At-Tahrim (The prohibition)
66. ಅತ್ತಹ್ರೀಮ್(ನಿಷೇಧ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
66:1
يَا أَيُّهَا النَّبِيُّ لِمَ تُحَرِّمُ مَا أَحَلَّ اللَّهُ لَكَ ۖ تَبْتَغِي مَرْضَاتَ أَزْوَاجِكَ ۚ وَاللَّهُ غَفُورٌ رَحِيمٌ
۞
ಪ್ರವಾದಿವರ್ಯರೇ, ಅಲ್ಲಾಹನು ನಿಮಗೆ ಸಮ್ಮತಿಸಿರುವ ವಸ್ತುವನ್ನು (ಜೇನನ್ನು) ನೀವೇಕೆ ನಿಮ್ಮ ಮೇಲೆ ನಿಷೇಧಿಸಿ ಕೊಂಡಿರಿ? ನೀವು ನಿಮ್ಮ ಪತ್ನಿಯರನ್ನು ಮೆಚ್ಚಿಸಲು ಹೊರಟಿರಿ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುವನು.
66:2
قَدْ فَرَضَ اللَّهُ لَكُمْ تَحِلَّةَ أَيْمَانِكُمْ ۚ وَاللَّهُ مَوْلَاكُمْ ۖ وَهُوَ الْعَلِيمُ الْحَكِيمُ
۞
(ವಿಶ್ವಾಸಿಗಳೇ,) ಅಲ್ಲಾಹನು ನಿಮ್ಮ ಪ್ರಮಾಣಗಳ ಕುರಿತಂತೆ (ವಚನ ಭಂಗಕ್ಕೆ) ಪ್ರಾಯಶ್ಚಿತ್ತವನ್ನು ನಿಶ್ಚಯಿಸಿರುವನು. ಅಲ್ಲಾಹನೇ ನಿಮ್ಮ ಕಾರ್ಯ ಸಾಧಕನು ಮತ್ತು ಅವನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುವನು.
66:3
وَإِذْ أَسَرَّ النَّبِيُّ إِلَىٰ بَعْضِ أَزْوَاجِهِ حَدِيثًا فَلَمَّا نَبَّأَتْ بِهِ وَأَظْهَرَهُ اللَّهُ عَلَيْهِ عَرَّفَ بَعْضَهُ وَأَعْرَضَ عَنْ بَعْضٍ ۖ فَلَمَّا نَبَّأَهَا بِهِ قَالَتْ مَنْ أَنْبَأَكَ هَٰذَا ۖ قَالَ نَبَّأَنِيَ الْعَلِيمُ الْخَبِيرُ
۞
ಪ್ರವಾದಿವರ್ಯರು ತಮ್ಮ ಒಬ್ಬ ಪತ್ನಿಗೆ ಗುಟ್ಟಾಗಿ ಒಂದು ವಿಷಯವನ್ನು ತಿಳಿಸಿದ್ದರು. ಆಕೆ ಅದನ್ನು (ಇನ್ನೊಬ್ಬ ಪತ್ನಿಗೆ) ತಿಳಿಸಿ ಬಿಟ್ಟರು. ಮತ್ತು ಈ ಸಮಾಚಾರವನ್ನು ಅಲ್ಲಾಹನು ಅವರಿಗೆ (ಪ್ರವಾದಿಗೆ) ಬಹಿರಂಗ ಪಡಿಸಿದನು. ಅವರು (ಪ್ರವಾದಿಯು) ಈ ಸಮಾಚಾರವನ್ನು (ಆಕೆಗೆ) ಭಾಗಶಃ ತಿಳಿಸಿದರು ಮತ್ತು ಭಾಗಶಃ ಕಡೆಗಣಿಸಿದರು. ಅವರು ಈ ವಿಷಯವನ್ನು ಆಕೆಗೆ ತಿಳಿಸಿದಾಗ, ‘‘ಇದನ್ನೆಲ್ಲಾ ನಿಮಗೆ ಯಾರು ತಿಳಿಸಿದರು?’’ ಎಂದು ಆಕೆ ಕೇಳಿದರು. ಅವರು, ‘‘ಎಲ್ಲವನ್ನೂ ಬಲ್ಲವನು ಹಾಗೂ ಎಲ್ಲದರ ಅರಿವುಳ್ಳವನು ನನಗೆ ಇದನ್ನು ತಿಳಿಸಿರುವನು’’ಎಂದರು.
