Ya Sin (Yaseen)
36. ಯಾ ಸೀನ್(ಯಾ ಸೀನ್)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
36:1
يس ۞
ಯಾ ಸೀನ್.
36:2
وَالْقُرْآنِ الْحَكِيمِ ۞
ಯುಕ್ತಿಪೂರ್ಣವಾಗಿರುವ ಕುರ್‌ಆನಿನಾಣೆ,
36:3
إِنَّكَ لَمِنَ الْمُرْسَلِينَ ۞
(ದೂತರೇ,) ನೀವು ಖಂಡಿತ ಒಬ್ಬ ದೇವದೂತರಾಗಿರುವಿರಿ.
36:4
عَلَىٰ صِرَاطٍ مُسْتَقِيمٍ ۞
ನೀವು ನೇರ ಮಾರ್ಗದಲ್ಲಿರುವಿರಿ.
36:5
تَنْزِيلَ الْعَزِيزِ الرَّحِيمِ ۞
ಪ್ರಬಲನೂ ಕರುಣಾಮಯಿಯೂ ಆಗಿರುವವನು ಇದನ್ನು (ಕುರ್‌ಆನನ್ನು) ಇಳಿಸಿಕೊಟ್ಟಿರುವನು -
36:6
لِتُنْذِرَ قَوْمًا مَا أُنْذِرَ آبَاؤُهُمْ فَهُمْ غَافِلُونَ ۞
- ಯಾರ ಗತ ಪೀಳಿಗೆಯನ್ನು ಎಚ್ಚರಿಸಲಾಗಿರಲಿಲ್ಲವೋ ಅವರನ್ನು ಎಚ್ಚರಿಸಲಿಕ್ಕಾಗಿ. ಅವರು ಅರಿವಿಲ್ಲದವರು.
36:7
لَقَدْ حَقَّ الْقَوْلُ عَلَىٰ أَكْثَرِهِمْ فَهُمْ لَا يُؤْمِنُونَ ۞
ಅವರಲ್ಲಿ ಹೆಚ್ಚಿನವರ ಕುರಿತು (ಅಲ್ಲಾಹನ) ಮಾತು ಈಗಾಗಲೇ ಸತ್ಯವಾಗಿದೆ. ಅವರಿನ್ನು ವಿಶ್ವಾಸಿಗಳಾಗುವುದಿಲ್ಲ.
36:8
إِنَّا جَعَلْنَا فِي أَعْنَاقِهِمْ أَغْلَالًا فَهِيَ إِلَى الْأَذْقَانِ فَهُمْ مُقْمَحُونَ ۞
ನಾವು ಅವರ ಕೊರಳುಗಳಿಗೆ, ಗಲ್ಲದವರೆಗೂ ಬಿಗಿದಿಡುವ ನೊಗಗಳನ್ನು ಹಾಕಿರುವೆವು. ಇದರಿಂದಾಗಿ ಅವರ ತಲೆಗಳು ಸೆಟೆದುಕೊಂಡಿವೆ.
36:9
وَجَعَلْنَا مِنْ بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَاهُمْ فَهُمْ لَا يُبْصِرُونَ ۞
ನಾವು ಅವರ ಮುಂದೆ ಒಂದು ಗೋಡೆಯನ್ನು ಹಾಗೂ ಅವರ ಹಿಂದೆ ಒಂದು ಗೋಡೆಯನ್ನು ನಿರ್ಮಿಸಿರುವೆವು ಮತ್ತು ಅವರನ್ನು ಮುಚ್ಚಿ ಬಿಟ್ಟಿರುವೆವು. ಆದ್ದರಿಂದ ಅವರಿಗೆ ಏನೂ ಕಾಣಿಸುತ್ತಿಲ್ಲ.
36:10
وَسَوَاءٌ عَلَيْهِمْ أَأَنْذَرْتَهُمْ أَمْ لَمْ تُنْذِرْهُمْ لَا يُؤْمِنُونَ ۞
ನೀವು ಅವರನ್ನು ಎಚ್ಚರಿಸಿದರೂ ಒಂದೇ, ಎಚ್ಚರಿಸದೆ ಬಿಟ್ಟರೂ ಒಂದೇ. ಅವರಂತು ನಂಬುವವರಲ್ಲ.
36:11
إِنَّمَا تُنْذِرُ مَنِ اتَّبَعَ الذِّكْرَ وَخَشِيَ الرَّحْمَٰنَ بِالْغَيْبِ ۖ فَبَشِّرْهُ بِمَغْفِرَةٍ وَأَجْرٍ كَرِيمٍ ۞
ಉಪದೇಶವನ್ನು ಅನುಸರಿಸುವ ಹಾಗೂ ಕಣ್ಣಾರೆ ಕಾಣದೆಯೇ ಆ ಅಪಾರ ದಯಾಳುವಿಗೆ (ಅಲ್ಲಾಹನಿಗೆ) ಅಂಜುತ್ತಿರುವ ವ್ಯಕ್ತಿಯನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಅಂಥವನಿಗೆ ನೀವು ಕ್ಷಮೆ ಹಾಗೂ ಉದಾರ ಪ್ರತಿಫಲದ ಶುಭವಾರ್ತೆ ನೀಡಿರಿ.
36:12
إِنَّا نَحْنُ نُحْيِي الْمَوْتَىٰ وَنَكْتُبُ مَا قَدَّمُوا وَآثَارَهُمْ ۚ وَكُلَّ شَيْءٍ أَحْصَيْنَاهُ فِي إِمَامٍ مُبِينٍ ۞
ಖಂಡಿತವಾಗಿಯೂ ನಾವೇ ಸತ್ತವರನ್ನು ಜೀವಂತಗೊಳಿಸುತ್ತೇವೆ ಮತ್ತು ಅವರು ಮುಂದಕ್ಕೆ ಕಳಿಸಿರುವ ಹಾಗೂ ತಮ್ಮ ಹಿಂದೆ ಬಿಟ್ಟು ಹೋಗಿರುವ ಎಲ್ಲವನ್ನೂ ನಾವು ಒಂದು ಸ್ಪಷ್ಟ ಗ್ರಂಥದಲ್ಲಿ ಎಣಿಸಿಟ್ಟಿರುವೆವು.
