Al-Isra (The night journey)
17. ಬನೀ ಇಸ್ರಾಈಲ್ (ಇಸ್ರಾಈಲರ ಸಂತತಿ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
17:1
سُبْحَانَ الَّذِي أَسْرَىٰ بِعَبْدِهِ لَيْلًا مِنَ الْمَسْجِدِ الْحَرَامِ إِلَى الْمَسْجِدِ الْأَقْصَى الَّذِي بَارَكْنَا حَوْلَهُ لِنُرِيَهُ مِنْ آيَاتِنَا ۚ إِنَّهُ هُوَ السَّمِيعُ الْبَصِيرُ ۞
ರಾತ್ರಿಯ ವೇಳೆ ತನ್ನ ದಾಸನನ್ನು, ಮಸ್ಜಿದುಲ್ ಹರಾಮ್‌ನಿಂದ, ನಾವು ಪರಿಸರವನ್ನು ಸಮೃದ್ಧ ಗೊಳಿಸಿರುವ ಮಸ್ಜಿದುಲ್ ಅಕ್ಸಾದೆಡೆಗೆ ಕರೆದೊಯ್ದವನು ಪಾವನನು. ಇದು ಆತನಿಗೆ ನಮ್ಮ ಸಂಕೇತಗಳನ್ನು ತೋರಿಸಿಕೊಡುವುದಕ್ಕಾಗಿತ್ತು. ಅವನು (ಅಲ್ಲಾಹನು) ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.*
17:2
وَآتَيْنَا مُوسَى الْكِتَابَ وَجَعَلْنَاهُ هُدًى لِبَنِي إِسْرَائِيلَ أَلَّا تَتَّخِذُوا مِنْ دُونِي وَكِيلًا ۞
ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು ಮತ್ತು ಅದನ್ನು ಇಸ್ರಾಈಲರ ಸಂತತಿಗಳಿಗೆ ಮಾರ್ಗದರ್ಶಿಯಾಗಿ ಮಾಡಿದೆವು - ನೀವು ನನ್ನ ಹೊರತು ಬೇರೆ ಯಾರನ್ನೂ ಕಾರ್ಯ ಸಾಧಕನಾಗಿ ಅಂಗೀಕರಿಸಬಾರದು (ಎಂದು ಅದರಲ್ಲಿ ಬೋಧಿಸಲಾಗಿತ್ತು).
17:3
ذُرِّيَّةَ مَنْ حَمَلْنَا مَعَ نُوحٍ ۚ إِنَّهُ كَانَ عَبْدًا شَكُورًا ۞
ನಾವು ನೂಹ್‌ರ ಜೊತೆ (ಹಡಗನ್ನು) ಹತ್ತಿಸಿದ್ದವರ ಸಂತತಿಗಳೇ, ಅವರು (ನೂಹ್) ಖಂಡಿತ ಒಬ್ಬ ಕೃತಜ್ಞ ದಾಸರಾಗಿದ್ದರು.
17:4
وَقَضَيْنَا إِلَىٰ بَنِي إِسْرَائِيلَ فِي الْكِتَابِ لَتُفْسِدُنَّ فِي الْأَرْضِ مَرَّتَيْنِ وَلَتَعْلُنَّ عُلُوًّا كَبِيرًا ۞
ನಾವು ಇಸ್ರಾಈಲರ ಸಂತತಿಗಳಿಗೆ ಗ್ರಂಥದಲ್ಲೇ (ಹೀಗೆಂದು) ತಿಳಿಸಿಬಿಟ್ಟಿದ್ದೆವು: ನೀವು ಭೂಮಿಯಲ್ಲಿ ಎರಡು ಬಾರಿ ಅಶಾಂತಿಯನ್ನು ಹಬ್ಬುವಿರಿ ಮತ್ತು ಭಾರೀ ಬಂಡಾಯ ಮೆರೆಯುವಿರಿ.
17:5
فَإِذَا جَاءَ وَعْدُ أُولَاهُمَا بَعَثْنَا عَلَيْكُمْ عِبَادًا لَنَا أُولِي بَأْسٍ شَدِيدٍ فَجَاسُوا خِلَالَ الدِّيَارِ ۚ وَكَانَ وَعْدًا مَفْعُولًا ۞
ಅವೆರಡರ ಪೈಕಿ ಮೊದಲ ಅವಧಿ ಬಂದಾಗ, ತುಂಬಾ ಬಲಿಷ್ಠ ಹೋರಾಟಗಾರರಾಗಿರುವ ನಮ್ಮ ದಾಸರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು ಮತ್ತು ಅವರು ನಾಡುಗಳಿಗೆ ನುಗ್ಗಿ ವ್ಯಾಪಕ ವಿನಾಶವನ್ನು ಮೆರೆಯುವರು - ಈ ವಾಗ್ದಾನವು ಖಂಡಿತ ಈಡೇರುವುದು.
17:6
ثُمَّ رَدَدْنَا لَكُمُ الْكَرَّةَ عَلَيْهِمْ وَأَمْدَدْنَاكُمْ بِأَمْوَالٍ وَبَنِينَ وَجَعَلْنَاكُمْ أَكْثَرَ نَفِيرًا ۞
ಮುಂದೆ ನಾವು ಅವರ ವಿರುದ್ಧ ನಿಮಗೆ ಪ್ರಾಬಲ್ಯವನ್ನು ನೀಡುವೆವು ಮತ್ತು ಸಂಪತ್ತು ಹಾಗೂ ಸಂತಾನಗಳ ಮೂಲಕ ನಿಮಗೆ ನಾವು ನೆರವಾಗುವೆವು ಮತ್ತು ನಿಮ್ಮನ್ನು ಒಂದು ದೊಡ್ಡ ಪಡೆಯಾಗಿ ಬೆಳೆಸುವೆವು.
17:7
إِنْ أَحْسَنْتُمْ أَحْسَنْتُمْ لِأَنْفُسِكُمْ ۖ وَإِنْ أَسَأْتُمْ فَلَهَا ۚ فَإِذَا جَاءَ وَعْدُ الْآخِرَةِ لِيَسُوءُوا وُجُوهَكُمْ وَلِيَدْخُلُوا الْمَسْجِدَ كَمَا دَخَلُوهُ أَوَّلَ مَرَّةٍ وَلِيُتَبِّرُوا مَا عَلَوْا تَتْبِيرًا ۞
ನೀವು ಒಳಿತನ್ನು ಮಾಡಿದರೆ, ನಿಮಗಾಗಿಯೇ ಮಾಡುವಿರಿ ಮತ್ತು ಕೆಡುಕನ್ನು ಮಾಡಿದರೂ ನಿಮಗಾಗಿಯೇ ಮಾಡುವಿರಿ. ಮುಂದೆ, ಆ ಎರಡನೆಯ ಅವಧಿಯು ಬಂದು ಬಿಟ್ಟಾಗ (ಮತ್ತೆ ಕೆಲವರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು) - ನಿಮ್ಮ ಮುಖಗಳನ್ನು ವಿಕೃತಗೊಳಿಸಲಿಕ್ಕಾಗಿ, ಮೊದಲ ಬಾರಿ ನುಗ್ಗಿದಂತೆ (ಅಲ್‌ಅಕ್ಸಾ) ಮಸೀದಿಯೊಳಗೆ ನುಗ್ಗಲಿಕ್ಕಾಗಿ ಮತ್ತು ತಮ್ಮ ನಿಯಂತ್ರಣಕ್ಕೆ ಸಿಗುವ ಎಲ್ಲವನ್ನೂ ನಾಶಮಾಡಲಿಕ್ಕಾಗಿ.
17:8
عَسَىٰ رَبُّكُمْ أَنْ يَرْحَمَكُمْ ۚ وَإِنْ عُدْتُمْ عُدْنَا ۘ وَجَعَلْنَا جَهَنَّمَ لِلْكَافِرِينَ حَصِيرًا ۞
ನಿಮ್ಮ ಒಡೆಯನು ನಿಮ್ಮ ಮೇಲೆ ಕರುಣೆ ತೋರಬಹುದು. ಆದರೆ ನೀವು ಮತ್ತೆ ಅದನ್ನೇ ಮಾಡಿದರೆ ನಾವೂ ಅದನ್ನೇ ಮಾಡುವೆವು. ನಾವು ನರಕವನ್ನೇ ಧಿಕ್ಕಾರಿಗಳ ಪಾಲಿನ ಸೆರೆಮನೆಯಾಗಿಸಿರುವೆವು.
17:9
إِنَّ هَٰذَا الْقُرْآنَ يَهْدِي لِلَّتِي هِيَ أَقْوَمُ وَيُبَشِّرُ الْمُؤْمِنِينَ الَّذِينَ يَعْمَلُونَ الصَّالِحَاتِ أَنَّ لَهُمْ أَجْرًا كَبِيرًا ۞
ಈ ಕುರ್‌ಆನ್ ಬಹಳ ಸ್ಥಿರವಾದ ದಾರಿಯೆಡೆಗೆ ಮಾರ್ಗದರ್ಶನ ಮಾಡುತ್ತದೆ ಮತ್ತು ಇದು, ಸತ್ಕರ್ಮ ಮಾಡುವ ವಿಶ್ವಾಸಿಗಳಿಗೆ ಬಹುದೊಡ್ಡ ಪ್ರತಿಫಲವಿದೆ ಎಂಬ ಶುಭವಾರ್ತೆಯನ್ನು ನೀಡುತ್ತದೆ.
17:10
وَأَنَّ الَّذِينَ لَا يُؤْمِنُونَ بِالْآخِرَةِ أَعْتَدْنَا لَهُمْ عَذَابًا أَلِيمًا ۞
ಮತ್ತು ಪರಲೋಕದಲ್ಲಿ ನಂಬಿಕೆ ಇಲ್ಲದವರಿಗಾಗಿ ನಾವು ಕಠಿಣ ಶಿಕ್ಷೆಯನ್ನು ಸಿದ್ಧ ಪಡಿಸಿಟ್ಟಿದ್ದೇವೆ ಎಂದು ಇದು ಎಚ್ಚರಿಸುತ್ತದೆ.
17:11
وَيَدْعُ الْإِنْسَانُ بِالشَّرِّ دُعَاءَهُ بِالْخَيْرِ ۖ وَكَانَ الْإِنْسَانُ عَجُولًا ۞
ಮಾನವನು ಒಳಿತನ್ನು ಬೇಡಬೇಕಾದ ರೀತಿಯಲ್ಲಿ ಕೆಡುಕನ್ನು ಬೇಡುತ್ತಾನೆ. ಮಾನವನು ತುಂಬಾ ಆತುರ ಜೀವಿಯಾಗಿದ್ದಾನೆ.
17:12
وَجَعَلْنَا اللَّيْلَ وَالنَّهَارَ آيَتَيْنِ ۖ فَمَحَوْنَا آيَةَ اللَّيْلِ وَجَعَلْنَا آيَةَ النَّهَارِ مُبْصِرَةً لِتَبْتَغُوا فَضْلًا مِنْ رَبِّكُمْ وَلِتَعْلَمُوا عَدَدَ السِّنِينَ وَالْحِسَابَ ۚ وَكُلَّ شَيْءٍ فَصَّلْنَاهُ تَفْصِيلًا ۞
ನಾವು ರಾತ್ರಿ ಹಾಗೂ ಹಗಲನ್ನು ಎರಡು ಪುರಾವೆಗಳಾಗಿಸಿದ್ದೇವೆ ಮತ್ತು ನೀವು ನಿಮ್ಮ ಒಡೆಯನ ಅನುಗ್ರಹವನ್ನು ಅರಸಬೇಕೆಂದು ಹಾಗೂ ವರ್ಷಗಳ ಸಂಖ್ಯೆ ಮತ್ತು (ಇತರ) ಪ್ರಮಾಣಗಳನ್ನು ತಿಳಿಯಬೇಕೆಂದು, ನಾವು ರಾತ್ರಿಯ ಪುರಾವೆಯನ್ನು ಮಂದಗೊಳಿಸಿ, ಹಗಲಿನ ಪುರಾವೆಯನ್ನು ಉಜ್ವಲವಾಗಿಸಿದ್ದೇವೆ. ಮತ್ತು ನಾವು ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದ್ದೇವೆ.
17:13
وَكُلَّ إِنْسَانٍ أَلْزَمْنَاهُ طَائِرَهُ فِي عُنُقِهِ ۖ وَنُخْرِجُ لَهُ يَوْمَ الْقِيَامَةِ كِتَابًا يَلْقَاهُ مَنْشُورًا ۞
ನಾವು ಪ್ರತಿಯೊಬ್ಬ ಮಾನವನ ಅದೃಷ್ಟವನ್ನು ಅವನ ಕೊರಳಿಗೆ ಕಟ್ಟಿದ್ದೇವೆ. ಪುನರುತ್ಥಾನ ದಿನ ನಾವು ಅವನಿಗಾಗಿ ಒಂದು ಪುಸ್ತಕವನ್ನು ಹೊರತೆಗೆಯುವೆವು. ಅವನು ಅದನ್ನು ತೆರೆದಿರುವ ಸ್ಥಿತಿಯಲ್ಲಿ ಕಾಣುವನು.
