Az-Zumar (The groups)
39. ಅಝ್ಝುಮರ್(ದಂಡುಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
39:1
تَنْزِيلُ الْكِتَابِ مِنَ اللَّهِ الْعَزِيزِ الْحَكِيمِ ۞
(ಇದು) ಪ್ರಬಲನೂ ಯುಕ್ತಿವಂತನೂ ಆಗಿರುವ ಅಲ್ಲಾಹನ ಕಡೆಯಿಂದ ಇಳಿಸಿ ಕೊಡಲಾಗಿರುವ ಗ್ರಂಥ.
39:2
إِنَّا أَنْزَلْنَا إِلَيْكَ الْكِتَابَ بِالْحَقِّ فَاعْبُدِ اللَّهَ مُخْلِصًا لَهُ الدِّينَ ۞
(ದೂತರೇ,) ಖಂಡಿತವಾಗಿಯೂ ನಾವು ಇದನ್ನು ಸತ್ಯದೊಂದಿಗೆ ನಿಮ್ಮೆಡೆಗೆ ಇಳಿಸಿಕೊಟ್ಟಿರುತ್ತೇವೆ. ನೀವಿನ್ನು ನಿಷ್ಠೆಯನ್ನು ಅವನಿಗೇ ಮೀಸಲಾಗಿಟ್ಟು, ಅವನನ್ನು ಆರಾಧಿಸಿರಿ.
39:3
أَلَا لِلَّهِ الدِّينُ الْخَالِصُ ۚ وَالَّذِينَ اتَّخَذُوا مِنْ دُونِهِ أَوْلِيَاءَ مَا نَعْبُدُهُمْ إِلَّا لِيُقَرِّبُونَا إِلَى اللَّهِ زُلْفَىٰ إِنَّ اللَّهَ يَحْكُمُ بَيْنَهُمْ فِي مَا هُمْ فِيهِ يَخْتَلِفُونَ ۗ إِنَّ اللَّهَ لَا يَهْدِي مَنْ هُوَ كَاذِبٌ كَفَّارٌ ۞
ನೆನಪಿರಲಿ, ನಿಷ್ಠೆಯು ಅಲ್ಲಾಹನಿಗೇ ಮೀಸಲಾಗಿರಲಿ. ಅಲ್ಲಾಹನ ಹೊರತು ಇತರರನ್ನು ತಮ್ಮ ಪೋಷಕರಾಗಿಸಿಕೊಂಡವರು, ‘‘ಅವರು ನಮ್ಮನ್ನು ಅಲ್ಲಾಹನಿಗೆ ನಿಕಟಗೊಳಿಸುವರೆಂದು ಮಾತ್ರ ನಾವು ಅವರನ್ನು ಪೂಜಿಸುತ್ತೇವೆ’’ ಎನ್ನುತ್ತಾರೆ. ಅವರು ಭಿನ್ನತೆ ತಾಳಿರುವ ವಿಷಯಗಳಲ್ಲಿ ಅಲ್ಲಾಹನೇ ಅವರ ನಡುವೆ ತೀರ್ಮಾನ ಮಾಡುವನು. ಸುಳ್ಳುಗಾರನಾಗಿರುವ ಕೃತಘ್ನನಿಗೆ ಅಲ್ಲಾಹನು ಖಂಡಿತ ಸರಿ ದಾರಿಯನ್ನು ತೋರುವುದಿಲ್ಲ.
39:4
لَوْ أَرَادَ اللَّهُ أَنْ يَتَّخِذَ وَلَدًا لَاصْطَفَىٰ مِمَّا يَخْلُقُ مَا يَشَاءُ ۚ سُبْحَانَهُ ۖ هُوَ اللَّهُ الْوَاحِدُ الْقَهَّارُ ۞
ಅಲ್ಲಾಹನು ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳಲು ಬಯಸಿದ್ದರೆ, ಅವನು ತನ್ನ ಸೃಷ್ಟಿಗಳ ಪೈಕಿ ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಿದ್ದನು. ಅವನು ಪಾವನನು. ಆ ಅಲ್ಲಾಹನು, ಅನನ್ಯನೂ ತುಂಬಾ ಪ್ರಬಲನೂ ಆಗಿದ್ದಾನೆ.
39:5
خَلَقَ السَّمَاوَاتِ وَالْأَرْضَ بِالْحَقِّ ۖ يُكَوِّرُ اللَّيْلَ عَلَى النَّهَارِ وَيُكَوِّرُ النَّهَارَ عَلَى اللَّيْلِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُسَمًّى ۗ أَلَا هُوَ الْعَزِيزُ الْغَفَّارُ ۞
ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಅವನೇ ರಾತ್ರಿಯನ್ನು ಹಗಲ ಮೇಲೆ ಆವರಿಸುತ್ತಾನೆ ಹಾಗೂ ಹಗಲನ್ನು ರಾತ್ರಿಯ ಮೇಲೆ ಆವರಿಸುತ್ತಾನೆ ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದ್ದಾನೆ. ಎಲ್ಲವೂ ಒಂದು ನಿರ್ದಿಷ್ಟ ಅವಧಿಗಾಗಿ ಚಲನೆಯಲ್ಲಿದೆ. ನೆನಪಿರಲಿ, ಅವನು ಪ್ರಚಂಡನೂ ಮಹಾ ಕ್ಷಮಾಶೀಲನೂ ಆಗಿದ್ದಾನೆ.
39:6
خَلَقَكُمْ مِنْ نَفْسٍ وَاحِدَةٍ ثُمَّ جَعَلَ مِنْهَا زَوْجَهَا وَأَنْزَلَ لَكُمْ مِنَ الْأَنْعَامِ ثَمَانِيَةَ أَزْوَاجٍ ۚ يَخْلُقُكُمْ فِي بُطُونِ أُمَّهَاتِكُمْ خَلْقًا مِنْ بَعْدِ خَلْقٍ فِي ظُلُمَاتٍ ثَلَاثٍ ۚ ذَٰلِكُمُ اللَّهُ رَبُّكُمْ لَهُ الْمُلْكُ ۖ لَا إِلَٰهَ إِلَّا هُوَ ۖ فَأَنَّىٰ تُصْرَفُونَ ۞
ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಹಾಗೂ ಅದರಿಂದ ಅದರ ಜೋಡಿಯನ್ನು ಸೃಷ್ಟಿಸಿದನು ಮತ್ತು ಜಾನುವಾರುಗಳಲ್ಲಿ ನಿಮಗಾಗಿ ಎಂಟು ಬಗೆಯ ಜೋಡಿಗಳನ್ನು ತಯಾರಿಸಿದನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಗರ್ಭಗಳಲ್ಲಿ, ಮೂರು ಕತ್ತಲುಗಳಲ್ಲಿ, ಹಂತ ಹಂತವಾಗಿ ಸೃಷ್ಟಿಸಿರುವನು. ಆ ಅಲ್ಲಾಹನೇ ನಿಮ್ಮ ಒಡೆಯನು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ನೀವು ಅದೆಲ್ಲಿ ಅಲೆಯುತ್ತಿರುವಿರಿ?
39:7
إِنْ تَكْفُرُوا فَإِنَّ اللَّهَ غَنِيٌّ عَنْكُمْ ۖ وَلَا يَرْضَىٰ لِعِبَادِهِ الْكُفْرَ ۖ وَإِنْ تَشْكُرُوا يَرْضَهُ لَكُمْ ۗ وَلَا تَزِرُ وَازِرَةٌ وِزْرَ أُخْرَىٰ ۗ ثُمَّ إِلَىٰ رَبِّكُمْ مَرْجِعُكُمْ فَيُنَبِّئُكُمْ بِمَا كُنْتُمْ تَعْمَلُونَ ۚ إِنَّهُ عَلِيمٌ بِذَاتِ الصُّدُورِ ۞
ನೀವು ಕೃತಘ್ನತೆ ತೋರಿದರೆ, ಅಲ್ಲಾಹನಂತು ನಿಮ್ಮ ಅಗತ್ಯವೇ ಇಲ್ಲದವನಾಗಿದ್ದಾನೆ. ಆದರೆ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯ ನಿಲುವನ್ನು ಮೆಚ್ಚುವುದಿಲ್ಲ. ನೀವು ಕೃತಜ್ಞತೆ ತೋರುವುದಾದರೆ ಅದನ್ನೇ ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ. ಹೊರೆ ಹೊರುವ ಯಾರು ಇನ್ನೊಬ್ಬರ ಹೊರೆಯನ್ನು ಹೊರಲಾರನು. ಕೊನೆಗೊಮ್ಮೆ ನೀವು ನಿಮ್ಮ ಒಡೆಯನ ಬಳಿಗೇ ಮರಳಿ ಹೋಗುವಿರಿ ಮತ್ತು ಅವನು, ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ನಿಮಗೆ ತಿಳಿಸುವನು. ಖಂಡಿತವಾಗಿಯೂ ಅವನು ಮನಸ್ಸಿನೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ.