66:4
إِنْ تَتُوبَا إِلَى اللَّهِ فَقَدْ صَغَتْ قُلُوبُكُمَا ۖ وَإِنْ تَظَاهَرَا عَلَيْهِ فَإِنَّ اللَّهَ هُوَ مَوْلَاهُ وَجِبْرِيلُ وَصَالِحُ الْمُؤْمِنِينَ ۖ وَالْمَلَائِكَةُ بَعْدَ ذَٰلِكَ ظَهِيرٌ
۞
ಇದೀಗ ನೀವಿಬ್ಬರೂ (ಪತ್ನಿಯರು) ಅಲ್ಲಾಹನೆದುರು ಪಶ್ಚಾತ್ತಾಪ ಪಡುವುದು ಒಳ್ಳೆಯದು. ನಿಮ್ಮ ಮನಸ್ಸುಗಳು ವಾಲಿಕೊಂಡಿವೆ. ನೀವಿಬ್ಬರೂ ಅವರಿಗೆ (ಪ್ರವಾದಿಗೆ) ಎದುರಾಗಿ ಪರಸ್ಪರ ನೆರವಿಗೆ ಇಳಿದಿದ್ದರೆ (ನಿಮಗೆ ತಿಳಿದಿರಲಿ;) ಅಲ್ಲಾಹನು ಅವರ ರಕ್ಷಕನಾಗಿದ್ದಾನೆ ಮತ್ತು ಜಿಬ್ರೀಲ್ ಹಾಗೂ ಸಕಲ ಸಜ್ಜನ ವಿಶ್ವಾಸಿಗಳು ಮತ್ತು ಮಲಕ್‌ಗಳು ಅವರ ಸಹಾಯಕರಾಗಿದ್ದಾರೆ.
66:5
عَسَىٰ رَبُّهُ إِنْ طَلَّقَكُنَّ أَنْ يُبْدِلَهُ أَزْوَاجًا خَيْرًا مِنْكُنَّ مُسْلِمَاتٍ مُؤْمِنَاتٍ قَانِتَاتٍ تَائِبَاتٍ عَابِدَاتٍ سَائِحَاتٍ ثَيِّبَاتٍ وَأَبْكَارًا
۞
ಅವರು (ಪ್ರವಾದಿ) ನಿಮ್ಮನ್ನು ವಿಚ್ಛೇದಿಸಿದರೆ, ಅವರ ಒಡೆಯನು ಅವರಿಗೆ ನಿಮಗಿಂತ ಉತ್ತಮರಾದವರನ್ನು ನೀಡಬಹುದು. ಅವರು ಮುಸ್ಲಿಮರೂ, ವಿಶ್ವಾಸಿನಿಯರೂ, ವಿಧೇಯರೂ, ಪಶ್ಚಾತ್ತಾಪ ಪಡುವವರೂ, ಆರಾಧನಾ ನಿರತರೂ, ಉಪವಾಸಿಗರೂ ಆಗಿರುವ ವಿವಾಹಾನುಭವ ಉಳ್ಳವರು ಅಥವಾ ಕನ್ಯೆಯರಾಗಿರುವರು.
66:6
يَا أَيُّهَا الَّذِينَ آمَنُوا قُوا أَنْفُسَكُمْ وَأَهْلِيكُمْ نَارًا وَقُودُهَا النَّاسُ وَالْحِجَارَةُ عَلَيْهَا مَلَائِكَةٌ غِلَاظٌ شِدَادٌ لَا يَعْصُونَ اللَّهَ مَا أَمَرَهُمْ وَيَفْعَلُونَ مَا يُؤْمَرُونَ
۞
ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿರಿ. ಮಾನವರು ಮತ್ತು ಕಲ್ಲುಗಳು ಅದರ ಇಂಧನಗಳಾಗಿರುವವು. ಕಠೋರರೂ ಬಲಿಷ್ಠರೂ ಆಗಿರುವ ಮಲಕ್‌ಗಳು ಅದರ ಮೇಲ್ವಿಚಾರಕರಾಗಿರುವರು. ಅವರು ಅಲ್ಲಾಹನು ತಮಗೆ ನೀಡುವ ಯಾವ ಆದೇಶವನ್ನೂ ಮೀರಲಾರರು ಮತ್ತು ಅವರು ತಮಗೆ ಆದೇಶಿಸಿಲಾದುದನ್ನೇ ಮಾಡುವರು.
