Al-Qiyamah (The resurrection)
75. ಅಲ್ ಕಿಯಾಮಃ(ಪುನರುತ್ಥಾನ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
75:1
لَا أُقْسِمُ بِيَوْمِ الْقِيَامَةِ ۞
ಅಲ್ಲ, ನಾನು ಪುನರುತ್ಥಾನ ದಿನದ ಆಣೆ ಹಾಕುತ್ತೇನೆ.
75:2
وَلَا أُقْسِمُ بِالنَّفْسِ اللَّوَّامَةِ ۞
ಅಲ್ಲ, ನಾನು ದೂಷಿಸುವ ಚಿತ್ತದ ಆಣೆ ಹಾಕುತ್ತೇನೆ.
75:3
أَيَحْسَبُ الْإِنْسَانُ أَلَّنْ نَجْمَعَ عِظَامَهُ ۞
ಮನುಷ್ಯನೇನು, ಅವನ ಎಲುಬುಗಳನ್ನು ನಾವು (ಮತ್ತೆ) ಸಂಘಟಿಸಲಾರೆವೆಂದು ಭಾವಿಸಿದ್ದಾನೆಯೇ?
75:4
بَلَىٰ قَادِرِينَ عَلَىٰ أَنْ نُسَوِّيَ بَنَانَهُ ۞
ಯಾಕಿಲ್ಲ? ನಾವಂತೂ ಅವನ ಬೆರಳ ತುದಿಗಳನ್ನೂ ಮತ್ತೆ ರಚಿಸಲು ಸಮರ್ಥರಾಗಿದ್ದೇವೆ.
75:5
بَلْ يُرِيدُ الْإِنْسَانُ لِيَفْجُرَ أَمَامَهُ ۞
ನಿಜವಾಗಿ, ಮನುಷ್ಯನು ತನ್ನ ಪಾಪಕೃತ್ಯಗಳಲ್ಲೇ ಮುಂದುವರಿಯಬಯಸುತ್ತಾನೆ.
75:6
يَسْأَلُ أَيَّانَ يَوْمُ الْقِيَامَةِ ۞
‘‘ಪುನರುತ್ಥಾನ ದಿನವು ಅದೆಂದು ಬಂದೀತು?’’ ಎಂದು ಅವನು (ವ್ಯಂಗ್ಯವಾಗಿ) ಪ್ರಶ್ನಿಸುತ್ತಾನೆ.
75:7
فَإِذَا بَرِقَ الْبَصَرُ ۞
ಕಣ್ಣುಗಳು ಕೋರೈಸುವಾಗ.
75:8
وَخَسَفَ الْقَمَرُ ۞
ಚಂದ್ರಕ್ಕೆ ಗ್ರಹಣವಾದಾಗ.
75:9
وَجُمِعَ الشَّمْسُ وَالْقَمَرُ ۞
ಮತ್ತು ಸೂರ್ಯ ಹಾಗೂ ಚಂದ್ರರನ್ನು ಒಂದು ಗೂಡಿಸಲಾದಾಗ.
75:10
يَقُولُ الْإِنْسَانُ يَوْمَئِذٍ أَيْنَ الْمَفَرُّ ۞
ಆ ದಿನ ಮನುಷ್ಯನು ‘‘ಪಲಾಯನಕ್ಕೆ ದಾರಿ ಎಲ್ಲಿದೆ?’’ ಎಂದು ಕೇಳುವನು.
75:11
كَلَّا لَا وَزَرَ ۞
ಖಂಡಿತ ಇಲ್ಲ, ಎಲ್ಲೂ ಆಶ್ರಯವಿಲ್ಲ.
75:12
إِلَىٰ رَبِّكَ يَوْمَئِذٍ الْمُسْتَقَرُّ ۞
ಅಂದು ಆಶ್ರಯವಿರುವುದು ನಿಮ್ಮೊಡೆಯನ ಬಳಿಯಲ್ಲಿ ಮಾತ್ರ.
75:13
يُنَبَّأُ الْإِنْسَانُ يَوْمَئِذٍ بِمَا قَدَّمَ وَأَخَّرَ ۞
ಅಂದು ಅವನು ಮನುಷ್ಯನಿಗೆ ತಿಳಿಸುವನು, ಆತನು ಮುಂದೆ ಕಳಿಸಿದ್ದ ಮತ್ತು ಹಿಂದೆ ಬಿಟ್ಟು ಬಂದಿದ್ದ ಕರ್ಮಗಳ ಕುರಿತು.