17:14
اقْرَأْ كِتَابَكَ كَفَىٰ بِنَفْسِكَ الْيَوْمَ عَلَيْكَ حَسِيبًا ۞
(ಅಂದು ಅವನೊಡನೆ) ‘‘ಓದು ನಿನ್ನ (ಕರ್ಮಗಳ)ಗ್ರಂಥವನ್ನು. ಇಂದು ನಿನ್ನ ವಿಚಾರಣೆಗೆ ನೀನೇ ಸಾಕು’’ ಎನ್ನಲಾಗುವುದು.
17:15
مَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا ۞
ಸನ್ಮಾರ್ಗದಲ್ಲಿ ನಡೆಯುವಾತನು ಸ್ವತಃ ತನ್ನ ಲಾಭಕ್ಕಾಗಿಯಷ್ಟೇ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಇನ್ನು ದಾರಿಗೆಟ್ಟವನ ದಾರಿಗೇಡಿತನದ ದುಷ್ಪರಿಣಾಮ ಕೂಡಾ ಅವನ ಮೇಲೆಯೇ ಇರುವುದು. (ಪುನರುತ್ಥಾನ ದಿನ) ಹೊರೆ ಹೊರುವ ಯಾವೊಬ್ಬನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. ನಾವಂತು ದೂತರನ್ನು ಕಳಿಸುವ ತನಕ ಯಾರನ್ನೂ ಶಿಕ್ಷಿಸುವವರಲ್ಲ.
17:16
وَإِذَا أَرَدْنَا أَنْ نُهْلِكَ قَرْيَةً أَمَرْنَا مُتْرَفِيهَا فَفَسَقُوا فِيهَا فَحَقَّ عَلَيْهَا الْقَوْلُ فَدَمَّرْنَاهَا تَدْمِيرًا ۞
ನಾವು ಒಂದು ನಾಡನ್ನು ನಾಶಗೊಳಿಸ ಬಯಸಿದಾಗ ಅದರಲ್ಲಿನ ಸ್ಥಿತಿವಂತರಿಗೆ ಆದೇಶಗಳನ್ನು ನೀಡುತ್ತೇವೆ ಮತ್ತು ಅವರು ಅಲ್ಲಿ ಅವಿಧೇಯತೆಯನ್ನು ಮೆರೆಯಲಾರಂಭಿಸುತ್ತಾರೆ. ಆಗ ಅವರ ಮೇಲೆ ನಮ್ಮ ಶಿಕ್ಷೆಯು ಕಡ್ಡಾಯವಾಗಿ ಬಿಡುತ್ತದೆ ಮತ್ತು ನಾವು ಅವರನ್ನು ಸಂಪೂರ್ಣ ನಿರ್ನಾಮಗೊಳಿಸಿ ಬಿಡುತ್ತೇವೆ.
17:17
وَكَمْ أَهْلَكْنَا مِنَ الْقُرُونِ مِنْ بَعْدِ نُوحٍ ۗ وَكَفَىٰ بِرَبِّكَ بِذُنُوبِ عِبَادِهِ خَبِيرًا بَصِيرًا ۞
ನೂಹ್‌ರ ಬಳಿಕ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶಗೊಳಿಸಿ ಬಿಟ್ಟೆವು. ತನ್ನ ದಾಸರ ಪಾಪಗಳ ವಿಚಾರಣೆಗೆ ನಿಮ್ಮ ಒಡೆಯನೇ ಸಾಕು. ಅವನು ಎಲ್ಲವನ್ನೂ ಅರಿತಿರುವವನು ಮತ್ತು ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ.
17:18
مَنْ كَانَ يُرِيدُ الْعَاجِلَةَ عَجَّلْنَا لَهُ فِيهَا مَا نَشَاءُ لِمَنْ نُرِيدُ ثُمَّ جَعَلْنَا لَهُ جَهَنَّمَ يَصْلَاهَا مَذْمُومًا مَدْحُورًا ۞
ಆತುರವಾಗಿ ಸಿಗುವುದನ್ನು (ಇಹದ ಸುಖವನ್ನು) ಬಯಸುವವರ ಪೈಕಿ, ನಾವಿಚ್ಛಿಸಿದಾತನಿಗೆ ನಾವು , ನಾವಿಚ್ಛಿಸುವಷ್ಟನ್ನು ಆತುರವಾಗಿಯೇ (ಇಹದಲ್ಲೇ) ಕೊಟ್ಟು ಬಿಡುತ್ತೇವೆ. ಆದರೆ ಮುಂದೆ ನಾವು ಆತನಿಗೆ ನರಕವನ್ನು ವಿಧಿಸಿ ಬಿಡುತ್ತೇವೆ. ನಿಂದ್ಯನಾಗಿಯೂ ಅಪಮಾನಿತನಾಗಿಯೂ ಅವನು ಅದರೊಳಗೆ ಸೇರುವನು.
17:19
وَمَنْ أَرَادَ الْآخِرَةَ وَسَعَىٰ لَهَا سَعْيَهَا وَهُوَ مُؤْمِنٌ فَأُولَٰئِكَ كَانَ سَعْيُهُمْ مَشْكُورًا ۞
ಇನ್ನು, ಪರಲೋಕವನ್ನು ಅಪೇಕ್ಷಿಸಿ, ಅದಕ್ಕಾಗಿ, ಸಾಕಷ್ಟು ಶ್ರಮಿಸುವವನು ಮತ್ತು ವಿಶ್ವಾಸಿಯೂ ಆಗಿರುವವನು - ಅವರ ಶ್ರಮವೆಲ್ಲಾ ಸ್ವೀಕೃತವಾಗುವುದು.
17:20
كُلًّا نُمِدُّ هَٰؤُلَاءِ وَهَٰؤُلَاءِ مِنْ عَطَاءِ رَبِّكَ ۚ وَمَا كَانَ عَطَاءُ رَبِّكَ مَحْظُورًا ۞
ನಿಮ್ಮೊಡೆಯನ ಅನುಗ್ರಹಗಳಿಂದ ನಾವು ಇವರಿಗೂ ನೀಡುವೆವು, ಅವರಿಗೂ ನೀಡುವೆವು. ನಿಮ್ಮ ಒಡೆಯನ ಅನುಗ್ರಹಗಳನ್ನು ತಡೆಹಿಡಿಯಲಾಗುವುದಿಲ್ಲ.
17:21
انْظُرْ كَيْفَ فَضَّلْنَا بَعْضَهُمْ عَلَىٰ بَعْضٍ ۚ وَلَلْآخِرَةُ أَكْبَرُ دَرَجَاتٍ وَأَكْبَرُ تَفْضِيلًا ۞
ನಾವು (ಈ ಲೋಕದಲ್ಲೇ) ಯಾವ ರೀತಿ ಅವರಲ್ಲಿ ಕೆಲವರಿಗೆ ಕೆಲವರಿಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುತ್ತೇವೆಂಬುದನ್ನು ನೋಡಿರಿ. ಇನ್ನು ಪರಲೋಕವಂತು ಸ್ಥಾನಮಾನಗಳಲ್ಲೂ, ಶ್ರೇಷ್ಠತೆಯಲ್ಲೂ ತುಂಬಾ ಹಿರಿದಾಗಿರುತ್ತದೆ.
17:22
لَا تَجْعَلْ مَعَ اللَّهِ إِلَٰهًا آخَرَ فَتَقْعُدَ مَذْمُومًا مَخْذُولًا ۞
ಅಲ್ಲಾಹನ ಜೊತೆ ಬೇರೆಯಾರನ್ನೂ ದೇವರಾಗಿಸಿಕೊಳ್ಳಬೇಡಿ. ಹಾಗೆ ಮಾಡಿದರೆ ನೀವು ಸದಾ ನಿಂದಿತರಾಗಿಯೂ ಅಸಹಾಯಕರಾಗಿಯೂ ಕುಳಿತಿರಬೇಕಾಗುವುದು.
17:23
۞ وَقَضَىٰ رَبُّكَ أَلَّا تَعْبُدُوا إِلَّا إِيَّاهُ وَبِالْوَالِدَيْنِ إِحْسَانًا ۚ إِمَّا يَبْلُغَنَّ عِنْدَكَ الْكِبَرَ أَحَدُهُمَا أَوْ كِلَاهُمَا فَلَا تَقُلْ لَهُمَا أُفٍّ وَلَا تَنْهَرْهُمَا وَقُلْ لَهُمَا قَوْلًا كَرِيمًا ۞
ನಿಮಗೆ ನಿಮ್ಮ ಒಡೆಯನು (ಹೀಗೆಂದು) ವಿಧಿಸಿರುತ್ತಾನೆ; ನೀವು ಅವನೊಬ್ಬನ ಹೊರತು ಬೇರಾರನ್ನೂ ಪೂಜಿಸಬಾರದು ಮತ್ತು ತಂದೆ ತಾಯಿಯ ಜೊತೆ ಸೌಜನ್ಯಶೀಲರಾಗಿರಬೇಕು. ಒಂದು ವೇಳೆ ಅವರಲೊಬ್ಬರು ಅಥವಾ ಅವರಿಬ್ಬರೂ ನಿಮ್ಮ ಮುಂದೆ ಮುದಿ ವಯಸ್ಸನ್ನು ತಲುಪಿದರೆ, ಅವರೆದುರು ಚಕಾರ ವೆತ್ತಬೇಡಿ ಮತ್ತು ಅವರನ್ನು ಗದರಿಸಬೇಡಿ. ಅವರ ಜೊತೆ ಗೌರವದೊಂದಿಗೆ ಮಾತನಾಡಿರಿ.
17:24
وَاخْفِضْ لَهُمَا جَنَاحَ الذُّلِّ مِنَ الرَّحْمَةِ وَقُلْ رَبِّ ارْحَمْهُمَا كَمَا رَبَّيَانِي صَغِيرًا ۞
ವಿನಯ ಹಾಗೂ ವಾತ್ಸಲ್ಯದೊಂದಿಗೆ ಅವರೆದುರು ಸದಾ ಬಾಗಿಕೊಂಡಿರಿ ಮತ್ತು ‘‘ನನ್ನೊಡೆಯಾ, ನನ್ನ ಬಾಲ್ಯದಲ್ಲಿ ಅವರಿಬ್ಬರೂ ನನ್ನನ್ನು ಪೋಷಿಸಿದಂತೆಯೇ ನೀನು ಅವರಿಬ್ಬರ ಮೇಲೂ ಕೃಪೆ ತೋರು’’ ಎಂದು ಪ್ರಾರ್ಥಿಸಿರಿ.
17:25
رَبُّكُمْ أَعْلَمُ بِمَا فِي نُفُوسِكُمْ ۚ إِنْ تَكُونُوا صَالِحِينَ فَإِنَّهُ كَانَ لِلْأَوَّابِينَ غَفُورًا ۞
ನಿಮ್ಮ ಒಡೆಯನು ನಿಮ್ಮ ಮನಸ್ಸಿನೊಳಗಿನ ವಿಚಾರಗಳನ್ನೂ ಚೆನ್ನಾಗಿ ಬಲ್ಲನು. ನೀವು ಸಜ್ಜನರಾಗಿ ಬಾಳಿದ್ದರೆ, ಖಂಡಿತವಾಗಿಯೂ ಅವನು, ಅವನೆಡೆಗೆ ಸದಾ ಒಲಿಯುತ್ತಿದ್ದವರ ಪಾಲಿಗೆ ಕ್ಷಮಾಶೀಲನಾಗಿರುತ್ತಾನೆ.
17:26
وَآتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ وَلَا تُبَذِّرْ تَبْذِيرًا ۞
ನೀವು ಬಂಧುಗಳಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಅವರ ಹಕ್ಕನ್ನು ಸಲ್ಲಿಸಿರಿ ಮತ್ತು ನೀವು ದುಂದು ವೆಚ್ಚ ಮಾಡಬೇಡಿ.
17:27
إِنَّ الْمُبَذِّرِينَ كَانُوا إِخْوَانَ الشَّيَاطِينِ ۖ وَكَانَ الشَّيْطَانُ لِرَبِّهِ كَفُورًا ۞
ದುಂದು ವೆಚ್ಚ ಮಾಡುವವರು ಖಂಡಿತ ಶೈತಾನನ ಸಹೋದರರು. ಶೈತಾನನು ತನ್ನ ಒಡೆಯನಿಗೆ ಕೃತಘ್ನನಾಗಿದ್ದನು.