66:7
يَا أَيُّهَا الَّذِينَ كَفَرُوا لَا تَعْتَذِرُوا الْيَوْمَ ۖ إِنَّمَا تُجْزَوْنَ مَا كُنْتُمْ تَعْمَلُونَ
۞
ಧಿಕ್ಕಾರಿಗಳೇ, ಇಂದು ನೆಪಗಳನ್ನು ಹೂಡಬೇಡಿ. ನೀವು ಏನನ್ನು ಮಾಡಿದ್ದಿರೋ ಅದರ ಪ್ರತಿಫಲವನ್ನಷ್ಟೇ ನಿಮಗೆ ನೀಡಲಾಗುತ್ತಿದೆ.
66:8
يَا أَيُّهَا الَّذِينَ آمَنُوا تُوبُوا إِلَى اللَّهِ تَوْبَةً نَصُوحًا عَسَىٰ رَبُّكُمْ أَنْ يُكَفِّرَ عَنْكُمْ سَيِّئَاتِكُمْ وَيُدْخِلَكُمْ جَنَّاتٍ تَجْرِي مِنْ تَحْتِهَا الْأَنْهَارُ يَوْمَ لَا يُخْزِي اللَّهُ النَّبِيَّ وَالَّذِينَ آمَنُوا مَعَهُ ۖ نُورُهُمْ يَسْعَىٰ بَيْنَ أَيْدِيهِمْ وَبِأَيْمَانِهِمْ يَقُولُونَ رَبَّنَا أَتْمِمْ لَنَا نُورَنَا وَاغْفِرْ لَنَا ۖ إِنَّكَ عَلَىٰ كُلِّ شَيْءٍ قَدِيرٌ
۞
ವಿಶ್ವಾಸಿಗಳೇ, ನಿರ್ಮಲ ಮನಸ್ಸಿನೊಂದಿಗೆ ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಿರಿ. ನಿಮ್ಮ ಒಡೆಯನು ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸಬಹುದು ಮತ್ತು ನಿಮ್ಮನ್ನು ತಳದಲ್ಲಿ ನದಿಗಳು ಹರಿಯುವ ಸ್ವರ್ಗದೊಳಗೆ ಸೇರಿಸಬಹುದು. ಅಂದು ಅಲ್ಲಾಹನು ಪ್ರವಾದಿಯನ್ನಾಗಲೀ ಅವರ ಜೊತೆಗಿರುವ ವಿಶ್ವಾಸಿಗಳನ್ನಾಗಲೀ ಅಪಮಾನಿಸಲಾರನು. ಅವರ ಪ್ರಕಾಶವು ಅವರ ಮುಂಭಾಗದಲ್ಲೂ ಬಲ ಭಾಗದಲ್ಲೂ ಚಲಿಸುತ್ತಿರುವುದು. ಅವರು ಹೇಳುವರು; ‘‘ನಮ್ಮೊಡೆಯಾ, ನಮ್ಮ ಬೆಳಕನ್ನು ಸಂಪೂರ್ಣ ಗೊಳಿಸು ಮತ್ತು ನಮ್ಮನ್ನು ಕ್ಷಮಿಸು. ನೀನು ಎಲ್ಲವನ್ನೂ ಮಾಡಬಲ್ಲೆ.’’
66:9
يَا أَيُّهَا النَّبِيُّ جَاهِدِ الْكُفَّارَ وَالْمُنَافِقِينَ وَاغْلُظْ عَلَيْهِمْ ۚ وَمَأْوَاهُمْ جَهَنَّمُ ۖ وَبِئْسَ الْمَصِيرُ
۞
ಪ್ರವಾದಿವರ್ಯರೇ, ಧಿಕ್ಕಾರಿಗಳು ಮತ್ತು ಕಪಟಿಗಳ ವಿರುದ್ಧ ಹೋರಾಡಿರಿ ಮತ್ತು ಅವರ ವಿರುದ್ಧ ಕಠಿಣ ನಿಲುವು ತಾಳಿರಿ. ನರಕವೇ ಅವರ ನೆಲೆಯಾಗಿರುವುದು ಮತ್ತು ಅದು ತೀರಾ ನಿಕೃಷ್ಟ ನೆಲೆಯಾಗಿದೆ.
