Al-Fath (The victory)
48. ಅಲ್ ಫತ್ಹ್(ವಿಜಯ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
48:1
إِنَّا فَتَحْنَا لَكَ فَتْحًا مُبِينًا ۞
(ದೂತರೇ,) ನಾವು ಖಂಡಿತ ನಿಮಗೆ ಒಂದು ಸ್ಪಷ್ಟ ವಿಜಯವನ್ನು ನೀಡಿರುವೆವು.
48:2
لِيَغْفِرَ لَكَ اللَّهُ مَا تَقَدَّمَ مِنْ ذَنْبِكَ وَمَا تَأَخَّرَ وَيُتِمَّ نِعْمَتَهُ عَلَيْكَ وَيَهْدِيَكَ صِرَاطًا مُسْتَقِيمًا ۞
ಅಲ್ಲಾಹನು ನಿಮಗಾಗಿ ನಿಮ್ಮ ಹಿಂದಿನ ಹಾಗೂ ಮುಂದಿನ ಪಾಪಗಳನ್ನು ಕ್ಷಮಿಸಿ, ನಿಮ್ಮ ಪಾಲಿಗೆ ತನ್ನ ಅನುಗ್ರಹಗಳನ್ನು ಸಂಪೂರ್ಣಗೊಳಿಸಿ ನಿಮ್ಮನ್ನು ಸ್ಥಿರವಾದ ಸನ್ಮಾರ್ಗದಲ್ಲಿ ಮುನ್ನಡೆಸಲಿದ್ದಾನೆ.
48:3
وَيَنْصُرَكَ اللَّهُ نَصْرًا عَزِيزًا ۞
ಮತ್ತು ಪ್ರಬಲ ಬೆಂಬಲದ ಮೂಲಕ ನಿಮಗೆ ನೆರವಾಗಲಿದ್ದಾನೆ.
48:4
هُوَ الَّذِي أَنْزَلَ السَّكِينَةَ فِي قُلُوبِ الْمُؤْمِنِينَ لِيَزْدَادُوا إِيمَانًا مَعَ إِيمَانِهِمْ ۗ وَلِلَّهِ جُنُودُ السَّمَاوَاتِ وَالْأَرْضِ ۚ وَكَانَ اللَّهُ عَلِيمًا حَكِيمًا ۞
ಅವನೇ, ವಿಶ್ವಾಸಿಗಳ ವಿಶ್ವಾಸಕ್ಕೆ ಇನ್ನಷ್ಟು ವಿಶ್ವಾಸವನ್ನು ಸೇರಿಸುವುದಕ್ಕಾಗಿ, ಅವರ ಮನಸ್ಸುಗಳಿಗೆ ಪ್ರಶಾಂತತೆಯನ್ನು ಇಳಿಸಿಕೊಟ್ಟವನು. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪಡೆಗಳೆಲ್ಲಾ ಅವನಿಗೇ ಸೇರಿವೆ ಮತ್ತು ಅವನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.
48:5
لِيُدْخِلَ الْمُؤْمِنِينَ وَالْمُؤْمِنَاتِ جَنَّاتٍ تَجْرِي مِنْ تَحْتِهَا الْأَنْهَارُ خَالِدِينَ فِيهَا وَيُكَفِّرَ عَنْهُمْ سَيِّئَاتِهِمْ ۚ وَكَانَ ذَٰلِكَ عِنْدَ اللَّهِ فَوْزًا عَظِيمًا ۞
ಅವನು ವಿಶ್ವಾಸಿ ಪುರುಷರು ಹಾಗೂ ವಿಶ್ವಾಸಿ ಸ್ತ್ರೀಯರನ್ನು, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳೊಳಗೆ ಸೇರಿಸುವನು. ಅಲ್ಲಿ ಅವರು ಸದಾಕಾಲ ಇರುವರು. ಮತ್ತು ಅವನು ಅವರಿಂದ ಅವರ ಪಾಪಗಳನ್ನು ನಿವಾರಿಸುವನು. ಅಲ್ಲಾಹನ ಬಳಿ ಇದು ಮಹಾ ವಿಜಯವಾಗಿದೆ.