39:8
۞ وَإِذَا مَسَّ الْإِنْسَانَ ضُرٌّ دَعَا رَبَّهُ مُنِيبًا إِلَيْهِ ثُمَّ إِذَا خَوَّلَهُ نِعْمَةً مِنْهُ نَسِيَ مَا كَانَ يَدْعُو إِلَيْهِ مِنْ قَبْلُ وَجَعَلَ لِلَّهِ أَنْدَادًا لِيُضِلَّ عَنْ سَبِيلِهِ ۚ قُلْ تَمَتَّعْ بِكُفْرِكَ قَلِيلًا ۖ إِنَّكَ مِنْ أَصْحَابِ النَّارِ ۞
ಮತ್ತು ಮಾನವನಿಗೆ ಸಂಕಟವೇನಾದರೂ ತಟ್ಟಿದರೆ, ಅವನು ತನ್ನೊಡೆಯನೆಡೆಗೆ ಒಲಿದು, ಅವನಿಗೆ ಮೊರೆ ಇಡುತ್ತಾನೆ. ತರುವಾಯ (ಅಲ್ಲಾಹನು) ಆತನಿಗೆ ತನ್ನ ಅನುಗ್ರಹವನ್ನು ದಯ ಪಾಲಿಸಿದಾಗ, ಆತನು ಈ ಹಿಂದೆ ತಾನು ಯಾರಿಗೆ ಮೊರೆ ಇಟ್ಟಿದ್ದೆನೆಂಬುದನ್ನೇ ಮರೆತು ಬಿಡುತ್ತಾನೆ ಮತ್ತು ಅಲ್ಲಾಹನಿಗೆ ಪಾಲುದಾರರನ್ನು ನೇಮಿಸುತ್ತಾನೆ - ಅವರು ಆತನನ್ನು ಅವನ (ಅಲ್ಲಾಹನ) ದಾರಿಯಿಂದ ದೂರಗೊಳಿಸಿ ಬಿಡುತ್ತಾರೆ. (ಅಂಥವನಿಗೆ) ಹೇಳಿರಿ; ತುಸುಕಾಲ ನೀನು ನಿನ್ನ ಕೃತಘ್ನತೆಯ ಸುಖವನ್ನು ಅನುಭವಿಸು. ನೀನು ಖಂಡಿತ ನರಕವಾಸಿಯಾಗಿರುವೆ.
39:9
أَمَّنْ هُوَ قَانِتٌ آنَاءَ اللَّيْلِ سَاجِدًا وَقَائِمًا يَحْذَرُ الْآخِرَةَ وَيَرْجُو رَحْمَةَ رَبِّهِ ۗ قُلْ هَلْ يَسْتَوِي الَّذِينَ يَعْلَمُونَ وَالَّذِينَ لَا يَعْلَمُونَ ۗ إِنَّمَا يَتَذَكَّرُ أُولُو الْأَلْبَابِ ۞
(ಅವನು ಶ್ರೇಷ್ಠನೋ, ಅಥವಾ) ರಾತ್ರಿಯ ವೇಳೆ ಸಾಷ್ಟಾಂಗವೆರಗಿಕೊಂಡೂ, ನಿಂತುಕೊಂಡೂ ಆರಾಧಿಸುತ್ತಾ, ಪರಲೋಕದ ಕುರಿತು ಸದಾ ಜಾಗೃತನಾಗಿದ್ದು, ತನ್ನ ಒಡೆಯನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವನು ಶ್ರೇಷ್ಠನೋ? ಹೇಳಿರಿ; ಅರಿತಿಲ್ಲದವರು ಮತ್ತು ಅರಿತಿರುವವರು ಸಮಾನರಾಗಬಲ್ಲರೇ? ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.
39:10
قُلْ يَا عِبَادِ الَّذِينَ آمَنُوا اتَّقُوا رَبَّكُمْ ۚ لِلَّذِينَ أَحْسَنُوا فِي هَٰذِهِ الدُّنْيَا حَسَنَةٌ ۗ وَأَرْضُ اللَّهِ وَاسِعَةٌ ۗ إِنَّمَا يُوَفَّى الصَّابِرُونَ أَجْرَهُمْ بِغَيْرِ حِسَابٍ ۞
ಹೇಳಿರಿ; ನನ್ನ (ಅಲ್ಲಾಹನ) ವಿಶ್ವಾಸಿ ದಾಸರೇ, ನಿಮ್ಮ ಒಡೆಯನಿಗೆ ಅಂಜಿರಿ. ಈ ಲೋಕದಲ್ಲಿ ಒಳಿತನ್ನು ಮಾಡಿದವರಿಗೆ, ಒಳಿತು ಸಿಗಲಿದೆ. ಮತ್ತು ಅಲ್ಲಾಹನ ಭೂಮಿಯು ವಿಶಾಲವಾಗಿದೆ. ಮತ್ತು ಖಂಡಿತವಾಗಿಯೂ ಸಹನಶೀಲರಿಗೆ ಅವರ ಪ್ರತಿಫಲವನ್ನು ಅಪಾರ ಪ್ರಮಾಣದಲ್ಲಿ ನೀಡಲಾಗುವುದು.
39:11
قُلْ إِنِّي أُمِرْتُ أَنْ أَعْبُدَ اللَّهَ مُخْلِصًا لَهُ الدِّينَ ۞
ಹೇಳಿರಿ; ನನಗಂತು, ನಿಷ್ಠೆಯನ್ನು ಅಲ್ಲಾಹನಿಗೇ ಮಿಸಲಾಗಿಟ್ಟು, ಅವನನ್ನು ಆರಾಧಿಸಲು ಆದೇಶಿಸಲಾಗಿದೆ.
39:12
وَأُمِرْتُ لِأَنْ أَكُونَ أَوَّلَ الْمُسْلِمِينَ ۞
ಮತ್ತು ನಾನೇ ಪ್ರಥಮವಾಗಿ ಮುಸ್ಲಿಮನಾಗಬೇಕೆಂದು (ಶರಣಾಗತನಾಗಬೇಕೆಂದು) ನನಗೆ ಆದೇಶಿಸಲಾಗಿದೆ.
39:13
قُلْ إِنِّي أَخَافُ إِنْ عَصَيْتُ رَبِّي عَذَابَ يَوْمٍ عَظِيمٍ ۞
ಹೇಳಿರಿ; ನಾನು ನನ್ನ ಒಡೆಯನ ಆದೇಶವನ್ನು ಮೀರಿ ನಡೆದರೆ ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ.
39:14
قُلِ اللَّهَ أَعْبُدُ مُخْلِصًا لَهُ دِينِي ۞
ಹೇಳಿರಿ; ನಾನು ನನ್ನ ನಿಷ್ಠೆಯನ್ನು ಅಲ್ಲಾಹನಿಗೇ ಮೀಸಲಾಗಿಟ್ಟು ಅವನನ್ನೇ ಆರಾಧಿಸುತ್ತೇನೆ.
39:15
فَاعْبُدُوا مَا شِئْتُمْ مِنْ دُونِهِ ۗ قُلْ إِنَّ الْخَاسِرِينَ الَّذِينَ خَسِرُوا أَنْفُسَهُمْ وَأَهْلِيهِمْ يَوْمَ الْقِيَامَةِ ۗ أَلَا ذَٰلِكَ هُوَ الْخُسْرَانُ الْمُبِينُ ۞
ನೀವು ಅವನ ಹೊರತು ಯಾರನ್ನು ಬೇಕಾದರೂ ಆರಾಧಿಸಿರಿ. ಹೇಳಿರಿ; ತಮ್ಮನ್ನು ಹಾಗೂ ತಮ್ಮ ಮನೆಯವರನ್ನು ಪುನರುತ್ಥಾನ ದಿನ ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾಗಿ ನಷ್ಟ ಅನುಭವಿಸುವವರಾಗಿದ್ದಾರೆ. (ನಿಮಗೆ) ತಿಳಿದಿರಲಿ; ಅದುವೇ ಸ್ಪಷ್ಟವಾದ ನಷ್ಟ.