17:28
وَإِمَّا تُعْرِضَنَّ عَنْهُمُ ابْتِغَاءَ رَحْمَةٍ مِنْ رَبِّكَ تَرْجُوهَا فَقُلْ لَهُمْ قَوْلًا مَيْسُورًا ۞
ಒಂದು ವೇಳೆ, ನೀವಿನ್ನೂ ನಿಮ್ಮ ಒಡೆಯನ ನಿರೀಕ್ಷಿತ ಅನುಗ್ರಹವನ್ನು ಕಾಯುತ್ತಿರುವ ಕಾರಣ, ಅವರಿಂದ (ಬಂಧುಗಳು, ಬಡವರು ಮುಂತಾದವರಿಂದ) ಮುಖ ತಿರುಗಿಸಿಕೊಳ್ಳಬೇಕಾಗಿ ಬಂದರೂ ಅವರೊಂದಿಗೆ ಬಹಳ ಸೌಮ್ಯವಾದ ಮಾತನ್ನೇ ಆಡಿರಿ.
17:29
وَلَا تَجْعَلْ يَدَكَ مَغْلُولَةً إِلَىٰ عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُومًا مَحْسُورًا ۞
ನೀವು (ತೀರಾ ಜಿಪುಣರಾಗಿ) ನಿಮ್ಮ ಕೈಯನ್ನು ಕೊರಳಿಗೆ ಕಟ್ಟಿಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ಬಿಚ್ಚಿ ಬಿಡಲೂ ಬೇಡಿ - (ಅನ್ಯಥಾ) ಅಪಮಾನಿತರಾಗಿಯೂ ಅಸಹಾಯಕರಾಗಿಯೂ ಕುಳಿತಿರಬೇಕಾದೀತು.
17:30
إِنَّ رَبَّكَ يَبْسُطُ الرِّزْقَ لِمَنْ يَشَاءُ وَيَقْدِرُ ۚ إِنَّهُ كَانَ بِعِبَادِهِ خَبِيرًا بَصِيرًا ۞
ಖಂಡಿತವಾಗಿಯೂ ನಿಮ್ಮ ಒಡೆಯನು ತಾನಿಚ್ಛಿಸಿದವರ ಪಾಲಿಗೆ ಸಂಪತ್ತನ್ನು ಧಾರಾಳಗೊಳಿಸಿ ಬಿಡುತ್ತಾನೆ. ಮತ್ತು (ತಾನಿಚ್ಛಿಸಿದವರ ಪಾಲಿಗೆ ಅದನ್ನು) ಸೀಮಿತ ಗೊಳಿಸುತ್ತಾನೆ. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಅರಿವು ಉಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ.
17:31
وَلَا تَقْتُلُوا أَوْلَادَكُمْ خَشْيَةَ إِمْلَاقٍ ۖ نَحْنُ نَرْزُقُهُمْ وَإِيَّاكُمْ ۚ إِنَّ قَتْلَهُمْ كَانَ خِطْئًا كَبِيرًا ۞
ನೀವು ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ. ಅವರಿಗೂ ನಿಮಗೂ ನಾವೇ ಆಹಾರವನ್ನು ನೀಡುತ್ತೇವೆ. ಅವರ ಹತ್ಯೆಯು ಖಂಡಿತ ಮಹಾ ಪಾಪವಾಗಿದೆ.
17:32
وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا ۞
ನೀವು ವ್ಯಭಿಚಾರದ ಹತ್ತಿರವೂ ಸುಳಿಯಬೇಡಿ - ಅದು ಖಂಡಿತ ನಿರ್ಲಜ್ಜ ಕೃತ್ಯವಾಗಿದೆ ಮತ್ತು ತೀರಾ ಕೆಟ್ಟ ದಾರಿಯಾಗಿದೆ.
17:33
وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۗ وَمَنْ قُتِلَ مَظْلُومًا فَقَدْ جَعَلْنَا لِوَلِيِّهِ سُلْطَانًا فَلَا يُسْرِفْ فِي الْقَتْلِ ۖ إِنَّهُ كَانَ مَنْصُورًا ۞
ಅಲ್ಲಾಹನು ನಿಷಿದ್ಧಗೊಳಿಸಿರುವ (ಕೊಲ್ಲಬಾರದೆಂದಿರುವ) ಯಾವುದೇ ಜೀವವನ್ನು ನೀವು ಅಕ್ರಮವಾಗಿ ಕೊಲ್ಲಬೇಡಿ. ಮತ್ತು ನಾವು, ಅನ್ಯಾಯವಾಗಿ ಕೊಲೆಯಾದವನ ಉತ್ತರಾಧಿಕಾರಿಗೆ (ಪ್ರತೀಕಾರದ) ಅಧಿಕಾರವನ್ನು ನೀಡಿದ್ದೇವೆ. ಆದರೆ ಅವನು ಕೊಲೆಯ ವಿಷಯದಲ್ಲಿ ಮಿತಿಮೀರಬಾರದು. ಅವನು ಖಂಡಿತ ನೆರವಿಗೆ ಅರ್ಹನಾಗಿದ್ದಾನೆ.
17:34
وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۚ وَأَوْفُوا بِالْعَهْدِ ۖ إِنَّ الْعَهْدَ كَانَ مَسْئُولًا ۞
ಮತ್ತು ಅನಾಥನು ಪ್ರೌಢನಾಗುವ ತನಕ - ಉತ್ತಮ ರೀತಿಯಿಂದಲ್ಲದೆ - ನೀವು ಅವನ ಸಂಪತ್ತಿನ ಹತ್ತಿರ ಹೋಗಬಾರದು. ಮತ್ತು ನೀವು ಕರಾರನ್ನು ಪಾಲಿಸಿರಿ. ಕರಾರಿನ ಕುರಿತು ಖಂಡಿತ ವಿಚಾರಿಸಲಾಗುವುದು.
17:35
وَأَوْفُوا الْكَيْلَ إِذَا كِلْتُمْ وَزِنُوا بِالْقِسْطَاسِ الْمُسْتَقِيمِ ۚ ذَٰلِكَ خَيْرٌ وَأَحْسَنُ تَأْوِيلًا ۞
ನೀವು ಅಳೆಯುವಾಗ ಪೂರ್ಣವಾಗಿ ಅಳೆಯಿರಿ ಮತ್ತು ಸರಿಯಾಗಿರುವ ತಕ್ಕಡಿಯಲ್ಲೇ ತೂಗಿರಿ. ಇದುವೇ ಶ್ರೇಷ್ಠ ಕ್ರಮವಾಗಿದೆ ಮತ್ತು ಫಲಿತಾಂಶದ ದೃಷ್ಟಿಯಿಂದಲೂ ಉತ್ತಮವಾಗಿದೆ.
17:36
وَلَا تَقْفُ مَا لَيْسَ لَكَ بِهِ عِلْمٌ ۚ إِنَّ السَّمْعَ وَالْبَصَرَ وَالْفُؤَادَ كُلُّ أُولَٰئِكَ كَانَ عَنْهُ مَسْئُولًا ۞
ನಿನಗೆ ಅರಿವಿಲ್ಲದ ವಿಷಯದ ಬೆನ್ನು ಹಿಡಿಯಬೇಡ. ಖಂಡಿತವಾಗಿಯೂ, ಕಿವಿ, ಕಣ್ಣು ಮತ್ತು ಮನಸ್ಸು ಇವೆಲ್ಲವುಗಳ ಕುರಿತು ವಿಚಾರಣೆ ನಡೆಯಲಿದೆ.
17:37
وَلَا تَمْشِ فِي الْأَرْضِ مَرَحًا ۖ إِنَّكَ لَنْ تَخْرِقَ الْأَرْضَ وَلَنْ تَبْلُغَ الْجِبَالَ طُولًا ۞
ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ.
17:38
كُلُّ ذَٰلِكَ كَانَ سَيِّئُهُ عِنْدَ رَبِّكَ مَكْرُوهًا ۞
ಈ ಎಲ್ಲ ಕೆಡುಕುಗಳು ನಿನ್ನ ಒಡೆಯನ ದೃಷ್ಟಿಯಲ್ಲಿ ಅಪ್ರಿಯವಾಗಿವೆ.
17:39
ذَٰلِكَ مِمَّا أَوْحَىٰ إِلَيْكَ رَبُّكَ مِنَ الْحِكْمَةِ ۗ وَلَا تَجْعَلْ مَعَ اللَّهِ إِلَٰهًا آخَرَ فَتُلْقَىٰ فِي جَهَنَّمَ مَلُومًا مَدْحُورًا ۞
ಇದು, ನಿಮ್ಮ ಒಡೆಯನು ಯುಕ್ತಿಯಿಂದ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿದ ಸಂದೇಶವಾಗಿದೆ. (ಮಾನವನೇ,) ನೀನೆಂದೂ ಅಲ್ಲಾಹನ ಜೊತೆ ಬೇರೆ ಯಾರನ್ನಾದರೂ, ಪೂಜಾರ್ಹನೆಂದು ಪರಿಗಣಿಸಬೇಡ. ಹಾಗೆ ಮಾಡಿದರೆ, ನಿನ್ನನ್ನು ಅಪಮಾನಿತನಾಗಿಸಿ ಹಾಗೂ ತಿರಸ್ಕೃತನಾಗಿಸಿ ನರಕಕ್ಕೆ ಎಸೆದು ಬಿಡಲಾಗುವುದು.
17:40
أَفَأَصْفَاكُمْ رَبُّكُمْ بِالْبَنِينَ وَاتَّخَذَ مِنَ الْمَلَائِكَةِ إِنَاثًا ۚ إِنَّكُمْ لَتَقُولُونَ قَوْلًا عَظِيمًا ۞
(ಸ್ವಲ್ಪ ಯೋಚಿಸಿ ನೋಡಿ:) ನಿಮ್ಮ ಒಡೆಯನೇನು ಪುತ್ರರನ್ನು ನಿಮಗೆ ಮೀಸಲಾಗಿಟ್ಟು ಮಲಕ್‌ಗಳನ್ನು ತನ್ನ ಪುತ್ರಿಯರಾಗಿಸಿಕೊಂಡನೇ? ನಿಜಕ್ಕೂ ನೀವು ಭಾರೀ ದೊಡ್ಡ (ಪಾಪದ) ಮಾತೊಂದನ್ನು ಆಡುತ್ತಿರುವಿರಿ.
17:41
وَلَقَدْ صَرَّفْنَا فِي هَٰذَا الْقُرْآنِ لِيَذَّكَّرُوا وَمَا يَزِيدُهُمْ إِلَّا نُفُورًا ۞
ಜನರು ಉಪದೇಶ ಸ್ವೀಕರಿಸಬೇಕೆಂದು ನಾವು ಈ ಕುರ್‌ಆನ್‌ನಲ್ಲಿ, (ಸತ್ಯವನ್ನು) ವಿವಿಧ ರೀತಿಯಲ್ಲಿ ವಿವರಿಸಿದ್ದೇವೆ. ಇಷ್ಟಾಗಿಯೂ ಅವರ (ಧಿಕ್ಕಾರಿಗಳ) ದ್ವೇಷವಷ್ಟೇ ಹೆಚ್ಚುತ್ತಿದೆ.
17:42
قُلْ لَوْ كَانَ مَعَهُ آلِهَةٌ كَمَا يَقُولُونَ إِذًا لَابْتَغَوْا إِلَىٰ ذِي الْعَرْشِ سَبِيلًا ۞
ಹೇಳಿರಿ; ಒಂದು ವೇಳೆ ಅವರು ಹೇಳುವಂತೆ ನಿಜಕ್ಕೂ ಅವನ (ಅಲ್ಲಾಹನ) ಜೊತೆ ಬೇರೆ ದೇವರುಗಳು ಇದ್ದಿದ್ದರೆ ಅವರು ವಿಶ್ವ ಸಿಂಹಾಸನದ ಒಡೆಯನ ಕಡೆಗಿರುವ ದಾರಿಯನ್ನು ಹುಡುಕುತ್ತಿದ್ದರು.
17:43
سُبْحَانَهُ وَتَعَالَىٰ عَمَّا يَقُولُونَ عُلُوًّا كَبِيرًا ۞
ಅವನು ಪಾವನನು ಮತ್ತು ಅವರು ಏನೆಲ್ಲಾ ಹೇಳುತ್ತಿರುವರೋ ಅವೆಲ್ಲವುಗಳಿಗಿಂತ ಉನ್ನತನು, ಶ್ರೇಷ್ಠನು ಮತ್ತು ಮಹಾನನು.
17:44
تُسَبِّحُ لَهُ السَّمَاوَاتُ السَّبْعُ وَالْأَرْضُ وَمَنْ فِيهِنَّ ۚ وَإِنْ مِنْ شَيْءٍ إِلَّا يُسَبِّحُ بِحَمْدِهِ وَلَٰكِنْ لَا تَفْقَهُونَ تَسْبِيحَهُمْ ۗ إِنَّهُ كَانَ حَلِيمًا غَفُورًا ۞
ಏಳು ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳಲ್ಲಿ ಇರುವ ಎಲ್ಲವೂ ಅವನ (ಅಲ್ಲಾಹನ) ಪಾವಿತ್ರ್ಯವನ್ನು ಜಪಿಸುತ್ತಿವೆ. ನಿಜವಾಗಿ, ಅವನ ಗುಣಗಾನ ಮಾಡುತ್ತಾ ಅವನ ಪಾವಿತ್ರ್ಯವನ್ನು ಜಪಿಸದ ಯಾವ ವಸ್ತುವೂ ಇಲ್ಲ. ಆದರೆ ಅವುಗಳು ಮಾಡುವ ಪಾವಿತ್ರ್ಯ ಜಪವು ನಿಮಗೆ ಅರ್ಥವಾಗುವುದಿಲ್ಲ. ಖಂಡಿತವಾಗಿಯೂ ಅವನು ಸಂಯಮಿ ಹಾಗೂ ಕ್ಷಮಾಶೀಲನು.