66:10
ضَرَبَ اللَّهُ مَثَلًا لِلَّذِينَ كَفَرُوا امْرَأَتَ نُوحٍ وَامْرَأَتَ لُوطٍ ۖ كَانَتَا تَحْتَ عَبْدَيْنِ مِنْ عِبَادِنَا صَالِحَيْنِ فَخَانَتَاهُمَا فَلَمْ يُغْنِيَا عَنْهُمَا مِنَ اللَّهِ شَيْئًا وَقِيلَ ادْخُلَا النَّارَ مَعَ الدَّاخِلِينَ
۞
ಅಲ್ಲಾಹನು ಧಿಕ್ಕಾರಿಗಳಿಗಾಗಿ, ನೂಹರ ಪತ್ನಿ ಮತ್ತು ಲೂತರ ಪತ್ನಿಯ ಉದಾಹರಣೆಯನ್ನು ಮುಂದಿಟ್ಟಿರುವನು; ಅವರಿಬ್ಬರೂ ನಮ್ಮ ಇಬ್ಬರು ಸಜ್ಜನ ದಾಸರ ಅಧೀನದಲ್ಲಿದ್ದರು. ಆದರೆ ಅವರು ಅವರನ್ನು (ತಮ್ಮ ಪತಿಯರನ್ನು) ವಂಚಿಸಿದರು. ಕೊನೆಗೆ ಅಲ್ಲಾಹನೆದುರು ಅವರಿಂದ (ತಮ್ಮ ಪತಿಯರಿಂದ) ಅವರಿಗೆ ಯಾವ ಲಾಭವೂ ಆಗಲಿಲ್ಲ. ‘‘ನರಕದೊಳಗೆ ಸೇರಿ ಕೊಂಡವರ ಜೊತೆ ನೀವೂ ಸೇರಿಕೊಳ್ಳಿರಿ’’ ಎಂದು ಅವರೊಡನೆ ಹೇಳಲಾಯಿತು.
66:11
وَضَرَبَ اللَّهُ مَثَلًا لِلَّذِينَ آمَنُوا امْرَأَتَ فِرْعَوْنَ إِذْ قَالَتْ رَبِّ ابْنِ لِي عِنْدَكَ بَيْتًا فِي الْجَنَّةِ وَنَجِّنِي مِنْ فِرْعَوْنَ وَعَمَلِهِ وَنَجِّنِي مِنَ الْقَوْمِ الظَّالِمِينَ
۞
ಮತ್ತು ಅಲ್ಲಾಹನು ವಿಶ್ವಾಸಿಗಳಿಗಾಗಿ, ಫಿರ್‌ಔನನ ಪತ್ನಿಯ ಮಾದರಿಯನ್ನು ಮುಂದಿಡುತ್ತಾನೆ. ಆಕೆ ಹೇಳಿದರು; ‘‘ನನ್ನೊಡೆಯಾ, ಸ್ವರ್ಗದಲ್ಲಿ ನೀನು ನನಗಾಗಿ ನಿನ್ನ ಬಳಿ ಒಂದು ನಿವಾಸವನ್ನು ಒದಗಿಸು ಮತ್ತು ಫಿರ್‌ಔನ್ ಹಾಗೂ ಅವನ ದುಷ್ಕರ್ಮಗಳಿಂದ ನನ್ನನ್ನು ರಕ್ಷಿಸು. ಮತ್ತು ನೀನು ನನ್ನನ್ನು ಅಕ್ರಮಿಗಳಿಂದ ವಿಮೋಚಿಸು.’’
66:12
وَمَرْيَمَ ابْنَتَ عِمْرَانَ الَّتِي أَحْصَنَتْ فَرْجَهَا فَنَفَخْنَا فِيهِ مِنْ رُوحِنَا وَصَدَّقَتْ بِكَلِمَاتِ رَبِّهَا وَكُتُبِهِ وَكَانَتْ مِنَ الْقَانِتِينَ
۞
ಹಾಗೆಯೇ, ಇಮ್ರಾನರ ಪುತ್ರಿ ಮರ್ಯಮ್, ತನ್ನ ಮಾನವನ್ನು ಕಾಪಾಡಿ ಕೊಂಡಿದ್ದಳು. ನಾವು ಅದರೊಳಗೆ (ಆಕೆಯ ಗರ್ಭದೊಳಗೆ) ನಮ್ಮ ಆತ್ಮದ ಭಾಗವನ್ನು ಊದಿದೆವು. ಆಕೆಯು ತನ್ನೊಡೆಯನ ವಚನಗಳು ಹಾಗೂ ಗ್ರಂಥಗಳು ಸತ್ಯವೆಂದು ಸಮರ್ಥಿಸುವವಳಾಗಿದ್ದಳು ಮತ್ತು ಆಕೆಯು ವಿಧೇಯಳಾಗಿದ್ದಳು.