39:16
لَهُمْ مِنْ فَوْقِهِمْ ظُلَلٌ مِنَ النَّارِ وَمِنْ تَحْتِهِمْ ظُلَلٌ ۚ ذَٰلِكَ يُخَوِّفُ اللَّهُ بِهِ عِبَادَهُ ۚ يَا عِبَادِ فَاتَّقُونِ ۞
ಅವರಿಗಾಗಿ (ನರಕದಲ್ಲಿ), ಅವರ ಮೇಲೂ ಅವರನ್ನು ಆವರಿಸುವ ಬೆಂಕಿಯ ಜ್ವಾಲೆಗಳಿರುವವು ಮತ್ತು ಅವರ ಕೆಳಗೂ ಅವರನ್ನು ಆವರಿಸುವ ಜ್ವಾಲೆಗಳಿರುವವು. ಅಲ್ಲಾಹನು ಆ ಕುರಿತು ತನ್ನ ದಾಸರನ್ನು ಎಚ್ಚರಿಸುತ್ತಾನೆ. ನನ್ನ ದಾಸರೇ, ನನಗೆ ಅಂಜಿರಿ.
39:17
وَالَّذِينَ اجْتَنَبُوا الطَّاغُوتَ أَنْ يَعْبُدُوهَا وَأَنَابُوا إِلَى اللَّهِ لَهُمُ الْبُشْرَىٰ ۚ فَبَشِّرْ عِبَادِ ۞
ಅವನ ಆರಾಧನೆಗಾಗಿ, ಮಿಥ್ಯ ಶಕ್ತಿಗಳನ್ನೆಲ್ಲಾ ತೊರೆದು ಅಲ್ಲಾಹನೆಡೆಗೆ ಒಲವು ತೋರಿದವರಿಗೆ ಶುಭವಾರ್ತೆ ಇದೆ. ಅಂತಹ ನನ್ನ ಭಕ್ತರಿಗೆ ಶುಭವಾರ್ತೆ ನೀಡಿರಿ.
39:18
الَّذِينَ يَسْتَمِعُونَ الْقَوْلَ فَيَتَّبِعُونَ أَحْسَنَهُ ۚ أُولَٰئِكَ الَّذِينَ هَدَاهُمُ اللَّهُ ۖ وَأُولَٰئِكَ هُمْ أُولُو الْأَلْبَابِ ۞
ಅವರು ಮಾತನ್ನು ಸರಿಯಾಗಿ ಆಲಿಸಿ, ಅದರ ಅತ್ಯುತ್ತಮ ಆಯಾಮವನ್ನು ಅನುಸರಿಸುತ್ತಾರೆ. ಅವರೇ ಅಲ್ಲಾಹನಿಂದ ಮಾರ್ಗದರ್ಶನ ಪಡೆದವರು ಮತ್ತು ಅವರೇ ಬುದ್ಧಿವಂತರು.
39:19
أَفَمَنْ حَقَّ عَلَيْهِ كَلِمَةُ الْعَذَابِ أَفَأَنْتَ تُنْقِذُ مَنْ فِي النَّارِ ۞
ಈಗಾಗಲೇ ಶಿಕ್ಷೆಯ ತೀರ್ಪು ವಿಧಿಸಲ್ಪಟ್ಟವನನ್ನು ಮತ್ತು ಈಗಾಗಲೇ ಬೆಂಕಿಗೆ ಬಿದ್ದು ಬಿಟ್ಟಿರುವವನನ್ನು ನೀವು ರಕ್ಷಿಸಬಲ್ಲಿರಾ?
39:20
لَٰكِنِ الَّذِينَ اتَّقَوْا رَبَّهُمْ لَهُمْ غُرَفٌ مِنْ فَوْقِهَا غُرَفٌ مَبْنِيَّةٌ تَجْرِي مِنْ تَحْتِهَا الْأَنْهَارُ ۖ وَعْدَ اللَّهِ ۖ لَا يُخْلِفُ اللَّهُ الْمِيعَادَ ۞
ಆದರೆ, ತಮ್ಮ ಒಡೆಯನ ಭಕ್ತರಾಗಿದ್ದವರಿಗಾಗಿ, ಮಾಳಿಗೆಗಳು ಮತ್ತು ಅವುಗಳ ಮೇಲೆ ಮತ್ತಷ್ಟು ಸಿದ್ಧ ಮಾಳಿಗೆಗಳು ಇರುವವು. ಅವುಗಳ ತಳದಲ್ಲಿ ಹರಿಯುವ ನದಿಗಳಿರುವವು. ಇದು ಅಲ್ಲಾಹನ ವಾಗ್ದಾನ. ಅಲ್ಲಾಹನೆಂದೂ ತಾನು ಕೊಟ್ಟ ಮಾತನ್ನು ಮೀರುವುದಿಲ್ಲ.
39:21
أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَسَلَكَهُ يَنَابِيعَ فِي الْأَرْضِ ثُمَّ يُخْرِجُ بِهِ زَرْعًا مُخْتَلِفًا أَلْوَانُهُ ثُمَّ يَهِيجُ فَتَرَاهُ مُصْفَرًّا ثُمَّ يَجْعَلُهُ حُطَامًا ۚ إِنَّ فِي ذَٰلِكَ لَذِكْرَىٰ لِأُولِي الْأَلْبَابِ ۞
ನೀವು ಕಾಣಲಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅದನ್ನು ಚಿಲುಮೆಗಳಾಗಿಸಿ ಭೂಮಿಯಲ್ಲಿ ಹರಿಸುತ್ತಾನೆ. ತರುವಾಯ ಅವನು ಅದರಿಂದ ವಿವಿಧ ಬಣ್ಣದ ಬೆಳೆಗಳನ್ನು ಹೊರತೆಗೆಯುತ್ತಾನೆ. ಆ ಬಳಿಕ ಅವು ಒಣಗಿ ಬಿಡುವುದನ್ನು ಹಾಗೂ ಹಳದಿ ಬಣ್ಣಕ್ಕೆ ತಿರುಗುವುದನ್ನು ನೀವು ಕಾಣುತ್ತೀರಿ. ಕೊನೆಗೆ ಅವನು, ಅವು ಒಣಗಿ ಹುಡಿಯಾಗುವಂತೆ ಮಾಡುತ್ತಾನೆ. ಇದರಲ್ಲಿ ಬುದ್ಧಿವಂತರಿಗೆ ಖಂಡಿತ ಪಾಠವಿದೆ.
39:22
أَفَمَنْ شَرَحَ اللَّهُ صَدْرَهُ لِلْإِسْلَامِ فَهُوَ عَلَىٰ نُورٍ مِنْ رَبِّهِ ۚ فَوَيْلٌ لِلْقَاسِيَةِ قُلُوبُهُمْ مِنْ ذِكْرِ اللَّهِ ۚ أُولَٰئِكَ فِي ضَلَالٍ مُبِينٍ ۞
ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗಾಗಿ ತೆರೆದು ಬಿಟ್ಟನೋ, ಅವನು ತನ್ನ ಒಡೆಯನ ಕಡೆಯಿಂದ ಬೆಳಕಿನಲ್ಲಿದ್ದಾನೆ. ಅಲ್ಲಾಹನನ್ನು ನೆನಪಿಸಲಾಗದಷ್ಟು ಹೃದಯವು ಕಠಿಣವಾಗಿ ಬಿಟ್ಟವರಿಗೆ ವಿನಾಶ ಕಾದಿದೆ. ಅವರು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ.
39:23
اللَّهُ نَزَّلَ أَحْسَنَ الْحَدِيثِ كِتَابًا مُتَشَابِهًا مَثَانِيَ تَقْشَعِرُّ مِنْهُ جُلُودُ الَّذِينَ يَخْشَوْنَ رَبَّهُمْ ثُمَّ تَلِينُ جُلُودُهُمْ وَقُلُوبُهُمْ إِلَىٰ ذِكْرِ اللَّهِ ۚ ذَٰلِكَ هُدَى اللَّهِ يَهْدِي بِهِ مَنْ يَشَاءُ ۚ وَمَنْ يُضْلِلِ اللَّهُ فَمَا لَهُ مِنْ هَادٍ ۞
ಅಲ್ಲಾಹನು, ಸಮರೂಪದ, ಆವರ್ತಿತ ವಚನಗಳಿರುವ ಅತ್ಯುತ್ತಮ ಗ್ರಂಥವನ್ನು ಇಳಿಸಿಕೊಟ್ಟಿದ್ದಾನೆ. ತಮ್ಮ ಒಡೆಯನ ಭಕ್ತಿ ಉಳ್ಳವರಿಗೆ ಅದರಿಂದ ರೋಮಾಂಚನವಾಗುತ್ತದೆ. ತರುವಾಯ ಅವರ ಚರ್ಮಗಳೂ (ಬಾಹ್ಯವೂ) ಹೃದಯಗಳೂ (ಅಂತರಂಗವೂ) ಅಲ್ಲಾಹನ ನೆನಪಿನೆಡೆಗೆ ವಾಲಿ ಬಿಡುತ್ತವೆ. ಇದು ಅಲ್ಲಾಹನ ಮಾರ್ಗದರ್ಶನ. ಅವನು ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ಇನ್ನು ಅಲ್ಲಾಹನೇ ದಾರಿ ತಪ್ಪಿಸಿದವನಿಗೆ ಸರಿ ದಾರಿ ತೋರಬಲ್ಲವರು ಯಾರೂ ಇಲ್ಲ.