48:6
وَيُعَذِّبَ الْمُنَافِقِينَ وَالْمُنَافِقَاتِ وَالْمُشْرِكِينَ وَالْمُشْرِكَاتِ الظَّانِّينَ بِاللَّهِ ظَنَّ السَّوْءِ ۚ عَلَيْهِمْ دَائِرَةُ السَّوْءِ ۖ وَغَضِبَ اللَّهُ عَلَيْهِمْ وَلَعَنَهُمْ وَأَعَدَّ لَهُمْ جَهَنَّمَ ۖ وَسَاءَتْ مَصِيرًا ۞
ಮತ್ತು ಅಲ್ಲಾಹನು ತನ್ನ ಕುರಿತು ಅಪನಂಬಿಕೆ ಇಟ್ಟುಕೊಂಡಿದ್ದ ಕಪಟ ಪುರುಷರು ಹಾಗೂ ಕಪಟ ಸ್ತ್ರೀಯರನ್ನು ಮತ್ತು ಬಹುದೇವಾರಾಧಕ ಪುರುಷರನ್ನು ಹಾಗೂ ಬಹುದೇವಾರಾಧಕ ಸ್ತ್ರೀಯರನ್ನು ಶಿಕ್ಷಿಸಲಿದ್ದಾನೆ. ದೌರ್ಭಾಗ್ಯವು ಅವರನ್ನು ಸುತ್ತುವರಿದುಕೊಂಡಿದೆ. ಅವರ ವಿರುಧ್ಧ ಅಲ್ಲಾಹನು ಕೋಪಗೊಂಡಿರುವನು ಹಾಗೂ ಅವರನ್ನು ಶಪಿಸಿರುವನು ಮತ್ತು ಅವರಿಗಾಗಿ ನರಕವನ್ನು ಸಿದ್ಧಗೊಳಿಸಿರುವನು. ಅದು ಬಹಳ ಕೆಟ್ಟ ನೆಲೆಯಾಗಿದೆ.
48:7
وَلِلَّهِ جُنُودُ السَّمَاوَاتِ وَالْأَرْضِ ۚ وَكَانَ اللَّهُ عَزِيزًا حَكِيمًا ۞
ಆಕಾಶಗಳ ಹಾಗೂ ಭೂಮಿಯ ಪಡೆಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
48:8
إِنَّا أَرْسَلْنَاكَ شَاهِدًا وَمُبَشِّرًا وَنَذِيرًا ۞
(ದೂತರೇ,) ನಾವು ಖಂಡಿತ ನಿಮ್ಮನ್ನು ಸಾಕ್ಷಿಯಾಗಿ, ಶುಭವಾರ್ತೆ ನೀಡುವವರಾಗಿ ಹಾಗೂ ಮುನ್ನೆಚ್ಚರಿಸುವವರಾಗಿ ಕಳಿಸಿರುವೆವು.
48:9
لِتُؤْمِنُوا بِاللَّهِ وَرَسُولِهِ وَتُعَزِّرُوهُ وَتُوَقِّرُوهُ وَتُسَبِّحُوهُ بُكْرَةً وَأَصِيلًا ۞
(ಜನರೇ,) ನೀವು ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಡಬೇಕು ಹಾಗೂ ಅವರಿಗೆ ನೆರವಾಗಬೇಕು ಮತ್ತು ಅವರನ್ನು ಗೌರವಿಸಬೇಕೆಂದು ಹಾಗೆಯೇ ನೀವು ಮುಂಜಾನೆ ಮತ್ತು ಸಂಜೆ ಅವನ(ಅಲ್ಲಾಹನ) ಪಾವಿತ್ರ್ಯವನ್ನು ಜಪಿಸಬೇಕೆಂದು.
48:10
إِنَّ الَّذِينَ يُبَايِعُونَكَ إِنَّمَا يُبَايِعُونَ اللَّهَ يَدُ اللَّهِ فَوْقَ أَيْدِيهِمْ ۚ فَمَنْ نَكَثَ فَإِنَّمَا يَنْكُثُ عَلَىٰ نَفْسِهِ ۖ وَمَنْ أَوْفَىٰ بِمَا عَاهَدَ عَلَيْهُ اللَّهَ فَسَيُؤْتِيهِ أَجْرًا عَظِيمًا ۞
(ದೂತರೇ,) ನಿಮ್ಮ ಮುಂದೆ ಪ್ರಮಾಣ ಮಾಡುತ್ತಿರುವವರು ನಿಜವಾಗಿ ಅಲ್ಲಾಹನ ಮುಂದೆ ಪ್ರಮಾಣ ಮಾಡಿದರು. ಅವರ ಕೈಗಳ ಮೇಲೆ ಅಲ್ಲಾಹನ ಕೈ ಇದೆ. ಇನ್ನು, ಪ್ರಮಾಣ ಮುರಿದವರು ನಿಜವಾಗಿ ಸ್ವತಃ ತಮ್ಮ ವಿರುದ್ಧವೇ ಪ್ರಮಾಣವನ್ನು ಮುರಿದರು. ಅಲ್ಲಾಹನ ಜೊತೆ ಮಾಡಿಕೊಂಡ ಪ್ರಮಾಣವನ್ನು ಪೂರ್ತಿಗೊಳಿಸಿದವನಿಗೆ ಮಹಾ ಪ್ರತಿಫಲವು ಸಿಗಲಿದೆ.
