Al-Anbiya' (The prophets)
21. ಅಲ್ ಅಂಬಿಯಾ(ಪ್ರವಾದಿಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
21:1
اقْتَرَبَ لِلنَّاسِ حِسَابُهُمْ وَهُمْ فِي غَفْلَةٍ مُعْرِضُونَ ۞
ಜನರ ವಿಚಾರಣೆಯ ಸಮಯವು ಹತ್ತಿರವೇ ಇದೆ. ಆದರೂ ಅವರು ನಿಶ್ಚಿಂತರಾಗಿದ್ದಾರೆ ಮತ್ತು ಕಡೆಗಣಿಸುತ್ತಿದ್ದಾರೆ.
21:2
مَا يَأْتِيهِمْ مِنْ ذِكْرٍ مِنْ رَبِّهِمْ مُحْدَثٍ إِلَّا اسْتَمَعُوهُ وَهُمْ يَلْعَبُونَ ۞
ಅವರ ಒಡೆಯನ ಕಡೆಯಿಂದ ಅವರ ಬಳಿಗೆ ಪ್ರತಿಯೊಂದು ಹೊಸ ಉಪದೇಶ ಬಂದಾಗಲೂ ಅವರು ಅದನ್ನು ಕೇಳಿ ಗೇಲಿ ಮಾಡಿದ್ದಾರೆ.
21:3
لَاهِيَةً قُلُوبُهُمْ ۗ وَأَسَرُّوا النَّجْوَى الَّذِينَ ظَلَمُوا هَلْ هَٰذَا إِلَّا بَشَرٌ مِثْلُكُمْ ۖ أَفَتَأْتُونَ السِّحْرَ وَأَنْتُمْ تُبْصِرُونَ ۞
ಅವರ ಮನಸ್ಸುಗಳು (ಆ ಕುರಿತು) ನಿರಾತಂಕವಾಗಿವೆ. ಮತ್ತು ಅಕ್ರಮಿಗಳು ಗುಟ್ಟಾಗಿ ಪರಸ್ಪರ (ಹೀಗೆಂದು) ಮಾತನಾಡಿಕೊಳ್ಳುತ್ತಿದ್ದಾರೆ; ‘‘ಅವನು (ಮುಹಮ್ಮದ್.ಸ.) ನಿಮ್ಮಂತಹ ಒಬ್ಬ ಮಾನವನಲ್ಲದೆ ಬೇರೇನಾದರೂ ಆಗಿರುವನೇ? ನೀವೇನು ಕಣ್ಣಾರೆ ಕಂಡೂ, ಮಾಟದ ಬಳಿಗೆ ಬರುವಿರಾ?’’
21:4
قَالَ رَبِّي يَعْلَمُ الْقَوْلَ فِي السَّمَاءِ وَالْأَرْضِ ۖ وَهُوَ السَّمِيعُ الْعَلِيمُ ۞
ಅವರು (ದೂತರು) ಹೇಳಿದರು; ನನ್ನ ಒಡೆಯನು ಆಕಾಶ ಹಾಗೂ ಭೂಮಿಯಲ್ಲಿನ ಪ್ರತಿಯೊಂದು ಮಾತನ್ನೂ ಬಲ್ಲನು. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.
21:5
بَلْ قَالُوا أَضْغَاثُ أَحْلَامٍ بَلِ افْتَرَاهُ بَلْ هُوَ شَاعِرٌ فَلْيَأْتِنَا بِآيَةٍ كَمَا أُرْسِلَ الْأَوَّلُونَ ۞
‘‘ಇವೆಲ್ಲಾ ಕೇವಲ ವಿಕೃತ ಕನಸುಗಳು. ನಿಜವಾಗಿ ಇವುಗಳನ್ನೆಲ್ಲಾ ಸ್ವತಃ ಅವನೇ ರಚಿಸಿ ತರುತ್ತಾನೆ. ಅವನು ಕವಿಯಾಗಿದ್ದಾನೆ. ಗತಕಾಲದಲ್ಲಿ ಕಳಿಸಲ್ಪಟ್ಟವರು (ದೂತರು) ತಂದಂತೆ ಅವನು ಏನಾದರೂ ಪುರಾವೆಯನ್ನು ತರಲಿ’’ ಎಂದು ಅವರು ಹೇಳುತ್ತಾರೆ.
21:6
مَا آمَنَتْ قَبْلَهُمْ مِنْ قَرْيَةٍ أَهْلَكْنَاهَا ۖ أَفَهُمْ يُؤْمِنُونَ ۞
ನಾವು ನಾಶ ಮಾಡಿದ, ಅವರಿಗಿಂತ ಹಿಂದಿನ ಯಾವುದೇ ನಾಡಿನವರು (ಪುರಾವೆಯನ್ನು ಕಂಡ ಬಳಿಕವೂ) ನಂಬಿರಲಿಲ್ಲ. ಹೀಗಿರುವಾಗ ಅವರು ನಂಬುವರೇ?
21:7
وَمَا أَرْسَلْنَا قَبْلَكَ إِلَّا رِجَالًا نُوحِي إِلَيْهِمْ ۖ فَاسْأَلُوا أَهْلَ الذِّكْرِ إِنْ كُنْتُمْ لَا تَعْلَمُونَ ۞
(ದೂತರೇ,) ನಿಮಗಿಂತ ಮುಂಚೆಯೂ ನಾವು (ದೂತರಾಗಿ) ಮಾನವರನ್ನು ಮಾತ್ರ ಕಳುಹಿಸಿದ್ದೆವು. ನಾವು ಅವರಿಗೆ ದಿವ್ಯವಾಣಿಯನ್ನು ತಲುಪಿಸಿದ್ದೆವು. (ಜನರೇ) ನಿಮಗೆ ತಿಳಿದಿಲ್ಲವಾದರೆ ಬಲ್ಲವರೊಡನೆ ಕೇಳಿರಿ.
21:8
وَمَا جَعَلْنَاهُمْ جَسَدًا لَا يَأْكُلُونَ الطَّعَامَ وَمَا كَانُوا خَالِدِينَ ۞
ಆಹಾರ ಸೇವಿಸದ ಶರೀರವನ್ನೇನೂ ನಾವು ಅವರಿಗೆ ನೀಡಿರಲಿಲ್ಲ ಮತ್ತು ಅವರು ಶಾಶ್ವತ ಜೀವಿಗಳೂ ಆಗಿರಲಿಲ್ಲ.
21:9
ثُمَّ صَدَقْنَاهُمُ الْوَعْدَ فَأَنْجَيْنَاهُمْ وَمَنْ نَشَاءُ وَأَهْلَكْنَا الْمُسْرِفِينَ ۞
ನಾವು ಅವರಿಗೆ ನೀಡಿದ್ದ ವಚನಗಳನ್ನು ಸತ್ಯವಾಗಿಸಿದೆವು ಮತ್ತು ನಾವು ಅವರನ್ನೂ ನಾವಿಚ್ಛಿಸಿದ ಇತರರನ್ನೂ ಸಂರಕ್ಷಿಸಿದೆವು ಮತ್ತು ನಾವು, ಎಲ್ಲೆ ಮೀರುವವರನ್ನು ನಾಶ ಮಾಡಿದೆವು.
21:10
لَقَدْ أَنْزَلْنَا إِلَيْكُمْ كِتَابًا فِيهِ ذِكْرُكُمْ ۖ أَفَلَا تَعْقِلُونَ ۞
ನಾವಿದೋ ನಿಮ್ಮೆಡೆಗೆ ನಿಮ್ಮ ಪ್ರಸ್ತಾಪವಿರುವ ಒಂದು ಗ್ರಂಥವನ್ನು (ಕುರ್‌ಆನ್) ಇಳಿಸಿರುವೆವು. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ?
21:11
وَكَمْ قَصَمْنَا مِنْ قَرْيَةٍ كَانَتْ ظَالِمَةً وَأَنْشَأْنَا بَعْدَهَا قَوْمًا آخَرِينَ ۞
ಅದೆಷ್ಟು ನಾಡುಗಳನ್ನು ನಾವು ನಾಶಮಾಡಿ ಬಿಟ್ಟೆವು! ಅವು ಅಕ್ರಮಿ ನಾಡುಗಳಾಗಿದ್ದವು. ಅವರ ಬಳಿಕ ನಾವು ಬೇರೆ ಜನಾಂಗಗಳನ್ನು ಹುಟ್ಟಿಸಿದೆವು.
21:12
فَلَمَّا أَحَسُّوا بَأْسَنَا إِذَا هُمْ مِنْهَا يَرْكُضُونَ ۞
ನಮ್ಮ ಶಿಕ್ಷೆಯ ಸಪ್ಪಳ ಕೇಳಿಸಿದಾಗ ಅವರು ಅಲ್ಲಿಂದ ಓಡತೊಡಗಿದರು.
21:13
لَا تَرْكُضُوا وَارْجِعُوا إِلَىٰ مَا أُتْرِفْتُمْ فِيهِ وَمَسَاكِنِكُمْ لَعَلَّكُمْ تُسْأَلُونَ ۞
‘‘ಓಡಬೇಡಿ! ನಿಮ್ಮ ವಿಚಾರಣೆ ನಡೆಯುವಂತಾಗಲು, ನೀವೀಗ ನಿಮ್ಮ ಸುಖ ಭೋಗದ ಸ್ಥಳಕ್ಕೆ ಮತ್ತು ನಿಮ್ಮ ನಿವಾಸಗಳಿಗೆ ಮರಳಿರಿ’’ (ಎಂದು ಅವರೊಡನೆ ಹೇಳಲಾಯಿತು).
21:14
قَالُوا يَا وَيْلَنَا إِنَّا كُنَّا ظَالِمِينَ ۞
ಅವರು ಹೇಳಿದರು; ಅಯ್ಯೋ ನಮ್ಮ ದೌರ್ಭಾಗ್ಯವೇ! ನಾವು ಖಂಡಿತ ಅಕ್ರಮಿಗಳಾಗಿದ್ದೆವು.
