشْفِينِ ۞
ನಾನು ರೋಗಿಯಾದಾಗ ಅವನೇ ನನ್ನನ್ನು ಗುಣಪಡಿಸುವವನು.
26:81
وَالَّذِي يُمِيتُنِي ثُمَّ يُحْيِينِ ۞
ಅವನೇ ನನಗೆ ಮರಣ ನೀಡುವವನು ಮತ್ತು ನನ್ನನ್ನು (ಮತ್ತೆ) ಜೀವಂತ ಗೊಳಿಸುವವನು.
26:82
وَالَّذِي أَطْمَعُ أَنْ يَغْفِرَ لِي خَطِيئَتِي يَوْمَ الدِّينِ ۞
(ಅಂತಿಮ) ಪ್ರತಿಫಲದ ದಿನ ನನ್ನ ತಪ್ಪುಗಳನ್ನು ಅವನೇ ಕ್ಷಮಿಸುವನೆಂದು ನಾನು ನಿರೀಕ್ಷಿಸುತ್ತೇನೆ.
26:83
رَبِّ هَبْ لِي حُكْمًا وَأَلْحِقْنِي بِالصَّالِحِينَ ۞
ನನ್ನೊಡೆಯಾ, ನನಗೆ ಅಧಿಕಾರವನ್ನು ನೀಡು ಮತ್ತು ನನ್ನನ್ನು ಸಜ್ಜನರ ಸಾಲಿಗೆ ಸೇರಿಸು.
26:84
وَاجْعَلْ لِي لِسَانَ صِدْقٍ فِي الْآخِرِينَ ۞
ಮುಂದಿನ ಜನರಲ್ಲಿ ನನ್ನ ಉತ್ತಮ ಪ್ರಸ್ತಾಪವನ್ನು ಮುಂದುವರಿಸು.
26:85
وَاجْعَلْنِي مِنْ وَرَثَةِ جَنَّةِ النَّعِيمِ ۞
ನೀನು ನನ್ನನ್ನು ಅನುಗ್ರಹಗಳು ತುಂಬಿದ ಸ್ವರ್ಗದ ಉತ್ತರಾಧಿಕಾರಿಯಾಗಿಸು.
26:86
وَاغْفِرْ لِأَبِي إِنَّهُ كَانَ مِنَ الضَّالِّينَ ۞
ನನ್ನ ತಂದೆಯನ್ನು ಕ್ಷಮಿಸಿಬಿಡು. ಅವರು ಖಂಡಿತ, ದಾರಿಗೆಟ್ಟವರ ಸಾಲಿಗೆ ಸೇರಿದ್ದರು.
26:87
وَلَا تُخْزِنِي يَوْمَ يُبْعَثُونَ ۞
ಎಲ್ಲರನ್ನೂ ಮತ್ತೆ ಜೀವಂತಗೊಳಿಸಲಾಗುವ ದಿನ, ನನ್ನನ್ನು ಅಪಮಾನಿಸಬೇಡ.
26:88
يَوْمَ لَا يَنْفَعُ مَالٌ وَلَا بَنُونَ ۞
ಅದು, ಸಂಪತ್ತಿನಿಂದಾಗಲಿ, ಸಂತಾನಗಳಿಂದಾಗಲಿ ಯಾರಿಗೂ ಲಾಭವಾಗದ ದಿನವಾಗಿರುವುದು.
26:89
إِلَّا مَنْ أَتَى اللَّهَ بِقَلْبٍ سَلِيمٍ ۞
ನಿರ್ಮಲ ಮನಸ್ಸಿನೊಂದಿಗೆ ಅಲ್ಲಾಹನ ಬಳಿಗೆ ಬಂದವನು ಮಾತ್ರ (ಅಂದು ಸುರಕ್ಷಿತನಾಗಿರುವನು).
26:90
وَأُزْلِفَتِ الْجَنَّةُ لِلْمُتَّقِينَ ۞
ಅಂದು ಸ್ವರ್ಗವನ್ನು ಧರ್ಮನಿಷ್ಠರಿಗೆ ಹತ್ತಿರಗೊಳಿಸಲಾಗುವುದು.
26:91
وَبُرِّزَتِ الْجَحِيمُ لِلْغَاوِينَ ۞
ಮತ್ತು ನರಕವನ್ನು ದಾರಿಗೆಟ್ಟವರ ಮುಂದೆ ತರಲಾಗುವುದು.
26:92
وَقِيلَ لَهُمْ أَيْنَ مَا كُنْتُمْ تَعْبُدُونَ ۞
(ಅಂದು) ಅವರೊಡನೆ ಕೇಳಲಾಗುವುದು; ನೀವು ಯಾರನ್ನೆಲ್ಲಾ ಪೊಜಿಸುತ್ತಿದ್ದಿರೋ ಅವರೆಲ್ಲಾ ಎಲ್ಲಿದ್ದಾರೆ?
26:93
مِنْ دُونِ اللَّهِ هَلْ يَنْصُرُونَكُمْ أَوْ يَنْتَصِرُونَ ۞
ಅಲ್ಲಾಹನ ಹೊರತು. ಇಂದು ಅವರು ನಿಮಗೆ ನೆರವಾಗಬಲ್ಲರೇ? ಅಥವಾ ಅವರು ಸ್ವತಃ ತಮಗೆ ತಾವೇ ನೆರವಾಗಬಲ್ಲರೇ?
26:94
فَكُبْكِبُوا فِيهَا هُمْ وَالْغَاوُونَ ۞
ಅವರನ್ನೂ ದಾರಿಗೆಟ್ಟವರನ್ನೂ ಮುಖ ಕೆಳಗಾಗಿಸಿ ಅದರೊಳಗೆ (ನರಕದೊಳಗೆ) ಹಾಕಿ ಬಿಡಲಾಗುವುದು.
26:95
وَجُنُودُ إِبْلِيسَ أَجْمَعُونَ ۞
ಶೈತಾನನ ಪಡೆಯ ಎಲ್ಲರಿಗೂ (ಇದೇ ಗತಿ ಒದಗುವುದು).