48:11
سَيَقُولُ لَكَ الْمُخَلَّفُونَ مِنَ الْأَعْرَابِ شَغَلَتْنَا أَمْوَالُنَا وَأَهْلُونَا فَاسْتَغْفِرْ لَنَا ۚ يَقُولُونَ بِأَلْسِنَتِهِمْ مَا لَيْسَ فِي قُلُوبِهِمْ ۚ قُلْ فَمَنْ يَمْلِكُ لَكُمْ مِنَ اللَّهِ شَيْئًا إِنْ أَرَادَ بِكُمْ ضَرًّا أَوْ أَرَادَ بِكُمْ نَفْعًا ۚ بَلْ كَانَ اللَّهُ بِمَا تَعْمَلُونَ خَبِيرًا ۞
(ಕಾರ್ಯಾಚರಣೆಯಲ್ಲಿ ಭಾಗವಹಿಸದೆ) ಹಿಂದುಳಿದುಕೊಂಡ ಹಳ್ಳಿಯವರು, ‘‘ನಮ್ಮ ಸಂಪತ್ತು ಹಾಗೂ ನಮ್ಮ ಕುಟುಂಬಗಳು ನಮ್ಮನ್ನು ಕಾರ್ಯನಿರತವಾಗಿಟ್ಟಿದ್ದವು. ನೀವೀಗ ನಮ್ಮ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ’’ ಎಂದು ನಿಮ್ಮೊಡನೆ ಹೇಳುವರು. ನಿಜವಾಗಿ, ಅವರು ತಮ್ಮ ಮನಸ್ಸುಗಳಲ್ಲಿ ಇಲ್ಲದ ಮಾತನ್ನು ತಮ್ಮ ನಾಲಗೆಯಿಂದ ಹೇಳುತ್ತಾರೆ. ಅಲ್ಲಾಹನು ನಿಮಗೆ ಹಾನಿ ಮಾಡ ಬಯಸಿದರೂ ಹಿತವನ್ನು ಮಾಡಬಯಸಿದರೂ ಅವನೆದುರು ನಿಮಗೆ ನೆರವಾಗುವ ಅಧಿಕಾರ ಯಾರಿಗಿದೆ? ನೀವು ಮಾಡುತ್ತಿರುವ ಎಲ್ಲವುಗಳ ಕುರಿತು ಅವನಿಗೆ ಅರಿವಿದೆ.
48:12
بَلْ ظَنَنْتُمْ أَنْ لَنْ يَنْقَلِبَ الرَّسُولُ وَالْمُؤْمِنُونَ إِلَىٰ أَهْلِيهِمْ أَبَدًا وَزُيِّنَ ذَٰلِكَ فِي قُلُوبِكُمْ وَظَنَنْتُمْ ظَنَّ السَّوْءِ وَكُنْتُمْ قَوْمًا بُورًا ۞
ನಿಜವಾಗಿ, ದೇವದೂತರು ಹಾಗೂ ವಿಶ್ವಾಸಿಗಳು ಎಂದೆಂದಿಗೂ (ಕಾರ್ಯಾಚರಣೆಯಿಂದ) ಮರಳಿ, ತಮ್ಮ ಮನೆಯವರ ಬಳಿಗೆ ಬರಲಾರರೆಂದೇ ಅವರು ಗ್ರಹಿಸಿದ್ದರು. ಇದು (ಈ ಆಲೋಚನೆಯು) ನಿಮ್ಮ ಮನಸ್ಸುಗಳಿಗೆ ಚೆನ್ನಾಗಿ ತೋಚಿತು ಮತ್ತು ನೀವು ಒಂದು ಲೆಕ್ಕಾಚಾರ ಮಾಡಿರಿ - ಬಹಳ ಕೆಟ್ಟ ಲೆಕ್ಕಾಚಾರ. ನೀವು ವಿನಾಶಶೀಲ ಜನಾಂಗವಾಗಿರುವಿರಿ.
48:13
وَمَنْ لَمْ يُؤْمِنْ بِاللَّهِ وَرَسُولِهِ فَإِنَّا أَعْتَدْنَا لِلْكَافِرِينَ سَعِيرًا ۞
ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಲ್ಲದವರು - ಅಂತಹ ಧಿಕ್ಕಾರಿಗಳಿಗಾಗಿ ಖಂಡಿತ ನಾವು ಭುಗಿಲೇಳುವ ಬೆಂಕಿಯನ್ನು ತಯಾರಿಸಿಟ್ಟಿರುವೆವು.
48:14
وَلِلَّهِ مُلْكُ السَّمَاوَاتِ وَالْأَرْضِ ۚ يَغْفِرُ لِمَنْ يَشَاءُ وَيُعَذِّبُ مَنْ يَشَاءُ ۚ وَكَانَ اللَّهُ غَفُورًا رَحِيمًا ۞
ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೆ ಸೇರಿದೆ. ಅವನು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಹಾಗೂ ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅವನು ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ.