39:24
أَفَمَنْ يَتَّقِي بِوَجْهِهِ سُوءَ الْعَذَابِ يَوْمَ الْقِيَامَةِ ۚ وَقِيلَ لِلظَّالِمِينَ ذُوقُوا مَا كُنْتُمْ تَكْسِبُونَ ۞
ಪುನರುತ್ಥಾನ ದಿನ, ತನ್ನ ಮುಖವನ್ನು ಆ ಕೆಟ್ಟ ಶಿಕ್ಷೆಯಿಂದ ರಕ್ಷಿಸಲು ಹೆಣಗುತ್ತಿರುವವನು (ಸ್ವರ್ಗವಾಸಿಗಳಿಗೆ ಸಮಾನನಾಗಬಲ್ಲನೇ)? ಅಂದು ಅಕ್ರಮಿಗಳೊಡನೆ ‘‘ಸವಿಯಿರಿ, ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನು’’ ಎನ್ನಲಾಗುವುದು.
39:25
كَذَّبَ الَّذِينَ مِنْ قَبْلِهِمْ فَأَتَاهُمُ الْعَذَابُ مِنْ حَيْثُ لَا يَشْعُرُونَ ۞
ಅವರಿಗಿಂತ ಹಿಂದಿನವರೂ (ಸತ್ಯವನ್ನು) ತಿರಸ್ಕರಿಸಿದ್ದರು. ಕೊನೆಗೆ ಅವರಿಗೆ ಅರಿವೇ ಇಲ್ಲದಂತೆ, ಅವರ ಮೇಲೆ ಶಿಕ್ಷೆಯು ಬಂದೆರಗಿತು.
39:26
فَأَذَاقَهُمُ اللَّهُ الْخِزْيَ فِي الْحَيَاةِ الدُّنْيَا ۖ وَلَعَذَابُ الْآخِرَةِ أَكْبَرُ ۚ لَوْ كَانُوا يَعْلَمُونَ ۞
ಅಲ್ಲಾಹನು ಈ ಲೋಕದ ಬದುಕಿನಲ್ಲೇ ಅವರಿಗೆ ನಷ್ಟದ ರುಚಿಯನ್ನು ಉಣಿಸಿದನು. ಇನ್ನು ಪರಲೋಕದ ಶಿಕ್ಷೆಯಂತು ಇದಕ್ಕಿಂತ ತುಂಬಾ ದೊಡ್ಡದಾಗಿರುವುದು. ಅವರು ಇದನ್ನು ಅರಿತಿರಬೇಕಿತ್ತು.
39:27
وَلَقَدْ ضَرَبْنَا لِلنَّاسِ فِي هَٰذَا الْقُرْآنِ مِنْ كُلِّ مَثَلٍ لَعَلَّهُمْ يَتَذَكَّرُونَ ۞
ಖಂಡಿತವಾಗಿಯೂ ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿರುವೆವು - ಅವರು ಉಪದೇಶವನ್ನು ಸ್ವೀಕರಿಸಬೇಕೆಂದು.
39:28
قُرْآنًا عَرَبِيًّا غَيْرَ ذِي عِوَجٍ لَعَلَّهُمْ يَتَّقُونَ ۞
ಅರಬೀ ಭಾಷೆಯಲ್ಲಿರುವ, ಯಾವ ವಕ್ರತೆಯೂ ಇಲ್ಲದ ಕುರ್‌ಆನ್. ಅವರು ಧರ್ಮನಿಷ್ಠರಾಗಬೇಕೆಂದು (ಇದನ್ನು ಕಳುಹಿಸಲಾಗಿದೆ.).
39:29
ضَرَبَ اللَّهُ مَثَلًا رَجُلًا فِيهِ شُرَكَاءُ مُتَشَاكِسُونَ وَرَجُلًا سَلَمًا لِرَجُلٍ هَلْ يَسْتَوِيَانِ مَثَلًا ۚ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ ۞
ಅಲ್ಲಾಹನು ಒಂದು ಉದಾಹರಣೆಯನ್ನು ಮುಂದಿಡುತ್ತಾನೆ: ಒಬ್ಬನು ಪರಸ್ಪರರ ಪಾಲಿಗೆ ತೀರಾ ಹಠಮಾರಿಗಳಾಗಿರುವ ಹಲವರ ದಾಸನಾಗಿದ್ದಾನೆ ಮತ್ತು ಇನ್ನೊಬ್ಬನು ಕೇವಲ ಒಬ್ಬನ ದಾಸನಾಗಿದ್ದಾನೆ. ಅವರಿಬ್ಬರ ಸ್ಥಿತಿಯು ಸಮಾನವಾಗಿರಲು ಸಾಧ್ಯವೇ? ಅಲ್ಲಾಹನಿಗೆ ಸ್ತುತಿಗಳು. ಆದರೆ, ಹೆಚ್ಚಿನವರು ಅರಿತಿಲ್ಲ.
39:30
إِنَّكَ مَيِّتٌ وَإِنَّهُمْ مَيِّتُونَ ۞
(ದೂತರೇ,) ನೀವು ಖಂಡಿತ ಸಾಯುವಿರಿ ಮತ್ತು ಅವರೂ (ವಿರೋಧಿಗಳೂ) ಖಂಡಿತ ಸಾಯುವರು.
39:31
ثُمَّ إِنَّكُمْ يَوْمَ الْقِيَامَةِ عِنْدَ رَبِّكُمْ تَخْتَصِمُونَ ۞
ಮತ್ತು ನೀವು (ವಿರೋಧಿಗಳು) ಪುನರುತ್ಥಾನದಿನ ನಿಮ್ಮ ಒಡೆಯನ ಮುಂದೆ ಖಂಡಿತ ಪರಸ್ಪರ ಜಗಳಾಡುವಿರಿ.
39:32
۞ فَمَنْ أَظْلَمُ مِمَّنْ كَذَبَ عَلَى اللَّهِ وَكَذَّبَ بِالصِّدْقِ إِذْ جَاءَهُ ۚ أَلَيْسَ فِي جَهَنَّمَ مَثْوًى لِلْكَافِرِينَ ۞
ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಹಾಗೂ ಸತ್ಯವು ತನ್ನ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿದವನಿಗಿಂತ ದೊಡ್ಡ ಅಕ್ರಮಿ ಯಾರು? ಧಿಕ್ಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ?
39:33
وَالَّذِي جَاءَ بِالصِّدْقِ وَصَدَّقَ بِهِ ۙ أُولَٰئِكَ هُمُ الْمُتَّقُونَ ۞
ಸತ್ಯವನ್ನು ತಂದವನು ಮತ್ತು ಅದನ್ನು ಸಮರ್ಥಿಸಿದವನು - ಅವರೇ ಧರ್ಮನಿಷ್ಠರು.
39:34
لَهُمْ مَا يَشَاءُونَ عِنْدَ رَبِّهِمْ ۚ ذَٰلِكَ جَزَاءُ الْمُحْسِنِينَ ۞
ಅವರಿಗಾಗಿ ಅವರ ಒಡೆಯನ ಬಳಿ, ಅವರು ಬಯಸಿದ್ದೆಲ್ಲವೂ ಇದೆ. ಅದುವೇ ಸತ್ಕರ್ಮಿಗಳ ಪ್ರತಿಫಲ.
39:35
لِيُكَفِّرَ اللَّهُ عَنْهُمْ أَسْوَأَ الَّذِي عَمِلُوا وَيَجْزِيَهُمْ أَجْرَهُمْ بِأَحْسَنِ الَّذِي كَانُوا يَعْمَلُونَ ۞
ಅಲ್ಲಾಹನು ಅವರ ಕರ್ಮಗಳಲ್ಲಿನ ದೋಷಗಳನ್ನು ನಿವಾರಿಸುವನು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗನುಸಾರ ಅವರಿಗೆ ಅವರ ಪ್ರತಿಫಲವನ್ನು ನೀಡುವನು.
