Al-Ma`arij (The ascending stairways)
70. ಅಲ್ ಮಆರಿಜ್(ಔನ್ನತ್ಯಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
70:1
سَأَلَ سَائِلٌ بِعَذَابٍ وَاقِعٍ ۞
ಪ್ರಶ್ನಿಸುವವನೊಬ್ಬನು, (ಧಿಕ್ಕಾರಿಗಳ ಮೇಲೆ) ಖಂಡಿತ ಬಂದೆರಗಲಿರುವ ಶಿಕ್ಷೆಯ ಕುರಿತು ಪ್ರಶ್ನಿಸಿದ್ದಾನೆ.
70:2
لِلْكَافِرِينَ لَيْسَ لَهُ دَافِعٌ ۞
ಧಿಕ್ಕಾರಿಗಳ ಮೇಲೆ ಅದು ಬಂದೆರಗುವುದನ್ನು ನಿವಾರಿಸಲು ಯಾರಿಂದಲೂ ಸಾಧ್ಯವಾಗದು.
70:3
مِنَ اللَّهِ ذِي الْمَعَارِجِ ۞
ಅತ್ಯುನ್ನತ ಸ್ಥಾನಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಬರಲಿದೆ).
70:4
تَعْرُجُ الْمَلَائِكَةُ وَالرُّوحُ إِلَيْهِ فِي يَوْمٍ كَانَ مِقْدَارُهُ خَمْسِينَ أَلْفَ سَنَةٍ ۞
ಐವತ್ತು ಸಾವಿರ ವರ್ಷಗಳಷ್ಟು ದೀರ್ಘವಾಗಿರುವ ಒಂದು ದಿನ, ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ಅವನೆಡೆಗೆ ಏರಿ ಹೋಗುತ್ತಾರೆ.
70:5
فَاصْبِرْ صَبْرًا جَمِيلًا ۞
(ದೂತರೇ,) ಸದ್ಯ ನೀವು ಸಂಯಮ ತೋರಿರಿ. ಸಭ್ಯವಾದ ಸಂಯಮ.
70:6
إِنَّهُمْ يَرَوْنَهُ بَعِيدًا ۞
ಅವರು ಅದನ್ನು (ವಿಚಾರಣೆಯ ದಿನವನ್ನು) ತುಂಬಾ ದೂರದಲ್ಲಿ ಕಾಣುತ್ತಿದ್ದಾರೆ.
70:7
وَنَرَاهُ قَرِيبًا ۞
ಆದರೆ ನಾವು ಅದನ್ನು ತೀರಾ ಹತ್ತಿರದಲ್ಲಿ ಕಾಣುತ್ತಿದ್ದೇವೆ.
70:8
يَوْمَ تَكُونُ السَّمَاءُ كَالْمُهْلِ ۞
ಆಕಾಶವು ಕರಗಿದ ತಾಮ್ರದಂತಾಗುವ ಆ ದಿನ,
70:9
وَتَكُونُ الْجِبَالُ كَالْعِهْنِ ۞
ಪರ್ವತಗಳೆಲ್ಲಾ ಉಣ್ಣೆಯ ಚೂರುಗಳಂತಾಗಿ ಬಿಡುವವು.
70:10
وَلَا يَسْأَلُ حَمِيمٌ حَمِيمًا ۞
(ಅಂದು) ಯಾವ ಮಿತ್ರನೂ ತನ್ನ ಮಿತ್ರನ ಕುರಿತು ವಿಚಾರಿಸಲಾರನು.
70:11
يُبَصَّرُونَهُمْ ۚ يَوَدُّ الْمُجْرِمُ لَوْ يَفْتَدِي مِنْ عَذَابِ يَوْمِئِذٍ بِبَنِيهِ ۞
ನಿಜವಾಗಿ, ಅವರು ಪರಸ್ಪರರನ್ನು ನೋಡುತ್ತಿರುವರು. ಅಂದು ಅಪರಾಧಿಯು ಶಿಕ್ಷೆಗೆ ಪರಿಹಾರವಾಗಿ ತನ್ನ ಪುತ್ರರನ್ನು ನೀಡಲು ಸಿದ್ಧನಾಗುವನು.
