Nuh (Noah)
71. ನೂಹ್(ನೂಹ್)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
71:1
إِنَّا أَرْسَلْنَا نُوحًا إِلَىٰ قَوْمِهِ أَنْ أَنْذِرْ قَوْمَكَ مِنْ قَبْلِ أَنْ يَأْتِيَهُمْ عَذَابٌ أَلِيمٌ
۞
‘‘ನಿಮ್ಮ ಜನಾಂಗದವರ ಮೇಲೆ ಕಠಿಣ ಶಿಕ್ಷೆಯು ಬಂದೆರಗುವ ಮುನ್ನ ಅವರನ್ನು ಎಚ್ಚರಿಸಿರಿ’’ ಎನ್ನುತ್ತಾ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು.
71:2
قَالَ يَا قَوْمِ إِنِّي لَكُمْ نَذِيرٌ مُبِينٌ
۞
ಅವರು (ನೂಹ್) ಹೇಳಿದರು; ‘‘ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.’’
71:3
أَنِ اعْبُدُوا اللَّهَ وَاتَّقُوهُ وَأَطِيعُونِ
۞
‘‘ನೀವು ಅಲ್ಲಾಹನನ್ನು ಆರಾಧಿಸಿರಿ, ಅವನಿಗೆ ಅಂಜಿರಿ ಮತ್ತು ನನ್ನ ಆದೇಶ ಪಾಲಿಸಿರಿ.’’
71:4
يَغْفِرْ لَكُمْ مِنْ ذُنُوبِكُمْ وَيُؤَخِّرْكُمْ إِلَىٰ أَجَلٍ مُسَمًّى ۚ إِنَّ أَجَلَ اللَّهِ إِذَا جَاءَ لَا يُؤَخَّرُ ۖ لَوْ كُنْتُمْ تَعْلَمُونَ
۞
‘‘ಅವನು (ಅಲ್ಲಾಹನು) ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನು ನಿಶ್ಚಯಿಸಿರುವ ಸಮಯ ಬಂದು ಬಿಟ್ಟರೆ ಅದನ್ನು ನಿವಾರಿಸಲಾಗುವುದಿಲ್ಲ. ನೀವು ಇದನ್ನು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು!
71:5
قَالَ رَبِّ إِنِّي دَعَوْتُ قَوْمِي لَيْلًا وَنَهَارًا
۞
ಅವರು (ನೂಹ್) ಹೇಳಿದರು; ‘‘ನನ್ನೊಡೆಯಾ, ನಾನು ಹಗಳಿರುಳೂ ನನ್ನ ಜನಾಂಗದವರನ್ನು (ಸತ್ಯದೆಡೆಗೆ) ಕರೆದಿದ್ದೇನೆ.’’
71:6
فَلَمْ يَزِدْهُمْ دُعَائِي إِلَّا فِرَارًا
۞
‘‘ಆದರೆ ನನ್ನ ಕರೆಯು (ಸತ್ಯದಿಂದ) ಅವರ ಪಲಾಯನವನ್ನಷ್ಟೇ ಹೆಚ್ಚಿಸಿದೆ.’’
71:7
وَإِنِّي كُلَّمَا دَعَوْتُهُمْ لِتَغْفِرَ لَهُمْ جَعَلُوا أَصَابِعَهُمْ فِي آذَانِهِمْ وَاسْتَغْشَوْا ثِيَابَهُمْ وَأَصَرُّوا وَاسْتَكْبَرُوا اسْتِكْبَارًا
۞
‘‘ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಆಮಂತ್ರಿಸಿದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತುರುಕಿ ಕೊಂಡರು ಹಾಗೂ ತಮ್ಮ ವಸ್ತ್ರಗಳನ್ನು ತಮ್ಮ ಮೇಲೆ ಎಳೆದು ಕೊಂಡರು ಮತ್ತು ಅವರು ಉದ್ಧಟತನ ತೋರಿದರು ಹಾಗೂ ಭಾರೀ ಅಹಂಕಾರ ಪ್ರದರ್ಶಿಸಿದರು.’’
71:8
ثُمَّ إِنِّي دَعَوْتُهُمْ جِهَارًا
۞
‘‘ನಾನು ಅವರನ್ನು ಕೂಗಿ ಕರೆದೆನು.’’
71:9
ثُمَّ إِنِّي أَعْلَنْتُ لَهُمْ وَأَسْرَرْتُ لَهُمْ إِسْرَارًا
۞
‘‘ಬಹಿರಂಗವಾಗಿಯೂ ಗುಪ್ತವಾಗಿಯೂ ನಾನು ಅವರಿಗೆ ಉಪದೇಶಿಸಿದೆನು.’’