39:36
أَلَيْسَ اللَّهُ بِكَافٍ عَبْدَهُ ۖ وَيُخَوِّفُونَكَ بِالَّذِينَ مِنْ دُونِهِ ۚ وَمَنْ يُضْلِلِ اللَّهُ فَمَا لَهُ مِنْ هَادٍ ۞
ತನ್ನ ದಾಸರ ಪಾಲಿಗೆ ಅಲ್ಲಾಹನು ಸಾಕಾಗಲಾರನೇ? ಅವರು ನಿಮ್ಮನ್ನು ಅವನ ಹೊರತು ಇತರರ ಹೆಸರಲ್ಲಿ ಹೆದರಿಸುತ್ತಾರೆ. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವರಿಗೆ ಯಾರೂ ಸರಿ ದಾರಿಯನ್ನು ತೋರಲಾರರು.
39:37
وَمَنْ يَهْدِ اللَّهُ فَمَا لَهُ مِنْ مُضِلٍّ ۗ أَلَيْسَ اللَّهُ بِعَزِيزٍ ذِي انْتِقَامٍ ۞
ಇನ್ನು, ಅಲ್ಲಾಹನೇ ಸರಿದಾರಿಯಲ್ಲಿ ನಡೆಸಿದವರನ್ನು ಯಾರೂ ದಾರಿ ತಪ್ಪಿಸಲಾರರು. ಪ್ರಬಲನಾದ ಅಲ್ಲಾಹನೇನು ಪ್ರತೀಕಾರ ತೀರಿಸಲಾರನೇ?
39:38
وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلْ أَفَرَأَيْتُمْ مَا تَدْعُونَ مِنْ دُونِ اللَّهِ إِنْ أَرَادَنِيَ اللَّهُ بِضُرٍّ هَلْ هُنَّ كَاشِفَاتُ ضُرِّهِ أَوْ أَرَادَنِي بِرَحْمَةٍ هَلْ هُنَّ مُمْسِكَاتُ رَحْمَتِهِ ۚ قُلْ حَسْبِيَ اللَّهُ ۖ عَلَيْهِ يَتَوَكَّلُ الْمُتَوَكِّلُونَ ۞
ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರು? ಎಂದು ನೀವು ಅವರೊಡನೆ ಕೇಳಿದರೆ, ಖಂಡಿತ ಅಲ್ಲಾಹನೆಂದೇ ಅವರು ಹೇಳುವರು. ಹೇಳಿರಿ; ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರನ್ನು ನೀವು ನೋಡಿದಿರಾ? ಅಲ್ಲಾಹನು ನನಗೇನಾದರೂ ಹಾನಿ ಮಾಡ ಬಯಸಿದರೆ, ಅವರು ಅವನ ಹಾನಿಯನ್ನು ನಿವಾರಿಸಬಲ್ಲರೇ? ಅಥವಾ ಅವನು ನನ್ನನ್ನು ಅನುಗ್ರಹಿಸಲು ಬಯಸಿದರೆ, ಅವರು ಆತನ ಅನುಗ್ರಹವನ್ನು ತಡೆಯಬಲ್ಲರೇ? ಹೇಳಿರಿ; ನನಗಂತು ಅಲ್ಲಾಹನೇ ಸಾಕು. ಅವಲಂಬಿಸುವವರು ಅವನನ್ನೇ ಅವಲಂಬಿಸುತ್ತಾರೆ.
39:39
قُلْ يَا قَوْمِ اعْمَلُوا عَلَىٰ مَكَانَتِكُمْ إِنِّي عَامِلٌ ۖ فَسَوْفَ تَعْلَمُونَ ۞
ಹೇಳಿರಿ; ನನ್ನ ಜನಾಂಗದವರೇ, ನಿಮ್ಮ ಸ್ಥಾನದಲ್ಲಿ ನೀವು ಸಕ್ರಿಯರಾಗಿರಿ. ನಾನೂ ಸಕ್ರಿಯನಾಗಿರುತ್ತೇನೆ. ನಿಮಗೆ ಬೇಗನೇ ತಿಳಿಯಲಿದೆ -
39:40
مَنْ يَأْتِيهِ عَذَابٌ يُخْزِيهِ وَيَحِلُّ عَلَيْهِ عَذَابٌ مُقِيمٌ ۞
- ಅಪಮಾನಕಾರಿಯಾದ ಶಿಕ್ಷೆ ಹಾಗೂ ಶಾಶ್ವತವಾದ ಶಿಕ್ಷೆಯು ಯಾರ ಮೇಲೆ ಬಂದೆರಗುವುದೆಂದು.
39:41
إِنَّا أَنْزَلْنَا عَلَيْكَ الْكِتَابَ لِلنَّاسِ بِالْحَقِّ ۖ فَمَنِ اهْتَدَىٰ فَلِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۖ وَمَا أَنْتَ عَلَيْهِمْ بِوَكِيلٍ ۞
(ದೂತರೇ,) ಖಂಡಿತವಾಗಿಯೂ ನಾವು ನಿಮಗೆ ಮಾನವರಿಗಾಗಿ, ಸತ್ಯದೊಂದಿಗೆ, ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದೀಗ ಯಾರಾದರೂ ಸನ್ಮಾರ್ಗವನ್ನು ಅನುಸರಿಸಿದರೆ ಅದು ಅವನದೇ ಹಿತಕ್ಕಾಗಿರುವುದು ಮತ್ತು ಯಾರಾದರೂ ತಪ್ಪುದಾರಿ ಹಿಡಿದರೆ, ಅದರ ಹೊಣೆಯೂ ಅವನ ಮೇಲೆಯೇ ಇರುವುದು. ನೀವು ಅವರ ಮೇಲಿನ ಕಾವಲುಗಾರರೇನೂ ಅಲ್ಲ.
39:42
اللَّهُ يَتَوَفَّى الْأَنْفُسَ حِينَ مَوْتِهَا وَالَّتِي لَمْ تَمُتْ فِي مَنَامِهَا ۖ فَيُمْسِكُ الَّتِي قَضَىٰ عَلَيْهَا الْمَوْتَ وَيُرْسِلُ الْأُخْرَىٰ إِلَىٰ أَجَلٍ مُسَمًّى ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ ۞
ಅಲ್ಲಾಹನು ಆತ್ಮಗಳನ್ನು ಅವುಗಳ ಮರಣದ ವೇಳೆ ವಶಪಡಿಸಿಕೊಳ್ಳುತ್ತಾನೆ. ಮತ್ತು ಮೃತವಾಗದ ಆತ್ಮಗಳನ್ನೂ ಅವನು, ಅವುಗಳ ನಿದ್ದೆಯ ವೇಳೆಯಲ್ಲಿ ವಶಪಡಿಸಿಕೊಂಡಿರುತ್ತಾನೆ - ಆ ಪೈಕಿ ಮರಣವು ವಿಧಿಸಲಾಗಿರುವ ಜೀವವನ್ನು ಮಾತ್ರ ಅವನು ತಡೆದಿಟ್ಟು ಕೊಳ್ಳುತ್ತಾನೆ ಹಾಗೂ ಇತರ ಆತ್ಮಗಳನ್ನು ಒಂದು ನಿರ್ದಿಷ್ಟ ಅವಧಿಗಾಗಿ ಮರಳಿಸುತ್ತಾನೆ. ಚಿಂತಿಸುವ ಜನರಿಗೆ ಇದರಲ್ಲಿ ಖಂಡಿತ ಪಾಠಗಳಿವೆ.
39:43
أَمِ اتَّخَذُوا مِنْ دُونِ اللَّهِ شُفَعَاءَ ۚ قُلْ أَوَلَوْ كَانُوا لَا يَمْلِكُونَ شَيْئًا وَلَا يَعْقِلُونَ ۞
ಅವರೇನು ಅಲ್ಲಾಹನ ಹೊರತು ಅನ್ಯರನ್ನು ಶಿಫಾರಸ್ಸುದಾರರಾಗಿಸಿಕೊಂಡಿರುವರೇ? ಹೇಳಿರಿ; ಅವರ ಬಳಿ ಯಾವುದೇ ಅಧಿಕಾರವಿಲ್ಲದಿದ್ದರೂ, ಅವರಿಗೆ ಏನೂ ಅರ್ಥವಾಗದಿದ್ದರೂ (ನೀವೇನು ಅವರನ್ನೇ ಅವಲಂಬಿಸುವಿರಾ)?
39:44
قُلْ لِلَّهِ الشَّفَاعَةُ جَمِيعًا ۖ لَهُ مُلْكُ السَّمَاوَاتِ وَالْأَرْضِ ۖ ثُمَّ إِلَيْهِ تُرْجَعُونَ ۞
ಹೇಳಿರಿ; ಶಿಫಾರಸಿನ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೂ ಅವನಿಗೇ ಸೇರಿದೆ. ಕೊನೆಗೆ ನೀವೆಲ್ಲಾ ಅವನೆಡೆಗೇ ಮರಳುವಿರಿ.