75:14
بَلِ الْإِنْسَانُ عَلَىٰ نَفْسِهِ بَصِيرَةٌ ۞
ನಿಜವಾಗಿ ಮನುಷ್ಯನು ತನ್ನ ಕುರಿತು ತಾನೇ ಸಾಕ್ಷಿಯಾಗಿದ್ದಾನೆ.
75:15
وَلَوْ أَلْقَىٰ مَعَاذِيرَهُ ۞
ಅವನು ಅದೆಷ್ಟೇ ನೆಪಗಳನ್ನೊಡ್ಡಿದರೂ ಸರಿಯೇ.
75:16
لَا تُحَرِّكْ بِهِ لِسَانَكَ لِتَعْجَلَ بِهِ ۞
(ದೂತರೇ,) ನೀವು ಇದಕ್ಕಾಗಿ (ದಿವ್ಯವಾಣಿಯನ್ನು ನೆನಪಿಟ್ಟುಕೊಳ್ಳಲಿಕ್ಕಾಗಿ) ಆತುರವಾಗಿ ನಿಮ್ಮ ನಾಲಿಗೆಯನ್ನು ಚಲಿಸಬೇಡಿ.
75:17
إِنَّ عَلَيْنَا جَمْعَهُ وَقُرْآنَهُ ۞
ಇದನ್ನು ಸಂಗ್ರಹಿಸುವ ಹಾಗೂ ಓದಿಸುವ ಹೊಣೆ ಖಂಡಿತ ನಮ್ಮ ಮೇಲಿದೆ.
75:18
فَإِذَا قَرَأْنَاهُ فَاتَّبِعْ قُرْآنَهُ ۞
ಆದ್ದರಿಂದ ನಾವು ಇದನ್ನು ಓದುವಾಗ, ನೀವು ಇದರ ಪಠಣವನ್ನು ಅನುಸರಿಸಿರಿ.
75:19
ثُمَّ إِنَّ عَلَيْنَا بَيَانَهُ ۞
ಆ ಬಳಿಕ ಇದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ.
75:20
كَلَّا بَلْ تُحِبُّونَ الْعَاجِلَةَ ۞
ಹಾಗೇನೂ ಅಲ್ಲ. (ಜನರೇ,) ನೀವು ತುರ್ತಾಗಿ ಸಿಗುವುದನ್ನು (ಇಹ ಲೋಕವನ್ನು) ಮಾತ್ರ ಪ್ರೀತಿಸುತ್ತೀರಿ.
75:21
وَتَذَرُونَ الْآخِرَةَ ۞
ಮತ್ತು ಅನಂತರದ್ದನ್ನು (ಪರಲೋಕವನ್ನು) ಬಿಟ್ಟು ಬಿಡುತ್ತೀರಿ.
75:22
وُجُوهٌ يَوْمَئِذٍ نَاضِرَةٌ ۞
ಅಂದು ಹಲವು ಮುಖಗಳು ಅರಳಿರುವವು.
75:23
إِلَىٰ رَبِّهَا نَاظِرَةٌ ۞
ಅವು ತಮ್ಮ ಒಡೆಯನೆಡೆಗೆ ನೋಡುತ್ತಿರುವವು.
75:24
وَوُجُوهٌ يَوْمَئِذٍ بَاسِرَةٌ ۞
ಮತ್ತೆ ಕೆಲವು ಮುಖಗಳು ಅಂದು ಬಾಡಿರುವವು.
75:25
تَظُنُّ أَنْ يُفْعَلَ بِهَا فَاقِرَةٌ ۞
ತಮ್ಮ ಜೊತೆ ಸೊಂಟ ಮುರಿಯುವಂತಹ ವ್ಯವಹಾರ ನಡೆಯುವುದನ್ನು ಅವು ನಿರೀಕ್ಷಿಸುತ್ತಿರುವವು.
75:26
كَلَّا إِذَا بَلَغَتِ التَّرَاقِيَ ۞
ಹಾಗಲ್ಲ. ಜೀವವು ಕೊರಳನ್ನು ತಲುಪಿದಾಗ,
75:27
وَقِيلَ مَنْ ۜ رَاقٍ ۞
ಜನರು, ‘‘ಮಾಂತ್ರಿಕನೆಲ್ಲಿದ್ದಾನೆ?’’ ಎನ್ನುವರು.