26:96
قَالُوا وَهُمْ فِيهَا يَخْتَصِمُونَ ۞
ಅದರಲ್ಲಿ ಅವರು ಪರಸ್ಪರ ಜಗಳಾಡುತ್ತಾ ಹೇಳುವರು;
26:97
تَاللَّهِ إِنْ كُنَّا لَفِي ضَلَالٍ مُبِينٍ ۞
ಅಲ್ಲಾಹನಾಣೆ! ನಾವಂತು ಸ್ಪಷ್ಟವಾಗಿ ದಾರಿಗೆಟ್ಟಿದ್ದೆವು -
26:98
إِذْ نُسَوِّيكُمْ بِرَبِّ الْعَالَمِينَ ۞
- ಎಲ್ಲ ಲೋಕಗಳ ಒಡೆಯನಿಗೆ ಸರಿಸಾಟಿಗಳಿದ್ದಾರೆ ಎಂದು ನಾವು ಹೇಳಿದಾಗ.
26:99
وَمَا أَضَلَّنَا إِلَّا الْمُجْرِمُونَ ۞
ನಮ್ಮನ್ನು ದಾರಿಗೆಡಿಸಿದವರು ಖಂಡಿತ ಅಪರಾಧಿಗಳು.
26:100
فَمَا لَنَا مِنْ شَافِعِينَ ۞
(ಇಂದು) ನಮ್ಮ ಪರವಾಗಿ ಶಿಫಾರಸು ಮಾಡುವವರು ಯಾರೂ ಇಲ್ಲ.
26:101
وَلَا صَدِيقٍ حَمِيمٍ ۞
(ನಮಗಿಂದು) ನೈಜ ಮಿತ್ರನೊಬ್ಬನೂ ಇಲ್ಲ.
26:102
فَلَوْ أَنَّ لَنَا كَرَّةً فَنَكُونَ مِنَ الْمُؤْمِنِينَ ۞
ನಮಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾವು ಖಂಡಿತ ನಂಬಿದವರಾಗಿರುತ್ತಿದ್ದೆವು.
26:103
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.
26:104
وَإِنَّ رَبَّكَ لَهُوَ الْعَزِيزُ الرَّحِيمُ ۞
ಮತ್ತು ನಿಮ್ಮೊಡೆಯನು ಖಂಡಿತ, ಪ್ರಬಲ ಹಾಗೂ ಕರುಣಾಮಯಿಯಾಗಿದ್ದಾನೆ.
26:105
كَذَّبَتْ قَوْمُ نُوحٍ الْمُرْسَلِينَ ۞
ನೂಹರ ಜನಾಂಗದವರು (ಹಲವು) ದೂತರನ್ನು ತಿರಸ್ಕರಿಸಿದರು.
26:106
إِذْ قَالَ لَهُمْ أَخُوهُمْ نُوحٌ أَلَا تَتَّقُونَ ۞
ಅವರ ಸಹೋದರ ನೂಹರು ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ?
26:107
إِنِّي لَكُمْ رَسُولٌ أَمِينٌ ۞
ನಾನು ನಿಮ್ಮೆಡೆಗೆ ಬಂದಿರುವ ನಂಬಲರ್ಹ ದೂತನಾಗಿದ್ದೇನೆ.
26:108
فَاتَّقُوا اللَّهَ وَأَطِيعُونِ ۞
ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:109
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ ۞
ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಎಲ್ಲ ಲೋಕಗಳ ಒಡೆಯನು ಮಾತ್ರ.
26:110
فَاتَّقُوا اللَّهَ وَأَطِيعُونِ ۞
ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:111
۞ قَالُوا أَنُؤْمِنُ لَكَ وَاتَّبَعَكَ الْأَرْذَلُونَ ۞
ಅವರು (ನಾಡಿನವರು) ಹೇಳಿದರು; ನಿಮ್ಮನ್ನು ಅನುಸರಿಸುತ್ತಿರುವವರು ಕೀಳು ವರ್ಗದವರು. ಹೀಗಿರುತ್ತಾ ನಾವು ನಿಮ್ಮನ್ನು ನಂಬಬೇಕೇ?
26:112
قَالَ وَمَا عِلْمِي بِمَا كَانُوا يَعْمَلُونَ ۞
ಅವರು (ನೂಹ್) ಹೇಳಿದರು; ಅವರ ಕಸುಬುಗಳ ಕುರಿತು ನನಗೆ ತಿಳಿಯದು.
26:113
إِنْ حِسَابُهُمْ إِلَّا عَلَىٰ رَبِّي ۖ لَوْ تَشْعُرُونَ ۞
ಅವರ ವಿಚಾರಣೆಯ ಹೊಣೆ ಇರುವುದು ನನ್ನ ಒಡೆಯನಿಗೆ ಮಾತ್ರ. ನಿಮಗೆ ಇದರ ಅರಿವಿದ್ದಿದ್ದರೆ ಚೆನ್ನಾಗಿತ್ತು.
26:114
وَمَا أَنَا بِطَارِدِ الْمُؤْمِنِينَ ۞
ನಾನಂತು ವಿಶ್ವಾಸಿಗಳನ್ನು ದೂರ ಓಡಿಸಲಾರೆ.
26:115
إِنْ أَنَا إِلَّا نَذِيرٌ مُبِينٌ ۞
ನಾನು ಕೇವಲ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ.
26:116
قَالُوا لَئِنْ لَمْ تَنْتَهِ يَا نُوحُ لَتَكُونَنَّ مِنَ الْمَرْجُومِينَ ۞
ಅವರು (ನಾಡಿನವರು) ಹೇಳಿದರು; ಓ ನೂಹ್, ನೀನು (ಇದನ್ನೆಲ್ಲಾ) ನಿಲ್ಲಿಸದಿದ್ದರೆ ಖಂಡಿತ, ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು.
26:117
قَالَ رَبِّ إِنَّ قَوْمِي كَذَّبُونِ ۞
ಅವರು (ನೂಹ್) ಹೇಳಿದರು; ನನ್ನೊಡೆಯಾ, ನನ್ನ ಜನಾಂಗದವರು ನನ್ನನ್ನು ತಿರಸ್ಕರಿಸಿದ್ದಾರೆ.