17:45
وَإِذَا قَرَأْتَ الْقُرْآنَ جَعَلْنَا بَيْنَكَ وَبَيْنَ الَّذِينَ لَا يُؤْمِنُونَ بِالْآخِرَةِ حِجَابًا مَسْتُورًا ۞
ನೀವು ಕುರ್‌ಆನ್ ಅನ್ನು ಓದುವಾಗ, ನಾವು ನಿಮ್ಮ ಹಾಗೂ ಪರಲೋಕವನ್ನು ನಂಬದವರ ನಡುವೆ, ಸುಪ್ತ ತೆರೆಯೊಂದನ್ನು ಎಳೆದು ಬಿಡುತ್ತೇವೆ.
17:46
وَجَعَلْنَا عَلَىٰ قُلُوبِهِمْ أَكِنَّةً أَنْ يَفْقَهُوهُ وَفِي آذَانِهِمْ وَقْرًا ۚ وَإِذَا ذَكَرْتَ رَبَّكَ فِي الْقُرْآنِ وَحْدَهُ وَلَّوْا عَلَىٰ أَدْبَارِهِمْ نُفُورًا ۞
ಮತ್ತು ಅವರಿಗೆ ಇದು ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆಯನ್ನು ಎಳೆಯುತ್ತೇವೆ ಮತ್ತು ಅವರ ಕಿವಿಗಳಲ್ಲಿ ಕಿವುಡುತನವಿದೆ. ನೀವು ಕುರ್‌ಆನ್‌ನಲ್ಲಿ, ನಿಮ್ಮ ಒಡೆಯನ ಕುರಿತು ಅವನು ಏಕಮಾತ್ರನೆಂದು ಪ್ರಸ್ತಾಪಿಸಿದೊಡನೆ ಅವರು ದ್ವೇಷದಿಂದ ಮುಖ ತಿರುಗಿಸಿ ಓಡಲಾರಂಭಿಸುತ್ತಾರೆ.
17:47
نَحْنُ أَعْلَمُ بِمَا يَسْتَمِعُونَ بِهِ إِذْ يَسْتَمِعُونَ إِلَيْكَ وَإِذْ هُمْ نَجْوَىٰ إِذْ يَقُولُ الظَّالِمُونَ إِنْ تَتَّبِعُونَ إِلَّا رَجُلًا مَسْحُورًا ۞
ಅವರು ನಿಮ್ಮ ಕಡೆಗೆ ಕಿವಿಗೊಟ್ಟು ಕೇಳುತ್ತಿರುವಾಗ, ಅವರು (ಆ ರೀತಿ) ಕೇಳುವುದೇಕೆಂಬುದನ್ನು ಮತ್ತು ಅವರು ಗುಟ್ಟಾಗಿ ಸಮಾಲೋಚಿಸಿದ ಸಂದರ್ಭವನ್ನು ನಾವು ಚೆನ್ನಾಗಿ ಬಲ್ಲೆವು. ‘‘ನೀವು ಮಾಟಕ್ಕೆ ತುತ್ತಾದ ಒಬ್ಬ ವ್ಯಕ್ತಿಯನ್ನು ಅನುಸರಿಸುತ್ತಿದ್ದೀರಿ’’ ಎಂದು ಅಕ್ರಮಿಗಳು ಹೇಳುತ್ತಾರೆ.
17:48
انْظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا ۞
ನೋಡಿರಿ, ಅವರು ಎಂತೆಂತಹ (ದೂಷಣೆಯ) ಮಾತುಗಳನ್ನು ನಿಮಗೆ ಅನ್ವಯಿಸುತ್ತಾರೆ! ನಿಜವಾಗಿ ಅವರು ದಾರಿಗೆಟ್ಟಿದ್ದಾರೆ ಮತ್ತು ಅವರಿಗೆ ಸರಿದಾರಿ ಸಿಗುತ್ತಿಲ್ಲ.
17:49
وَقَالُوا أَإِذَا كُنَّا عِظَامًا وَرُفَاتًا أَإِنَّا لَمَبْعُوثُونَ خَلْقًا جَدِيدًا ۞
‘‘ನಾವು ಎಲುಬುಗಳಾಗಿ ತೀರಾ ಚೂರು ಚೂರಾಗಿ ಬಿಟ್ಟ ಬಳಿಕ ನಮ್ಮನ್ನೇನು ಹೊಸದಾಗಿ ಜೀವಂತಗೊಳಿಸಲಾಗುವುದೇ?’’ಎಂದು ಅವರು ಕೇಳುತ್ತಾರೆ;
17:50
۞ قُلْ كُونُوا حِجَارَةً أَوْ حَدِيدًا ۞
ಹೇಳಿರಿ; ನೀವು ಕಲ್ಲುಗಳಾಗಿ ಅಥವಾ ಉಕ್ಕಾಗಿ ಬಿಟ್ಟ ಬಳಿಕವೂ.
17:51
أَوْ خَلْقًا مِمَّا يَكْبُرُ فِي صُدُورِكُمْ ۚ فَسَيَقُولُونَ مَنْ يُعِيدُنَا ۖ قُلِ الَّذِي فَطَرَكُمْ أَوَّلَ مَرَّةٍ ۚ فَسَيُنْغِضُونَ إِلَيْكَ رُءُوسَهُمْ وَيَقُولُونَ مَتَىٰ هُوَ ۖ قُلْ عَسَىٰ أَنْ يَكُونَ قَرِيبًا ۞
ಅಥವಾ ನೀವು, ಅವುಗಳಿಗಿಂತಲೂ ದೊಡ್ಡದೆಂದು ನಿಮ್ಮ ಮನಸ್ಸಿನಲ್ಲಿರುವ ಬೇರೇನಾದರೂ ಆಗಿಬಿಟ್ಟ ಬಳಿಕವೂ (ನಿಮ್ಮನ್ನು ಜೀವಂತಗೊಳಿಸಲಾಗುವುದು). ‘‘(ಆ ರೀತಿ) ನಮ್ಮನ್ನು ಮತ್ತೆ ಜೀವಂತಗೊಳಿಸುವವರು ಯಾರು?’’ ಎಂದು ಅವರು ಕೇಳುವರು; ಹೇಳಿರಿ; ನಿಮ್ಮನ್ನು ಮೊದಲ ಬಾರಿ ರೂಪಿಸಿದವನು (ಅವನೇ ಆ ಕೆಲಸಮಾಡುವನು). ಮತ್ತೆ ಅವರು ತಮ್ಮ ತಲೆಗಳನ್ನು ನಿಮ್ಮೆಡೆಗೆ ವಾಲಿಸುತ್ತಾ, ‘‘ಅದು (ಆ ದಿನ) ಬರುವುದು ಯಾವಾಗ?’’ ಎಂದು ಕೇಳುವರು. ‘‘ಅದು ತುಂಬಾ ಹತ್ತಿರವೇ ಇರಲೂಬಹುದು’’ ಎಂದು ಹೇಳಿರಿ.
17:52
يَوْمَ يَدْعُوكُمْ فَتَسْتَجِيبُونَ بِحَمْدِهِ وَتَظُنُّونَ إِنْ لَبِثْتُمْ إِلَّا قَلِيلًا ۞
ಅಂದು ಅವನು (ಅಲ್ಲಾಹನು) ನಿಮ್ಮನ್ನು ಕೂಗಿ ಕರೆಯುವನು ಮತ್ತು ನೀವು ಅವನ ಗುಣಗಾನ ಮಾಡುತ್ತಾ ಓಗೊಡುವಿರಿ ಮತ್ತು (ಈ ಲೋಕದಲ್ಲಿ) ನೀವು ಬದುಕಿದ್ದುದು ತೀರಾ ಅಲ್ಪಕಾಲ ಮಾತ್ರ ಎಂದು ಆಗ ನೀವು ಭಾವಿಸುತ್ತಿರುವಿರಿ.
17:53
وَقُلْ لِعِبَادِي يَقُولُوا الَّتِي هِيَ أَحْسَنُ ۚ إِنَّ الشَّيْطَانَ يَنْزَغُ بَيْنَهُمْ ۚ إِنَّ الشَّيْطَانَ كَانَ لِلْإِنْسَانِ عَدُوًّا مُبِينًا ۞
ಮತ್ತು ಒಳ್ಳೆಯ ಮಾತನ್ನೇ ಆಡಬೇಕೆಂದು ನನ್ನ ದಾಸರೊಡನೆ ಹೇಳಿರಿ. ಖಂಡಿತವಾಗಿಯೂ ಶೈತಾನನು ಅವರ ನಡುವೆ ಹಗೆತನವನ್ನು ಬಿತ್ತುತ್ತಾನೆ. ಖಂಡಿತವಾಗಿಯೂ ಶೈತಾನನು ಮನುಷ್ಯನ ಪಾಲಿಗೆ ಬಹಿರಂಗ ಶತ್ರುವಾಗಿದ್ದಾನೆ.
17:54
رَبُّكُمْ أَعْلَمُ بِكُمْ ۖ إِنْ يَشَأْ يَرْحَمْكُمْ أَوْ إِنْ يَشَأْ يُعَذِّبْكُمْ ۚ وَمَا أَرْسَلْنَاكَ عَلَيْهِمْ وَكِيلًا ۞
ನಿಮ್ಮ ಒಡೆಯನು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಬಯಸಿದರೆ ನಿಮ್ಮ ಮೇಲೆ ಕರುಣೆ ತೋರಬಹುದು ಅಥವಾ ಅವನು ಬಯಸಿದರೆ ನಿಮ್ಮನ್ನು ಶಿಕ್ಷಿಸಬಹುದು. (ದೂತರೇ,) ನಿಮ್ಮನ್ನು ನಾವು ಅವರ ಮೇಲಿನ ಕಾವಲುಗಾರನಾಗಿ ಕಳುಹಿಸಿಲ್ಲ.
17:55
وَرَبُّكَ أَعْلَمُ بِمَنْ فِي السَّمَاوَاتِ وَالْأَرْضِ ۗ وَلَقَدْ فَضَّلْنَا بَعْضَ النَّبِيِّينَ عَلَىٰ بَعْضٍ ۖ وَآتَيْنَا دَاوُودَ زَبُورًا ۞
ನಿಮ್ಮ ಒಡೆಯನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರನ್ನೂ ಚೆನ್ನಾಗಿ ಬಲ್ಲನು. ಮತ್ತು ನಾವು, ಕೆಲವು ದೂತರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ನೀಡಿರುವೆವು ಮತ್ತು ದಾವೂದ್‌ರಿಗೆ ನಾವು ಝಬೂರ್ (ಗ್ರಂಥ)ವನ್ನು ನೀಡಿದ್ದೆವು.
17:56
قُلِ ادْعُوا الَّذِينَ زَعَمْتُمْ مِنْ دُونِهِ فَلَا يَمْلِكُونَ كَشْفَ الضُّرِّ عَنْكُمْ وَلَا تَحْوِيلًا ۞
ಹೇಳಿರಿ; ಅವನ ಹೊರತು ಬೇರೆ ಯಾರೆಲ್ಲಾ (ದೇವರೆಂದು) ನಿಮ್ಮ ಭ್ರಮೆಯಲ್ಲಿರುವರೋ ಅವರೆಲ್ಲರನ್ನೂ ನೀವು ಕರೆದು ಪ್ರಾರ್ಥಿಸಿ ನೋಡಿರಿ. ನಿಮ್ಮ ಯಾವುದೇ ಸಂಕಟವನ್ನು ನಿವಾರಿಸುವ ಅಥವಾ ವರ್ಗಾಯಿಸುವ ಸಾಮರ್ಥ್ಯ ಅವರಲ್ಲಿಲ್ಲ.
17:57
أُولَٰئِكَ الَّذِينَ يَدْعُونَ يَبْتَغُونَ إِلَىٰ رَبِّهِمُ الْوَسِيلَةَ أَيُّهُمْ أَقْرَبُ وَيَرْجُونَ رَحْمَتَهُ وَيَخَافُونَ عَذَابَهُ ۚ إِنَّ عَذَابَ رَبِّكَ كَانَ مَحْذُورًا ۞
ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ, ನಿಜವಾಗಿ ಅವರೆಲ್ಲಾ ತಮ್ಮ ಒಡೆಯನ ಮೆಚ್ಚುಗೆಗಳಿಸಲು ಮತ್ತು ಅವನಿಗೆ ಇತರರಿಗಿಂತ ಹೆಚ್ಚು ನಿಕಟರಾಗಲು ದಾರಿ ಹುಡುಕುತ್ತಿರುತ್ತಾರೆ, ಅವನ ಅನುಗ್ರಹದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ಅವನ ಶಿಕ್ಷೆಗೆ ಅಂಜುತ್ತಿರುತ್ತಾರೆ. ನಿಮ್ಮೊಡೆಯನ ಶಿಕ್ಷೆಯು ನಿಜಕ್ಕೂ ಅಂಜಲೇ ಬೇಕಾದ ಶಿಕ್ಷೆಯಾಗಿದೆ.
