Al-Insan (Man)
76. ಅಲ್ ಇನ್ಸಾನ್(ಮಾನವ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
76:1
هَلْ أَتَىٰ عَلَى الْإِنْسَانِ حِينٌ مِنَ الدَّهْرِ لَمْ يَكُنْ شَيْئًا مَذْكُورًا ۞
ಮನುಷ್ಯನು, ತಾನೊಂದು ಪ್ರಸ್ತಾಪ ಯೋಗ್ಯ ವಸ್ತುವೇ ಅಲ್ಲವಾಗಿದ್ದ ಕಾಲವೊಂದನ್ನು ಕಳೆದಿಲ್ಲವೇ?
76:2
إِنَّا خَلَقْنَا الْإِنْسَانَ مِنْ نُطْفَةٍ أَمْشَاجٍ نَبْتَلِيهِ فَجَعَلْنَاهُ سَمِيعًا بَصِيرًا ۞
ನಾವು ಮನುಷ್ಯನನ್ನು ಪರೀಕ್ಷಿಸಲಿಕ್ಕಾಗಿ, ಅವನನ್ನು ಮಿಶ್ರಿತ ವೀರ್ಯದಿಂದ ಸೃಷ್ಟಿಸಿರುವೆವು. ಮತ್ತು ನಾವು ಅವನನ್ನು ಕೇಳ ಬಲ್ಲವನಾಗಿಯೂ ನೋಡ ಬಲ್ಲವನಾಗಿಯೂ ಮಾಡಿರುವೆವು.
76:3
إِنَّا هَدَيْنَاهُ السَّبِيلَ إِمَّا شَاكِرًا وَإِمَّا كَفُورًا ۞
ನಾವೇ ಅವನಿಗೆ ದಾರಿಯನ್ನು ತೋರಿಸಿದೆವು. ಇನ್ನವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ.
76:4
إِنَّا أَعْتَدْنَا لِلْكَافِرِينَ سَلَاسِلَ وَأَغْلَالًا وَسَعِيرًا ۞
ನಾವು ಧಿಕ್ಕಾರಿಗಳಿಗಾಗಿ ಸರಪಣಿಗಳನ್ನೂ ನೊಗಗಳನ್ನೂ ಭುಗಿಲೇಳುವ ಬೆಂಕಿಯನ್ನೂ ಸಿದ್ಧಪಡಿಸಿಟ್ಟಿರುವೆವು.
76:5
إِنَّ الْأَبْرَارَ يَشْرَبُونَ مِنْ كَأْسٍ كَانَ مِزَاجُهَا كَافُورًا ۞
ಸಜ್ಜನರು (ಸ್ವರ್ಗದಲ್ಲಿ) ಪಾನ ಪಾತ್ರೆಯಿಂದ ಕರ್ಪೂರ ಮಿಶ್ರಿತ ಪಾನೀಯವೊಂದನ್ನು ಸೇವಿಸುತ್ತಿರುವರು.
76:6
عَيْنًا يَشْرَبُ بِهَا عِبَادُ اللَّهِ يُفَجِّرُونَهَا تَفْجِيرًا ۞
ಆ ಚಿಲುಮೆಯಿಂದ ಅಲ್ಲಾಹನ ದಾಸರು ಕುಡಿಯುವರು ಮತ್ತು ಅದರಿಂದ ಹಲವು ಕಾಲುವೆಗಳನ್ನು ಹೊರಡಿಸುವರು.
76:7
يُوفُونَ بِالنَّذْرِ وَيَخَافُونَ يَوْمًا كَانَ شَرُّهُ مُسْتَطِيرًا ۞
(ಇಹಲೋಕದಲ್ಲಿ) ಅವರು, ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಮತ್ತು ಸರ್ವವ್ಯಾಪಿ ಸಂಕಟದ ದಿನವನ್ನು ಅಂಜುತ್ತಿರುತ್ತಾರೆ.