36:13
وَاضْرِبْ لَهُمْ مَثَلًا أَصْحَابَ الْقَرْيَةِ إِذْ جَاءَهَا الْمُرْسَلُونَ ۞
ನೀವು ಅವರಿಗೆ ಆ ನಾಡಿನವರ ಸಮಾಚಾರವನ್ನು ತಿಳಿಸಿರಿ; ಅವರ ಬಳಿಗೆ ದೂತರು ಬಂದಿದ್ದರು.*
36:14
إِذْ أَرْسَلْنَا إِلَيْهِمُ اثْنَيْنِ فَكَذَّبُوهُمَا فَعَزَّزْنَا بِثَالِثٍ فَقَالُوا إِنَّا إِلَيْكُمْ مُرْسَلُونَ ۞
ನಾವು ಅವರ ಬಳಿಗೆ ಇಬ್ಬರು ದೂತರನ್ನು ಕಳಿಸಿದಾಗ ಅವರಿಬ್ಬರನ್ನೂ ಅವರು ತಿರಸ್ಕರಿಸಿದರು. ಕೊನೆಗೆ ನಾವು ಮೂರನೆಯ ದೂತನ ಮೂಲಕ ಅವರಿಗೆ (ದೂತರಿಗೆ) ಬಲ ಒದಗಿಸಿದೆವು. ‘‘ನಮ್ಮನ್ನು ಖಚಿತವಾಗಿ ನಿಮ್ಮೆಡೆಗೇ ರವಾನಿಸಲಾಗಿದೆ’’ ಎಂದು ಅವರು ಹೇಳಿದರು.
36:15
قَالُوا مَا أَنْتُمْ إِلَّا بَشَرٌ مِثْلُنَا وَمَا أَنْزَلَ الرَّحْمَٰنُ مِنْ شَيْءٍ إِنْ أَنْتُمْ إِلَّا تَكْذِبُونَ ۞
ಆಗ ಅವರು (ನಾಡಿನವರು) ಹೇಳಿದರು; ನೀವು ನಮ್ಮಂತಹ ಮಾನವರು ಮಾತ್ರ. ಆ ಪರಮ ದಯಾಮಯನು (ಅಲ್ಲಾಹನು) ಏನನ್ನೂ ಇಳಿಸಿಕೊಟ್ಟಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.
36:16
قَالُوا رَبُّنَا يَعْلَمُ إِنَّا إِلَيْكُمْ لَمُرْسَلُونَ ۞
ಅವರು (ದೂತರು) ಹೇಳಿದರು; ನಾವು ನಿಮ್ಮೆಡೆಗೆ ಕಳಿಸಲ್ಪಟ್ಟವರು ಎಂಬುದನ್ನು ನಮ್ಮೊಡೆಯನು ಖಚಿತವಾಗಿ ಬಲ್ಲನು.
36:17
وَمَا عَلَيْنَا إِلَّا الْبَلَاغُ الْمُبِينُ ۞
ನಮ್ಮ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ.
36:18
قَالُوا إِنَّا تَطَيَّرْنَا بِكُمْ ۖ لَئِنْ لَمْ تَنْتَهُوا لَنَرْجُمَنَّكُمْ وَلَيَمَسَّنَّكُمْ مِنَّا عَذَابٌ أَلِيمٌ ۞
ಅವರು (ನಾಡಿನವರು) ಹೇಳಿದರು; ನಾವು ನಿಮ್ಮನ್ನು ಕೇವಲ ಅಪಶಕುನಗಳಾಗಿ ಕಂಡಿರುವೆವು. ನೀವು (ಸತ್ಯಪ್ರಚಾರವನ್ನು) ನಿಲ್ಲಿಸದಿದ್ದರೆ ನಾವು ನಿಮ್ಮನ್ನು ಕಲ್ಲೆಸೆದು ಕೊಲ್ಲುವೆವು ಮತ್ತು ಖಂಡಿತವಾಗಿಯೂ ನಮ್ಮ ಕಡೆಯಿಂದ ನಿಮಗೆ ಕಠಿಣ ಶಿಕ್ಷೆ ಸಿಗುವುದು.
36:19
قَالُوا طَائِرُكُمْ مَعَكُمْ ۚ أَئِنْ ذُكِّرْتُمْ ۚ بَلْ أَنْتُمْ قَوْمٌ مُسْرِفُونَ ۞
ಆಗ ಅವರು (ದೂತರು) ಹೇಳಿದರು; ನಿಮ್ಮ ಅಪಶಕುನವೆಲ್ಲಾ ನಿಮ್ಮ ಜೊತೆಗೇ ಇದೆ. ನಿಮಗೆ ಬೋಧನೆ ತಲುಪಿದೆಯಲ್ಲವೇ? ನಿಜವಾಗಿ ನೀವು ಎಲ್ಲೆ ಮೀರುವವರಾಗಿದ್ದೀರಿ.
36:20
وَجَاءَ مِنْ أَقْصَى الْمَدِينَةِ رَجُلٌ يَسْعَىٰ قَالَ يَا قَوْمِ اتَّبِعُوا الْمُرْسَلِينَ ۞
ನಗರದ ಮೂಲೆಯಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದನು; ನನ್ನ ಜನಾಂಗದವರೇ, ದೂತರನ್ನು ಅನುಸರಿಸಿರಿ.
36:21
اتَّبِعُوا مَنْ لَا يَسْأَلُكُمْ أَجْرًا وَهُمْ مُهْتَدُونَ ۞
ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸದ ಹಾಗೂ ಮಾರ್ಗದರ್ಶನ ಪಡೆದಿರುವ, ಅವರನ್ನು ಅನುಸರಿಸಿರಿ.
36:22
وَمَا لِيَ لَا أَعْبُدُ الَّذِي فَطَرَنِي وَإِلَيْهِ تُرْجَعُونَ ۞
ನನ್ನನ್ನು ರೂಪಿಸಿದಾತನನ್ನು ನಾನೇಕೆ ಪೂಜಿಸಬಾರದು? ಕೊನೆಗಂತು, ನಿಮ್ಮೆಲ್ಲರನ್ನೂ ಅವನ ಕಡೆಗೇ ಮರಳಿಸಲಾಗುವುದು.