26:118
فَافْتَحْ بَيْنِي وَبَيْنَهُمْ فَتْحًا وَنَجِّنِي وَمَنْ مَعِيَ مِنَ الْمُؤْمِنِينَ ۞
ನೀನು ನನ್ನ ಹಾಗೂ ಅವರ ನಡುವೆ ಒಂದು ಸ್ಪಷ್ಟ ತೀರ್ಮಾನ ಮಾಡಿಬಿಡು ಮತ್ತು ನನ್ನನ್ನೂ ನನ್ನ ಜೊತೆಗಿರುವ ವಿಶ್ವಾಸಿಗಳನ್ನೂ ರಕ್ಷಿಸು.
26:119
فَأَنْجَيْنَاهُ وَمَنْ مَعَهُ فِي الْفُلْكِ الْمَشْحُونِ ۞
ಕೊನೆಗೆ, ನಾವು ಅವರನ್ನೂ, ತುಂಬಿದ ಹಡಗಿನಲ್ಲಿ ಅವರ ಜೊತಗಿದ್ದವರನ್ನೂ ರಕ್ಷಿಸಿದೆವು.
26:120
ثُمَّ أَغْرَقْنَا بَعْدُ الْبَاقِينَ ۞
ಆ ಬಳಿಕ ನಾವು ಇತರರನ್ನು ಮುಳುಗಿಸಿ ಬಿಟ್ಟೆವು.
26:121
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಖಂಡಿತವಾಗಿಯೂ ಇದರಲ್ಲಿ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.
26:122
وَإِنَّ رَبَّكَ لَهُوَ الْعَزِيزُ الرَّحِيمُ ۞
ನಿಮ್ಮೊಡೆಯನು ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ.
26:123
كَذَّبَتْ عَادٌ الْمُرْسَلِينَ ۞
ಆದ್ ಜನಾಂಗದವರೂ (ಹಲವು) ದೂತರನ್ನು ತಿರಸ್ಕರಿಸಿದ್ದರು.
26:124
إِذْ قَالَ لَهُمْ أَخُوهُمْ هُودٌ أَلَا تَتَّقُونَ ۞
ಅವರೊಡನೆ ಅವರ ಸಹೋದರ ಹೂದ್ ಹೇಳಿದ್ದರು; ನೀವೇನು ಅಂಜುವುದಿಲ್ಲವೇ?
26:125
إِنِّي لَكُمْ رَسُولٌ أَمِينٌ ۞
ನಾನು ನಿಮ್ಮೆಡೆಗೆ ಬಂದಿರುವ ನಂಬಲರ್ಹ ದೇವದೂತನಾಗಿದ್ದೇನೆ.
26:126
فَاتَّقُوا اللَّهَ وَأَطِيعُونِ ۞
ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:127
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ ۞
ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಂತು ಎಲ್ಲ ಲೋಕಗಳ ಒಡೆಯನ ಬಳಿಯಲ್ಲೇ ಇದೆ.
26:128
أَتَبْنُونَ بِكُلِّ رِيعٍ آيَةً تَعْبَثُونَ ۞
ನೀವೇನು, ಕೇವಲ ವ್ಯರ್ಥ ಮೋಜಿಗಾಗಿ ಪ್ರತಿಯೊಂದು ಎತ್ತರದ ಸ್ಥಳದಲ್ಲೂ ಒಂದು ಸ್ಮಾರಕವನ್ನು ನಿರ್ಮಿಸುತ್ತೀರಾ?
26:129
وَتَتَّخِذُونَ مَصَانِعَ لَعَلَّكُمْ تَخْلُدُونَ ۞
ಮತ್ತು ಇಲ್ಲೇ ಶಾಶ್ವತವಾಗಿ ಇರಲಿಕ್ಕಾಗಿ ನೀವು ಭವ್ಯ ಭವನಗಳನ್ನು ನಿರ್ಮಿಸುತ್ತೀರಾ?
26:130
وَإِذَا بَطَشْتُمْ بَطَشْتُمْ جَبَّارِينَ ۞
ಮತ್ತು ನೀವು ಆಕ್ರಮಿಸುವಾಗ ಬಹಳ ಕ್ರೂರಿಗಳಾಗಿ ಆಕ್ರಮಿಸುತ್ತೀರಿ.
26:131
فَاتَّقُوا اللَّهَ وَأَطِيعُونِ ۞
(ಇದನ್ನೆಲ್ಲಾ ಬಿಟ್ಟು) ನೀವೀಗ ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:132
وَاتَّقُوا الَّذِي أَمَدَّكُمْ بِمَا تَعْلَمُونَ ۞
ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ನೆರವಾದವನಿಗೆ ಅಂಜಿರಿ.
26:133
أَمَدَّكُمْ بِأَنْعَامٍ وَبَنِينَ ۞
ಅವನು ನಿಮಗೆ ನೆರವಾಗಿರುವನು, ಜಾನುವಾರುಗಳ ಮೂಲಕ ಹಾಗೂ ಸಂತತಿಗಳ ಮೂಲಕ.
26:134
وَجَنَّاتٍ وَعُيُونٍ ۞
ತೋಟಗಳ ಹಾಗೂ ಚಿಲುಮೆಗಳ ಮೂಲಕ.
26:135
إِنِّي أَخَافُ عَلَيْكُمْ عَذَابَ يَوْمٍ عَظِيمٍ ۞
ನೀವು ಒಂದು ಮಹಾದಿನದ ಶಿಕ್ಷೆಗೆ ಗುರಿಯಾಗುವಿರೆಂಬ ಭಯ ನನಗಿದೆ.
26:136
قَالُوا سَوَاءٌ عَلَيْنَا أَوَعَظْتَ أَمْ لَمْ تَكُنْ مِنَ الْوَاعِظِينَ ۞
ಅವರು (ಜನಾಂಗದವರು) ಹೇಳಿದರು; ನಮ್ಮ ಮಟ್ಟಿಗೆ ನೀವು ಬೋಧಿಸಿದರೂ ಒಂದೇ, ಬೋಧಿಸದೆ ಇದ್ದರೂ ಒಂದೇ.
26:137
إِنْ هَٰذَا إِلَّا خُلُقُ الْأَوَّلِينَ ۞
ಅವೆಲ್ಲಾ ಕೇವಲ ಗತಕಾಲದವರ ಆಚಾರಗಳು.
26:138
وَمَا نَحْنُ بِمُعَذَّبِينَ ۞
ನಾವು ಯಾವ ಶಿಕ್ಷೆಗೂ ಗುರಿಯಾಗಲಾರೆವು.
