At-Taghabun (Mutual disillusion)
64. ಅತ್ತಗಾಬುನ್(ಎಳೆದಾಟ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
64:1
يُسَبِّحُ لِلَّهِ مَا فِي السَّمَاوَاتِ وَمَا فِي الْأَرْضِ ۖ لَهُ الْمُلْكُ وَلَهُ الْحَمْدُ ۖ وَهُوَ عَلَىٰ كُلِّ شَيْءٍ قَدِيرٌ
۞
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರ್ಯವನ್ನು ಜಪಿಸುತ್ತಿವೆ. ಆಧಿಪತ್ಯವು ಅವನಿಗೇ ಸೇರಿದೆ. ಪ್ರಶಂಸೆಗಳು ಅವನಿಗೇ ಮೀಸಲು. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
64:2
هُوَ الَّذِي خَلَقَكُمْ فَمِنْكُمْ كَافِرٌ وَمِنْكُمْ مُؤْمِنٌ ۚ وَاللَّهُ بِمَا تَعْمَلُونَ بَصِيرٌ
۞
ಅವನೇ ನಿಮ್ಮನ್ನು ಸೃಷ್ಟಿಸಿದವನು. ಇನ್ನು, ನಿಮ್ಮಲ್ಲಿ ಧಿಕ್ಕಾರಿಗಳೂ ಇದ್ದಾರೆ ಮತ್ತು ನಿಮ್ಮಲ್ಲಿ ವಿಶ್ವಾಸಿಗಳೂ ಇದ್ದಾರೆ. ಮತ್ತು ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದಾನೆ.
64:3
خَلَقَ السَّمَاوَاتِ وَالْأَرْضَ بِالْحَقِّ وَصَوَّرَكُمْ فَأَحْسَنَ صُوَرَكُمْ ۖ وَإِلَيْهِ الْمَصِيرُ
۞
ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ನ್ಯಾಯೋಚಿತವಾಗಿ ಸೃಷ್ಟಿಸಿರುವನು. ಅವನೇ ನಿಮಗೆ ರೂಪ ನೀಡಿದವನು. ಮತ್ತು ಅವನು ನಿಮಗೆ ಬಹಳ ಶ್ರೇಷ್ಠ ರೂಪವನ್ನು ನೀಡಿರುವನು. (ಕೊನೆಗೆ ಎಲ್ಲರೂ) ಅವನ ಕಡೆಗೇ ಮರಳಬೇಕಾಗಿದೆ.
64:4
يَعْلَمُ مَا فِي السَّمَاوَاتِ وَالْأَرْضِ وَيَعْلَمُ مَا تُسِرُّونَ وَمَا تُعْلِنُونَ ۚ وَاللَّهُ عَلِيمٌ بِذَاتِ الصُّدُورِ
۞
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಎಲ್ಲವನ್ನೂ ಅವನು ಬಲ್ಲನು. ಹಾಗೂ ನೀವು ಗುಟ್ಟಾಗಿಡುವ ಮತ್ತು ಪ್ರಕಟ ಪಡಿಸುವ ಎಲ್ಲವನ್ನೂ ಅವನು ಬಲ್ಲನು. ಅಲ್ಲಾಹನು ಮನಸ್ಸಿನ ರಹಸ್ಯಗಳನ್ನೂ ಬಲ್ಲವನಾಗಿದ್ದಾನೆ.
64:5
أَلَمْ يَأْتِكُمْ نَبَأُ الَّذِينَ كَفَرُوا مِنْ قَبْلُ فَذَاقُوا وَبَالَ أَمْرِهِمْ وَلَهُمْ عَذَابٌ أَلِيمٌ
۞
ಗತಕಾಲದ ಧಿಕ್ಕಾರಿಗಳ ಸಮಾಚಾರವು ನಿಮಗೆ ತಲುಪಿಲ್ಲವೇ? ಅವರು ತಮ್ಮ ಕೃತ್ಯಗಳ ಫಲವನ್ನು ಅನುಭವಿಸಿದರು ಮತ್ತು ಅವರಿಗೆ ಕಠಿಣ ಶಿಕ್ಷೆ ಕಾದಿದೆ.