48:15
سَيَقُولُ الْمُخَلَّفُونَ إِذَا انْطَلَقْتُمْ إِلَىٰ مَغَانِمَ لِتَأْخُذُوهَا ذَرُونَا نَتَّبِعْكُمْ ۖ يُرِيدُونَ أَنْ يُبَدِّلُوا كَلَامَ اللَّهِ ۚ قُلْ لَنْ تَتَّبِعُونَا كَذَٰلِكُمْ قَالَ اللَّهُ مِنْ قَبْلُ ۖ فَسَيَقُولُونَ بَلْ تَحْسُدُونَنَا ۚ بَلْ كَانُوا لَا يَفْقَهُونَ إِلَّا قَلِيلًا ۞
ನೀವು (ಖೈಬರ್‌ನ) ಯುದ್ಧ ಸಂಪಾದನೆಯನ್ನು ಸಂಗ್ರಹಿಸಲು ಹೊರಟಾಗ, ಹಿಂದುಳಿದುಕೊಂಡಿದ್ದ ಆ ಜನರು, ‘‘ನಮ್ಮನ್ನೂ ನಿಮ್ಮ ಹಿಂದೆ ಬರಲು ಬಿಡಿರಿ’’ ಎನ್ನುತ್ತಾರೆ. ಅವರು ಅಲ್ಲಾಹನ ಆದೇಶವನ್ನು ಬದಲಿಸ ಬಯಸುತ್ತಾರೆ. ‘‘ನೀವು ನಮ್ಮ ಹಿಂದೆ ಬರಬೇಡಿ. ಹಾಗೆಂದು ಅಲ್ಲಾಹನು ಮೊದಲೇ ನಿಮ್ಮ ಕುರಿತು ಹೇಳಿರುವನು’’ ಎಂದು ಹೇಳಿರಿ. ಆಗ ಅವರು, ‘‘ನಮ್ಮ ಕುರಿತು ನೀವು ಅಸೂಯೆ ಪಡುತ್ತಿದ್ದೀರಿ’’ ಎನ್ನುವರು. ನಿಜವಾಗಿ ಅವರು ಅರ್ಥ ಮಾಡಿಕೊಳ್ಳುವುದೇ ತೀರಾಕಡಿಮೆ.
48:16
قُلْ لِلْمُخَلَّفِينَ مِنَ الْأَعْرَابِ سَتُدْعَوْنَ إِلَىٰ قَوْمٍ أُولِي بَأْسٍ شَدِيدٍ تُقَاتِلُونَهُمْ أَوْ يُسْلِمُونَ ۖ فَإِنْ تُطِيعُوا يُؤْتِكُمُ اللَّهُ أَجْرًا حَسَنًا ۖ وَإِنْ تَتَوَلَّوْا كَمَا تَوَلَّيْتُمْ مِنْ قَبْلُ يُعَذِّبْكُمْ عَذَابًا أَلِيمًا ۞
ಹಳ್ಳಿಗರ ಪೈಕಿ ಈ ರೀತಿ ಹಿಂದೆ ಉಳಿದುಕೊಂಡವರೊಡನೆ ಹೇಳಿರಿ; ‘‘ಭಾರೀ ಶಕ್ತಿಶಾಲಿ ಪಂಗಡವೊಂದರ ವಿರುದ್ಧ (ಹೋರಾಟಕ್ಕೆ) ನಿಮ್ಮನ್ನು ಶೀಘ್ರವೇ ಕರೆಯಲಾಗುವುದು. ಒಂದೋ ನೀವು ಅವರ ವಿರುದ್ಧ ಯುದ್ಧ ಮಾಡುತ್ತಲೇ ಇರಬೇಕು ಅಥವಾ ಅವರು ಶರಣಾಗಬೇಕು. ನೀವು ಆದೇಶ ಪಾಲಿಸಿದರೆ ಅಲ್ಲಾಹನು ನಿಮಗೆ ಉತ್ತಮ ಪ್ರತಿಫಲ ನೀಡುವನು. ಇನ್ನು ನೀವು, ಈ ಹಿಂದೆ ತಿರುಗಿನಿಂತಂತೆ, ತಿರುಗಿನಿಂತರೆ ಅವನು (ಅಲ್ಲಾಹನು) ನಿಮಗೆ ಕಠಿಣ ಶಿಕ್ಷೆ ನೀಡುವನು.’’