36:23
أَأَتَّخِذُ مِنْ دُونِهِ آلِهَةً إِنْ يُرِدْنِ الرَّحْمَٰنُ بِضُرٍّ لَا تُغْنِ عَنِّي شَفَاعَتُهُمْ شَيْئًا وَلَا يُنْقِذُونِ ۞
ನಾನೇನು, ಅವನ ಹೊರತು ಇತರ ಯಾರನ್ನಾದರೂ ದೇವರಾಗಿಸಿಕೊಳ್ಳಬೇಕೆ? ನಿಜವಾಗಿ, ಆ ಪರಮ ದಯಾಳು ನನಗೇನಾದರೂ ಹಾನಿಯನ್ನುಂಟು ಮಾಡ ಬಯಸಿದರೆ, ಅವರ (ಅನ್ಯರ) ಶಿಫಾರಸ್ಸು ನನ್ನ ಯಾವ ಕೆಲಸಕ್ಕೂ ಬಾರದು ಮತ್ತು ನನ್ನನ್ನು ರಕ್ಷಿಸಲು ಅವರಿಗೆ ಸಾಧ್ಯವಾಗದು.
36:24
إِنِّي إِذًا لَفِي ضَلَالٍ مُبِينٍ ۞
ಹಾಗೆ ಮಾಡಿದರೆ (ಅನ್ಯರನ್ನು ಪೂಜಿಸಿದರೆ), ನಾನು ಸ್ಪಷ್ಟ ದಾರಿಗೇಡಿತನದಲ್ಲಿ ಇದ್ದಂತಾಗುವುದು.
36:25
إِنِّي آمَنْتُ بِرَبِّكُمْ فَاسْمَعُونِ ۞
ನೀವು ನನ್ನ ಮಾತನ್ನು ಕೇಳಿರಿ ನಾನು ನಿಮ್ಮ ನೈಜ ಒಡೆಯನನ್ನು ನಂಬಿದ್ದೇನೆ.
36:26
قِيلَ ادْخُلِ الْجَنَّةَ ۖ قَالَ يَا لَيْتَ قَوْمِي يَعْلَمُونَ ۞
(ಅವರು ಆತನನ್ನು ಕೊಂದಾಗ) ‘ಸ್ವರ್ಗವನ್ನು ಪ್ರವೇಶಿಸು’ ಎಂದು ಅವನೊಡನೆ ಹೇಳಲಾಯಿತು. ಅವನು ಹೇಳಿದನು; ‘‘ಅಯ್ಯೋ, ನನ್ನ ಜನಾಂಗದವರಿಗೆ (ಇದು) ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!’’
36:27
بِمَا غَفَرَ لِي رَبِّي وَجَعَلَنِي مِنَ الْمُكْرَمِينَ ۞
‘‘ನನ್ನ ಒಡೆಯನು ನನ್ನನ್ನು ಕ್ಷಮಿಸಿರುವನು ಮತ್ತು ನನ್ನನ್ನು ಗೌರವಾನ್ವಿತರ ಸಾಲಿಗೆ ಸೇರಿಸಿರುವನೆಂಬುದು (ಅವರಿಗೆ ತಿಳಿದಿರಬೇಕಿತ್ತು).’’
36:28
۞ وَمَا أَنْزَلْنَا عَلَىٰ قَوْمِهِ مِنْ بَعْدِهِ مِنْ جُنْدٍ مِنَ السَّمَاءِ وَمَا كُنَّا مُنْزِلِينَ ۞
ಆತನ (ಮರಣದ ಬಳಿಕ) ನಾವೇನೂ ಅವನ ಜನಾಂಗದ ವಿರುದ್ಧ ಆಕಾಶದಿಂದ ಯಾವುದೇ ಪಡೆಯನ್ನು ಇಳಿಸಲಿಲ್ಲ. ಇಳಿಸುವ ಅಗತ್ಯವೂ ನಮಗಿರಲಿಲ್ಲ.
36:29
إِنْ كَانَتْ إِلَّا صَيْحَةً وَاحِدَةً فَإِذَا هُمْ خَامِدُونَ ۞
ಅದು (ಅವರ ಶಿಕ್ಷೆ) ಕೇವಲ ಒಂದು ಭಯಾನಕ ಶಬ್ದವಾಗಿತ್ತು. ಅಷ್ಟಕ್ಕೇ ಅವರು ಆರಿ ಹೋದರು.
36:30
يَا حَسْرَةً عَلَى الْعِبَادِ ۚ مَا يَأْتِيهِمْ مِنْ رَسُولٍ إِلَّا كَانُوا بِهِ يَسْتَهْزِئُونَ ۞
ಎಷ್ಟೊಂದು ಶೋಚನೀಯವಾಗಿದೆ, ದಾಸರ ಸ್ಥಿತಿ! ಅವರ ಬಳಿಗೆ ಬಂದ ಯಾವ ದೂತನನ್ನೂ ಅವರು ಗೇಲಿ ಮಾಡದೆ ಬಿಟ್ಟದ್ದಿಲ್ಲ.
36:31
أَلَمْ يَرَوْا كَمْ أَهْلَكْنَا قَبْلَهُمْ مِنَ الْقُرُونِ أَنَّهُمْ إِلَيْهِمْ لَا يَرْجِعُونَ ۞
ಅವರೇನು ನೋಡಿಲ್ಲವೇ, ಅವರಿಗಿಂತ ಹಿಂದೆ ಅದೆಷ್ಟು ಪೀಳಿಗೆಗಳನ್ನು ನಾವು ನಾಶಗೊಳಿಸಿ ಬಿಟ್ಟಿದ್ದೇವೆಂದು? ಅವರೆಂದೂ ಅವರ ಬಳಿಗೆ ಮರಳಿ ಬರಲಾರರು.
36:32
وَإِنْ كُلٌّ لَمَّا جَمِيعٌ لَدَيْنَا مُحْضَرُونَ ۞
ಅವರಲ್ಲಿನ ಪ್ರತಿಯೊಬ್ಬರನ್ನೂ ನಮ್ಮ ಬಳಿ ಒಟ್ಟಾಗಿ ಹಾಜರುಪಡಿಸಲಾಗುವುದು.