64:6
ذَٰلِكَ بِأَنَّهُ كَانَتْ تَأْتِيهِمْ رُسُلُهُمْ بِالْبَيِّنَاتِ فَقَالُوا أَبَشَرٌ يَهْدُونَنَا فَكَفَرُوا وَتَوَلَّوْا ۚ وَاسْتَغْنَى اللَّهُ ۚ وَاللَّهُ غَنِيٌّ حَمِيدٌ
۞
ಏಕೆಂದರೆ ಅವರ (ಕಾಲದ) ದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು, ‘‘ಏನು? ಮನುಷ್ಯರು ನಮ್ಮ ಮಾರ್ಗದರ್ಶಿಗಳಾಗುವುದೇ?’’ ಎನ್ನುತ್ತಾ ಧಿಕ್ಕರಿಸಿದರು ಹಾಗೂ ಮುಖ ತಿರುಗಿಸಿ ಕೊಂಡರು. ಅಲ್ಲಾಹನು ಅವರನ್ನು ಕಡೆಗಣಿಸಿ ಬಿಟ್ಟನು. ಅಲ್ಲಾಹನು ಅಪೇಕ್ಷೆಗಳಿಲ್ಲದವನು ಮತ್ತು ಪ್ರಶಂಸಾರ್ಹನಾಗಿದ್ದಾನೆ.
64:7
زَعَمَ الَّذِينَ كَفَرُوا أَنْ لَنْ يُبْعَثُوا ۚ قُلْ بَلَىٰ وَرَبِّي لَتُبْعَثُنَّ ثُمَّ لَتُنَبَّؤُنَّ بِمَا عَمِلْتُمْ ۚ وَذَٰلِكَ عَلَى اللَّهِ يَسِيرٌ
۞
ಧಿಕ್ಕಾರಿಗಳು, ತಮ್ಮನ್ನು ಮತ್ತೆ ಜೀವಂತ ಗೊಳಿಸಲಾಗದು ಎಂದು ನಂಬಿ ಕೊಂಡಿದ್ದಾರೆ. ಹೇಳಿರಿ; ಯಾಕಿಲ್ಲ? ನನ್ನೊಡೆಯನಾಣೆ, ನಿಮ್ಮನ್ನು ಖಂಡಿತ ಮತ್ತೆ ಜೀವಂತ ಗೊಳಿಸಲಾಗುವುದು ಮತ್ತು ನೀವು ಮಾಡಿದ್ದೆಲ್ಲವನ್ನೂ ಖಂಡಿತ ನಿಮಗೆ ತಿಳಿಸಲಾಗುವುದು. ಇದು ಅಲ್ಲಾಹನ ಮಟ್ಟಿಗೆ ತುಂಬಾ ಸುಲಭದ ಕೆಲಸವಾಗಿದೆ.
64:8
فَآمِنُوا بِاللَّهِ وَرَسُولِهِ وَالنُّورِ الَّذِي أَنْزَلْنَا ۚ وَاللَّهُ بِمَا تَعْمَلُونَ خَبِيرٌ
۞
ಅಲ್ಲಾಹನಲ್ಲಿ ಮತ್ತವನ ದೂತರಲ್ಲಿ ಹಾಗೂ ನಾವು ಇಳಿಸಿ ಕೊಟ್ಟ ಬೆಳಕಿನಲ್ಲಿ ನಂಬಿಕೆ ಇಡಿರಿ. ಅಲ್ಲಾಹನಿಗೆ, ನಿಮ್ಮ ಎಲ್ಲ ಕೃತ್ಯಗಳ ಅರಿವಿದೆ.