70:12
وَصَاحِبَتِهِ وَأَخِيهِ ۞
(ಮಾತ್ರವಲ್ಲ,) ತನ್ನ ಪತ್ನಿ ಮತ್ತು ತನ್ನ ಸಹೋದರರನ್ನೂ
70:13
وَفَصِيلَتِهِ الَّتِي تُؤْوِيهِ ۞
ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನೂ,
70:14
وَمَنْ فِي الْأَرْضِ جَمِيعًا ثُمَّ يُنْجِيهِ ۞
ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ (ಪರಿಹಾರವಾಗಿ ಕೊಟ್ಟು) ಶಿಕ್ಷೆಯಿಂದ ಪಾರಾಗಲು ಬಯಸುವನು.
70:15
كَلَّا ۖ إِنَّهَا لَظَىٰ ۞
ಖಂಡಿತ ಇಲ್ಲ. ಅದು, ಭುಗಿಲೇಳುವ ಬೆಂಕಿಯಾಗಿರುವುದು.
70:16
نَزَّاعَةً لِلشَّوَىٰ ۞
ಚರ್ಮವನ್ನು ಸುಲಿದು ಬಿಡುವ ಬೆಂಕಿ.
70:17
تَدْعُو مَنْ أَدْبَرَ وَتَوَلَّىٰ ۞
ಸತ್ಯವನ್ನು ಕಡೆಗಣಿಸಿ ದೊಡ್ಡಸ್ತಿಕೆ ಮೆರೆದವನನ್ನು ಅದು (ನರಕವು) ಕರೆಯುವುದು.
70:18
وَجَمَعَ فَأَوْعَىٰ ۞
ಸಂಪತ್ತನ್ನು ಸಂಗ್ರಹಿಸಿ ಮುಚ್ಚಿಟ್ಟವನನ್ನೂ (ಅದು ಕರೆಯುವುದು.)
70:19
۞ إِنَّ الْإِنْسَانَ خُلِقَ هَلُوعًا ۞
ಖಂಡಿತವಾಗಿಯೂ ಮಾನವನನ್ನು ಚಂಚಲನಾಗಿ ಸೃಷ್ಟಿಸಲಾಗಿದೆ.
70:20
إِذَا مَسَّهُ الشَّرُّ جَزُوعًا ۞
ಸಂಕಷ್ಟವೇನಾದರೂ ಎದುರಾದೊಡನೆ ಅವನು ಗಾಬರಿಗೊಳ್ಳುತ್ತಾನೆ.
70:21
وَإِذَا مَسَّهُ الْخَيْرُ مَنُوعًا ۞
ಸುಖ ಪ್ರಾಪ್ತವಾದಾಗ ಜಿಪುಣನಾಗಿ ಬಿಡುತ್ತಾನೆ.
70:22
إِلَّا الْمُصَلِّينَ ۞
ಆದರೆ ನಮಾಝ್ ಸಲ್ಲಿಸುವವರು ಮಾತ್ರ (ಹಾಗಿರುವುದಿಲ್ಲ).
70:23
الَّذِينَ هُمْ عَلَىٰ صَلَاتِهِمْ دَائِمُونَ ۞
ಅವರು ಸದಾ ಕಟ್ಟುನಿಟ್ಟಾಗಿ ನಮಾಝನ್ನು ಪಾಲಿಸುತ್ತಾರೆ.
70:24
وَالَّذِينَ فِي أَمْوَالِهِمْ حَقٌّ مَعْلُومٌ ۞
ಅವರ ಸಂಪತ್ತುಗಳಲ್ಲಿ ನಿರ್ದಿಷ್ಟವಾದ ಹಕ್ಕು ಇದೆ.
70:25
لِلسَّائِلِ وَالْمَحْرُومِ ۞
ಬೇಡುವವನಿಗೆ ಮತ್ತು ವಂಚಿತನಿಗೆ.