39:45
وَإِذَا ذُكِرَ اللَّهُ وَحْدَهُ اشْمَأَزَّتْ قُلُوبُ الَّذِينَ لَا يُؤْمِنُونَ بِالْآخِرَةِ ۖ وَإِذَا ذُكِرَ الَّذِينَ مِنْ دُونِهِ إِذَا هُمْ يَسْتَبْشِرُونَ ۞
ಏಕಮಾತ್ರನಾದ ಅಲ್ಲಾಹನ ಪ್ರಸ್ತಾಪವೆತ್ತಿದೊಡನೆ, ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳಲ್ಲಿ ಜಿಗುಪ್ಸೆ ಉಕ್ಕುತ್ತದೆ ಮತ್ತು ಅವನ ಹೊರತು ಇತರರನ್ನು ಪ್ರಸ್ತಾಪಿಸಿದೊಡನೆ ಅವರು ಸಂತುಷ್ಟರಾಗಿ ಬಿಡುತ್ತಾರೆ.
39:46
قُلِ اللَّهُمَّ فَاطِرَ السَّمَاوَاتِ وَالْأَرْضِ عَالِمَ الْغَيْبِ وَالشَّهَادَةِ أَنْتَ تَحْكُمُ بَيْنَ عِبَادِكَ فِي مَا كَانُوا فِيهِ يَخْتَلِفُونَ ۞
ಹೇಳಿರಿ; ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿರುವ, ಗುಪ್ತ ಹಾಗೂ ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಅಲ್ಲಾಹನೇ, ನಿನ್ನ ದಾಸರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡುವವನು ನೀನೇ.
39:47
وَلَوْ أَنَّ لِلَّذِينَ ظَلَمُوا مَا فِي الْأَرْضِ جَمِيعًا وَمِثْلَهُ مَعَهُ لَافْتَدَوْا بِهِ مِنْ سُوءِ الْعَذَابِ يَوْمَ الْقِيَامَةِ ۚ وَبَدَا لَهُمْ مِنَ اللَّهِ مَا لَمْ يَكُونُوا يَحْتَسِبُونَ ۞
ಅಕ್ರಮವೆಸಗಿದವರ ಬಳಿ, ಭೂಮಿಯಲ್ಲಿರುವ ಎಲ್ಲವೂ ಹಾಗೂ ಅಷ್ಟೇ ಪ್ರಮಾಣದ ಇನ್ನಷ್ಟು (ಸಂಪತ್ತು) ಇದ್ದರೂ ಪುನರುತ್ಥಾನ ದಿನದ ಶಿಕ್ಷೆಯಿಂದ ಮುಕ್ತರಾಗಲು ಅವರು ಅದೆಲ್ಲವನ್ನೂ ಕೊಟ್ಟು ಬಿಡಲು ಮುಂದಾಗುವರು. ಆದರೆ, ಅವರು ಊಹಿಸಿಯೂ ಇಲ್ಲದ್ದನ್ನು (ಅಂತಹ ಘೋರ ಶಿಕ್ಷೆಯನ್ನು) ಅಲ್ಲಾಹನು ಅವರ ಮುಂದೆ ಅನಾವರಣಗೊಳಿಸುವನು.
39:48
وَبَدَا لَهُمْ سَيِّئَاتُ مَا كَسَبُوا وَحَاقَ بِهِمْ مَا كَانُوا بِهِ يَسْتَهْزِئُونَ ۞
ಮತ್ತು ಆ ದಿನ, ಅವರು ಮಾಡುತ್ತಿದ್ದ ಎಲ್ಲ ದುಷ್ಟ ಕೃತ್ಯಗಳು ಅವರ ಮುಂದೆ ಪ್ರಕಟವಾಗುವವು ಹಾಗೂ ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿಕೊಳ್ಳುವುದು.
39:49
فَإِذَا مَسَّ الْإِنْسَانَ ضُرٌّ دَعَانَا ثُمَّ إِذَا خَوَّلْنَاهُ نِعْمَةً مِنَّا قَالَ إِنَّمَا أُوتِيتُهُ عَلَىٰ عِلْمٍ ۚ بَلْ هِيَ فِتْنَةٌ وَلَٰكِنَّ أَكْثَرَهُمْ لَا يَعْلَمُونَ ۞
ಮನುಷ್ಯನಿಗೆ ಏನಾದರೂ ಸಂಕಟವಾದಾಗ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ಆ ಬಳಿಕ ನಾವು ನಮ್ಮ ಕಡೆಯಿಂದ ಆತನಿಗೇನಾದರೂ ಕೊಡುಗೆಯನ್ನು ದಯಪಾಲಿಸಿದರೆ ಅವನು, ಅದನ್ನು ನನಗೆ ನನ್ನ ಜ್ಞಾನದ ಆಧಾರದಲ್ಲಿ ನೀಡಲಾಗಿದೆ ಎನ್ನುತ್ತಾನೆ. ನಿಜವಾಗಿ ಅದೊಂದು ಪರೀಕ್ಷೆಯಾಗಿದೆ. ಆದರೆ, ಹೆಚ್ಚಿನವರು ಇದನ್ನು ತಿಳಿದಿಲ್ಲ.
39:50
قَدْ قَالَهَا الَّذِينَ مِنْ قَبْلِهِمْ فَمَا أَغْنَىٰ عَنْهُمْ مَا كَانُوا يَكْسِبُونَ ۞
ಅವರಿಗಿಂತ ಹಿಂದಿನವರೂ ಖಂಡಿತ, ಇದನ್ನೇ ಹೇಳಿದ್ದರು. ಆದರೆ, ತಮ್ಮ ಕೃತ್ಯಗಳಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ.
39:51
فَأَصَابَهُمْ سَيِّئَاتُ مَا كَسَبُوا ۚ وَالَّذِينَ ظَلَمُوا مِنْ هَٰؤُلَاءِ سَيُصِيبُهُمْ سَيِّئَاتُ مَا كَسَبُوا وَمَا هُمْ بِمُعْجِزِينَ ۞
ಅವರು ಮಾಡಿದ ದುಷ್ಟ ಕೃತ್ಯಗಳು ಅವರ ಮೇಲೆಯೇ ಬಂದೆರಗಿದವು. (ಇದೀಗ) ಆ ಜನರ ಪೈಕಿ ಅಕ್ರಮವೆಸಗಿದವರು ಮಾಡಿರುವ ದುಷ್ಟ ಕೃತ್ಯಗಳು ಬಹು ಬೇಗನೇ ಅವರ ಮೇಲೆ ಬಂದೆರಗಲಿವೆ. (ಅಲ್ಲಾಹನನ್ನು) ನಿರ್ಬಂಧಿಸಲು ಅವರಿಂದ ಸಾಧ್ಯವಿಲ್ಲ.
39:52
أَوَلَمْ يَعْلَمُوا أَنَّ اللَّهَ يَبْسُطُ الرِّزْقَ لِمَنْ يَشَاءُ وَيَقْدِرُ ۚ إِنَّ فِي ذَٰلِكَ لَآيَاتٍ لِقَوْمٍ يُؤْمِنُونَ ۞
ಸಂಪನ್ನತೆಯನ್ನು ಅಲ್ಲಾಹನು ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರ ಪಾಲಿಗೆ ಸೀಮಿತಗೊಳಿಸುತ್ತಾನೆ ಎಂಬುದು ಅವರಿಗೆ ತಿಳಿಯದೇ? ಖಂಡಿತವಾಗಿಯೂ ವಿಶ್ವಾಸಿಗಳಿಗೆ ಇದರಲ್ಲಿ ಧಾರಾಳ ಪಾಠಗಳಿವೆ.
39:53
۞ قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ ۞
ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ (ಅಲ್ಲಾಹನ) ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
39:54
وَأَنِيبُوا إِلَىٰ رَبِّكُمْ وَأَسْلِمُوا لَهُ مِنْ قَبْلِ أَنْ يَأْتِيَكُمُ الْعَذَابُ ثُمَّ لَا تُنْصَرُونَ ۞
ನೀವಿನ್ನು ನಿಮ್ಮ ಒಡೆಯನ ಕಡೆಗೆ ಗಮನ ಹರಿಸಿರಿ ಮತ್ತು ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವ ಹಾಗೂ ನಿಮಗೆ ಎಲ್ಲಿಂದಲೂ ನೆರವು ಸಿಗದ ಸ್ಥಿತಿ ಬರುವುದಕ್ಕಿಂತ ಮುನ್ನ ಅವನಿಗೆ ಶರಣಾಗಿ ಬಿಡಿರಿ.