71:10
فَقُلْتُ اسْتَغْفِرُوا رَبَّكُمْ إِنَّهُ كَانَ غَفَّارًا
۞
‘‘ನಾನು ಅವರೊಡನೆ ಹೇಳಿದೆನು; ನೀವು ನಿಮ್ಮ ಒಡೆಯನ ಬಳಿ ಕ್ಷಮೆ ಕೇಳಿರಿ. ಅವನು ಖಂಡಿತ ಕ್ಷಮಿಸುವವನಾಗಿದ್ದಾನೆ.’’
71:11
يُرْسِلِ السَّمَاءَ عَلَيْكُمْ مِدْرَارًا
۞
‘‘ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಳ ಮಳೆಯನ್ನು ಸುರಿಸುವನು.’’
71:12
وَيُمْدِدْكُمْ بِأَمْوَالٍ وَبَنِينَ وَيَجْعَلْ لَكُمْ جَنَّاتٍ وَيَجْعَلْ لَكُمْ أَنْهَارًا
۞
‘‘ಸಂಪತ್ತು ಹಾಗೂ ಸಂತತಿಗಳ ಮೂಲಕ ಅವನು ನಿಮಗೆ ನೆರವಾಗುವನು ಮತ್ತು ನಿಮಗಾಗಿ ತೋಟಗಳನ್ನು ರಚಿಸುವನು ಹಾಗೂ ನಿಮಗಾಗಿ ನದಿಗಳನ್ನೂ ಹರಿಸುವನು.’’
71:13
مَا لَكُمْ لَا تَرْجُونَ لِلَّهِ وَقَارًا
۞
‘‘ನಿಮಗೇನಾಗಿದೆ? ನೀವು ಅಲ್ಲಾಹನಿಂದ ಯಾವುದೇ ಗೌರವವನ್ನೇಕೆ ನಿರೀಕ್ಷಿಸುವುದಿಲ್ಲ?’’
71:14
وَقَدْ خَلَقَكُمْ أَطْوَارًا
۞
‘‘ಅವನು ವಿವಿಧ ಹಂತಗಳಲ್ಲಿ ನಿಮ್ಮನ್ನು ಸೃಷ್ಟಿಸಿರುವನು.’’
71:15
أَلَمْ تَرَوْا كَيْفَ خَلَقَ اللَّهُ سَبْعَ سَمَاوَاتٍ طِبَاقًا
۞
‘‘ನೀವು ನೋಡಿಲ್ಲವೇ, ಅಲ್ಲಾಹನು ಯಾವ ರೀತಿ ಕ್ರಮಬದ್ಧವಾಗಿ ಏಳು ಆಕಾಶಗಳನ್ನು ಸೃಷ್ಟಿಸಿರುವನೆಂದು?’’
71:16
وَجَعَلَ الْقَمَرَ فِيهِنَّ نُورًا وَجَعَلَ الشَّمْسَ سِرَاجًا
۞
‘‘ಮತ್ತು ಯಾವ ರೀತಿ ಅವನು ಅವುಗಳಲ್ಲಿ ಬೆಳಕಾಗಿ ಚಂದ್ರನನ್ನು ಹಾಗೂ ದೀಪವಾಗಿ ಸೂರ್ಯನನ್ನು ನಿರ್ಮಿಸಿರುವನೆಂದು?’’
71:17
وَاللَّهُ أَنْبَتَكُمْ مِنَ الْأَرْضِ نَبَاتًا
۞
‘‘ಅಲ್ಲಾಹನೇ ನಿಮ್ಮನ್ನು ಭೂಮಿಯಿಂದ ಬೆಳೆಯಂತೆ ಬೆಳೆಸಿದನು.’’
71:18
ثُمَّ يُعِيدُكُمْ فِيهَا وَيُخْرِجُكُمْ إِخْرَاجًا
۞
‘‘ಅವನು ಮತ್ತೆ ನಿಮ್ಮನ್ನು ಅದರೊಳಕ್ಕೆ ಮರಳಿಸುವನು ಮತ್ತು ಅದರಿಂದಲೇ ನಿಮ್ಮನ್ನು ಹೊರ ತೆಗೆಯುವನು.’’
71:19
وَاللَّهُ جَعَلَ لَكُمُ الْأَرْضَ بِسَاطًا
۞
‘‘ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸಿನಂತಾಗಿಸಿರುವನು’’,
71:20
لِتَسْلُكُوا مِنْهَا سُبُلًا فِجَاجًا
۞
‘‘- ನೀವು ಅದರಲ್ಲಿನ ವಿಶಾಲ ದಾರಿಗಳಲ್ಲಿ ಸಂಚರಿಸುವಂತಾಗಲು.’’
71:21
قَالَ نُوحٌ رَبِّ إِنَّهُمْ عَصَوْنِي وَاتَّبَعُوا مَنْ لَمْ يَزِدْهُ مَالُهُ وَوَلَدُهُ إِلَّا خَسَارًا
۞
ನೂಹರು ಹೇಳಿದರು; ‘‘ನನ್ನೊಡೆಯಾ, ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಯಾರಿಗೆ ತಮ್ಮ ಸಂಪತ್ತು ಮತ್ತು ಸಂತಾನಗಳಿಂದ ನಷ್ಟ ಮಾತ್ರ ಆಗಿದೆಯೋ, ಅಂಥವರನ್ನು ಅವರು ಅನುಸರಿಸುತ್ತಿದ್ದಾರೆ.’’