17:58
وَإِنْ مِنْ قَرْيَةٍ إِلَّا نَحْنُ مُهْلِكُوهَا قَبْلَ يَوْمِ الْقِيَامَةِ أَوْ مُعَذِّبُوهَا عَذَابًا شَدِيدًا ۚ كَانَ ذَٰلِكَ فِي الْكِتَابِ مَسْطُورًا ۞
ಪುನರುತ್ಥಾನ ದಿನಕ್ಕೆ ಮುಂಚೆ ನಾವು ನಾಶ ಮಾಡದ ಅಥವಾ ತೀವ್ರ ಶಿಕ್ಷೆಗೆ ಒಳಪಡಿಸದ ಯಾವ ನಾಡೂ ಇಲ್ಲ. ಇದು ಗ್ರಂಥದಲ್ಲಿ ಬರೆದಿರುವ ವಿಷಯವಾಗಿದೆ.
17:59
وَمَا مَنَعَنَا أَنْ نُرْسِلَ بِالْآيَاتِ إِلَّا أَنْ كَذَّبَ بِهَا الْأَوَّلُونَ ۚ وَآتَيْنَا ثَمُودَ النَّاقَةَ مُبْصِرَةً فَظَلَمُوا بِهَا ۚ وَمَا نُرْسِلُ بِالْآيَاتِ إِلَّا تَخْوِيفًا ۞
ನಾವು (ಹೊಸ) ಪುರಾವೆಗಳನ್ನು ಕಳಿಸದೆ ಇರುವುದಕ್ಕೆ, ಹಿಂದಿನವರು ಅವುಗಳನ್ನು ಧಿಕ್ಕರಿಸಿದ್ದೇ ಕಾರಣವಾಗಿದೆ. ಮತ್ತು ನಾವು ಸಮೂದ್ ಜನಾಂಗದವರಿಗೆ, ಎದ್ದು ಕಾಣುವ (ಪುರಾವೆಯಾಗಿ) ಒಂದು ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರ ಮೇಲೆ ಅಕ್ರಮ ವೆಸಗಿದರು. ನಿಜವಾಗಿ ನಾವು ಪುರಾವೆಗಳನ್ನು ಕಳಿಸುವುದು ಎಚ್ಚರಿಸುವುದಕ್ಕಾಗಿ ಮಾತ್ರ.
17:60
وَإِذْ قُلْنَا لَكَ إِنَّ رَبَّكَ أَحَاطَ بِالنَّاسِ ۚ وَمَا جَعَلْنَا الرُّؤْيَا الَّتِي أَرَيْنَاكَ إِلَّا فِتْنَةً لِلنَّاسِ وَالشَّجَرَةَ الْمَلْعُونَةَ فِي الْقُرْآنِ ۚ وَنُخَوِّفُهُمْ فَمَا يَزِيدُهُمْ إِلَّا طُغْيَانًا كَبِيرًا ۞
ನಿಮ್ಮ ಒಡೆಯನು ಜನರನ್ನೆಲ್ಲಾ ಸುತ್ತುವರಿದಿರುವನು ಎಂದು ನಾವು ನಿಮಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ನಾವು ನಿಮಗೆ ತೋರಿಸಿದ ಆ ದೃಶ್ಯಗಳನ್ನು ಮತ್ತು ಕುರ್‌ಆನ್‌ನಲ್ಲಿ ಶಪಿಸಲಾಗಿರುವ ಆ ಮರವನ್ನು ನಾವು ಜನರ ಪಾಲಿಗೆ ಪರೀಕ್ಷೆಯಾಗಿಸಿದ್ದೇವೆ. ನಾವು ಅವರನ್ನು ಎಚ್ಚರಿಸುತ್ತಿದ್ದೇವೆ. ಆದರೆ ಅದು ಅವರ ಭಾರೀ ವಿದ್ರೋಹವನ್ನಷ್ಟೇ ಹೆಚ್ಚಿಸುತ್ತಿದೆ.
17:61
وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ قَالَ أَأَسْجُدُ لِمَنْ خَلَقْتَ طِينًا ۞
ನಾವು ಮಲಕ್‌ಗಳೊಡನೆ, ಆದಮರಿಗೆ ಸಾಷ್ಟಾಂಗವೆರಗಿರಿ ಎಂದಾಗ ಅವರೆಲ್ಲರೂ ಸಾಷ್ಟಾಂಗವೆರಗಿದರು - ಇಬ್ಲೀಸ್‌ನ ಹೊರತು. ಅವನು ಹೇಳಿದನು; ನಾನೇನು, ಮಣ್ಣಿನಿಂದ ಸೃಷ್ಟಿಸಲ್ಪಟ್ಟವನಿಗೆ ಸಾಷ್ಟಾಂಗವೆರಗಬೇಕೇ?
17:62
قَالَ أَرَأَيْتَكَ هَٰذَا الَّذِي كَرَّمْتَ عَلَيَّ لَئِنْ أَخَّرْتَنِ إِلَىٰ يَوْمِ الْقِيَامَةِ لَأَحْتَنِكَنَّ ذُرِّيَّتَهُ إِلَّا قَلِيلًا ۞
ಅವನು ಹೇಳಿದನು; ನೀನು ನನಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುವ ಆತನನ್ನು ನೋಡು. ನೀನು ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡಿದರೆ, ಕೇವಲ ಕೆಲವರ ಹೊರತು ಅವನ ಸಂತತಿಯವರನ್ನೆಲ್ಲಾ ನಾನು ನನ್ನ ವಶಕ್ಕೆ ತೆಗೆದು ಕೊಳ್ಳುವೆನು.
17:63
قَالَ اذْهَبْ فَمَنْ تَبِعَكَ مِنْهُمْ فَإِنَّ جَهَنَّمَ جَزَاؤُكُمْ جَزَاءً مَوْفُورًا ۞
ಅವನು (ಅಲ್ಲಾಹನು) ಹೇಳಿದನು; ನೀನು ಹಾಗೂ ಅವರ ಪೈಕಿ ನಿನ್ನ ಅನುಕರಣೆ ಮಾಡಿದವರು - ಹೊರಟು ಹೋಗಿರಿ. ನಿಮಗೆ ಖಂಡಿತವಾಗಿಯೂ ನರಕವೇ ಪ್ರತಿಫಲವಾಗಿರುವುದು - ಪರಿಪೂರ್ಣ ಪ್ರತಿಫಲ.
17:64
وَاسْتَفْزِزْ مَنِ اسْتَطَعْتَ مِنْهُمْ بِصَوْتِكَ وَأَجْلِبْ عَلَيْهِمْ بِخَيْلِكَ وَرَجِلِكَ وَشَارِكْهُمْ فِي الْأَمْوَالِ وَالْأَوْلَادِ وَعِدْهُمْ ۚ وَمَا يَعِدُهُمُ الشَّيْطَانُ إِلَّا غُرُورًا ۞
ಅವರ ಪೈಕಿ ನಿನಗೆ ಸಾಧ್ಯವಿರುವವನನ್ನು ನೀನು ನಿನ್ನ ಧ್ವನಿಯ ಮೂಲಕ ಪುಸಲಾಯಿಸು ಮತ್ತು ನಿನ್ನ (ಪಡೆಯ) ಸವಾರರನ್ನೂ ಕಾಲಾಳುಗಳನ್ನೂ ಅವರ ಮೇಲೆ ಹೇರಿ ಬಿಡು ಮತ್ತು ನೀನು ಸಂಪತ್ತು ಹಾಗೂ ಸಂತಾನಗಳಲ್ಲಿ ಅವರ ಪಾಲುದಾರನಾಗು ಮತ್ತು ನೀನು ಅವರಿಗೆ ವಾಗ್ದಾನವನ್ನು ನೀಡು. ಶೈತಾನನು ಅವರಿಗೆ ನೀಡುವ ವಾಗ್ದಾನವು ಕೇವಲ ವಂಚನೆಯಾಗಿರುತ್ತದೆ.
17:65
إِنَّ عِبَادِي لَيْسَ لَكَ عَلَيْهِمْ سُلْطَانٌ ۚ وَكَفَىٰ بِرَبِّكَ وَكِيلًا ۞
ಖಂಡಿತವಾಗಿಯೂ ನನ್ನ (ನಿಷ್ಠ) ದಾಸರ ಮೇಲೆ ನಿನಗೆ ಯಾವ ನಿಯಂತ್ರಣವೂ ಸಿಗದು. (ದೂತರೇ,) ಕಾರ್ಯ ಸಾಧನೆಗೆ ನಿಮ್ಮ ಒಡೆಯನೇ ಸಾಕು.
17:66
رَبُّكُمُ الَّذِي يُزْجِي لَكُمُ الْفُلْكَ فِي الْبَحْرِ لِتَبْتَغُوا مِنْ فَضْلِهِ ۚ إِنَّهُ كَانَ بِكُمْ رَحِيمًا ۞
ನಿಮ್ಮ ಒಡೆಯನೇ, ನೀವು ಅವನ ಅನುಗ್ರಹವನ್ನು ಹುಡುಕುವಂತಾಗಲು ಸಮುದ್ರದಲ್ಲಿ ನಿಮಗಾಗಿ ಹಡಗುಗಳನ್ನು ಚಲಿಸುತ್ತಾನೆ. ಅವನು ಖಂಡಿತ ನಿಮ್ಮ ಪಾಲಿಗೆ ಕರುಣಾಳುವಾಗಿದ್ದಾನೆ.
17:67
وَإِذَا مَسَّكُمُ الضُّرُّ فِي الْبَحْرِ ضَلَّ مَنْ تَدْعُونَ إِلَّا إِيَّاهُ ۖ فَلَمَّا نَجَّاكُمْ إِلَى الْبَرِّ أَعْرَضْتُمْ ۚ وَكَانَ الْإِنْسَانُ كَفُورًا ۞
ಸಮುದ್ರದಲ್ಲಿ ನಿಮಗೇನಾದರೂ ಆಪತ್ತು ಎದುರಾದಾಗ, ಅವನೊಬ್ಬನ ಹೊರತು ನೀವು ಕರೆದು ಪ್ರಾರ್ಥಿಸುವ ಇತರೆಲ್ಲರೂ ಕಳೆದು ಹೋಗುವರು. ಕೊನೆಗೆ ಅವನು ನಿಮ್ಮನ್ನು ರಕ್ಷಿಸಿ ದಡದೆಡೆಗೆ ತಲುಪಿಸಿದಾಗ, ನೀವು ತಿರುಗಿ ಬಿಡುತ್ತೀರಿ. ಮಾನವನು ಖಂಡಿತ ಕೃತಘ್ನನು.
17:68
أَفَأَمِنْتُمْ أَنْ يَخْسِفَ بِكُمْ جَانِبَ الْبَرِّ أَوْ يُرْسِلَ عَلَيْكُمْ حَاصِبًا ثُمَّ لَا تَجِدُوا لَكُمْ وَكِيلًا ۞
ಅವನು (ಅಲ್ಲಾಹನು), ದಡದ ಭಾಗದಲ್ಲೇ ನಿಮ್ಮನ್ನು (ಭೂಮಿಯೊಳಗೆ) ಹೂತು ಬಿಡುವ ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸುವ ಸಾಧ್ಯತೆಯ ಕುರಿತು ನೀವೇನು ನಿಶ್ಚಿಂತರಾಗಿರುವಿರಾ? (ಹಾಗೇನಾದರೂ ಆದರೆ) ನೀವು ನಿಮ್ಮ ಪಾಲಿಗೆ ಯಾವ ಕಾರ್ಯಸಾಧಕನನ್ನೂ ಕಾಣಲಾರಿರಿ.
17:69
أَمْ أَمِنْتُمْ أَنْ يُعِيدَكُمْ فِيهِ تَارَةً أُخْرَىٰ فَيُرْسِلَ عَلَيْكُمْ قَاصِفًا مِنَ الرِّيحِ فَيُغْرِقَكُمْ بِمَا كَفَرْتُمْ ۙ ثُمَّ لَا تَجِدُوا لَكُمْ عَلَيْنَا بِهِ تَبِيعًا ۞
ಅಥವಾ, ಅವನು ನಿಮ್ಮನ್ನು ಮತ್ತೊಮ್ಮೆ ಅದರೊಳಕ್ಕೆ (ಸಮುದ್ರದೊಳಕ್ಕೆ) ಒಯ್ದುಬಿಡುವ ಹಾಗೂ ನಿಮ್ಮ ಕೃತಘ್ನತೆಯ ಕಾರಣ ಭಾರೀ ಬಿರುಗಾಳಿಯ ಸುಳಿಯೊಂದು ನಿಮ್ಮನ್ನು ಮುಳುಗಿಸಿಬಿಡುವ ಸಾಧ್ಯತೆಯ ಕುರಿತು ನೀವು ನಿರ್ಭೀತರಾಗಿರುವಿರಾ? ಆಗಲೂ ನಮ್ಮ ವಿರುದ್ಧ ಸೇಡು ತೀರಿಸ ಬಲ್ಲವರು ಯಾರೂ ನಿಮಗೆ ಸಿಗಲಾರರು.