21:15
فَمَا زَالَتْ تِلْكَ دَعْوَاهُمْ حَتَّىٰ جَعَلْنَاهُمْ حَصِيدًا خَامِدِينَ ۞
ನಾವು ಅವರನ್ನು ಫಸಲು ಕೊಯ್ದ ಹೊಲವಾಗಿ ಮತ್ತು ಕಿಡಿ ಆರಿದ ಬೂದಿಯ ರಾಶಿಯಾಗಿ ಮಾರ್ಪಡಿಸುವ ತನಕವೂ ಅವರ ಈ ರೋದನವು ಮುಂದುವರಿದಿತ್ತು.
21:16
وَمَا خَلَقْنَا السَّمَاءَ وَالْأَرْضَ وَمَا بَيْنَهُمَا لَاعِبِينَ ۞
ಆಕಾಶವನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಕೇವಲ ಮೋಜಿಗಾಗಿ ಸೃಷ್ಟಿಸಿಲ್ಲ.
21:17
لَوْ أَرَدْنَا أَنْ نَتَّخِذَ لَهْوًا لَاتَّخَذْنَاهُ مِنْ لَدُنَّا إِنْ كُنَّا فَاعِلِينَ ۞
ಒಂದು ವೇಳೆ ನಮಗೆ ಮೋಜು ಮಾಡಬೇಕಿದ್ದರೆ, (ಮತ್ತು) ನಿಜಕ್ಕೂ ನಾವು ಹಾಗೆ ಮಾಡ ಬಯಸಿದ್ದರೆ, ನಾವು ಅದನ್ನು ನಮ್ಮಲ್ಲೇ ಮಾಡಿಕೊಳ್ಳುತ್ತಿದ್ದೆವು.
21:18
بَلْ نَقْذِفُ بِالْحَقِّ عَلَى الْبَاطِلِ فَيَدْمَغُهُ فَإِذَا هُوَ زَاهِقٌ ۚ وَلَكُمُ الْوَيْلُ مِمَّا تَصِفُونَ ۞
ನಾವು ಸತ್ಯವನ್ನು ಮಿಥ್ಯದ ಮೇಲೆ ಅಪ್ಪಳಿಸಿದಾಗ ಅದು (ಸತ್ಯವು) ಅದನ್ನು (ಮಿಥ್ಯವನ್ನು) ಹೊಸಕಿ ಹಾಕುತ್ತದೆ ಮತ್ತು ಅದು (ಮಿಥ್ಯವು) ನುಚ್ಚು ನೂರಾಗಿ ಬಿಡುತ್ತದೆ. ನೀವು ರಚಿಸಿಕೊಂಡವುಗಳಿಂದಾಗಿ (ನಿಮ್ಮ ಮಿಥ್ಯ ನಂಬಿಕೆಗಳಿಂದಾಗಿ) ನಿಮಗೆ ವಿನಾಶ ಕಾದಿದೆ.
21:19
وَلَهُ مَنْ فِي السَّمَاوَاتِ وَالْأَرْضِ ۚ وَمَنْ عِنْدَهُ لَا يَسْتَكْبِرُونَ عَنْ عِبَادَتِهِ وَلَا يَسْتَحْسِرُونَ ۞
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವವರೆಲ್ಲರೂ ಅವನಿಗೇ ಸೇರಿರುವರು. ಇನ್ನು, ಅವನ ಬಳಿ ಇರುವವರಂತು, ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ ಮತ್ತು ಅವರು ದಣಿಯುವುದೂ ಇಲ್ಲ.
21:20
يُسَبِّحُونَ اللَّيْلَ وَالنَّهَارَ لَا يَفْتُرُونَ ۞
ಅವರು ಇರುಳಲ್ಲೂ ಹಗಲಲ್ಲೂ ಅವನ ಪಾವಿತ್ರ್ಯವನ್ನು ಜಪಿಸುತ್ತಿರುತ್ತಾರೆ ಮತ್ತು ಅವರು ಆಲಸ್ಯ ತೋರುವುದಿಲ್ಲ.
21:21
أَمِ اتَّخَذُوا آلِهَةً مِنَ الْأَرْضِ هُمْ يُنْشِرُونَ ۞
ಅವರು ಭೂಮಿಯಿಂದ ಆರಿಸಿ ಕೊಂಡಿರುವ ದೇವರುಗಳು, (ಸತ್ತವರನ್ನು) ಮತ್ತೆ ಜೀವಂತಗೊಳಿಸಬಲ್ಲರೇ?
21:22
لَوْ كَانَ فِيهِمَا آلِهَةٌ إِلَّا اللَّهُ لَفَسَدَتَا ۚ فَسُبْحَانَ اللَّهِ رَبِّ الْعَرْشِ عَمَّا يَصِفُونَ ۞
ಒಂದು ವೇಳೆ ಅವುಗಳಲ್ಲಿ (ಭೂಮಿ - ಆಕಾಶಗಳಲ್ಲಿ) ಅಲ್ಲಾಹನ ಹೊರತು ಬೇರೆ ದೇವರುಗಳು ಇದ್ದಿದ್ದರೆ ಅವೆರಡೂ ಅಸ್ತವ್ಯಸ್ತವಾಗಿ ಬಿಡುತ್ತಿದ್ದವು. ವಿಶ್ವಸಿಂಹಾಸನದ ಒಡೆಯನಾದ ಅಲ್ಲಾಹನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನು.
21:23
لَا يُسْأَلُ عَمَّا يَفْعَلُ وَهُمْ يُسْأَلُونَ ۞
ಅವನ ಯಾವುದೇ ಕೃತ್ಯದ ಕುರಿತು ಯಾರೂ ಅವನನ್ನು ವಿಚಾರಿಸಲಾರರು. ಅದರೆ ಅವರ (ಇತರೆಲ್ಲರ) ವಿಚಾರಣೆ ಖಂಡಿತ ನಡೆಯುವುದು.
21:24
أَمِ اتَّخَذُوا مِنْ دُونِهِ آلِهَةً ۖ قُلْ هَاتُوا بُرْهَانَكُمْ ۖ هَٰذَا ذِكْرُ مَنْ مَعِيَ وَذِكْرُ مَنْ قَبْلِي ۗ بَلْ أَكْثَرُهُمْ لَا يَعْلَمُونَ الْحَقَّ ۖ فَهُمْ مُعْرِضُونَ ۞
ಅವರೇನು, ಅವನ (ಅಲ್ಲಾಹನ) ಹೊರತು ಇತರರನ್ನು ದೇವರಾಗಿಸಿಕೊಂಡಿರುವರೇ? ಹೇಳಿರಿ; ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು (ಕುರ್‌ಆನ್) ನನ್ನ ಜೊತೆ ಇರುವವರಿಗಾಗಿ ಇರುವ ಉಪದೇಶವೂ ಇದುವೇ ಮತ್ತು ನನ್ನ ಹಿಂದಿನವರಿಗಾಗಿ ಇದ್ದ ಉಪದೇಶವೂ ಇದುವೇ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಬಲ್ಲವರಲ್ಲ. ಆದ್ದರಿಂದಲೇ ಅವರು ಮುಖ ತಿರುಗಿಸಿಕೊಂಡಿದ್ದಾರೆ.
21:25
وَمَا أَرْسَلْنَا مِنْ قَبْلِكَ مِنْ رَسُولٍ إِلَّا نُوحِي إِلَيْهِ أَنَّهُ لَا إِلَٰهَ إِلَّا أَنَا فَاعْبُدُونِ ۞
(ದೂತರೇ,) ನಾವು ನಿಮಗಿಂತ ಮುಂಚೆ ಕಳಿಸಿದ್ದ ಎಲ್ಲ ದೂತರಿಗೂ, - ನನ್ನ ಹೊರತು ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ - ಎನ್ನುವ ದಿವ್ಯಸಂದೇಶವನ್ನೇ ಕಳಿಸಿದ್ದೆವು.
21:26
وَقَالُوا اتَّخَذَ الرَّحْمَٰنُ وَلَدًا ۗ سُبْحَانَهُ ۚ بَلْ عِبَادٌ مُكْرَمُونَ ۞
ಆ ಪರಮ ದಯಾಮಯನಿಗೊಬ್ಬ ಪುತ್ರನಿದ್ದಾನೆ ಎಂದು ಅವರು ಹೇಳುತ್ತಾರೆ. ಅವನು ಪರಮ ಪಾವನನು. ಅವರು (ಮಲಕ್‌ಗಳು) ಅವನ ಗೌರವಾನ್ವಿತ ದಾಸರು.
21:27
لَا يَسْبِقُونَهُ بِالْقَوْلِ وَهُمْ بِأَمْرِهِ يَعْمَلُونَ ۞
ಅವರೆಂದೂ ಅವನಿಗೆದುರಾಗಿ ಮಾತನಾಡುವುದಿಲ್ಲ ಮತ್ತು ಅವನು ಆದೇಶಿಸಿದ್ದನ್ನೇ ಅವರು ಮಾಡುತ್ತಾರೆ.
21:28
يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ارْتَضَىٰ وَهُمْ مِنْ خَشْيَتِهِ مُشْفِقُونَ ۞
ಅವನಂತು ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಬಲ್ಲನು. ಅವನು (ಅಲ್ಲಾಹನು) ಮೆಚ್ಚುವವರ ಹೊರತು ಬೇರೆ ಯಾರ ಪರವಾಗಿಯೂ ಅವರು ಶಿಫಾರಸು ಮಾಡಲಾರರು. ಸ್ವತಃ ಅವರೇ ಅವನ ಭಯದಿಂದ ನಡುಗುತ್ತಿರುವರು.