71:22
وَمَكَرُوا مَكْرًا كُبَّارًا
۞
‘‘ಅವರು ಭಾರೀ ಸಂಚುಗಳನ್ನು ಹೂಡಿದ್ದಾರೆ.’’
71:23
وَقَالُوا لَا تَذَرُنَّ آلِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا
۞
‘‘ಮತ್ತು ಅವರು - ನಿಮ್ಮ ದೇವರುಗಳನ್ನು ಖಂಡಿತ ಕೈ ಬಿಡಬೇಡಿ. ವದ್ದ್ ಅನ್ನಾಗಲೀ ಸುವಾಅ್ ಅನ್ನಾಗಲೀ ಯಗೂಸ್, ಯಊಕ್ ಮತ್ತು ನಸ್ರ್‌ರನ್ನಾಗಲೀ ಕೈ ಬಿಡಬೇಡಿ - ಎನ್ನುತ್ತಿದ್ದಾರೆ.’’
71:24
وَقَدْ أَضَلُّوا كَثِيرًا ۖ وَلَا تَزِدِ الظَّالِمِينَ إِلَّا ضَلَالًا
۞
‘‘ನನ್ನೊಡೆಯಾ, ಅವರು ಅನೇಕರನ್ನು ದಾರಿಗೆಡಿಸಿರುವರು. ನೀನು ಈ ಆಕ್ರಮಿಗಳನ್ನು ಮತ್ತಷ್ಟು ದಿಕ್ಕುಗೆಡಿಸಿ ಬಿಡು.’’
71:25
مِمَّا خَطِيئَاتِهِمْ أُغْرِقُوا فَأُدْخِلُوا نَارًا فَلَمْ يَجِدُوا لَهُمْ مِنْ دُونِ اللَّهِ أَنْصَارًا
۞
ಕೊನೆಗೆ, ಅವರ ಅಪರಾಧಗಳ ಕಾರಣ, ಅವರನ್ನು ನೀರಲ್ಲಿ ಮುಳುಗಿಸಲಾಯಿತು ಮತ್ತು ಬೆಂಕಿಯೊಳಗೆ ಎಸೆಯಲಾಯಿತು. ಆಗ ಅಲ್ಲಾಹನ ಹೊರತು ಅವರಿಗೆ ಯಾವ ಸಹಾಯಕರೂ ಸಿಗಲಿಲ್ಲ.
71:26
وَقَالَ نُوحٌ رَبِّ لَا تَذَرْ عَلَى الْأَرْضِ مِنَ الْكَافِرِينَ دَيَّارًا
۞
ಮತ್ತು ನೂಹರು ಹೇಳಿದರು; ‘‘ನನ್ನೊಡೆಯಾ, ಧಿಕ್ಕಾರಿಗಳ ಪೈಕಿ ಒಬ್ಬನನ್ನೂ ಭೂಮಿಯಲ್ಲಿ ಜೀವಂತ ಬಿಟ್ಟು ಬಿಡಬೇಡ.’’
71:27
إِنَّكَ إِنْ تَذَرْهُمْ يُضِلُّوا عِبَادَكَ وَلَا يَلِدُوا إِلَّا فَاجِرًا كَفَّارًا
۞
‘‘ನೀನು ಅವರನ್ನು ಬಿಟ್ಟು ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮತ್ತು ಅವರ ಸಂತತಿಗಳೂ ಕೇವಲ ದುಷ್ಟರೂ ಕೃತಘ್ನರೂ ಆಗಿರುವರು.’’
71:28
رَبِّ اغْفِرْ لِي وَلِوَالِدَيَّ وَلِمَنْ دَخَلَ بَيْتِيَ مُؤْمِنًا وَلِلْمُؤْمِنِينَ وَالْمُؤْمِنَاتِ وَلَا تَزِدِ الظَّالِمِينَ إِلَّا تَبَارًا
۞
‘‘ನನ್ನೊಡೆಯಾ, ನನಗೂ ನನ್ನ ಹೆತ್ತವರಿಗೂ ವಿಶ್ವಾಸಿಗಳಾಗಿ ನನ್ನ ಮನೆಯೊಳಗೆ ಬಂದಿರುವವರಿಗೂ ಎಲ್ಲ ವಿಶ್ವಾಸಿ ಪುರುಷರಿಗೂ ಸ್ತ್ರೀಯರಿಗೂ ಕ್ಷಮೆಯನ್ನು ನೀಡು ಮತ್ತು ಅಕ್ರಮಿಗಳ ಪಾಲಿಗೆ ವಿನಾಶದ ಹೊರತು ಬೇರೇನನ್ನೂ ಹೆಚ್ಚಿಸಬೇಡ.’’