17:70
۞ وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُمْ مِنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِمَّنْ خَلَقْنَا تَفْضِيلًا ۞
ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು ಹಾಗೂ ಅವರನ್ನು ನೆಲದಲ್ಲೂ ಜಲದಲ್ಲೂ ಪ್ರಯಾಣಿಸುವವರಾಗಿ ಮಾಡಿದೆವು ಮತ್ತು ಅವರಿಗೆ ಶುದ್ಧ ಆಹಾರಗಳನ್ನು ಒದಗಿಸಿದೆವು ಮತ್ತು ನಮ್ಮ ಇತರ ಅನೇಕ ಸೃಷ್ಟಿಗಳೆದುರು ಅವರಿಗೆ ಸ್ಪಷ್ಟವಾದ ಶ್ರೇಷ್ಠತೆಯನ್ನು ದಯಪಾಲಿಸಿದೆವು.
17:71
يَوْمَ نَدْعُو كُلَّ أُنَاسٍ بِإِمَامِهِمْ ۖ فَمَنْ أُوتِيَ كِتَابَهُ بِيَمِينِهِ فَأُولَٰئِكَ يَقْرَءُونَ كِتَابَهُمْ وَلَا يُظْلَمُونَ فَتِيلًا ۞
ನಾವು ಎಲ್ಲ ಮಾನವರನ್ನೂ ಅವರ ನಾಯಕರ ಜೊತೆ ಕರೆದು ಕೂಡಿಸುವ ದಿನ, (ಕರ್ಮಗಳ) ಗ್ರಂಥವನ್ನು ಬಲಗೈಯಲ್ಲಿ ನೀಡಲಾದವರು ತಮ್ಮ ಗ್ರಂಥವನ್ನು ಓದುವರು ಮತ್ತು ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು.
17:72
وَمَنْ كَانَ فِي هَٰذِهِ أَعْمَىٰ فَهُوَ فِي الْآخِرَةِ أَعْمَىٰ وَأَضَلُّ سَبِيلًا ۞
ಇಲ್ಲಿ (ಈ ಲೋಕದಲ್ಲಿ, ಸತ್ಯದ ಪಾಲಿಗೆ) ಕುರುಡಾಗಿದ್ದವನು ಪರಲೋಕದಲ್ಲೂ ಕುರುಡನಾಗಿರುವನು ಮತ್ತು ಇನ್ನಷ್ಟು ದಾರಿಗೆಟ್ಟಿರುವನು.
17:73
وَإِنْ كَادُوا لَيَفْتِنُونَكَ عَنِ الَّذِي أَوْحَيْنَا إِلَيْكَ لِتَفْتَرِيَ عَلَيْنَا غَيْرَهُ ۖ وَإِذًا لَاتَّخَذُوكَ خَلِيلًا ۞
(ದೂತರೇ,) ಅವರು (ಧಿಕ್ಕಾರಿಗಳು), ನಾವು ನಿಮಗೆ ದಿವ್ಯವಾಣಿಯ ಮೂಲಕ ನೀಡಿರುವ ಸಂದೇಶದಿಂದ ನಿಮ್ಮನ್ನು ದೂರ ಸರಿಸಿ, ನೀವು ನಮ್ಮ ಹೆಸರಲ್ಲಿ ಬೇರೇನನ್ನಾದರೂ ರಚಿಸಿ ತರುವಂತೆ ಮಾಡಲು ಶ್ರಮಿಸಿದ್ದರು. ಒಂದು ವೇಳೆ ಹಾಗೆ ಆಗಿ ಬಿಟ್ಟಿದ್ದರೆ ಅವರು ನಿಮ್ಮನ್ನು ಪರಮ ಆಪ್ತನಾಗಿ ಕಾಣುತ್ತಿದ್ದರು.
17:74
وَلَوْلَا أَنْ ثَبَّتْنَاكَ لَقَدْ كِدْتَ تَرْكَنُ إِلَيْهِمْ شَيْئًا قَلِيلًا ۞
ನಾವು ನಿಮಗೆ ಸ್ಥಿರತೆಯನ್ನು ನೀಡದೆ ಇದ್ದಿದ್ದರೆ ನೀವು ಸ್ವಲ್ಪವಾದರೂ ಅವರೆಡೆಗೆ ವಾಲಿ ಬಿಡುತ್ತಿದ್ದಿರಿ.
17:75
إِذًا لَأَذَقْنَاكَ ضِعْفَ الْحَيَاةِ وَضِعْفَ الْمَمَاتِ ثُمَّ لَا تَجِدُ لَكَ عَلَيْنَا نَصِيرًا ۞
ಹಾಗೇನಾದರೂ ಆಗಿ ಬಿಟ್ಟಿದ್ದರೆ ನಾವು ನಿಮಗೆ ಬದುಕಿನಲ್ಲೂ ಸಾವಿನಲ್ಲೂ ದುಪ್ಪಟ್ಟು ಶಿಕ್ಷೆಯ ರುಚಿ ಉಣಿಸುತ್ತಿದ್ದೆವು ಮತ್ತು ನಮ್ಮೆದುರು ನಿಮಗೆ ಯಾವ ಸಹಾಯಕನೂ ಸಿಗುತ್ತಿರಲಿಲ್ಲ.
17:76
وَإِنْ كَادُوا لَيَسْتَفِزُّونَكَ مِنَ الْأَرْضِ لِيُخْرِجُوكَ مِنْهَا ۖ وَإِذًا لَا يَلْبَثُونَ خِلَافَكَ إِلَّا قَلِيلًا ۞
ಅವರು ನಿಮ್ಮನ್ನು ಇಲ್ಲಿಂದ ಹೊರದಬ್ಬಲಿಕ್ಕಾಗಿ, ಈ ನಾಡಿನಲ್ಲಿ ನಿಮ್ಮನ್ನು ಅಸ್ಥಿರಗೊಳಿಸಲು ಶ್ರಮಿಸುತ್ತಿದ್ದಾರೆ. ಒಂದು ವೇಳೆ ಹಾಗೆ ಆಗಿಬಿಟ್ಟರೆ, ನಿಮ್ಮ ಬಳಿಕ ಅವರೇನೂ ಹೆಚ್ಚುಕಾಲ ಉಳಿಯಲಾರರು.
17:77
سُنَّةَ مَنْ قَدْ أَرْسَلْنَا قَبْلَكَ مِنْ رُسُلِنَا ۖ وَلَا تَجِدُ لِسُنَّتِنَا تَحْوِيلًا ۞
ನಾವು ನಿಮಗಿಂತ ಮುಂಚೆ ಕಳಿಸಿದ ನಮ್ಮ ದೂತರ ವಿಷಯದಲ್ಲಿ ನಾವು ಪಾಲಿಸಿದ ನಿಯಮ (ನೆನಪಿರಲಿ). ನೀವು ನಮ್ಮ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
17:78
أَقِمِ الصَّلَاةَ لِدُلُوكِ الشَّمْسِ إِلَىٰ غَسَقِ اللَّيْلِ وَقُرْآنَ الْفَجْرِ ۖ إِنَّ قُرْآنَ الْفَجْرِ كَانَ مَشْهُودًا ۞
ಸೂರ್ಯನ ಇಳಿಮುಖ ಆರಂಭವಾಗಿ ರಾತ್ರಿಯ ಕತ್ತಲು ಆವರಿಸಿಬಿಡುವ ತನಕ ನಮಾಝ್‌ಅನ್ನು ಪಾಲಿಸಿರಿ ಮತ್ತು ಮುಂಜಾವಿನ ಕುರ್‌ಆನ್ (ಪಠಣ) - ಖಂಡಿತವಾಗಿಯೂ ಮುಂಜಾವಿನ ಕುರ್‌ಆನ್ ಸಾಕ್ಷಿಯಾಗಿರುತ್ತದೆ.
17:79
وَمِنَ اللَّيْلِ فَتَهَجَّدْ بِهِ نَافِلَةً لَكَ عَسَىٰ أَنْ يَبْعَثَكَ رَبُّكَ مَقَامًا مَحْمُودًا ۞
ಇನ್ನು ರಾತ್ರಿಯ ಒಂದು ಭಾಗದಲ್ಲಿ ‘ತಹಜ್ಜುದ್’ ನಮಾಝ್‌ಅನ್ನು ಸಲ್ಲಿಸಿರಿ. ಇದು ನಿಮ್ಮ ಮೇಲಿನ ಹೆಚ್ಚುವರಿ ಹೊಣೆಯಾಗಿದೆ - ನಿಮ್ಮ ಒಡೆಯನು ನಿಮ್ಮನ್ನು ‘ಮಹ್ಮೂದ್’ (ವ್ಯಾಪಕವಾಗಿ ಹೊಗಳಲ್ಪಡುವ) ಸ್ಥಾನಕ್ಕೆ ತಲುಪಿಸಲೂಬಹುದು.
17:80
وَقُلْ رَبِّ أَدْخِلْنِي مُدْخَلَ صِدْقٍ وَأَخْرِجْنِي مُخْرَجَ صِدْقٍ وَاجْعَلْ لِي مِنْ لَدُنْكَ سُلْطَانًا نَصِيرًا ۞
ಮತ್ತು ಹೇಳಿರಿ; ನನ್ನೊಡೆಯಾ, ನೀನು ನನ್ನನ್ನು ತಲುಪಿಸುವಲ್ಲಿಗೆಲ್ಲಾ ಸತ್ಯದೊಂದಿಗೇ ತಲುಪಿಸು ಹಾಗೂ ನನ್ನನ್ನು ನೀನು ಹೊರಡಿಸುವ ಎಲ್ಲೆಡೆಯಿಂದಲೂ ಸತ್ಯದೊಂದಿಗೇ ಹೊರಡಿಸು ಮತ್ತು ನಿನ್ನ ಕಡೆಯಿಂದ ನನಗೆ ಸಹಾಯಕ ಶಕ್ತಿಯನ್ನು ಒದಗಿಸು.
17:81
وَقُلْ جَاءَ الْحَقُّ وَزَهَقَ الْبَاطِلُ ۚ إِنَّ الْبَاطِلَ كَانَ زَهُوقًا ۞
ಮತ್ತು ಹೇಳಿರಿ; ಸತ್ಯವು ಬಂದು ಬಿಟ್ಟಿತು ಮತ್ತು ಅಸತ್ಯವು ಅಳಿದು ಹೋಯಿತು - ಖಂಡಿತವಾಗಿಯೂ ಅಸತ್ಯವು ಅಳಿಯುವಂತಹದೇ ಆಗಿದೆ.
17:82
وَنُنَزِّلُ مِنَ الْقُرْآنِ مَا هُوَ شِفَاءٌ وَرَحْمَةٌ لِلْمُؤْمِنِينَ ۙ وَلَا يَزِيدُ الظَّالِمِينَ إِلَّا خَسَارًا ۞
ನಾವು ಇಳಿಸಿಕೊಡುವ ಕುರ್‌ಆನ್‌ನ ಭಾಗವು ವಿಶ್ವಾಸಿಗಳ ಪಾಲಿಗೆ ಗುಣ ಹಾಗೂ ಅನುಗ್ರಹವಾಗಿರುತ್ತದೆ. ಆದರೆ ಅಕ್ರಮಿಗಳ ಮಟ್ಟಿಗೆ ಇದು ಅವರ ನಷ್ಟವನ್ನಷ್ಟೇ ಹೆಚ್ಚಿಸುತ್ತದೆ.
17:83
وَإِذَا أَنْعَمْنَا عَلَى الْإِنْسَانِ أَعْرَضَ وَنَأَىٰ بِجَانِبِهِ ۖ وَإِذَا مَسَّهُ الشَّرُّ كَانَ يَئُوسًا ۞
ನಾವು ಮಾನವನಿಗೆ ಕೊಡುಗೆಗಳನ್ನು ದಯಪಾಲಿಸಿದಾಗ ಅವನು (ನಮ್ಮನ್ನು ಕಡೆಗಣಿಸುತ್ತಾ) ಮುಖ ತಿರುಗಿಸಿಕೊಳ್ಳುತ್ತಾನೆ ಮತ್ತು ಮಗ್ಗಲು ಬದಲಾಯಿಸುತ್ತಾನೆ . ಇನ್ನು ಅವನಿಗೇನಾದರೂ ಹಾನಿ ಸಂಭವಿಸಿದರೆ, ಅವನು ಹತಾಶನಾಗಿ ಬಿಡುತ್ತಾನೆ.