26:139
فَكَذَّبُوهُ فَأَهْلَكْنَاهُمْ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಹೀಗೆ, ಅವರು ಅವರನ್ನು (ಹೂದ್‌ರನ್ನು) ತಿರಸ್ಕರಿಸಿದರು ಮತ್ತು ನಾವು ಅವರನ್ನು (ಹೂದ್‌ರ ಜನಾಂಗದವರನ್ನು) ನಾಶಮಾಡಿದೆವು. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.
26:140
وَإِنَّ رَبَّكَ لَهُوَ الْعَزِيزُ الرَّحِيمُ ۞
ನಿಮ್ಮ ಒಡೆಯನು ಖಂಡಿತ ಪ್ರಬಲನೂ ಕರುಣಾಳುವೂ ಆಗಿದ್ದಾನೆ.
26:141
كَذَّبَتْ ثَمُودُ الْمُرْسَلِينَ ۞
ಸಮೂದ್ ಜನಾಂಗದವರೂ (ಹಲವು) ದೂತರನ್ನು ತಿರಸ್ಕರಿಸಿದ್ದರು.
26:142
إِذْ قَالَ لَهُمْ أَخُوهُمْ صَالِحٌ أَلَا تَتَّقُونَ ۞
ಅವರ ಸಹೋದರ ಸ್ವಾಲಿಹ್, ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ?
26:143
إِنِّي لَكُمْ رَسُولٌ أَمِينٌ ۞
ನಾನು ನಿಮ್ಮೆಡೆಗೆ ಬಂದಿರುವ, ನಂಬಲರ್ಹನಾದ ದೇವದೂತನಾಗಿದ್ದೇನೆ.
26:144
فَاتَّقُوا اللَّهَ وَأَطِيعُونِ ۞
ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:145
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ ۞
ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನ್ನ ಪ್ರತಿಫಲವು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರವಿದೆ.
26:146
أَتُتْرَكُونَ فِي مَا هَاهُنَا آمِنِينَ ۞
ನಿಮ್ಮನ್ನೇನು ಇಲ್ಲೇ ಸದಾ ನಿಶ್ಚಿಂತರಾಗಿರಲು ಬಿಟ್ಟು ಬಿಡಲಾಗುವುದೇ?
26:147
فِي جَنَّاتٍ وَعُيُونٍ ۞
ಈ ಉದ್ಯಾನಗಳಲ್ಲಿ ಹಾಗೂ ಚಿಲುಮೆಗಳಲ್ಲಿ?
26:148
وَزُرُوعٍ وَنَخْلٍ طَلْعُهَا هَضِيمٌ ۞
ಈ ಹೊಲಗಳಲ್ಲಿ ಹಾಗೂ ನಯ ನಾಜೂಕಿನ ಖರ್ಜೂರದ ಗೊಂಚಲುಗಳಿರುವ ಹೊಲಗಳಲ್ಲಿ?
26:149
وَتَنْحِتُونَ مِنَ الْجِبَالِ بُيُوتًا فَارِهِينَ ۞
ನೀವು ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸಿ ಸಂಭ್ರಮ ಪಡುತ್ತೀರಿ.
26:150
فَاتَّقُوا اللَّهَ وَأَطِيعُونِ ۞
ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:151
وَلَا تُطِيعُوا أَمْرَ الْمُسْرِفِينَ ۞
ನೀವು ಅತಿಕ್ರಮಿಗಳ ಆದೇಶಗಳನ್ನು ಅನುಸರಿಸಬೇಡಿ.
26:152
الَّذِينَ يُفْسِدُونَ فِي الْأَرْضِ وَلَا يُصْلِحُونَ ۞
ಅವರು ಭೂಮಿಯಲ್ಲಿ ಅಶಾಂತಿ ಹಬ್ಬುವವರೇ ಹೊರತು ಯಾವುದೇ ಸುಧಾರಣೆಯ ಕೆಲಸ ಮಾಡುವವರಲ್ಲ.
26:153
قَالُوا إِنَّمَا أَنْتَ مِنَ الْمُسَحَّرِينَ ۞
ಅವರು (ಜನಾಂಗದವರು) ಹೇಳಿದರು; ನೀವು ಒಬ್ಬ ಮಾಟಪೀಡಿತ ವ್ಯಕ್ತಿಯಾಗಿರುವಿರಿ.
26:154
مَا أَنْتَ إِلَّا بَشَرٌ مِثْلُنَا فَأْتِ بِآيَةٍ إِنْ كُنْتَ مِنَ الصَّادِقِينَ ۞
ನೀವು ಕೇವಲ ನಮ್ಮಂತಹ ಒಬ್ಬ ಮನುಷ್ಯ ಮಾತ್ರ. ನೀವು ನಿಜಕ್ಕೂ ಸತ್ಯವಂತರಾಗಿದ್ದರೆ ಏನಾದರೂ ಪುರಾವೆ ತನ್ನಿರಿ.
26:155
قَالَ هَٰذِهِ نَاقَةٌ لَهَا شِرْبٌ وَلَكُمْ شِرْبُ يَوْمٍ مَعْلُومٍ ۞
ಅವರು (ಸ್ವಾಲಿಹ್) ಹೇಳಿದರು; ಈ ಹೆಣ್ಣೊಂಟೆ. ಇದು ನೀರು ಕುಡಿಯುವುದಕ್ಕೆ ಮತ್ತು ನೀವು ನೀರು ಕುಡಿಯುವುದಕ್ಕೆ (ಪ್ರತ್ಯೇಕ) ದಿನ ನಿಗದಿಯಾಗಿರುತ್ತದೆ.
26:156
وَلَا تَمَسُّوهَا بِسُوءٍ فَيَأْخُذَكُمْ عَذَابُ يَوْمٍ عَظِيمٍ ۞
ನೀವು ಕೆಟ್ಟ ಸಂಕಲ್ಪದೊಂದಿಗೆ ಇದನ್ನು ಮುಟ್ಟಬೇಡಿ. ಮುಟ್ಟಿದರೆ ನೀವು ಒಂದು ಮಹಾ ದಿನದ ಶಿಕ್ಷೆಗೆ ಗುರಿಯಾಗುವಿರಿ.