48:17
لَيْسَ عَلَى الْأَعْمَىٰ حَرَجٌ وَلَا عَلَى الْأَعْرَجِ حَرَجٌ وَلَا عَلَى الْمَرِيضِ حَرَجٌ ۗ وَمَنْ يُطِعِ اللَّهَ وَرَسُولَهُ يُدْخِلْهُ جَنَّاتٍ تَجْرِي مِنْ تَحْتِهَا الْأَنْهَارُ ۖ وَمَنْ يَتَوَلَّ يُعَذِّبْهُ عَذَابًا أَلِيمًا ۞
ಕುರುಡನ ಮೇಲೆ ಪಾಪವೇನಿಲ್ಲ, ಕುಂಟನ ಮೇಲೂ ಪಾಪವಿಲ್ಲ, ರೋಗಗ್ರಸ್ತನ ಮೇಲೂ ಪಾಪವಿಲ್ಲ. (ಅವರಿಗೆಲ್ಲಾ ಯುದ್ಧದಿಂದ ವಿನಾಯ್ತಿ ಇದೆ). ಅಲ್ಲಾಹ್ ಹಾಗೂ ಅವನ ದೂತರ ಆದೇಶ ಪಾಲಿಸುವವನನ್ನು ಅವನು, ತಳದಲ್ಲಿ ನದಿಗಳು ಹರಿಯುತ್ತಿರುವ ತೋಟಗಳೊಳಗೆ ಸೇರಿಸುವನು ಮತ್ತು ಅವಿಧೇಯನಾದವನಿಗೆ ಕಠಿಣ ಶಿಕ್ಷೆಯನ್ನು ನೀಡುವನು.
48:18
۞ لَقَدْ رَضِيَ اللَّهُ عَنِ الْمُؤْمِنِينَ إِذْ يُبَايِعُونَكَ تَحْتَ الشَّجَرَةِ فَعَلِمَ مَا فِي قُلُوبِهِمْ فَأَنْزَلَ السَّكِينَةَ عَلَيْهِمْ وَأَثَابَهُمْ فَتْحًا قَرِيبًا ۞
(ದೂತರೇ,) ಮರದ ಕೆಳಗೆ, ನಿಮ್ಮೊಂದಿಗೆ ಪ್ರಮಾಣ ಮಾಡುತ್ತಿದ್ದ ವಿಶ್ವಾಸಿಗಳಿಂದ ಅಲ್ಲಾಹನು ಖಂಡಿತ ಸಂತುಷ್ಟನಾದನು. ಅವರ ಮನಸ್ಸುಗಳಲ್ಲಿ ಏನಿತ್ತೆಂಬುದನ್ನು ಅವನು ಬಲ್ಲನು. ಅವನು ಅವರಿಗೆ ನೆಮ್ಮದಿಯನ್ನು ಇಳಿಸಿಕೊಟ್ಟನು ಹಾಗೂ ಅವರಿಗೆ ಒಂದು ಶೀಘ್ರ ವಿಜಯದ ಪುರಸ್ಕಾರವನ್ನು ದಯಪಾಲಿಸಿದನು.
48:19
وَمَغَانِمَ كَثِيرَةً يَأْخُذُونَهَا ۗ وَكَانَ اللَّهُ عَزِيزًا حَكِيمًا ۞
ಮತ್ತು ಅವರು ಧಾರಾಳ ಯುದ್ಧ ಸಂಪತ್ತನ್ನು ಗಳಿಸಿದರು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುವನು.
48:20
وَعَدَكُمُ اللَّهُ مَغَانِمَ كَثِيرَةً تَأْخُذُونَهَا فَعَجَّلَ لَكُمْ هَٰذِهِ وَكَفَّ أَيْدِيَ النَّاسِ عَنْكُمْ وَلِتَكُونَ آيَةً لِلْمُؤْمِنِينَ وَيَهْدِيَكُمْ صِرَاطًا مُسْتَقِيمًا ۞
ಅಲ್ಲಾಹನು ನಿಮಗೆ, ನೀವು ಧಾರಾಳ ಯುದ್ಧ ಸಂಪತ್ತನ್ನು ಗಳಿಸುವಿರೆಂದು ವಾಗ್ದಾನ ಮಾಡಿದ್ದನು. ಅವನೀಗ ಬಹುಬೇಗನೇ ಅದನ್ನು ನಿಮಗೆ ಕೊಟ್ಟಿರುವನು ಹಾಗೂ ನಿಮ್ಮ ವಿರುದ್ಧ (ಎತ್ತದಂತೆ) ಜನರ ಕೈಗಳನ್ನು ತಡೆದಿಟ್ಟಿರುವನು. (ಇದು,) ವಿಶ್ವಾಸಿಗಳ ಪಾಲಿಗೆ ಪುರಾವೆಯಾಗಲಿಕ್ಕಾಗಿ ಹಾಗೂ ನಿಮ್ಮನ್ನು ಸ್ಥಿರವಾದ ಸನ್ಮಾರ್ಗದೆಡೆಗೆ ನಡೆಸಲಿಕ್ಕಾಗಿ.