21:29
۞ وَمَنْ يَقُلْ مِنْهُمْ إِنِّي إِلَٰهٌ مِنْ دُونِهِ فَذَٰلِكَ نَجْزِيهِ جَهَنَّمَ ۚ كَذَٰلِكَ نَجْزِي الظَّالِمِينَ ۞
ಅವರ ಪೈಕಿ ಯಾರಾದರೂ ಅವನ (ಅಲ್ಲಾಹನ) ಜೊತೆಗೆ ತಾನೂ ದೇವರು - ಎಂದು ಹೇಳಿದರೆ, ನಾವು ಆತನಿಗೆ ನರಕದ ಶಿಕ್ಷೆಯನ್ನು ನೀಡುವೆವು. ಇದುವೇ ಅಕ್ರಮಿಗಳಿಗಾಗಿ ನಮ್ಮಲ್ಲಿರುವ ಪ್ರತಿಫಲ.
21:30
أَوَلَمْ يَرَ الَّذِينَ كَفَرُوا أَنَّ السَّمَاوَاتِ وَالْأَرْضَ كَانَتَا رَتْقًا فَفَتَقْنَاهُمَا ۖ وَجَعَلْنَا مِنَ الْمَاءِ كُلَّ شَيْءٍ حَيٍّ ۖ أَفَلَا يُؤْمِنُونَ ۞
ಧಿಕ್ಕಾರಿಗಳು ಅರಿತಿಲ್ಲವೇ, ಆಕಾಶಗಳು ಮತ್ತು ಭೂಮಿ ಕೂಡಿಕೊಂಡಿದ್ದವು. ಕೊನೆಗೆ ನಾವು ಅವೆರಡನ್ನೂ ಬೇರ್ಪಡಿಸಿದೆವು. ಇನ್ನು ಪ್ರತಿಯೊಂದು ಜೀವಂತ ವಸ್ತುವನ್ನೂ ನಾವು ನೀರಿನಿಂದ ಸೃಷ್ಟಿಸಿರುವೆವು. ಅವರೇನು ನಂಬುವುದಿಲ್ಲವೇ?
21:31
وَجَعَلْنَا فِي الْأَرْضِ رَوَاسِيَ أَنْ تَمِيدَ بِهِمْ وَجَعَلْنَا فِيهَا فِجَاجًا سُبُلًا لَعَلَّهُمْ يَهْتَدُونَ ۞
ಭೂಮಿಯು ಅವರೊಂದಿಗೆ ವಾಲಿ ಬಿಡಬಾರದೆಂದು ನಾವು ಅದರಲ್ಲಿ ಪರ್ವತಗಳನ್ನು ಇಟ್ಟಿರುವೆವು ಮತ್ತು ಅವರಿಗೆ ದಾರಿ ಸಿಗಲೆಂದು ನಾವು ಅದರಲ್ಲಿ, ವಿಶಾಲವಾದ ಮಾರ್ಗಗಳನ್ನು ಇಟ್ಟಿರುವೆವು.
21:32
وَجَعَلْنَا السَّمَاءَ سَقْفًا مَحْفُوظًا ۖ وَهُمْ عَنْ آيَاتِهَا مُعْرِضُونَ ۞
ಇನ್ನು, ಆಕಾಶವನ್ನು ನಾವು ಸುಭದ್ರ ಚಪ್ಪರವಾಗಿಸಿರುವೆವು. ಆದರೆ ಅವರು ನಮ್ಮ ಎಲ್ಲ ಪುರಾವೆಗಳನ್ನು ಕಡೆಗಣಿಸುತ್ತಿದ್ದಾರೆ.
21:33
وَهُوَ الَّذِي خَلَقَ اللَّيْلَ وَالنَّهَارَ وَالشَّمْسَ وَالْقَمَرَ ۖ كُلٌّ فِي فَلَكٍ يَسْبَحُونَ ۞
ರಾತ್ರಿಯನ್ನೂ ಹಗಲನ್ನೂ ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಸಿದವನು ಅವನೇ. ಅವೆಲ್ಲವೂ ತಮ್ಮ ನಿರ್ದಿಷ್ಟ ದಾರಿಯಲ್ಲೇ ಚಲಿಸುತ್ತಿವೆ.
21:34
وَمَا جَعَلْنَا لِبَشَرٍ مِنْ قَبْلِكَ الْخُلْدَ ۖ أَفَإِنْ مِتَّ فَهُمُ الْخَالِدُونَ ۞
(ದೂತರೇ) ನಿಮಗಿಂತ ಮುಂಚೆಯೂ ನಾವು ಯಾವುದೇ ಮನುಷ್ಯನಿಗೆ ಶಾಶ್ವತ ಬದುಕನ್ನು ನೀಡಿರಲಿಲ್ಲ. ಇದೀಗ (ಅವರು ಬಯಸುವಂತೆ) ನೀವು ಮೃತರಾದರೆ ಅವರೇನು ಶಾಶ್ವತವಾಗಿ ಉಳಿಯುವರೇ?
21:35
كُلُّ نَفْسٍ ذَائِقَةُ الْمَوْتِ ۗ وَنَبْلُوكُمْ بِالشَّرِّ وَالْخَيْرِ فِتْنَةً ۖ وَإِلَيْنَا تُرْجَعُونَ ۞
ಪ್ರತಿಯೊಂದು ಜೀವವೂ ಮರಣದ ರುಚಿಯನ್ನು ಸವಿಯಲೇಬೇಕು. ಇನ್ನು ನಾವು ಕೆಡುಕುಗಳ ಮತ್ತು ಒಳಿತುಗಳ ಮೂಲಕ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಇರುವೆವು. ಕೊನೆಗಂತು ನೀವು ನಮ್ಮ ಕಡೆಗೇ ಮರಳಿ ಬರುವಿರಿ.
21:36
وَإِذَا رَآكَ الَّذِينَ كَفَرُوا إِنْ يَتَّخِذُونَكَ إِلَّا هُزُوًا أَهَٰذَا الَّذِي يَذْكُرُ آلِهَتَكُمْ وَهُمْ بِذِكْرِ الرَّحْمَٰنِ هُمْ كَافِرُونَ ۞
(ದೂತರೇ,) ಧಿಕ್ಕಾರಿಗಳು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಕೇವಲ ತಮಾಷೆಯಾಗಿ ಪರಿಗಣಿಸುತ್ತಾರೆ. ಮತ್ತು ‘‘ನಿಮ್ಮ ದೇವರುಗಳ ಕುರಿತು ಮಾತನಾಡುತ್ತಿದ್ದವನು ಇವನೇ ತಾನೇ?’’ ಎನ್ನುತ್ತಾರೆ. ನಿಜವಾಗಿ ಅವರು ಆ ಪರಮ ದಯಾಮಯನ ಪ್ರಸ್ತಾಪವನ್ನೇ ಧಿಕ್ಕರಿಸುತ್ತಾರೆ.
21:37
خُلِقَ الْإِنْسَانُ مِنْ عَجَلٍ ۚ سَأُرِيكُمْ آيَاتِي فَلَا تَسْتَعْجِلُونِ ۞
ಮನುಷ್ಯನನ್ನು ಆತುರ ಜೀವಿಯಾಗಿಯೇ ಸೃಷ್ಟಿಸಲಾಗಿದೆ. ನಾನು ನಿಮಗೆ ನನ್ನ ಪುರಾವೆಗಳನ್ನು ತೋರಿಸಲಿದ್ದೇನೆ. ಆದ್ದರಿಂದ ನೀವು ಆತುರ ಪಡಬೇಡಿ.
21:38
وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ ۞
ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನಿತ ಸಮಯ ಬರುವುದು ಯಾವಾಗ? ಎಂದು ಅವರು ಕೇಳುತ್ತಾರೆ.
21:39
لَوْ يَعْلَمُ الَّذِينَ كَفَرُوا حِينَ لَا يَكُفُّونَ عَنْ وُجُوهِهِمُ النَّارَ وَلَا عَنْ ظُهُورِهِمْ وَلَا هُمْ يُنْصَرُونَ ۞
ಆ ಸಮಯದ ಕುರಿತು ಧಿಕ್ಕಾರಿಗಳು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು. ಅಂದು ತಮ್ಮ ಮುಖಗಳನ್ನಾಗಲಿ ಬೆನ್ನುಗಳನ್ನಾಗಲಿ ಬೆಂಕಿಯಿಂದ ರಕ್ಷಿಸಿಕೊಳ್ಳಲು ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಯಾವುದೇ ಸಹಾಯವೂ ಸಿಗದು.
21:40
بَلْ تَأْتِيهِمْ بَغْتَةً فَتَبْهَتُهُمْ فَلَا يَسْتَطِيعُونَ رَدَّهَا وَلَا هُمْ يُنْظَرُونَ ۞
ನಿಜವಾಗಿ, ಅದು ಹಠಾತ್ತನೆ ಅವರ ಮೇಲೆ ಬಂದೆರಗುವುದು ಮತ್ತು ಅವರು ಆಘಾತಕ್ಕೆ ಒಳಗಾಗುವರು. ಅದನ್ನು ನಿವಾರಿಸಲಿಕ್ಕೂ ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗದು.
21:41
وَلَقَدِ اسْتُهْزِئَ بِرُسُلٍ مِنْ قَبْلِكَ فَحَاقَ بِالَّذِينَ سَخِرُوا مِنْهُمْ مَا كَانُوا بِهِ يَسْتَهْزِئُونَ ۞
ನಿಮಗಿಂತ ಮುಂಚೆಯೂ ದೇವದೂತರನ್ನು ಗೇಲಿ ಮಾಡಲಾಗಿದೆ. ಕೊನೆಗೆ, ಅವರ ಪೈಕಿ ಗೇಲಿ ಮಾಡುತ್ತಿದ್ದವರನ್ನು, ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಆವರಿಸಿ ಬಿಟ್ಟಿತು.
21:42
قُلْ مَنْ يَكْلَؤُكُمْ بِاللَّيْلِ وَالنَّهَارِ مِنَ الرَّحْمَٰنِ ۗ بَلْ هُمْ عَنْ ذِكْرِ رَبِّهِمْ مُعْرِضُونَ ۞
ಹೇಳಿರಿ; ಇರುಳಲ್ಲೂ ಹಗಲಲ್ಲೂ ಆ ದಯಾಮಯನಿಂದ ನಿಮ್ಮನ್ನು ಕಾಪಾಡುತ್ತಿರುವವನು ಯಾರು? ಇಷ್ಟಾಗಿಯೂ ಅವರು ತಮ್ಮ ಒಡೆಯನನ್ನು ಸ್ಮರಿಸುವ ವಿಷಯದಲ್ಲಿ ನಿರಾಸಕ್ತರಾಗಿದ್ದಾರೆ.