26:157
فَعَقَرُوهَا فَأَصْبَحُوا نَادِمِينَ ۞
ಅವರು ಅದನ್ನು ಕಡಿದು ಬಿಟ್ಟರು ಮತ್ತು ಆ ಬಳಿಕ ಬಹಳಷ್ಟು ಪಶ್ಚಾತ್ತಾಪ ಪಟ್ಟರು.
26:158
فَأَخَذَهُمُ الْعَذَابُ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಕೊನೆಗೆ ಶಿಕ್ಷೆಯು ಅವರನ್ನು ಆವರಿಸಿತು. ಇದರಲ್ಲಿ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬಿರಲಿಲ್ಲ.
26:159
وَإِنَّ رَبَّكَ لَهُوَ الْعَزِيزُ الرَّحِيمُ ۞
ಖಂಡಿತವಾಗಿಯೂ ನಿಮ್ಮ ಒಡೆಯನು ಬಹಳ ಪ್ರಬಲನೂ ಕರುಣಾಳುವೂ ಆಗಿದ್ದಾನೆ.
26:160
كَذَّبَتْ قَوْمُ لُوطٍ الْمُرْسَلِينَ ۞
ಲೂತ್‌ರ ಜನಾಂಗದವರು (ಹಲವು) ದೂತರನ್ನು ತಿರಸ್ಕರಿಸಿದರು.
26:161
إِذْ قَالَ لَهُمْ أَخُوهُمْ لُوطٌ أَلَا تَتَّقُونَ ۞
ಅವರ ಸಹೋದರ ಲೂತ್, ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ?
26:162
إِنِّي لَكُمْ رَسُولٌ أَمِينٌ ۞
ನಾನು ನಿಮ್ಮ ಪಾಲಿಗೆ ನಂಬಲರ್ಹ ದೂತನಾಗಿದ್ದೇನೆ.
26:163
فَاتَّقُوا اللَّهَ وَأَطِيعُونِ ۞
ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:164
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ ۞
ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ.
26:165
أَتَأْتُونَ الذُّكْرَانَ مِنَ الْعَالَمِينَ ۞
ಸರ್ವ ಜಗತ್ತಿನಲ್ಲಿ ನೀವು ಮಾತ್ರ (ಕಾಮಕ್ಕಾಗಿ) ಪುರುಷರ ಬಳಿಗೆ ಹೋಗುತ್ತೀರಾ?
26:166
وَتَذَرُونَ مَا خَلَقَ لَكُمْ رَبُّكُمْ مِنْ أَزْوَاجِكُمْ ۚ بَلْ أَنْتُمْ قَوْمٌ عَادُونَ ۞
ಮತ್ತು ನೀವು ನಿಮಗಾಗಿ ಅಲ್ಲಾಹನು ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ಬಿಟ್ಟು ಬಿಡುತ್ತೀರಾ? ನಿಜವಾಗಿ, ನೀವು ಅತಿಕ್ರಮಿಗಳಾಗಿರುವಿರಿ.
26:167
قَالُوا لَئِنْ لَمْ تَنْتَهِ يَا لُوطُ لَتَكُونَنَّ مِنَ الْمُخْرَجِينَ ۞
ಅವರು (ಜನರು) ಹೇಳಿದರು; ನೀವು (ನಿಮ್ಮ ಉಪದೇಶವನ್ನು) ನಿಲ್ಲಿಸದಿದ್ದರೆ ನಿಮ್ಮನ್ನು (ನಾಡಿನಿಂದ) ಹೊರ ಹಾಕಲಾಗುವುದು.
26:168
قَالَ إِنِّي لِعَمَلِكُمْ مِنَ الْقَالِينَ ۞
ಅವರು (ಲೂತ್) ಹೇಳಿದರು; ನಿಮ್ಮ ಕೃತ್ಯ (ಸಲಿಂಗಕಾಮ)ದ ಬಗ್ಗೆ ನನಗೆ ಜಿಗುಪ್ಸೆ ಇದೆ.
26:169
رَبِّ نَجِّنِي وَأَهْلِي مِمَّا يَعْمَلُونَ ۞
ನನ್ನೊಡೆಯಾ, ನನ್ನನ್ನೂ, ನನ್ನ ಪಾಳಯದವರನ್ನೂ, ಅವರ ಕೃತ್ಯಗಳಿಂದ ರಕ್ಷಿಸು.
26:170
فَنَجَّيْنَاهُ وَأَهْلَهُ أَجْمَعِينَ ۞
ಕೊನೆಗೆ ನಾವು ಅವರನ್ನೂ ಅವರ ಪಾಳಯದ ಎಲ್ಲರನ್ನೂ ರಕ್ಷಿಸಿದೆವು.
26:171
إِلَّا عَجُوزًا فِي الْغَابِرِينَ ۞
ಹಿಂದೆ ಉಳಿದುಕೊಂಡ ಒಬ್ಬ ವೃದ್ದೆಯ ಹೊರತು.
26:172
ثُمَّ دَمَّرْنَا الْآخَرِينَ ۞
ಆ ಬಳಿಕ ನಾವು ಇತರೆಲ್ಲರನ್ನೂ ನಾಶ ಮಾಡಿಬಿಟ್ಟೆವು.
26:173
وَأَمْطَرْنَا عَلَيْهِمْ مَطَرًا ۖ فَسَاءَ مَطَرُ الْمُنْذَرِينَ ۞
ನಾವು ಅವರ ಮೇಲೆ (ಕಲ್ಲಿನ) ಮಳೆಯನ್ನು ಸುರಿಸಿದೆವು. ಎಚ್ಚರಿಸಲಾಗಿದ್ದವರ ಪಾಲಿಗೆ ಅದು ಬಹಳ ಕೆಟ್ಟ ಮಳೆಯಾಗಿತ್ತು .
26:174
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.
26:175
وَإِنَّ رَبَّكَ لَهُوَ الْعَزِيزُ الرَّحِيمُ ۞
ನಿಮ್ಮ ಒಡೆಯನಂತು ತುಂಬಾ ಪ್ರಬಲನೂ ಕರುಣಾಳುವೂ ಆಗಿದ್ದಾನೆ.