48:21
وَأُخْرَىٰ لَمْ تَقْدِرُوا عَلَيْهَا قَدْ أَحَاطَ اللَّهُ بِهَا ۚ وَكَانَ اللَّهُ عَلَىٰ كُلِّ شَيْءٍ قَدِيرًا ۞
ನಿಮ್ಮ ನಿಯಂತ್ರಣದಲ್ಲಿಲ್ಲದ ಇನ್ನೂ ಹಲವು (ವಿಷಯಗಳು) ಇವೆ. ಅಲ್ಲಾಹನು ಅವುಗಳನ್ನು ಆವರಿಸಿಕೊಂಡಿದ್ದಾನೆ. ಅವನಂತೂ ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
48:22
وَلَوْ قَاتَلَكُمُ الَّذِينَ كَفَرُوا لَوَلَّوُا الْأَدْبَارَ ثُمَّ لَا يَجِدُونَ وَلِيًّا وَلَا نَصِيرًا ۞
ಒಂದು ವೇಳೆ ಧಿಕ್ಕಾರಿಗಳು ನಿಮ್ಮ ವಿರುದ್ಧ ಯುದ್ಧ ಮಾಡಿದ್ದರೆ ಅವರು ಬೆನ್ನು ತಿರುಗಿಸಿ ಓಡಬೇಕಾಗುತ್ತಿತ್ತು ಮತ್ತು ಅವರಿಗೆ ರಕ್ಷಕರಾಗಲಿ ಸಹಾಯಕರಾಗಲಿ ಯಾರೂ ಸಿಗುತ್ತಿರಲಿಲ್ಲ.
48:23
سُنَّةَ اللَّهِ الَّتِي قَدْ خَلَتْ مِنْ قَبْلُ ۖ وَلَنْ تَجِدَ لِسُنَّةِ اللَّهِ تَبْدِيلًا ۞
ಇದು, ಹಿಂದಿನಿಂದಲೂ ನಡೆದು ಬಂದಿರುವ ಅಲ್ಲಾಹನ ನಿಯಮ. ಅಲ್ಲಾಹನ ನಿಯಮದಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
48:24
وَهُوَ الَّذِي كَفَّ أَيْدِيَهُمْ عَنْكُمْ وَأَيْدِيَكُمْ عَنْهُمْ بِبَطْنِ مَكَّةَ مِنْ بَعْدِ أَنْ أَظْفَرَكُمْ عَلَيْهِمْ ۚ وَكَانَ اللَّهُ بِمَا تَعْمَلُونَ بَصِيرًا ۞
ನಿಮಗೆ ಅವರ (ಧಿಕ್ಕಾರಿಗಳ) ವಿರುದ್ಧ ಪ್ರಾಬಲ್ಯ ಒದಗಿಸಿದ ಬಳಿಕ, ಮಕ್ಕಃದಲ್ಲಿ ಅವರು ನಿಮ್ಮ ಮೇಲೆ ಕೈ ಎತ್ತದಂತೆ ಹಾಗೂ ನೀವು ಅವರ ಮೇಲೆ ಕೈ ಎತ್ತದಂತೆ ತಡೆದವನು ಅವನೇ (ಅಲ್ಲಾಹನೇ). ನೀವು ಮಾಡುತ್ತಿದ್ದ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದನು.
48:25
هُمُ الَّذِينَ كَفَرُوا وَصَدُّوكُمْ عَنِ الْمَسْجِدِ الْحَرَامِ وَالْهَدْيَ مَعْكُوفًا أَنْ يَبْلُغَ مَحِلَّهُ ۚ وَلَوْلَا رِجَالٌ مُؤْمِنُونَ وَنِسَاءٌ مُؤْمِنَاتٌ لَمْ تَعْلَمُوهُمْ أَنْ تَطَئُوهُمْ فَتُصِيبَكُمْ مِنْهُمْ مَعَرَّةٌ بِغَيْرِ عِلْمٍ ۖ لِيُدْخِلَ اللَّهُ فِي رَحْمَتِهِ مَنْ يَشَاءُ ۚ لَوْ تَزَيَّلُوا لَعَذَّبْنَا الَّذِينَ كَفَرُوا مِنْهُمْ عَذَابًا أَلِيمًا ۞
ಅವರೇ ಧಿಕ್ಕರಿಸಿದವರು ಹಾಗೂ ನಿಮ್ಮನ್ನು ಮಸ್ಜಿದುಲ್ ಹರಾಮ್‌ಗೆ ಹೋಗದಂತೆ ತಡೆದವರು ಹಾಗೂ ಬಲಿಗಾಗಿ ನಿಲ್ಲಿಸಲಾಗಿದ್ದ ಪ್ರಾಣಿಗಳು ಅವುಗಳ ನೆಲೆಯನ್ನು ತಲುಪದಂತೆ ತಡೆದವರು. ಒಂದು ವೇಳೆ (ಮಕ್ಕಃದಲ್ಲಿ) ನೀವು ನಿಮಗೆ ಪರಿಚಯವಿಲ್ಲದ ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ನಾಶ ಮಾಡಿ, ಆ ಮೂಲಕ, ನಿಮಗೆ ಅರಿವಿಲ್ಲದೆ ಒಂದು ದೊಡ್ಡ ಪ್ರಮಾದ ಎಸಗಿ ಬಿಡುವ ಸಾಧ್ಯತೆ ಇಲ್ಲದಿರುತ್ತಿದ್ದರೆ (ಯುದ್ಧವನ್ನು ಸಮ್ಮತಿಸಲಾಗುತ್ತಿತ್ತು). ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯೊಳಗೆ ಸೇರಿಸುವಂತಾಗಲು (ಅದನ್ನು ವಿಳಂಬಿಸಲಾಯಿತು). ಒಂದು ವೇಳೆ (ವಿಶ್ವಾಸಿಗಳು ಹಾಗೂ ಧಿಕ್ಕಾರಿಗಳು) ಸಂಪೂರ್ಣ ಬೇರ್ಪಟ್ಟಿದ್ದರೆ ನಾವು ಅವರ ಪೈಕಿ ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದೆವು.