36:33
وَآيَةٌ لَهُمُ الْأَرْضُ الْمَيْتَةُ أَحْيَيْنَاهَا وَأَخْرَجْنَا مِنْهَا حَبًّا فَمِنْهُ يَأْكُلُونَ ۞
ನಿರ್ಜೀವ ಭೂಮಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದನ್ನು ಜೀವಂತಗೊಳಿಸಿದೆವು ಹಾಗೂ ಅದರಿಂದ ಧಾನ್ಯಗಳನ್ನು ಉತ್ಪಾದಿಸಿದೆವು. ಅವುಗಳನ್ನೇ ಅವರು ತಿನ್ನುತ್ತಾರೆ.
36:34
وَجَعَلْنَا فِيهَا جَنَّاتٍ مِنْ نَخِيلٍ وَأَعْنَابٍ وَفَجَّرْنَا فِيهَا مِنَ الْعُيُونِ ۞
ಮತ್ತು ನಾವು ಅದರಲ್ಲಿ ಖರ್ಜೂರದ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸಿದೆವು ಮತ್ತು ಅದರಲ್ಲಿ ನದಿಗಳನ್ನು ಹರಿಸಿದೆವು.
36:35
لِيَأْكُلُوا مِنْ ثَمَرِهِ وَمَا عَمِلَتْهُ أَيْدِيهِمْ ۖ أَفَلَا يَشْكُرُونَ ۞
ಅವರು ಅದರ ಫಲಗಳನ್ನು ಉಣ್ಣಲೆಂದು (ನಾವು ಇದನ್ನೆಲ್ಲಾ ಮಾಡಿರುವೆವು). ಇದಾವುದನ್ನೂ ಅವರ ಕೈಗಳು ನಿರ್ಮಿಸಿಲ್ಲ. ಇಷ್ಟಾಗಿಯೂ ಅವರೇನು ಕೃತಜ್ಞತೆ ಸಲ್ಲಿಸುವುದಿಲ್ಲವೇ?
36:36
سُبْحَانَ الَّذِي خَلَقَ الْأَزْوَاجَ كُلَّهَا مِمَّا تُنْبِتُ الْأَرْضُ وَمِنْ أَنْفُسِهِمْ وَمِمَّا لَا يَعْلَمُونَ ۞
ಭೂಮಿಯು ಬೆಳೆಯುವ ಎಲ್ಲ ವಸ್ತುಗಳನ್ನೂ, ಸ್ವತಃ ಅವರನ್ನೂ, ಅವರಿಗೆ ತಿಳಿದಿಲ್ಲದ (ಹಲವು) ವಸ್ತುಗಳನ್ನೂ - ಎಲ್ಲವನ್ನೂ ಜೋಡಿಗಳಾಗಿ ಸೃಷ್ಟಿಸಿದವನು (ಅಲ್ಲಾಹನು), ಪಾವನನು.
36:37
وَآيَةٌ لَهُمُ اللَّيْلُ نَسْلَخُ مِنْهُ النَّهَارَ فَإِذَا هُمْ مُظْلِمُونَ ۞
ರಾತ್ರಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದರಿಂದ ಹಗಲನ್ನು ಹಿಂದೆಳೆದುಕೊಂಡಾಗ ಅದೋ ಅವರು ಕಗ್ಗತ್ತಲೆಗೆ ತುತ್ತಾಗಿ ಬಿಡುತ್ತಾರೆ.
36:38
وَالشَّمْسُ تَجْرِي لِمُسْتَقَرٍّ لَهَا ۚ ذَٰلِكَ تَقْدِيرُ الْعَزِيزِ الْعَلِيمِ ۞
ಮತ್ತು ಸೂರ್ಯನು, ತನಗೆ ನಿಗದಿ ಪಡಿಸಲಾಗಿರುವ ದಾರಿಯಲ್ಲಿ ಚಲಿಸುತ್ತಿರುತ್ತಾನೆ. ಇದು ಆ ಪ್ರಚಂಡ, ಸರ್ವಜ್ಞನು (ಅಲ್ಲಾಹನು) ಸ್ಥಾಪಿಸಿರುವ ವ್ಯವಸ್ಥೆ.
36:39
وَالْقَمَرَ قَدَّرْنَاهُ مَنَازِلَ حَتَّىٰ عَادَ كَالْعُرْجُونِ الْقَدِيمِ ۞
ಇನ್ನು ಚಂದ್ರನಿಗೆ ನಾವು ಕೆಲವು ಹಂತಗಳನ್ನು ನಿಗದಿ ಪಡಿಸಿರುವೆವು. ಎಷ್ಟೆಂದರೆ ಅದು (ಬಾಲಚಂದ್ರ) ಖರ್ಜೂರದ ಹಳೆಯ ಒಣ ಗೆಲ್ಲಿನಂತಾಗಿ ಬಿಡುತ್ತದೆ.
36:40
لَا الشَّمْسُ يَنْبَغِي لَهَا أَنْ تُدْرِكَ الْقَمَرَ وَلَا اللَّيْلُ سَابِقُ النَّهَارِ ۚ وَكُلٌّ فِي فَلَكٍ يَسْبَحُونَ ۞
ಚಂದ್ರನನ್ನು ಹಿಡಿಯಲು ಸೂರ್ಯನಿಗೆ ಸಾಧ್ಯವಿಲ್ಲ, ಹಗಲನ್ನು ಮೀರಿ ಬರಲು ರಾತ್ರಿಗೂ ಸಾಧ್ಯವಿಲ್ಲ. ಎಲ್ಲವೂ ಒಂದು ಕಕ್ಷೆಯಲ್ಲಿ ತೇಲುತ್ತಿವೆ.
36:41
وَآيَةٌ لَهُمْ أَنَّا حَمَلْنَا ذُرِّيَّتَهُمْ فِي الْفُلْكِ الْمَشْحُونِ ۞
ನಾವು ಅವರ ಸಂತತಿಯನ್ನು ತುಂಬಿದ ಹಡಗಿಗೆ ಹತ್ತಿಸಿದ್ದು, ಅವರ ಪಾಲಿಗೆ ಪುರಾವೆಯಾಗಿದೆ.
36:42
وَخَلَقْنَا لَهُمْ مِنْ مِثْلِهِ مَا يَرْكَبُونَ ۞
ಮತ್ತು ನಾವು ಅವರಿಗಾಗಿ, ಅಂತಹದೇ ಇತರ ವಸ್ತುಗಳನ್ನೂ ಸೃಷ್ಟಿಸಿರುವೆವು - ಅವುಗಳನ್ನು ಅವರು ಸವಾರಿಗಾಗಿ ಬಳಸುತ್ತಾರೆ.