64:9
يَوْمَ يَجْمَعُكُمْ لِيَوْمِ الْجَمْعِ ۖ ذَٰلِكَ يَوْمُ التَّغَابُنِ ۗ وَمَنْ يُؤْمِنْ بِاللَّهِ وَيَعْمَلْ صَالِحًا يُكَفِّرْ عَنْهُ سَيِّئَاتِهِ وَيُدْخِلْهُ جَنَّاتٍ تَجْرِي مِنْ تَحْتِهَا الْأَنْهَارُ خَالِدِينَ فِيهَا أَبَدًا ۚ ذَٰلِكَ الْفَوْزُ الْعَظِيمُ
۞
ಅವನು ನಿಮ್ಮನ್ನು ಒಟ್ಟು ಸೇರಿಸುವ ದಿನ, ಅಂತಿಮ ಸಮಾವೇಶದ ಆ ದಿನವು, ಭಾರೀ ನಷ್ಟದ ದಿನವಾಗಿರುವುದು. ಅಲ್ಲಾಹನು, ತನ್ನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನ ಎಲ್ಲ ಪಾಪಗಳನ್ನು ನಿವಾರಿಸುವನು ಮತ್ತು ಅವನನ್ನು, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗದೊಳಗೆ ಸೇರಿಸುವನು. ಅವರು ಅಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ಸೌಭಾಗ್ಯವಾಗಿದೆ.
64:10
وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ النَّارِ خَالِدِينَ فِيهَا ۖ وَبِئْسَ الْمَصِيرُ
۞
ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರು ಮತ್ತು ತಿರಸ್ಕರಿಸಿದವರು. ಅವರು, ನರಕ ವಾಸಿಗಳು. ಅವರು ಸದಾಕಾಲ ಅದರಲ್ಲೇ ಇರುವರು ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ.
64:11
مَا أَصَابَ مِنْ مُصِيبَةٍ إِلَّا بِإِذْنِ اللَّهِ ۗ وَمَنْ يُؤْمِنْ بِاللَّهِ يَهْدِ قَلْبَهُ ۚ وَاللَّهُ بِكُلِّ شَيْءٍ عَلِيمٌ
۞
ಅಲ್ಲಾಹನ ಆದೇಶವಿಲ್ಲದೆ, ಯಾವ ವಿಪತ್ತೂ ಎರಗುವುದಿಲ್ಲ. ಅಲ್ಲಾಹನು ತನ್ನಲ್ಲಿ ನಂಬಿಕೆ ಇಟ್ಟವರ ಮನಸ್ಸಿಗೆ ಮಾರ್ಗದರ್ಶನ ನೀಡುತ್ತಾನೆ. ಮತ್ತು ಅಲ್ಲಾಹನು ಎಲ್ಲ ವಿಷಯಗಳನ್ನೂ ಬಲ್ಲವನಾಗಿದ್ದಾನೆ.
64:12
وَأَطِيعُوا اللَّهَ وَأَطِيعُوا الرَّسُولَ ۚ فَإِنْ تَوَلَّيْتُمْ فَإِنَّمَا عَلَىٰ رَسُولِنَا الْبَلَاغُ الْمُبِينُ
۞
ಮತ್ತು ನೀವು ಅಲ್ಲಾಹನ ಆದೇಶ ಪಾಲಿಸಿರಿ ಹಾಗೂ ದೂತರ ಆದೇಶ ಪಾಲಿಸಿರಿ. ನೀವು ಅದನ್ನು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ) ನಮ್ಮ ದೂತರ ಮೇಲಿರುವುದು, ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊಣೆ ಮಾತ್ರ.
64:13
اللَّهُ لَا إِلَٰهَ إِلَّا هُوَ ۚ وَعَلَى اللَّهِ فَلْيَتَوَكَّلِ الْمُؤْمِنُونَ
۞
ಅಲ್ಲಾಹ್ - ಅವನ ಹೊರತು ಪೂಜಾರ್ಹರು ಬೇರಿಲ್ಲ. ವಿಶ್ವಾಸಿಗಳಾಗಿರುವವರು ಸಂಪೂರ್ಣವಾಗಿ ಅಲ್ಲಾಹನಲ್ಲೇ ಭರವಸೆ ಇಟ್ಟಿರುತ್ತಾರೆ.