48:26
إِذْ جَعَلَ الَّذِينَ كَفَرُوا فِي قُلُوبِهِمُ الْحَمِيَّةَ حَمِيَّةَ الْجَاهِلِيَّةِ فَأَنْزَلَ اللَّهُ سَكِينَتَهُ عَلَىٰ رَسُولِهِ وَعَلَى الْمُؤْمِنِينَ وَأَلْزَمَهُمْ كَلِمَةَ التَّقْوَىٰ وَكَانُوا أَحَقَّ بِهَا وَأَهْلَهَا ۚ وَكَانَ اللَّهُ بِكُلِّ شَيْءٍ عَلِيمًا ۞
ಧಿಕ್ಕಾರಿಗಳು ತಮ್ಮ ಮನಗಳಲ್ಲಿ ಉದ್ಧಟತನವನ್ನು (ಮಾತ್ರವಲ್ಲ,) ಅಜ್ಞಾನದ ಉದ್ಧಟತನವನ್ನು ಬೆಳೆಸಿಕೊಂಡಾಗ, ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ಮನಃ ಶಾಂತಿಯನ್ನು ಇಳಿಸಿಕೊಟ್ಟನು ಮತ್ತು ಅವರನ್ನು ಧರ್ಮನಿಷ್ಠೆಯ ಮಾತಿನಲ್ಲಿ ಸ್ಥಿರಗೊಳಿಸಿದನು. ಅವರು ಅದಕ್ಕೆ ಹೆಚ್ಚು ಅರ್ಹರು ಹಾಗೂ ಯೋಗ್ಯರಾಗಿದ್ದರು. ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ.
48:27
لَقَدْ صَدَقَ اللَّهُ رَسُولَهُ الرُّؤْيَا بِالْحَقِّ ۖ لَتَدْخُلُنَّ الْمَسْجِدَ الْحَرَامَ إِنْ شَاءَ اللَّهُ آمِنِينَ مُحَلِّقِينَ رُءُوسَكُمْ وَمُقَصِّرِينَ لَا تَخَافُونَ ۖ فَعَلِمَ مَا لَمْ تَعْلَمُوا فَجَعَلَ مِنْ دُونِ ذَٰلِكَ فَتْحًا قَرِيبًا ۞
ಅಲ್ಲಾಹನು ನಿಜಕ್ಕೂ ತನ್ನ ದೂತರಿಗೆ ಸತ್ಯಕ್ಕನುಸಾರವಾದ ಕನಸನ್ನೇ ತೋರಿಸಿದ್ದನು; ಅಲ್ಲಾಹನಿಚ್ಛಿಸಿದರೆ ನೀವು ಖಂಡಿತ ಶಾಂತಿಯೊಂದಿಗೆ, ಮಸ್ಜಿದುಲ್ ಹರಾಮನ್ನು ಪ್ರವೇಶಿಸುವಿರಿ. (ಕೆಲವರು) ತಲೆಬೋಳಿಸಿಕೊಂಡು ಹಾಗೂ (ಕೆಲವರು) ಕೂದಲು ಕತ್ತರಿಸಿಕೊಂಡು (ಪ್ರವೇಶಿಸುವರು). ನಿಮಗೆ ಯಾವ ಭಯವೂ ಇರದು. ನಿಮಗೆ ತಿಳಿದಿಲ್ಲದ ಸಂಗತಿಗಳನ್ನು ಅವನು ತಿಳಿದಿರುವನು. ಇದನ್ನು (ಮಕ್ಕಃ ವಿಜಯವನ್ನು) ಮಾತ್ರವಲ್ಲದೆ, ಬೇರೊಂದು ವಿಜಯವನ್ನೂ ಅವನು ಈಗಾಗಲೇ ನಿಮಗೆ ನೀಡಿರುವನು.