21:43
أَمْ لَهُمْ آلِهَةٌ تَمْنَعُهُمْ مِنْ دُونِنَا ۚ لَا يَسْتَطِيعُونَ نَصْرَ أَنْفُسِهِمْ وَلَا هُمْ مِنَّا يُصْحَبُونَ ۞
ಅವರನ್ನು ರಕ್ಷಿಸಲು ಅವರ ಬಳಿ ನಾವಲ್ಲದೆ ಬೇರೆ ದೇವರುಗಳಿದ್ದಾರೆಯೇ? ನಿಜವಾಗಿ ಅವರು (ಆ ದೇವರುಗಳು), ಸ್ವತಃ ತಮ್ಮ ನೆರವಿಗೂ ಅಶಕ್ತರಾಗಿದ್ದಾರೆ ಮತ್ತು ನಮಗೆದುರಾಗಿ ಅವರಿಗೆ ನೆರವಾಗಲು ಯಾರಿಗೂ ಸಾಧ್ಯವಿಲ್ಲ.
21:44
بَلْ مَتَّعْنَا هَٰؤُلَاءِ وَآبَاءَهُمْ حَتَّىٰ طَالَ عَلَيْهِمُ الْعُمُرُ ۗ أَفَلَا يَرَوْنَ أَنَّا نَأْتِي الْأَرْضَ نَنْقُصُهَا مِنْ أَطْرَافِهَا ۚ أَفَهُمُ الْغَالِبُونَ ۞
ನಾವು ಅವರಿಗೂ ಅವರ ಪೂರ್ವಜರಿಗೂ ಧಾರಾಳ ಸಂಪತ್ತನ್ನು ದಯಪಾಲಿಸಿದ್ದೆವು. ಅವರು ಬಹುಕಾಲ ಅದೇ (ಸಂಪನ್ನ) ಸ್ಥಿತಿಯಲ್ಲಿದ್ದರು. ನಾವು (ಅವರ ಪಾಲಿಗೆ) ಭೂಮಿಯನ್ನು ಅದರ ಎಲ್ಲ ಮೂಲೆಗಳಿಂದಲೂ ಸಂಕುಚಿತಗೊಳಿಸುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಅವರೇನು ವಿಜಯಿಗಳಾಗಬಲ್ಲರೇ?
21:45
قُلْ إِنَّمَا أُنْذِرُكُمْ بِالْوَحْيِ ۚ وَلَا يَسْمَعُ الصُّمُّ الدُّعَاءَ إِذَا مَا يُنْذَرُونَ ۞
(ದೂತರೇ,) ಹೇಳಿರಿ; ನಾನು, ದಿವ್ಯವಾಣಿಯ ಮೂಲಕ ನಿಮನ್ನು ಎಚ್ಚರಿಸುವವನು ಮಾತ್ರ. ಆದರೆ ಕಿವುಡರನ್ನು ಎಚ್ಚರಿಸಲಾದಾಗ, ಅವರು ಯಾವ ಕರೆಯನ್ನೂ ಕೇಳುವುದಿಲ್ಲ.
21:46
وَلَئِنْ مَسَّتْهُمْ نَفْحَةٌ مِنْ عَذَابِ رَبِّكَ لَيَقُولُنَّ يَا وَيْلَنَا إِنَّا كُنَّا ظَالِمِينَ ۞
ಕೊನೆಗೆ ನಿಮ್ಮ ಒಡೆಯನ ಶಿಕ್ಷೆಯ ಒಂದು ಪುಟ್ಟ ಅಲೆಯು ಅವರನ್ನು ಮುಟ್ಟಿದಾಗ ಅವರು, ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಖಂಡಿತ ಅಕ್ರಮಿಗಳಾಗಿದ್ದೆವು’’ ಎನ್ನುವರು.
21:47
وَنَضَعُ الْمَوَازِينَ الْقِسْطَ لِيَوْمِ الْقِيَامَةِ فَلَا تُظْلَمُ نَفْسٌ شَيْئًا ۖ وَإِنْ كَانَ مِثْقَالَ حَبَّةٍ مِنْ خَرْدَلٍ أَتَيْنَا بِهَا ۗ وَكَفَىٰ بِنَا حَاسِبِينَ ۞
ಪುನರುತ್ಥಾನ ದಿನ ನಾವು ನ್ಯಾಯದ ತಕ್ಕಡಿಯನ್ನು ಸ್ಥಾಪಿಸುವೆವು. (ಅಂದು) ಯಾರ ಮೇಲೂ ಕಿಂಚಿತ್ತೂ ಅಕ್ರಮ ನಡೆಯದು. (ಕರ್ಮವು) ಕೇವಲ ಒಂದು ಸಾಸಿವೆ ಕಾಳಿನಷ್ಟಿದ್ದರೂ ನಾವು ಅದನ್ನು ಮುಂದೆ ತರುವೆವು. ವಿಚಾರಣೆಗೆ ನಾವೇ ಸಾಕು.
21:48
وَلَقَدْ آتَيْنَا مُوسَىٰ وَهَارُونَ الْفُرْقَانَ وَضِيَاءً وَذِكْرًا لِلْمُتَّقِينَ ۞
ನಾವು ಮೂಸಾ ಮತ್ತು ಹಾರೂನರಿಗೆ ಅಲ್‌ಫುರ್‌ಕಾನ್ ಅನ್ನು (ಸತ್ಯ - ಮಿಥ್ಯಗಳನ್ನು ಪ್ರತ್ಯೇಕಿಸಿ ತಿಳಿಸುವ ಗ್ರಂಥವನ್ನು) ಮತ್ತು ಸತ್ಯನಿಷ್ಠರ ಪಾಲಿಗೆ ಜ್ಯೋತಿ ಹಾಗೂ ಉಪದೇಶವನ್ನು ನೀಡಿದೆವು.
21:49
الَّذِينَ يَخْشَوْنَ رَبَّهُمْ بِالْغَيْبِ وَهُمْ مِنَ السَّاعَةِ مُشْفِقُونَ ۞
ಕಣ್ಣಾರೆ ಕಾಣದೆಯೇ ತಮ್ಮ ಒಡೆಯನಿಗೆ ಅಂಜುತ್ತಿರುವವರು ಹಾಗೂ ಆ ಅಂತಿಮ ಕ್ಷಣದ ಕುರಿತು ಜಾಗೃತರಾಗಿರುವವರಿಗಾಗಿ.
21:50
وَهَٰذَا ذِكْرٌ مُبَارَكٌ أَنْزَلْنَاهُ ۚ أَفَأَنْتُمْ لَهُ مُنْكِرُونَ ۞
ಇದು, ನಾವು ಇಳಿಸಿಕೊಟ್ಟಿರುವ ಸಮೃದ್ಧ ಬೋಧನೆ. ನೀವು ಇದನ್ನು ತಿರಸ್ಕರಿಸುವಿರಾ?
21:51
۞ وَلَقَدْ آتَيْنَا إِبْرَاهِيمَ رُشْدَهُ مِنْ قَبْلُ وَكُنَّا بِهِ عَالِمِينَ ۞
ಈ ಹಿಂದೆ ನಾವು ಇಬ್ರಾಹೀಮರಿಗೆ ವಿಶೇಷ ವಿವೇಕವನ್ನು ನೀಡಿದ್ದೆವು ಮತ್ತು ಆ ಕುರಿತು ನಾವು ಬಲ್ಲವರಾಗಿದ್ದೆವು.
21:52
إِذْ قَالَ لِأَبِيهِ وَقَوْمِهِ مَا هَٰذِهِ التَّمَاثِيلُ الَّتِي أَنْتُمْ لَهَا عَاكِفُونَ ۞
ಅವರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ, ‘‘ನೀವು ಇದೆಂತಹ ವಿಗ್ರಹಗಳನ್ನು ನಂಬಿಕೊಂಡು ತೃಪ್ತರಾಗಿರುವಿರಿ?’’ ಎಂದು ಕೇಳಿದರು.
21:53
قَالُوا وَجَدْنَا آبَاءَنَا لَهَا عَابِدِينَ ۞
ಅವರು ಹೇಳಿದರು; ನಮ್ಮ ಪೂರ್ವಜರು ಅವುಗಳನ್ನೇ ಪೂಜಿಸುವುದನ್ನು ನಾವು ಕಂಡಿದ್ದೇವೆ.
21:54
قَالَ لَقَدْ كُنْتُمْ أَنْتُمْ وَآبَاؤُكُمْ فِي ضَلَالٍ مُبِينٍ ۞
ಅವರು (ಇಬ್ರಾಹೀಮ್) ಹೇಳಿದರು; ಖಂಡಿತವಾಗಿಯೂ ನೀವು ಮತ್ತು ನಿಮ್ಮ ಪೂರ್ವಜರು ಸ್ಪಷ್ಟವಾಗಿ ತಪ್ಪು ದಾರಿಯಲ್ಲಿರುವಿರಿ.
21:55
قَالُوا أَجِئْتَنَا بِالْحَقِّ أَمْ أَنْتَ مِنَ اللَّاعِبِينَ ۞
ಅವರು (ಜನಾಂಗದವರು) ಹೇಳಿದರು; ನೀವೇನು ನಮ್ಮ ಬಳಿಗೆ ಸತ್ಯವನ್ನು ತಂದಿರುವಿರಾ? ಅಥವಾ ನೀವು ಕೇವಲ ತಮಾಷೆ ಮಾಡುತ್ತಿರುವಿರಾ?