64:14
يَا أَيُّهَا الَّذِينَ آمَنُوا إِنَّ مِنْ أَزْوَاجِكُمْ وَأَوْلَادِكُمْ عَدُوًّا لَكُمْ فَاحْذَرُوهُمْ ۚ وَإِنْ تَعْفُوا وَتَصْفَحُوا وَتَغْفِرُوا فَإِنَّ اللَّهَ غَفُورٌ رَحِيمٌ
۞
ವಿಶ್ವಾಸಿಗಳೇ, ನಿಮ್ಮ ಪತ್ನಿಯರು ಮತ್ತು ನಿಮ್ಮ ಸಂತಾನಗಳಲ್ಲಿ ನಿಮ್ಮ ಶತ್ರುಗಳಿದ್ದಾರೆ. ಅವರ ಕುರಿತು ಎಚ್ಚರವಾಗಿರಿ. ಇನ್ನು ನೀವು ಮನ್ನಿಸಿದರೆ, ಕಡೆಗಣಿಸಿದರೆ ಮತ್ತು ಕ್ಷಮಿಸಿದರೆ, ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
64:15
إِنَّمَا أَمْوَالُكُمْ وَأَوْلَادُكُمْ فِتْنَةٌ ۚ وَاللَّهُ عِنْدَهُ أَجْرٌ عَظِيمٌ
۞
ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ಪರೀಕ್ಷೆಗಳಾಗಿವೆ. ಮತ್ತು ಅಲ್ಲಾಹನ ಬಳಿ ಭವ್ಯ ಪ್ರತಿಫಲವಿದೆ.
64:16
فَاتَّقُوا اللَّهَ مَا اسْتَطَعْتُمْ وَاسْمَعُوا وَأَطِيعُوا وَأَنْفِقُوا خَيْرًا لِأَنْفُسِكُمْ ۗ وَمَنْ يُوقَ شُحَّ نَفْسِهِ فَأُولَٰئِكَ هُمُ الْمُفْلِحُونَ
۞
ನಿಮಗೆ ಸಾಧ್ಯವಿದ್ದಷ್ಟು, ಅಲ್ಲಾಹನಿಗೆ ಅಂಜಿರಿ. ಹಾಗೂ (ಅವನ ಆದೇಶಗಳನ್ನು) ಆಲಿಸಿರಿ ಮತ್ತು ಅನುಸರಿಸಿರಿ ಮತ್ತು (ಸತ್ಕಾರ್ಯಗಳಿಗೆ) ಖರ್ಚು ಮಾಡಿರಿ. ಅದು ನಿಮ್ಮ ಪಾಲಿಗೇ ಉತ್ತಮವಾಗಿದೆ. ತಮ್ಮ ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ನಿಜವಾದ ವಿಜಯಿಗಳು.
64:17
إِنْ تُقْرِضُوا اللَّهَ قَرْضًا حَسَنًا يُضَاعِفْهُ لَكُمْ وَيَغْفِرْ لَكُمْ ۚ وَاللَّهُ شَكُورٌ حَلِيمٌ
۞
ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡಿದರೆ ಅವನು ಅದನ್ನು ನಿಮಗಾಗಿ ಹೆಚ್ಚಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ಪುರಸ್ಕರಿಸುವವನು ಮತ್ತು ಸಂಯಮಿಯಾಗಿದ್ದಾನೆ.
64:18
عَالِمُ الْغَيْبِ وَالشَّهَادَةِ الْعَزِيزُ الْحَكِيمُ
۞
ಅವನು ಗುಪ್ತ ಮತ್ತು ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.