39:55
وَاتَّبِعُوا أَحْسَنَ مَا أُنْزِلَ إِلَيْكُمْ مِنْ رَبِّكُمْ مِنْ قَبْلِ أَنْ يَأْتِيَكُمُ الْعَذَابُ بَغْتَةً وَأَنْتُمْ لَا تَشْعُرُونَ ۞
ಮತ್ತು ನಿಮಗೆ ಅರಿವೇ ಇಲ್ಲದಂತೆ, ಹಠಾತ್ತನೆ ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವುದಕ್ಕೆ ಮುನ್ನ, ನೀವು ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿ ಕೊಡಲಾಗಿರುವ ಸಂದೇಶದ ಅತ್ಯುತ್ತಮ ವ್ಯಾಖ್ಯಾನವನ್ನು ಅನುಸರಿಸಿರಿ.
39:56
أَنْ تَقُولَ نَفْسٌ يَا حَسْرَتَا عَلَىٰ مَا فَرَّطْتُ فِي جَنْبِ اللَّهِ وَإِنْ كُنْتُ لَمِنَ السَّاخِرِينَ ۞
ಏಕೆಂದರೆ ಅಂದು ಯಾರೂ, ಅಯ್ಯೋ ನನ್ನ ದುಸ್ಥಿತಿ! ಅಲ್ಲಾಹನ ವಿಷಯದಲ್ಲಿ ನನ್ನಿಂದ ಪ್ರಮಾದಗಳಾದವು ಹಾಗೂ ನಾನು (ಸತ್ಯವನ್ನು) ಗೇಲಿ ಮಾಡಿದ್ದೆ, ಎನ್ನುವಂತಾಗಬಾರದು.
39:57
أَوْ تَقُولَ لَوْ أَنَّ اللَّهَ هَدَانِي لَكُنْتُ مِنَ الْمُتَّقِينَ ۞
ಅಥವಾ ಯಾರೂ, ಅಲ್ಲಾಹನು ನನಗೆ ಸರಿದಾರಿ ತೋರಿದ್ದರೆ ನಾನು ಧರ್ಮ ನಿಷ್ಠನಾಗಿರುತ್ತಿದ್ದೆ ಎನ್ನುವಂತಾಗಬಾರದು.
39:58
أَوْ تَقُولَ حِينَ تَرَى الْعَذَابَ لَوْ أَنَّ لِي كَرَّةً فَأَكُونَ مِنَ الْمُحْسِنِينَ ۞
ಅಥವಾ ಯಾರೂ, ಶಿಕ್ಷೆಯನ್ನು ಕಂಡು, ನನಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾನು ಸಜ್ಜನನಾಗಿ ಬದುಕುತ್ತಿದ್ದೆ ಎನ್ನುವಂತಾಗಬಾರದು.
39:59
بَلَىٰ قَدْ جَاءَتْكَ آيَاتِي فَكَذَّبْتَ بِهَا وَاسْتَكْبَرْتَ وَكُنْتَ مِنَ الْكَافِرِينَ ۞
(ಆಗ ಅಲ್ಲಾಹನು ಹೇಳುವನು;) ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದವು. ಆದರೆ, ನೀನು ಅವುಗಳನ್ನು ತಿರಸ್ಕರಿಸಿದೆ, ಅಹಂಕಾರ ತೋರಿದೆ ಮತ್ತು ನೀನು ಧಿಕ್ಕಾರಿಯಾಗಿದ್ದೆ.
39:60
وَيَوْمَ الْقِيَامَةِ تَرَى الَّذِينَ كَذَبُوا عَلَى اللَّهِ وُجُوهُهُمْ مُسْوَدَّةٌ ۚ أَلَيْسَ فِي جَهَنَّمَ مَثْوًى لِلْمُتَكَبِّرِينَ ۞
ಪುನರುತ್ಥಾನ ದಿನ ನೀವು ಕಾಣುವಿರಿ; ಅಲ್ಲಾಹನ ಕುರಿತು ಸುಳ್ಳು ಹೇಳಿದವರ ಮುಖಗಳು ಕರಾಳವಾಗಿರುವವು. ಅಹಂಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ?
39:61
وَيُنَجِّي اللَّهُ الَّذِينَ اتَّقَوْا بِمَفَازَتِهِمْ لَا يَمَسُّهُمُ السُّوءُ وَلَا هُمْ يَحْزَنُونَ ۞
ಧರ್ಮನಿಷ್ಠರಾಗಿದ್ದವರಿಗೆ ಅಲ್ಲಾಹನು ಯಶಸ್ಸಿನ ಜೊತೆ ಮುಕ್ತಿಯನ್ನು ನೀಡುವನು. ಯಾವ ಸಂಕಟವೂ ಅವರನ್ನು ತಟ್ಟದು ಮತ್ತು ಅವರು ದುಃಖಿತರಾಗಲಾರರು.
39:62
اللَّهُ خَالِقُ كُلِّ شَيْءٍ ۖ وَهُوَ عَلَىٰ كُلِّ شَيْءٍ وَكِيلٌ ۞
ಅಲ್ಲಾಹನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನೇ ಎಲ್ಲ ವಸ್ತುಗಳ ಮೇಲ್ವಿಚಾರಕನು.
39:63
لَهُ مَقَالِيدُ السَّمَاوَاتِ وَالْأَرْضِ ۗ وَالَّذِينَ كَفَرُوا بِآيَاتِ اللَّهِ أُولَٰئِكَ هُمُ الْخَاسِرُونَ ۞
ಆಕಾಶಗಳ ಹಾಗೂ ಭೂಮಿಯ ಚಾವಿಗಳು ಅವನ ಬಳಿ ಇವೆ. ಅಲ್ಲಾಹನ ವಚನಗಳನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸುವವರಾಗಿದ್ದಾರೆ.
39:64
قُلْ أَفَغَيْرَ اللَّهِ تَأْمُرُونِّي أَعْبُدُ أَيُّهَا الْجَاهِلُونَ ۞
ಹೇಳಿರಿ; ಅಜ್ಞಾನಿಗಳೇ, ನಾನು ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಕೆಂದು ನೀವು ನನಗೆ ಆದೇಶಿಸುತ್ತೀರಾ?
39:65
وَلَقَدْ أُوحِيَ إِلَيْكَ وَإِلَى الَّذِينَ مِنْ قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ الْخَاسِرِينَ ۞
(ದೂತರೇ), ನೀವು (ದೇವತ್ವದಲ್ಲಿ) ಪಾಲುದಾರರನ್ನು ಸೇರಿಸಿದರೆ, ನಿಮ್ಮ ಎಲ್ಲ ಕರ್ಮಗಳು ವ್ಯರ್ಥವಾಗುವವು ಮತ್ತು ನೀವು ನಷ್ಟ ಅನುಭವಿಸಿದವರ ಸಾಲಿಗೆ ಸೇರುವಿರೆಂದು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯವಾಣಿಯನ್ನು ಕಳಿಸಲಾಗಿತ್ತು;.
39:66
بَلِ اللَّهَ فَاعْبُدْ وَكُنْ مِنَ الشَّاكِرِينَ ۞
ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಕೃತಜ್ಞರ ಸಾಲಿಗೆ ಸೇರಿರಿ.
39:67
وَمَا قَدَرُوا اللَّهَ حَقَّ قَدْرِهِ وَالْأَرْضُ جَمِيعًا قَبْضَتُهُ يَوْمَ الْقِيَامَةِ وَالسَّمَاوَاتُ مَطْوِيَّاتٌ بِيَمِينِهِ ۚ سُبْحَانَهُ وَتَعَالَىٰ عَمَّا يُشْرِكُونَ ۞
ಅವರು ಅಲ್ಲಾಹನನ್ನು ಗುರುತಿಸಬೇಕಾದ ರೀತಿಯಲ್ಲಿ ಗುರುತಿಸಿಲ್ಲ. ಪುನರುತ್ಥಾನ ದಿನ ಸಂಪೂರ್ಣ ಭೂಮಿಯು ಅವನ ಮುಷ್ಠಿಯೊಳಗಿರುವುದು ಮತ್ತು ಆಕಾಶಗಳೆಲ್ಲಾ ಮಡಚಿದ ಸ್ಥಿತಿಯಲ್ಲಿ ಅವನ ಬಲಗೈಯಲ್ಲಿರುವವು. ಅವನು ಪರಿಶುದ್ಧನು ಹಾಗೂ ಅವರು (ಅವನೊಂದಿಗೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿರುವನು.