17:84
قُلْ كُلٌّ يَعْمَلُ عَلَىٰ شَاكِلَتِهِ فَرَبُّكُمْ أَعْلَمُ بِمَنْ هُوَ أَهْدَىٰ سَبِيلًا ۞
ಹೇಳಿರಿ; ಪ್ರತಿಯೊಬ್ಬನೂ ತನ್ನದೇ ಶೈಲಿಯಲ್ಲಿ ಕೆಲಸಮಾಡುತ್ತಾನೆ - ಯಾರು ಸರಿದಾರಿಯಲ್ಲಿರುವರು ಎಂಬುದನ್ನು ನಿಮ್ಮ ಒಡೆಯನು ಚೆನ್ನಾಗಿ ಬಲ್ಲನು.
17:85
وَيَسْأَلُونَكَ عَنِ الرُّوحِ ۖ قُلِ الرُّوحُ مِنْ أَمْرِ رَبِّي وَمَا أُوتِيتُمْ مِنَ الْعِلْمِ إِلَّا قَلِيلًا ۞
ಅವರು ನಿಮ್ಮೊಡನೆ ‘ರೂಹ್’ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ರೂಹ್ ನನ್ನ ಒಡೆಯನ ಆದೇಶಗಳಲ್ಲೊಂದು. ನಿಮಗೆ ತೀರಾ ಸೀಮಿತ ಜ್ಞಾನವನ್ನಷ್ಟೇ ನೀಡಲಾಗಿದೆ.
17:86
وَلَئِنْ شِئْنَا لَنَذْهَبَنَّ بِالَّذِي أَوْحَيْنَا إِلَيْكَ ثُمَّ لَا تَجِدُ لَكَ بِهِ عَلَيْنَا وَكِيلًا ۞
ನಾವು ಬಯಸಿದರೆ, ದಿವ್ಯವಾಣಿಯ ಮೂಲಕ ನಿಮಗೆ ಕೊಟ್ಟಿರುವುದನ್ನೆಲ್ಲಾ ಕಿತ್ತುಕೊಳ್ಳಬಲ್ಲೆವು. ಮತ್ತು ನಮ್ಮೆದುರು ನಿಮಗೆ ಯಾವ ಸಹಾಯಕರೂ ಸಿಗಲಾರರು-
17:87
إِلَّا رَحْمَةً مِنْ رَبِّكَ ۚ إِنَّ فَضْلَهُ كَانَ عَلَيْكَ كَبِيرًا ۞
- ನಿಮ್ಮ ಒಡೆಯನ ಕೃಪೆಯ ಹೊರತು. ನಿಮ್ಮ ಮೇಲಿರುವ ಅವನ ಅನುಗ್ರಹವು ನಿಜಕ್ಕೂ ದೊಡ್ಡದು.
17:88
قُلْ لَئِنِ اجْتَمَعَتِ الْإِنْسُ وَالْجِنُّ عَلَىٰ أَنْ يَأْتُوا بِمِثْلِ هَٰذَا الْقُرْآنِ لَا يَأْتُونَ بِمِثْلِهِ وَلَوْ كَانَ بَعْضُهُمْ لِبَعْضٍ ظَهِيرًا ۞
(ದೂತರೇ,) ಹೇಳಿರಿ; ಇಂತಹ ಇನ್ನೊಂದು ಕುರ್‌ಆನ್‌ಅನ್ನು ರಚಿಸಲಿಕ್ಕೆಂದು ಎಲ್ಲ ಮಾನವರು ಮತ್ತು ಜಿನ್ನ್‌ಗಳು ಒಂದು ಗೂಡಿದರೂ, ಇಂತಹದೊಂದನ್ನು ರಚಿಸಿ ತರಲು ಅವರಿಂದಾಗದು - ಅವರು (ಇದಕ್ಕಾಗಿ) ಪರಸ್ಪರ ನೆರವಾದರೂ ಸರಿಯೇ.
17:89
وَلَقَدْ صَرَّفْنَا لِلنَّاسِ فِي هَٰذَا الْقُرْآنِ مِنْ كُلِّ مَثَلٍ فَأَبَىٰ أَكْثَرُ النَّاسِ إِلَّا كُفُورًا ۞
ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ಬಗೆಯ ಸಕಲ ಉದಾಹರಣೆಗಳನ್ನು ಮುಂದಿಟ್ಟಿರುವೆವು - ಆದರೆ ಜನರಲ್ಲಿ ಹೆಚ್ಚಿನವರು ಧಿಕ್ಕರಿಸಿದರು.
17:90
وَقَالُوا لَنْ نُؤْمِنَ لَكَ حَتَّىٰ تَفْجُرَ لَنَا مِنَ الْأَرْضِ يَنْبُوعًا ۞
ಅವರು ಹೇಳುತ್ತಾರೆ; ನೀವು ನಮಗಾಗಿ ಭೂಮಿಯಿಂದ ಒಂದು ಚಿಲುಮೆಯನ್ನು ಹೊರಡಿಸುವ ತನಕ. ನಾವು ನಿಮ್ಮ ಮಾತನ್ನು ನಂಬಲಾರೆವು.
17:91
أَوْ تَكُونَ لَكَ جَنَّةٌ مِنْ نَخِيلٍ وَعِنَبٍ فَتُفَجِّرَ الْأَنْهَارَ خِلَالَهَا تَفْجِيرًا ۞
ಅಥವಾ ನಿಮ್ಮ ಬಳಿ ಖರ್ಜೂರ ಹಾಗೂ ದ್ರಾಕ್ಷಿಗಳ ಒಂದು ತೋಟವಿದ್ದು, ನೀವು ಅದರ ನಡು ಮಧ್ಯದಲ್ಲಿ ಕಾಲುವೆಗಳನ್ನು ಹರಿಸುವ ತನಕ (ನಾವು ನಂಬಲಾರೆವು).
17:92
أَوْ تُسْقِطَ السَّمَاءَ كَمَا زَعَمْتَ عَلَيْنَا كِسَفًا أَوْ تَأْتِيَ بِاللَّهِ وَالْمَلَائِكَةِ قَبِيلًا ۞
ಅಥವಾ ನೀವೇ ಹೇಳಿಕೊಳ್ಳುವಂತೆ, ಆಕಾಶದಿಂದ ತುಂಡುಗಳನ್ನು ನೀವು ನಮ್ಮ ಮೇಲೆ ಬೀಳಿಸುವ ತನಕ ಅಥವಾ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುವ ತನಕ (ನಾವು ನಂಬಲಾರೆವು).
17:93
أَوْ يَكُونَ لَكَ بَيْتٌ مِنْ زُخْرُفٍ أَوْ تَرْقَىٰ فِي السَّمَاءِ وَلَنْ نُؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَقْرَؤُهُ ۗ قُلْ سُبْحَانَ رَبِّي هَلْ كُنْتُ إِلَّا بَشَرًا رَسُولًا ۞
ಅಥವಾ ನಿಮ್ಮ ಬಳಿ ಬಂಗಾರದ ಒಂದು ಮನೆ ಇರುವ ತನಕ ಅಥವಾ ನೀವು ಆಕಾಶಕ್ಕೆ ಏರಿ ಹೋಗುವ ತನಕ (ನಾವು ನಂಬಲಾರೆವು). ಇನ್ನು ನೀವು ಅಲ್ಲಿಂದ, ನಾವು ಓದಬಹುದಾದ ಒಂದು ಗ್ರಂಥವನ್ನು ನಮಗಾಗಿ ಇಳಿಸಿ ಕೊಡುವ ತನಕ ನೀವು ಏರಿ ಹೋಗಿರುವುದನ್ನೂ ನಾವು ನಂಬಲಾರೆವು (ಎಂದು ಅವರು ಹೇಳುತ್ತಾರೆ). ನೀವು ಹೇಳಿರಿ; ನನ್ನ ಒಡೆಯನು ಪರಮ ಪಾವನನು. ನಾನು ದೂತನಾಗಿರುವ ಒಬ್ಬ ಮಾನವ ಮಾತ್ರನಲ್ಲವೇ?
17:94
وَمَا مَنَعَ النَّاسَ أَنْ يُؤْمِنُوا إِذْ جَاءَهُمُ الْهُدَىٰ إِلَّا أَنْ قَالُوا أَبَعَثَ اللَّهُ بَشَرًا رَسُولًا ۞
ನಿಜವಾಗಿ, ಜನರ ಬಳಿಗೆ ಮಾರ್ಗದರ್ಶನ ಬಂದಾಗಲೆಲ್ಲಾ, ‘‘ಅಲ್ಲಾಹನೇನು ಒಬ್ಬ ಮಾನವನನ್ನು ದೂತನಾಗಿ ಕಳಿಸಿರುವನೇ?’’ ಎಂಬ ಪ್ರಶ್ನೆಯೇ ಅದನ್ನು ನಂಬದಂತೆ ಅವರನ್ನು ತಡೆದಿತ್ತು.
17:95
قُلْ لَوْ كَانَ فِي الْأَرْضِ مَلَائِكَةٌ يَمْشُونَ مُطْمَئِنِّينَ لَنَزَّلْنَا عَلَيْهِمْ مِنَ السَّمَاءِ مَلَكًا رَسُولًا ۞
ಹೇಳಿರಿ; ಒಂದು ವೇಳೆ ಭೂಮಿಯಲ್ಲಿ ಮಲಕ್‌ಗಳು ನೆಮ್ಮದಿಯಿಂದ ನಡೆದಾಡುತ್ತಾ ಇದ್ದಿದ್ದರೆ ನಾವು ಖಂಡಿತವಾಗಿಯೂ ಆಕಾಶದಿಂದ ಅವರಿಗಾಗಿ ಒಬ್ಬ ಮಲಕ್‌ನನ್ನೇ ದೂತನಾಗಿ ಇಳಿಸುತ್ತಿದ್ದೆವು.
17:96
قُلْ كَفَىٰ بِاللَّهِ شَهِيدًا بَيْنِي وَبَيْنَكُمْ ۚ إِنَّهُ كَانَ بِعِبَادِهِ خَبِيرًا بَصِيرًا ۞
ಹೇಳಿರಿ; ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಸಂಪೂರ್ಣ ಅರಿವು ಉಳ್ಳವನಾಗಿದ್ದಾನೆ ಮತ್ತು ಅವರನ್ನು ಸದಾ ನೋಡುತ್ತಿರುವವನಾಗಿದ್ದಾನೆ.
17:97
وَمَنْ يَهْدِ اللَّهُ فَهُوَ الْمُهْتَدِ ۖ وَمَنْ يُضْلِلْ فَلَنْ تَجِدَ لَهُمْ أَوْلِيَاءَ مِنْ دُونِهِ ۖ وَنَحْشُرُهُمْ يَوْمَ الْقِيَامَةِ عَلَىٰ وُجُوهِهِمْ عُمْيًا وَبُكْمًا وَصُمًّا ۖ مَأْوَاهُمْ جَهَنَّمُ ۖ كُلَّمَا خَبَتْ زِدْنَاهُمْ سَعِيرًا ۞
ಯಾರಿಗೆ ಅಲ್ಲಾಹನು ದಾರಿ ತೋರಿದನೋ ಅವನು ಮಾತ್ರ ಸರಿದಾರಿಯಲ್ಲಿರುತ್ತಾನೆ. ಇನ್ನು ಅವನು ದಾರಿಗೆಡಿಸಿ ಬಿಟ್ಟವರಿಗಾಗಿ ನೀವು ಅವನ ಹೊರತು ಬೇರಾವ ರಕ್ಷಕನನ್ನೂ ಕಾಣಲಾರಿರಿ. ಪುನರುತ್ಥಾನ ದಿನ ನಾವು ಅವರನ್ನು, ಅವರ ಮುಖಗಳು ನೆಲಕ್ಕೆ ಒರಗಿರುವ ಸ್ಥಿತಿಯಲ್ಲಿ, ಕುರುಡರಾಗಿಯೂ ಮೂಗರಾಗಿಯೂ ಕಿವುಡರಾಗಿಯೂ ಒಟ್ಟು ಸೇರಿಸುವೆವು. ನರಕವೇ ಅವರ ನೆಲೆಯಾಗಿರುವುದು. ಅದರ ಬೆಂಕಿಯು ಮಂದವಾದಂತೆಲ್ಲಾ ನಾವು ಮತ್ತೆ ಅದನ್ನು ಭುಗಿಲೆಬ್ಬಿಸುತ್ತಿರುವೆವು.
17:98
ذَٰلِكَ جَزَاؤُهُمْ بِأَنَّهُمْ كَفَرُوا بِآيَاتِنَا وَقَالُوا أَإِذَا كُنَّا عِظَامًا وَرُفَاتًا أَإِنَّا لَمَبْعُوثُونَ خَلْقًا جَدِيدًا ۞
ಇದು, ಅವರು ನಮ್ಮ ವಚನಗಳನ್ನು ಧಿಕ್ಕರಿಸಿದ್ದಕ್ಕಾಗಿ ಮತ್ತು ‘‘ನಾವು ಕೇವಲ ಎಲುಬುಗಳಾಗಿಯೂ ಛಿದ್ರ ಛಿದ್ರರಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಹೊಸದಾಗಿ ಸೃಷ್ಟಿಸಿ ಜೀವಂತಗೊಳಿಸಲಾಗುವುದೇ?’’ ಎಂದುದಕ್ಕಾಗಿ ಅವರಿಗೆ ಸಿಗಲಿರುವ ಪ್ರತಿಫಲವಾಗಿದೆ.