36:43
وَإِنْ نَشَأْ نُغْرِقْهُمْ فَلَا صَرِيخَ لَهُمْ وَلَا هُمْ يُنْقَذُونَ ۞
ನಾವು ಬಯಸಿದ್ದರೆ ಅವರನ್ನು ಮುಳುಗಿಸಿ ಬಿಡಬಹುದು. ಆಗ ಅವರ ಮೊರೆ ಕೇಳುವವರು ಯಾರೂ ಇರಲಾರರು ಮತ್ತು ಅವರು ರಕ್ಷಣೆ ಪಡೆಯಲಾರರು.
36:44
إِلَّا رَحْمَةً مِنَّا وَمَتَاعًا إِلَىٰ حِينٍ ۞
ಆದರೆ, ಕೇವಲ ಒಂದು ನಿರ್ದಿಷ್ಟ ಕಾಲದವರೆಗೆ ಅವರು ನಮ್ಮ ಅನುಗ್ರಹದ ಫಲಾನುಭವಿಗಳಾಗಿರುತ್ತಾರೆ.
36:45
وَإِذَا قِيلَ لَهُمُ اتَّقُوا مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ ۞
ನೀವು (ಅಲ್ಲಾಹನ) ಕೃಪೆಗೆ ಪಾತ್ರರಾಗಲು, ನಿಮ್ಮ ಮುಂದಿನ ಹಾಗೂ ನಿಮ್ಮ ಹಿಂದಿನ (ಕರ್ಮಗಳ) ಕುರಿತು ಎಚ್ಚರವಾಗಿರಿ ಎಂದು ಅವರೊಡನೆ ಹೇಳಿದಾಗಲೆಲ್ಲಾ,
36:46
وَمَا تَأْتِيهِمْ مِنْ آيَةٍ مِنْ آيَاتِ رَبِّهِمْ إِلَّا كَانُوا عَنْهَا مُعْرِضِينَ ۞
ಮತ್ತು ತಮ್ಮ ಒಡೆಯನ ಪುರಾವೆಗಳ ಪೈಕಿ ಯಾವುದೇ ಪುರಾವೆ ಅವರ ಬಳಿಗೆ ಬಂದಾಗಲೆಲ್ಲಾ, ಅವರು ಅದನ್ನು ಕಡೆಗಣಿಸಿದ್ದಾರೆ.
36:47
وَإِذَا قِيلَ لَهُمْ أَنْفِقُوا مِمَّا رَزَقَكُمُ اللَّهُ قَالَ الَّذِينَ كَفَرُوا لِلَّذِينَ آمَنُوا أَنُطْعِمُ مَنْ لَوْ يَشَاءُ اللَّهُ أَطْعَمَهُ إِنْ أَنْتُمْ إِلَّا فِي ضَلَالٍ مُبِينٍ ۞
ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ, (ಸತ್ಕಾರ್ಯಕ್ಕೆ) ಖರ್ಚು ಮಾಡಿರಿ ಎಂದು ತಮ್ಮೊಡನೆ ಹೇಳಿದಾಗಲೆಲ್ಲಾ (ಅವರು ಕಡೆಗಣಿಸಿದ್ದಾರೆ). ಧಿಕ್ಕಾರಿಗಳು, ವಿಶ್ವಾಸಿಗಳೊಡನೆ ಹೇಳುತ್ತಾರೆ : ಅಲ್ಲಾಹನು ಇಚ್ಛಿಸಿದ್ದರೆ ಸ್ವತಃ ಅವನೇ ಯಾರಿಗೆ ಉಣಿಸಿ ಬಿಡುತ್ತಿದ್ದನೋ, ಅಂಥವನಿಗೇನು ನಾವು ಉಣಿಸಬೇಕೇ? ನೀವಂತು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದೀರಿ.
36:48
وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ ۞
ಮತ್ತು ಅವರು, ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನ (ಪುನರುತ್ಥಾನ) ಈಡೇರುವುದು ಯಾವಾಗ (ಎಂಬುದನ್ನು ತಿಳಿಸಿ)? ಎಂದು ಕೇಳುತ್ತಾರೆ.
36:49
مَا يَنْظُرُونَ إِلَّا صَيْحَةً وَاحِدَةً تَأْخُذُهُمْ وَهُمْ يَخِصِّمُونَ ۞
ನಿಜವಾಗಿ ಅವರು ಯಾವುದಕ್ಕಾಗಿ ಕಾಯುತ್ತಿರುವರೋ ಅದು ಹಠಾತ್ತನೆ ಬಂದೆರಗುವ ಒಂದು ಭಯಾನಕ ಶಬ್ದ ಮಾತ್ರವಾಗಿರುವುದು - ಅವರು ಜಗಳಾಡುತ್ತಿರುವಾಗಲೇ ಅದು ಅವರನ್ನು ಹಿಡಿದುಕೊಳ್ಳುವುದು.
36:50
فَلَا يَسْتَطِيعُونَ تَوْصِيَةً وَلَا إِلَىٰ أَهْلِهِمْ يَرْجِعُونَ ۞
ಉಯಿಲನ್ನು ಉಪದೇಶಿಸಲಿಕ್ಕಾಗಲಿ, ತಮ್ಮ ಮನೆಯವರ ಬಳಿಗೆ ಮರಳಿ ಹೋಗಲಿಕ್ಕಾಗಲಿ ಅವರಿಗೆ ಸಾಧ್ಯವಾಗದು.
36:51
وَنُفِخَ فِي الصُّورِ فَإِذَا هُمْ مِنَ الْأَجْدَاثِ إِلَىٰ رَبِّهِمْ يَنْسِلُونَ ۞
ಮತ್ತು (ಇನ್ನೊಮ್ಮೆ ) ಕಹಳೆಯನ್ನು ಊದಲಾದಾಗ ಅವರೆಲ್ಲರೂ ಗೋರಿಗಳಿಂದ ಹಠಾತ್ತನೆ ಎದ್ದು ತಮ್ಮ ಒಡೆಯನೆಡೆಗೆ ಧಾವಿಸುವರು.