26:176
كَذَّبَ أَصْحَابُ الْأَيْكَةِ الْمُرْسَلِينَ ۞
‘ಐಕಃ’ದವರು (ಹಲವು) ದೂತರನ್ನು ತಿರಸ್ಕರಿಸಿದರು.
26:177
إِذْ قَالَ لَهُمْ شُعَيْبٌ أَلَا تَتَّقُونَ ۞
ಅವರೊಡನೆ (ದೂತ) ಶುಐಬ್ ಹೇಳಿದರು; ನೀವೇನು ಅಂಜುವುದಿಲ್ಲವೇ?
26:178
إِنِّي لَكُمْ رَسُولٌ أَمِينٌ ۞
ನಾನು ನಿಮ್ಮ ಪಾಲಿಗೆ ನಂಬಲರ್ಹ ದೂತನಾಗಿರುವೆನು.
26:179
فَاتَّقُوا اللَّهَ وَأَطِيعُونِ ۞
ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.
26:180
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ ۞
ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ.
26:181
۞ أَوْفُوا الْكَيْلَ وَلَا تَكُونُوا مِنَ الْمُخْسِرِينَ ۞
ಪೂರ್ಣವಾಗಿ ಅಳತೆಮಾಡಿರಿ ಮತ್ತು ಅಳತೆಯಲ್ಲಿ ಕಡಿತಗೊಳಿಸಬೇಡಿ.
26:182
وَزِنُوا بِالْقِسْطَاسِ الْمُسْتَقِيمِ ۞
ನೇರವಾಗಿರುವ ತಕ್ಕಡಿಯಲ್ಲೇ ತೂಗಿರಿ.
26:183
وَلَا تَبْخَسُوا النَّاسَ أَشْيَاءَهُمْ وَلَا تَعْثَوْا فِي الْأَرْضِ مُفْسِدِينَ ۞
ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಾ ತಿರುಗಬೇಡಿ.
26:184
وَاتَّقُوا الَّذِي خَلَقَكُمْ وَالْجِبِلَّةَ الْأَوَّلِينَ ۞
ಮತ್ತು ನೀವು, ನಿಮ್ಮನ್ನು ಹಾಗೂ ನಿಮಗಿಂತ ಮೊದಲಿನವರನ್ನು ಸೃಷ್ಟಿಸಿದವನಿಗೆ ಅಂಜಿರಿ.
26:185
قَالُوا إِنَّمَا أَنْتَ مِنَ الْمُسَحَّرِينَ ۞
ಅವರು ಹೇಳಿದರು; ನೀನು ಖಂಡಿತ ಮಾಟಪೀಡಿತನಾಗಿರುವೆ.
26:186
وَمَا أَنْتَ إِلَّا بَشَرٌ مِثْلُنَا وَإِنْ نَظُنُّكَ لَمِنَ الْكَاذِبِينَ ۞
ನೀನು ನಮ್ಮಂತಹ ಒಬ್ಬ ಮನುಷ್ಯ ಮಾತ್ರ. ನಾವು ನಿನ್ನನ್ನು ಸುಳ್ಳುಗಾರನೆಂದು ಭಾವಿಸುತ್ತೇವೆ.
26:187
فَأَسْقِطْ عَلَيْنَا كِسَفًا مِنَ السَّمَاءِ إِنْ كُنْتَ مِنَ الصَّادِقِينَ ۞
ನೀನು ನಿಜಕ್ಕೂ ಸತ್ಯವಂತನಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.
26:188
قَالَ رَبِّي أَعْلَمُ بِمَا تَعْمَلُونَ ۞
ಅವರು (ಶುಐಬ್) ಹೇಳಿದರು; ನನ್ನೊಡೆಯಾ, ಅವರೇನು ಮಾಡುತ್ತಿರುವರೆಂಬುದು ನಿನಗೆ ತಿಳಿದಿದೆ.
26:189
فَكَذَّبُوهُ فَأَخَذَهُمْ عَذَابُ يَوْمِ الظُّلَّةِ ۚ إِنَّهُ كَانَ عَذَابَ يَوْمٍ عَظِيمٍ ۞
ಅವರು (ಐಕಃದವರು) ಅವರನ್ನು (ಶುಐಬ್‌ರನ್ನು) ತಿರಸ್ಕರಿಸಿದರು. ಕೊನೆಗೆ ನೆರಳಿನ ದಿನದ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು. ಅದು ನಿಜಕ್ಕೂ ಒಂದು ಮಹಾ ದಿನದ ಶಿಕ್ಷೆಯಾಗಿತ್ತು.
26:190
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ ۞
ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬಿರಲಿಲ್ಲ.
26:191
وَإِنَّ رَبَّكَ لَهُوَ الْعَزِيزُ الرَّحِيمُ ۞
ಮತ್ತು ಖಂಡಿತವಾಗಿಯೂ ನಿಮ್ಮ ಒಡೆಯನು ಅತ್ಯಂತ ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ.
26:192
وَإِنَّهُ لَتَنْزِيلُ رَبِّ الْعَالَمِينَ ۞
ಇದು (ಕುರ್‌ಆನ್) ಎಲ್ಲ ಲೋಕಗಳ ಒಡೆಯನಿಂದಲೇ ಇಳಿಸಲ್ಪಟ್ಟಿದೆ.
26:193
نَزَلَ بِهِ الرُّوحُ الْأَمِينُ ۞
ನಂಬಲರ್ಹನಾದ ಆತ್ಮನು (ಜಿಬ್ರೀಲ್) ಇದನ್ನು ಹೊತ್ತು ಇಳಿದಿರುವನು -
26:194
عَلَىٰ قَلْبِكَ لِتَكُونَ مِنَ الْمُنْذِرِينَ ۞
- ನಿಮ್ಮ (ದೂತರ) ಮನದ ಮೇಲೆ, ನೀವು ಎಚ್ಚರಿಸುವವರಾಗಬೇಕೆಂದು -
26:195
بِلِسَانٍ عَرَبِيٍّ مُبِينٍ ۞
- ಸ್ಪಷ್ಟವಾದ ಅರಬೀ ಭಾಷೆಯಲ್ಲಿ.
26:196
وَإِنَّهُ لَفِي زُبُرِ الْأَوَّلِينَ ۞
ಖಂಡಿತವಾಗಿಯೂ ಇದು (ಈ ಮಾಹಿತಿ) ಗತಕಾಲದವರ ಗ್ರಂಥಗಳಲ್ಲೂ ಇದೆ.