21:56
قَالَ بَلْ رَبُّكُمْ رَبُّ السَّمَاوَاتِ وَالْأَرْضِ الَّذِي فَطَرَهُنَّ وَأَنَا عَلَىٰ ذَٰلِكُمْ مِنَ الشَّاهِدِينَ ۞
ಅವರು ಹೇಳಿದರು; ಆಕಾಶಗಳ ಹಾಗೂ ಭೂಮಿಯ ಒಡೆಯನು ಹಾಗೂ ಅವುಗಳಿಗೆ ರೂಪ ನೀಡಿದವನೇ ನಿಜವಾಗಿ ನಿಮ್ಮ ಒಡೆಯನು. ಇದಕ್ಕೆ ನಿಮ್ಮ ಮುಂದೆ ನಾನೇ ಒಬ್ಬ ಸಾಕ್ಷಿಯಾಗಿದ್ದೇನೆ.
21:57
وَتَاللَّهِ لَأَكِيدَنَّ أَصْنَامَكُمْ بَعْدَ أَنْ تُوَلُّوا مُدْبِرِينَ ۞
ಅಲ್ಲಾಹನಾಣೆ, ನೀವು ಇಲ್ಲಿಂದ ಹೊರಟುಹೋದ ಬಳಿಕ ಈ ನಿಮ್ಮ ವಿಗ್ರಹಗಳ ಕುರಿತಂತೆ (ಏನು ಮಾಡಬೇಕೆಂದು) ನಾನು ಒಂದು ಯೋಜನೆ ಹಾಕಿಕೊಂಡಿದ್ದೇನೆ.
21:58
فَجَعَلَهُمْ جُذَاذًا إِلَّا كَبِيرًا لَهُمْ لَعَلَّهُمْ إِلَيْهِ يَرْجِعُونَ ۞
ಕೊನೆಗೆ ಅವರು ಅವೆಲ್ಲವನ್ನೂ ನುಚ್ಚುನೂರು ಮಾಡಿಬಿಟ್ಟರು. ಆದರೆ ಜನರೆಲ್ಲಾ ಅದರ ಬಳಿಗೆ ಮರಳಲೆಂದು ದೊಡ್ಡದೊಂದನ್ನು ಬಿಟ್ಟು ಬಿಟ್ಟರು.
21:59
قَالُوا مَنْ فَعَلَ هَٰذَا بِآلِهَتِنَا إِنَّهُ لَمِنَ الظَّالِمِينَ ۞
ಅವರು (ಊರವರು), ‘‘ನಮ್ಮ ದೇವರುಗಳಿಗೆ ಹೀಗೆಲ್ಲಾ ಮಾಡಿದವನು ಯಾರು? ಅವನು ಖಂಡಿತ ಅಕ್ರಮಿ’’ ಎಂದರು.
21:60
قَالُوا سَمِعْنَا فَتًى يَذْكُرُهُمْ يُقَالُ لَهُ إِبْرَاهِيمُ ۞
ಕೆಲವರು, ‘‘ಇಬ್ರಾಹೀಮ್ ಎಂಬೊಬ್ಬ ಯುವಕನು ಅವುಗಳ ಕುರಿತು ಮಾತನಾಡುವುದನ್ನು ನಾವು ಕೇಳಿದ್ದೇವೆ’’ ಎಂದರು.
21:61
قَالُوا فَأْتُوا بِهِ عَلَىٰ أَعْيُنِ النَّاسِ لَعَلَّهُمْ يَشْهَدُونَ ۞
ಅವರು, ‘‘ಅವನನ್ನು ಜನರ ಮುಂದೆ ತನ್ನಿರಿ. ಅವರು ಕಣ್ಣಾರೆ ಕಾಣಲಿ’’ಎಂದು ಘೋಷಿಸಿದರು.
21:62
قَالُوا أَأَنْتَ فَعَلْتَ هَٰذَا بِآلِهَتِنَا يَا إِبْرَاهِيمُ ۞
‘‘ಓ ಇಬ್ರಾಹೀಮ್, ನಮ್ಮ ದೇವರುಗಳಿಗೆ ಈ ಗತಿ ಒದಗಿಸಿದ್ದು ನೀನೇ?’’ ಎಂದು ಅವರು ವಿಚಾರಿಸಿದರು.
21:63
قَالَ بَلْ فَعَلَهُ كَبِيرُهُمْ هَٰذَا فَاسْأَلُوهُمْ إِنْ كَانُوا يَنْطِقُونَ ۞
ಅವರು (ಇಬ್ರಾಹೀಮ್) ಹೇಳಿದರು; ‘‘ಅವರ (ಆ ವಿಗ್ರಹಗಳ) ಹಿರಿಯನಾದ ಅವನೇ ಈ ಕೃತ್ಯವನ್ನು ಎಸಗಿರುವನು. ಅವುಗಳಿಗೆ ಮಾತನಾಡುವ ಶಕ್ತಿ ಇದ್ದರೆ ನೀವು ಅವುಗಳೊಡನೆ ಕೇಳಿ ನೋಡಿರಿ.’’
21:64
فَرَجَعُوا إِلَىٰ أَنْفُسِهِمْ فَقَالُوا إِنَّكُمْ أَنْتُمُ الظَّالِمُونَ ۞
ಆಗ ಅವರು ಸ್ವತಃ ತಮ್ಮನ್ನುದ್ದೇಶಿಸಿ, ‘‘ನಿಜಕ್ಕೂ ನೀವೇ ಅಕ್ರಮಿಗಳು’’ ಎಂದು ಹೇಳಿಕೊಂಡರು.
21:65
ثُمَّ نُكِسُوا عَلَىٰ رُءُوسِهِمْ لَقَدْ عَلِمْتَ مَا هَٰؤُلَاءِ يَنْطِقُونَ ۞
ಆ ಬಳಿಕ ತಲೆ ತಗ್ಗಿಸಿ ‘‘ಅವುಗಳು ಮಾತನಾಡುವುದಿಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲಾ?’’ ಎಂದರು.
21:66
قَالَ أَفَتَعْبُدُونَ مِنْ دُونِ اللَّهِ مَا لَا يَنْفَعُكُمْ شَيْئًا وَلَا يَضُرُّكُمْ ۞
ಅವರು (ಇಬ್ರಾಹೀಮ್) ಹೇಳಿದರು; ನೀವೇನು, ಅಲ್ಲಾಹನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ಪೂಜಿಸುತ್ತೀರಾ?
21:67
أُفٍّ لَكُمْ وَلِمَا تَعْبُدُونَ مِنْ دُونِ اللَّهِ ۖ أَفَلَا تَعْقِلُونَ ۞
ನಿಮಗೂ ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುವ ಎಲ್ಲವುಗಳಿಗೂ ಧಿಕ್ಕಾರ. ನೀವೇನು ಆಲೋಚಿಸುವುದಿಲ್ಲವೇ?
21:68
قَالُوا حَرِّقُوهُ وَانْصُرُوا آلِهَتَكُمْ إِنْ كُنْتُمْ فَاعِلِينَ ۞
ಅವರು (ಪರಸ್ಪರ) ಹೇಳಿದರು; ನಿಮ್ಮ ದೇವರುಗಳಿಗೆ ನೆರವಾಗಲು ನೀವೇನಾದರೂ ಮಾಡುವವರಾಗಿದ್ದರೆ, ಅವನನ್ನು ಸುಟ್ಟು ಬಿಡಿರಿ.
21:69
قُلْنَا يَا نَارُ كُونِي بَرْدًا وَسَلَامًا عَلَىٰ إِبْرَاهِيمَ ۞
‘‘ಓ ಅಗ್ನಿ, ನೀನು ಇಬ್ರಾಹೀಮರ ಪಾಲಿಗೆ ತಣ್ಣಗಾಗು ಹಾಗೂ ಕ್ಷೇಮವಾಗಿಬಿಡು’’ ಎಂದು ನಾವು ಆದೇಶಿಸಿದೆವು.
21:70
وَأَرَادُوا بِهِ كَيْدًا فَجَعَلْنَاهُمُ الْأَخْسَرِينَ ۞
ಅವರು (ಊರವರು) ಅವರಿಗೆ (ಇಬ್ರಾಹೀಮರಿಗೆ) ಹಾನಿ ಮಾಡಲು ಯೋಜಿಸಿದ್ದರು. ಆದರೆ ನಾವು ಅವರನ್ನು (ಊರವರನ್ನು) ಸಂಪೂರ್ಣ ಸೋಲಿಸಿಬಿಟ್ಟೆವು.
21:71
وَنَجَّيْنَاهُ وَلُوطًا إِلَى الْأَرْضِ الَّتِي بَارَكْنَا فِيهَا لِلْعَالَمِينَ ۞
ಮತ್ತು ನಾವು ಅವರನ್ನು (ಇಬ್ರಾಹೀಮರನ್ನು) ಹಾಗೂ ಲೂತ್‌ರನ್ನು ರಕ್ಷಿಸಿ, ಲೋಕದವರಿಗೆಲ್ಲಾ ನಾವು ಶುಭವನ್ನಿಟ್ಟಿರುವ ನಾಡಿಗೆ ಕಳಿಸಿದೆವು.
21:72
وَوَهَبْنَا لَهُ إِسْحَاقَ وَيَعْقُوبَ نَافِلَةً ۖ وَكُلًّا جَعَلْنَا صَالِحِينَ ۞
ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್‌ರನ್ನು ನೀಡಿದೆವು ಮತ್ತು ಹೆಚ್ಚುವರಿಯಾಗಿ (ಮೊಮ್ಮಗನಾಗಿ) ಯಅಕೂಬ್‌ರನ್ನು ನೀಡಿದೆವು, ಮತ್ತು ನಾವು ಅವರೆಲ್ಲರನ್ನೂ ಸಜ್ಜನರಾಗಿಸಿದ್ದೆವು.