36:52
قَالُوا يَا وَيْلَنَا مَنْ بَعَثَنَا مِنْ مَرْقَدِنَا ۜ ۗ هَٰذَا مَا وَعَدَ الرَّحْمَٰنُ وَصَدَقَ الْمُرْسَلُونَ ۞
ಅವರು ಹೇಳುವರು: ಅಯ್ಯೋ ನಮ್ಮ ದುಸ್ಥಿತಿ! ನಮ್ಮನ್ನು ನಮ್ಮ ಗೋರಿಗಳಿಂದ ಎಬ್ಬಿಸಿದವರು ಯಾರು? ನಿಜವಾಗಿ, ಆ ಪರಮ ದಯಾಮಯನು ವಾಗ್ದಾನ ಮಾಡಿದ್ದು ಇದನ್ನೇ. ದೂತರು ಸತ್ಯವನ್ನೇ ಹೇಳಿದ್ದರು.
36:53
إِنْ كَانَتْ إِلَّا صَيْحَةً وَاحِدَةً فَإِذَا هُمْ جَمِيعٌ لَدَيْنَا مُحْضَرُونَ ۞
ಅದು ಕೇವಲ ಒಂದು ಭಯಾನಕ ಶಬ್ದವಾಗಿರುವುದು. ಅಷ್ಟರಲ್ಲೇ ಅವರೆಲ್ಲರನ್ನೂ ನಮ್ಮ ಮುಂದೆ ಹಾಜರು ಪಡಿಸಲಾಗುವುದು.
36:54
فَالْيَوْمَ لَا تُظْلَمُ نَفْسٌ شَيْئًا وَلَا تُجْزَوْنَ إِلَّا مَا كُنْتُمْ تَعْمَلُونَ ۞
ಇಂದು ಯಾರ ಮೇಲೂ ಕಿಂಚಿತ್ತೂ ಅನ್ಯಾಯವಾಗದು ಮತ್ತು ನಿಮಗೆ, ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲದ ಹೊರತು ಬೇರೇನೂ ಸಿಗದು.
36:55
إِنَّ أَصْحَابَ الْجَنَّةِ الْيَوْمَ فِي شُغُلٍ فَاكِهُونَ ۞
ಸ್ವರ್ಗವಾಸಿಗಳು ಅಂದು ಖಂಡಿತ ಮೋಜಿನಲ್ಲಿ ನಿರತರಾಗಿರುವರು.
36:56
هُمْ وَأَزْوَاجُهُمْ فِي ظِلَالٍ عَلَى الْأَرَائِكِ مُتَّكِئُونَ ۞
ಅವರು ಮತ್ತವರ ಜೀವನ ಸಂಗಾತಿಗಳು ನೆರಳುಗಳಲ್ಲಿ ಸುಖವಾಗಿ ಒರಗಿ ಕೊಂಡಿರುವರು.
36:57
لَهُمْ فِيهَا فَاكِهَةٌ وَلَهُمْ مَا يَدَّعُونَ ۞
ಅಲ್ಲಿ ಅವರಿಗಾಗಿ ವಿವಿಧ ಬಗೆಯ ಹಣ್ಣು ಹಂಪಲುಗಳಿರುವವು ಮತ್ತು ಅವರು ಅಪೇಕ್ಷಿಸಿದ್ದೆಲ್ಲವೂ ಅವರಿಗೆ ಸಿಗುವುದು.
36:58
سَلَامٌ قَوْلًا مِنْ رَبٍّ رَحِيمٍ ۞
ಸಲಾಮ್ (ಶಾಂತಿ) ಎಂಬ, ಕರುಣಾಳು ಒಡೆಯನ ಮಾತು (ಅಲ್ಲಿ ಮೊಳಗುತ್ತಿರುವುದು).
36:59
وَامْتَازُوا الْيَوْمَ أَيُّهَا الْمُجْرِمُونَ ۞
ಅಪರಾಧಿಗಳೇ, ಇಂದು ನೀವು ಪ್ರತ್ಯೇಕವಾಗಿರಿ.
36:60
۞ أَلَمْ أَعْهَدْ إِلَيْكُمْ يَا بَنِي آدَمَ أَنْ لَا تَعْبُدُوا الشَّيْطَانَ ۖ إِنَّهُ لَكُمْ عَدُوٌّ مُبِينٌ ۞
ಆದಮರ ಸಂತತಿಗಳೇ, ನಾನು ನಿಮಗೆ ಆದೇಶಿಸಿರಲಿಲ್ಲವೇ, ನೀವು ಶೈತಾನನ ಆರಾಧಕರಾಗಬೇಡಿ, ಅವನು ಖಂಡಿತ ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆಂದು?
36:61
وَأَنِ اعْبُدُونِي ۚ هَٰذَا صِرَاطٌ مُسْتَقِيمٌ ۞
ಮತ್ತು ನೀವು ನನ್ನೊಬ್ಬನನ್ನೇ ಆರಾಧಿಸಬೇಕು, ಅದುವೇ ನೇರ ಮಾರ್ಗವೆಂದು?
36:62
وَلَقَدْ أَضَلَّ مِنْكُمْ جِبِلًّا كَثِيرًا ۖ أَفَلَمْ تَكُونُوا تَعْقِلُونَ ۞
ಅವನು ನಿಮ್ಮಲ್ಲಿ ಬಹು ಮಂದಿಯನ್ನು ದಾರಿಗೆಡಿಸಿದ್ದಾನೆ. ನೀವೇನು ಬುದ್ಧಿಯನ್ನು ಬಳಸಿರಲಿಲ್ಲವೇ?
36:63
هَٰذِهِ جَهَنَّمُ الَّتِي كُنْتُمْ تُوعَدُونَ ۞
ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ನರಕ.
36:64
اصْلَوْهَا الْيَوْمَ بِمَا كُنْتُمْ تَكْفُرُونَ ۞
ನೀವು (ಸತ್ಯವನ್ನು) ಧಿಕ್ಕರಿಸಿದ್ದರ ಪ್ರತಿಫಲವಾಗಿ ಇಂದು ಇದರೊಳಗೆ ಪ್ರವೇಶಿಸಿರಿ.