76:8
وَيُطْعِمُونَ الطَّعَامَ عَلَىٰ حُبِّهِ مِسْكِينًا وَيَتِيمًا وَأَسِيرًا ۞
ಅವರು ಅವನ (ಅಲ್ಲಾಹನ) ಮೆಚ್ಚುಗೆಗಾಗಿ ನಿರ್ಗತಿಕರಿಗೆ, ಅನಾಥರಿಗೆ ಮತ್ತು ಕೈದಿಗಳಿಗೆ ಉಣ ಬಡಿಸುತ್ತಾರೆ.
76:9
إِنَّمَا نُطْعِمُكُمْ لِوَجْهِ اللَّهِ لَا نُرِيدُ مِنْكُمْ جَزَاءً وَلَا شُكُورًا ۞
(ಮತ್ತು ಅವರು ಹೇಳುತ್ತಾರೆ;) ‘‘ನಾವು ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ನಿಮಗೆ ಉಣಿಸುತ್ತಿದ್ದೇವೆ. ನಿಮ್ಮಿಂದ ನಾವು ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ.’’
76:10
إِنَّا نَخَافُ مِنْ رَبِّنَا يَوْمًا عَبُوسًا قَمْطَرِيرًا ۞
‘‘ನಮಗೆ ನಮ್ಮೊಡೆಯನ ಕಡೆಯಿಂದ ಬರಲಿರುವ ಕರಾಳ ಹಾಗೂ ಕಠೋರ (ಪುನರುತ್ಥಾನ) ದಿನದ ಭಯವಿದೆ.’’
76:11
فَوَقَاهُمُ اللَّهُ شَرَّ ذَٰلِكَ الْيَوْمِ وَلَقَّاهُمْ نَضْرَةً وَسُرُورًا ۞
ಅಲ್ಲಾಹನು ಅವರನ್ನು ಆ ದಿನದ ಹಾನಿಯಿಂದ ರಕ್ಷಿಸುವನು. ಮತ್ತು ಅವರಿಗೆ ಉಲ್ಲಾಸ ಹಾಗೂ ಸಂತೋಷವನ್ನು ನೀಡುವನು.
76:12
وَجَزَاهُمْ بِمَا صَبَرُوا جَنَّةً وَحَرِيرًا ۞
ಅವರ ಸಹನೆಯ ಫಲವಾಗಿ ಅವರಿಗೆ ಸ್ವರ್ಗ ಹಾಗೂ ರೇಶ್ಮೆಯ ಉಡುಗೆಯನ್ನು ದಯಪಾಲಿಸುವನು.
76:13
مُتَّكِئِينَ فِيهَا عَلَى الْأَرَائِكِ ۖ لَا يَرَوْنَ فِيهَا شَمْسًا وَلَا زَمْهَرِيرًا ۞
ಅಲ್ಲಿ ಅವರು ಆಸನಗಳ ಮೇಲೆ ದಿಂಬುಗಳಿಗೆ ಒರಗಿ ಕೊಂಡಿರುವರು. ಅಲ್ಲಿ ಅವರು ತೀಕ್ಷ್ಣ ಬಿಸಿಲನ್ನಾಗಲಿ ತೀವ್ರ ಚಳಿಯನ್ನಾಗಲೀ ಕಾಣಲಾರರು.
76:14
وَدَانِيَةً عَلَيْهِمْ ظِلَالُهَا وَذُلِّلَتْ قُطُوفُهَا تَذْلِيلًا ۞
ಅದರ (ಸ್ವರ್ಗ ತೋಟದ) ನೆರಳು ಅವರನ್ನು ಆವರಿಸಿರುವುದು. ಅದರಲ್ಲಿನ ಹಣ್ಣಿನ ಗೊಂಚಲುಗಳು ಅವರಿಗೆ ಎಟುಕುತ್ತಿರುವವು.
76:15
وَيُطَافُ عَلَيْهِمْ بِآنِيَةٍ مِنْ فِضَّةٍ وَأَكْوَابٍ كَانَتْ قَوَارِيرَا ۞
ಬೆಳ್ಳಿಯ ಪಾತ್ರೆಗಳನ್ನೂ ಶುಭ್ರವಾದ ಗಾಜಿನ ಪಾನ ಪಾತ್ರೆಗಳನ್ನೂ ಅವರ ಸುತ್ತ ಒಯ್ಯಲಾಗುವುದು.