70:26
وَالَّذِينَ يُصَدِّقُونَ بِيَوْمِ الدِّينِ ۞
ಪ್ರತಿಫಲದ ದಿನವಿರುವುದು ಸತ್ಯ ಎಂದು ಅವರು ನಂಬುತ್ತಾರೆ.
70:27
وَالَّذِينَ هُمْ مِنْ عَذَابِ رَبِّهِمْ مُشْفِقُونَ ۞
ಅವರು ತಮ್ಮೊಡೆಯನ ಶಿಕ್ಷೆಗೆ ಅಂಜುತ್ತಾರೆ.
70:28
إِنَّ عَذَابَ رَبِّهِمْ غَيْرُ مَأْمُونٍ ۞
ಅವರ ಒಡೆಯನ ಶಿಕ್ಷೆ ಎಂತಹದ್ದೆಂದರೆ, ಆ ಕುರಿತು ನಿಶ್ಚಿಂತರಾಗಿರಲು ಸಾಧ್ಯವೇ ಇಲ್ಲ.
70:29
وَالَّذِينَ هُمْ لِفُرُوجِهِمْ حَافِظُونَ ۞
ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳುತ್ತಾರೆ.
70:30
إِلَّا عَلَىٰ أَزْوَاجِهِمْ أَوْ مَا مَلَكَتْ أَيْمَانُهُمْ فَإِنَّهُمْ غَيْرُ مَلُومِينَ ۞
ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ಖಂಡನಾರ್ಹರಲ್ಲ.
70:31
فَمَنِ ابْتَغَىٰ وَرَاءَ ذَٰلِكَ فَأُولَٰئِكَ هُمُ الْعَادُونَ ۞
ಅದರ ಆಚಿನದನ್ನು ಅಪೇಕ್ಷಿಸುವವರು - ಅವರೇ ಎಲ್ಲೆ ಮೀರುವವರು.
70:32
وَالَّذِينَ هُمْ لِأَمَانَاتِهِمْ وَعَهْدِهِمْ رَاعُونَ ۞
ಅವರು (ಸ್ವರ್ಗಕ್ಕೆ ಅರ್ಹರಾದ ಸಜ್ಜನರು) ತಮ್ಮನ್ನು ನಂಬಿ ಒಪ್ಪಿಸಲಾದ ಹೊಣೆಗಳನ್ನು ನಿಭಾಯಿಸುತ್ತಾರೆ ಮತ್ತು ತಮ್ಮ ಕರಾರುಗಳನ್ನು ಪಾಲಿಸುತ್ತಾರೆ.
70:33
وَالَّذِينَ هُمْ بِشَهَادَاتِهِمْ قَائِمُونَ ۞
ಅವರು ತಮ್ಮ ಸಾಕ್ಷ್ಯಗಳಲ್ಲಿ ಸ್ಥಿರರಾಗಿರುತ್ತಾರೆ.
70:34
وَالَّذِينَ هُمْ عَلَىٰ صَلَاتِهِمْ يُحَافِظُونَ ۞
ಅವರು ತಮ್ಮ ನಮಾಝ್‌ಗಳ ಕುರಿತು ಎಚ್ಚರ ವಹಿಸುತ್ತಾರೆ.
70:35
أُولَٰئِكَ فِي جَنَّاتٍ مُكْرَمُونَ ۞
ಅವರೇ, ಗೌರವಾನ್ವಿತರಾಗಿ ಸ್ವರ್ಗ ತೋಟಗಳಲ್ಲಿ ಇರುವವರು.
70:36
فَمَالِ الَّذِينَ كَفَرُوا قِبَلَكَ مُهْطِعِينَ ۞
ಇದೇನಾಗಿದೆ ಧಿಕ್ಕಾರಿಗಳಿಗೆ? ಅವರೇಕೆ ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ?