36:65
الْيَوْمَ نَخْتِمُ عَلَىٰ أَفْوَاهِهِمْ وَتُكَلِّمُنَا أَيْدِيهِمْ وَتَشْهَدُ أَرْجُلُهُمْ بِمَا كَانُوا يَكْسِبُونَ ۞
ಇಂದು ನಾವು ಅವರ (ಧಿಕ್ಕಾರಿಗಳ) ಬಾಯಿಗಳಿಗೆ ಮುದ್ರೆ ಜಡಿದಿರುವೆವು. ನಮ್ಮೊಡನೆ ಅವರ ಕೈಗಳು ಮಾತನಾಡುವವು ಮತ್ತು ಅವರು ಏನೆಲ್ಲಾ ಮಾಡಿದ್ದರೆಂದು ಅವರ ಕಾಲುಗಳು ಸಾಕ್ಷಿ ಹೇಳುವವು.
36:66
وَلَوْ نَشَاءُ لَطَمَسْنَا عَلَىٰ أَعْيُنِهِمْ فَاسْتَبَقُوا الصِّرَاطَ فَأَنَّىٰ يُبْصِرُونَ ۞
ನಾವು ಬಯಸಿದರೆ ಅವರ ಕಣ್ಣುಗಳನ್ನು ನುಚ್ಚು ನೂರುಗೊಳಿಸಿ ಬಿಡಬಲ್ಲೆವು. ಆ ಬಳಿಕ ಅವರು ದಾರಿಯೆಡೆಗೆ ಧಾವಿಸಲಿ. ಅವರು ಏನನ್ನು ತಾನೇ ಕಾಣಬಲ್ಲರು?
36:67
وَلَوْ نَشَاءُ لَمَسَخْنَاهُمْ عَلَىٰ مَكَانَتِهِمْ فَمَا اسْتَطَاعُوا مُضِيًّا وَلَا يَرْجِعُونَ ۞
ನಾವು ಬಯಸಿದರೆ, ಅವರು ಇರುವಲ್ಲೇ ಅವರ ರೂಪಗಳನ್ನು ವಿಕೃತಗೊಳಿಸಿ ಬಿಡಬಲ್ಲೆವು - ಆ ಬಳಿಕ ಅವರಿಗೆ ಮುಂದೆ ಹೋಗಲಿಕ್ಕೂ ಸಾಧ್ಯವಾಗದು, ಮರಳಲಿಕ್ಕೂ ಆಗದು.
36:68
وَمَنْ نُعَمِّرْهُ نُنَكِّسْهُ فِي الْخَلْقِ ۖ أَفَلَا يَعْقِلُونَ ۞
ನಾವು ಯಾರಿಗೆ ಧೀರ್ಘ ಆಯುಷ್ಯವನ್ನು ಕೊಡುತ್ತೇವೋ, ಅವರನ್ನು ರಚನೆಯಲ್ಲಿ (ದುರ್ಬಲ ಸ್ಥಿತಿಗೆ) ಮರಳಿಸಿ ಬಿಡುತ್ತೇವೆ. ಅವರೇನು ಬುದ್ದಿಯನ್ನು ಬಳಸುವುದಿಲ್ಲವೇ?
36:69
وَمَا عَلَّمْنَاهُ الشِّعْرَ وَمَا يَنْبَغِي لَهُ ۚ إِنْ هُوَ إِلَّا ذِكْرٌ وَقُرْآنٌ مُبِينٌ ۞
ನಾವು ಅವರಿಗೆ (ದೂತರಿಗೆ) ಕಾವ್ಯವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶವಾಗಿದೆ ಮತ್ತು ಸ್ಪಷ್ಟವಾದ ಕುರ್‌ಆನ್ ಆಗಿದೆ.
36:70
لِيُنْذِرَ مَنْ كَانَ حَيًّا وَيَحِقَّ الْقَوْلُ عَلَى الْكَافِرِينَ ۞
ಜೀವಂತವಿರುವ ಎಲ್ಲರನ್ನೂ ಅವರು (ದೂತರು) ಎಚ್ಚರಿಸಬೇಕೆಂದು ಹಾಗೂ ಧಿಕ್ಕಾರಿಗಳ ವಿರುದ್ಧ ಸಾಕ್ಷ್ಯವು ಪೂರ್ತಿಯಾಗಲೆಂದು (ನಾವು ಇದನ್ನು ಕಳಿಸಿರುವೆವು).
36:71
أَوَلَمْ يَرَوْا أَنَّا خَلَقْنَا لَهُمْ مِمَّا عَمِلَتْ أَيْدِينَا أَنْعَامًا فَهُمْ لَهَا مَالِكُونَ ۞
ಅವರು ನೋಡುತ್ತಿಲ್ಲವೇ, ಅವರು ಮಾಲಕರಾಗಿರುವ ಜಾನುವಾರುಗಳನ್ನು ನಾವು ಅವರಿಗಾಗಿ ನಮ್ಮ ಕೈಯಾರೆ ಸೃಷ್ಟಿಸಿರುವೆವು.
36:72
وَذَلَّلْنَاهَا لَهُمْ فَمِنْهَا رَكُوبُهُمْ وَمِنْهَا يَأْكُلُونَ ۞
ನಾವು ಅವುಗಳನ್ನು ಅವರಿಗೆ ವಿಧೇಯಗೊಳಿಸಿರುವೆವು. ಅವರು ಆ ಪೈಕಿ ಕೆಲವನ್ನು ಸವಾರಿಗಾಗಿ ಬಳಸಿದರೆ, ಕೆಲವನ್ನು ಆಹಾರವಾಗಿ ಬಳಸುತ್ತಾರೆ.
36:73
وَلَهُمْ فِيهَا مَنَافِعُ وَمَشَارِبُ ۖ أَفَلَا يَشْكُرُونَ ۞
ಅವುಗಳಲ್ಲಿ ಅವರಿಗೆ ಹಲವು ಲಾಭಗಳಿವೆ, ಕುಡಿಯುವ ವಸ್ತುಗಳೂ ಇವೆ. ಇಷ್ಟಿದ್ದೂ ಅವರು ಕೃತಜ್ಞತೆ ತೋರುವುದಿಲ್ಲವೇ?
36:74
وَاتَّخَذُوا مِنْ دُونِ اللَّهِ آلِهَةً لَعَلَّهُمْ يُنْصَرُونَ ۞
ಅವರು ಅಲ್ಲಾಹನ ಹೊರತು ಇತರರಿಂದ ತಮಗೆ ನೆರವು ದೊರಕೀತೆಂದು ಅವರನ್ನು ತಮ್ಮ ದೇವರಾಗಿಸಿಕೊಂಡಿದ್ದಾರೆ.