21:73
وَجَعَلْنَاهُمْ أَئِمَّةً يَهْدُونَ بِأَمْرِنَا وَأَوْحَيْنَا إِلَيْهِمْ فِعْلَ الْخَيْرَاتِ وَإِقَامَ الصَّلَاةِ وَإِيتَاءَ الزَّكَاةِ ۖ وَكَانُوا لَنَا عَابِدِينَ ۞
ನಾವು ಅವರನ್ನು, ನಮ್ಮ ಆದೇಶ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ನಾಯಕರಾಗಿ ಮಾಡಿದೆವು ಮತ್ತು ನಾವು ಅವರಿಗೆ, ಸತ್ಕರ್ಮಗಳನ್ನು ತಿಳಿಸುವ ಮತ್ತು ನಮಾರನ್ನು ಪಾಲಿಸಬೇಕು ಹಾಗೂ ಝಕಾತನ್ನು ಪಾವತಿಸಬೇಕೆನ್ನುವ ದಿವ್ಯವಾಣಿಯನ್ನು ಕಳಿಸಿದ್ದೆವು. ಅವರು ನಮ್ಮನ್ನೇ ಆರಾಧಿಸುವವರಾಗಿದ್ದರು.
21:74
وَلُوطًا آتَيْنَاهُ حُكْمًا وَعِلْمًا وَنَجَّيْنَاهُ مِنَ الْقَرْيَةِ الَّتِي كَانَتْ تَعْمَلُ الْخَبَائِثَ ۗ إِنَّهُمْ كَانُوا قَوْمَ سَوْءٍ فَاسِقِينَ ۞
ಇನ್ನು ಲೂತ್‌ರಿಗೆ ನಾವು ಅಧಿಕಾರವನ್ನೂ ಜ್ಞಾನವನ್ನೂ ನೀಡಿದ್ದೆವು ಮತ್ತು ತೀರಾ ಅಶ್ಲೀಲ ಕೃತ್ಯಗಳನ್ನು ಎಸಗುತ್ತಿದ್ದವರ ನಾಡಿನಿಂದ ನಾವು ಅವರನ್ನು ರಕ್ಷಿಸಿದೆವು. ಖಂಡಿತವಾಗಿಯೂ ಅವರು ಒಂದು ದುಷ್ಟ ಮತ್ತು ಅವಿಧೇಯ ಜನಾಂಗವಾಗಿದ್ದರು.
21:75
وَأَدْخَلْنَاهُ فِي رَحْمَتِنَا ۖ إِنَّهُ مِنَ الصَّالِحِينَ ۞
ಅವರನ್ನು (ಲೂತ್‌ರನ್ನು) ನಾವು ನಮ್ಮ ಅನುಗ್ರಹದ ವ್ಯಾಪ್ತಿಗೆೆ ಸೇರಿಸಿಕೊಂಡೆವು. ಅವರು ಖಂಡಿತ ಒಬ್ಬ ಸಜ್ಜನರಾಗಿದ್ದರು.
21:76
وَنُوحًا إِذْ نَادَىٰ مِنْ قَبْلُ فَاسْتَجَبْنَا لَهُ فَنَجَّيْنَاهُ وَأَهْلَهُ مِنَ الْكَرْبِ الْعَظِيمِ ۞
ಈ ಹಿಂದೆ ನೂಹರು ನಮ್ಮನ್ನು ಕರೆದು ಪ್ರಾರ್ಥಿಸಿದಾಗ, ನಾವು ಅವರಿಗೆ ಉತ್ತರಿಸಿದ್ದೆವು ಮತ್ತು ನಾವು ಅವರನ್ನು ಹಾಗೂ ಅವರ ಕಡೆಯವರನ್ನು ಒಂದು ಘೋರ ವಿಪತ್ತಿನಿಂದ ರಕ್ಷಿಸಿದೆವು.
21:77
وَنَصَرْنَاهُ مِنَ الْقَوْمِ الَّذِينَ كَذَّبُوا بِآيَاتِنَا ۚ إِنَّهُمْ كَانُوا قَوْمَ سَوْءٍ فَأَغْرَقْنَاهُمْ أَجْمَعِينَ ۞
ನಮ್ಮ ವಚನಗಳನ್ನು ಸುಳ್ಳೆಂದ ಜನಾಂಗದವರ ವಿರುದ್ಧ ನಾವು ಅವರಿಗೆ ನೆರವಾದೆವು. ಅದು ಖಂಡಿತ ಬಹಳ ದುಷ್ಟ ಜನಾಂಗವಾಗಿತ್ತು. ನಾವು ಅವರೆಲ್ಲರನ್ನೂ ಮುಳುಗಿಸಿ ಬಿಟ್ಟೆವು.
21:78
وَدَاوُودَ وَسُلَيْمَانَ إِذْ يَحْكُمَانِ فِي الْحَرْثِ إِذْ نَفَشَتْ فِيهِ غَنَمُ الْقَوْمِ وَكُنَّا لِحُكْمِهِمْ شَاهِدِينَ ۞
ಇನ್ನು, ದಾವೂದ್ ಮತ್ತು ಸುಲೈಮಾನರು. ಅವರಿಬ್ಬರೂ ಒಂದು ಹೊಲದ ಕುರಿತು ತೀರ್ಪು ನೀಡಲು ಹೊರಟಿದ್ದರು. ರಾತ್ರಿಯ ವೇಳೆ ಕೆಲವರ ಆಡುಗಳು ಅಲ್ಲಿ (ಆ ಹೊಲದಲ್ಲಿ) ಮೆದ್ದಿದ್ದವು ಮತ್ತು ಅವರ ತೀರ್ಪಿಗೆ ನಾವು ಸಾಕ್ಷಿಗಳಾಗಿದ್ದೆವು.
21:79
فَفَهَّمْنَاهَا سُلَيْمَانَ ۚ وَكُلًّا آتَيْنَا حُكْمًا وَعِلْمًا ۚ وَسَخَّرْنَا مَعَ دَاوُودَ الْجِبَالَ يُسَبِّحْنَ وَالطَّيْرَ ۚ وَكُنَّا فَاعِلِينَ ۞
ನಾವು ಸುಲೈಮಾನರಿಗೆ ಅದರ ವಾಸ್ತವವನ್ನು ಸೂಚಿಸಿದೆವು ಮತ್ತು ನಾವು ಅವರಿಬ್ಬರಿಗೂ ಜಾಣ್ಮೆಯನ್ನು ಹಾಗೂ ಜ್ಞಾನವನ್ನು ನೀಡಿದ್ದೆವು ಮತ್ತು ನಾವು ದಾವೂದರ ಜೊತೆ (ನಮ್ಮ) ಪಾವಿತ್ರ್ಯವನ್ನು ಜಪಿಸುವಂತೆ ಪರ್ವತಗಳನ್ನು ಹಾಗೂ ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದ್ದೆವು. ಇದನ್ನೆಲ್ಲಾ ನಾವೇ ಮಾಡಿದ್ದೆವು.
21:80
وَعَلَّمْنَاهُ صَنْعَةَ لَبُوسٍ لَكُمْ لِتُحْصِنَكُمْ مِنْ بَأْسِكُمْ ۖ فَهَلْ أَنْتُمْ شَاكِرُونَ ۞
ನಿಮಗಾಗಿ, ನಿಮ್ಮ ಯುದ್ಧಗಳಲ್ಲಿ ನಿಮ್ಮನ್ನು ರಕ್ಷಿಸುವ (ಉಕ್ಕಿನ) ಕವಚವನ್ನು ನಿರ್ಮಿಸುವ ಕಲೆಯನ್ನು ನಾವು ಅವರಿಗೆ ಕಲಿಸಿದೆವು. (ಇನ್ನಾದರೂ) ನೀವು ಕೃತಜ್ಞರಾಗುವಿರಾ?
21:81
وَلِسُلَيْمَانَ الرِّيحَ عَاصِفَةً تَجْرِي بِأَمْرِهِ إِلَى الْأَرْضِ الَّتِي بَارَكْنَا فِيهَا ۚ وَكُنَّا بِكُلِّ شَيْءٍ عَالِمِينَ ۞
ಮತ್ತು ನಾವು ಬಿರುಗಾಳಿಯನ್ನು ಸುಲೈಮಾನರಿಗೆ ಅಧೀನಗೊಳಿಸಿದೆವು. ಅದು ಅವರ ಆದೇಶದಂತೆ, ನಾವು ಸಮೃದ್ಧಿಯನ್ನಿಟ್ಟಿರುವ ನೆಲದೆಡೆಗೆ ಚಲಿಸುತ್ತಿತ್ತು. ನಾವಂತು ಎಲ್ಲವನ್ನೂ ಬಲ್ಲವರಾಗಿದ್ದೇವೆ.
21:82
وَمِنَ الشَّيَاطِينِ مَنْ يَغُوصُونَ لَهُ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَافِظِينَ ۞
ಶೈತಾನರ (ಜಿನ್ನ್‌ಗಳ) ಪೈಕಿ ಅವರಿಗಾಗಿ (ಸುಲೈಮಾನರಿಗಾಗಿ, ಸಾಗರದಲ್ಲಿ) ಮುಳುಗಿ ಬರುವ ಹಾಗೂ ಇತರ ಕೆಲಸಗಳನ್ನೂ ಮಾಡುವ ಕೆಲವರಿದ್ದರು. ನಾವೇ ಅವರ ರಕ್ಷಕರಾಗಿದ್ದೆವು.
21:83
۞ وَأَيُّوبَ إِذْ نَادَىٰ رَبَّهُ أَنِّي مَسَّنِيَ الضُّرُّ وَأَنْتَ أَرْحَمُ الرَّاحِمِينَ ۞
ಮತ್ತು ಅಯ್ಯೂಬರು, ‘‘ನಾನು ಭಾರೀ ಸಂಕಷ್ಟದಲ್ಲಿದ್ದೇನೆ ಮತ್ತು ನೀನು ಅತ್ಯಧಿಕ ಕರುಣೆ ತೋರುವವನಾಗಿರುವೆ’’ ಎಂದು ತಮ್ಮ ಒಡೆಯನನ್ನು ಕೂಗಿ ಪ್ರಾರ್ಥಿಸಿದ್ದರು.