75:28
وَظَنَّ أَنَّهُ الْفِرَاقُ ۞
ಅದು (ತನ್ನ) ವಿದಾಯದ ಸಮಯ ಎಂದು (ಸಾಯುತ್ತಿರುವವನಿಗೆ) ಅನಿಸುವುದು.
75:29
وَالْتَفَّتِ السَّاقُ بِالسَّاقِ ۞
(ಸತ್ತವನ) ಕಾಲುಗಳನ್ನು ಸೇರಿಸಿ ಕಟ್ಟಲಾಗುವುದು.
75:30
إِلَىٰ رَبِّكَ يَوْمَئِذٍ الْمَسَاقُ ۞
ಅಂದು ನೀನು ನಿನ್ನ ಒಡೆಯನೆಡೆಗೆ ಹೊರಡ ಬೇಕಾಗುವುದು.
75:31
فَلَا صَدَّقَ وَلَا صَلَّىٰ ۞
ಅವನು ಸತ್ಯವನ್ನು ಸಮರ್ಥಿಸಲಿಲ್ಲ ಮತ್ತು ನಮಾಝನ್ನು ಸಲ್ಲಿಸಲಿಲ್ಲ.
75:32
وَلَٰكِنْ كَذَّبَ وَتَوَلَّىٰ ۞
ಅವನು (ಸತ್ಯವನ್ನು) ತಿರಸ್ಕರಿಸಿದನು ಹಾಗೂ ಕಡೆಗಣಿಸಿದನು.
75:33
ثُمَّ ذَهَبَ إِلَىٰ أَهْلِهِ يَتَمَطَّىٰ ۞
ಮತ್ತು ಹೆಮ್ಮೆಯಿಂದ ಬೀಗುತ್ತಾ ತನ್ನ ಮನೆಯವರ ಬಳಿಗೆ ಹೊರಟನು.
75:34
أَوْلَىٰ لَكَ فَأَوْلَىٰ ۞
ಅಯ್ಯೋ ನಿನ್ನ ದುಸ್ಥಿತಿಯೇ,
75:35
ثُمَّ أَوْلَىٰ لَكَ فَأَوْلَىٰ ۞
ಅಯ್ಯೋ ನಿನ್ನ ದುಸ್ಥಿತಿಯೇ!
75:36
أَيَحْسَبُ الْإِنْسَانُ أَنْ يُتْرَكَ سُدًى ۞
ಮನುಷ್ಯನೇನು, ತನ್ನನ್ನು ಹೀಗೆಯೇ ಬಿಟ್ಟು ಬಿಡಲಾಗುವುದೆಂದು ಕೊಂಡಿದ್ದಾನೆಯೇ?
75:37
أَلَمْ يَكُ نُطْفَةً مِنْ مَنِيٍّ يُمْنَىٰ ۞
ಅವನೇನು, ಕೇವಲ ಹರಿಸಿ ಬಿಡಲಾದ ಒಂದು ಹನಿ ವೀರ್ಯವಾಗಿರಲಿಲ್ಲವೇ?
75:38
ثُمَّ كَانَ عَلَقَةً فَخَلَقَ فَسَوَّىٰ ۞
ತರುವಾಯ ಅವನು ರಕ್ತ ಪಿಂಡವಾದನು. ಆ ಬಳಿಕ ಅವನು (ಅಲ್ಲಾಹನು) ಅವನನ್ನು ಸೃಷ್ಟಿಸಿದನು ಮತ್ತು ರೂಪಿಸಿದನು.
75:39
فَجَعَلَ مِنْهُ الزَّوْجَيْنِ الذَّكَرَ وَالْأُنْثَىٰ ۞
ಮುಂದೆ ಅದರಿಂದಲೇ ಪುರುಷ ಮತ್ತು ಸ್ತ್ರೀ ಎಂಬ ಇಬ್ಬರ ಜೋಡಿಯನ್ನುಂಟು ಮಾಡಿದನು.
75:40
أَلَيْسَ ذَٰلِكَ بِقَادِرٍ عَلَىٰ أَنْ يُحْيِيَ الْمَوْتَىٰ ۞
ಅಂಥವನು (ಇಷ್ಟೆಲ್ಲಾ ಮಾಡಿದವನು) ಸತ್ತವರನ್ನು ಜೀವಂತಗೊಳಿಸಲು ಅಸಮರ್ಥನೇ?