36:75
لَا يَسْتَطِيعُونَ نَصْرَهُمْ وَهُمْ لَهُمْ جُنْدٌ مُحْضَرُونَ ۞
ಅವರು ಇವರಿಗೆ ನೆರವಾಗಲು ಶಕ್ತರಲ್ಲ. ಆದರೂ, ಇವರು ಅವರ ಮುಂದೆ ದಂಡುಗಳಂತೆ ಹಾಜರಾಗುತ್ತಾರೆ.
36:76
فَلَا يَحْزُنْكَ قَوْلُهُمْ ۘ إِنَّا نَعْلَمُ مَا يُسِرُّونَ وَمَا يُعْلِنُونَ ۞
(ದೂತರೇ,) ಅವರ ಮಾತುಗಳಿಂದ ನೀವು ದುಃಖಿತರಾಗಬೇಡಿ. ಅವರು ಬಚ್ಚಿಡುವ ಹಾಗೂ ಪ್ರಕಟ ಪಡಿಸುವ ಎಲ್ಲವನ್ನೂ ನಾವು ಬಲ್ಲೆವು.
36:77
أَوَلَمْ يَرَ الْإِنْسَانُ أَنَّا خَلَقْنَاهُ مِنْ نُطْفَةٍ فَإِذَا هُوَ خَصِيمٌ مُبِينٌ ۞
ಮನುಷ್ಯನು ಕಂಡಿಲ್ಲವೇ, ನಾವು ಅವನನ್ನು ವೀರ್ಯದಿಂದ ಸೃಷ್ಟಿಸಿರುವುದನ್ನು? ಇಷ್ಟಾಗಿಯೂ ಅವನು ಸ್ಪಷ್ಟ ಜಗಳಗಂಟನಾಗಿ ಬಿಟ್ಟಿರುವನು.
36:78
وَضَرَبَ لَنَا مَثَلًا وَنَسِيَ خَلْقَهُ ۖ قَالَ مَنْ يُحْيِي الْعِظَامَ وَهِيَ رَمِيمٌ ۞
ಅವನು ನಮ್ಮ ಕುರಿತು (ಏನೇನೋ) ಹೋಲಿಕೆಗಳನ್ನು ಕಟ್ಟುತ್ತಾನೆ. ನಿಜವಾಗಿ ಅವನು ತನ್ನ ಜನನವನ್ನು ಮರೆತಿದ್ದಾನೆ. ಎಲುಬುಗಳು ಕರಗಿ ಹೋದ ಬಳಿಕ ಅವುಗಳನ್ನು ಯಾರು ತಾನೆ ಜೀವಂತಗೊಳಿಸಬಲ್ಲರು? ಎಂದು ಅವನು ಪ್ರಶ್ನಿಸುತ್ತಾನೆ.
36:79
قُلْ يُحْيِيهَا الَّذِي أَنْشَأَهَا أَوَّلَ مَرَّةٍ ۖ وَهُوَ بِكُلِّ خَلْقٍ عَلِيمٌ ۞
ಹೇಳಿರಿ; ಅವುಗಳನ್ನು ಮೊದಲ ಬಾರಿ ಸೃಷ್ಟಿಸಿದವನೇ ಅವುಗಳನ್ನು ಮತ್ತೆ ಜೀವಂತಗೊಳಿಸುವನು. ಅವನು ಎಲ್ಲ ಬಗೆಯ ಸೃಷ್ಟಿ ಕಾರ್ಯವನ್ನು ಬಲ್ಲವನಾಗಿದ್ದಾನೆ.
36:80
الَّذِي جَعَلَ لَكُمْ مِنَ الشَّجَرِ الْأَخْضَرِ نَارًا فَإِذَا أَنْتُمْ مِنْهُ تُوقِدُونَ ۞
ಅವನೇ, ನಿಮಗಾಗಿ ಹಸಿರು ಮರದಿಂದ ಬೆಂಕಿಯನ್ನು ಉತ್ಪಾದಿಸಿದವನು, ನೀವೀಗ ಅದರಿಂದಲೇ ಬೆಂಕಿಯನ್ನು ಉರಿಸುತ್ತೀರಿ.
36:81
أَوَلَيْسَ الَّذِي خَلَقَ السَّمَاوَاتِ وَالْأَرْضَ بِقَادِرٍ عَلَىٰ أَنْ يَخْلُقَ مِثْلَهُمْ ۚ بَلَىٰ وَهُوَ الْخَلَّاقُ الْعَلِيمُ ۞
ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಇವರಂಥವರನ್ನು ಸೃಷ್ಟಿಸಲು ಅಸಮರ್ಥನೇ? ಖಂಡಿತ ಅಲ್ಲ. ಅವನಂತು, ಎಲ್ಲವನ್ನೂ ಬಲ್ಲ, ತಜ್ಞ ಸೃಷ್ಟಿಕರ್ತನಾಗಿದ್ದಾನೆ.
36:82
إِنَّمَا أَمْرُهُ إِذَا أَرَادَ شَيْئًا أَنْ يَقُولَ لَهُ كُنْ فَيَكُونُ ۞
ಅವನು ಏನನ್ನಾದರೂ ಮಾಡಲು ಇಚ್ಛಿಸಿದಾಗ, ಅದಕ್ಕೆ ‘ಆಗು’ ಎಂದಷ್ಟೆ ಹೇಳುತ್ತಾನೆ ಮತ್ತು ಅಷ್ಟರಲ್ಲೇ ಅದು ಆಗಿ ಬಿಟ್ಟಿರುತ್ತದೆ.
36:83
فَسُبْحَانَ الَّذِي بِيَدِهِ مَلَكُوتُ كُلِّ شَيْءٍ وَإِلَيْهِ تُرْجَعُونَ ۞
ಅವನು ಪಾವನನು, ಎಲ್ಲ ವಸ್ತುಗಳ ಪರಮಾಧಿಕಾರವು ಅವನ ಕೈಯಲ್ಲಿದೆ. (ಕೊನೆಗೆ) ನಿಮ್ಮೆಲ್ಲರನ್ನೂ ಅವನೆಡೆಗೇ ಮರಳಿಸಲಾಗುವುದು.