21:84
فَاسْتَجَبْنَا لَهُ فَكَشَفْنَا مَا بِهِ مِنْ ضُرٍّ ۖ وَآتَيْنَاهُ أَهْلَهُ وَمِثْلَهُمْ مَعَهُمْ رَحْمَةً مِنْ عِنْدِنَا وَذِكْرَىٰ لِلْعَابِدِينَ ۞
ಕೊನೆಗೆ ನಾವು ಅವರಿಗೆ ಉತ್ತರ ನೀಡಿದೆವು, ಅವರ ಸಂಕಷ್ಟವನ್ನು ನಿವಾರಿಸಿದೆವು. ಮತ್ತು ನಾವು ಅವರಿಗೂ ಅವರ ಮನೆಯವರಿಗೂ, ಅವರ ಜೊತೆಗಿದ್ದ ಅವರಂತಹ ಇತರರಿಗೂ ನಮ್ಮ ಕಡೆಯಿಂದ ವಿಶೇಷ ಅನುಗ್ರಹವನ್ನು ಹಾಗೂ ಭಕ್ತರಿಗಾಗಿ ಉಪದೇಶವನ್ನು ಕರುಣಿಸಿದೆವು.
21:85
وَإِسْمَاعِيلَ وَإِدْرِيسَ وَذَا الْكِفْلِ ۖ كُلٌّ مِنَ الصَّابِرِينَ ۞
ಹಾಗೆಯೇ ಇಸ್ಮಾಈಲ್ ಹಾಗೂ ಇದ್ರೀಸ್ ಹಾಗೂ ಝುಲ್‌ಕಿಫ್ಲ್. ಅವರೆಲ್ಲರೂ ಸಹನಶೀಲರಾಗಿದ್ದರು.
21:86
وَأَدْخَلْنَاهُمْ فِي رَحْمَتِنَا ۖ إِنَّهُمْ مِنَ الصَّالِحِينَ ۞
ನಾವು ಅವರನ್ನು ನಮ್ಮ ಅನುಗ್ರಹದ ವ್ಯಾಪ್ತಿಗೆ ಸೇರಿಸಿದೆವು. ಅವರು ಖಂಡಿತ ಸಜ್ಜನರಾಗಿದ್ದರು.
21:87
وَذَا النُّونِ إِذْ ذَهَبَ مُغَاضِبًا فَظَنَّ أَنْ لَنْ نَقْدِرَ عَلَيْهِ فَنَادَىٰ فِي الظُّلُمَاتِ أَنْ لَا إِلَٰهَ إِلَّا أَنْتَ سُبْحَانَكَ إِنِّي كُنْتُ مِنَ الظَّالِمِينَ ۞
ಇನ್ನು ಮೀನಿನವರು (ಯೂನುಸ್), ತಾನು ಕೋಪಗೊಂಡು ಹೊರಟು ಬಿಟ್ಟಾಗ, ನಾವು ಅವರನ್ನು ಹಿಡಿಯಲಾರೆವೆಂದು ಭಾವಿಸಿದ್ದರು. ಕೊನೆಗೆ ಅವರು ಕತ್ತಲುಗಳೊಳಗಿಂದ, ‘‘(ಓ ಅಲ್ಲಾಹ್) ನಿನ್ನ ಹೊರತು ಬೇರೆ ದೇವರಿಲ್ಲ. ನೀನು ಪರಮ ಪಾವನನು. ಖಂಡಿತವಾಗಿಯೂ ನಾನೇ ಅಕ್ರಮಿಯಾಗಿದ್ದೆ’’ ಎಂದು ಮೊರೆ ಇಟ್ಟಿದ್ದರು.
21:88
فَاسْتَجَبْنَا لَهُ وَنَجَّيْنَاهُ مِنَ الْغَمِّ ۚ وَكَذَٰلِكَ نُنْجِي الْمُؤْمِنِينَ ۞
ನಾವು ಅವರಿಗೆ ಉತ್ತರಿಸಿದೆವು ಮತ್ತು ಅವರನ್ನು ಸಂಕಟದಿಂದ ಪಾರುಗೊಳಿಸಿದೆವು. ಈ ರೀತಿ ನಾವು ವಿಶ್ವಾಸಿಗಳನ್ನು ಕಾಪಾಡುವೆವು.
21:89
وَزَكَرِيَّا إِذْ نَادَىٰ رَبَّهُ رَبِّ لَا تَذَرْنِي فَرْدًا وَأَنْتَ خَيْرُ الْوَارِثِينَ ۞
ಮತ್ತು ಝಕರಿಯ್ಯ, ‘‘ನನ್ನೊಡೆಯಾ, ನನ್ನನ್ನು ನೀನು ಒಂಟಿಯಾಗಿ ಬಿಟ್ಟು ಬಿಡಬೇಡ. ನಿಜವಾಗಿ ನೀನೇ ಅತ್ಯುತ್ತಮ ಉತ್ತರಾಧಿಕಾರಿ’’ ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟಿದ್ದರು.
21:90
فَاسْتَجَبْنَا لَهُ وَوَهَبْنَا لَهُ يَحْيَىٰ وَأَصْلَحْنَا لَهُ زَوْجَهُ ۚ إِنَّهُمْ كَانُوا يُسَارِعُونَ فِي الْخَيْرَاتِ وَيَدْعُونَنَا رَغَبًا وَرَهَبًا ۖ وَكَانُوا لَنَا خَاشِعِينَ ۞
ನಾವು ಅವರಿಗೆ ಉತ್ತರ ನೀಡಿದೆವು ಮತ್ತು ನಾವು ಅವರಿಗೆ ಯಹ್ಯಾರನ್ನು ದಯಪಾಲಿಸಿದೆವು ಹಾಗೂ ಅವರಿಗಾಗಿ ಅವರ ಪತ್ನಿಯನ್ನು ಗುಣಪಡಿಸಿದೆವು. ಅವರೆಲ್ಲಾ ಸತ್ಕಾರ್ಯಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸುವವರು ಮತ್ತು ನಿರೀಕ್ಷೆಯೊಂದಿಗೂ ಭಯದೊಂದಿಗೂ ನಮ್ಮನ್ನು ಪ್ರಾರ್ಥಿಸುವವರಾಗಿದ್ದರು. ಅವರು ನಮ್ಮೆದುರು ತುಂಬಾ ವಿನಯಶೀಲರಾಗಿದ್ದರು.
21:91
وَالَّتِي أَحْصَنَتْ فَرْجَهَا فَنَفَخْنَا فِيهَا مِنْ رُوحِنَا وَجَعَلْنَاهَا وَابْنَهَا آيَةً لِلْعَالَمِينَ ۞
ಮತ್ತು ನಾವು ಮಾನ ಸಂರಕ್ಷಿಸಿದಾಕೆ (ಮರ್ಯಮ್). ಆಕೆಯೊಳಗೆ ನಾವು ನಮ್ಮ ಆತ್ಮದ ಅಂಶವನ್ನು ಊದಿದೆವು ಮತ್ತು ಆಕೆಯನ್ನೂ ಆಕೆಯ ಪುತ್ರನನ್ನೂ ಸರ್ವಲೋಕಗಳ ಪಾಲಿಗೆ ದೃಷ್ಟಾಂತವಾಗಿಸಿದೆವು.
21:92
إِنَّ هَٰذِهِ أُمَّتُكُمْ أُمَّةً وَاحِدَةً وَأَنَا رَبُّكُمْ فَاعْبُدُونِ ۞
ಈ ನಿಮ್ಮ (ಮಾನವರ) ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಒಡೆಯನು. ನೀವು ನನ್ನನ್ನೇ ಆರಾಧಿಸಿರಿ.
21:93
وَتَقَطَّعُوا أَمْرَهُمْ بَيْنَهُمْ ۖ كُلٌّ إِلَيْنَا رَاجِعُونَ ۞
ಜನರು ತಮ್ಮ ನಡುವೆ ತಮ್ಮ ಧರ್ಮವನ್ನು ಛಿದ್ರಗೊಳಿಸಿ ಬಿಟ್ಟಿದ್ದಾರೆ. (ಕೊನೆಗೆ) ಎಲ್ಲರೂ ನಮ್ಮೆಡೆಗೇ ಮರಳಬೇಕಾಗಿದೆ.
21:94
فَمَنْ يَعْمَلْ مِنَ الصَّالِحَاتِ وَهُوَ مُؤْمِنٌ فَلَا كُفْرَانَ لِسَعْيِهِ وَإِنَّا لَهُ كَاتِبُونَ ۞
ಸತ್ಕರ್ಮವನ್ನು ಮಾಡಿದವನು ವಿಶ್ವಾಸಿಯಾಗಿದ್ದರೆ ಅವನ ಶ್ರಮವು ವ್ಯರ್ಥವಾಗದು. ನಾವು ಎಲ್ಲವನ್ನೂ ದಾಖಲಿಸಿಡುತ್ತಿದ್ದೇವೆ.
21:95
وَحَرَامٌ عَلَىٰ قَرْيَةٍ أَهْلَكْنَاهَا أَنَّهُمْ لَا يَرْجِعُونَ ۞
ನಾವು ನಾಶಪಡಿಸಿರುವ ನಾಡುಗಳ ಜನರು ಮರಳಿ ಬರಲಾರರು -
21:96
حَتَّىٰ إِذَا فُتِحَتْ يَأْجُوجُ وَمَأْجُوجُ وَهُمْ مِنْ كُلِّ حَدَبٍ يَنْسِلُونَ ۞
ಯಅಜೂಜ್ ಮತ್ತು ಮಅಜೂಜ್‌ಗಳು ಬಿಡುಗಡೆಗೊಂಡು ಎಲ್ಲ ದಿಣ್ಣೆಗಳಿಂದ ಇಳಿದು ಬರುವ ತನಕ.