76:16
قَوَارِيرَ مِنْ فِضَّةٍ قَدَّرُوهَا تَقْدِيرًا ۞
ಅದು ಕಲಾತ್ಮಕವಾಗಿ ಅಲಂಕರಿಸಿದ ಬೆಳ್ಳಿಯ ಗಾಜಾಗಿರುವುದು ಮತ್ತು ಅವುಗಳನ್ನು ತುಂಬುವವರು ಸರಿಯಾದ ಪ್ರಮಾಣದಲ್ಲಿ ತುಂಬಿರುವರು.
76:17
وَيُسْقَوْنَ فِيهَا كَأْسًا كَانَ مِزَاجُهَا زَنْجَبِيلًا ۞
ಅಲ್ಲಿ ಅವರಿಗೆ ಶುಂಠಿಯ ಮಿಶ್ರಣವಿರುವ ಪಾನೀಯಗಳನ್ನು ಕುಡಿಸಲಾಗುವುದು.
76:18
عَيْنًا فِيهَا تُسَمَّىٰ سَلْسَبِيلًا ۞
ಅಲ್ಲಿ ಸಲ್ ಸಬೀಲ್ ಎಂಬ ಹೆಸರಿನ ಒಂದು ಚಿಲುಮೆ ಇರುವುದು.
76:19
۞ وَيَطُوفُ عَلَيْهِمْ وِلْدَانٌ مُخَلَّدُونَ إِذَا رَأَيْتَهُمْ حَسِبْتَهُمْ لُؤْلُؤًا مَنْثُورًا ۞
ಸದಾ ಬಾಲಕರಾಗಿರುವವರು ಅಲ್ಲಿ ಸಂಚರಿಸುತ್ತಿರುವರು. ನೀವು ಅವರನ್ನು ಕಂಡರೆ, ಅವರು ಚದುರಿದ ಮುತ್ತುಗಳೆಂದು ಭಾವಿಸುವಿರಿ.
76:20
وَإِذَا رَأَيْتَ ثَمَّ رَأَيْتَ نَعِيمًا وَمُلْكًا كَبِيرًا ۞
ಅಲ್ಲಿ ನೀವು ಎಲ್ಲಿ ನೋಡಿದರೂ ಧಾರಾಳ ಅನುಗ್ರಹಗಳನ್ನು ಮತ್ತು ಒಂದು ಬೃಹತ್ ಸಾಮ್ರಾಜ್ಯವನ್ನೇ ಕಾಣುವಿರಿ.
76:21
عَالِيَهُمْ ثِيَابُ سُنْدُسٍ خُضْرٌ وَإِسْتَبْرَقٌ ۖ وَحُلُّوا أَسَاوِرَ مِنْ فِضَّةٍ وَسَقَاهُمْ رَبُّهُمْ شَرَابًا طَهُورًا ۞
ಅವರ ಮೇಲುಡುಪು ನುಣ್ಣಗೆಯ ಹಸಿರು ರೇಷ್ಮೆ ಹಾಗೂ ಉಣ್ಣೆಯದ್ದಾಗಿರುವುದು ಮತ್ತು ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರ ಒಡೆಯನು ಅವರಿಗೆ ಒಂದು ನಿರ್ಮಲ ಪಾನೀಯವನ್ನು ಕುಡಿಸುವನು.
76:22
إِنَّ هَٰذَا كَانَ لَكُمْ جَزَاءً وَكَانَ سَعْيُكُمْ مَشْكُورًا ۞
‘‘ಇದು ನಿಮ್ಮ ಪ್ರತಿಫಲ. ನಿಮ್ಮ ಶ್ರಮವು ಸ್ವೀಕೃತವಾಗಿದೆ’’ (ಎಂದು ಅವರೊಡನೆ ಹೇಳಲಾಗುವುದು).
76:23
إِنَّا نَحْنُ نَزَّلْنَا عَلَيْكَ الْقُرْآنَ تَنْزِيلًا ۞
ದೂತರೇ, ನಾವು ಈ ಕುರ್‌ಆನನ್ನು ಹಂತ ಹಂತವಾಗಿ ನಿಮಗೆ ಇಳಿಸಿ ಕೊಟ್ಟಿರುವೆವು.