70:37
عَنِ الْيَمِينِ وَعَنِ الشِّمَالِ عِزِينَ ۞
ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪು ಗುಂಪಾಗಿ ಬರುತ್ತಿದ್ದಾರೆ.
70:38
أَيَطْمَعُ كُلُّ امْرِئٍ مِنْهُمْ أَنْ يُدْخَلَ جَنَّةَ نَعِيمٍ ۞
ಅವರ ಪೈಕಿ ಪ್ರತಿಯೊಬ್ಬರೂ ಅನುಗ್ರಹ ತುಂಬಿದ ಸ್ವರ್ಗದೊಳಗೆ ಪ್ರವೇಶಿಸಲು ಆಶಿಸುತ್ತಿದ್ದಾರೆ.
70:39
كَلَّا ۖ إِنَّا خَلَقْنَاهُمْ مِمَّا يَعْلَمُونَ ۞
ಖಂಡಿತ ಸಾಧ್ಯವಿಲ್ಲ. ಅವರಿಗೆ ತಿಳಿದಿರುವ ಒಂದು ವಸ್ತುವಿನಿಂದ ನಾವೇ ಅವರನ್ನು ಸೃಷ್ಟಿಸಿರುವೆವು.
70:40
فَلَا أُقْسِمُ بِرَبِّ الْمَشَارِقِ وَالْمَغَارِبِ إِنَّا لَقَادِرُونَ ۞
ಖಂಡಿತ ಇಲ್ಲ. ನಾನು ಪೂರ್ವಗಳ ಮತ್ತು ಪಶ್ಚಿಮಗಳ ಒಡೆಯನ ಆಣೆ ಹಾಕಿ ಹೇಳುತ್ತಿದ್ದೇನೆ, ನಾವು ಖಂಡಿತ ಅದನ್ನು ಮಾಡಬಲ್ಲೆವು.
70:41
عَلَىٰ أَنْ نُبَدِّلَ خَيْرًا مِنْهُمْ وَمَا نَحْنُ بِمَسْبُوقِينَ ۞
ಅವರ ಸ್ಥಾನದಲ್ಲಿ ನಾವು ಅವರಿಗಿಂತ ಉತ್ತಮರನ್ನು ತರಬಲ್ಲೆವು. ಯಾರೂ ನಮ್ಮನ್ನು ಸೋಲಿಸಲಾರರು.
70:42
فَذَرْهُمْ يَخُوضُوا وَيَلْعَبُوا حَتَّىٰ يُلَاقُوا يَوْمَهُمُ الَّذِي يُوعَدُونَ ۞
ಅವರನ್ನು ಬಿಟ್ಟು ಬಿಡಿರಿ. ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ನಿರರ್ಥಕ ಕೆಲಸಗಳಲ್ಲಿ ಮತ್ತು ಆಟ ವಿನೋದಗಳಲ್ಲಿ ನಿರತರಾಗಿರಲಿ.
70:43
يَوْمَ يَخْرُجُونَ مِنَ الْأَجْدَاثِ سِرَاعًا كَأَنَّهُمْ إِلَىٰ نُصُبٍ يُوفِضُونَ ۞
ಅವರು, ತಮ್ಮ ಗೋರಿಗಳಿಂದ ಎದ್ದು ಹೊರ ಬರುವ ದಿನ, ಒಂದು ನಿರ್ದಿಷ್ಟ ಗುರಿಯೆಡೆಗೋ ಎಂಬಂತೆ ಆತುರವಾಗಿ ಧಾವಿಸುತ್ತಿರುವರು.
70:44
خَاشِعَةً أَبْصَارُهُمْ تَرْهَقُهُمْ ذِلَّةٌ ۚ ذَٰلِكَ الْيَوْمُ الَّذِي كَانُوا يُوعَدُونَ ۞
ಅವರ ದೃಷ್ಟಿಗಳು ಭೀತವಾಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿ ಕೊಂಡಿರುವುದು. ಅದುವೇ ಅವರಿಗೆ ವಾಗ್ದಾನ ಮಾಡಲಾಗಿದ್ದ ದಿನ.