48:28
هُوَ الَّذِي أَرْسَلَ رَسُولَهُ بِالْهُدَىٰ وَدِينِ الْحَقِّ لِيُظْهِرَهُ عَلَى الدِّينِ كُلِّهِ ۚ وَكَفَىٰ بِاللَّهِ شَهِيدًا ۞
ಅವನೇ, ತನ್ನ ದೂತರನ್ನು ಮಾರ್ಗದರ್ಶನ ಹಾಗೂ ಸತ್ಯಧರ್ಮದೊಂದಿಗೆ ಕಳಿಸಿರುವವನು - ಅದನ್ನು ಇತರೆಲ್ಲ ಧರ್ಮಗಳೆದುರು ವಿಜಯಿಯಾಗಿಸಲಿಕ್ಕಾಗಿ. ಇದಕ್ಕೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು.
48:29
مُحَمَّدٌ رَسُولُ اللَّهِ ۚ وَالَّذِينَ مَعَهُ أَشِدَّاءُ عَلَى الْكُفَّارِ رُحَمَاءُ بَيْنَهُمْ ۖ تَرَاهُمْ رُكَّعًا سُجَّدًا يَبْتَغُونَ فَضْلًا مِنَ اللَّهِ وَرِضْوَانًا ۖ سِيمَاهُمْ فِي وُجُوهِهِمْ مِنْ أَثَرِ السُّجُودِ ۚ ذَٰلِكَ مَثَلُهُمْ فِي التَّوْرَاةِ ۚ وَمَثَلُهُمْ فِي الْإِنْجِيلِ كَزَرْعٍ أَخْرَجَ شَطْأَهُ فَآزَرَهُ فَاسْتَغْلَظَ فَاسْتَوَىٰ عَلَىٰ سُوقِهِ يُعْجِبُ الزُّرَّاعَ لِيَغِيظَ بِهِمُ الْكُفَّارَ ۗ وَعَدَ اللَّهُ الَّذِينَ آمَنُوا وَعَمِلُوا الصَّالِحَاتِ مِنْهُمْ مَغْفِرَةً وَأَجْرًا عَظِيمًا ۞
ಮುಹಮ್ಮದರು ಅಲ್ಲಾಹನ ದೂತರು. ಅವರ ಜೊತೆಗಿರುವವರು ಧಿಕ್ಕಾರಿಗಳ ಪಾಲಿಗೆ ಕಠೋರರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ. ಅವರು (ಅಲ್ಲಾಹನ ಮುಂದೆ) ಬಾಗುತ್ತಲೂ ಸಾಷ್ಟಾಂಗವೆರಗುತ್ತಲೂ ಇರುವುದನ್ನು ಮತ್ತು ಅಲ್ಲಾಹನ ಅನುಗ್ರಹ ಹಾಗೂ ಅವನ ಮೆಚ್ಚುಗೆಯನ್ನು ಅರಸುತ್ತಲಿರುವುದನ್ನು ನೀವು ಕಾಣುವಿರಿ. ಅವರ ಲಕ್ಷಣವೇನೆಂದರೆ, ಸಾಷ್ಟಾಂಗವಂದನೆಯ ಪ್ರಭಾವವು ಅವರ ಮುಖಗಳಲ್ಲಿರುವುದು. ತೌರಾತ್‌ನಲ್ಲಿ ಅವರ ಲಕ್ಷಣವು ಹೀಗೆಯೇ ಇದೆ ಮತ್ತು ಇಂಜೀಲ್‌ನಲ್ಲಿ ಅವರ ಲಕ್ಷಣವು ಹೀಗಿದೆ; ತನ್ನ ತೆನೆಯನ್ನು ಮೊಳೆಯಿಸುವ ಒಂದು ಹೊಲದಂತೆ. ಅದು ಅದನ್ನು ಬಲಪಡಿಸುತ್ತಿರುತ್ತದೆ. ಕೊನೆಗೆ ಅದು ಬಲಿಷ್ಠವಾಗಿ ಸ್ವತಃ ತನ್ನ ಕಾಂಡದ ಮೇಲೆ ನಿಲ್ಲುತ್ತದೆ. ಅದನ್ನು ಕಂಡು ಕೃಷಿಕರಿಗೆ ಸಂತಸವಾಗುತ್ತದೆ. ಧಿಕ್ಕಾರಿಗಳು ಉರಿದು ಬೀಳಲೆಂದು (ವಿಶ್ವಾಸಿಗಳನ್ನು ಈ ರೀತಿ ಬೆಳೆಸಲಾಗುತ್ತದೆ). ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುವವರಿಗೆ ಅಲ್ಲಾಹನು ಕ್ಷಮೆ ಹಾಗೂ ಮಹಾ ಪ್ರತಿಫಲದ ಭರವಸೆ ನೀಡಿರುವನು.