26:197
أَوَلَمْ يَكُنْ لَهُمْ آيَةً أَنْ يَعْلَمَهُ عُلَمَاءُ بَنِي إِسْرَائِيلَ ۞
ಇದನ್ನೆಲ್ಲಾ ಇಸ್ರಾಈಲರ ಸಂತತಿಯ ವಿದ್ವಾಂಸರು ಬಲ್ಲರು ಎಂಬುದು ಅವರ ಪಾಲಿಗೆ ಒಂದು ಪುರಾವೆಯಲ್ಲವೇ?
26:198
وَلَوْ نَزَّلْنَاهُ عَلَىٰ بَعْضِ الْأَعْجَمِينَ ۞
ಒಂದು ವೇಳೆ ನಾವು ಇದನ್ನು ಅರಬರಲ್ಲದ ಯಾರಿಗಾದರೂ ಇಳಿಸಿಕೊಟ್ಟಿದ್ದರೆ.
26:199
فَقَرَأَهُ عَلَيْهِمْ مَا كَانُوا بِهِ مُؤْمِنِينَ ۞
ಮತ್ತು ಆತನು ಅವರಿಗೆ ಅದನ್ನು ಓದಿ ಕೇಳಿಸಿದ್ದರೆ, ಆಗಲೂ ಅವರು ಇದನ್ನು ನಂಬುತ್ತಿರಲಿಲ್ಲ.
26:200
كَذَٰلِكَ سَلَكْنَاهُ فِي قُلُوبِ الْمُجْرِمِينَ ۞
ಈ ರೀತಿ ನಾವು ಅದನ್ನು (ನಿರಾಕರಣೆಯನ್ನು) ಅಪರಾಧಿಗಳ ಮನಸ್ಸುಗಳೊಳಗೆ ನಾಟಿ ಬಿಟ್ಟಿರುವೆವು.
26:201
لَا يُؤْمِنُونَ بِهِ حَتَّىٰ يَرَوُا الْعَذَابَ الْأَلِيمَ ۞
ನಿಜವಾಗಿ ಅವರು, ಯಾತನಾಮಯ ಶಿಕ್ಷೆಯನ್ನು ಕಾಣುವವರೆಗೂ ಇದನ್ನು ನಂಬಲಾರರು.
26:202
فَيَأْتِيَهُمْ بَغْتَةً وَهُمْ لَا يَشْعُرُونَ ۞
ಅದು (ಆ ಶಿಕ್ಷೆಯು) ಹಠಾತ್ತನೆ ಅವರ ಮೇಲೆ ಬಂದೆರಗುವುದು ಮತ್ತು ಅವರಿಗೆ ಅದರ ಅರಿವೂ ಇರಲಾರದು.
26:203
فَيَقُولُوا هَلْ نَحْنُ مُنْظَرُونَ ۞
ಆಗ ಅವರು, ನಮಗೆ ಒಂದಿಷ್ಟು ಕಾಲಾವಕಾಶ ಸಿಕ್ಕೀತೇ? ಎಂದು ಕೇಳುವರು.
26:204
أَفَبِعَذَابِنَا يَسْتَعْجِلُونَ ۞
ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿರುವರೇ?
26:205
أَفَرَأَيْتَ إِنْ مَتَّعْنَاهُمْ سِنِينَ ۞
ನೀವು ಕಂಡಿರಾ? ನಾವು ಅವರನ್ನು ಸುಖಭೋಗದಲ್ಲಿರಲು ವರ್ಷಗಟ್ಟಲೆ ಅವಕಾಶ ನೀಡಿದರೆ,
26:206
ثُمَّ جَاءَهُمْ مَا كَانُوا يُوعَدُونَ ۞
ಮತ್ತು ಆ ಬಳಿಕ, ಅವರಿಗೆ ಏನನ್ನು ವಾಗ್ದಾನ ಮಾಡಲಾಗಿತ್ತೋ ಅದು (ಶಿಕ್ಷೆಯು) ಬಂದುಬಿಟ್ಟರೆ,
26:207
مَا أَغْنَىٰ عَنْهُمْ مَا كَانُوا يُمَتَّعُونَ ۞
ಅವರು ಭೋಗಿಸುತ್ತಿದ್ದ ವಸ್ತುಗಳಿಂದ ಅವರಿಗೆ ಯಾವ ಲಾಭವೂ ಆಗದು.
26:208
وَمَا أَهْلَكْنَا مِنْ قَرْيَةٍ إِلَّا لَهَا مُنْذِرُونَ ۞
ಎಚ್ಚರಿಸುವವರನ್ನು ಕಳಿಸದೆ ನಾವು ಯಾವುದೇ ನಾಡನ್ನು ನಾಶಮಾಡಿಲ್ಲ.
26:209
ذِكْرَىٰ وَمَا كُنَّا ظَالِمِينَ ۞
ಇದು ಉಪದೇಶ. ನಾವೆಂದೂ ಅಕ್ರಮಿಗಳಾಗಿರಲಿಲ್ಲ.
26:210
وَمَا تَنَزَّلَتْ بِهِ الشَّيَاطِينُ ۞
ಇದನ್ನು (ಕುರ್‌ಆನ್‌ಅನ್ನು) ತರುವವರು ಶೈತಾನರಲ್ಲ.
26:211
وَمَا يَنْبَغِي لَهُمْ وَمَا يَسْتَطِيعُونَ ۞
ಅವರು ಅದಕ್ಕೆ ಅರ್ಹರೂ ಅಲ್ಲ ಮತ್ತು ಅದು ಅವರಿಗೆ ಸಾಧ್ಯವೂ ಇಲ್ಲ.
26:212
إِنَّهُمْ عَنِ السَّمْعِ لَمَعْزُولُونَ ۞
ಇದನ್ನು ಕೇಳದಂತೆ ಅವರನ್ನು ತಡೆಯಲಾಗಿದೆ.
26:213
فَلَا تَدْعُ مَعَ اللَّهِ إِلَٰهًا آخَرَ فَتَكُونَ مِنَ الْمُعَذَّبِينَ ۞
ಅಲ್ಲಾಹನ ಜೊತೆಗೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸಬೇಡಿ. ಅನ್ಯಥಾ ನೀವು ಶಿಕ್ಷೆಗೊಳಗಾಗುವಿರಿ.