17:99
۞ أَوَلَمْ يَرَوْا أَنَّ اللَّهَ الَّذِي خَلَقَ السَّمَاوَاتِ وَالْأَرْضَ قَادِرٌ عَلَىٰ أَنْ يَخْلُقَ مِثْلَهُمْ وَجَعَلَ لَهُمْ أَجَلًا لَا رَيْبَ فِيهِ فَأَبَى الظَّالِمُونَ إِلَّا كُفُورًا ۞
ಅವರೇನು ಕಾಣುತ್ತಿಲ್ಲವೇ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು, ಅವರಂತಹವರನ್ನು ಸೃಷ್ಟಿಸಲು ಖಂಡಿತ ಶಕ್ತನಾಗಿರುವನೆಂದು? ನಿಜವಾಗಿ ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿರುವನು - ಅದರಲ್ಲಿ ಸಂಶಯವೇನೂ ಇಲ್ಲ. ಆದರೂ ಅಕ್ರಮಿಗಳು ಧಿಕ್ಕಾರದ ನೀತಿಯಲ್ಲೇ ಸ್ಥಿರರಾಗಿದ್ದಾರೆ.
17:100
قُلْ لَوْ أَنْتُمْ تَمْلِكُونَ خَزَائِنَ رَحْمَةِ رَبِّي إِذًا لَأَمْسَكْتُمْ خَشْيَةَ الْإِنْفَاقِ ۚ وَكَانَ الْإِنْسَانُ قَتُورًا ۞
ಹೇಳಿರಿ; ಒಂದು ವೇಳೆ ನನ್ನ ಒಡೆಯನ ಭಂಡಾರಗಳೆಲ್ಲಾ ನಿಮ್ಮ ಮಾಲಕತ್ವದಲ್ಲಿ ಇದ್ದಿದ್ದರೆ, ಎಲ್ಲಿ ಖರ್ಚಾಗಿ ಬಿಡುವುದೋ ಎಂಬ ಭಯದಿಂದ ನೀವು ಅದನ್ನೆಲ್ಲಾ ತಡೆದಿಟ್ಟುಕೊಳ್ಳುತ್ತಿದ್ದಿರಿ - ಮಾನವನು ನಿಜಕ್ಕೂ ತೀರಾ ಸಣ್ಣ ಮನಸ್ಸಿನವನಾಗಿದ್ದಾನೆ.
17:101
وَلَقَدْ آتَيْنَا مُوسَىٰ تِسْعَ آيَاتٍ بَيِّنَاتٍ ۖ فَاسْأَلْ بَنِي إِسْرَائِيلَ إِذْ جَاءَهُمْ فَقَالَ لَهُ فِرْعَوْنُ إِنِّي لَأَظُنُّكَ يَا مُوسَىٰ مَسْحُورًا ۞
ನಾವು ಮೂಸಾರಿಗೆ ಸ್ಪಷ್ಟವಾದ ಒಂಭತ್ತು ಪುರಾವೆಗಳನ್ನು ನೀಡಿದ್ದೆವು. ನೀವು ಇಸ್ರಾಈಲರ ಸಂತತಿಗಳೊಡನೆ ಕೇಳಿ ನೋಡಿರಿ. ಅವರ ಬಳಿಗೆ ಅವರು (ಮೂಸಾ) ಬಂದಾಗ ಅವರೊಡನೆ ಫಿರ್‌ಔನ್ ಹೇಳಿದನು; ಓ ಮೂಸಾ, ನಾನಂತು ನಿನ್ನನ್ನು ಮಾಟಪೀಡಿತನೆಂದೇ ಭಾವಿಸುತ್ತೇನೆ.
17:102
قَالَ لَقَدْ عَلِمْتَ مَا أَنْزَلَ هَٰؤُلَاءِ إِلَّا رَبُّ السَّمَاوَاتِ وَالْأَرْضِ بَصَائِرَ وَإِنِّي لَأَظُنُّكَ يَا فِرْعَوْنُ مَثْبُورًا ۞
ಅವರು (ಮೂಸಾ) ಹೇಳಿದರು; ಇವುಗಳನ್ನೆಲ್ಲಾ (ಜನರ) ಕಣ್ಣು ತೆರೆಸಲಿಕ್ಕಾಗಿ ಆಕಾಶಗಳ ಮತ್ತು ಭೂಮಿಯ ಒಡೆಯನೇ ಇಳಿಸಿ ಕೊಟ್ಟಿರುವನೆಂಬುದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್‌ಔನ್, ನಾನಂತು ನಿನ್ನನ್ನು ಸರ್ವನಾಶವಾಗುವವನೆಂದು ಭಾವಿಸುತ್ತೇನೆ.
17:103
فَأَرَادَ أَنْ يَسْتَفِزَّهُمْ مِنَ الْأَرْضِ فَأَغْرَقْنَاهُ وَمَنْ مَعَهُ جَمِيعًا ۞
ಆ ಬಳಿಕ ಅವನು ಅವರನ್ನು ಭೂಮಿಯಿಂದ ನಿರ್ಮೂಲನ ಗೊಳಿಸಬಯಸಿದನು. ಆದರೆ ನಾವು ಅವನನ್ನು ಹಾಗೂ ಅವನ ಜೊತೆಗಿದ್ದ ಎಲ್ಲರನ್ನೂ ಮುಳುಗಿಸಿಬಿಟ್ಟೆವು.
17:104
وَقُلْنَا مِنْ بَعْدِهِ لِبَنِي إِسْرَائِيلَ اسْكُنُوا الْأَرْضَ فَإِذَا جَاءَ وَعْدُ الْآخِرَةِ جِئْنَا بِكُمْ لَفِيفًا ۞
ಆ ಬಳಿಕ ನಾವು ಇಸ್ರಾಈಲರ ಸಂತತಿಯೊಡನೆ, ‘‘ನೀವು ಭೂಮಿಯಲ್ಲಿ ವಾಸಿಸಿರಿ. ಕೊನೆಗೆ ಲೋಕಾಂತ್ಯದ ವಾಗ್ದಾನಿತ ಸಮಯ ಬಂದಾಗ ನಾವು ನಿಮ್ಮೆಲ್ಲರನ್ನು ಒಂದಾಗಿ ಹೊರತರುವೆವು’’ ಎಂದೆವು.
17:105
وَبِالْحَقِّ أَنْزَلْنَاهُ وَبِالْحَقِّ نَزَلَ ۗ وَمَا أَرْسَلْنَاكَ إِلَّا مُبَشِّرًا وَنَذِيرًا ۞
ನಾವು ಇದನ್ನು (ಕುರ್‌ಆನನ್ನು) ಸತ್ಯದೊಂದಿಗೆ ಇಳಿಸಿಕೊಟ್ಟಿರುವೆವು ಮತ್ತು ಇದು ಸತ್ಯದೊಂದಿಗೇ ಇಳಿದು ಬಂದಿದೆ. ಇನ್ನು ನಿಮ್ಮನ್ನು ನಾವು ಸುವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿಯೇ ಕಳಿಸಿರುತ್ತೇವೆ.
17:106
وَقُرْآنًا فَرَقْنَاهُ لِتَقْرَأَهُ عَلَى النَّاسِ عَلَىٰ مُكْثٍ وَنَزَّلْنَاهُ تَنْزِيلًا ۞
ನೀವು ಅದನ್ನು ಸ್ವಲ್ಪ ಸ್ವಲ್ಪವಾಗಿ ಜನರಿಗೆ ಕೇಳಿಸುತ್ತಿರಬೇಕೆಂದು, ನಾವು ಕುರ್‌ಆನನ್ನು ಭಾಗ ಭಾಗವಾಗಿ ಇಳಿಸಿ ಕೊಟ್ಟಿರುವೆವು. ಮತ್ತು ನಾವು ಅದನ್ನು ಬಹಳ ಯೋಜಿತ ರೀತಿಯಲ್ಲಿ ಇಳಿಸಿಕೊಟ್ಟಿರುವೆವು.
17:107
قُلْ آمِنُوا بِهِ أَوْ لَا تُؤْمِنُوا ۚ إِنَّ الَّذِينَ أُوتُوا الْعِلْمَ مِنْ قَبْلِهِ إِذَا يُتْلَىٰ عَلَيْهِمْ يَخِرُّونَ لِلْأَذْقَانِ سُجَّدًا ۞
ಹೇಳಿರಿ; ನೀವು ಇದನ್ನು ನಂಬಿರಿ ಅಥವಾ ನಂಬದೆ ಇರಿ - ಆದರೆ ಈ ಹಿಂದೆ ಜ್ಞಾನ ಪ್ರಾಪ್ತವಾಗಿದ್ದವರು ಮಾತ್ರ ತಮಗೆ ಇದನ್ನು ಕೇಳಿಸಲಾದಾಗ, ತಮ್ಮ ಮುಖಗಳನ್ನು ನೆಲಕ್ಕಿಟ್ಟು ಸಾಷ್ಟಾಂಗವೆರಗಿ ಬಿಡುತ್ತಾರೆ.
17:108
وَيَقُولُونَ سُبْحَانَ رَبِّنَا إِنْ كَانَ وَعْدُ رَبِّنَا لَمَفْعُولًا ۞
ಮತ್ತು ಅವರು, ‘‘ನಮ್ಮೊಡೆಯನು ಪರಮ ಪಾವನನು. ನಮ್ಮ ಒಡೆಯನು ಮಾಡಿರುವ ವಾಗ್ದಾನವು ಖಂಡಿತ ಪೂರ್ತಿಯಾಗಲಿದೆ’’ಎನ್ನುತ್ತಾರೆ;
17:109
وَيَخِرُّونَ لِلْأَذْقَانِ يَبْكُونَ وَيَزِيدُهُمْ خُشُوعًا ۩ ۞
ಹಾಗೆಯೇ ಅವರು ರೋದಿಸುತ್ತಾ ತಮ್ಮ ಮುಖಗಳನ್ನು ನೆಲಕ್ಕಿಟ್ಟು ಬಿಡುತ್ತಾರೆ ಮತ್ತು ಇದು (ಕುರ್‌ಆನ್) ಅವರ ಭಕ್ತಿ ಭಾವವನ್ನು ಹೆಚ್ಚಿಸುತ್ತಲೇ ಇರುತ್ತದೆ.
17:110
قُلِ ادْعُوا اللَّهَ أَوِ ادْعُوا الرَّحْمَٰنَ ۖ أَيًّا مَا تَدْعُوا فَلَهُ الْأَسْمَاءُ الْحُسْنَىٰ ۚ وَلَا تَجْهَرْ بِصَلَاتِكَ وَلَا تُخَافِتْ بِهَا وَابْتَغِ بَيْنَ ذَٰلِكَ سَبِيلًا ۞
ನೀವು (ಅವನನ್ನು) ಅಲ್ಲಾಹನೆಂದು ಕರೆಯಿರಿ ಅಥವಾ ರಹ್ಮಾನನೆಂದು ಕರೆಯಿರಿ. ನೀವು ಅವನನ್ನು ಏನೆಂದು ಕರೆದರೂ ಅತ್ಯುತ್ತಮ ಹೆಸರುಗಳೆಲ್ಲಾ ಅವನಿಗಾಗಿಯೇ ಇವೆ. ನೀವು ನಿಮ್ಮ ನಮಾಝ್‌ಗಳಲ್ಲಿ ಹೆಚ್ಚು ಧ್ವನಿಯೇರಿಸಬೇಡಿ ಮತ್ತು ಅವುಗಳನ್ನು ತೀರಾ ನಿಶ್ಯಬ್ದ ಗೊಳಿಸಲೂ ಬೇಡಿ. ಅವೆರಡರ ನಡುವಿನ (ಮಧ್ಯಮ) ಮಾರ್ಗವನ್ನು ಅನುಸರಿಸಿರಿ.
17:111
وَقُلِ الْحَمْدُ لِلَّهِ الَّذِي لَمْ يَتَّخِذْ وَلَدًا وَلَمْ يَكُنْ لَهُ شَرِيكٌ فِي الْمُلْكِ وَلَمْ يَكُنْ لَهُ وَلِيٌّ مِنَ الذُّلِّ ۖ وَكَبِّرْهُ تَكْبِيرًا ۞
ಹೇಳಿರಿ; ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ ಮೀಸಲು. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ. ವಿಶ್ವಾಧಿಪತ್ಯದಲ್ಲಿ ಅವನಿಗೆ ಯಾರೂ ಪಾಲುದಾರರಿಲ್ಲ. ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ನೀವು ಅವನ ಮಹಿಮೆಯನ್ನ್ನು ಕೊಂಡಾಡಬೇಕಾದ ರೀತಿಯಲ್ಲಿ ಕೊಂಡಾಡಿರಿ.