76:24
فَاصْبِرْ لِحُكْمِ رَبِّكَ وَلَا تُطِعْ مِنْهُمْ آثِمًا أَوْ كَفُورًا ۞
ನೀವು ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ ಮತ್ತು ಅವರ (ಧಿಕ್ಕಾರಿಗಳ) ಪೈಕಿ ಯಾವುದೇ ಪಾಪಿಯ ಅಥವಾ ಕೃತಘ್ನನ ಮಾತನ್ನು ಅನುಸರಿಸಬೇಡಿರಿ.
76:25
وَاذْكُرِ اسْمَ رَبِّكَ بُكْرَةً وَأَصِيلًا ۞
ಸಂಜೆ ಮತ್ತು ಮುಂಜಾನೆಯ ವೇಳೆ ನೀವು ನಿಮ್ಮ ಒಡೆಯನ ನಾಮ ಸ್ಮರಣೆ ಮಾಡಿರಿ.
76:26
وَمِنَ اللَّيْلِ فَاسْجُدْ لَهُ وَسَبِّحْهُ لَيْلًا طَوِيلًا ۞
ಮತ್ತು ಇರುಳಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಹಾಗೂ ಇರುಳಿನ ದೀರ್ಘ ಭಾಗದಲ್ಲಿ ಅವನ ಪಾವಿತ್ರ್ಯವನ್ನು ಜಪಿಸಿರಿ.
76:27
إِنَّ هَٰؤُلَاءِ يُحِبُّونَ الْعَاجِلَةَ وَيَذَرُونَ وَرَاءَهُمْ يَوْمًا ثَقِيلًا ۞
ಅವರು ಬೇಗನೆ ಸಿಗುವುದನ್ನು (ಇಹಲೋಕವನ್ನು) ಪ್ರೀತಿಸುತ್ತಾರೆ ಮತ್ತು ತಮ್ಮ ಮುಂದಿರುವ (ಲೋಕಾಂತ್ಯದ) ಮಹಾ ದಿನವನ್ನು ಕಡೆಗಣಿಸಿ ಬಿಡುತ್ತಾರೆ.
76:28
نَحْنُ خَلَقْنَاهُمْ وَشَدَدْنَا أَسْرَهُمْ ۖ وَإِذَا شِئْنَا بَدَّلْنَا أَمْثَالَهُمْ تَبْدِيلًا ۞
ನಾವೇ ಅವರನ್ನು ಸೃಷ್ಟಿಸಿರುವೆವು ಮತ್ತು ಅವರ ಶರೀರದ ಗಂಟುಗಳನ್ನು ಬಲ ಪಡಿಸಿರುವೆವು ಮತ್ತು ನಾವು ಬಯಸಿದರೆ ಅವರ ಬದಲಿಗೆ ಅವರಂತಹ ಇತರರನ್ನು ತರಬಲ್ಲೆವು.
76:29
إِنَّ هَٰذِهِ تَذْكِرَةٌ ۖ فَمَنْ شَاءَ اتَّخَذَ إِلَىٰ رَبِّهِ سَبِيلًا ۞
ಇದೊಂದು ಉಪದೇಶವಾಗಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ.
76:30
وَمَا تَشَاءُونَ إِلَّا أَنْ يَشَاءَ اللَّهُ ۚ إِنَّ اللَّهَ كَانَ عَلِيمًا حَكِيمًا ۞
ಅಲ್ಲಾಹನು ಇಚ್ಛಿಸುವ ತನಕ ನಿಮ್ಮ ಯಾವ ಇಚ್ಛೆಯೂ ನಡೆಯದು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುತ್ತಾನೆ.
76:31
يُدْخِلُ مَنْ يَشَاءُ فِي رَحْمَتِهِ ۚ وَالظَّالِمِينَ أَعَدَّ لَهُمْ عَذَابًا أَلِيمًا ۞
ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹದೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗಾಗಿ ಅವನು ಕಠಿಣ ಶಿಕ್ಷೆಯನ್ನು ಸಿದ್ಧವಾಗಿಟ್ಟಿದ್ದಾನೆ.