39:68
وَنُفِخَ فِي الصُّورِ فَصَعِقَ مَنْ فِي السَّمَاوَاتِ وَمَنْ فِي الْأَرْضِ إِلَّا مَنْ شَاءَ اللَّهُ ۖ ثُمَّ نُفِخَ فِيهِ أُخْرَىٰ فَإِذَا هُمْ قِيَامٌ يَنْظُرُونَ ۞
(ಲೋಕಾಂತ್ಯದ) ಕಹಳೆ ಊದಲಾದಾಗ ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬನೂ ಪ್ರಜ್ಞಾಹೀನನಾಗಿ ಬಿಡುವನು - ಅಲ್ಲಾಹನಿಚ್ಛಿಸಿದವನ ಹೊರತು. ಮತ್ತೊಮ್ಮೆ ಕಹಳೆ ಊದಲಾದಾಗ ಅವರೆಲ್ಲರೂ ಎದ್ದು ನಿಂತು (ಅಚ್ಚರಿಯಿಂದ) ನೋಡ ತೊಡಗುವರು.
39:69
وَأَشْرَقَتِ الْأَرْضُ بِنُورِ رَبِّهَا وَوُضِعَ الْكِتَابُ وَجِيءَ بِالنَّبِيِّينَ وَالشُّهَدَاءِ وَقُضِيَ بَيْنَهُمْ بِالْحَقِّ وَهُمْ لَا يُظْلَمُونَ ۞
ಮತ್ತು ಭೂಮಿಯು ತನ್ನ ಒಡೆಯನ ಪ್ರಕಾಶದಿಂದ ಬೆಳಗಿ ಬಿಡುವುದು ಹಾಗೂ (ಕರ್ಮಗಳ) ಗ್ರಂಥವನ್ನು ತೆರೆದಿಡಲಾಗುವುದು ಮತ್ತು ದೂತರನ್ನೂ ಸಾಕ್ಷಿಗಳನ್ನೂ ಮುಂದೆ ತರಲಾಗುವುದು ಹಾಗೂ ಅವರ (ಜನರ) ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು. ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು.
39:70
وَوُفِّيَتْ كُلُّ نَفْسٍ مَا عَمِلَتْ وَهُوَ أَعْلَمُ بِمَا يَفْعَلُونَ ۞
(ಅಂದು) ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಸಂಪೂರ್ಣ ಪ್ರತಿಫಲವು ಸಿಗುವುದು. ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಚೆನ್ನಾಗಿ ಅರಿತಿರುವನು.
39:71
وَسِيقَ الَّذِينَ كَفَرُوا إِلَىٰ جَهَنَّمَ زُمَرًا ۖ حَتَّىٰ إِذَا جَاءُوهَا فُتِحَتْ أَبْوَابُهَا وَقَالَ لَهُمْ خَزَنَتُهَا أَلَمْ يَأْتِكُمْ رُسُلٌ مِنْكُمْ يَتْلُونَ عَلَيْكُمْ آيَاتِ رَبِّكُمْ وَيُنْذِرُونَكُمْ لِقَاءَ يَوْمِكُمْ هَٰذَا ۚ قَالُوا بَلَىٰ وَلَٰكِنْ حَقَّتْ كَلِمَةُ الْعَذَابِ عَلَى الْكَافِرِينَ ۞
(ಅಂದು) ಧಿಕ್ಕಾರಿಗಳನ್ನು ದಂಡು ದಂಡುಗಳಾಗಿ ಅಟ್ಟಿಸಿಕೊಂಡು ನರಕದೆಡೆಗೆ ಸಾಗಿಸಲಾಗುವುದು. ಅವರು ಅಲ್ಲಿಗೆ ತಲುಪಿದಾಗ ನರಕದ ಬಾಗಿಲುಗಳನ್ನು ತೆರೆದು ಬಿಡಲಾಗುವುದು. ಆಗ ಅಲ್ಲಿನ (ನರಕದ) ಪಾಲಕರು ಅವರೊಡನೆ, ‘‘ನಿಮ್ಮ ಒಡೆಯನ ವಚನಗಳನ್ನು ನಿಮಗೆ ಓದಿ ಕೇಳಿಸುವ ಮತ್ತು ಈ ದಿನವನ್ನು ಎದುರಿಸಲಿಕ್ಕಿದೆ ಎಂದು ನಿಮ್ಮನ್ನು ಎಚ್ಚರಿಸುವ ದೂತರು ಯಾರೂ ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು ‘‘ಖಂಡಿತ ಬಂದಿದ್ದರು’’ ಎನ್ನುವರು. ಆದರೆ, ಅದಾಗಲೇ ಧಿಕ್ಕಾರಿಗಳ ವಿರುದ್ಧ ಶಿಕ್ಷೆಯ ಆದೇಶವು ಜಾರಿಯಾಗಿರುವುದು.
39:72
قِيلَ ادْخُلُوا أَبْوَابَ جَهَنَّمَ خَالِدِينَ فِيهَا ۖ فَبِئْسَ مَثْوَى الْمُتَكَبِّرِينَ ۞
ಅವರೊಡನೆ, ‘‘ನರಕದ ಬಾಗಿಲುಗಳೊಳಗೆ ಪ್ರವೇಶಿಸಿ, ಶಾಶ್ವತವಾಗಿ ಅದರೊಳಗೆ ವಾಸಿಸಿರಿ’’ ಎನ್ನಲಾಗುವುದು. ಹೀಗೆ, ಅಹಂಕಾರಿಗಳ ಅಂತಿಮ ನೆಲೆಯು ತೀರಾ ಕೆಟ್ಟದಾಗಿರುವುದು.
39:73
وَسِيقَ الَّذِينَ اتَّقَوْا رَبَّهُمْ إِلَى الْجَنَّةِ زُمَرًا ۖ حَتَّىٰ إِذَا جَاءُوهَا وَفُتِحَتْ أَبْوَابُهَا وَقَالَ لَهُمْ خَزَنَتُهَا سَلَامٌ عَلَيْكُمْ طِبْتُمْ فَادْخُلُوهَا خَالِدِينَ ۞
ತಮ್ಮ ಒಡೆಯನಿಗೆ ನಿಷ್ಠರಾಗಿದ್ದವರನ್ನು ದಂಡು ದಂಡುಗಳಾಗಿ ಸ್ವರ್ಗದೆಡೆಗೆ ಕರೆದೊಯ್ಯಲಾಗುವುದು. ಅವರು ಅಲ್ಲಿಗೆ ತಲುಪಿದಾಗ, ಅದರ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು ಅದರ ಪಾಲಕರು ಅವರೊಡನೆ ಹೇಳುವರು; ‘‘ನಿಮಗೆ ಶಾಂತಿ ಸಿಗಲಿ. ನೀವು ಸಜ್ಜನರು. ಶಾಶ್ವತವಾಗಿ ಇದರೊಳಗೆ ಪ್ರವೇಶಿಸಿರಿ.’’
39:74
وَقَالُوا الْحَمْدُ لِلَّهِ الَّذِي صَدَقَنَا وَعْدَهُ وَأَوْرَثَنَا الْأَرْضَ نَتَبَوَّأُ مِنَ الْجَنَّةِ حَيْثُ نَشَاءُ ۖ فَنِعْمَ أَجْرُ الْعَامِلِينَ ۞
ಅವರು ಹೇಳುವರು; ಪ್ರಶಂಸೆಗಳೆಲ್ಲಾ, ನಮಗೆ ನೀಡಿದ ತನ್ನ ವಾಗ್ದಾನವನ್ನು ಈಡೇರಿಸಿದ ಹಾಗೂ ನಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿಸಿದ ಅಲ್ಲಾಹನಿಗೆ ಸಲ್ಲಲಿ. ನಾವೀಗ ಸ್ವರ್ಗದಲ್ಲಿ ನಾವಿಚ್ಛಿಸುವಲ್ಲಿ ನೆಲೆಸಬಹುದು. ಎಷ್ಟೊಂದು ಚೆನ್ನಾಗಿದೆ ಸತ್ಕರ್ಮಿಗಳ ಪ್ರತಿಫಲ!
39:75
وَتَرَى الْمَلَائِكَةَ حَافِّينَ مِنْ حَوْلِ الْعَرْشِ يُسَبِّحُونَ بِحَمْدِ رَبِّهِمْ ۖ وَقُضِيَ بَيْنَهُمْ بِالْحَقِّ وَقِيلَ الْحَمْدُ لِلَّهِ رَبِّ الْعَالَمِينَ ۞
ಮತ್ತು ನೀವು ಕಾಣುವಿರಿ, ಮಲಕ್‌ಗಳು ವಿಶ್ವ ಸಿಂಹಾಸನದ ಸುತ್ತ ಸಾಲುಗಟ್ಟಿಕೊಂಡು, ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರ್ಯವನ್ನು ಜಪಿಸುತ್ತಿರುವರು. ಅವರ (ಜನರ) ನಡುವೆ ಅಂದು ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು ಮತ್ತು ಹೇಳಲಾಗುವುದು; ‘‘ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.’’