21:97
وَاقْتَرَبَ الْوَعْدُ الْحَقُّ فَإِذَا هِيَ شَاخِصَةٌ أَبْصَارُ الَّذِينَ كَفَرُوا يَا وَيْلَنَا قَدْ كُنَّا فِي غَفْلَةٍ مِنْ هَٰذَا بَلْ كُنَّا ظَالِمِينَ ۞
ಖಚಿತ ವಾಗ್ದಾನದ ಸಮಯವು (ಪುನರುತ್ಥಾನ ದಿನವು) ಹತ್ತಿರ ಬಂದಾಗ, ಧಿಕ್ಕಾರಿಗಳ ಕಣ್ಣುಗಳು ದಿಗ್ಭ್ರಮೆಗೊಳ್ಳುವವು. ‘‘ಅಯ್ಯೋ ನಮ್ಮ ದುಸ್ಥಿತಿ! ಈ ಕುರಿತು ನಾವು ನಿರ್ಲಕ್ಷ್ಯದಲ್ಲಿದ್ದೆವು. ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ (ಎಂದು ಅವರು ಹೇಳುವರು).
21:98
إِنَّكُمْ وَمَا تَعْبُدُونَ مِنْ دُونِ اللَّهِ حَصَبُ جَهَنَّمَ أَنْتُمْ لَهَا وَارِدُونَ ۞
ಖಂಡಿತವಾಗಿಯೂ ನೀವು ಹಾಗೂ ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿದ್ದ ವಸ್ತುಗಳೆಲ್ಲಾ ನರಕದ ಇಂಧನಗಳು. ನೀವು ಅದರೊಳಗೆ ಹೋಗುವಿರಿ.
21:99
لَوْ كَانَ هَٰؤُلَاءِ آلِهَةً مَا وَرَدُوهَا ۖ وَكُلٌّ فِيهَا خَالِدُونَ ۞
ಅವುಗಳೆೆಲ್ಲಾ ನಿಜಕ್ಕೂ ದೇವರುಗಳಾಗಿದ್ದರೆ ಅದರೊಳಗೆ ಹೋಗುತ್ತಿರಲಿಲ್ಲ. ಅವು ಸದಾಕಾಲ ಅಲ್ಲೇ ಇರುವವು.
21:100
لَهُمْ فِيهَا زَفِيرٌ وَهُمْ فِيهَا لَا يَسْمَعُونَ ۞
ಅಲ್ಲಿ (ನರಕದಲ್ಲಿ) ಅವರ ಚೀರಾಟವೇ ಮೆರೆದಿರುವುದು. ಅವರಿಗೆ ಅದರಲ್ಲಿ ಬೇರೇನೂ ಕೇಳಿಸದು.
21:101
إِنَّ الَّذِينَ سَبَقَتْ لَهُمْ مِنَّا الْحُسْنَىٰ أُولَٰئِكَ عَنْهَا مُبْعَدُونَ ۞
ಅತ್ತ, ನಮ್ಮ ಕಡೆಯಿಂದ ಯಾರ ಪರವಾಗಿ ಹಿತದ ನಿರ್ಧಾರವಾಗಿರುವುದೋ ಅವರನ್ನು ಅದರಿಂದ (ನರಕದಿಂದ) ದೂರವಿಡಲಾಗುವುದು.
21:102
لَا يَسْمَعُونَ حَسِيسَهَا ۖ وَهُمْ فِي مَا اشْتَهَتْ أَنْفُسُهُمْ خَالِدُونَ ۞
ಅದರ ಸಪ್ಪಳ ಕೂಡಾ ಅವರಿಗೆ ಕೇಳಿಸದು. ಅವರು ತಮಗಿಷ್ಟವಿರುವಲ್ಲಿ ಸದಾಕಾಲ ಇರುವರು.
21:103
لَا يَحْزُنُهُمُ الْفَزَعُ الْأَكْبَرُ وَتَتَلَقَّاهُمُ الْمَلَائِكَةُ هَٰذَا يَوْمُكُمُ الَّذِي كُنْتُمْ تُوعَدُونَ ۞
(ಅಂದಿನ) ಮಹಾ ಚಿಂತೆಯು ಅವರನ್ನು ಕಾಡದು ಮತ್ತು ‘‘ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ದಿನ’’ ಎನ್ನುತ್ತಾ ಮಲಕ್‌ಗಳು ಅವರನ್ನು ಸ್ವಾಗತಿಸುವರು.
21:104
يَوْمَ نَطْوِي السَّمَاءَ كَطَيِّ السِّجِلِّ لِلْكُتُبِ ۚ كَمَا بَدَأْنَا أَوَّلَ خَلْقٍ نُعِيدُهُ ۚ وَعْدًا عَلَيْنَا ۚ إِنَّا كُنَّا فَاعِلِينَ ۞
ಅಂದು ನಾವು ಕಾಗದದ ಪುಟಗಳನ್ನು ಮಡಚಿದಂತೆ ಆಕಾಶವನ್ನು ಮಡಚಿ ಬಿಡುವೆವು. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ಆ (ಸೃಷ್ಟಿ) ಕಾರ್ಯವನ್ನು ಪುನರಾವರ್ತಿಸುವೆವು. ಇದು ನಮ್ಮ ಕರ್ತವ್ಯವಾಗಿರುವ ವಾಗ್ದಾನ. ನಾವು ಖಂಡಿತ ಅದನ್ನು ಮಾಡಿಯೇ ಬಿಡುವೆವು.
21:105
وَلَقَدْ كَتَبْنَا فِي الزَّبُورِ مِنْ بَعْدِ الذِّكْرِ أَنَّ الْأَرْضَ يَرِثُهَا عِبَادِيَ الصَّالِحُونَ ۞
ನಾವು ಝಬೂರ್‌ನಲ್ಲಿ ಉಪದೇಶದ ಬಳಿಕ, ‘‘ನನ್ನ ಸಜ್ಜನ ದಾಸರೇ ಭೂಮಿಯ ಉತ್ತರಾಧಿಕಾರಿಗಳಾಗುವರು’’ ಎಂದು ಬರೆದಿರುವೆವು.
21:106
إِنَّ فِي هَٰذَا لَبَلَاغًا لِقَوْمٍ عَابِدِينَ ۞
ಭಕ್ತ ಜನರಿಗೆ ಇದರಲ್ಲಿ ಖಂಡಿತ ಶುಭವಾರ್ತೆ ಇದೆ.
21:107
وَمَا أَرْسَلْنَاكَ إِلَّا رَحْمَةً لِلْعَالَمِينَ ۞
(ದೂತರೇ,) ನಾವು ನಿಮ್ಮನ್ನು ಸರ್ವಲೋಕಗಳಿಗೆ ಅನುಗ್ರಹವಾಗಿ ಕಳಿಸಿರುವೆವು.
21:108
قُلْ إِنَّمَا يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَهَلْ أَنْتُمْ مُسْلِمُونَ ۞
ಹೇಳಿರಿ; ಏಕಮಾತ್ರ ದೇವನೇ ನಿಮ್ಮ ದೇವನೆಂದು ನನ್ನ ಕಡೆಗೆ ದಿವ್ಯವಾಣಿಯನ್ನು ರವಾನಿಸಲಾಗಿದೆ. ಇನ್ನಾದರೂ ನೀವು ಶರಣಾಗುವಿರಾ?
21:109
فَإِنْ تَوَلَّوْا فَقُلْ آذَنْتُكُمْ عَلَىٰ سَوَاءٍ ۖ وَإِنْ أَدْرِي أَقَرِيبٌ أَمْ بَعِيدٌ مَا تُوعَدُونَ ۞
(ದೂತರೇ,) ಅವರು ನಿರ್ಲಕ್ಷಿಸಿದರೆ ಹೇಳಿರಿ; ನಾನಂತು ಸಮಾನವಾಗಿ ನಿಮಗೆಲ್ಲಾ ಎಚ್ಚರಿಕೆ ನೀಡಿದ್ದೇನೆ. ನಿಮಗೆ ವಾಗ್ದಾನ ಮಾಡಲಾಗಿರುವ ದಿನವು (ಲೋಕಾಂತ್ಯವು) ಹತ್ತಿರವಿದೆಯೋ ದೂರವಿದೆಯೋ ಎಂಬುದು ನನಗೆ ತಿಳಿಯದು.
21:110
إِنَّهُ يَعْلَمُ الْجَهْرَ مِنَ الْقَوْلِ وَيَعْلَمُ مَا تَكْتُمُونَ ۞
ಅವನು, ಗುಟ್ಟಿನ ಮಾತುಗಳನ್ನೂ ನೀವು ಅಡಗಿಸಿಡುವ ವಿಷಯಗಳನ್ನೂ ಖಂಡಿತ ಬಲ್ಲನು.
21:111
وَإِنْ أَدْرِي لَعَلَّهُ فِتْنَةٌ لَكُمْ وَمَتَاعٌ إِلَىٰ حِينٍ ۞
ನನಗೆ ತಿಳಿಯದು; ಅದು (ಲೋಕಾಂತ್ಯದಲ್ಲಿನ ವಿಳಂಬವು) ನಿಮ್ಮ ಪಾಲಿಗೆ ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಕಾಲದ ವರೆಗಿನ, ವಿಸ್ತರಣೆಯೂ ಆಗಿರಬಹುದು.
21:112
قَالَ رَبِّ احْكُمْ بِالْحَقِّ ۗ وَرَبُّنَا الرَّحْمَٰنُ الْمُسْتَعَانُ عَلَىٰ مَا تَصِفُونَ ۞
ಅವರು (ದೂತರು) ಹೇಳಿದರು; ನನ್ನೊಡೆಯಾ, ನೀನು ನ್ಯಾಯದೊಂದಿಗೆ ತೀರ್ಮಾನಿಸಿಬಿಡು. ನಮ್ಮ ಒಡೆಯನು ಪರಮ ದಯಾಳುವಾಗಿದ್ದಾನೆ. ನೀವು ಆಡುವ ಎಲ್ಲ ಮಾತುಗಳ ಕುರಿತಂತೆ ಅವನಿಂದಲೇ ನೆರವನ್ನು ಬೇಡಲಾಗುತ್ತದೆ.