26:214
وَأَنْذِرْ عَشِيرَتَكَ الْأَقْرَبِينَ ۞
ನೀವು ನಿಮ್ಮ ಹತ್ತಿರದ ಬಂಧುಗಳನ್ನು (ಮೊದಲು) ಎಚ್ಚರಿಸಿರಿ.
26:215
وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِينَ ۞
ಮತ್ತು ನಂಬಿಕೆ ಇಟ್ಟವರ ಪೈಕಿ ನಿಮ್ಮನ್ನು ಅನುಸರಿಸುವವರ ಪಾಲಿಗೆ ನೀವು ವಿಶೇಷ ವಿನಯ ಉಳ್ಳವರಾಗಿರಿ.
26:216
فَإِنْ عَصَوْكَ فَقُلْ إِنِّي بَرِيءٌ مِمَّا تَعْمَلُونَ ۞
ಇನ್ನು ಅವರು ನಿಮಗೆ ಅವಿಧೇಯರಾದರೆ, ನಿಮ್ಮ ಕರ್ಮಗಳಿಗೆ ನಾನು ಹೊಣೆಯಲ್ಲ ಎಂದು ಹೇಳಿಬಿಡಿರಿ.
26:217
وَتَوَكَّلْ عَلَى الْعَزِيزِ الرَّحِيمِ ۞
(ದೂತರೇ,) ನೀವು ಆ ಪ್ರಬಲನಾದ ಕರುಣಾಮಯಿಯಲ್ಲಿ ಭರವಸೆ ಇಡಿರಿ.
26:218
الَّذِي يَرَاكَ حِينَ تَقُومُ ۞
ಅವನು ನಿಮ್ಮನ್ನು ಕಾಣುತ್ತಿರುತ್ತಾನೆ, ನೀವು ನಿಂತಿರುವಾಗ,
26:219
وَتَقَلُّبَكَ فِي السَّاجِدِينَ ۞
ಮತ್ತು ಸಾಷ್ಟಾಂಗವೆರಗುವವರ (ನಮಾಝ್ ಸಲ್ಲಿಸುವವರ) ಜೊತೆಗೆ ನೀವು ತಿರುಗಾಡುತ್ತಿರುವಾಗ (ಅವನು ನಿಮ್ಮನ್ನು ಕಾಣುತ್ತಿರುತ್ತಾನೆ).
26:220
إِنَّهُ هُوَ السَّمِيعُ الْعَلِيمُ ۞
ಅವನು ಖಂಡಿತ ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ.
26:221
هَلْ أُنَبِّئُكُمْ عَلَىٰ مَنْ تَنَزَّلُ الشَّيَاطِينُ ۞
ಶೈತಾನರು ಯಾರ ಬಳಿಗೆ ಇಳಿದು ಬರುತ್ತಾರೆಂದು ನಾನು ನಿಮಗೆ ತಿಳಿಸಲೇ?
26:222
تَنَزَّلُ عَلَىٰ كُلِّ أَفَّاكٍ أَثِيمٍ ۞
ಸುಳ್ಳಾರೋಪಗಳನ್ನು ಹೊರಿಸುವ ಪ್ರತಿಯೊಬ್ಬ ಪಾಪಿಯ ಬಳಿಗೆ ಅವರು ಇಳಿದು ಬರುತ್ತಾರೆ.
26:223
يُلْقُونَ السَّمْعَ وَأَكْثَرُهُمْ كَاذِبُونَ ۞
ಅವರು, ಅವರಿಗೆ ವದಂತಿಗಳನ್ನು ತಲುಪಿಸುತ್ತಾರೆ ಮತ್ತು ಅವುಗಳಲ್ಲಿ ಹೆಚ್ಚಿನವು ಸುಳ್ಳಾಗಿರುತ್ತವೆ.
26:224
وَالشُّعَرَاءُ يَتَّبِعُهُمُ الْغَاوُونَ ۞
ಮತ್ತು ಕವಿಗಳನ್ನು ದಾರಿಗೆಟ್ಟವರು ಮಾತ್ರ ಅನುಸರಿಸುತ್ತಾರೆ.
26:225
أَلَمْ تَرَ أَنَّهُمْ فِي كُلِّ وَادٍ يَهِيمُونَ ۞
ನೀವು ಕಾಣುತ್ತಿಲ್ಲವೇ, ಅವರು (ಕವಿಗಳು) ಪ್ರತಿಯೊಂದು ಕಣಿವೆಯಲ್ಲೂ ಅಲೆಯುವುದನ್ನು?
26:226
وَأَنَّهُمْ يَقُولُونَ مَا لَا يَفْعَلُونَ ۞
ಮತ್ತು ಅವರು ತಾವು ಮಾಡಿಲ್ಲದ್ದನ್ನು ಹೇಳುತ್ತಿರುವುದನ್ನು?
26:227
إِلَّا الَّذِينَ آمَنُوا وَعَمِلُوا الصَّالِحَاتِ وَذَكَرُوا اللَّهَ كَثِيرًا وَانْتَصَرُوا مِنْ بَعْدِ مَا ظُلِمُوا ۗ وَسَيَعْلَمُ الَّذِينَ ظَلَمُوا أَيَّ مُنْقَلَبٍ يَنْقَلِبُونَ ۞
ಸತ್ಯವನ್ನು ನಂಬಿದವರು ಮತ್ತು ಸತ್ಕರ್ಮಿಗಳು ಇದಕ್ಕೆ ಹೊರತಾಗಿರುತ್ತಾರೆ. ಅವರು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುತ್ತಾರೆ ಮತ್ತು ತಮ್ಮ ಮೇಲೆ ಅನ್ಯಾಯವಾದ ಬಳಿಕವಷ್ಟೇ ಅದಕ್ಕೆ ಪ್ರತೀಕಾರವೆಸಗುತ್ತಾರೆ. ಅನ್ಯಾಯ ಎಸಗಿದವರು, ತಮ್ಮನ್ನು ಎಂತಹ ನೆಲೆಗೆ ಮರಳಿಸಲಾಗುವುದು ಎಂಬುದನ್ನು ಅರಿಯಲಿದ್ದಾರೆ.